ಅಂಕಣ

ಕುಂಗ್ ಫು ನನ್ಸ್; ಸನ್ಯಾಸಿನಿಯರೆಂದರೆ ಹೀಗೂ ಇರಬಹುದು

| ಪೂಜಾ ತೀರ್ಥಹಳ್ಳಿ ನ್ಯಾಷನಲ್ ಕಾಲೇಜು ಬಸವನಗುಡಿ

ಸಮಾಜದಲ್ಲಿ ಆರೋಗ್ಯಕರ ಬದಲಾವಣೆ ತರಲು ಬೇಕಾಗಿ ರುವುದು ಆಸಕ್ತಿ ಮತ್ತು ಶ್ರಮವಷ್ಟೇ. ಸನ್ಯಾಸಿನಿಯರೆಂದರೆ ಹೀಗೂ ಇರಬಹುದು ಎಂದು ಸಾಧಿಸಿ ತೋರಿಸಿದ್ದಾರೆ ಕುಂಗ್ ಫು ನನ್ಸ್. ಇವರು ನೇಪಾಳದ ಕುಂಗ್ ಫು ನನ್ಸ್, ದ್ರುಪಕ ನನ್ಸ್ ಎಂದೇ ಜನಪ್ರಿಯರು. ದ್ರುಪಕ ಎಂದರೆ ಡ್ರ್ಯಾಗನ್ ಎಂದರ್ಥ. ನೇಪಾಳದಲ್ಲಿ ಡ್ರ್ಯಾಗನ್ ಎಂಬುದು ಶಾಂತಿ ಮತ್ತು ಪ್ರೀತಿಯ ಸಂಕೇತ. ಕಳೆದ ತಿಂಗಳ ಕೊನೆಗೆ ಸುದ್ದಿಯಲ್ಲಿದ್ದರು ಈ ಕುಂಗ್ ಫು ನನ್ಸ್. ಯುನೆಸ್ಕೊದ ಮಾರ್ಷಿಯಲ್ ಆರ್ಟ್ಸ್ ಎಜುಕೇಶನ್ ಪ್ರೖೆಝ್ 2021 ಇವರ ಮುಡಿಗೇರಿದ್ದೇ ಅದಕ್ಕೆ ಕಾರಣ. ಹಿಮಾಲಯದ ತಪ್ಪಲಿನಲ್ಲಿ ಕುಂಗ್ ಫು ಸನ್ಯಾಸಿನಿಯರ ಐತಿಹಾಸಿಕ ಸೇವಾಕಾರ್ಯವನ್ನು ಮತ್ತು ಲಿಂಗಸಮಾನತೆ ಸಾಧಿಸಲು ಅವರು ಕೈಗೊಂಡ ಅಭಿಯಾನ ಕಾರ್ಯಗಳನ್ನು ಗುರುತಿಸಿ ಯುನೆಸ್ಕೋ ಈ ಬಾರಿಯ ಪ್ರಶಸ್ತಿ ನೀಡಿ ಗೌರವಿಸಿದೆ.

