ಇದುವರೆಗಿನ ಸಂಗತಿಗಳನ್ನು, ಬೆಳವಣಿಗೆಗಳನ್ನು ಗಮನಿಸಿದರೆ ಕರ್ನಾಟಕ ಶೀಘ್ರದಲ್ಲಿಯೇ ಕರೊನಾ ಸಮಸ್ಯೆಯಿಂದ ಹೊರಗೆ ಬರುವ ಸುಳಿವು ಮೂಡಿದೆ. ಅದನ್ನಷ್ಟು ವಿವರಿಸಲು ಬಯಸುತ್ತೇನೆ. ಜಗತ್ತಿನಲ್ಲಿರುವ ಎಲ್ಲ ವೈರಾಣು(ವೈರಸ್)ಗಳಿಗೆ ಬದುಕಲು, ಬೆಳೆಯಲು ಒಂದು ದೇಹ ಬೇಕೇ ಬೇಕು. ತನಗೆ ಬೇಕಾದ ಪ್ರಾಣಿಯನ್ನು ವೈರಾಣು ಆಯ್ಕೆ ಮಾಡಿಕೊಳ್ಳುತ್ತದೆ. ಉದಾಹರಣೆಗೆ ಸಿಡುಬು ರೋಗಕ್ಕೆ ಆ ವೈರಾಣು ಮನುಷ್ಯ ದೇಹವನ್ನು ಆಯ್ಕೆ ಮಾಡಿಕೊಂಡಿದೆ. ಪೋಲಿಯೋ ವೈರಾಣು ಮಕ್ಕಳ ದೇಹವನ್ನು ಆಯ್ಕೆ ಮಾಡಿಕೊಂಡಿರುತ್ತದೆ. ಈ ವೈರಾಣುಗಳು ಮನುಷ್ಯ ದೇಹದಲ್ಲಿ ಮಾತ್ರ ವೃದ್ಧಿಸಿ, ಹಾನಿ ಮಾಡಬಲ್ಲವು. ಇತರ ದೇಹಗಳಲ್ಲಿ ಈ ವೈರಾಣುಗಳ ಆಟ ನಡೆಯುವುದಿಲ್ಲ.
ಒಂದೇ ತರಹದ ಪ್ರಾಣಿಗಳ ಮೇಲೆ ಸವಾರಿ ಮಾಡುವ ವೈರಾಣುಗಳಿಗೆ ಈ ರೀತಿಯ ಮ್ಯೂಟೇಶನ್ ಮಾಡುವ ಭಾಗ್ಯವಿರುವುದಿಲ್ಲ. ಉದಾಹರಣೆಗೆ ಸಿಡುಬು ರೋಗ. ಇದು ತನ್ನ ಸ್ವರೂಪ ಬದಲಾಯಿಸಿಕೊಳ್ಳುವುದಿಲ್ಲ. ಹೀಗಾಗಿ ಇದಕ್ಕೆ ಲಸಿಕೆಯನ್ನು ಕಂಡುಹಿಡಿಯುವುದು ಸುಲಭ. ಸಿಡುಬು ನಿರ್ನಾಮವಾದುದ್ದು ಲಸಿಕೆಯಿಂದ. ಈಗ ಕರೊನಾ ವೈರಸ್ಗೆ
ಬರೋಣ. ಕರೊನಾ ವೈರಸ್ ಸಹ ಹಲವು ವರ್ಗಗಳ ಪ್ರಾಣಿಗಳ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವುಳ್ಳ ಫ್ಲೂನಂತಹ ವೈರಾಣು. ಕರೊನಾ ವೈರಸ್ಗೆ ಮ್ಯೂಟೇಶನ್ ಅಥವಾ ಸ್ವರೂಪವನ್ನು ಬದಲಾಯಿಸುವ ಶಕ್ತಿಯಿದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಆದರೆ ಸ್ವರೂಪವನ್ನು ಬದಲಾಯಿಸಿಕೊಳ್ಳಲು ತಾನು ಇರುವ ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹೋಗಬೇಕಾಗುತ್ತದೆ. ಈಗ ಬಂದಿರುವ ಕೋವಿಡ್-19 ಬೇರೊಂದು ಪ್ರಾಣಿಯಲ್ಲಿರುವ ಮತ್ತು ಅದರಲ್ಲಿ ಸ್ವರೂಪ ಬದಲಾಯಿಸಿಕೊಳ್ಳುವ ಸಾಧ್ಯತೆಗಳು ಇನ್ನೂ ಕಂಡುಬಂದಿಲ್ಲ. ಸದ್ಯಕ್ಕೆ ಕೋವಿಡ್-19 ವೈರಸ್ ಕೇವಲ ಮನುಷ್ಯರ ಮೇಲೆ ಸವಾರಿ ಮಾಡುತ್ತಿದ್ದು, ಕೆಲವೇ ಸಮಯದಲ್ಲಿ ಇದರ ಶಕ್ತಿ ದುರ್ಬಲವಾಗುತ್ತಿರುವುದನ್ನು ಈ ವೈರಸ್ನ ಕುರಿತಾದ ಅಂಕಿಅಂಶಗಳಿಂದ ನಾವು ಅಳೆಯಬಹುದು. ಈ ಮಾಹಿತಿಯನ್ನು ಗಮನಿಸಿದರೆ 4 ತಿಂಗಳಲ್ಲಿ ಅಂದರೆ 20 ಬಾರಿ ಈ ವೈರಾಣು ಒಂದು ತಲೆಯಿಂದ ಇನ್ನೊಂದು ತಲೆಗೆ ದಾಟುವಷ್ಟರಲ್ಲಿ ದುರ್ಬಲವಾಗುತ್ತದೆ. ಜಾಗತಿಕವಾಗಿ ಈ ವೈರಸ್ನ ಸ್ಥಿತಿಗತಿಗಳನ್ನು ಗಮನಿಸೋಣ.
ಇನ್ನು ಅಮೆರಿಕದಲ್ಲಿ ನೋಡುವುದಾದರೆ ಭಾರತಕ್ಕಿಂತ ಎರಡು ಪಟ್ಟು ಭೌಗೋಳಿಕವಾಗಿ ವಿಸ್ತೀರ್ಣ ಹೊಂದಿರುವ ಈ ರಾಷ್ಟ್ರದಲ್ಲಿ 8 ರಿಂದ 10 ಇಂಗ್ಲೆಂಡ್ ಗಾತ್ರದ ರಾಜ್ಯಗಳಿವೆ. ಆದ್ದರಿಂದ ಒಟ್ಟಾರೆಯಾಗಿ 30 ಲಕ್ಷ ಕೇಸುಗಳು ಕಂಡುಬಂದರೂ ರಾಜ್ಯದಿಂದ ರಾಜ್ಯಕ್ಕೆ ಅವರು ಕೈಗೊಂಡಿರುವ ಕ್ರಮಗಳ ಹಿನ್ನೆಲೆಯಲ್ಲಿ ಪ್ರಸರಣದಲ್ಲಿ ವ್ಯತ್ಯಾಸವಿದ್ದು, ರಾಜ್ಯಮಟ್ಟದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದನ್ನು ಗಮನಿಸಬಹುದು. ಇದೇ ಪರಿಸ್ಥಿತಿಯನ್ನು ರಷ್ಯಾ ಮತ್ತು ಬ್ರೆಜಿಲ್ನಲ್ಲಿ ಕಾಣಬಹುದಾಗಿದೆ.
ಭಾರತದ ವಿವಿಧ ರಾಜ್ಯಗಳನ್ನು ಗಮನಿಸೋಣ: =ದೆಹಲಿ: 1.26 ಲಕ್ಷ ಕೇಸುಗಳಿದ್ದು, ರೋಗ ಪ್ರಸರಣ ನಿಯಂತ್ರಣಕ್ಕೆ ಬರುತ್ತಿದೆ. ಗುಣಮುಖವಾಗುತ್ತಿರುವ ರೋಗಿಗಳ ಸಂಖ್ಯೆ ಅಧಿಕವಾಗಿದೆ. =ತಮಿಳುನಾಡು: 1.80 ಲಕ್ಷ ಸೋಂಕಿತರಿದ್ದು, ಗುಣಮುಖವಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಿದೆ. =ಗುಜರಾತ್: ಹೊಸ ರೋಗಿಗಳಿಗಿಂತ ಗುಣವಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚು. =ಮಹಾರಾಷ್ಟ್ರ: 3.27 ಲಕ್ಷ ಸೋಂಕಿತರಿದ್ದಾರೆ. ಹೊಸ ಸೋಂಕಿತರ ಸಂಖ್ಯೆ ಜಾಸ್ತಿಯಿದ್ದರೂ ಗುಣಮುಖವಾಗುತ್ತಿರುವವರ ಸಂಖ್ಯೆಯೂ ವೃದ್ಧಿಸುತ್ತಿದೆ.
