ಇದೊಂದು ಜನಪದ ಕಥೆ. ಒಮ್ಮೆ ಒಬ್ಬ ರೈತನ ಕುದುರೆ ಕಳೆದುಹೋಗಿರುತ್ತದೆ. ಅವನು ಸಂತೆಗೆ ಹೋದಾಗ ಅಲ್ಲಿ ಮತ್ತೊಬ್ಬ ವ್ಯಕ್ತಿ ಅದೇ ಕುದುರೆಯನ್ನು ಮಾರಲು ನಿಂತಿರುತ್ತಾನೆ. ಇಬ್ಬರ ನಡುವೆ ಜಗಳವಾಗಿ ನ್ಯಾಯಾಧೀಶರಲ್ಲಿಗೆ ಹೋಗುತ್ತಾರೆ. ಇಬ್ಬರೂ ಆ ಕುದುರೆ ತಮ್ಮದೆಂದು ವಾದಿಸುತ್ತಾರೆ. ನ್ಯಾಯಾಧೀಶ ಒಂದು ಉಪಾಯ ಹೂಡುತ್ತಾನೆ. ಕುದುರೆಯ ಕಣ್ಣುಗಳನ್ನು ತನ್ನ ಕೈಗಳಿಂದ ಮುಚ್ಚಿ, ಇಬ್ಬರೂ ವಾದಿಗಳನ್ನು ಪ್ರಶ್ನಿಸುತ್ತಾನೆ- ‘ಈ ಕುದುರೆಗೆ ಒಂದು ಕಣ್ಣು ಕುರುಡು. ಎಡಗಣ್ಣೋ ಅಥವಾ ಬಲಗಣ್ಣೋ ಹೇಳಿ?’ ಕಳ್ಳ ತಬ್ಬಿಬ್ಬಾಗಿ ಬಲಗಣ್ಣು ಕುರುಡು ಎನ್ನುತ್ತಾನೆ. ನಿಜವಾದ ಮಾಲೀಕ ನಸುನಗುತ್ತಾ ‘ನನ್ನ ಕುದುರೆಯ ಎರಡೂ ಕಣ್ಣುಗಳು ಚೆನ್ನಾಗಿವೆ’ ಎನ್ನುತ್ತಾನೆ. ನ್ಯಾಯಾಧೀಶ ಕುದುರೆಯ ಕಣ್ಣುಗಳ ಮೇಲಿಂದ ಕೈ ತೆಗೆದಾಗ ಅದರ ಎರಡೂ ಕಣ್ಣುಗಳು ಸರಿಯಾಗಿಯೇ ಇರುತ್ತವೆ. ಕಳ್ಳನ ಹೇಳಿಕೆ ಮತ್ತು ಕುದುರೆಯ ನಿಜಸ್ಥಿತಿ ಪರಸ್ಪರ ತಾಳೆ ಆಗದ ಕಾರಣ ಕಳ್ಳ ಸಿಕ್ಕಿಬೀಳುತ್ತಾನೆ. ನಿಜವಾದ ಮಾಲೀಕನ ಮಾತು ತಾಳೆ ಆದ ಕಾರಣ ಅವನಿಗೆ ನ್ಯಾಯ ಸಿಗುತ್ತದೆ. ತನ್ನ ಕುದುರೆಯನ್ನು ಕಳ್ಳನಿಂದ ಹಿಂಪಡೆಯುತ್ತಾನೆ.
ಬುದ್ಧಿವಂತ ನ್ಯಾಯಾಧೀಶ ಮಾಡಿದ್ದಿಷ್ಟೇ- ನಿಜಸ್ಥಿತಿಯನ್ನು ವಾದಿಗಳ ಹೇಳಿಕೆಯೊಂದಿಗೆ ತಾಳೆ ನೋಡಿದ್ದು. ಹಾಗೆ Cross-checking ವಿಧಾನದಲ್ಲಿ ಕುದುರೆಯ ಅಸಲಿ ಮಾಲೀಕತ್ವ ಯಾರದೆಂದು ಕಂಡುಕೊಂಡಿದ್ದು. ದೈನಂದಿನ ಜೀವನದಲ್ಲಿ ಈ ‘ತಾಳೆ ನೋಡುವ’ ಪ್ರಕ್ರಿಯೆಯನ್ನು, ಅಂದರೆ ಎರಡು ವಿಷಯಗಳನ್ನು ಪರಸ್ಪರ ಹೋಲಿಸಿ ಅವು ಸರಿಯಾಗಿ ಹೊಂದಾಣಿಕೆ ಆಗುತ್ತವೆಯೇ ಅಥವಾ ಸತ್ಯವಾಗಿದೆಯೇ ಎಂದು ಪರಿಶೀಲಿಸುವುದನ್ನು, ನಾವೆಲ್ಲ ಆಗಾಗ ಮಾಡುತ್ತಿರುತ್ತೇವೆ. ಪ್ರಾಥಮಿಕ ಶಾಲೆಯಲ್ಲಿ ಗಣಿತ ಕಲಿಯುವಾಗ ಸಂಕಲನ ವ್ಯವಕಲನ ಗುಣಾಕಾರ ಭಾಗಾಕಾರ ಕ್ರಿಯೆಗಳಿಂದ ಉತ್ತರ ಪಡೆದ ಮೇಲೆ ಅದನ್ನು ತಾಳೆ ನೋಡುವುದಕ್ಕೂ ಇರುತ್ತಿತ್ತಲ್ಲವೇ? ದೊಡ್ಡವರಾದ ಮೇಲೆ ಹಣಕಾಸು ವ್ಯವಹಾರಗಳಲ್ಲೆಲ್ಲ ಅದು ಅತ್ಯಗತ್ಯವೇ ಆಗುತ್ತದೆನ್ನಿ. ಅಂತೆಯೇ ಗಾಳಿಸುದ್ದಿ ಊಹಾಪೋಹಗಳ ಸತ್ಯಾಸತ್ಯತೆ ತಿಳಿಯಲಿಕ್ಕೆ, ಅಪರಾಧ ತನಿಖೆ, ವೈಜ್ಞಾನಿಕ ಸಂಶೋಧನೆ ಮುಂತಾದ ಬೇರೆಬೇರೆ ಕ್ಷೇತ್ರಗಳಲ್ಲೂ. ಇಂಗ್ಲಿಷ್ನ Cross-checking ಪದಕ್ಕೆ ಕನ್ನಡದಲ್ಲಿ ‘ತಾಳೆ ನೋಡುವುದು’ ಅತಿಸೂಕ್ತವೆನಿಸುತ್ತದೆಂದು ಇದಿಷ್ಟೂ ನಿರೂಪಣೆಯಲ್ಲೇ ಮನವರಿಕೆಯಾಗುತ್ತದೆ. ಈ ಪದವನ್ನು ಸೂಚಿಸಿದವರು: ಗಿರೀಶ ಫಡ್ಕೆ, ಬಿ.ಆರ್. ಚಂದ್ರಮೌಳಿ, ಭವಾನಿ ಜೋಶಿ, ಡಾ. ರಂಗನಾಥ ಕಟ್ಟಿ, ವಿಜಯಕುಮಾರ ಪಿ. ಕುಲಕರ್ಣಿ, ನಳಿನಿ ಜಿ.ಭಟ್, ನೀಲಕಂಠ ಇನಾಂದಾರ, ಸುರೇಂದ್ರನಾಥ ಸಾತ್ವಿಕ್, ವರುಣ ರಾವ್, ವಿರೂಪಾಕ್ಷಪ್ಪ ಶಾಂತಗೇರಿ, ಗೋಪಾಲ ಜೋಶಿ, ಕಾಡೇಶ ವಿ.ಬಿ, ಗೋಪಾಲಕೃಷ್ಣ ಮುತಾಲಿಕ, ನಿಹಾರಿಕಾ ನಯನ, ಕೃಷ್ಣ ಬರ್ವೆ, ಜಯಲಕ್ಷ್ಮಿ ಅಡಿಗ, ವಿಜಯಕಲ ಬೆಂಗಳೂರು, ಕಂಪಲಾಪುರ ಎಸ್.ಮೂರ್ತಿ, ಸತೀಶ ಭಟ್, ಶಕುಂತಲಾ ಹೊನ್ನಾಳಿ, ಶಾಂತಾ ಎನ್.ಎಸ್, ಪದ್ಮಾವತಿ ಐಯರ್, ಸುಬ್ರಹ್ಮಣ್ಯ ಎಸ್, ಸುಜಾತ ಕುರ್ಪಾಡ್ ಮುಂತಾದವರು.
