ಅಂಕಣ

ಸಜ್ಜನರ ರಕ್ಷಣೆಗಾಗಿ ಅವತರಿಸಿದ ಕೃಷ್ಣ

| ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಪರ್ಯಾಯ ಅದಮಾರು ಮಠ, ಶ್ರೀಕೃಷ್ಣ ಮಠ, ಉಡುಪಿ

ಭರತಭೂಮಿಯಲ್ಲಿ ಐದು ಸಾವಿರ ವರ್ಷಗಳ ಹಿಂದೆ ಸಜ್ಜನರು, ಮಹಿಳೆಯರು, ಗೋಪಾಲ ಬಾಲಕರು ಮೊದಲಾದವರು ದುಷ್ಟಶಕ್ತಿಗಳ ಉಪಟಳದಿಂದ ತೊಂದರೆಗೆ ಒಳಗಾದ ಕಾಲದಲ್ಲಿ ಸ್ವತಃ ದೇವರೇ ಧರೆಗಿಳಿದು ಬಂದು ಜನರನ್ನು, ಧರ್ಮವನ್ನು ರಕ್ಷಿಸಿದ. ಎಲ್ಲರನ್ನೂ ತನ್ನ ಅನುಪಮ ಸೌಂದರ್ಯ, ಧ್ಯೇಯನಿಷ್ಠತೆ, ಪರಾಕ್ರಮ, ಕರುಣೆ ಹೀಗೆ ಅನೇಕ ಗುಣಗಳಿಂದ ಆಕರ್ಷಿದವನ ಹೆಸರು ಶ್ರೀಕೃಷ್ಣ. ಕರ್ಷತೀತಿ ಕೃಷ್ಣಃ. ತನ್ನೆಡೆಗೆ ಸೆಳೆದುಕೊಳ್ಳುವವನು ಎಂದರ್ಥ.

ದೇಶಾದ್ಯಂತ ಪ್ರತಿವರ್ಷ ಕೃಷ್ಣನ ಜನ್ಮದಿನವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಇದರ ಜತೆಗೆ ಇನ್ನೊಂದು ಸೇರಲೇಬೇಕು, ಅದು ಉಪಕಾರ ಸ್ಮರಣೆ. ದೇಶದಲ್ಲಿ ಹರಡಿಕೊಂಡಿದ್ದ ದುರ್ಜನರನ್ನು ಸದೆ ಬಡಿದು ಕೃಷ್ಣ ಮಾಡಿದ ಮಹದುಪಕಾರ. ಆ ಕಾಲದಲ್ಲೂ ಈ ಕಾಲದಲ್ಲೂ ಎಲ್ಲ ಕಾಲದಲ್ಲಿ ಉಗ್ರವಾದಿಗಳು ದೇಶಕ್ಕೆ, ಪ್ರಪಂಚಕ್ಕೆ ಕಂಟಕರಾಗಿಯೇ ಉಳಿದಿದ್ದಾರೆ. ನಿದೋಷಿ ಜನರನ್ನು ಕೊಲ್ಲುವ ಜರಾಸಂಧನಂಥವರು, ಮಹಿಳೆಯರ ಬಗ್ಗೆ ಎಳ್ಳಷ್ಟೂ ಗೌರವವಿಲ್ಲದ ನರಕಾಸುರನಂಥ ರಾಕ್ಷಸರು ವಿಜೃಂಭಿಸುತ್ತಿದ್ದ ಕಾಲಘಟ್ಟದಲ್ಲಿ ಕೃಷ್ಣ ಗೋಕುಲದಲ್ಲಿ ಗೊಲ್ಲ ಬಾಲಕರೊಂದಿಗೆ ಸೇರಿ ಕಂಸ ಕಳುಹಿಸುತ್ತಿದ್ದ ದಾನವರನ್ನು ಕೊಂದು ತನ್ನ ಸಾಮರ್ಥ್ಯದ ಸಂದೇಶವನ್ನು ತಲುಪಬೇಕಾದವರಿಗೆ ತಲುಪಿಸುತ್ತಿದ್ದ.

