(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)
ಭೀಮಸೇನನು ದುರ್ಯೋಧನಾದಿ ಕೌರವರ ಜುಟ್ಟು ಹಿಡಿದು ಮೇಲೆತ್ತುತ್ತಿದ್ದನು. ಇಬ್ಬರು-ಮೂವರ ತಲೆಗಳನ್ನು ಒಟ್ಟಿಗೆ ಡಿಕ್ಕಿ ಹೊಡೆಸುತ್ತಿದ್ದನು. ಕೌರವರನ್ನು ಮೇಲೆಸೆದು, ಕೆಳಗೆ ಬೀಳುವ ಮುನ್ನವೇ ಅವರನ್ನು ಆತುಕೊಳ್ಳುತ್ತಿದ್ದನು. ಅವರ ಉಸಿರು ಕಟ್ಟುವಂತೆ ನೀರಿನಲ್ಲಿ ಮುಳುಗಿಸಿಬಿಡುತ್ತಿದ್ದನು. ಮರಕೋತಿಯಾಟದಲ್ಲಿ ಕೌರವರೆಲ್ಲ ಮರ ಹತ್ತಿ ಕುಳಿತಿದ್ದರೆ ಭೀಮನು ಮರದ ಕಾಂಡವನ್ನೇ ಗಟ್ಟಿಯಾಗಿ ಅಲ್ಲಾಡಿಸಿ ಅವರನ್ನು ತೊಪತೊಪನೆ ಕೆಳಗೆ ಬೀಳಿಸುತ್ತಿದ್ದನು. ಹೀಗೆ ಭೀಮನ ಚೇಷ್ಟೆಗಳಿಗೆ ಲೆಕ್ಕವೇ ಇಲ್ಲ...’ ಅಂತೆಲ್ಲ ಬಣ್ಣನೆ ಬರುತ್ತದೆ. ಭಾರತ ಸಂಸ್ಕೃತಿ ಪ್ರತಿಷ್ಠಾನವು ಶಾಲಾಮಕ್ಕಳಿಗೆ ನಡೆಸುತ್ತಿದ್ದ ರಾಮಾಯಣ-ಮಹಾಭಾರತ ಪರೀಕ್ಷೆಗಳಿಗೆ ವಾಚನಸಾಮಗ್ರಿಯಾಗಿದ್ದ ಪುಸ್ತಕಗಳ ಪೈಕಿ ‘ಕಿಶೋರ ಭಾರತ’ (ಮೈ.ನ ನಾಗರಾಜ) ಪುಸ್ತಕದಿಂದ ಎತ್ತಿಕೊಂಡ ಸಾಲುಗಳಿವು.
ಇದರಂತೆಯೇ ಅಮರಚಿತ್ರಕಥೆ ಪುಸ್ತಕದಲ್ಲಂತೂ ಭೀಮನು ಕೌರವ-ಪಾಂಡವರನ್ನು ಮರದಿಂದ ಹಣ್ಣುಗಳಂತೆ ಉದುರಿಸುವ ದೃಶ್ಯದ್ದೊಂದು ಚಿತ್ರವೂ ಇತ್ತೆಂದು ನೆನಪು. ಇತರರನ್ನು ಉದುರಿಸುವ, ಬೆದರಿಸುವ, ಚದುರಿಸುವ ಭೀಮನ ವಿಶೇಷ ಶಕ್ತಿ ಬಾಲ್ಯದಲ್ಲಷ್ಟೇ ಅಲ್ಲ, ಕುರುಕ್ಷೇತ್ರ ಯುದ್ಧಾನಂತರ ವೈಶಂಪಾಯನ ಸರೋವರದಲ್ಲಿ ಅಡಗಿಕುಳಿತ ದುರ್ಯೋಧನನನ್ನು ಕೆಣಕಿ ಅವನ ತೊಡೆ ಮುರಿವವರೆಗೂ ಮುಂದುವರಿಯಿತು. ಒಟ್ಟಿನಲ್ಲಿ ಮಹಾಭಾರತದುದ್ದಕ್ಕೂ ಮಿಕ್ಕೆಲ್ಲರದು ಒಂದು ತೂಕವಾದರೆ ಭೀಮನೊಬ್ಬನದೇ ಒಂದು ತೂಕ!
ಈ ಹಿನ್ನೆಲೆಯನ್ನಿಟ್ಟುಕೊಂಡು ಈಗ ಕೇರಂ ಆಟವನ್ನು ಗಮನಿಸೋಣ. ಸಂಖ್ಯೆಯಲ್ಲಿ ಅಲ್ಲವಾದರೂ ಬಿಳಿ ಬಿಲ್ಲೆಗಳೆಲ್ಲ ಪಾಂಡವರೆಂದೂ, ಕಪ್ಪು ಬಿಲ್ಲೆಗಳೆಲ್ಲ ಕೌರವರೆಂದೂ, ಬೇಕಿದ್ದರೆ ಕೆಂಪು ರಾಣಿಯನ್ನು ದ್ರೌಪದಿಯೆಂತಲೋ ಹಸ್ತಿನಾವತಿಯೆಂತಲೋ ಊಹಿಸೋಣ. ಹೀಗಿರಲು, ಸ್ಟ್ರೈಕರ್ಅನ್ನು ಭೀಮನಿಗೆ ಧಾರಾಳವಾಗಿ ಹೋಲಿಸಬಹುದಲ್ಲ! ಅದರಲ್ಲೂ ಆಟದ ಆರಂಭದಲ್ಲಿ ಒಂದೇ ಏಟಿಗೆ ಬಿಲ್ಲೆಗಳೆಲ್ಲ ಚದುರಿ ಚಲ್ಲಾಪಿಲ್ಲಿಯಾಗುವಂತೆ ಕೊಡುವ ಹೊಡೆತ, ಆಟದುದ್ದಕ್ಕೂ ಮಿಕ್ಕವರನ್ನು ಅಟ್ಟಾಡಿಸುವ ರೀತಿ, ಥೇಟ್ ಭೀಮನ ಪರಾಕ್ರಮವೇ. ಆದ್ದರಿಂದ ಕೇರಂ ಆಟದ strikerಗೆ ಭೀಮಬಿಲ್ಲೆ ಎಂಬ ಪದ, ಮಂಗಳೂರಿನ ಎನ್. ರಾಧಾಕೃಷ್ಣ ರೈ ಮತ್ತು ಬೆಂಗಳೂರಿನ ಎನ್.ಆರ್. ರಮೇಶ್ ಅವರು ಸೂಚಿಸಿರುವುದು, ಅತ್ಯಂತ ಸಮಂಜಸವೆನಿಸುತ್ತದೆ. ಅಲ್ಲದೇ ಭೀಮ ಎಂದರೆ ಪಾಂಡವರಲ್ಲೊಬ್ಬ ಅಂತಷ್ಟೇ ಅರ್ಥವಲ್ಲ. ಭೀಮಕಾಯ ಎಂದರೆ ಬೃಹದ್ಗಾತ್ರ. ಭೀಮಪರಾಕ್ರಮ ಎಂದರೆ ಭಯಂಕರವಾದ ಪರಾಕ್ರಮವುಳ್ಳವ. ಕೇರಂ ಆಟದಲ್ಲಿ ಬೇರೆಲ್ಲ ಬಿಲ್ಲೆಗಳಿಗಿಂತ ದೊಡ್ಡದೂ ಪರಾಕ್ರಮಿಯೂ ಆದದ್ದು ಭೀಮಬಿಲ್ಲೆ.
ಉಳಿದಂತೆ strikerಗೆ ಸಂವಾದಿಯಾಗಿ ಬೇರೆಬೇರೆ ಪದಗಳನ್ನು ಸೂಚಿಸುತ್ತ ಹಲವಾರು ಪ್ರವೇಶಿಕೆಗಳು ಬಂದಿವೆ. ‘ಗುರಿಬಿಲ್ಲೆ’ (ಅಸ್ಲಂ ತೊಂಡೇಬಾವಿ, ಪುಷ್ಪಲತಾ ಕೆ.ಎನ್, ಪದ್ಮಾ ಬೆಂಗಳೂರು, ಉಮೇಶ ಪ್ರಭು, ರಾಮಚಂದ್ರ ಐ.ಎಂ, ಸುಜನಾ ನಿಟ್ಟೂರು, ಸುನೀತಾ ನಿರಂಜನ್, ವಿಶುಕುಮಾರ್ ಕೋಲಾರ ಮುಂತಾದವರು), ‘ಹೊಡೆಬಿಲ್ಲೆ’ (ಯೋಗೀಶ ಕಾಮತ್, ಯಮನಪ್ಪ ಕೊಟ್ನಿಕಲ್, ರಾಜೇಂದ್ರ ಕಳಸಣ್ಣವರ, ಸುಮಂತ ಶ್ಯಾನುಭಾಗ್, ಡಾ.ದಯಾನಂದ ಭಟ್ಟ, ವಿದ್ಯಾಶಂಕರ ಶರ್ಮ, ಶೋಭಾ ತಿಪಟೂರು, ಪ್ರಸಾದ್ ಜಿ.ಎಸ್ ಮತ್ತಿತರರು), ‘ದಾಳಿಬಿಲ್ಲೆ’ (ಶೈಲಜ ಮೋಹನ್, ರೇಖಾ ರಾಮಕೃಷ್ಣ), ‘ದಾಳಿಗಾರ’ (ರೀನಾ ಕೆ.ಎನ್, ಶೈಲಾ ಬಾಲಕೃಷ್ಣ, ಶೀಲಾ ಜಿ.ಪಿ, ಚನ್ನಯ್ಯಸ್ವಾಮಿ ಮಿಠಾಯಿಗಾರ), ‘ದಾಳಿಕೋರ’ (ರಘುನಾಥ್ ಹಿರೇಹಳ್ಳಿ, ಅಂಜಲಿ ಬರ್ವೆ), ‘ಹೊಡೆಬಟ್ಟು’ (ವಿಜಯಕಲ ಬೆಂಗಳೂರು) ಮತ್ತು ‘ಪ್ರಹಾರಕ’ (ಮಿಥುನ್ ಗುಡ್ಡೆತೋಟ, ಭಾಗ್ಯಶ್ರೀ ಕುಲಕರ್ಣಿ, ನಿತ್ಯಾನಂದ ಬ್ರಹ್ಮಾವರ, ಕಸ್ತೂರಿ ನಾಯಕ್ ಮುಂತಾದವರು). ಕೆಲವರು ‘ಹಲಪಿ’ ಅಥವಾ ‘ಹಲಪೆ’ ಎಂಬ ಪದ ಸೂಚಿಸಿದ್ದಾರೆ. ಅಂಥದೊಂದು ಪದ ಕನ್ನಡದಲ್ಲಿರುವುದು ಹೌದು; ನಿಘಂಟುವಿನಲ್ಲಿ ವರ್ತಳಾಕಾರದ ಚಪ್ಪಟೆಯಾದ ಬಿಲ್ಲೆ ಎಂಬ ಅರ್ಥವಿರುವುದೂ ಹೌದು; ಆದರೆ ಇದು ಕೇರಂನ ಎಲ್ಲ 20 ಬಿಲ್ಲೆಗಳಿಗೂ ಅನ್ವಯವಾದೀತು, ಸ್ಟ್ರೈಕರ್ನ ಅನನ್ಯತೆಯನ್ನು ಪ್ರತಿಬಿಂಬಿಸದು.
ಇಲ್ಲಿ ಇನ್ನೊಂದು ಸ್ವಾರಸ್ಯವೇನೆಂದರೆ, ಕೇರಂ ಸಹ ಚೆಸ್(ಚದುರಂಗ)ದಂತೆಯೇ ಭಾರತದಲ್ಲಿ ಹುಟ್ಟಿದ ಆಟ. carrom ಪದದ ವ್ಯುತ್ಪತ್ತಿಯನ್ನು ಹುಡುಕಿದರೆ ಫ್ರೆಂಚ್ನ carambole ಮತ್ತು ಸ್ಪಾನಿಷ್ನ carombola ಮೂಲಕ ಅಂತಿಮವಾಗಿ ಸಿಗುವುದು ಮರಾಠಿಯ ‘ಕರಮಳ’ ಅಥವಾ ‘ಕರಂಬಲ’ ಹಣ್ಣು! ಅದೇ- ಕನ್ನಡದಲ್ಲಿ ನಕ್ಷತ್ರನೆಲ್ಲಿ, ಕಮರಾಕ್ಷಿ, ಕಮರಕ ಮುಂತಾದ ಹೆಸರುಳ್ಳ ನಕ್ಷತ್ರಹಣ್ಣು (ಸ್ಟಾರ್ ಫ್ರುಟ್). ಬಿಲಿಯಾರ್ಡ್ಸ್ ಆಟದಲ್ಲಿ ಕೆಂಪು ಚೆಂಡನ್ನೂ carrom ಎನ್ನಲಾಗುತ್ತದೆ. ಬಿಲಿಯಾರ್ಡ್ಸ್ನ ಚೆಂಡಿಗಾಗಲಿ, ಕೇರಂನ ಸ್ಟ್ರೈಕರ್ಗಾಗಲಿ ನಕ್ಷತ್ರಹಣ್ಣಿನ ಬಣ್ಣ, ಆಕಾರ ಇಲ್ಲ. ಮತ್ತೇಕೆ ಆ ಹೋಲಿಕೆ? ಬಹುಶಃ ಬಿಲಿಯಾರ್ಡ್ಸ್ನಲ್ಲಿ ಕೆಂಪು ಚೆಂಡಿನಿಂದ ಉಳಿದ ಚೆಂಡುಗಳನ್ನು, ಕೇರಂನಲ್ಲಿ ಸ್ಟ್ರೈಕರ್ನಿಂದ ಉಳಿದ ಬಿಲ್ಲೆಗಳನ್ನು ಹೊಡೆದಾಗ ಅವುಗಳ ಚಲನೆಯ ಪಥ ಅಡ್ಡಾದಿಡ್ಡಿಯಾಗಿ ನಕ್ಷತ್ರಾಕಾರವನ್ನು ಹೋಲುವುದರಿಂದ!
ಕಳೆದ ಸಲ ಕೇಳಿದ್ದ ಇನ್ನೊಂದು ಪದ copycat. ಇಂಗ್ಲಿಷ್ನಲ್ಲಿ ಇದು copy ಎಂದರೆ ನಕಲು ಮತ್ತು cat ಎಂದರೆ ಬೆಕ್ಕು ಎಂಬರ್ಥದಲ್ಲೇ ಪದಗಳು ಸೇರಿ ಆದದ್ದು. ಬೆಕ್ಕು ಎಂದರೆ ನಾವು ಮನೆಗಳಲ್ಲಿ ಸಾಕುವ ಮಾರ್ಜಾಲವೊಂದೇ ಅಲ್ಲ, ಜೀವಶಾಸ್ತ್ರದಲ್ಲಿ ಆ ಪ್ರಭೇದದ ಪ್ರಾಣಿಗಳು. ಅವುಗಳಲ್ಲಿ ಮರಿಗಳು ಸಾಮಾನ್ಯವಾಗಿ ಒಂದರ ವರ್ತನೆಯನ್ನು ಇನ್ನೊಂದು ನೋಡಿ ನಕಲು ಮಾಡಿ ಕಲಿಯುತ್ತವಂತೆ. ಆದರೆ ಒಟ್ಟಾರೆಯಾಗಿ copy ಎಂದು ಹೀಗಳೆಯುವ ಅಥವಾ ತುಚ್ಛೀಕರಿಸುವ ಧಾಟಿಯಲ್ಲೇ ಬಳಸುವುದು ವಾಡಿಕೆ. cat ಎನ್ನುವುದಕ್ಕೆ ನಕಲು ಎಂಬ ಪದ, ಪಾರ್ಸಿ ಭಾಷೆಯಿಂದ ಹಿಂದಿ ಮತ್ತು ಮರಾಠಿಯ ಮೂಲಕ ಕನ್ನಡಕ್ಕೆ ಬಂದದ್ದು ವ್ಯಾಪಕವಾಗಿ ಬಳಕೆಯಲ್ಲಿದೆ. copycat ಎಂದು ತಮಾಷೆ ಮಾಡುವುದೇ ಆದರೆ ‘ನಕಲಿಶ್ಯಾಮ’ ಎಂಬ ಪದಪುಂಜ ಸಹ ಬಳಕೆಯಲ್ಲಿದೆ.
