word-discovery 
ಕಟ್ಟುವೇವು ನಾವು ಕನ್ನಡ ಪದವೊಂದನು – ಶ್ರೀವತ್ಸ ಜೋಷಿ

ಪದಾನ್ವೇಷಣೆಗೆ ಬುದ್ಧಿಯಷ್ಟೇ ಭಾವವೂ ಬೇಕು

(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)

-ಸೀಮೆಅಂಟು ದೃಷ್ಟಾಂತವನ್ನು ಉಲ್ಲೇಖಿಸಿದ್ದು ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ಅಂಕಣದ ನಿಯತ ಓದುಗ ವಿದ್ಯಾಶಂಕರ ಶರ್ಮ ಇದನ್ನೋದಿ, ‘‘ನನಗೊಂದು ಬಾಲ್ಯದ ನೆನಪು ಬಂತು. ನಮ್ಮ ಅಜ್ಜನವರು ಬಹಳ ಹಾಸ್ಯಪ್ರಜ್ಞೆ ಉಳ್ಳವರಾಗಿದ್ದರು.
ಇಂಗ್ಲಿಷ್ ಬಳಕೆಯ ಬಗ್ಗೆ ಗೇಲಿ ಮಾಡುತ್ತಿದ್ದರು. ನಾವೆಲ್ಲ ಪ್ಯಾಂಟ್ ಹಾಕುವುದನ್ನು ಅವರು ಗೇಲಿ ಮಾಡುತ್ತ ‘ಅಂಡೆ ಚಡ್ಡಿ ಹಾಕಿಕೊಂಡು ಹೊರಟರು’ ಎನ್ನುತ್ತಿದ್ದರು. ಈಗ ಯೋಚಿಸಿದರೆ ಅವರ ಸರಳ ತರ್ಕ ಸರಿ ಇದೆಯಲ್ಲವೇ ಅನಿಸುತ್ತದೆ. ಅಂಡೆ ಅಂದರೆ ಕೊಳವೆಯಂತೆ, ಪ್ಯಾಂಟ್​ನ ಆಕಾರ ನೋಡಿ ಅವರು ಈ ಶಬ್ದವನ್ನು ಹೇಳಿದ್ದರು! ಸರಳವಾದ ಚಿಂತನೆಯೇ ಹೆಚ್ಚು ಪರಿಣಾಮಕಾರಿ’’ ಎಂದು ಪ್ರತಿಕ್ರಿಯೆ ಬರೆದಿದ್ದಾರೆ. ಈ ತರ್ಕವನ್ನೇ ಪುಷ್ಟೀಕರಿಸುವ ರೀತಿಯಲ್ಲಿ Bulldozer ಪದಕ್ಕೆ ಪರ್ಯಾಯ ಸೂಚಿಸುತ್ತ ಬಂದಿರುವ ಕೆಲವು ಪ್ರವೇಶಿಕೆಗಳನ್ನು ಗಮನಿಸಬಹುದು:
ಮೈಸೂರಿನಿಂದ ಪಿ.ಜೆ.ರಾಘವೇಂದ್ರ ಅವರು ಸೂಚಿಸಿರುವ ಪದ ‘ಮಾರಿ ನೇಗಿಲು’. ಇದನ್ನವರು ಮೈಸೂರಿನವರೇ ಆದ ಇನ್ನೊಬ್ಬ ಹಿರಿಯ ಕನ್ನಡಿಗ, ಸೋವಿಯತ್ ರಷ್ಯಾದಲ್ಲಿ ಕೆಲ ಕಾಲ ವಾಸವಾಗಿದ್ದು ರಷ್ಯನ್ ಭಾಷೆಯ ಕಲಿಕೆ, ಹಲವಾರು ರಷ್ಯನ್ ಕೃತಿಗಳ ಕನ್ನಡ ಅನುವಾದ, ರೇಡಿಯೊ ಮಾಸ್ಕೊದಲ್ಲಿ ಕನ್ನಡ ಕಾರ್ಯಕ್ರಮ ನಿರ್ವಹಣೆ ಮಾಡಿರುವ ವಿದ್ವಾಂಸ ಪೊ›. ಹರಿಶಂಕರ್ ಎಚ್.ಎಸ್ ಅವರ ಚಿಂತನೆಯ ಮೂಸೆಯಿಂದ ಮೂಡಿದ್ದೆಂದು ತಿಳಿಸಿದ್ದಾರೆ; ಭಾಷೆ ಮತ್ತು ಪದಬಳಕೆಗೆ ಸಂಬಂಧಿಸಿದಂತೆ ಫೇಸ್​ಬುಕ್​ನ ಚರ್ಚೆಯೊಂದರಲ್ಲಿ ಹರಿಶಂಕರ್ ಬರೆದಿದ್ದ ಟಿಪ್ಪಣಿಯನ್ನೂ ಲಗತ್ತಿಸಿದ್ದಾರೆ. ಅದು ಹೀಗಿದೆ: ‘‘ಶಬ್ದಗಳೆಲ್ಲ ಒಂದೇ ದಿನ ಸೃಷ್ಟಿಗೊಂಡವಲ್ಲ. ಅವು ಜನಮಾನಸದಲ್ಲಿ ರೂಪುಗೊಂಡು ಅವರಲ್ಲೇ ಟಂಕಿತಗೊಂಡು ಬಳಕೆಗೆ ಬರುವುದೇ ಜಾಸ್ತಿ. ನನಗೆ ತಿಳಿದ ಒಂದು ಉದಾಹರಣೆ ಹೀಗಿದೆ. ಹಳ್ಳಿಯ ಜನರು ಪೂಜಿಸುವ ಅನೇಕ ದೇವದೇವತೆಗಳಲ್ಲಿ ಮಾರಿ ದೇವತೆಯೂ ಒಂದು. ಮಾರಿಯು ಜನರನ್ನು ರಕ್ಷಿಸುವವಳೂ ಹೌದು, ಶಿಕ್ಷಿಸುವವಳೂ ಹೌದು. ಆಕೆಯದು ದೈತ್ಯಾಕಾರ. ಆ ಅಂಶ ಹಳ್ಳಿಗರಿಗೆ ಗೊತ್ತು. ಹಳ್ಳಿಗಳಲ್ಲಿ ಮೊದಲ ಬಾರಿಗೆ ಬುಲ್ಡೋಜರ್, ಜೆಸಿಬಿಗಳಂಥ ಬೃಹತ್ ಯಂತ್ರಗಳು ಕಾಣಿಸಿಕೊಂಡಾಗ ಹಳ್ಳಿಗರು ಅವುಗಳಿಂದ ಬೆರಗಾದದ್ದು, ಕೆಲವೊಮ್ಮೆ ಭೀತರಾದದ್ದೂ ಇದೆ. ಅವರಿಗೆ ತಾವು ಹೊಲದಲ್ಲಿ ಉಳುವ ನೇಗಿಲ ಪರಿಚಯ ಇದೆ. ಆದರೆ ಈಗ ನೋಡುತ್ತಿರುವುದು ಬೃಹದಾಕಾರದ್ದು. ಹಾಗೆ ಜೆಸಿಬಿ ಬುಲ್ಡೋಜರ್ ಯಂತ್ರಗಳು ಇವರ ಬಾಯಲ್ಲಿ ‘ಮಾರಿ ನೇಗಿಲು’ ಆಗುತ್ತದೆ’’.