ಈ ಎಲ್ಲ ರಾಜ್ಯಗಳಲ್ಲಿಯೂ ಕೋವಿಡ್ ಪ್ರಸರಣ ಕರ್ನಾಟಕಕ್ಕಿಂತ ಮೊದಲೇ ವೇಗ ಪಡೆದುಕೊಂಡಿದೆ. ಮೂರು ತಿಂಗಳೊಳಗಾಗಿ ಹೊಸ ರೋಗಿಗಳ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿದು, ರೋಗಿಗಳ ಸಂಖ್ಯೆ ಒಂದೆರಡು ಲಕ್ಷ ದಾಟಿದ ನಂತರ ಪ್ರಸರಣ ದುರ್ಬಲವಾಗುತ್ತಿರುವುದನ್ನು ಕಾಣುತ್ತೇವೆ. ಭಾರತೀಯರ ವಿಶೇಷ ರೋಗನಿರೋಧಕ ಶಕ್ತಿಯೂ ಇದಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಇಂಗ್ಲೆಂಡ್, ಇಟಲಿ, ಸ್ಪೇನ್ ದೇಶದಷ್ಟು ಜನಸಂಖ್ಯೆ ಇದೆ. ಈ ದೇಶಗಳಲ್ಲಿ 3-4 ತಿಂಗಳಲ್ಲಿ ರೋಗ ನಿಯಂತ್ರಣಕ್ಕೆ ಬಂದಿರುವಂತೆಯೇ, ಕರ್ನಾಟಕದಲ್ಲಿ ಹತೋಟಿಗೆ ಬರಲದೆ. ಇದನ್ನು ದೃಢೀಕರಿಸಲು ದೇಶದ ಇತರ ರಾಜ್ಯಗಳಲ್ಲಿಯೂ ವೈರಸ್ ದುರ್ಬಲವಾಗುತ್ತಿರುವುದನ್ನು ಆಧಾರವಾಗಿಟ್ಟುಕೊಳ್ಳಬಹುದು. ಕರ್ನಾಟಕದಲ್ಲಿ ಈಗ ಹೊಸ ಪ್ರಕರಣಗಳು ಹೆಚ್ಚುತ್ತಿವೆ. ಕಾರಣ ಕರೊನಾ ವೈರಸ್ ನಮ್ಮ ರಾಜ್ಯದಲ್ಲಿ ದುರ್ಬಲವಾಗುವ ಮಟ್ಟಕ್ಕೆ ಇನ್ನೂ ತಲುಪಿಲ್ಲ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷ ಮುಟ್ಟುವುದರೊಳಗಾಗಿ ವೈರಸ್ ದುರ್ಬಲವಾಗಬಹುದು.
