ಅದೊಂದು ಪುಟ್ಟ ಪಟ್ಟಣ. ಅಲ್ಲಿ ರಂಗಪ್ಪ ಎಂಬ ತುಪ್ಪದ ವ್ಯಾಪಾರಿ. ತುಪ್ಪದ ವ್ಯಾಪಾರಿಗೆ ಒಂದು ದಿನ ದುರಾಲೋಚನೆ ಬಂದಿತು. ಇಷ್ಟು ದಿನಗಳಿಂದ ವ್ಯಾಪಾರ ಮಾಡುತ್ತಿದ್ದರೂ ತನ್ನ ಸ್ಥಿತಿಗತಿ ಏನೂ ಸುಧಾರಿಸಿಲ್ಲ.
ಅನೇಕರು ಕಲಬೆರಕೆ ಮಾಡಿ ಬೇಗನೇ ಸಿರಿವಂತರಾಗುತ್ತಾರೆ. ಅದ್ದೂರಿಯಾಗಿ ಬದುಕುತ್ತಾರೆ. ತಾನೂ ಏಕೆ ಹಾಗೆ ಮಾಡಬಾರದು ಎಂದು ಯೋಚಿಸಿ ಕಲಬೆರಕೆ ತುಪ್ಪವನ್ನು ಮಾರಲು ಪ್ರಾರಂಭಿಸಿದ. ಸ್ವಲ್ಪ ದಿನಗಳಲ್ಲೇ ಈತನ ಲಾಭ ಹೆಚ್ಚುತ್ತ ಹೋಯಿತು. ಸಂಪಾದನೆ ಹೆಚ್ಚಾಗುತ್ತಿದ್ದಂತೆ ದುರಾಸೆಗಳು ಅದರ ಹಿಂದೆಯೇ ಬರುತ್ತವೆ. ಮನೆಯಲ್ಲಿ ಐಷರಾಮೀ ವಸ್ತುಗಳು ಬಂದವು. ಹೆಂಡತಿಯ ಮೈಮೇಲೆ ಒಡವೆಗಳು ಹೊಳೆಯತೊಡಗಿದವು.
ಮಗನ ಕೈಗೆ ಸೈಕಲ್ ಬದಲು ಮೋಟಾರ್ಬೈಕು ಬಂದಿತು. ಆದರೆ, ಆ ವ್ಯಾಪಾರಿಗೆ ಪಾಪಪ್ರಜ್ಞೆ ಕಾಡಲೇ ಇಲ್ಲ. ತಾನು ಮಾಡುತ್ತಿರುವುದು ತಪು್ಪ ಎಂದೇನಿಸಲಿಲ್ಲ. ಬದಲಿಗೆ, ತುಂಬ ಜನ ಕಲಬೆರಕೆ ಮಾಡಿ ವ್ಯಾಪಾರ ಮಾಡುತ್ತಾರೆ, ತಾನು ಮಾಡುತ್ತಿರುವುದರಲ್ಲಿ ಪ್ರಮಾದವೇನಿಲ್ಲ ಎಂದು ತನಗೇ ತಾನೇ ಸಮರ್ಥನೆ ಕೊಟ್ಟುಕೊಳ್ಳುತ್ತಿದ್ದ.
ಈತನ ದಿಢೀರ್ ‘ಅಭಿವೃದ್ಧಿ’ ಕಂಡು ಉಳಿದ ವ್ಯಾಪಾರಿಗಳಿಗೆ ಆಶ್ಚರ್ಯವಾಯಿತು. ರಂಗಪ್ಪನ ಮೇಲೆ ಅಸಮಾಧಾನವಿರುವ ಇಬ್ಬರು ಈತನ ಕಲಬೆರಕೆಯ ರಹಸ್ಯವನ್ನು ಅಧಿಕಾರಿಗಳಿಗೆ ತಿಳಿಸಿದರು. ಅಧಿಕಾರಿಗಳು ರಂಗಪ್ಪನನ್ನು ನ್ಯಾಯಧೀಶರ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶರ ಆದೇಶದಂತೆ ಆತನಲ್ಲಿರುವ ತುಪ್ಪವನ್ನು ಪರೀಕ್ಷಿಸಿದಾಗ ಅದು ಕಲಬೆರಕೆಯಿಂದ ಕೂಡಿದ್ದೆಂದು ಸಾಬೀತಾಯಿತು.