ಬೆಂಗಳೂರಿನ ಜಿ.ಎಚ್ ಸಂಕಪ್ಪ ಅವರು ಸೂಚಿಸಿರುವ ‘ಮಾರಿ ಹಲುಬೆ’ ಸಹ ಇದೇ ಹಿನ್ನೆಲೆಯದು. ಹಲುಬೆ(ಹಲುವೆ, ಹಲಿವೆ) ಅಂದರೆ ನೆಲವನ್ನು ಉತ್ತ ಮೇಲೆ ಅದನ್ನು ಹಸನು ಮಾಡುವುದಕ್ಕೆ ಉಪಯೋಗಿಸುವ ಸಾಧನ. ಅದಕ್ಕೆ ಹೋಲಿಸಿದರೆ ಬುಲ್ಡೋಜರ್​ನದು ಮಾರಿಯ ಅವತಾರವೇ. ಸಾಗರದಿಂದ ಬೊ.ನಾ ಕೃಷ್ಣಮೂರ್ತಿ ಅವರು ‘ಆನೆ ಯಂತ್ರ’ ಎಂಬ ತಮ್ಮ ಆಯ್ಕೆಯ ಹಿನ್ನೆಲೆಯನ್ನು ಹೀಗೆ ವಿವರಿಸಿದ್ದಾರೆ: ‘‘ಸುಮಾರು ಮೂವತ್ತು ವರ್ಷಗಳ ಹಿಂದೆ, ಇನ್ನೂ ಮೂರು ವರ್ಷ ಕೂಡ ತುಂಬಿರದ ನನ್ನ ಮಗ ಮೊದಲ ಬಾರಿ ಒಂದು ಬುಲ್ಡೋಜರ್ ಯಂತ್ರವನ್ನು ನೋಡಿ ಕುತೂಹಲದಿಂದ ‘ಅಪ್ಪಾ! ಅದೆಂಥದು?’ ಎಂದು ಕೇಳಿದ್ದನು. ಅವನಿಗೆ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಹಾಗೂ ನೆನಪಿನಲ್ಲಿ ಇಟ್ಟುಕೊಳ್ಳಲು ಅನುಕೂಲವಾಗಲಿ ಎಂದು ಆ ಕ್ಷಣಕ್ಕೆ ನನಗೆ ತೋರಿದ ಹೆಸರು ‘ಆನೆ ಯಂತ್ರ’. ಮುಂದೆ ಅವನಿಗೆ Bulldozer ಎಂಬ ಹೆಸರಿನ ಪರಿಚಯ ಆಗುವವರೆಗೂ ಅವನು ಅದನ್ನು ಆನೆ ಯಂತ್ರ ಎಂದೇ ಕರೆಯುತ್ತಿದ್ದನು. ವಾಸ್ತವದಲ್ಲಿ ಬುಲ್ಡೋಜರ್ ಮಾಡುವ ಎಲ್ಲ ಕೆಲಸಗಳನ್ನೂ- ಎತ್ತುವುದು, ತಳ್ಳುವುದು, ಒಡೆಯುವುದು, ಎಳೆಯುವುದು, ಬೀಳಿಸುವುದು, ಹಾಗೆಯೇ ಗುದ್ದಲಿ, ಹಾರೆಗಳಂತಹ ಸಾಧನಗಳನ್ನು ತನ್ನ ಸೊಂಡಿಲಲ್ಲಿ ಹಿಡಿದು ತೋಡುವುದನ್ನು ಕಲಿಸಿದರೆ ಆ ಕೆಲಸವನ್ನೂ ಸಮರ್ಥವಾಗಿ ಮಾಡಬಲ್ಲ ಪ್ರಾಣಿ ಆನೆ. ಆನೆಯಂತೆಯೇ ಗಾತ್ರದಲ್ಲಿ ದೊಡ್ಡದಿರುವ, ಅಷ್ಟೇ ಬಲಶಾಲಿಯಾಗಿರುವ ಕಾರಣವೇ, ನನಗೆ ಬುಲ್ಡೋಜರ್ ಆನೆಯ ಹೋಲಿಕೆಯ ಯಂತ್ರವಾಗಿ ಕಂಡಿರಬಹುದು. ನಿಜವಾಗಿ ಈ ಯಂತ್ರಕ್ಕೆ ಕನ್ನಡದಲ್ಲಿ ಆನೆಗೆ ಸಲ್ಲುವ ಗೌರವವೇ ಸಲ್ಲಬೇಕು’’.