ಸಜ್ಜನರ ರಕ್ಷಣೆಯ ಹೊಣೆ: ಕೃಷ್ಣನ ಹೃದಯ ಸದಾ ಸಜ್ಜನರ ಪರ ಮಿಡಿಯುತ್ತಿತ್ತು. ಅವರ ರಕ್ಷಣೆಗೆ ಕೃಷ್ಣ ಸದಾ ಕಂಕಣಬದ್ಧನಾಗಿದ್ದ. ಸಜ್ಜನರಾದ ಪಾಂಡವರನ್ನು ಎಲ್ಲ ಆಪತ್ತುಗಳಿಂದ ಕೃಷ್ಣ ಕಾಪಾಡಿರುವುದು ‘ಎಲ್ಲ ಭಕ್ತರ ಯೋಗಕ್ಷೇಮವನ್ನು ನಾನು ವಹಿಸಿಕೊಳ್ಳುತ್ತೇನೆ’ ಎಂಬುದರ ಸಂಕೇತವಾಗಿದೆ. ಜರಾಸಂಧನೊಂದಿಗೆ 18 ಬಾರಿ ಯುದ್ಧ ಮಾಡಿದ ಕೃಷ್ಣ ಅನೇಕ ಬಾರಿ ಓಡಿ ಹೋಗಿದ್ದಾನೆ. ಆದರೆ ಹೆದರಿಕೆಯಿಂದಲ್ಲ; ಉಗ್ರರನ್ನು ಸಮೂಲ ನಾಶ ಮಾಡುವುದು ಉದ್ದೇಶವಾಗಿತ್ತು. ಪ್ರತಿ ಬಾರಿಯೂ ಯುದ್ಧದಲ್ಲಿ ಜರಾಸಂಧನ ಲಕ್ಷಾಂತರ ಸೈನಿಕರು ಸಾಯುತ್ತಿದ್ದರು. ಮತ್ತೆ ಮತ್ತೆ ದುಷ್ಟರ ಹಿಂಡು ಕಟ್ಟಿಕೊಂಡು ಆತ ಬರುತ್ತಿದ್ದ. ಅವರೆಲ್ಲರನ್ನೂ ಕೃಷ್ಣ ನಾಶ ಮಾಡುತ್ತಿದ್ದ. ಹೀಗೆ ಉಗ್ರನಿಗ್ರಹ ತಂತ್ರಗಾರಿಕೆಗೆ ಶ್ರೀಕೃಷ್ಣ ಮಾದರಿ.

ದುಷ್ಟಯೋಜನೆ ಭಗ್ನ: ಆ ಕಾಲದಲ್ಲಿ ಇಬ್ಬರು ರಾಕ್ಷಸರ ಉಪಟಳವಿತ್ತು. ಮಗಧ ಪ್ರಾಂತ್ಯದಲ್ಲಿ (ಈಗಿನ ಬಿಹಾರ) ಜರಾಸಂಧ ಎಲ್ಲ ರಾಜಕುಮಾರರನ್ನು ಬಂಧಿಸಿದ್ದ. ಅದೇ ರೀತಿ ಪ್ರಾಗ್​ಜ್ಯೋತಿಷಪುರದ (ಅಸ್ಸಾಂ) ನರಕಾಸುರ ರಾಜಕುಮಾರಿಯರನ್ನು ಸೆರೆಮನೆಯಲ್ಲಿಟ್ಟು ದೇಶದಲ್ಲಿ ರಾಜವಂಶಗಳೇ ಮುಂದುವರಿಯದಂತೆ ತಡೆಯುವ ದುಷ್ಟಯೋಜನೆ ಹಾಕಿಕೊಂಡಿದ್ದ. ಇದನ್ನು ಶ್ರೀಕೃಷ್ಣ ತಪ್ಪಿಸಿದ. ಜರಾಸಂಧನನ್ನು ಭೀಮನಿಂದ ಕೊಲ್ಲಿಸುವ ಮೂಲಕ ಸುಮಾರು 20 ಸಾವಿರ ರಾಜಕುಮಾರರನ್ನು ಬಂಧಮುಕ್ತ ಮಾಡಿದ. ಅದೇ ರೀತಿ ನರಕಾಸುರನನ್ನು ಸ್ವತಃ ಕೊಲ್ಲುವ ಮೂಲಕ 16 ಸಾವಿರ ಸ್ತ್ರೀಯರನ್ನು ಬಂಧನದಿಂದ ಬಿಡುಗಡೆಗೊಳಿಸಿದ. ಸ್ತ್ರೀಯರು ಸಮಾಜದ ಅಪವಾದಕ್ಕೆ ಹೆದರಿ ಕೃಷ್ಣನೇ ಪತಿಯಾಗಬೇಕು ಎಂದು ಪ್ರಾರ್ಥಿಸಿದಾಗ ಅವರೆಲ್ಲರನ್ನೂ ಮದುವೆಯಾದ. ಭಾಗವತ ಬಹಳ ಸ್ಪಷ್ಟವಾಗಿ ಈ ಬಗ್ಗೆ ವಿವರಣೆ ನೀಡಿದೆ. ನಾರದರೊಮ್ಮೆ ದ್ವಾರಕೆಯಲ್ಲಿ ರಾಣಿಯರ ಮನೆಗೆ ಭೇಟಿ ನೀಡಿದರು. ಎಲ್ಲ ಕಡೆಗಳಲ್ಲೂ ಕೃಷ್ಣ ಒಂದೊಂದು ರೂಪದಲ್ಲಿ ಕಾಣಿಸಿದ್ದು, ಇದನ್ನು ನೋಡಿ ಅಚ್ಚರಿಗೊಂಡರು. ಅಂದರೆ ಏಕಕಾಲದಲ್ಲಿ ಅನೇಕ ಕಡೆಗಳಲ್ಲಿ ಉಪಸ್ಥಿತಿ ಇರುವುದು ದೇವರಿಂದ ಮಾತ್ರ ಸಾಧ್ಯ. ದೇವಕಾರ್ಯಗಳನ್ನು ಮನುಷ್ಯರು ತಮ್ಮ ಅರಿವಿನ ಮಟ್ಟದಲ್ಲಿ ಚಿಂತಿಸಬಾರದು ಎಂಬುದು ತಾತ್ಪರ್ಯ.

