ವಿಮಾನದ ಕಾಕ್​ಪಿಟ್​ 
ಕಟ್ಟುವೇವು ನಾವು ಕನ್ನಡ ಪದವೊಂದನು – ಶ್ರೀವತ್ಸ ಜೋಷಿ

ವಿಮಾನದ ಕೊಕ್ಕಿನ ಭಾಗದ ಕೋಣೆ ಕೊಕ್ಕೋಣೆ!

(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)

ನಾಗರಿಕ ವಿಮಾನಯಾನ, ವಿಮಾನದಲ್ಲಿ ಪ್ರಯಾಣಿಕರ ಸೇವೆಗೆ ಗಗನಸಖಿಗಳು, ವಿಮಾನ ಚಾಲನೆ ಮತ್ತು ನಿಯಂತ್ರಣದ ಜವಾಬ್ದಾರಿ ಹೊತ್ತ ಪೈಲಟ್​ಗಳು ಕೂರಲಿಕ್ಕೆ ಭದ್ರವಾದೊಂದು ಕೋಣೆ, ಅದಕ್ಕೆ Cockpit ಎಂದು ಹೆಸರು- ಇವೆಲ್ಲ 20ನೆಯ ಶತಮಾನದಿಂದೀಚಿನ ವಿದ್ಯಮಾನಗಳು. ಹಾಗಿದ್ದರೆ ಅದಕ್ಕಿಂತ ಮೊದಲು Cockpit ಪದ ಇಂಗ್ಲಿಷ್​ನಲ್ಲಿ ಇರಲಿಲ್ಲವೇ? ಖಂಡಿತ ಇತ್ತು. ಹದಿನೈದನೆಯ ಶತಮಾನದಲ್ಲೇ ಇತ್ತು, ಮತ್ತು ಆಗ ಅದರ ಅರ್ಥ ಕೋಳಿಕಾಳಗ ನಡೆಯುವ ಸ್ಥಳ ಎಂಬುದೇ ಆಗಿತ್ತು! ಹದಿನೆಂಟನೆಯ ಶತಮಾನದಲ್ಲಿ ಯುರೋಪ್​ನ ನಾವಿಕರು ತಮ್ಮ ದೋಣಿ/ಹಡಗುಗಳಲ್ಲಿದ್ದ ನಿಯಂತ್ರಣ ಕೇಂದ್ರವನ್ನು Cockpit ಎಂದು ಕರೆದರು, ಅದು ಹಡಗಿನ ಕೆಳಸ್ತರದಲ್ಲಿ ಇರುತ್ತಿದ್ದ ಕೋಣೆ, ನಿಜಕ್ಕೂ ಗುಂಡಿಯಂಥದೇ ಎಂಬ ಕಾರಣಕ್ಕೆ. ಆಮೇಲೆ 1914ರಲ್ಲಿ ವಿಮಾನದೊಳಗಿನ ನಿಯಂತ್ರಣ ಕೊಠಡಿಯೂ Cockpit ಎಂದೇ ಹೆಸರಾಯಿತು.

ಕನ್ನಡದಲ್ಲಿ ಇದಕ್ಕೆ ಸಂವಾದಿಯಾಗಿ ಯಾವ ಪದವನ್ನು ಬಳಸಬಹುದು? ಹಿರಿಯ ಓದುಗರೊಬ್ಬರು, ಬೆಂಗಳೂರಿನ ನಾಗರಿಕ ವಿಮಾನವಿನ್ಯಾಸ ಹಾಗೂ ವಿಕಾಸಕೇಂದ್ರದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಡಾ.ಎಂ.ಎಸ್ ರಾಜಮೂರ್ತಿ, ಹೀಗೆ ಬರೆದಿದ್ದಾರೆ: ‘‘1975ರಲ್ಲಿ ರಾಷ್ಟ್ರೀಯ ವೈಮಾನಿಕ ಪ್ರಯೋಗಶಾಲೆಯ ಕನ್ನಡ ಸಾಂಸ್ಕೃತಿಕ ಸಂಘ, ಕನ್ನಡದಲ್ಲಿ ವಿಜ್ಞಾನ ಪ್ರಬಂಧಗಳನ್ನು ಬರೆಯುವ ಹವ್ಯಾಸವನ್ನು ಬೆಳೆಸಬೇಕೆಂದು ‘ಕಣಾದ’ ಹೆಸರಿನ ವಾರ್ಷಿಕ ಪತ್ರಿಕೆಯನ್ನು ಪ್ರಾರಂಭಿಸಿತು. ಮೊದಲಿಗೆ ಪ್ರಯೋಗಶಾಲೆಯ ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಕುರಿತು ಬರೆಯಬೇಕೆಂದು ತೀರ್ಮಾನಿಸಲಾಯಿತು. ನನ್ನ ವಿಭಾಗವು ಸ್ವದೇಶಿ ವಾಯುಯಾನ ಸಿಮ್ಯುಲೇಟರ್ ವಿಕಾಸದಲ್ಲಿ ತೊಡಗಿದ್ದ ಕಾರಣ, ನಾನು ವಿಮಾನದ ಸ್ಥಿರತೆ ಹಾಗೂ ನಿಯಂತ್ರಣ ಕುರಿತು ಪ್ರಬಂಧ ಬರೆದೆ. ಆಗ ಸೂಕ್ತ ಕನ್ನಡ ಪದಗಳ ಹುಡುಕಾಟ ಮಾಡಬೇಕಾಗಿ ಬಂತು.