ಹಾಸ್ಯಗಾರರನ್ನು, ಹಾಸ್ಯಕ್ಕೆಂದೇ ವೇಷ ತೊಡುವವರನ್ನು ‘ನಕಲಿಶ್ಯಾಮ’ ಎನ್ನುವುದಿದೆ. ಕಸಾಪ ನಿಘಂಟು ಸಹ ಇದನ್ನು ಪುಷ್ಟೀಕರಿಸುತ್ತದೆ. ಇಲ್ಲಿ ಶ್ಯಾಮ ಎಂದರೆ ನಾನಾ ಲೀಲೆಗಳನ್ನು ತೋರುವ ಕೃಷ್ಣಪರಮಾತ್ಮನೇ? ಅಥವಾ ಶುದ್ಧರೂಪದ ಮೂಲವಲ್ಲ ಆದ್ದರಿಂದ ಬಿಳಿಗೆ ವಿರುದ್ಧವಾಗಿ ಕಪ್ಪು ಎಂದೇ? ಒಟ್ಟಿನಲ್ಲಿ ನಕಲಿಶ್ಯಾಮ ಖ್ಯಾತನಂತೂ ಹೌದು. ಈ ಪದವನ್ನು ಸೂಚಿಸಿರುವವರು ರಂಗನಾಥ ಟಿ.ಕೆ, ವಿ.ವಿಜಯೇಂದ್ರ ರಾವ್, ಎಂ.ಕೆ ರಮೇಶ್ ಮತ್ತು ವಿಸ್ತೃತವಾದೊಂದು ಟಿಪ್ಪಣಿಯೊಂದಿಗೆ ಡಾ.ಎಸ್. ವೇಣುಗೋಪಾಲ್. ಟಿಪ್ಪಣಿಯಲ್ಲಿ ಅವರು ಚಾರ್ಲಿ ಚಾಪ್ಲಿನ್ನ ಜೀವನದಲ್ಲಿ ನಡೆಯಿತೆನ್ನಲಾದ ಒಂದು ಪ್ರಸಂಗವನ್ನೂ ಹಂಚಿಕೊಂಡಿದ್ದಾರೆ.
ಲಂಡನ್ನಲ್ಲಿ ಚಾರ್ಲಿ ಚಾಪ್ಲಿನ್ನನ್ನು ಅನುಕರಿಸುವ ಸ್ಪರ್ಧೆ ನಡೆದದ್ದು, ಆ ಕಾಲದ ಅನೇಕ ಅನುಕರಣ ಕಲಾವಿದರು ಭಾಗವಹಿಸಿದ್ದು, ಯಾರಿಗೂ ಗೊತ್ತಾಗದಂತೆ ಚಾರ್ಲಿ ಚಾಪ್ಲಿನ್ ಸಹ ಭಾಗವಹಿಸಿದ್ದು, ಫಲಿತಾಂಶ ಪ್ರಕಟವಾದಾಗ ಚಾರ್ಲಿ ಚಾಪ್ಲಿನ್ಗೆ ಎರಡನೇ ಸ್ಥಾನ ಸಿಕ್ಕಿದ್ದು ಇತ್ಯಾದಿ. ಮೂಲಕ್ಕಿಂತ ನಕಲಿಗೇ ಹೆಚ್ಚು ಮಾನ್ಯತೆ ಸಿಗುವುದು ಲೋಕದಲ್ಲಿ ಆಗಾಗ ನಡೆಯುತ್ತಿರುತ್ತದೆ. ಶಾಲೆ/ಕಾಲೇಜು ಪರೀಕ್ಷೆಯಲ್ಲಿ ಪ್ರಾಮಾಣಿಕ ವಿದ್ಯಾರ್ಥಿಗಿಂತ ನಕಲು ಮಾಡುವವರಿಗೆ ಹೆಚ್ಚು ಅಂಕಗಳು ಸಿಕ್ಕಿದಂತೆ.
