ಭಾರತದ ಕಡಲ ವ್ಯಾಪಾರ ಕ್ರಿಸ್ತ ಪೂರ್ವ 3ನೇ ಶತಮಾನದಿಂದಲೂ ವಿಶ್ವದ ಗಮನ ಸೆಳೆದಿದೆ. ಮೌರ್ಯ ಸಾಮ್ರಾಜ್ಯದ ಅವಧಿಯಲ್ಲಿ ವ್ಯಾಪಾರ ಹಾಗೂ ಹಡಗುಗಳ ನಿರ್ವಹಣೆಗೆ ಪ್ರತ್ಯೇಕ ವಿಭಾಗ ಇತ್ತು. ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿ ಏಷ್ಯಾದಲ್ಲೇ ಬಲಾಢ್ಯ ನೌಕಾಪಡೆ ಕಟ್ಟಿ ಮಧ್ಯಪ್ರಾಚ್ಯ ದೇಶಗಳ ರಾಜರಿಗೆ ನೆರವು ನೀಡಿದ್ದ. 1919ರ ಏ. 5ರಂದು ಭಾರತೀಯ ಕಂಪನಿಯ ಹಡಗು ಮುಂಬೈನಿಂದ ಲಂಡನ್ಗೆ ಪ್ರಯಾಣ ಬೆಳೆಸಿತು. ಇದರ ಸ್ಮರಣೆಗೆ ಪ್ರತಿ ವರ್ಷ ಅಂದು ‘ರಾಷ್ಟ್ರೀಯ ಕಡಲ ದಿನ’ ಆಚರಿಸುವ ಪರಿಪಾಠ 1964ರಲ್ಲಿ ಪ್ರಾರಂಭವಾಯಿತು.
ಭಾರತದ ಕರಾವಳಿ 7,516.6 ಕಿ.ಮೀ. ಉದ್ದವಿದ್ದು, ಡಜನ್ ಸಂಖ್ಯೆಯಷ್ಟೇ ಬೃಹತ್ ಬಂದರುಗಳು ಹಾಗೂ 205 ಸಣ್ಣ ಪೋರ್ಟ್ಗಳಿವೆ. ಕರ್ನಾಟಕ 309.59 ಕಿ.ಮೀ. ಉದ್ದದ ಕರಾವಳಿ ತೀರ ಹೊಂದಿದ್ದು, ಮಂಗಳೂರು ಬಂದರು ಏಕೈಕ ಬೃಹತ್ ಪೋರ್ಟ್ ಎನಿಸಿಕೊಂಡಿದೆ. ಉಳಿದ 13 ಸಣ್ಣ ಬಂದರುಗಳನ್ನು ಇನ್ನಷ್ಟೇ ಅಭಿವೃದ್ಧಿಪಡಿಸಬೇಕಿದೆ. ನಮ್ಮ ಕರಾವಳಿ ಪಶ್ಚಿಮಾಭಿಮುಖವಾಗಿರುವ ಕಾರಣ ಗಲ್ಪ್ ರಾಷ್ಟ್ರಗಳು, ಆಫ್ರಿಕಾ, ಲ್ಯಾಟಿನ್ ಅಮೆರಿಕ ದೇಶಗಳೊಂದಿಗೆ ಸುಲಭವಾಗಿ ವ್ಯಾಪಾರ ಮಾಡಬಹುದಾಗಿದೆ. ಈ ಅಗಾಧ ಸಾಮರ್ಥ್ಯವನ್ನು ಪರಿಗಣಿಸಿ 2019ರಲ್ಲಿ ಲೋಕೋಪಯೋಗಿ ಇಲಾಖೆ ಅಡಿಯಲ್ಲಿದ್ದ ಬಂದರá--ಒಳನಾಡು ಜಲಸಾರಿಗೆಯನ್ನು ವಿಭಜಿಸಿ ಕರ್ನಾಟಕ ಜಲಸಾರಿಗೆ ಮಂಡಳಿ (ಕೆಎಂಡಿ) ರೂಪಿಸಲಾಗಿದೆ. ಇದರ ಮೂಲಕ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಡಿ ಬಂದರು ಅಭಿವೃದ್ಧಿಪಡಿಸಲು