ಕುಂಗ್ ಫು ನನ್ಸ್ ಬೌದ್ಧ ಸನ್ಯಾಸಿನಿಯರಾಗಿದ್ದು, ಭಾರತೀಯ ಬೌದ್ಧ ಧರ್ಮದ ಡೃಕ್ಪಾ (ದೃಕ್ಪಾ) ವಂಶಕ್ಕೆ ಸೇರಿದವರು. ಸಾವಿರ ವರ್ಷಗಳಷ್ಟು ಹಳೆಯ ಈ ಪಂಥದ 12ನೇ ಗೈಲ್ವಾಂಗ್ ಡೃಕ್ಪಾ ಅವರು ಸಾಂಪ್ರದಾಯಿಕ ಸಮರ ಕಲೆ ಕುಂಗ್ ಫು ಅನ್ನು ಹೆಣ್ಮಕ್ಕಳಿಗೂ ಕಲಿಸಬೇಕು ಎಂಬ ಕ್ರಾಂತಿಕಾರಿ ನಿರ್ಣಯವನ್ನು ತೆಗೆದುಕೊಂಡರು. ಇದರ ಫಲವಾಗಿ ಬೌದ್ಧ ಸನ್ಯಾಸಿನಿಯರು ತಮ್ಮ ಶಕ್ತಿ ಮತ್ತು ಆತ್ಮ ವಿಶ್ವಾಸ ಹೆಚ್ಚಿಸಲು ಕುಂಗ್ ಫು ಕಲಿತರು. ಈ ಸನ್ಯಾಸಿನಿಯರು ತಾವು ಕಲಿತ ಆ ವಿದ್ಯೆಯನ್ನು ಭಾರತ ಮತ್ತು ನೇಪಾಳಿ ಸಮುದಾಯಗಳಲ್ಲಿನ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಗಾಗಿ ಕಲಿಸುತ್ತಿದ್ದಾರೆ. ಹಿಮಾಲಯ ತಪ್ಪಲು ಪ್ರದೇಶದಲ್ಲಿ ವಾಸಿಸುವ ಹೆಣ್ಣುಮಕ್ಕಳಿಗೆ ನಾಯಕತ್ವದ ಗುಣಗಳನ್ನು, ಆತ್ಮವಿಶ್ವಾಸವನ್ನು ಬೆಳೆಸುತ್ತಿದ್ದಾರೆ. ಸಮರಕಲೆಯ ಮೂಲಕ ನೇಪಾಳ ಮತ್ತು ಭಾರತದಲ್ಲಿ ಮಹಿಳಾ ಸಬಲೀಕರಣಕ್ಕೆ, ಸಶಕ್ತೀಕರಣಕ್ಕೆ ಧ್ವನಿ ಎತ್ತಿದ್ದಾರೆ. ಸಮಾನತೆಗಾಗಿ ಶ್ರಮಿಸುತ್ತ ಸಮರಕಲೆ ಕಲಿಸುತ್ತಿರುವ ಈ ಸನ್ಯಾಸಿನಿಯರು ಕೋವಿಡ್ 19 ನಿಂದ ತೀವ್ರವಾಗಿ ಹಾನಿಗೊಳಗಾದ ಮತ್ತು ನಿರ್ಲಕ್ಷ್ಯಕ್ಕೊಳಗಾದ ಹಿಮಾಲಯದ ತಪ್ಪಲಿನಲ್ಲಿ ವಾಸಿಸುವ ನೇಪಾಳಿ ಮತ್ತು ಭಾರತೀಯ ಕುಟುಂಬಗಳಿಗೆ ಅಗತ್ಯ ಸೇವೆಯೊಂದಿಗೆ ಶಿಕ್ಷಣವನ್ನು ನೀಡುವ ಕಾರ್ಯಮಾಡುತ್ತಿದೆ.

ಸಮಾಜಮುಖಿ ಕಾರ್ಯ

ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಈ ಸನ್ಯಾಸಿನಿಯರು ಶಾಂತಿಗಾಗಿ ನೇಪಾಳದ ಕಠ್ಮಂಡುವಿನಿಂದ ಲಡಾಖಿನ ವರೆಗೂ ಸುಮಾರು 2500 ಕಿ.ಮೀ ಬೈಸಿಕಲ್ ಯಾತ್ರೆ ಮಾಡಿದ್ದಾರೆ ಈ ವೇಳೆ ಮಾನವ ಕಳ್ಳಸಾಗಾಣಿಕೆಯಂತಹ ಸಮಾಜ ಘಾತುಕ ಚಟುವಟಿಕೆಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. 2015 ರಲ್ಲಿ ನೇಪಾಳದಲ್ಲಿ ಭೂಕಂಪವಾದ ಸಮಯದಲ್ಲೂ ಅಲ್ಲಿನ ಜನರ ನೆರವಿಗೆ ನಿಂತಿದ್ದರು. ಪರಿಸರ ಸ್ವಾಸ್ಥ್ಯ ಕಾಪಾಡುವ, ಹಿಮಾಲಯದ ಸುತ್ತಮುತ್ತ ಪ್ರದೇಶದಲ್ಲಿ ವಾಸಿಸುವ ಸಮುದಾಯಗಳ ಏಳ್ಗೆಗಾಗಿ,ಆ ಭಾಗದ ಹೆಣ್ಣುಮಕ್ಕಳ ಸಶಕ್ತೀಕರಣಕ್ಕಾಗಿ ನಿರಂತರವಾಗಿ ತಮ್ಮ ಸಮರ ಕಲೆಯ ಮೂಲಕ ಶ್ರಮಿಸುತ್ತಿರುವ ಕುಂಗ್ ಫು ತರಭೇತಿ ಪಡೆದ ವಿಶ್ವದ ಏಕೈಕ ಬೌದ್ಧ ಸನ್ಯಾಸಿನಿಯರ ಈ ತಂಡಕ್ಕೆ ಬಾರಿಯ ಯುನೆಸ್ಕೋ ಮಾರ್ಷಲ್ ಆರ್ಟ್ಸ್ ಪ್ರಶಸ್ತಿ ಅರ್ಹವಾಗಿಯೇ ಲಭಿಸಿದೆ.