ಇಂಗ್ಲಿಷ್​ನಲ್ಲಿ Bulldozer ಪದಮೂಲವೂ ಕುತೂಹಲಕಾರಿಯೇ ಆಗಿದೆ. ಅಮೆರಿಕದಲ್ಲಿ 19ನೇ ಶತಮಾನದ ಕೊನೆಯಲ್ಲಿ ಇದು who intimidates others by threats or violence ಅಂದರೆ ದಬ್ಬಾಳಿಕೆ ನಡೆಸುವವನು ಎಂಬ ಅರ್ಥದಲ್ಲಿ ಹುಟ್ಟಿಕೊಂಡಿದ್ದು. ವಿಶೇಷವಾಗಿ 1876ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಗಳ ಹಣಾಹಣಿ ತೀವ್ರವಾಗಿದ್ದಾಗ, ಕಪ್ಪು ಜನಾಂಗದ ಮತದಾರರನ್ನು ದನಕ್ಕೆ ಹೊಡೆದಂತೆ ಹೊಡೆದು ಬಲಾತ್ಕರಿಸುವವರೆಗೆ ಪರಿಸ್ಥಿತಿ ಹದಗೆಟ್ಟಿದ್ದಾಗ, ಆ ರೀತಿ ಬೆದರಿಸುವುದನ್ನು bulldosing ಎನ್ನುತ್ತಿದ್ದದ್ದು. ಅಷ್ಟೆಲ್ಲ ಹೊಡಿ-ಬಡಿ ದಬ್ಬಾಳಿಕೆ ಆದಮೇಲೆ ಸಂಸ್ಥಾನವಾರು ಪ್ರಾತಿನಿಧಿಕ ಮತಗಣನೆ ಮುಗಿದು ಚುನಾವಣಾ ಫಲಿತಾಂಶ ಪ್ರಕಟವಾದಾಗ ರಿಪಬ್ಲಿಕನ್ ಪಕ್ಷದ ರುದರ್​ಫೋರ್ಡ್ ಹೇಯ್ಸ್​ 185 ಮತ್ತು ಡೆಮೊಕ್ರಟಿಕ್ ಪಕ್ಷದ ಸ್ಯಾಮ್ವೆಲ್ ಟಿಲ್ಡನ್​ಗೆ 184 ಮತಗಳು ಬಂದಿದ್ದವು.
ವಿಪರ್ಯಾಸವೆಂದರೆ ವ್ಯಕ್ತಿಗತ ಮತಗಳ ಲೆಕ್ಕದಲ್ಲಿ ಸ್ಯಾಮ್ವೆಲ್ ಟಿಲ್ಡನ್ ಸುಮಾರು ಒಂದೂವರೆ ಲಕ್ಷ ಮತಗಳಿಂದ ಮುಂದಿದ್ದರು! ಅಷ್ಟೊಂದು ತುರುಸಿನ ಸ್ಪರ್ಧೆ ಇತ್ತು. ಕೊನೆಗೂ ಅಮೆರಿಕದ ವಿಚಿತ್ರ ಚುನಾವಣಾ ನಿಯಮಗಳಂತೆ ರುದರ್​ಫೋರ್ಡ್ ಹೇಯ್್ಸ ರಾಷ್ಟ್ರಾಧ್ಯಕ್ಷನೆಂದು ಆಯ್ಕೆಯಾದರು. ಅಂದಹಾಗೆ Bulldozer ಪದದ ಈಗಿರುವ ಅರ್ಥ "an engine-powered ground-clearing caterpillar tractor'' ಬಂದದ್ದು 1930ರಿಂದ ಈಚೆಗಷ್ಟೇ. ಹೀಗೆ, ಸಾಂಕೇತಿಕವಾಗಿ ಗೂಳಿಯನ್ನು ತರುವುದಾದರೆ, ನುಗ್ಗುವ ಗೂಳಿ ಎಂಬರ್ಥದಲ್ಲಿ ‘ನುಗ್ಗೂಳಿ’ (ಸು.ನಾಗರಾಜ), ‘ಗೂಳಿದುಂಡಿ’ (ಯಶೋದಾ ಎಂ ಗೋಪಿ), ‘ಗೂಳಿಯಂತ್ರ’ (ರೇಖಾ ರಾಮಕೃಷ್ಣ, ಅಂಜನಾ ತುಮಕೂರು, ಮೋಹನದಾಸ ಕೊಣನೂರು), ‘ಗೂಳಿಗೋರುಗ’ (ವರದರಾಜ ಶೆಟ್ಟಿ) ಚೆನ್ನಾಗಿವೆ. ಪಂಚತಂತ್ರ ಕಥೆಗಳಲ್ಲಿ ಬರುವ ನರಿಯನ್ನು ನೆನಪಿಸುವ ‘ದಮನಕ’ (ಶ್ರೀರಾಂ ಬೆಂಗಳೂರು) ಸಹ ಚೆನ್ನಾಗಿದೆ.
ಕಳೆದ ಸಲ ಕೇಳಿದ್ದ ಎರಡನೆಯ ಪದ Disclaimer ಉತ್ತರದಾಯಿತ್ವದಿಂದ ಪೂರ್ಣವಾಗಿ ತಪ್ಪಿಸಿಕೊಳ್ಳುವುದು ಅಲ್ಲವಾದರೂ ತನ್ನ ಹೊಣೆಯ ಇತಿಮಿತಿಯನ್ನು ಮೊದಲಿಗೇ ತಿಳಿಸಿಬಿಡುವ ಹೇಳಿಕೆ ಎಂಬ ವಿವರಣೆಯನ್ನೂ ಕೊಡಲಾಗಿತ್ತು. ಆಡಿದ ಮಾತಿನಿಂದಾಗಲೀ ಬರೆದಿದ್ದರಿಂದಾಗಲೀ ಯಾರಾದರೂ ತಕರಾರೆತ್ತದಂತೆ ದಾವೆ ಹೂಡದಂತೆ ಮುಂಜಾಗರೂಕತೆಯ ಕ್ರಮವಾಗಿ ಆರಂಭದಲ್ಲೊಂದು Disclaimer. ದಾಖಲಿಸುವುದು. ಇದಕ್ಕೆ ಗರಿಷ್ಠ ಸಂಖ್ಯೆಯಲ್ಲಿ ಬಂದಿರುವ ಪ್ರವೇಶಿಕೆಗಳು (ಶ್ರೀಕಾಂತ ಭಟ್, ಶ್ವೇತಾ ನಂದಿ, ಚಂಪಾವತಿ ಜೋಶಿ, ವಿರೂಪಾಕ್ಷಪ್ಪ ಶಾಂತಗೇರಿ, ನಟರಾಜು ಬೆಂಗಳೂರು, ಶ್ರೀಕಾಂತ ಗೋಡಖಿಂಡಿ, ಮಧುಕರ ಸೊಪ್ಪಿನ, ಲಕ್ಷ್ಮಣ ರೆಡ್ಡಿ, ಮೀನಾಕ್ಷಿ ಟಕ್ಕಳಕಿ, ವೀಣಾ ಹಂಪಿಹೊಳಿ, ಎನ್.ಎಸ್.ಭುಜಂಗರಾವ್, ಸುವರ್ಣಾ ಕೌಲ್ಗೀಕರ್, ಉಮಾ ಪ್ರಭು, ಅಂಜಲಿ ಬರ್ವೆ, ವನಿತಾ ಸಿದ್ಧಾಪುರ, ಚಂದ್ರಶೇಖರ ಪೂಜಾರಿ, ಮೇಘಾ ಪೂಜಾರಿ, ಕೃಷ್ಣ ಎಸ್.ಕುಲಕರ್ಣಿ, ಭವಾನಿ ಜೋಶಿ, ಮಂಜುನಾಥ ಡಿ.ಎಸ್, ಯಶವಂತ ಜವಳಿಕೆಲ್ಲೂರ ಮುಂತಾದವರು) ‘ಹಕ್ಕು ನಿರಾಕರಣೆ’ ಎಂಬ ಪದವನ್ನು ಸೂಚಿಸಿವೆ.
