ಈ ಕತೆ ಪರಿಚಿತ. ಆದರೆ ಪ್ರಸ್ತುತ ಸಂದರ್ಭ ಆ ಕತೆಯನ್ನು ಮತ್ತೆ ಹೇಳಲು ನನ್ನನ್ನು ಒತ್ತಾಯಿಸುತ್ತಿದೆ. ಸಾಹಿತ್ಯದ ಕೆಲಸವೇ ಇದು. ಜಡವಾದ ಜನರ ಸಂವೇದನೆಯನ್ನು ಚಲನಶೀಲಗೊಳಿಸಲು ಮತ್ತೆ ಮತ್ತೆ ಸಾಹಿತ್ಯ ಸತ್ಯವನ್ನು ಹೀಗೆ ಬೇರೆ ಬೇರೆ ರೀತಿಯಲ್ಲಿ ಹೇಳುತ್ತಲೇ ಇರಬೇಕಾಗುತ್ತದೆ. ಇಂತಹ ನಮ್ಮ ಎಚ್ಚರಿಕೆಯ ಮಾತುಗಳನ್ನು ಯಾರು ಕೇಳಿಸಿಕೊಳ್ಳುತ್ತಾರೆಂಬ ಪ್ರಶ್ನೆಯೂ ಎದುರಿಗಿದೆ. ಕೇಳಿಸಿಕೊಳ್ಳಬೇಕಾದವರಿಗೆ ಜಾಣಕಿವುಡು ಇರುವುದನ್ನೂ ಬಲ್ಲೆ. ಆದರೆ ದಪ್ಪ ಚರ್ಮದವರ ನಡುವೆ ಸೂಕ್ಷ್ಮ ಸಂವೇದನೆಯ ಕೆಲವರಾದರೂ ಕೇಳುವವರಿಹರೆಂದು ನಾ ಬಲ್ಲೆನದರಿಂದ ಹೇಳುವೆನು ಮನತುಂಬಿ ಎಂದಿನಂತೆ.
ಅಕ್ಬರ್ ಜನೋಪಯೋಗಿಯಾದ ಅನೇಕ ಯೋಜನೆಗಳನ್ನು ರೂಪಿಸಿ, ಬೊಕ್ಕಸದಿಂದ ಸಾಕಷ್ಟು ಹಣವನ್ನೂ ಒದಗಿಸಿ ಪ್ರಜೆಗಳು ನೆಮ್ಮದಿಯಿಂದ ಬದುಕುವ ಪರಿಸರ ನಿರ್ವಿುಸಲು ಪ್ರಯತ್ನಿಸುತ್ತಿರುತ್ತಾನೆ. ಆದರೆ ಜನರು ನೆಮ್ಮದಿ ಕಾಣದೆ ದೊರೆಯ ಬಳಿ ಮತ್ತೆ ಮತ್ತೆ ದೂರು ನೀಡುತ್ತಿದ್ದರು. ಇಷ್ಟೆಲ್ಲ ಪ್ರಯತ್ನಿಸಿದರೂ ಜನರ ಸಮಸ್ಯೆ ಏಕೆ ಬಗೆಹರಿಯುತ್ತಿಲ್ಲ ಎಂದು ಚಕ್ರವರ್ತಿಗೆ ಗೊಂದಲ. ಇದನ್ನು ಬೀರಬಲ್ಲನೊಡನೆ ಪ್ರಸ್ತಾಪಿಸಿದ. ‘ನಾಳೆ ರಾಜಸಭೆಯಲ್ಲಿ ಇದಕ್ಕೆ ಉತ್ತರ ಹುಡುಕೋಣ’ ಎಂದು ಹೇಳಿ ಬೀರಬಲ್ ಸುಮ್ಮನಾದ. ಮಾರನೆಯ ದಿನ ರಾಜನ ಆಸ್ಥಾನದಲ್ಲಿ ಬೀರಬಲ್ ಚಕ್ರವರ್ತಿ ಅಕ್ಬರನ ಕೈಗೆ ಒಂದು ಮಂಜುಗಡ್ಡೆಯನ್ನು ಕೊಟ್ಟು ದೂರದಲ್ಲಿ ದ್ವಾರದ ಬಳಿಯಿದ್ದ ಜನಸಾಮಾನ್ಯ ವ್ಯಕ್ತಿಯೊಬ್ಬನಿಗೆ ಅದನ್ನು ತಲುಪಿಸಲು ವಿನಂತಿಸಿಕೊಂಡ. ಅಕ್ಬರ್ ಆ ಮಂಜುಗಡ್ಡೆಯನ್ನು ಮಂತ್ರಿಗೆ ಕೊಟ್ಟ. ಆತ ಅದನ್ನು ತನ್ನ ಸಹಾಯಕನಿಗೆ, ಆತ ಮತ್ತೊಬ್ಬನಿಗೆ... ಹೀಗೆ ಅದು ಅನೇಕರ ಕೈ ಹಾದು ಕಡೆಗೆ ದ್ವಾರಪಾಲಕನ ಬಳಿಯಿದ್ದ ಪ್ರಜೆಯ ಕೈ ತಲುಪಿತು. ಆಗ ಬೀರಬಲ್ ಆ ಮಂಜುಗಡ್ಡೆಯನ್ನು ಸಾಮಾನ್ಯ ಪ್ರಜೆಯಿಂದ ಪಡೆದು ಅಕ್ಬರನಿಗೆ ಮತ್ತೆ ಕೊಟ್ಟ. ಆ ವೇಳೆಗೆ ಅದು ಅನೇಕರ ಕೈ ಹಾದು ಬಂದಿದ್ದರಿಂದ ಮುಷ್ಟಿಯಷ್ಟು ಇದ್ದದ್ದು ಕರಗಿ ಕಿರುಬೆರಳಿನಷ್ಟಾಗಿರುತ್ತದೆ. ಆಗ ಬೀರಬಲ್ ಹೇಳಿದ: ‘ಜಹಾಪನಾ, ನೀವು ಬೊಕ್ಕಸದಿಂದ ಪ್ರಜೆಗಳಿಗೆಂದು ನೀಡುವ ಹಣವೂ ಹೀಗೆಯೇ! ಅನೇಕರ ಕೈ ಹಾದು ಸಮಾಜದ ಅಂಚಿನಲ್ಲಿರುವ ವ್ಯಕ್ತಿಯನ್ನು ತಲುಪುವ ವೇಳೆಗೆ ಸೋರಿಹೋಗಿ ಅವನನ್ನು ತಲುಪುವುದು ಕಿಂಚಿತ್ ಮಾತ್ರ, ಅಥವಾ ತಲುಪದೆಯೂ ಇರಬಹುದು. ಅವರ ಸಮಸ್ಯೆ ಪರಿಹಾರವಾಗುವುದಾದರೂ ಹೇಗೆ? ಬೊಕ್ಕಸದ ಹಣ ಸೋರಿಹೋಗದ ಹಾಗೆ ತಲುಪುವ ವ್ಯವಸ್ಥೆಯಾದರೆ ಪರಿಸ್ಥಿತಿ ಸುಧಾರಿಸಬಹುದು’.
