ಅಂಕಣ

ಕರುಣರಸ ಹರಿಸುವ ಕೋಡಿಮಠ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!

ಮರ್ತ್ಯದ ಮಹಾಮನೆಯ ಸಂರಕ್ಷಣೆಗೋಸ್ಕರ ಆಯಾ ಶತಮಾನಗಳಲ್ಲಿ ಆಯಾ ಪ್ರದೇಶಗಳಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಮಹಾತ್ಮರು ಆಯಾ ಜನಾಂಗದ ಸಮೂಹದಲ್ಲಿ ಅವತರಿಸುತ್ತಲೇ ಬಂದಿದ್ದಾರೆ. ನೀರೇ ನಿರ್ಗಲ್ಲಾದಂತೆ ಪರಮಾತ್ಮನ ದಿವ್ಯಚೈತನ್ಯವು ಮಾನವದೇಹವನ್ನು ತಾಳಿ ಭೂಮಿಗೆ ಅವತರಿಸುತ್ತದೆ. ಆ ಹಿನ್ನೆಲೆಯಲ್ಲಿ ಬಸವಾದಿ ಶಿವಶರಣರ ಶತಮಾನಕ್ಕಿಂತ ಪೂರ್ವದಲ್ಲಿ ಅಂದರೆ 11ನೇ ಶತಮಾನ. ಇದು ಮುಂದಣ ಶತಮಾನಗಳಿಗೆ ಮುನ್ನುಡಿ ಬರೆಯಬೇಕಾಗಿತ್ತೋ ಏನೋ? ದಿವ್ಯ ತೇಜೋಮೂರ್ತಿ ಧರೆಗವತರಿಸಿತು. ಪೂಜ್ಯ ಶ್ರೀ ಅಜ್ಜಯ್ಯ ಶಿವಯೋಗಿಗಳ ಜನ್ಮಸ್ಥಳ, ತಂದೆ-ತಾಯಿಗಳ ಹೆಸರುಗಳು ತಿಳಿದುಬಂದಿಲ್ಲ. ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಸುಕ್ಷೇತ್ರ ಹಾರನಹಳ್ಳಿಗೆ ಅಜ್ಜಯ್ಯ ಶಿವಯೋಗಿಗಳ ಆಗಮನವಾಗುತ್ತದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಆಖಂಡ ತಪವನ್ನಾಚರಿಸಿ ಸಿದ್ಧಿಯನ್ನು ಪಡೆಯುತ್ತಾರೆ. ಪೂಜ್ಯರ ಕತೃತ್ವಶಕ್ತಿಗೆ ತಲೆಬಾಗದವರೇ ಇಲ್ಲ. ಹಾರನಹಳ್ಳಿಯ ಲಿಂಗರಾಜ ದೇಸಾಯಿಯವರು ಅಜ್ಜಯ್ಯ ಶಿವಯೋಗಿಗಳಿಗೆ ಮಠವನ್ನು ಕಟ್ಟಿಸಿಕೊಟ್ಟರು. ಹೀಗೆ ಅವರೇ ಶ್ರೀಮಠದ ಮೂಲ ಕರ್ತೃಗಳು. ಶಿವಯೋಗಿಗಳ ನಂತರದಲ್ಲಿ ಮಠದ ಪರಂಪರೆಯಲ್ಲಿ ಅಂದಿನಿಂದ ಇಂದಿನವರೆಗೆ 59 ಜನ ಮಹಾಸ್ವಾಮಿಗಳು ಆಗಿಹೋಗಿದ್ದಾರೆ. ಅವರಲ್ಲಿ ಬಹು ಪ್ರಖ್ಯಾತಿ ಪಡೆದವರು ಶ್ರೀ ಶಿವಲಿಂಗ ಮಹಾಶಿವಯೋಗಿಗಳು ಮಠದ ಕೀರ್ತಿಗೆ ಕಳಸಪ್ರಾಯವಾದವರು. ನಂತರ ಬಂದ ಶ್ರೀ ನೀಲಲೋಚನ ಮಹಾಸ್ವಾಮಿಗಳು ಸಮರ್ಥವಾಗಿ ಮಠವನ್ನು ನಡೆಸಿದರು.

ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ. ಮ.ನಿ.ಪ್ರ. ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು 1983ರಲ್ಲಿ 57 ಜಗದ್ಗುರುಗಳಾಗಿ ಪೀಠವನ್ನೇರಿದ್ದಾರೆ. ಇವರು ಪೀಠಕ್ಕೆ ಬಂದ ನಂತರ ಮಠದ ಕೀರ್ತಿ ದೇಶ-ವಿದೇಶಗಳಲ್ಲಿ ವಾಯುವೇಗದಲ್ಲಿ ಇಮ್ಮಡಿಸಿದೆ. ಕೋಡಿಮಠವನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ವಿುಕ, ಸಾಹಿತ್ಯಕವಾಗಿ ಬೆಳೆಸುವುದರೊಂದಿಗೆ ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಿದ್ದಾರೆ. ಶ್ರೀಮಠದಲ್ಲಿ ನಿತ್ಯ ಅನ್ನದಾಸೋಹ, 100 ಜನ ಬಡ ವಿದ್ಯಾರ್ಥಿಗಳಿಗೆ ಮಠದಲ್ಲಿ ಅನ್ನ, ಅರಿವೆ, ಔಷಧಿ, ಆಶ್ರಯ ನೀಡಿ ಬೆಳೆಸುತ್ತಿದ್ದಾರೆ. ದಿನನಿತ್ಯ ಮಠಕ್ಕೆ ಬರಹೋಗುವ ಭಕ್ತರ ಸಂಖ್ಯೆಗೆ ಲೆಕ್ಕವಿಲ್ಲ. ಯಾರೇ ಬಂದರೂ ಮೊದಲು ಪ್ರಸಾದ ಮಾಡಿ, ಆಮೇಲೆ ನಿಮ್ಮ ಸಮಸ್ಯೆ ಹೇಳಿ ಪರಿಹಾರ ಪಡೆಯಿರಿ ಎನ್ನುವ ಮಾತೃಹೃದಯ ಪೂಜ್ಯರದ್ದು. ಮಠದ ವೈಭವಕ್ಕೆ ಕೊರತೆಯಿಲ್ಲ. ಔದಾರ್ಯಕ್ಕೂ ಕೊರತೆ ಇಲ್ಲ, ತ್ರಿವಿಧ ದಾಸೋಹಿಗಳಾದ ಪೂಜ್ಯರು ಬಸವಾದಿ ಶಿವಶರಣರ ತತ್ವಕ್ಕೆ ಜೀವಂತ ಭಾಷ್ಯವಾಗಿದ್ದಾರೆ. ಪ್ರತಿವರ್ಷ ಇಲ್ಲಿ ನಾಲ್ಕೈದು ಬೃಹತ್ ಪ್ರಮಾಣದ ಕಾರ್ಯಕ್ರಮಗಳು ಜರುಗುತ್ತವೆ.

ವಿಜ್ಞಾನಕ್ಕೆ ಸವಾಲಾಗಿರುವ ಕೋಡಿಮಠದ ಹೊತ್ತಿಗೆ ಅಪರೂಪವಾದದ್ದು. ಸರ್ವರ ಪ್ರಶ್ನೆ-ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಈ ಕಾಲಜ್ಞಾನದ ಹೊತ್ತಿಗೆ ಮಠದ ಕೀರ್ತಿಯನ್ನು ಅಂತಾರಾಷ್ಟ್ರೀಯ ಎತ್ತರಕ್ಕೆ ಕೊಂಡೊಯ್ದಿದೆ. ಅರ್ಥೈಸಲಿಕ್ಕೆ ಸಾಧ್ಯವಾಗದ ಮುಂಡಿಗೆಯ ರೂಪದಲ್ಲಿರುವ ಉತ್ತರಗಳನ್ನು ಸಹಜ ಸರಳವಾಗಿ ತಿಳಿಸಿ ಹೇಳುವ ಪೂಜ್ಯ ಗುರುಗಳ ಶಕ್ತಿ ಅಪಾರವಾದದ್ದು.

ಮಾ. 10ರಿಂದ ಆರಂಭವಾಗಿರುವ ಕೋಡಿಮಠದ ಮಹದೇಶ್ವರ ಜಾತ್ರಾ ಮಹೋತ್ಸವವು ಇಂದು ಮುಕ್ತಾಯಗೊಳ್ಳಲಿದೆ. ಇಂದಿನ ಕಾರ್ಯಕ್ರಮಗಳು - ಶಿವಲಿಂಗಸ್ವಾಮಿಗಳ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಪೂಜೆ, ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಪಲ್ಲಕ್ಕಿ ಉತ್ಸವ, ಹಾರನಹಳ್ಳಿ ಪುರಪ್ರವೇಶದ ನಂತರ ಮಹದೇಶ್ವರ ಬೆಟ್ಟದಲ್ಲಿ ಮಧ್ಯಾಹ್ನ ಗುಗ್ಗಳ ಸೇವೆ, ಹೆಜ್ಜೆ ನಮಸ್ಕಾರ, ಡಿಂಡುರುಳು ಸೇವೆ, ಜಂಗಮಪೂಜೆ, ಮಹಾದಾಸೋಹ. ಸಂಜೆ ಮಠದ ಆವರಣದಲ್ಲಿ ನಿಡಸೋಸಿ ಸಿದ್ಧಸಂಸ್ಧಾನ ಮಠದ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳ ಸಾನ್ನಿದ್ಧ್ಯ ಹಾಗೂ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠದ ಶ್ರೀ ಫಕೀರ ಸಿದ್ದರಾಮೇಶ್ವರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಧಾರ್ವಿುಕ ಸಮಾರಂಭ ನಡೆಯಲಿದೆ. ಕಡೂರು ಮೂರು ಕಳಸ ಮಠದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಮಾಡಾಳು ವಿರಕ್ತಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಕೊಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ ಸೇರಿದಂತೆ ಹರಗುರು ಶಿವಮೂರ್ತಿಗಳು ಈ ಧಾರ್ವಿುಕ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ.