ಕಟ್ಟುವೇವು ನಾವು ಕನ್ನಡ ಪದವೊಂದನು – ಶ್ರೀವತ್ಸ ಜೋಷಿ

ಪದಾನ್ವೇಷಣೆಯಲ್ಲೇ ಹಳೆಯ ನೆನಪುಗಳ ಮೆರವಣಿಗೆ

ಕನಾಕಪ ಅಂಕಣದ ಕ್ರಿಯಾಶೀಲ ಓದುಗರಲ್ಲೊಬ್ಬರು ಪದ್ಮಾವತಿ ಕೆ. ಅಯ್ಯರ್. ಮೂಲತಃ ಕೋಲಾರ ಜಿಲ್ಲೆಯ ಯಲ್ದೂರಿನವರು, ಈಗ ಬೆಂಗಳೂರಿನ ನಿವಾಸಿ. ವಿಶ್ರಾಂತ ಶಿಕ್ಷಕಿ. ವಯಸ್ಸು 83. ಕ್ರಿಯಾಶೀಲ ಎಂದಿದ್ದೇಕೆಂದರೆ ಅವರು ಪ್ರತಿ ಸಲವೂ ಅಂಕಣದ ಕೊನೆಯಲ್ಲಿ ಕೊಟ್ಟ ಮೂರು ಆಂಗ್ಲ ಪದಗಳಿಗೆ ಸಂವಾದಿಯಾಗಬಲ್ಲ ಕನ್ನಡ ಪದಗಳನ್ನು ಸೂಚಿಸುವುದಷ್ಟೇ ಅಲ್ಲ, ಪ್ರತಿಯೊಂದು ಆಂಗ್ಲ ಪದದ ವಸ್ತು ಅಥವಾ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಜ್ಞಾನಾನುಭವ ಮತ್ತು ಹಳೆನೆನಪುಗಳ ಉಗ್ರಾಣದಿಂದ ಕನಿಷ್ಠ ಏಳೆಂಟು ವಾಕ್ಯಗಳ ಟಿಪ್ಪಣಿಯನ್ನೂ ಬರೆಯುವರು.

(ಲೇಖಕರು ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)

ಕನಾಕಪ ಅಂಕಣದ ಕ್ರಿಯಾಶೀಲ ಓದುಗರಲ್ಲೊಬ್ಬರು ಪದ್ಮಾವತಿ ಕೆ. ಅಯ್ಯರ್. ಮೂಲತಃ ಕೋಲಾರ ಜಿಲ್ಲೆಯ ಯಲ್ದೂರಿನವರು, ಈಗ ಬೆಂಗಳೂರಿನ ನಿವಾಸಿ. ವಿಶ್ರಾಂತ ಶಿಕ್ಷಕಿ. ವಯಸ್ಸು 83. ಕ್ರಿಯಾಶೀಲ ಎಂದಿದ್ದೇಕೆಂದರೆ ಅವರು ಪ್ರತಿ ಸಲವೂ ಅಂಕಣದ ಕೊನೆಯಲ್ಲಿ ಕೊಟ್ಟ ಮೂರು ಆಂಗ್ಲ ಪದಗಳಿಗೆ ಸಂವಾದಿಯಾಗಬಲ್ಲ ಕನ್ನಡ ಪದಗಳನ್ನು ಸೂಚಿಸುವುದಷ್ಟೇ ಅಲ್ಲ, ಪ್ರತಿಯೊಂದು ಆಂಗ್ಲ ಪದದ ವಸ್ತು ಅಥವಾ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಜ್ಞಾನಾನುಭವ ಮತ್ತು ಹಳೆನೆನಪುಗಳ ಉಗ್ರಾಣದಿಂದ ಕನಿಷ್ಠ ಏಳೆಂಟು ವಾಕ್ಯಗಳ ಟಿಪ್ಪಣಿಯನ್ನೂ ಬರೆಯುವರು. ಅದೂ ಹೇಗೆಂದರೆ ಗೆರೆಗಳ ಹಾಳೆಯ ಮೇಲೆ ನೀಟಾಗಿ ಚಂದದ ಕನ್ನಡ ಕೈಬರಹದಲ್ಲಿ ಬರೆದು, ಕೆಳಗೆ ಹೆಸರು ವಿಳಾಸ ದೂರವಾಣಿ ಸಂಖ್ಯೆ ಎಲ್ಲ ವಿವರ ಸೇರಿಸಿ, ಪುಟದ ಛಾಯಾಚಿತ್ರ ತೆಗೆದು WhatsApp ನಲ್ಲಿ ಕಳುಹಿಸುವರು. ಈ ಸಲವಂತೂ ಮೂರು ಆಂಗ್ಲ ಪದಗಳನ್ನು ಬಿಂಬಿಸುವ ಮುದ್ದಾದ ಚಿತ್ರಗಳನ್ನೂ ಅಂತರಜಾಲದಿಂದ ಪಡೆದು ಆ ಪುಟಕ್ಕೆ ಅಂಟಿಸಿದ್ದಾರೆ! ಈ ಬಾರಿ ಅವರು ಬರೆದಿದ್ದ ಟಿಪ್ಪಣಿಗಳ ಸಾರಾಂಶವನ್ನು ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