12ನೇ ತರಗತಿ ಪಾಸಾದ್ರಾ... ಸರ್ಕಾರಿ ಉದ್ಯೋಗ ಅವಕಾಶ ಹೇರಳ

ಕೋವಿಡ್ ಸಂಕಷ್ಟದ ಸಮಯದಲ್ಲಿ ಬಹಳಷ್ಟು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಹನ್ನೆರಡನೇ ತರಗತಿ ಪಾಸಾಗಿದ್ರೆ ಉನ್ನತ ಶಿಕ್ಷಣಕ್ಕೆ ಸೇರಲಾಗುತ್ತಿಲ್ಲ ಎಂದು ದೃತಿಗೆಡಬೇಕಾಗಿಲ್ಲ. ಕೆಲಸಕ್ಕೆ ಸೇರಿಕೊಂಡು ಉನ್ನತ ಶಿಕ್ಷಣ ಮುಂದುವರಿಸುವುದಕ್ಕೆ ಅವಕಾಶವಿದೆ. ಸರ್ಕಾರಿ ಉದ್ಯೋಗಕ್ಕೆ ಸೇರಬೇಕು ಎಂಬ ಆಸೆಯುಳ್ಳವರಿಗೆ ಒಂದಿಷ್ಟು ಪ್ರಾಥಮಿಕ ಮಾಹಿತಿಯನ್ನು ಹಂಚಿಕೊಳ್ಳುವುದು ಈ ಬರಹದ ಉದ್ದೇಶ.

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್​ಎಸ್​ಸಿ) ಪರೀಕ್ಷೆ: ಕಂಬೈಂಡ್ ಹೈಯರ್ ಸೆಕೆಂಡರಿ ಲೆವೆಲ್ (ಸಿಎಚ್​ಎಸ್​ಎಲ್) ಪರೀಕ್ಷೆಯನ್ನು ಎಸ್​ಎಸ್​ಸಿ ನಿರ್ವಹಿಸುತ್ತದೆ. ಡೇಟಾ ಎಂಟ್ರಿ ಆಪರೇಟರ್, ಲೋವರ್ ಡಿವಿಷನ್ ಕ್ಲರ್ಕ್ (ಎಲ್​ಡಿಸಿ), ಜ್ಯೂನಿಯರ್ ಸೆಕ್ರಟೇರಿಯೆಟ್ ಅಸಿಸ್ಟೆಂಟ್, ಪೋಸ್ಟಲ್ ಅಸಿಸ್ಟೆಂಟ್, ಸೋರ್ಟಿಂಗ್ ಅಸಿಸ್ಟೆಂಟ್, ಕೋರ್ಟ್ ಕ್ಲರ್ಕ್ ಮುಂತಾದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಈ ಪರೀಕ್ಷೆಯನ್ನು ಅದು ನಡೆಸುತ್ತದೆ. ಸರ್ಕಾರದ ವಿವಿಧ ಇಲಾಖೆಗಳ ಉದ್ಯೋಗಿಗಳು ಕೂಡ ಈ ಪರೀಕ್ಷೆ ಎದುರಿಸುತ್ತಾರೆ. 18-27 ವರ್ಷ ವಯೋಮಿತಿ ಇದ್ದು, ತಿಂಗಳ ವೇತನ 20,000 ರೂ.ನಿಂದ 34,000 ರೂ. ಇರುತ್ತದೆ.