‘ನಕಲುಗಾರ’ (ಎಸ್.ಕೆ. ಬೇಳೆ ಬೇಡ್ಕಿಹಾಳ, ರಶ್ಮಿ ರಾಜೇಂದ್ರ, ರವೀಂದ್ರ ಇತಾಪೆ, ಅಮರ ಭೂಸನೂರ, ಜಿ.ಎಚ್. ಸಂಕಪ್ಪ, ಶಿವಕುಮಾರ್ ಸಿಂಗಟಗೆರೆ, ಕಾಡೇಶ ವಿ.ಬಿ, ಷಡಕ್ಷರಮುನಿ ಸ್ವಾಮೀಜಿ), ‘ನಕಲಿಗ’ (ಬಿ.ಡಿ. ರವೀಂದ್ರ, ಬಲರಾಮ ಮಯ್ಯ, ನಾಗೇಶ ಫಾಟಕ್, ಕೆ.ಎ. ಭಟ್, ನಾಗಮಣಿ ಶಾಂಪೂರ), ‘ಅನುಕರಣಕಾರ’ (ರಾಜೇಶ್ವರಿ ಶಿವಮೊಗ್ಗ, ಲಲಿತಾ ಬಾಳಿಹಳ್ಳಿಮಠ, ಸಿದ್ದನಗೌಡ ಮುದಿಗೌಡ್ರ, ರಂಜಿತಾ ಹಿರೇಮಠ, ಮಲ್ಲಿಕಾ ಭಟ್, ಆನಂದರಾಮ ಮಡಿ, ಭವಾನಿ ಜೋಶಿ), ‘ಅನುಕರ್ತೃ’ (ವಿರೂಪಾಕ್ಷಪ್ಪ ಶಾಂತಗೇರಿ, ಸುರೇಂದ್ರ ಪೈ, ಡಾ.ಎಚ್.ಕೆ. ಶಂಕರಾನಂದ, ಉಮಾ ಪ್ರಭು, ಗೋಪಿನಾಥ್ ಭರಮಸಾಗರ, ಡಾ.ಎಂ.ಸಿ. ಪಾಟೀಲ) ಪದಗಳನ್ನು ಸೂಚಿಸುತ್ತ ಹಲವಾರು ಪ್ರವೇಶಿಕೆಗಳು ಬಂದಿವೆ.
ಒಳ್ಳೆಯ ಉದ್ದೇಶಕ್ಕೆ ನಕಲು ಮಾಡುವವರನ್ನು- ಉದಾಹರಣೆಗೆ ಚಲನಚಿತ್ರ ಕ್ಷೇತ್ರದಲ್ಲಿ ಬದಲಿ ಕಲಾವಿದರು, ಮನೋರಂಜನೆಗೆಂದು ಅನುಕರಣ ಮಾಡುವವರು ಇತ್ಯಾದಿ- ಕುರಿತು ಈ ಪದಗಳನ್ನು ಬಳಸಲಿಕ್ಕಾಗುತ್ತದೆ. ಆದರೆ copycatನಲ್ಲಿರುವ ವ್ಯಂಗ್ಯ ಮತ್ತು ಹೀಗಳಿಕೆ ಪರಿಣಾಮಕಾರಿಯಾಗಿ ಬರಬೇಕಾದರೆ ‘ನಕಲುಕೋರ’ (ಲೊಕೇಶಪ್ಪ ಬೆಂಗಳೂರು, ಮಧುಕರ ಸೊಪ್ಪಿನ, ಭಾರತಿ ಭಟ್, ಪಂಪಣ್ಣಗೌಡ ಯಾದಗಿರಿ, ಸೀತಾ ವ್ಯಾಸಮುದ್ರಿ, ಚಂಪಾವತಿ ಜೋಶಿ, ಗಗನ ಮತ್ತು ಜ್ಯೋತಿಕಾ ಶಿವಮೊಗ್ಗ) ಹೆಚ್ಚು ಸಮಂಜಸವೆನಿಸುತ್ತದೆ. ಉದಾಹರಣೆಗೆ, ಫೇಸ್ಬುಕ್ನಲ್ಲಿ ಈಗೀಗ ನಕಲುಕೋರರ ಹಾವಳಿ ತೀವ್ರವಾಗಿದೆ.
