| ಸುನಿಲ್ ಪೊನ್ನೇಟಿ ಮಡಿಕೇರಿ
ಕರುನಾಡಿನ ಕಾಫಿಯ ಕಂಪು ಈಗ ಇಡೀ ಜಗತ್ತಿನಲ್ಲೇ ಸುಪ್ರಸಿದ್ಧವಾಗಿದೆ. ಕರ್ನಾಟಕದಲ್ಲಿ ಪ್ರಮುಖವಾಗಿ ಅರೇಬಿಕಾ ಮತ್ತು ರೋಬಸ್ಟಾ ಎನ್ನುವ ಎರಡು ಪ್ರಮುಖ ತಳಿಗಳನ್ನು ಬೆಳೆಯಲಾಗುತ್ತದೆ. ಅರೇಬಿಕಾ ಕಾಫಿಯು ಹೆಚ್ಚು ಸುವಾಸನೆ, ಸೂಕ್ಷ್ಮವಾದ ರುಚಿ ಮತ್ತು ಕಡಿಮೆ ಕೆಫೀನ್ ಅಂಶ ಹೊಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದನ್ನು ಉತ್ತಮ ಗುಣಮಟ್ಟದ ಕಾಫಿ ಎಂದು ಪರಿಗಣಿಸಲಾಗುತ್ತದೆ. ಈ ತಳಿಯ ಕಾಫಿಗೆ ಬೆಲೆಯೂ ಹೆಚ್ಚು. ಸಾಮಾನ್ಯವಾಗಿ ಎತ್ತರದ ಪ್ರದೇಶದಲ್ಲಿ ಅರೇಬಿಕಾ ಕಾಫಿ ಬೆಳೆಯಲಾಗುತ್ತದೆ. ನಮ್ಮಲ್ಲಿ ಕಾಫಿಯನ್ನು ಮರಗಳ ನೆರಳಿನಲ್ಲಿ ಬೆಳೆತ್ತಿರುವುದು ವಿಶೇಷ. ರೋಬಸ್ಟಾ ಕಾಫಿ ಹೆಚ್ಚು ಕೆಫೀನ್ ಅಂಶವನ್ನು ಹೊಂದಿದ್ದು, ಒರಟು ರುಚಿ ಹೊಂದಿರುತ್ತದೆ. ಈ ತಳಿಯ ಕಾಫಿಯು ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿರುತ್ತದೆ. ಕೀಟಮುಕ್ತ, ರೋಗಮುಕ್ತವಾಗಿ ಹೆಚ್ಚಿನ ಇಳುವರಿಯೂ ಬರುತ್ತದೆ.
ಭಾರತದಲ್ಲಿ ಬೆಳೆಯುವ ಒಟ್ಟಾರೆ ಕಾಫಿಯ ಪೈಕಿ ಶೇ. 71ರಷ್ಟು ಕಾಫಿಯನ್ನು ಕರ್ನಾಟಕದಲ್ಲಿಯೇ ಬೆಳೆಯಲಾಗುತ್ತದೆ. ರಾಜ್ಯದಲ್ಲಿ 10 ಹೆಕ್ಟೇರ್ಗಿಂತ ಕಡಿಮೆ ತೋಟ ಹೊಂದಿರುವ 77,613 ಬೆಳೆಗಾರರಿದ್ದು, 10 ಹೆಕ್ಟೇರ್ ಮೇಲ್ಪಟ್ಟು ವಿಸ್ತೀರ್ಣದ ತೋಟ ಹೊಂದಿರುವ 2,242 ಬೆಳೆಗಾರರು ಇದ್ದಾರೆ. 2024-25ರ ಅಂಕಿಅಂಶಗಳ ಪ್ರಕಾರ ಚಿಕ್ಕಮಗಳೂರಿನಲ್ಲಿ 91,400 ಮೆಟ್ರಿಕ್ ಟನ್, ಕೊಡಗಿನಲ್ಲಿ 1,21,600 ಮೆಟ್ರಿಕ್ ಟನ್ ಹಾಗೂ ಹಾಸನದಲ್ಲಿ 43 ಸಾವಿರ ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 2,56,000 ಟನ್ ಕಾಫಿ ಬೆಳೆಯಲಾಗಿದೆ. ಈ ಮೂರು ಜಿಲ್ಲೆಗಳಿಂದ ಕಾಫಿ ಮೂಲಕ 10 ಸಾವಿರ ಕೋಟಿ ರೂ. ವಿದೇಶಿ ವಿನಿಮಯ ಬರುತ್ತಿದೆ. ಉಳಿದಂತೆ ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು ಜಿಲ್ಲೆಗಳಿಂದಲೂ ಕಾಫಿಯ ಕೊಡುಗೆ ಇದೆ. ಇದನ್ನು ಇತರೆಡೆಗಳಿಗೂ ವಿಸ್ತರಿಸುವ ಚಿಂತನೆಯನ್ನು ಭಾರತೀಯ ಕಾಫಿ ಮಂಡಳಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಬೇರೆ ಬೇರೆ ಹವಾಮಾನ, ಭೌಗೋಳಿಕ ಸ್ಥಿತಿಯಲ್ಲಿ ಬೆಳೆಯಬಹುದಾದ ಕಾಫಿ ತಂತ್ರಜ್ಞಾನವನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.
2047ಕ್ಕೆ ದೇಶದಲ್ಲಿ 7 ಲಕ್ಷ ಟನ್ ಕಾಫಿ ಬೆಳೆಯುವ ಗುರಿಯನ್ನು ಭಾರತೀಯ ಕಾಫಿ ಮಂಡಳಿ ಇಟ್ಟುಕೊಂಡಿದೆ. ಇದರಲ್ಲಿ ಕರ್ನಾಟಕದ ಪಾಲು ಕೂಡ ಇದ್ದು, ಇದಕ್ಕೆ ಬೇಕಾದ ಸಿದ್ಧತೆ ನಡೆದಿದೆ. 2047ರ ಒಳಗೆ ಕಾಫಿ ರಫ್ತಿನಿಂದ 50 ಸಾವಿರ ಕೋಟಿ ರೂ. ಆದಾಯ ತಂದುಕೊಡುವ ಗುರಿ ಕಾಫಿ ಮಂಡಳಿಯದು.
ಕರ್ನಾಟಕದ್ದೂ ಸೇರಿದಂತೆ ಭಾರತೀಯ ಕಾಫಿ ಹೆಚ್ಚು ರಫ್ತಾಗುವುದು ಯೂರೋಪಿಯನ್ ರಾಷ್ಟ್ರಗಳಿಗೆ. ಇಟಲಿಯೇ ಕರ್ನಾಟಕದ ಕಾಫಿಗೆ ಅತಿದೊಡ್ಡ ರಫ್ತು ಮಾರುಕಟ್ಟೆ. ಹೆಚ್ಚು ಕಹಿಕಹಿ ಎನಿಸುವ ರೋಬಸ್ಟಾ ತಳಿಯನ್ನು ಇಟಲಿ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ನಮ್ಮ ಕಾಫಿಯ 2ನೇ ಅತಿದೊಡ್ಡ ಮಾರುಕಟ್ಟೆ ಜರ್ಮನಿ. ರೋಬಸ್ಟಾ ಮತ್ತು ಗುಣಮಟ್ಟದ ಅರೇಬಿಕಾ ಎರಡನ್ನೂ ಈ ದೇಶ ಆಮದು ಮಾಡಿಕೊಳ್ಳುತ್ತದೆ.
ರಷ್ಯಾ ಕೂಡ ಭಾರತೀಯ ಕಾಫಿಯ ಒಂದು ಪ್ರಮುಖ ಮಾರುಕಟ್ಟೆಯಾಗಿದೆ. ಅಲ್ಲಿ ಇನ್ಸ್ಟಂಟ್ ಕಾಫಿಗೆ ಹೆಚ್ಚು ಬೇಡಿಕೆಯಿದೆ. ಬೆಲ್ಜಿಯಂ, ಸ್ಪೇನ್ ಕೂಡ ಕಾಫಿ ಆಮದು ಮಾಡಿಕೊಳ್ಳುತ್ತವೆ. ಯುಎಇ, ಜೋರ್ಡಾನ್, ಯುಎಸ್ಎ, ಸ್ವಿಜರ್ಲೆಂಡ್ಗೆ ಹೆಚ್ಚಿನ ಪ್ರಮಾಣದಲ್ಲಿ ಅರೇಬಿಕಾ ಕಾಫಿ ಆಮದು ಮಾಡಿ ಕೊಳ್ಳುತ್ತವೆ. ಭಾರತೀಯ ಕಾಫಿ ರಫ್ತಿನಲ್ಲಿ ರೋಬಸ್ಟಾ ತಳಿಯ ಪಾಲು ಶೇ. 70ಕ್ಕಿಂತ ಹೆಚ್ಚು ಇದ್ದು ಈ ತಳಿಯನ್ನು ದೇಶದಲ್ಲೇ ಕೊಡಗು ಜಿಲ್ಲೆಯಲ್ಲಿ ಹೆಚ್ಚು ಬೆಳೆಯುವುದು ವಿಶೇಷ.