ಯಾವುದೇ ಸರ್ಕಾರದ ಯೋಜನೆಗಳೂ ಹೀಗೆಯೇ! ಸರ್ಕಾರ ಹಾಗೂ ಜನಸಾಮಾನ್ಯರ ಮಧ್ಯೆ ‘ಅಧಿಕಾರಶಾಹಿ’ ಇರುತ್ತದೆ. ಸರ್ಕಾರದ ಬೊಕ್ಕಸದ ಹಣ ಅಲ್ಲಿ ಸೋರಿಹೋಗುತ್ತದೆ. ಸಾಮಾನ್ಯಜನರ ನೆಮ್ಮದಿಯಲ್ಲಿ ‘ಅಧಿಕಾರಿ’ಗಳ ಪಾತ್ರ ಮಹತ್ವದ್ದು. ಈ ಅಧಿಕಾರಿಗಳನ್ನು ರಾಜ್ಯಮಟ್ಟದಲ್ಲಿ ಆಯ್ಕೆ ಮಾಡುವ ಸಂಸ್ಥೆಯೇ ‘ಕರ್ನಾಟಕ ಲೋಕಸೇವಾ ಆಯೋಗ’. ರಾಷ್ಟ್ರಮಟ್ಟದಲ್ಲಿ ‘ಕೇಂದ್ರ ಲೋಕಸೇವಾ ಆಯೋಗ’ ಈ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿಯುವ ಪ್ರಮುಖ ಹುದ್ದೆಗಳಿಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ಈ ಸಂಸ್ಥೆಗಳ ಹೊಣೆಗಾರಿಕೆ. ಒಂದು ರೀತಿಯಲ್ಲಿ ಸರ್ಕಾರದ ಆಡಳಿತಾಂಗವನ್ನು ಈ ಸಂಸ್ಥೆಗಳು ರೂಪಿಸುತ್ತಿರುತ್ತವೆ. ಶಾಸಕಾಂಗದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಈ ಆಡಳಿತಾಂಗದ ಪಾತ್ರ ನಿರ್ಣಾಯಕ; ನಾಡಿನ ಭವಿಷ್ಯವನ್ನು ಇವರು ತಮ್ಮ ಆಡಳಿತ ನಿರ್ವಹಣೆಯ ಮೂಲಕ ಬರೆಯುತ್ತಿರುತ್ತಾರೆ. ಇಂತಹ ಆಡಳಿತಾಂಗವನ್ನು ರೂಪಿಸುವ ಮಾತೃಸಂಸ್ಥೆ ‘ಲೋಕಸೇವಾ ಆಯೋಗ’. ಈ ಸಂಸ್ಥೆಗಳು ನೀಡುವ ಪದವಿ ‘ಕರ್ನಾಟಕ ಆಡಳಿತ ಸೇವೆ’; ‘ಭಾರತೀಯ ಆಡಳಿತ ಸೇವೆ’; ಮಾತ್ರವಲ್ಲ ವಿವಿಧ ಇಲಾಖೆಗಳ ಪ್ರಮುಖ ಹುದ್ದೆಗಳಿಗೂ ಈ ಸಂಸ್ಥೆಗಳೇ ‘ಅಧಿಕಾರಿ’ಗಳನ್ನು ಆಯ್ಕೆ ಮಾಡುವುದು. ಈ ಸಂಸ್ಥೆಯ ಮೂಲ ಪರಿಕಲ್ಪನೆ ಹಾಗೂ ಇವು ನೀಡುವ ಪದವಿಯಲ್ಲಿಯೇ ‘ಸೇವೆ’ ಎಂಬುದು ಹಾಸುಹೊಕ್ಕಾಗಿದೆ. ಇಲ್ಲಿಂದ ಆಯ್ಕೆಯಾಗುವವರು ಪಡೆಯುವ ಅಧಿಕಾರ ವ್ಯಾಪ್ತಿ ಅಪರಿಮಿತ. ಇವರಿಗೆ ಸರ್ಕಾರ ಎಲ್ಲ ಬಗೆಯ ಸವಲತ್ತುಗಳನ್ನೂ ಒದಗಿಸಿಕೊಡುತ್ತದೆ. ಹೀಗಾಗಿಯೇ ಇಲ್ಲಿ ಆಯ್ಕೆಯಾಗುವುದು ಎಲ್ಲರ ಕನಸು. ಇಲ್ಲಿಂದ ಆಯ್ಕೆಯಾಗುವವರು ಪ್ರತಿಭಾವಂತರೂ, ದಕ್ಷರೂ ಆಗಿರಬೇಕೆಂಬುದು ಸಹಜ ನಿರೀಕ್ಷೆ. ಆದರೆ ಇತ್ತೀಚಿನ ದಿನಗಳಲ್ಲಿ ಆಡಳಿತಾಂಗದ ಈ ‘ಮಾತೃಸಂಸ್ಥೆ’ ಹಿಡಿದಿರುವ ಹಾದಿ ನಾಡಿನ ಬಗ್ಗೆ ಕಾಳಜಿಯಿರುವ ಯಾರಿಗಾದರೂ ಆತಂಕವನ್ನು ಉಂಟುಮಾಡುವಂತಿದೆ. ನೇಮಕಾತಿ ಸಂದರ್ಭದಲ್ಲಿಯೇ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಮಾತು ಕೆಲವರ್ಷಗಳಿಂದ ನಿರಂತರ ಕೇಳಿಬರುತ್ತಿದೆ. ಹುದ್ದೆಗಳು ಹರಾಜಾಗುತ್ತಿವೆ ಎಂಬುದು ಜನಜನಿತ ಮಾತು. ಲೋಕಸೇವಾ ಆಯೋಗದ ಸದಸ್ಯರ ಬಗ್ಗೆಯೇ ಅಭ್ಯರ್ಥಿಯೊಬ್ಬರು ಭ್ರಷ್ಟಾಚಾರದ ಆರೋಪ ಮಾಡಿ, ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಆ ವರ್ಷದ ಆಯ್ಕೆಯನ್ನೇ ಸರ್ಕಾರ ರದ್ದುಗೊಳಿಸಿತ್ತು. ಪ್ರತಿಸಲವೂ ಇಂತಹುದೇ ಹಗರಣ ಪುನರಾವರ್ತನೆಯಾಗುತ್ತಿದೆ.
ಇತ್ತೀಚಿನ ನಿದರ್ಶನವೆಂದರೆ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು. ಪರೀಕ್ಷೆಯ ಹಂತದಲ್ಲೇ ಅಕ್ರಮ, ನೇಮಕಾತಿ ಸಂದರ್ಭದಲ್ಲಿಯೇ ಭ್ರಷ್ಟಾಚಾರ ನಡೆದರೆ, ಇಂತಹ ವ್ಯವಸ್ಥೆಯಲ್ಲಿ ಆಯ್ಕೆಯಾದ ‘ಅಧಿಕಾರಿ’ಗಳಿಂದ ಪ್ರಾಮಾಣಿಕತೆ, ದಕ್ಷತೆಯನ್ನು ನಿರೀಕ್ಷಿಸುವುದಾದರೂ ಹೇಗೆ? ಮನೆ ಹತ್ತಿ ಉರಿದರೆ ನಿಲಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಬಹುದೆ? ತಾಯ ಹಾಲೇ ನಂಜಾದೊಡೆ? ಇಂತಹ ‘ಅಕ್ರಮ ಸಂತಾನ’ದ ಅಧಿಕಾರಿಗಳು ಮುಂದೆ ಆಯಕಟ್ಟಿನ ಜಾಗ ಪಡೆಯಲು ಇದೇ ಬಗೆಯ ಅಕ್ರಮವನ್ನು ಅನುಸರಿಸುತ್ತಾರೆ; ಪ್ರಭಾವೀ ಹುದ್ದೆಗಳನ್ನು ‘ಅಲಂಕರಿಸುತ್ತಾರೆ’. ನಮ್ಮ ಪ್ರಜಾಪ್ರತಿನಿಧಿಗಳು ‘ಇಂತಹ’ ಅಧಿಕಾರಿಯೇ ಬೇಕೆಂದು ಅಪೇಕ್ಷೆ ಪಡುವುದರ ಹಿಂದಿನ ಹುನ್ನಾರವೇನು?