ಕೊನೆಯದಾಗಿ possessive ವಸ್ತುವಿರಲಿ ವ್ಯಕ್ತಿಯಿರಲಿ ಅದು ತನಗಷ್ಟೇ ಸೇರಿದ್ದು, ಬೇರೆಯವರಿಗೆ ಬಿಟ್ಟುಕೊಡೆನು ಎಂಬ ಭಾವನೆ. ಮಥುರೆಯ ವೃಂದಾವನದಲ್ಲಿ ಪ್ರತಿಯೊಬ್ಬ ಗೋಪಿಕೆಯೂ ಕೃಷ್ಣ ತನಗೊಬ್ಬಳಿಗೇ ಸೇರಿದವನು ಎಂದುಕೊಳ್ಳುತ್ತಿದ್ದಳಂತೆ. ಅವರೆಲ್ಲರಿಗಿಂತಲೂ ಉತ್ಕಟವಾಗಿ ಕೃಷ್ಣನನ್ನು ಪ್ರೀತಿಸುತ್ತಿದ್ದವಳು ರಾಧೆ. ಆಕೆಗಂತೂ ಗೋಪಿಕೆಯರ ಮೇಲಿರಲಿ ಕೃಷ್ಣನ ಕೊಳಲಿನ ಮೇಲೂ ಅಸೂಯೆ. ಲಗಾನ್ ಚಿತ್ರದ ‘ರಾಧಾ ಕೈಸೇ ನ ಜಲೇ’ ಹಾಡಿನಲ್ಲಿದು ಚೆನ್ನಾಗಿ ವ್ಯಕ್ತವಾಗಿದೆ. ವಸ್ತುಗಳ ಬಗ್ಗೆಯೂ ನಮ್ಮಲ್ಲಿ ಇಂಥದ್ದೊಂದು ಉತ್ಕಟ ವ್ಯಾಮೋಹ ಇರುವುದಿದೆ. ಚಿಕ್ಕ ಮಕ್ಕಳು ಸಾಮಾನ್ಯವಾಗಿ ತಮ್ಮತಮ್ಮ ಆಟಿಕೆಗಳನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳದಿರುವುದು ಇದೇ ಕಾರಣದಿಂದ. ಮಕ್ಕಳೇನು, ವಯಸ್ಕರು ಕೂಡ ತೀರ ಸಾಮಾನ್ಯವೆನಿಸುವ ವಸ್ತುವನ್ನು ಅತಿಯಾಗಿ ಜೋಪಾನ ಮಾಡುವ ಎಷ್ಟೋ ಉದಾಹರಣೆಗಳಿರುತ್ತವೆ. ಇದೊಂದು ರೀತಿಯಲ್ಲಿ ಮಮಕಾರ.