‘ಮರುಪರಿಶೀಲನೆ’ ಎಂದು ಬಹಳಷ್ಟು ಪ್ರವೇಶಿಕೆಗಳಲ್ಲಿ ಬಂದಿದೆ. ಆದರೆ ಅದು Revaluationಗೆ ಹೆಚ್ಚು ಸಂವಾದಿಯೆನಿಸುತ್ತದೆ. ಏಕೆಂದರೆ ಕ್ರಾಸ್ಚೆಕಿಂಗ್ನಲ್ಲಿ ಮೊದಲ ಪರಿಶೀಲನೆಗೂ ಎರಡನೆಯದಕ್ಕೂ ವಿಧಾನದಲ್ಲಿ ವ್ಯತ್ಯಾಸವಿರುತ್ತದೆ. ಅದಕ್ಕಿಂತ, ಅಡ್ಡ ತಾಳೆ (ಜಿ.ಎಚ್ ಸಂಕಪ್ಪ, ಪದ್ಮಾ ಬದರಿನಾಥ್, ಬೊ.ನಾ ಕೃಷ್ಣಮೂರ್ತಿ, ಗಿರೀಶ ಕೆ.ಎಸ್), ಅಥವಾ ಅಡ್ಡ ಪರಿಶೀಲನೆ (ಸಂಗಮೇಶ ನಾಡಗೌಡ್ರ, ಮಂಜುನಾಥ ಜಾಲವಾದಿ, ಶ್ಯಾಮರಾಜ ಉಡುಪ, ನಂದಾ ಕುಲಕರ್ಣಿ, ವನಿತಾ ಸಿದ್ಧಾಪುರಕರ, ಯು.ಎನ್ ಸಂಗನಾಳಮಠ, ಅಂಜಲಿ ಬರ್ವೆ, ರಘುಪತಿ ಚಿಕ್ಕಬಳ್ಳಾಪುರ, ಗೋಪಿನಾಥ್ ಭರಮಸಾಗರ), ಅಡ್ಡ ಪರೀಕ್ಷಣೆ (ನಿತ್ಯಾನಂದ ಬ್ರಹ್ಮಾವರ, ಗೋಪಾಲಕೃಷ್ಣ ಹೆಮ್ಮಿಗೆ), ಅಡ್ಡ ತಪಾಸಣೆ (ಜಿ.ಕೆ ಲಕ್ಷ್ಮೀನರಸಿಂಹಯ್ಯ) ಮುಂತಾದುವು ಹೆಚ್ಚು ಸೂಕ್ತವಾಗಬಹುದು. ಮೊದಲೊಮ್ಮೆ ಉದ್ದಕ್ಕೆ ನೋಡುತ್ತ ಹೋಗಿ ಆಮೇಲೆ ಅಡ್ಡ ರೀತಿಯಲ್ಲೂ ನೋಡಿದರೆ ಪರೀಕ್ಷೆಯೂ ಸಮಗ್ರವೆನಿಸುತ್ತದೆ; ಇಂಗ್ಲಿಷ್ನ cross-checking ಅನ್ನು ಯಥಾವತ್ತಾಗಿ ಕನ್ನಡಕ್ಕೆ ತಂದಂತೆಯೂ ಆಗುತ್ತದೆ. ‘ಪರಾಂಬರಿಸು’ (ಸೀತಾ ವ್ಯಾಸಮುದ್ರಿ, ವಿದ್ಯಾ ನಾಗರಬಾವಿ, ಶಿವಶಂಕರ ಪ್ರಭು) ಸಹ ಗಮನಾರ್ಹವೇ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು ಎಂಬ ಗಾದೆಮಾತಿನಲ್ಲಿ ಪರಾಂಬರಿಸುವುದು ಅಂದರೆ ಕಣ್ಣಿಂದ ಕಂಡಿದ್ದನ್ನೂ ಬೇರೊಂದು ರೀತಿಯಲ್ಲಿ ದೃಢಪಡಿಸಿಕೊಳ್ಳುವುದು ಎಂಬ ಅರ್ಥವಾದ್ದರಿಂದ cross-checking ಎಂದೇ ಧ್ವನಿಸುತ್ತದೆ. ಮುಂಗುಸಿಯ ಬಾಯಿಯಲ್ಲಿ ರಕ್ತದ ಕಲೆ ನೋಡಿದ ಗಂಗಮ್ಮ ಮುಂಗುಸಿಯನ್ನು ಚಚ್ಚಿದ್ದಳು; ಆಕೆ ಹಾಗೆ ದುಡುಕದೆ ಚೆನ್ನಾಗಿ ಪರಾಂಬರಿಸಬೇಕಿತ್ತು. ಏಕೆಂದರೆ ಸತ್ತಿದ್ದು ಮಗುವಲ್ಲ, ಹಾವು!