ಸಾಂವಿಧಾನಿಕ ಸ್ವಾಯತ್ತ ಸಂಸ್ಥೆ ಯೊಂದು ಪಾರದರ್ಶಕವಾಗಿರ ಬೇಕು ಎಂದು ಬಯಸುವುದು ನಾಗರಿಕರ ಹಕ್ಕು. ವಿಶ್ವಾಸಾರ್ಹತೆ ಇಂತಹ ಸಂಸ್ಥೆಗಳ ಮೊದಲ ಆದ್ಯತೆಯಾಗಬೇಕು. ನೇಮಕಾತಿ ನ್ಯಾಯಯುತವಾಗಿ, ನಿಷ್ಪಕ್ಷಪಾತವಾಗಿ ನಡೆಯುವಂತೆ ಆಯೋಗ ಹಾಗೂ ಸರ್ಕಾರ ನೋಡಿಕೊಳ್ಳಬೇಕಾದುದು ಅವರ ಪ್ರಾಥಮಿಕ ಜವಾಬ್ದಾರಿ. ಇಲ್ಲದಿದ್ದರೆ ಸರ್ಕಾರದ ಆಡಳಿತ ವ್ಯವಸ್ಥೆಯೇ ಕುಸಿದು ಬೀಳುತ್ತದೆ. ಈಗ ಆಗುತ್ತಿರುವುದು ಇದೇ! ಎತ್ತ ನೋಡಿದರತ್ತ ಅಕ್ರಮ! ಅಧಿಕಾರಿಗಳ ಮೇಲೆ ನಡೆಯುವ ದಾಳಿಯಲ್ಲಿ ಕೋಟ್ಯಂತರ ರೂಪಾಯಿಗಳ ಆಸ್ತಿ ಪತ್ತೆಯಾಗುತ್ತಿರುವ ವರದಿ ಕೇವಲ ಸ್ಯಾಂಪಲ್ ಅಷ್ಟೆ! ಇದರ ಹಿಂದಿರುವವರು ಯಾರು? ಇಡೀ ವ್ಯವಸ್ಥೆಯೇ ಅಕ್ರಮ ಸಂತಾನವಾದಂತಿದೆ.
ಇದ್ದುದರಲ್ಲಿ ‘ಕೇಂದ್ರ ಲೋಕಸೇವಾ ಆಯೋಗ’ ಘನತೆ ಕಾಯ್ದುಕೊಂಡು ಬರಲು ಪ್ರಯತ್ನಿಸಿದೆ. ನಿಯಮಿತ ವೇಳೆಗೆ ಪರೀಕ್ಷೆ ನಡೆಸಿ, ಗೌಪ್ಯತೆ ಕಾಪಾಡಿಕೊಂಡು, ನಿಯಮಗಳಿಗೆ ಅನುಸಾರವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ. ಆಗೀಗ ಪಿಸುದನಿಯಲ್ಲಿ ಅಪಸ್ವರ ಕೇಳಿಬಂದರೂ ಹಗರಣಗಳು ಇಲ್ಲವೆನ್ನುವಷ್ಟು ಕಡಿಮೆ. ಆದರೆ ಕರ್ನಾಟಕ ಲೋಕ ಸೇವಾ ಆಯೋಗ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ಕರ್ತವ್ಯಭ್ರಷ್ಟತೆಯ ಕಳಂಕಕ್ಕೆ ಮತ್ತೆ ಮತ್ತೆ ಗುರಿಯಾಗುತ್ತಲೇ ಬಂದಿದೆ. ಆದರೂ ಅದನ್ನು ಸರಿಪಡಿಸುವ ಯಾವ ಗಂಭೀರ ಪ್ರಯತ್ನಗಳೂ ನಡೆದಂತೆ ತೋರುತ್ತಿಲ್ಲ. ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಬದುಕಿನ ಜೊತೆ ಆಯೋಗ ಚೆಲ್ಲಾಟವಾಡುತ್ತಿರುವಂತಿದೆ. ಹೊಸ ಜನಾಂಗ ಅನೇಕ ಕನಸುಗಳನ್ನು ಹೊತ್ತು ಈ ಪರೀಕ್ಷೆಗೆ ಸಿದ್ಧವಾಗುತ್ತಾರೆ. ಈ ಹುದ್ದೆಗಿರುವ ಅಧಿಕಾರದ ವ್ಯಾಪ್ತಿ, ಸವಲತ್ತು, ಸಾಮಾಜಿಕ ಸ್ಥಾನಮಾನಗಳಿಗಾಗಿ ಇರುವ ಉದ್ಯೋಗವನ್ನೂ ಬಿಟ್ಟು ಪರೀಕ್ಷೆಗೆ ಸಿದ್ಧವಾಗುವ, ತಮ್ಮ ಬದುಕನ್ನೇ ಪಣವಾಗಿಟ್ಟು ಅಧ್ಯಯನ ಮಾಡುವ ಅನೇಕರ ಆಕಾಂಕ್ಷೆಗೆ ಆಯೋಗ ಅನ್ಯಾಯ ಮಾಡುತ್ತಿದೆ. ಹುದ್ದೆಗಳು ಉಳ್ಳವರ, ವಶೀಲಿಬಾಜಿ ನಡೆಸುವವರ ಪಾಲಾಗುತ್ತಿದೆ ಎಂಬ ಮಾತು ಜನಜನಿತವಾಗಿದೆ.