ನೀಲಿನಕ್ಷೆ ಸಿದ್ಧಪಡಿಸಿದೆ. ಜತೆಗೆ ಸಾಗರ ಉದ್ಯಮಕ್ಕೆ ಬೇಕಿರುವ ಮೂಲಸೌಕರ್ಯ, ಹಡಗು ನಿರ್ವಣ, ಕ್ರೂಸ್, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಹೊಸ ಕರಡು ನೀತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಸಮುದ್ರದಲ್ಲಿ ಬಂದರು ನಿರ್ಮಾಣ: ಅಂಕೋಲಾ ಬಳಿಯ ಕೇಣಿಯಲ್ಲಿ ಹೊಸ ಬಂದರು ನಿರ್ವಿುಸಲು ಉದ್ದೇಶಿಸಿದ್ದು, ಸಮುದ್ರದ ಜಾಗ ಬಳಸಿ ನಿರ್ವಿುಸುವುದು ಇದರ ವಿಶೇಷ. ಇದಕ್ಕೆ ಜೆಎಸ್ಡಬ್ಲ್ಯು ಕಂಪನಿ 4,600 ಕೋಟಿ ರೂ. ಹೂಡಲಿದೆ. ಆರಂಭದಲ್ಲಿ ವಾರ್ಷಿಕ 30 ದಶಲಕ್ಷ ಟನ್ ಸಾಮರ್ಥ್ಯವಿರಲಿದ್ದು (ಎಂಟಿಪಿಎ), ಭವಿಷ್ಯದಲ್ಲಿ 100 ಎಂಟಿಪಿಎವರೆಗೆ ವಿಸ್ತರಿಸಬಹುದು. ಯೋಜನೆ ವಿನ್ಯಾಸ ತಯಾರಾಗುತ್ತಿದ್ದು, ಒಪ್ಪಿಗೆ ದೊರೆತಲ್ಲಿ ಈ ವರ್ಷಾಂತ್ಯದೊಳಗೆ ಕಾಮಗಾರಿಗೆ ಚಾಲನೆ ಸಿಗಲಿದೆ.
ಕ್ರೂಸ್ ಟೂರಿಸಂ: ಹಡಗಿನಲ್ಲೇ ಹಲವು ದಿನಗಳ ಕಾಲ ವಾಸ್ತವ್ಯ ಹೂಡಿ ವಿವಿಧ ಸ್ಥಳಗಳನ್ನು ಸಂದರ್ಶಿಸುವ ಕ್ರೂಸ್ ಟೂರಿಸಂ ಪಾಶ್ಕಾತ್ಯ ದೇಶಗಳಲ್ಲಿ ಜನಪ್ರಿಯ. ಇಂಥ ಯೋಜನೆ ಉಳ್ಳಾಲ-ಸೋಮೇಶ್ವರ ಭಾಗದಲ್ಲಿ ಖಾಸಗಿ ಸಹಭಾಗಿತ್ವದಡಿ ಕಾರ್ಯರೂಪಕ್ಕೆ ಬರುತ್ತಿದೆ.
ದಶಕದ ಯೋಜನೆಗೆ ಮರುಜೀವ: ಹೊನ್ನಾವರದ ಮಂಕಿ ಬಳಿ 250 ಕೋಟಿ ರೂ. ವೆಚ್ಚದಲ್ಲಿ 5 ಎಂಟಿಪಿಎ ಸಾಮರ್ಥ್ಯದ ಬಹೂಪಯೋಗಿ ಬಂದರು ನಿರ್ವಿುಸಲು ದಶಕದ ಹಿಂದೆ ಒಪ್ಪಿಗೆ ದೊರೆತಿತ್ತು. ಕಾರಣಾಂತರದಿಂದ ಕೈಗೂಡಲಿಲ್ಲ. ಇದೀಗ ಹೊನ್ನಾವರ ಪೋರ್ಟ್ ಲಿ. (ಎಚ್ಪಿಎಲ್) 500 ಕೋಟಿ ರೂ. ಹೂಡಿಕೆಯೊಂದಿಗೆ ಈ ಯೋಜನೆ ಜಾರಿಗೊಳಿಸಲಿದೆ.
