ಜುಜುರಾಣ (ಪಕ್ಷಿಗಳ ರಾಜ) ಎಂದು ಕರೆಯಲ್ಪಡುವ ವೆಸ್ಟರ್ನ್ ಟ್ರಾಗೊಪಾನ್, ಪಶ್ಚಿಮ ಹಿಮಾಲಯದಲ್ಲಿ ಮಾತ್ರ ನೆಲಸುವ ಫೆಸೆಂಟ್ ವರ್ಗದ ಪಕ್ಷಿ.
ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾದ ಇದರ ವೈಜ್ಞಾನಿಕ ಹೆಸರುTragopan melanocephalus. ಗಂಡು ಪಕ್ಷಿಯ ಮುಖ ಹಾಗೂ ಕುತ್ತಿಗೆ ಕೆಂಪು ಮಿಶ್ರಿತ ಕಿತ್ತಳೆ ಬಣ್ಣ, ಗಂಟಲು ನೀಲಿ ಮತ್ತು ನೆರಳೆ, ಕಪ್ಪು ತಲೆ ಹಾಗೂ ಕಪ್ಪು ದೇಹದ ಮೇಲೆ ಬಿಳಿ ಚುಕ್ಕೆಯಿಂದ ವರ್ಣರಂಜಿತವಾಗಿದ್ದು; ಹೆಣ್ಣು ಪಕ್ಷಿ ಕಂದು ಬಣ್ಣದ ಮೇಲೆ ಬಿಳಿ ಚುಕ್ಕೆಯನ್ನು ಹೊಂದಿರುತ್ತದೆ.
ಗಂಡು ಪಕ್ಷಿ 1.8-2.2 ಕೆ.ಜಿ ಮತ್ತು ಹೆಣ್ಣು ಪಕ್ಷಿ 1.2-1.5 ಕೆ.ಜಿ ತೂಗುತ್ತವೆ. ಹೆಚ್ಚಾಗಿ ನೆಲದ ಮೇಲೆಯೇ ವಾಸಿಸುವ ಈ ಪಕ್ಷಿ, 2500 ಮೀ. ರಿಂದ 3800 ಮೀ. ವರೆಗಿನ ಎತ್ತರದ ಸಮಶೀತೋಷ್ಣ ಕಾಡುಗಳಲ್ಲಿ ಕಂಡು ಬರುತ್ತವೆ. ನಾಚಿಕೆ ಮತ್ತು ಜಾಗರೂಕ ಸ್ವಭಾವದ ಈ ಹಕ್ಕಿ ಕಾಡಿನಲ್ಲಿ ದೊರಕುವ ಜರೀಗಿಡಗಳು, ಎಲೆ, ಹೂವು, ಹಣ್ಣು, ಬಿದಿರು ಹಾಗೂ ಕೀಟಗಳನ್ನು ಸೇವಿಸುತ್ತವೆ. ಅಳಿವಿನಂಚಿನಲ್ಲಿರುವ ಶಂಕುಮರ ಹಿಮಾಲಯನ್ ಯೂ (ಖಚ್ಡ್ಠ ್ಚ್ಞಟ್ಟಠಿಚ) ಕಾಡುಗಳ ಪುನರುತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಏಪ್ರಿಲ್-ಜೂನ್ ನಡುವಿನ ವಸಂತ ತಿಂಗಳುಗಳಲ್ಲಿ ಇವು ಸಂತಾನೊತ್ಪತ್ತಿ ಮಾಡುತ್ತವೆ.
ಫೆಸೆಂಟ್ ವರ್ಗದಲ್ಲಿದ್ದು ಮರದಲ್ಲಿ ಗೂಡುಕಟ್ಟುವ ವರ್ತನೆಗೆ ಇವುಗಳು ಹೆಸರುವಾಸಿ. ಸಂತಾನೊತ್ಪತ್ತಿಯ ಅವಧಿಯಲ್ಲಿ, ಹೆಣ್ಣು ಪಕ್ಷಿ 3-5 ಮೊಟ್ಟೆಗಳನ್ನು ಇಟ್ಟು, ಅವುಗಳಿಗೆ 28-30 ದಿನಗಳವರೆಗೆ ಕಾವು ಕೊಟ್ಟು ಮರಿ ಮಾಡುತ್ತವೆ. ಮುಂದಿನ ಸಂತಾನೊತ್ಪತ್ತಿಯ ಅವಧಿಯವರಗೆ ಮರಿಗಳು ತಾಯಿಯೊಡನೆ ಇದ್ದು, ಆಹಾರ ಹುಡುಕಾಟ ಹಾಗೂ ಪರಭಕ್ಷಕಗಳಿಂದ ತಪ್ಪಿಸಿಕೊಳ್ಳುವ ಬಗೆಗಳನ್ನು ಕಲಿಯುತ್ತವೆ.
ಆವಾಸಸ್ಥಾನದ ನಷ್ಟ, ಅಣಬೆ ಹಾಗೂ ಗಿಡಮೂಲಿಕೆಗಳ ಸಂಗ್ರಹ ಮತ್ತು ಬೇಟೆಯಾಡುವುದರಿಂದ ಇವುಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದ್ದು, ಉತ್ತರ ಪಾಕಿಸ್ತಾನ, ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ, ಸುಮಾರು 3500 ಹಕ್ಕಿಗಳು ಮಾತ್ರ ಉಳಿದುಕೊಂಡಿವೆ. ಈ ಕಾರಣಕ್ಕಾಗಿ ಹಿಮಾಚಲ ಪ್ರದೇಶದ ಅರಣ್ಯ ಇಲಾಖೆ ವೆಸ್ಟ್ರನ್ ಟ್ರಾಗೊಪಾನ್ ಸಂರಕ್ಷಣಾ ಸಂತಾನೊತ್ಪತ್ತಿ ಕಾರ್ಯಕ್ರಮವನ್ನು ಸರಾಹನ್ನಲ್ಲಿ (ಹಿ.ಪ್ರ) ಮರು-ಪರಿಚಯಿಸುವ ಉದ್ದೇಶಕ್ಕಾಗಿ ಕೈಗೆತ್ತಿಕೊಂಡಿದೆ. ಪಕ್ಷಿ ವೀಕ್ಷಕರು ಈ ಪಕ್ಷಿಯನ್ನು ಹಿಮಾಚಲ ಪ್ರದೇಶದ ಗ್ರೆಟ್ ಹಿಮಾಲಯನ್ ರಾಷ್ಟ್ರಿಯ ಉದ್ಯಾನವನ ಮತ್ತು ದಾರನ್ಘಾಟಿ ಅಭಯಾರಣ್ಯದಲ್ಲಿ ನೋಡಬಹುದು.
| ಲಕ್ಷ್ಮೀನರಸಿಂಹ ಆರ್.