ಈಗಲಾದರೂ ಸರ್ಕಾರ ಕಠಿಣ ನಿರ್ಧಾರಗಳನ್ನು ಕೈಗೊಂಡು ಲೋಕಸೇವಾ ಆಯೋಗದ ‘ಶುದ್ಧೀಕರಣ’ ಮಾಡಬೇಕು; ಆಯೋಗದ ಬಗ್ಗೆ ವಿಶ್ವಾಸಾರ್ಹತೆ ಮೂಡುವಂತೆ ನೋಡಿಕೊಳ್ಳಬೇಕು. ತನ್ಮೂಲಕ ತನ್ನ ‘ಆಡಳಿತ ವ್ಯವಸ್ಥೆ’ಯನ್ನೂ ಸರ್ಕಾರ ಬಲಪಡಿಸಿಕೊಂಡಂತಾಗುತ್ತದೆ. ಉದ್ಯೋಗಾಕಾಂಕ್ಷಿಗಳು ಮಾತ್ರವಲ್ಲ, ಸಾರ್ವಜನಿಕರೂ ಆಯೋಗದ ಈ ಅಕ್ರಮದ ವಿರುದ್ಧ ದನಿಯೆತ್ತಬೇಕು; ‘ಸಾರ್ವಜನಿಕ ಚಳವಳಿ’ಯೊಂದು ರೂಪುಗೊಳ್ಳಬೇಕು. ಇದು ಕೇವಲ ಉದ್ಯೋಗದ ಪ್ರಶ್ನೆ ಮಾತ್ರವಲ್ಲ, ನಮ್ಮ ಆಡಳಿತ ವ್ಯವಸ್ಥೆಯ ದುಸ್ಥಿತಿಗೆ ಕಾರಣವಾಗುವ ಸಂಗತಿಯೂ ಹೌದು. ‘ಸೇವಾ ವಲಯ’ವಾಗಬೇಕಿದ್ದ ಆಡಳಿತಾಂಗ ಈಗ ಅಕ್ರಮ ಸಂಪಾದನೆಯ ತಾಣವಾಗುತ್ತಿರುವುದಕ್ಕೆ ನೇಮಕಾತಿಯ ಸಂದರ್ಭದಲ್ಲೇ ನಡೆಯುತ್ತಿರುವ ಈ ಭ್ರಷ್ಟಾಚಾರವೇ ಮೂಲಕಾರಣ. ಬಿತ್ತಿದಂತೆ ಬೆಳೆ.