ಮರಣ ಪ್ರಮಾಣ: ಕೋವಿಡ್ ರೋಗದಿಂದ ಮರಣ ಹೊಂದುತ್ತಿರುವ, ಶೇಕಡವಾರು ಪ್ರಮಾಣ ಕುಸಿಯುತ್ತಿರುವುದು ಕೂಡ ಈ ವೈರಸ್ ದುರ್ಬಲವಾಗುತ್ತಿರುವುದಕ್ಕೆ ಒಂದು ಸಾಕ್ಷಿಯೆಂದು ಪರಿಗಣಿಸಬಹುದು. ಉದಾಹರಣೆಗೆ ಇಂಗ್ಲೆಂಡ್, ಇಟಲಿ, ಸ್ಪೇನ್ ಈ ಎಲ್ಲ ರಾಷ್ಟ್ರಗಳಲ್ಲಿಯೂ ಮೊದಲಿಗೆ ಮರಣ ಪ್ರಮಾಣ ಹೆಚ್ಚಿದ್ದು, ಕ್ರಮೇಣ ಕಡಿಮೆಯಾಗಿದೆ. ನಮ್ಮ ದೇಶದ ಮಹಾರಾಷ್ಟ್ರ, ಗುಜರಾತ್, ದೆಹಲಿಯಲ್ಲಿಯೂ ಈ ಟ್ರೆಂಡ್ ಮುಂದುವರಿದಿರುವುದನ್ನು ಕಾಣುತ್ತೇವೆ. ಅನಾರೋಗ್ಯ ಸಮಸ್ಯೆಯಿದ್ದವರಲ್ಲಿಯೂ (ಕಿಡ್ನಿ, ಹೃದಯ ಸಮಸ್ಯೆಯಿರುವವರು) ಮರಣ ಪ್ರಮಾಣ ತಗ್ಗಿದೆ. ಕರೊನಾ ವೈರಸ್ ತನ್ನ ದೌರ್ಬಲ್ಯ ನಿವಾರಿಸಿಕೊಂಡು ಮನುಷ್ಯರ ಮೇಲೆ ಎರಗಬೇಕಾದರೆ ಇನ್ನೊಂದು ವರ್ಗದ ಪ್ರಾಣಿಯ ದೇಹದೊಳಗೆ ಸೇರಿ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ದಶಕಗಳೇ ಬೇಕು ಎಂದು ಈಗಾಗಲೇ ಸಾಬೀತಾಗಿದೆ. ಉದಾಹರಣೆಗೆ, ಈ ಕರೊನಾ ವೈರಸ್ನ ಹಿಂದಿನ ಸ್ವರೂಪ ಸಾರ್ಸ್ ವೈರಸ್ ಹೊರಗೆ ಬಂದದ್ದು 2002-03ನೇ ಇಸವಿಯಲ್ಲಿ. ನಂತರ ಕೋವಿಡ್ ಬಂದದ್ದು ಹದಿನೇಳು ವರ್ಷಗಳ ಬಳಿಕ. ಈ ಎಲ್ಲ ಮಾಹಿತಿಗಳ ಹಿನ್ನೆಲೆಯಲ್ಲಿ ಕರ್ನಾಟಕದ ಇಂದಿನ ಪರಿಸ್ಥಿತಿಯನ್ನು ಗಮನಿಸುವುದಾದರೆ, ಸರ್ಕಾರ, ಮಾಧ್ಯಮ, ಜನರ ಸಹಕಾರದಿಂದ ವೈರಸ್ನ ತೀವ್ರ ಪ್ರಸರಣಕ್ಕೆ ತಡೆಯುಂಟಾಗಿದೆ. ವೈರಸ್ನ ಪ್ರಸರಣ ಪ್ರಾರಂಭವಾಗಿ 4 ತಿಂಗಳಾಗುತ್ತ ಬಂದಿರುವುದರಿಂದ ಅದು ದುರ್ಬಲವಾಗುತ್ತಿದೆ. ವೈರಸ್ ದುರ್ಬಲವಾಗುತ್ತಿರುವುದರಿಂದ ಹೊಸ ಜನರನ್ನು ಪ್ರವೇಶಿಸುವ ಅದರ ಶಕ್ತಿ ಕುಂದಲಿದ್ದು, ಸದ್ಯದಲ್ಲಿಯೇ ಹೊಸ ರೋಗಿಗಳಿಗಿಂತ ಗುಣಮುಖರಾದವರ ಸಂಖ್ಯೆ ಜಾಸ್ತಿಯಾಗಲಿದೆ. ಈ ಹಿನ್ನೆಲೆಯಲ್ಲಿ ಇನ್ನು 3 ತಿಂಗಳೊಳಗಾಗಿ ಹೊಸ ಸೋಂಕಿತರ ಸಂಖ್ಯೆ ಈಗ ಇಂಗ್ಲೆಂಡಿನಲ್ಲಿರುವಂತೆ, ಕರ್ನಾಟಕದಲ್ಲಿಯೂ ದೈನಂದಿನ 500ಕ್ಕಿಂತ ಕಡಿಮೆ ಆಗಲಿದೆ.
ಸರ್ಕಾರ ಏನು ಮಾಡಬೇಕು?:
(ಲೇಖಕರು ಇನ್ಪ್ಯುಯೆಂಜಾ ವೈರಾಣು ತಜ್ಞರು)