ಮಮ ಎಂದರೆ ನನ್ನದು, ನನಗೆ ಸೇರಿದ್ದು ಎಂದು. ಅಂತಹ ಭಾವನೆಯೇ ಮಮಕಾರ. ಅದೇನೂ ಸ್ವಾರ್ಥ ಅಥವಾ ಅಹಂಕಾರಗಳಂತೆ ಕೆಟ್ಟದಾಗಬೇಕಿಲ್ಲ, ವಿನಾಶಕಾರಿ ಎನಿಸಬೇಕಿಲ್ಲ. ‘ಮಮಕಾರ’ ಸೂಕ್ತವಾಗುತ್ತದೆನ್ನುತ್ತಾರೆ ಮೈಸೂರಿನಿಂದ ಪಿ.ಜೆ.ರಾಘವೇಂದ್ರ ಮತ್ತು ಬೆಂಗಳೂರಿನಿಂದ ಶಿವಶಂಕರ ಪ್ರಭು. ‘ಸ್ವಾಮಿತ್ವ’ (ಬಾಲಾಜಿ ಮುಜುಂದಾರ, ಕೆ.ಎಲ್. ಕಾರಂತ, ವೀಣಾ ಹಂಪಿಹೊಳಿ, ಜಿ. ನಾರಾಯಣರಾವ್, ಸತ್ಯ ಹರಿಹಳ್ಳಿ, ಗಿರೀಶ ಕೆ.ಎಸ್, ಯಶೋದಾ ಗೋಪಿ, ವಿಜಯಲಕ್ಷ್ಮಿ ಅಶೋಕ್, ದಿವ್ಯಾ ಆನಂದ್), ‘ಸ್ವಾಮ್ಯಪ್ರವೃತ್ತಿ’ (ಎನ್.ಎಸ್. ಭುಜಂಗರಾವ್, ಗೋಪಾಲಕೃಷ್ಣ ಹೆಮ್ಮಿಗೆ, ನರೇಂದ್ರನಾಥ್ ಎಚ್.ಎಂ. ಮತ್ತಿತರರು), ‘ಸ್ವಾಮ್ಯಭಾವ’ (ವಸಂತಕುಮಾರ್ ಕಲ್ಯಾಣಿ, ಮಂಜುನಾಥ ಡಿ.ಎಸ್., ಅಶೋಕ ಹಂದಿಗೋಳ, ರಜನೀಕಾಂತ ಕುಡ್ಪಿ), ‘ಸ್ವಾಮ್ಯಸೂಚಕ’ (ಈರಣ್ಣ ದುಂಡಪ್ಪ ನಾವಿ) ಸಹ ಸಂಸ್ಕೃತಭೂಯಿಷ್ಠವಾಗಿ ಸುಂದರವಾಗಿವೆ. ಇವುಗಳಿಗಿಂತ, ಪ್ರಭುಪ್ರಸಾದ್ ನಡುತೋಟ ಸೂಚಿಸಿರುವ ‘ಹುಲಿಮುದ್ದು’ ಅಚ್ಚಕನ್ನಡದ್ದಾಗಿದ್ದು ಆಕರ್ಷಕವಾಗಿದೆ. ಈವತ್ತು ಫೆ. 14ರ ವಿಶೇಷವೆಂಬಂತೆ ಕೆಲವರ ‘ಹುಲಿಮುದ್ದು’ ಪ್ರದರ್ಶನ ತುಸು ಹೆಚ್ಚೇ ಇರುತ್ತದೇನೋ!
1. ಔಟ್ಚkಛ್ಟಿ: ಬೆಲೆಬಾಳುವ ವಸ್ತುಗಳನ್ನು, ನಗ-ನಾಣ್ಯಗಳನ್ನು ಬೀಗದೊಳಗಿಟ್ಟು ಬೀಗುವ ಬೀಗರೂ ಕನ್ನಡದ ಪದವನ್ನೇ ನೆನಪಿಸಿಕೊಳ್ಳಲಿ.
2. Mಟಟ: ನಿಂತುಕೊಂಡೇ ನೆಲ ಒರೆಸಲಿಕ್ಕಾಗುವ ಸಲಕರಣೆ ಬಂದಿದೆಯಲ್ಲ, ಈ ವಸ್ತುವನ್ನು (ಒರೆಸುವ ಕ್ರಿಯೆಯನ್ನಲ್ಲ) ಕನ್ನಡದಲ್ಲಿ ಏನನ್ನೋಣ?
3. ಖಠ್ಟಿಛಿಠ್ಚಿಜಛ್ಟಿ : ಆಸ್ಪತ್ರೆಯ ದೃಶ್ಯಗಳಲ್ಲಿ ಉಳಿವು-ಅಳಿವಿನ ಹೋರಾಟದಲ್ಲಿ ರೋಗಿಯನ್ನು ಅತ್ತಿಂದಿತ್ತ ಸಾಗಿಸಲು ಬಳಸುವ ಸಾಧನ. ಇದಕ್ಕೊಂದು ಹೆಸರಿರಲಿ.
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945