ಸಣ್ಣ ಬಂದರುಗಳ ಮರುಬಳಕೆ: ರಾಜ್ಯದ ಕರಾವಳಿಯಲ್ಲಿರುವ 10 ಸಣ್ಣ ಬಂದರುಗಳನ್ನು ಮೀನುಗಾರಿಕೆಗಾಗಿ ಮರುಬಳಕೆ ಮಾಡಿಕೊಳ್ಳಲು ಕರ್ನಾಟಕ ಮೇರಿಟೈಮ್ ಬೋರ್ಡ್ (ಕೆಎಂಬಿ) ಮುಂದಾಗಿದೆ. ಆರಂಭದಲ್ಲಿ ಮಜಾಳಿ- ಕುಳಾಯಿ ಬಳಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ.
ವಾಟರ್ ಮೆಟ್ರೋ: ಕೇರಳದ ಕೊಚ್ಚಿನ್ನಲ್ಲಿ ದೇಶದ ಮೊದಲ ವಾಟರ್ ಮೆಟ್ರೋ ಜಾರಿಯಾಗಿದೆ. ಇದರ ಬೆನ್ನಲ್ಲೇ ಸಾಗರ ಮಾಲಾ ಪ್ರಾಜೆಕ್ಟ್ ಅಡಿ, ನೇತ್ರಾವತಿ-ಗುರುಪುರ ನದಿ ಸೇರುವ ಬಳಿ 12 ಕಿ.ಮೀ. ಉದ್ದದ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆದಿದೆ. ಇದು ಕರ್ನಾಟಕದ ಮೊದಲ ವಾಟರ್ ಮೆಟ್ರೋ ಎನಿಸಿಕೊಳ್ಳಲಿದೆ.
ಮ್ಯೂಸಿಯಂ ಸ್ಥಾಪನೆಗೆ ಚಿಂತನೆ: ಕರ್ನಾಟಕ ಕರಾವಳಿಗೆ ಸಂಬಂಧಿಸಿದಂತೆ ಬಂದರು, ಮೀನುಗಾರಿಕೆ, ಪ್ರವಾಸೋದ್ಯಮ, ಬೀಚ್ಗಳು, ಕರಾವಳಿ ಭಾಗದ ಉಡುಗೆ-ತೊಡುಗೆ, ಆಹಾರ ತಿನಿಸು, ಸಂಪ್ರದಾಯ, ಆಚರಣೆ, ಇತಿಹಾಸ ಸೇರಿದಂತೆ ಸಮಗ್ರ ಮಾಹಿತಿ ಒದಗಿಸುವ ಪಾರಂಪರಿಕ ಮ್ಯೂಸಿಯಂ ಸ್ಥಾಪನೆಗೆ ಕೆಎಂಡಿ ಚಿಂತನೆ ನಡೆಸಿದೆ.
ಹಡಗು ನಿರ್ವಣ: ಕರ್ನಾಟಕದಲ್ಲಿ ಹಡಗು ನಿರ್ಮಾಣ ಚಟುವಟಿಕೆ ಕೈಗೆತ್ತಿಕೊಳ್ಳಲು ಇಂಜಿನಿಯರಿಂಗ್ ವಿಭಾಗದ ನೆರವು ಬೇಕಿದ್ದು, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆ ಘಟಕಗಳನ್ನು ಬಳಸಿಕೊಳ್ಳಬಹುದಾಗಿದೆ. ಇದನ್ನಾಧರಿಸಿ ಚೌಗಲೆ ಕಂಪನಿಗೆ 50 ಎಕರೆ ಜಮೀನು ನೀಡಿದ್ದು, ಶೀಘ್ರದಲ್ಲೇ ಹಡಗು ನಿರ್ಮಾಣ ಕೆಲಸಕ್ಕೆ ಚಾಲನೆ ಸಿಗಲಿದೆ.
| ಜಯರಾಮ್ ರಾಯಪುರ ಸಿಇಒ, ಕರ್ನಾಟಕ ಜಲಸಾರಿಗೆ ಮಂಡಳಿ