ಸಾಮಾಜಿಕ ಕಾಳಜಿಯ ಎಲ್ಲ ಸಂವೇದನಾಶೀಲ ಮನಸ್ಸುಗಳೂ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಆಯೋಗದ ಈ ಕಾರ್ಯವೈಖರಿ ವಿರುದ್ಧ ಪ್ರತಿಭಟನೆಯ ದನಿಯೆತ್ತುವುದರ ಮೂಲಕ ಭ್ರಷ್ಟಾಚಾರದ ಮೂಲಸೆಲೆಯನ್ನು ಶುಚಿಗೊಳಿಸುವ ಕಾರ್ಯದಲ್ಲಿ ಕೈಜೋಡಿಸುವುದು ಎಲ್ಲ ನಾಗರಿಕರ ಕರ್ತವ್ಯ. ಇದು ಉದ್ಯೋಗಾಕಾಂಕ್ಷಿಗಳ ಪ್ರಶ್ನೆ ಮಾತ್ರವಲ್ಲ, ನಮ್ಮೆಲ್ಲರ ಬದುಕನ್ನು ನಿಯಂತ್ರಿಸುವ ಆಡಳಿತ ವ್ಯವಸ್ಥೆಯ ಪ್ರಶ್ನೆಯೂ ಹೌದು. ಭ್ರಷ್ಟರ ಬದಲು ಪ್ರಾಮಾಣಿಕ ಅರ್ಹ ಅಭ್ಯರ್ಥಿಗಳು ಆಯ್ಕೆಯಾಗುವುದು ಸಾಧ್ಯವಾದರೆ ಸಾಮಾನ್ಯ ಜನತೆಯ ಬದುಕು ಸಹನೀಯವಾದೀತು! ಜನರ ತೆರಿಗೆಯ ಹಣದ ಸರ್ಕಾರದ ಬೊಕ್ಕಸ ಕೆಲವು ಭ್ರಷ್ಟರ ನಡುವೆ ಹಂಚಿಕೆಯಾಗದೆ ಜನಸಾಮಾನ್ಯರನ್ನು ತಲುಪಿ ಅವರ ಬದುಕು ಹಸನಾಗುವ ಸಾಧ್ಯತೆಯಿದೆ.
ಭ್ರಷ್ಟಾಚಾರದ ಸುದ್ದಿ ದಿನನಿತ್ಯದ ಮಾತಾಗಿದೆ. ಜನರೂ ಅದನ್ನು ಕೇಳಿ, ಓದಿ, ಅನುಭವಿಸಿ ಸುಮ್ಮನಾಗುತ್ತಿದ್ದಾರೆ. ಎಲ್ಲಿ ಪ್ರಜೆಯು ಮೂಕನಾಗಿರುತ್ತಾನೆಯೋ, ವಿಚಾರಹೀನನಾಗಿರುತ್ತಾನೆಯೋ ಅಂತಹ ಕಡೆ ದೆವ್ವಗಳಿಗೇ ದೈವತ್ವ ಲಭಿಸಿಬಿಡುತ್ತದೆ. ನಮ್ಮ ಸಂದರ್ಭದಲ್ಲಿಯೂ ಹಾಗಾಗಿದೆ. ನಿರ್ಲಿಪ್ತತೆ ಎಲ್ಲ ಸಂದರ್ಭ ದಲ್ಲಿಯೂ ಪ್ರಬುದ್ಧತೆಯ ಲಕ್ಷಣವೇನಲ್ಲ! ಉತ್ತಮವಾದುದನ್ನು ಪ್ರಯತ್ನಪೂರ್ವಕವಾಗಿಯಾದರೂ ಉಳಿಸಿಕೊಳ್ಳುವ ಸಾಮಾಜಿಕ ಜವಾಬ್ದಾರಿಯನ್ನು ಪ್ರಕಟಿಸದಿದ್ದರೆ ಎಂಥೆಂಥವೋ ಏರಬಾರದ ಕಡೆಗೆ ಏರಿ, ಸಾಮಾಜಿಕ ಬದುಕನ್ನು ಹೊಲಸೆಬ್ಬಿಸಿ, ನಮ್ಮ ಬದುಕನ್ನು ನರಕವಾಗಿಸುತ್ತವೆ. ಕುರುಡುನಿಷ್ಠೆ, ಅಂಧಾಭಿಮಾನ ಹಿಂಸೆಗಿಂತ ಅಪಾಯಕಾರಿ ಎಂಬುದನ್ನು ನಾವು ಮರೆಯಬಾರದು. ಸುತ್ತಮುತ್ತಲಿನ ಎಲ್ಲ ಬಗೆಯ ಅಕ್ರಮಗಳನ್ನು ನೋಡಿಯೂ ಸತ್ತಂತಿಹ ನಾಗರಿಕರನ್ನು ಬಡಿದೆಚ್ಚರಿಸುವುದು ಹೇಗೆ?
(ಲೇಖಕರು ಖ್ಯಾತ ವಿಮರ್ಶಕರು)