ಕಳೆದ ಸಲ ಕೇಳಿದ್ದ ಎರಡನೆಯ ಪದGaudy. ಇದರ ಇಂಗ್ಲಿಷ್ ಮೂಲವೂ ಕುತೂಹಲಕಾರಿಯಾಗಿದೆ. ಈಗ ಇದು showy, tastelessly rich ಎಂಬರ್ಥದಲ್ಲಿ ವಿಶೇಷಣವಾಗಿ ಬಳಕೆಯಾಗುವುದಾದರೂ 16ನೆಯ ಶತಮಾನಕ್ಕಿಂತ ಹಿಂದೆ ಅದೇ ವಿಶೇಷಣಕ್ಕೆ joyfully festive ಎಂಬರ್ಥ ಇತ್ತಂತೆ. ಕಾರಣ ಅದರ ನಾಮಪದ ರೂಪ gaud ಎಂದರೆ a large, ornamental bead in a rosary ಎಂಬ ಅರ್ಥ. ಜಪಮಾಲೆಯಲ್ಲಿ ಬೇರೆಯದಕ್ಕಿಂತ ಭಿನ್ನವಾಗಿ, ಎದ್ದುಕಾಣುವ ಮಣಿ ಅಥವಾ ಹರಳು. ಮಧ್ಯಯುಗದ ಇಂಗ್ಲಿಷ್ನಲ್ಲಿ gaudegrene ಎಂದರೆ ಹಳದಿ ಮಿಶ್ರಿತ ಹಸುರು ಸಸ್ಯಜನ್ಯ ಬಣ್ಣ. ಜರ್ಮನಿಯಲ್ಲಿ ಬೆಳೆಯುತ್ತಿದ್ದ ಆ ಸಸ್ಯದ ಹೆಸರು ಹಳೆಯ ಫ್ರೆಂಚ್ನಲ್ಲಿ gaude ಅಂತ ಇತ್ತು. ಅದೇ ಇಂಗ್ಲಿಷ್ನಲ್ಲಿ gaudy ಎಂದಾಯ್ತು. ಈಗ ಒಟ್ಟಾರೆಯಾಗಿ ಔಚಿತ್ಯವೂ ಅಂದಚೆಂದವೂ ಇಲ್ಲದ ವಿಪರೀತ ಅಲಂಕಾರದಿಂದ ಕೂಡಿದ, ಆಡಂಬರದ, ಥಳುಕಿನ ಎಂದು ಅರ್ಥ. ‘ಕಣ್ಣುಕುಕ್ಕುವ’ ಎಂದು ಸೂಚಿಸಿರುವ ಪ್ರವೀಣ ದೇಸಾಯಿ, ಅರುಣ ಎಸ್, ಬಸವರಾಜ ಲ.ನರಸಣ್ಣವರ, ಸುಧಾ ಪ್ರಸಾದ್, ರೇವತಿ ಜೋಶಿ, ಶೈಲಶ್ರೀ ರಾವ್, ಮಹಾಂತೇಶ ಇಂಚಲ, ರಾಜಶೇಖರ ಜಿ.ಎಂ, ನಾಗೇಶ ಫಾಟಕ್, ಸುಜನಾ ನಿಟ್ಟೂರು, ಶಂಭು ಇರಾಣಿ, ವಿನಾಯಕ ಕಾಮತ, ವಸಂತಕುಮಾರ್ ಕಲ್ಯಾಣಿ ಮತ್ತಿತರರ ಆಯ್ಕೆ ಸೂಕ್ತವಿದೆ.