ಜ್ಞಾನ ಮತ್ತು ಕರ್ಮ ಸಿದ್ಧಾಂತ: ಶ್ರೀಕೃಷ್ಣ ಗೀತೆಯಲ್ಲಿ ‘ನಹಿ ಜ್ಞಾನೇನ ಸದೃಶಂ’ ಎಂಬುದಾಗಿ ಜ್ಞಾನಕ್ಕೆ ಮಹತ್ವ ನೀಡಿದ್ದಾನೆ. ಮನುಷ್ಯನಾಗಿ ಹುಟ್ಟಿದ ಮೇಲೆ ತತ್ತ್ವಜ್ಞಾನ ಪಡೆಯುವುದು ಬಹುಮುಖ್ಯ. ಸದಾಚಾರ ಮತ್ತು ಶಾಸ್ತ್ರಗಳ ಅಧ್ಯಯನದಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಸನಾತನ ಧರ್ಮ ಗುಂಪು ಗುಂಪಾಗಿ ಸೇರುವ ಬದಲು ಏಕಾಂತದಲ್ಲಿ ಆತ್ಮಸಾಕ್ಷಾತ್ಕಾರಕ್ಕೆ ಪ್ರಾಮುಖ್ಯ ನೀಡುತ್ತದೆ. ಕರ್ಮ ಸಿದ್ಧಾಂತವೆಂದರೆ ಕರ್ತವ್ಯದಿಂದ ವಿಮುಖನಾಗುವುದಲ್ಲ. ಕರ್ತವ್ಯವನ್ನು ದೇವರಿಗೆ ಸಂತೃಪ್ತಿಯಾಗುವಂತೆ ಸರಿಯಾಗಿ ಮಾಡುವುದು. ಫಲಾಪೇಕ್ಷೆಯಿಂದಲೇ ಮಾಡುವುದು ವಿಹಿತವಲ್ಲ. ಫಲ ಬಂದೇ ಬರುತ್ತದೆ. ನೀರಿನಲ್ಲಿ ಬಿದ್ದಾಗ ಕೈಕಾಲು ಬಡಿದು ದಡ ಸೇರಲು ಪ್ರಯತ್ನಿಸಬೇಕು. ಅದನ್ನೇ ಮಾಡದೆ ದೇವರು ರಕ್ಷಿಸಲಿ ಎಂದರೆ ಮೂರ್ಖತನವಾಗುತ್ತದೆ. ಅದೇ ಸಂದರ್ಭದಲ್ಲಿ ನೆರೆ ಬಂದು ಕೊಚ್ಚಿ ಹೋಗದಿರುವುದು, ಮೊಸಳೆಯ ಬಾಯಿಗೆ ಸಿಲುಕದಿರುವುದು ದೇವರ ಅನುಗ್ರಹ. ಈಜುವುದು ಹೇಗೆ ಎಂಬುದನ್ನು ತಿಳಿದುಕೊಂಡಿರುವುದು ಜ್ಞಾನ. ಹೀಗೆ ಶ್ರೀಕೃಷ್ಣನ ಸಂದೇಶವನ್ನು ಬಹು ಆಯಾಮಗಳಲ್ಲಿ ಚಿಂತಿಸಬಹುದು.

ಇತ್ತೀಚಿನ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಶ್ರೀಕೃಷ್ಣನ ಸಂದೇಶದ ಮಹತ್ವ ಅರಿವಾಗುತ್ತದೆ. ಆತ ಹಾಕಿಕೊಟ್ಟ ಮಾರ್ಗದಲ್ಲಿ ಭಾರತೀಯರು ಜೀವನ ಸಾಗಿಸಬೇಕಿದೆ. ಜ್ಞಾನದ ಜೊತೆಗೆ ಕರ್ಮಕ್ಕೂ ಮಹತ್ವ ನೀಡಬೇಕಿದೆ. ರಾಜಕೀಯಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ. ಈ ಬಾರಿಯ ಶ್ರೀಕೃಷ್ಣ ಜಯಂತಿ ನಮ್ಮಲ್ಲಿ ಕರ್ತವ್ಯಪ್ರಜ್ಞೆ ಜಾಗೃತಗೊಳಿಸಲಿ ಎಂದು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತೇವೆ.