ಕಳೆದ ಸಲ ಕೇಳಿದ್ದ ಇನ್ನೊಂದು ಪದ Callsheet ಚಿತ್ರರಂಗದ ಸುದ್ದಿಗಳಲ್ಲಿ ಕಂಡುಬರುವುದು. ಹೆಚ್ಚಾಗಿ ನಟನಟಿಯರ ಲಭ್ಯತೆಗೆ ಸಂಬಂಧಿಸಿದಂತೆ ಅದರ ಬಳಕೆ. ಆದರೆ ಅಷ್ಟೇ ಸೀಮಿತ ಅರ್ಥವಲ್ಲ. ಒಂದು ಚಲನಚಿತ್ರ ನಿರ್ವಣವಾಗಬೇಕಾದರೆ ಬರೀ ನಟನಟಿಯರಿದ್ದರೆ ಸಾಕೇ? ಅದೊಂದು ದೊಡ್ಡ ತಂಡವೇ ಆಗಿರುತ್ತದೆ. ಎಲ್ಲರ ಸಮಯವನ್ನೂ ಹೊಂದಿಸುವುದು ಕಷ್ಟದ ಕೆಲಸವೇ. ಆದ್ದರಿಂದಲೇ ಚಿತ್ರದ ನಿರ್ವಪಕ/ನಿರ್ದೇಶಕರು ಚಿತ್ರೀಕರಣ ಆರಂಭವಾಗುವ ಮೊದಲೇ ಚಿತ್ರೀಕರಣದ ಸಂಪೂರ್ಣ ಮಾಹಿತಿಯಿರುವ ಒಂದು ಪಟ್ಟಿಯನ್ನು ತಯಾರಿಸುತ್ತಾರೆ. ಯಾರನ್ನು, ಯಾವ ದಿನ, ಯಾವ ಸಮಯಕ್ಕೆ, ಯಾವ ಸ್ಥಳಕ್ಕೆ, ಯಾವ ಕರ್ತವ್ಯಕ್ಕೆ, ಯಾವ ಪಾತ್ರಕ್ಕೆ ಕರೆಯಬೇಕು, ಯಾವ ದೃಶ್ಯಗಳ ಚಿತ್ರೀಕರಣ ಆವತ್ತು ನಡೆಯಬೇಕು, ಯಾವಯಾವ ಕಡೆಗಳಲ್ಲಿ ಏನೇನು ಸೌಲಭ್ಯಗಳು ಬೇಕು ಇತ್ಯಾದಿ ಸ್ಪಷ್ಟ ನಿರ್ದಿಷ್ಟ ನಿರ್ದೇಶನ ಅದರಲ್ಲಿರುತ್ತದೆ.

ಚಿತ್ರೀಕರಣ ಮುಗಿದಮೇಲೆ ಚಿತ್ರ ಬಿಡುಗಡೆಯಾಗುವುದಕ್ಕೆ ಮುನ್ನ ಆಗಬೇಕಾದ ಕೆಲಸಗಳೂ ಅದರಲ್ಲೇ ಸೇರಿಕೊಳ್ಳಬಹುದು. ಒಟ್ಟಿನಲ್ಲಿ ಅದೊಂದು ನೀಲನಕ್ಷೆ. ‘‘107 ದಿನ, 160 ಕಾಲ್​ಶೀಟ್, 80 ಲೊಕೇಶನ್, 20 ಸೆಟ್, 1 ಲಕ್ಷಕ್ಕೂ ಹೆಚ್ಚು ಜನರಿಂದ ಕೆಲಸ. ‘ಮಾರ್ಕ್’ ಮೆನು ಬಗ್ಗೆ ಸುದೀಪ್ ಮಾತು’’ ಅಂತೊಂದು ತಲೆಬರಹ ಕೆಲದಿನಗಳ ಹಿಂದೆ ಅಂತರಜಾಲ ಪತ್ರಿಕೆಯೊಂದರಲ್ಲಿ ಬಂದಿತ್ತು. ಅದ್ದೂರಿ ಚಲನಚಿತ್ರಗಳಲ್ಲಿ ಕಾಲ್​ಶೀಟ್ ಹೊಂದಾಣಿಕೆ ಎಷ್ಟು ದೊಡ್ಡ ಸವಾಲೆಂದು ಇದರಿಂದ ಅಂದಾಜಾಗುತ್ತದೆ. ಕಾಲ್​ಶೀಟ್​ಅನ್ನು ಕನ್ನಡಲ್ಲಿ ‘ಕರೆಪಟ್ಟಿ’ ಎನ್ನಬಹುದೆಂದು ಬಹಳಷ್ಟು ಓದುಗರು ಸೂಚಿಸಿದ್ದಾರೆ: ಶಿವಯೋಗಿ ಸಿಂದೂರ್, ಡಾ.ಸುರೇಶ ಸೊಣ್ಣಪ್ಪ, ಚಂದನಕುಮಾರ್ ಅಸ್ವಾಳ್, ಶ್ರೀಕಾಂತ ಗೋಡಖಿಂಡಿ, ವಿಜಯಲಕ್ಷ್ಮಿ ಭಟ್ಟ, ಎನ್.ಕೆ ಸುಬ್ಬಣ್ಣ, ಶೋಭಾ ಪಿ.ಭಟ್ಟ, ಬಿ.ವಿ.ಕುಲಕರ್ಣಿ, ವಾಣಿ ಅಡಿಗ, ಎಂ.ಕೆ.ರಮೇಶ್, ಜಿ.ನಾರಾಯಣ ರಾವ್, ನರೇಂದ್ರನಾಥ್ ಎಚ್.ಎಂ, ಜಯಲಕ್ಷ್ಮಿ ಅಡಿಗ, ಸುವರ್ಣಾ ಕೌಲ್ಗಿಕರ್, ಭಾರತಿ ಆರ್.ಭಟ್, ಭಾಗ್ಯಶ್ರೀ ಕುಲಕರ್ಣಿ, ಚಂದ್ರಕಾಂತ ಜೋಶಿ ಮುಂತಾದವರು.

‘ಕರೆಪತ್ರ’ ಆಗಬಹುದೆಂದವರು ಶ್ರೀನಿವಾಸ ಮೂಡೆತ್ತಾಯ, ಪ್ರತಿಮಾ ನಾಯಕ್, ಮುರಲೀಧರ ಆರ್, ಗಿರೀಶ ಫಡ್ಕೆ, ಪ್ರಸನ್ನ ಶೆಂಡ್ಯೆ, ಕೃಷ್ಣ ಬರ್ವೆ, ಅನಂತಾಚಾರ ಶಿರಾ ಮತ್ತಿತರರು. Expiry Date ‘ತೀರುತೇದಿ’ ಎಂಬ ಪದರಚನೆ ಇದೇ ಅಂಕಣದಲ್ಲಿ ಆಗಿತ್ತು. ಅದರಿಂದ ಸ್ಪೂರ್ತಿ ಪಡೆದು ‘ಕರೆತೇದಿ’. ಚಿತ್ರತಂಡದವರು ಕರೆದಾಗ ಲಭ್ಯವಿರಬೇಕಾದ ದಿನಾಂಕಗಳ ಪಟ್ಟಿ ಎಂದಿದ್ದಾರೆ ಗಿರೀಶ ಕೆ.ಎಸ್. ಕೊನೆಯದಾಗಿ Catalogue, ಅಥವಾ ಅಮೆರಿಕದಲ್ಲಾದರೆ Catalog. ಇಂಗ್ಲಿಷ್​ನಲ್ಲಿ ಇದಕ್ಕೆ ‘a list of separate items, an itemized enumeration’ ಎಂಬ ಅರ್ಥ. ಫ್ರೆಂಚ್, ಲ್ಯಾಟಿನ್, ಗ್ರೀಕ್ ಭಾಷೆಗಳಲ್ಲಿ ಅದೇ ಉಚ್ಚಾರದ ಪದಗಳಿಂದ ಬಂದದ್ದಿದು. ಪುಸ್ತಕಗಳ(ಗ್ರಂಥಗಳ) ಪಟ್ಟಿಯ ಸಂದರ್ಭದಲ್ಲೇ ಹೆಚ್ಚಾಗಿ ಬಳಕೆಯಾಗುವುದಾದರೂ ಬೇರೆ ವಸ್ತು/ವಿಷಯಗಳ ಪಟ್ಟಿಯೂ ಕ್ಯಾಟಲಾಗ್ ಎನಿಸಬಲ್ಲದು.