ಸ್ವಲ್ಪ ಗ್ರಾಂಥಿಕವೆನಿಸಿದರೂ ‘ಅತಿರಂಜಿತ’ (ಶಿವಕುಮಾರ ಸಿಂಗಟಗೆರೆ, ಹೊನ್ನಿ ಭಟ್ಟ, ನಂದಿನಿ ಹಾಸನ, ಎನ್.ಆರ್ ರಮೇಶ್, ಗಂಗಾ ಹೆಗಡೆ, ಅಮರ್ ಬೆಂಗಳೂರು, ರೂಪಕಲಾ ಸದಾನಂದ, ಉಮಾ ಪ್ರಭು, ನರೇಂದ್ರನಾಥ ಎಚ್.ಎಂ) ಸಹ ಚೆನ್ನಾಗಿದೆ. ‘ಡಾಂಭಿಕ’ (ಸುಮಾ ಶ್ರೀನಾಥ್), ‘ಆಡಂಬರದ’ (ಅಜಯಕುಮಾರ್ ಪೇಟೆ, ವಿಶ್ವಜ್ಯೋತಿ ಶಿವಮೊಗ್ಗ, ಕೆ.ಎಂ ಮಧ್ವರಾಯ, ಕೆ.ಎ ಭಟ್, ವೀರೇಶ ವಾಲಿ, ಮಂಜುಳಾ ಸುಲಾಖೆ, ಆನಂದರಾಮ ಮಡಿ, ಜಿ.ನಾರಾಯಣ ರಾವ್, ಮಂಜುನಾಥ ಡಿ.ಎಸ್, ಪ್ರಭಾಕರ ಅಡಿಗ, ಮಿಸ್ಕಿನ್ ಕುಟುಂಬ ಸದಸ್ಯರು), ‘ಥಳಕುಪಳಕಿನ’ (ಗುಂಡಾರ್ಪಿ ವೆಂಕಟೇಶ್, ರಾಜೇಂದ್ರ ಕಳಸಣ್ಣವರ, ಎನ್.ವಿ ಶಂಕರ್, ಚಂದ್ರಶೇಖರಪ್ಪ ಎಸ್.ಕೆ, ಸಂಜೀವ ಜೋಶಿ, ಸುರೇಂದ್ರ ಪೈ, ಎಚ್.ಎಸ್ ಮಂಜುನಾಥ, ರಾಮಚಂದ್ರ ಬಡಗಾಬೆಟ್ಟು, ಭಾಗ್ಯಶ್ರೀ ಬೆಂಗಳೂರು, ಯಮನಪ್ಪ ಕೊಟ್ನಿಕಲ್, ಷಡಕ್ಷರಿಮುನಿ ಸ್ವಾಮೀಜಿ, ವಿ.ವಿಜಯೇಂದ್ರ ರಾವ್, ಎಂ.ಕೆ ರಮೇಶ್), ‘ಡೌಲಿನ’ (ಡಾ.ದಯಾನಂದ ಭಟ್ಟ, ಸುನೀತಾ ನಿರಂಜನ, ಸಿದ್ದನಗೌಡ ಮುದಿಗೌಡ್ರ), ‘ರಾಚುವ’ (ಎನ್.ಆರ್. ವಾಸುದೇವರಾವ್, ಯಶೋದಾ ಎಂ.ಗೋಪಿ, ಭುವನ್ ಶರ್ಮ, ಹೇಮಂತ ಸಂಪಗಾಂವಕರ) ಕೂಡ ಅರ್ಥಪೂರ್ಣವೇ. ಪೊ›. ಜಿ.ವೆಂಕಟಸುಬ್ಬಯ್ಯನವರ ನಿಘಂಟುವಿನಲ್ಲೂ ಇರುವ ‘ರಬಾರಬಿ’ (ಅವಳು ಮದುವೆಗೆ ತುಂಬ ರಬಾರಬಿ ಸೀರೆ ಉಟ್ಟುಕೊಂಡು ಬಂದಿದ್ದಳು) ಪದವನ್ನೂ ಕೆಲವರು ಸೂಚಿಸಿದ್ದಾರೆ- ರಾಜೇಶ್ವರಿ ಶಿವಮೊಗ್ಗ, ಶೋಭಾ ಪಿ.ಭಟ್ಟ, ವಿಜಯಲಕ್ಷ್ಮಿ ಜಾಬಿ ಮತ್ತು ಶ್ಯಾಮಸುಂದರ ಅತ್ರಿನಂದನ.