ಅಲ್ಲಿ ವಾದಿ, ಪ್ರತಿವಾದಿಗಳಾರೂ ಇರಲಿಲ್ಲ. ನ್ಯಾಯಾಧೀಶರು ತೀರ್ಪನ್ನು ನೀಡುತ್ತ, ವ್ಯಾಪಾರಿಗೆ ಮೂರು ಆಯ್ಕೆಗಳನ್ನು ನೀಡಿದರು. ಒಂದು, ಹತ್ತುಸಾವಿರ ರೂಪಾಯಿ ದಂಡ ಪಾವತಿಸುವುದು, ಎರಡನೆಯದು, ಇಪ್ಪತ್ತು ಛಡಿಏಟು, ಮೂರನೆಯದು, ಒಂದುಲೋಟ ತುಪ್ಪವನ್ನು ಕುಡಿಯುವುದು. ಇದರಲ್ಲಿ ಯಾವುದಾದರೊಂದು ಶಿಕ್ಷೆಯನ್ನು ಆಯ್ದುಕೊಳ್ಳಲು ರಂಗಪ್ಪನಿಗೆ ಅವಕಾಶ ನೀಡಿದರು. ಲೋಭಿ ಕೆಲ ಹೊತ್ತು ಯೋಚಿಸಿದ, ಹತ್ತು ಸಾವಿರ ರೂ.ಗಳನ್ನು ಏಕೆ ಕಳೆದುಕೊಳ್ಳಬೇಕು? ಮತ್ತೆ ಛಡಿಏಟು ಸಹಿಸಲು ಸಾಧ್ಯವಿಲ್ಲ. ಹೇಗಾದರೂ ಮಾಡಿ ತುಪ್ಪವನ್ನೇ ಕುಡಿದರೆ ಸರಿ ಎಂದು ಅಧಿಕಾರಿಗಳು ನೀಡಿದ ತನ್ನದೇ ಕಲಬೆರಕೆ ತುಪ್ಪವನ್ನು ಕುಡಿಯಲು ಪ್ರಯತ್ನಿಸಿದ.
ಆಗದೆ ವಾಂತಿ ಮಾಡಿ ಬಳಲಿ, ತಾನು ಛಡಿಏಟು ತಿನ್ನುತ್ತೇನೆಂದ. ಸರಿ, ಐದಾರು ಛಡಿಏಟು ಬೀಳುತ್ತಿದ್ದಂತೆ ಸುಸ್ತಾಗಿ ಮೂಳೆ ಮುರಿದಂತಾದ ಅನುಭವವಾಗಿ ಏಟನ್ನು ನಿಲ್ಲಿಸಲು ಹೇಳಿದ. ತೆಪ್ಪಗೆ ಹತ್ತು ಸಾವಿರ ರೂಪಾಯಿ ದಂಡವನ್ನು ಪಾವತಿಸಿದ.
ನೆರೆದವರೆಲ್ಲರೂ ಅಂದುಕೊಂಡರು, ಈತ ಮೊದಲೇ ದಂಡ ಪಾವತಿಸಿದ್ದರೆ ಛಡಿಏಟೂ ತಪ್ಪುತ್ತಿತ್ತು, ವಾಂತಿಯ ಹಿಂಸೆಯೂ ತಪ್ಪುತ್ತಿತ್ತು ಎಂದು. ಆದರೆ ಪ್ರಾರಬ್ಧಕರ್ಮಗಳನ್ನು ಅನುಭವಿಸಲೇಬೇಕಲ್ಲವೇ? ವಿಧಿನಿಯಮಗಳನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಇದು ಅಂದು ಮಾತ್ರವಲ್ಲ, ಇಂದೂ ಸತ್ಯ.
ಅನ್ಯಾಯದಿಂದ, ಮೋಸದಿಂದ ಗಳಿಸಿದ ಎಲ್ಲವನ್ನೂ ಕಕ್ಕಲೇಬೇಕು. ಹಿಂಸೆಯನ್ನು ಅನುಭವಿಸಲೇಬೇಕು. ಆದ್ದರಿಂದ ಮಾನವನು ದುರಾಸೆಯಿಂದ ದೂರ ಉಳಿದರೆ, ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡರೆ ತೃಪ್ತಿಯಿಂದ ಬದುಕಬಲ್ಲ. ಲೋಕಮಾನ್ಯ ನಾಗಬಲ್ಲ, ಸಾರ್ಥಕ ಜೀವನ ಆತನದಾದೀತು, ಅಂತಹ ಬದುಕಿಗೆ ಪ್ರಯತ್ನಿಸೋಣ.
(ಲೇಖಕರು ನಿವೃತ್ತ ಉಪನ್ಯಾಸಕ, ಗಮಕಿ)