ಉದ್ಯಮವೊಂದರ ಉತ್ಪನ್ನಗಳ ಪಟ್ಟಿ, ಸೇವಾಸೌಕರ್ಯಗಳ ಪಟ್ಟಿ, ಶಿಕ್ಷಣಸಂಸ್ಥೆಯು ಒದಗಿಸುವ ವಿವಿಧ ತರಗತಿಗಳ ಪಟ್ಟಿ ಇತ್ಯಾದಿ. ಗ್ರೀಕ್ ಮಹಾಕಾವ್ಯ ‘ಈಲಿಯಡ್’ನಲ್ಲಿ ಬರುವ ‘ಕ್ಯಾಟಲಾಗ್ ಆಫ್ ಶಿಪ್ಸ್’ (ನೌಕೆಗಳ ಪಟ್ಟಿ) ಪ್ರಖ್ಯಾತವಾದುದು. ದೊಡ್ಡದೊಡ್ಡ ಗ್ರಂಥಾಲಯಗಳಲ್ಲಿ ಬೇರೆಬೇರೆ ವಿಭಾಗದ ಪುಸ್ತಕಗಳ ಬೇರೆಬೇರೆ ಕ್ಯಾಟಲಾಗ್​ಗಳಿರಬಹುದು, ಮತ್ತು ಆ ಕ್ಯಾಟಲಾಗ್​ಗಳದೇ ಒಂದು ಕ್ಯಾಟಲಾಗ್(ಪಟ್ಟಿ) ಮಾಡಬೇಕಾಗಿ ಬರಬಹುದು! ತತ್ತ್ವಜ್ಞಾನಿ ಬರ್ಟ್ರಾಂಡ್ ರಸ್ಸೆಲ್​ನ Catalogue Paradox ಎಂಬ ಜಾಣ್ಮೆಸಮಸ್ಯೆ ಅದೇ ಕಾರಣಕ್ಕೆ ಪ್ರಸಿದ್ಧ.

ಕನ್ನಡದಲ್ಲಿ ಕ್ಯಾಟಲಾಗ್​ಗೆ ಸಮಾನಾರ್ಥಕವಾಗಿ ಗ್ರಂಥಸೂಚಿ, ವಸ್ತುಸೂಚಿ, ವಿಷಯಸೂಚಿ ಎನ್ನಬಹುದು. ಸೂಚಿ ಎಂಬ ಸಂಸ್ಕೃತಪದಕ್ಕೆ ಸೂಜಿ, ಮೊನಚಾದ ತುದಿ, ಜ್ವಾಲೆಯಂತಿರುವ ಕಾಂತಿ ಮುಂತಾದುವುಗಳೊಂದಿಗೆ ಅನುಕ್ರಮಣಿಕೆ, ವಿಷಯಾನುಕ್ರಮವಾಗಿ ರಚಿಸಿದ ಪುಸ್ತಕಗಳ ಪಟ್ಟಿ ಎಂಬ ಅರ್ಥಗಳೂ ಇವೆ. ಸೂಚಿಯ ಬದಲಿಗೆ ಪಟ್ಟಿ ಬಳಸಿ ಪುಸ್ತಕಪಟ್ಟಿ, ವಿಷಯಪಟ್ಟಿ ಎಂದು ಕೂಡ ಹೇಳಬಹುದು. ಯಾವುದರ ಪಟ್ಟಿ ಎಂದು ಸೀಮಿತಗೊಳಿಸದೆ ವಿಶಾಲಾರ್ಥದಲ್ಲಿ ‘ವಿವರ ಪಟ್ಟಿ’ ಎನ್ನಬಹುದೆಂಬ ಸಲಹೆ ನೀಡಿದ್ದಾರೆ ನಾರಾಯಣ ಹೆಗಡೆ, ಜಿ.ಸುಬ್ರಹ್ಮಣ್ಯ, ರಘುನಾಥ ಹಿರೇಹಳ್ಳಿ, ವೀರೇಶ ಬಂಗಾರಶೆಟ್ಟರ, ಪ್ರತಿಭಾ ಭಟ್, ದೇವರಾಜನ್ ಬೆಂಗಳೂರು, ಸುಬ್ರಹ್ಮಣ್ಯ ಎಸ್, ಸತೀಶ ಕಬೇಕೋಡಿ, ಕಂಪಲಾಪುರ ಶ್ರೀನಿವಾಸ್, ವಿದ್ಯಾಶಂಕರ ಶರ್ಮ, ಭ.ನಿಂ.ಗೋಪಿನಾಥ್, ನಿತ್ಯಾನಂದ ಬ್ರಹ್ಮಾವರ, ವಾಸವಿ ಗುಡೂರ, ಸೂರಿ ಲಿಂಗದಹಳ್ಳಿ ಮುಂತಾದವರು.

ಕನಾಕಪ ಅಂಕಣದಲ್ಲಿ ಸಕ್ರಿಯವಾಗಿ ಭಾಗವಹಿಸುವ, ಒಳ್ಳೊಳ್ಳೆಯ ಕೆಲವು ಪದಗಳನ್ನೂ ಸೂಚಿಸಿರುವ ಡಾ.ವೇಣುಗೋಪಾಲ್ ಒಂದು ಚಿಂತನಯೋಗ್ಯ ಟಿಪ್ಪಣಿ ಬರೆದುಕಳಿಸಿದ್ದಾರೆ, ಹೀಗೆ: ‘‘ಕಟ್ಟಡ ಕಟ್ಟಲು ಬೇಕಾಗುವ ಮುಖ್ಯ ಸಾಮಗ್ರಿಗಳಲ್ಲಿ ಸಿಮೆಂಟು ಒಂದು. ಬಹಳ ಹಿಂದೆ ನಾನೋದಿದ ಒಂದು ಪ್ರಸಂಗವನ್ನಿಲ್ಲಿ ಉಲ್ಲೇಖಿಸಬಯಸುತ್ತೇನೆ. ನಗರದಿಂದ ಹಳ್ಳಿಗೆ ಹೋಗಿ ಅಲ್ಲಿಯ ಕೆಲ ಕಾಮಗಾರಿಗಳ ಬಗ್ಗೆ ತಿಳಿವಳಿಕೆ ನೀಡಲು ಒಬ್ಬ ಇಂಜಿನಿಯರ್, ಸಭೆಯನ್ನು ಕರೆದಿದ್ದನಂತೆ. ಆ ಇಂಜಿನಿಯರ್ ಮಾತನಾಡುತ್ತ, ಈ ಕೆಲಸಗಳಿಗೆ 20-30 ಮೂಟೆಗಳಷ್ಟು ಸಿಮೆಂಟ್ ಬೇಕಾಗುತ್ತದೆ. ಸಿಮೆಂಟ್​ನಿಂದ ಕಟ್ಟಿದ ಕಾಮಗಾರಿಗಳು ಬಹಳ ಕಾಲ ಬಾಳಿಕೆ ಬರುತ್ತವೆ ಅಂತೆಲ್ಲ ಭಾಷಣ ಮಾಡಿ, ನಿಮಗೆ ಸಿಮೆಂಟ್ ಎಂದರೇನು ಗೊತ್ತೇ? ಎಂದು ಕೇಳಿದನಂತೆ. ಈ ಪ್ರಸಂಗ ನಡೆದ ಸಮಯದಲ್ಲಿ ಸಿಮೆಂಟ್ ಆಗತಾನೆ ಭಾರತವನ್ನು ಪ್ರವೇಶಿಸುತ್ತಿದ್ದ ಕಾಲ! ಹಳ್ಳಿಯವರಿಗೆ ಸಿಮೆಂಟ್ ಬಗ್ಗೆ ಯಾವುದೇ ಕಲ್ಪನೆ ಇರಲಿಕ್ಕಿಲ್ಲ ಎಂದು ಆ ಇಂಜಿನಿಯರ್​ನ ಭಾವನೆ. ಆಗ ಒಬ್ಬ ಹಳ್ಳಿಗ, ‘ಗೊತ್ತಂತೆ ಬುಡಿ ಸ್ವಾಮಿ, ನೀವು ಹೇಳ್ತಾ ಇರೋದು ಸೀಮೆ-ಅಂಟು ತಾನೇ? ಪಕ್ಕದಹಳ್ಳಿಯ ದೊಡ್ಡಗೌಡ್ರು, ಹೋದವರ್ಷ ಅವರ ಹೊಸ ಮನೆ ಕಟ್ಟಿಸಲು ತರಿಸಿದ್ದರು. ನಾನು ಕಂಡಿದೀನಿ’ ಎಂದು ಸಹಜ ಮುಗ್ಧತೆಯಿಂದ ಹೇಳಿದನಂತೆ. Cement ಎಂಬ ಆಂಗ್ಲ ಪದಕ್ಕೆ ಆ ಹಳ್ಳಿಗ ನೀಡಿದ ಕನ್ನಡ ಪದ ‘ಸೀಮೆ-ಅಂಟು’. ಸೀಮೆ = ಗಡಿಯಾಚೆಗಿನ, ಅಂಟು = glue ಎಂದು ಅರ್ಥೈಸಿದರೆ ಆತ ಹೇಳಿದ್ದು ಎಷ್ಟು ಕರಾರುವಾಕ್ಕಾಗಿದೆ! ಶಿಷ್ಟರಾದ ನಾವು ತಲೆಯಿಂದ ಪದ ಸೃಷ್ಟಿಸಲು ತಲೆ ಕೆಡಿಸಿಕೊಳ್ಳುತ್ತೇವೆ. ಭಾವದಿಂದ ಹುಟ್ಟಿದ ಪದ, ಭಾಷಾ ಏಕತೆಯ ಜೊತೆಗೆ ಭಾವೈಕ್ಯವನ್ನೂ ತರಬಹುದು ಎಂದು ತೋರುತ್ತದೆ. ಒಟ್ಟಿನಲ್ಲಿ ಕನ್ನಡ ಪದ ಕಟ್ಟಲಿಕ್ಕೆ ಸೀಮೆ-ಅಂಟು ಬೇಕಿಲ್ಲ, ನಾಟಿ-ಅಂಟೇ ಸಾಕು!’’

ಈ ವಾರದ ಮೂರು ಪದಗಳು:

1. Bulldozer: ನೆಲಸಮ ಮಾಡುವ ಯಂತ್ರ; ಉತ್ತರ ಪ್ರದೇಶದ ಮುಖ್ಯಮಂತ್ರಿಯ ನಿರ್ದಾಕ್ಷಿಣ್ಯತೆಗೆ ತಗುಲಿಕೊಂಡಿರುವ ವಿಶೇಷಣವೂ ಹೌದು.

2. Disclaimer: ಉತ್ತರದಾಯಿತ್ವದಿಂದ ಪೂರ್ಣವಾಗಿ ತಪ್ಪಿಸಿಕೊಳ್ಳುವುದು ಅಲ್ಲವಾದರೂ ತನ್ನ ಹೊಣೆಯ ಇತಿಮಿತಿಯನ್ನು ಮೊದಲಿಗೇ ತಿಳಿಸಿಬಿಡುವ ಹೇಳಿಕೆ.

3. Sanitizer: ಕೋವಿಡ್ ಸಮಯದಲ್ಲಂತೂ ಆಪದ್ಬಾಂಧವನೆನಿಸಿತ್ತು. ನೈರ್ಮಲ್ಯ ಮತ್ತು ಆರೋಗ್ಯ ದೃಷ್ಟಿಯಿಂದ ಅಂದಿಗೂ ಇಂದಿಗೂ ಪ್ರಸ್ತುತವೇ.

ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945