ಸಾಂಪ್ರದಾಯಿಕ ಆಚರಣೆ: ಉಡುಪಿ ಕೃಷ್ಣ ಮಠದಲ್ಲಿ ಕೃಷ್ಣ ಜಯಂತಿ ಹಿನ್ನೆಲೆ ಯಲ್ಲಿ ಸಂಪ್ರದಾಯಬದ್ಧವಾಗಿ ಪೂಜೆಗಳು ನಡೆಯಲಿವೆ. ಆ.30ರಂದು ಬೆಳಗ್ಗೆ ಕೃಷ್ಣ ದೇವರಿಗೆ ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರಿಂದ ಲಕ್ಷ ತುಳಸಿ ಅರ್ಚನೆ, ರಾತ್ರಿ 12.17ಕ್ಕೆ ಅಘರ್Â ಪ್ರದಾನ ನಡೆಯಲಿದೆ. ಭಕ್ತರು ಕನಕನ ಕಿಂಡಿ ಎದುರು ಮತ್ತು ಮಧ್ವ (ವಸಂತ) ಮಂಟಪದಲ್ಲಿ ಅಘರ್Â ಪ್ರದಾನ ಮಾಡಬಹುದು. ದರ್ಶನಕ್ಕೆ ಸೋಮವಾರ ಬೆಳಗ್ಗೆ 8ರಿಂದ ಸಾಯಂಕಾಲ 6ರವರೆಗೆ ಅವಕಾಶ ಕಲ್ಪಿಸಲಾಗಿದೆ. 31ರಂದು ಅಪರಾಹ್ನ 3.30ಕ್ಕೆ ವಿಟ್ಲಪಿಂಡಿ ರಥೋತ್ಸವ ನೆರವೇರಲಿದೆ.

ನಾಳೆ ಕೃಷ್ಣ ಜಯಂತಿ

ಮಧ್ವಾಚಾರ್ಯರು ಜಯಂತೀ ನಿರ್ಣಯದಲ್ಲಿ ಹೇಳಿದಂತೆ ಅರ್ಧರಾತ್ರಿಯಲ್ಲಿ ರೋಹಿಣೀ ನಕ್ಷತ್ರವಿದ್ದು, ಆ ಸಮಯದಲ್ಲಿ ಅಷ್ಟಮಿ ಒದಗಿದರೆ ಜಯಂತಿ ಎಂದು ತಿಳಿಸಿದ್ದಾರೆ. ರೋಹಿಣೀ ಸಹಿತ ಅಷ್ಟಮಿಗೆ ಹೆಚ್ಚು ಪ್ರಾಶಸ್ಱವಿದೆ. ಆದ್ದರಿಂದ ಆಗಸ್ಟ್ 30ರಂದು ಕೃಷ್ಣ ಜಯಂತಿ ಆಚರಣೆ ಶಾಸ್ತ್ರಸಮ್ಮತವಾಗಿದೆ. ಬ್ರಹ್ಮವೈವರ್ತ ವಚನದಲ್ಲಿ ಸೂರ್ಯ ಉದಯದಲ್ಲಿ ಅಷ್ಟಮಿ ಮತ್ತು ರೋಹಿಣಿಯಿದ್ದು, ಸೋಮವಾರ ಅಥವಾ ಬುಧವಾರವಾಗಿದ್ದರೆ ಅಂತಹ ಯೋಗ ಅಮೂಲ್ಯ. ಆಗಸ್ಟ್ 30ರಂದು ಅಷ್ಟಮಿ ಸಹಿತ ರೋಹಿಣಿಯ ಯೋಗವಿದೆ. ಸೋಮವಾರವೂ ಒದಗಿದೆ. ಆಚಾರ್ಯರು ಹೇಳಿದಂತೆ ಅರ್ಧರಾತ್ರಿಯಲ್ಲಿ ರೋಹಿಣಿ ನಕ್ಷತ್ರವಿದೆ. ಚಂದ್ರನು ರೋಹಿಣೀ ಸಹಿತನಾಗಿ ಇರುವುದರಿಂದ ಚಂದ್ರಾರ್ಘ್ಯ ಪ್ರದಾನ ಹೆಚ್ಚು ಮಹತ್ವಪೂರ್ಣವೆನಿಸಿದೆ.