ರಾಜ್ಯ ಪೊಲೀಸ್ ಪರೀಕ್ಷೆ: ಹನ್ನರಡನೇ ತರಗತಿ ಉತ್ತೀರ್ಣರಾದವರನ್ನು ವಿವಿಧ ಹುದ್ದೆಗಳಿಗೆ ಪೊಲೀಸ್ ಇಲಾಖೆ ಪರಿಗಣಿಸುತ್ತದೆ. ಕಾನ್​ಸ್ಟೆಬಲ್, ಸಬ್​ಇನ್​ಸ್ಪೆಕ್ಟರ್, ಮೀಸಲು ಸಶಸ್ತ್ರ ಪೊಲೀಸ್ ಪಡೆಗೆ ಈ ನೇಮಕಾತಿ ನಡೆಯುತ್ತದೆ. ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಯಲ್ಲಿ ಈ ಸ್ತರದ ಹುದ್ದೆಗಳಿಗೆ ವೇತನ ಶ್ರೇಣಿ 20,000 ರೂ.ನಿಂದ 30,000 ರೂ. ಒಳಗಿರುತ್ತದೆ.

ರಕ್ಷಣಾ ಇಲಾಖೆ ನೇಮಕಾತಿ: ಭಾರತೀಯ ಸೇನೆಯಲ್ಲಿ ಹನ್ನೆರಡನೇ ತರಗತಿ ಉತ್ತೀರ್ಣರಾದವರಿಗೆ ಉದ್ಯೋಗಾವಕಾಶವಿದೆ. ಇದಕ್ಕಾಗಿ ನೇಮಕ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಗಮನಿಸುತ್ತಿರಬೇಕು. ಭೌತಶಾಸ್ತ್ರ ಮತ್ತು ಗಣಿತವನ್ನು 10+2 ತರಗತಿಯಲ್ಲಿ ಕಲಿತಿದ್ದರೆ ನೌಕಾಪಡೆ ಮತ್ತು ವಾಯುಪಡೆಯಲ್ಲಿ ಅವಕಾಶವಿದೆ.

ರೈಲ್ವೆ ನೇಮಕಾತಿ: ಭಾರತೀಯ ರೈಲ್ವೆಯ ವಿವಿಧ ಹುದ್ದೆಗಳ ನೇಮಕಾತಿಗೆ ಹನ್ನರಡನೇ ತರಗತಿ ಉತ್ತೀರ್ಣರಾದವರನ್ನು ಪರಿಗಣಿಸಲಾಗುತ್ತದೆ. ಅಸಿಸ್ಟೆಂಟ್ ಲೋಕೊ ಪೈಲೆಟ್, ಆಫೀಸ್ ಅಸಿಸ್ಟೆಂಟ್, ಸ್ಟೇಷನ್ ಮಾಸ್ಟರ್, ಟಿಕೆಟ್ ಕಲೆಕ್ಟರ್, ಟ್ರೇನ್ ಕ್ಲರ್ಕ್, ಟಿಕೆಟ್ ಕ್ಲರ್ಕ್, ಅಕೌಂಟ್ ಕ್ಲರ್ಕ್/ಟೈಪಿಸ್ಟ್, ಜ್ಯೂನಿಯರ್ ಲೆವೆಲ್ ಕ್ಲರ್ಕ್, ಜ್ಯೂನಿಯರ್ ಟೈಮ್ ಕೀಪರ್ ಮುಂತಾದ ಉದ್ಯೋಗಗಳು ಈ ಪಟ್ಟಿಯಲ್ಲಿವೆ. ವಿವಿಧ ಸರ್ಕಾರಿ ಹುದ್ದೆಗಳು: ಸೂಪರ್​ವೈಸರ್, ಪಟ್ವಾರಿ, ಡ್ರೖೆವರ್ ಮುಂತಾದ ಕೆಲಸಗಳು ಹನ್ನರಡನೇ ತರಗತಿ ಉತ್ತೀರ್ಣರಾದವರಿಗೆ ಸಿಗುತ್ತವೆ. ರಾಜ್ಯದಿಂದ ರಾಜ್ಯಕ್ಕೆ ವೇತನ ಶ್ರೇಣಿಯಲ್ಲಿ ವ್ಯತ್ಯಾಸವಿದ್ದು, 10,000 ರೂಪಾಯಿಯಿಂದ 35,000 ರೂ. ತನಕ ಇದೆ.