‘ಹೊಣೆ ರಾಹಿತ್ಯ’ (ಎನ್.ಆರ್.ರಮೇಶ್, ನಾಗೇಶ ಫಾಟಕ್) ಸಹ ಅದೇ ಅರ್ಥವನ್ನು ಕೊಡುತ್ತದೆ. ಆದರೂ ಒಟ್ಟಾರೆಯಾಗಿ ಈ ರೀತಿ ಕನ್ನಡ-ಸಂಸ್ಕೃತ ಪದಗಳ ಕಸಿ ಕಟ್ಟುವುದು ಆದರ್ಶ ಪದರಚನಾಕ್ರಮ ಎನಿಸದು. ಭಾಷಾತಜ್ಞರು, ವೈಯಾಕರಣಿಗಳು ಇಂಥವನ್ನು ಸುಲಭವಾಗಿ ಒಪ್ಪಲಾರರು. ಅದಕ್ಕಿಂತ, ‘ನಿರ್ಬಾಧ್ಯತೆ’ (ಡಾ.ಗೋವಿಂದ ಹೆಗಡೆ, ಡಾ.ಕಿರಣ ಪೇಟಕರ) ಪದರಚನೆ ದೃಷ್ಟಿಯಿಂದಲೂ, ಅರ್ಥಪೂರ್ಣತೆ ದೃಷ್ಟಿಯಿಂದಲೂ ಸೂಕ್ತವೆನಿಸುತ್ತದೆ. ಕನ್ನಡವಷ್ಟೇ ಅಲ್ಲದೆ ಬೇರೆ ಭಾರತೀಯ ಭಾಷೆಗಳಲ್ಲಿ ಬಳಸಲಿಕ್ಕೂ ಅನುಕೂಲಕರವಾಗಿ ಇದೆ. ‘ಅಲ್ಲಗಳೆತ’ ಎಂಬ ಅಚ್ಚಕನ್ನಡ ಪದ ಸೂಚಿಸುತ್ತ ಸುಮಾರಷ್ಟು ಪ್ರವೇಶಿಕೆಗಳು (ರಾಮಚಂದ್ರ ಐ.ಎಂ, ಕಾಡೇಶ ವಿ.ಬಿ, ಸಿದ್ದನಗೌಡ ಮುದಿಗೌಡ್ರ, ಭ.ನಿಂ ಗೋಪಿನಾಥ್, ಸುಧೀರ ಎಸ್.ಎನ್, ಭಾಗ್ಯಶ್ರೀ ಕುಲಕರ್ಣಿ, ಡಾ.ದಯಾನಂದ ಭಟ್ಟ, ನರೇಂದ್ರನಾಥ ಎಚ್.ಎಂ ಮತ್ತಿತರರು) ಬಂದಿವೆಯಾದರೂ ಅದು ಇಂಗ್ಲಿಷ್​ನ Denial ಎಂಬ ಅರ್ಥಕ್ಕೆ ಹೆಚ್ಚು ಹೊಂದುತ್ತದೆ.