ಕೊನೆಯದಾಗಿ Worth it. ಕಾಸಿಗೆ ತಕ್ಕ ಕಜ್ಜಾಯ ಸಿಕ್ಕಿದಾಗ ಎದೆಯಾಳದಿಂದ ಹೊರಡುವ ಉದ್ಗಾರ. ಅನಂತಕೃಷ್ಣ ಶಿವಮೊಗ್ಗ ಅವರು ತಕ್ಕ, ಈಡು, ಸಾರ್ಥಕ, ಯೋಗ್ಯ ಎಂಬ ನಾಲ್ಕು ಪರ್ಯಾಯಗಳನ್ನು ವಿಶ್ಲೇಷಣೆಯೊಂದಿಗೆ ಕಳಿಸಿದ್ದಾರೆ. ತಗು = to fit, to fulfil,, ಅದರ ಕೃದಂತ ರೂಪವೇ ತಕ್ಕ. ಈಡು = accomplishment. ಗೊಬ್ಬರ ನೀರು ಹಾಕಿದರೂ ತೆಂಗಿನ ಫಲದ ಈಡು ಬರಲಿಲ್ಲ. ಈಡು + ಏರು = ಈಡೇರು something to reach accomplishment. ಸಾರ್ಥಕ = ಸ + ಅರ್ಥ + ಕ = Something accomplished along with efforts, money, etc.. ಯೋಗ್ಯ = to fit to fulfil. ಇವೇ ನಾಲ್ಕು ಪದಗಳು ಬೇರೆ ಕೆಲವು ಓದುಗರ ಪ್ರವೇಶಿಕೆಗಳಲ್ಲೂ ಬಂದಿವೆ. ‘ಗಿಟ್ಟು’ (ತರಕಾರಿಯವನು ಐದು ರೂಪಾಯಿಗೆ ನಾಲ್ಕು ನಿಂಬೆಹಣ್ಣು ಕೊಟ್ಟ. ನನಗೆ ವ್ಯಾಪಾರ ಗಿಟ್ಟಿತು) ಆಗಬಹುದೆಂದಿದ್ದಾರೆ ಸಿ.ನರೇಂದ್ರ, ಕಡೂರು ದೇವೇಂದ್ರ, ಮತ್ತು ಗೀತಾ ಗುರುಸ್ವಾಮಿ. ಕಸಾಪ ನಿಘಂಟುವಿನ ಪ್ರಕಾರ ಇದು ‘ನಷ್ಟವಾಗದಿರು’ ಎಂಬರ್ಥದಲ್ಲಿ ಕಿಟ್ಟು, ಗೀಟು ರೂಪದಲ್ಲೂ ಬಳಕೆಯಾಗುತ್ತದೆ. ‘ಮೌಲ್ಯಯುತ’ ಎಂದು ಸೂಚಿಸಿದವರು- ಶೈಲಜಾ ಮೋಹನ್, ಶಶಿಕಲಾ ಮೋಟೆಬೆನ್ನೂರ್, ಜಯರಾಮ್ ಪಾರೆ, ಎ.ಬಿ ಪ್ರಕಾಶ್, ವಿಲಾಸ ಹುದ್ದಾರ, ಭಾರತಿ ಆರ್.ಭಟ್, ಮತ್ತು ಶಶಿಕಲಾ ನರೇಂದ್ರನಾಥ್. ಪದಾನ್ವೇಷಣೆಯಲ್ಲಿ ಅತ್ಯಂತ ಆಸಕ್ತಿಯಿಂದ ಭಾಗವಹಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು. ನಿಮ್ಮೆಲ್ಲರ ಉತ್ಸಾಹವೇ ಈ ಅಂಕಣಕ್ಕೆ ಇಂಧನ. ಇದು ಹೀಗೆಯೇ ಮುಂದುವರೆಯಲಿ.
ಈ ವಾರದ ಮೂರು ಪದಗಳು:
1. Hangers : ಉಡುಪುಗಳನ್ನು ಬಿಸಿಲಲ್ಲಿ ಒಣಗಿಸುವಾಗಲೂ, ಬೀರುವಿನೊಳಗೆ ಇಡುವಾಗಲೂ ಮಡಚದೆ ತೂಗುಹಾಕಿಡಲಿಕ್ಕೆ ಬಳಸುವ ನಿತ್ಯೋಪಯೋಗಿ ವಸ್ತು.
2.Toothbrush : ತೆಲುಗಿನಲ್ಲಿ ಪಳ್ಳಬುರುಸು ಎನ್ನುತ್ತಾರಂತೆ. ಅದೇ ಹೆಸರಿನ ಚಲನಚಿತ್ರವೂ ಇತ್ತೀಚೆಗೆ ಬಿಡುಗಡೆಯಾಗಿದೆ. ಕನ್ನಡದಲ್ಲಿ ಏನೆನ್ನಬಹುದು?
3.Vacuum cleaner : ಮೊದಲೇ ಮೂಲೆಯಲ್ಲಿರುವ ಕಸಪೊರಕೆಯನ್ನು ಮತ್ತಷ್ಟು ಮೂಲೆಗುಂಪಾಗಿಸಿದ ಉಪಕರಣಕ್ಕೆ ಕನ್ನಡದ ಹೆಸರೊಂದನು ಹುಡುಕೋಣವೇ?
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945