Disclaimer. ಉದ್ದೇಶ ಅಲ್ಲಿ ಬರೆದ ವಿಷಯವನ್ನೇ ಅಲ್ಲಗಳೆಯುವುದಲ್ಲ; ಬರೆದ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಬಾಧ್ಯತೆಯನ್ನಷ್ಟೇ ಅಲ್ಲಗಳೆಯುವುದು ಅಥವಾ ಸೀಮಿತಗೊಳಿಸುವುದು. ಆ ದೃಷ್ಟಿಯಿಂದ ‘ಮಿತಿಜಾಗೃತಿ’ (ಜಿ. ಸುಬ್ರಹ್ಮಣ್ಯ), ‘ಮಿತಿಯರಿಕೆ’ (ಪುಷ್ಪಲತ ಬೆಂಗಳೂರು), ‘ಬಾಧ್ಯತಾಮಿತಿ’ (ಗಿರೀಶ ಕೆ.ಎಸ್) ಹೆಚ್ಚು ಸಮಂಜಸ ಎನಿಸಬಲ್ಲವು. ‘ಅಸ್ವೀಕರಣ’ (ಡಾ.ವೇಣುಗೋಪಾಲ್, ವಾಸವಿ ಗುಡೂರ), ‘ಸ್ವತ್ವತ್ಯಾಗ’ (ಪ್ರಭುಪ್ರಸಾದ ನಡುತೋಟ) ಸಹ ಚಿಂತನಯೋಗ್ಯವೇ ಆಗಿವೆ.

ರಾಮಚಂದ್ರ. ‘ಶುಚಿಕಾರಕ’ ಎಂದು ಜಿ.ಕೆ ಲಕ್ಷ್ಮೀನರಸಿಂಹಯ್ಯ, ಶ್ರೀನಿವಾಸ ಮೂಡೆತ್ತಾಯ, ಭ.ನಿಂ. ಗೋಪಿನಾಥ್, ಡಾ.ದಯಾನಂದ ಭಟ್ಟ ಮತ್ತಿತರರ ಆಯ್ಕೆ. ವ್ಯಾಕರಣಬದ್ಧ ಎನಿಸಲಿಕ್ಕಿಲ್ಲವಾದರೂ ‘ಕೈಚೊಕ್ಕಾಣಿ’ (ದಿವ್ಯಾ ಆನಂದ) ಮುದ್ದಾಗಿದೆ. ಪದಾನ್ವೇಷಣೆ ಬುದ್ಧಿಯ ಕಸರತ್ತೇ ಆಗಬೇಕೆಂದಿಲ್ಲ, ಭಾವಸ್ಪುರಣವೂ ಮಾನ್ಯವೇ ಆಗುತ್ತದೆ ಎಂದಿದ್ದು ಅದೇ ಕಾರಣಕ್ಕೆ.

ಈ ವಾರದ ಮೂರು ಪದಗಳು:

1. Commission: ಮಾರಾಟದ ಪ್ರಮಾಣಕ್ಕೆ ಅನುಗುಣವಾಗಿ ದಳ್ಳಾಳಿಗೆ ನೀಡುವ ಶೇಕಡಾವಾರು ಮೊತ್ತವನ್ನು ಸೂಚಿಸಲಿಕ್ಕೊಂದು ಪದ ಬೇಕಿದೆ.
2. Compounder:: ವೈದ್ಯಲಿಪಿ ಅರ್ಥಮಾಡಿಕೊಂಡು ಅದರಂತೆ ಮದ್ದು ಕಲೆಸಿ ಕೊಡುವವನು; ಆತನ ದಕ್ಷತೆಯನ್ನು ಅವಲಂಬಿಸಿರುತ್ತದೆ ನಮ್ಮ ಆರೋಗ್ಯ!
3. Parenting: Parent: ಎಂದರೆ ತಂದೆ, ತಾಯಿ, ಹೆತ್ತವರು. ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿರುವ Parenting ಪದಕ್ಕೆ ಕನ್ನಡದಲ್ಲಿ ಏನೆನ್ನಬಹುದು?
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945