Hanger: ಅರಿವೆ ನೇತುಹಾಕಲು ಬಳಸುವ "ಕೊಕ್ಕೆತಂತಿ'. ಸುಮಾರು 1950ರಲ್ಲಿ ನನ್ನ ಬಾಲ್ಯದಲ್ಲಿ ಧಾರವಾಡಕ್ಕೆ ಸಮೀಪದ ದಾಂಡೇಲಿಯಲ್ಲಿದ್ದೆ. ದಟ್ಟವಾದ ಕಾನನಪ್ರದೇಶ ಅದು. ಅಲ್ಲಿ ಜನರು ಎರಡು ಮರಗಳ ಆ ತುದಿ ಈ ತುದಿಗಳಿಗೆ ಕಂಬಿಗಳನ್ನು ಕಟ್ಟಿ ಬಟ್ಟೆಗಳನ್ನು ಒಣಗಿಸುತ್ತಿದ್ದರು. ಅವುಗಳನ್ನು "ಕಂಬಿಕೊಕ್ಕೆ' ಎನ್ನುತ್ತಿದ್ದರು. ಅಲ್ಲಿನ ಅಗಸರು ಬಿಳಿಬಟ್ಟೆಗಳನ್ನು ಕಾಲುವೆಗಳಲ್ಲಿ ಚೆನ್ನಾಗಿ ಒಗೆದು ಉದ್ದವಾದ ಹಗ್ಗಗಳನ್ನು ಮರಗಳಿಗೆ ಕಟ್ಟಿ ಕೊಕ್ಕೆತಂತಿಗಳಿಗೆ ಬಟ್ಟೆಗಳನ್ನು ಸಿಕ್ಕಿಸಿ ಬಿಸಿಲಲ್ಲಿ ಆರಲಿಕ್ಕೆ ಹಾಕುತ್ತಿದ್ದರು... Toothbrush: ಹಲ್ಲುಜ್ಜಲಿಕ್ಕೆ ಬಳಸುವ "ದಂತಕುಂಚ'. ಪೂರ್ವಜರು ಇದನ್ನು ಉಪಯೋಗಿಸುತ್ತಿರಲಿಲ್ಲ. ಇದ್ದಿಲನ್ನು ನುಣ್ಣಗೆ ಪುಡಿ ಮಾಡಿ ಸ್ವಲ್ಪ ಉಪ್ಪು ಬೆರೆಸಿ ಕೈಬೆರಳಿಂದ ಹಲ್ಲುಜ್ಜುತ್ತಿದ್ದರು. ಬೆರಣಿ ಸುಟ್ಟ ಬೂದಿಗೆ ಉಪ್ಪು ಮತ್ತು ಚಿಟಿಕೆ ಕರ್ಪೂರ ಬೆರೆಸಿ ಹಲ್ಲುಜ್ಜುವ ಪುಡಿ ತಯಾರಿಸುತ್ತಿದ್ದದ್ದೂ ಇದೆ. ಅದಿಲ್ಲದಿದ್ದರೆ ಬೇವಿನಕಡ್ಡಿಯಿಂದ ಹಲ್ಲುಜ್ಜುತ್ತಿದ್ದರು. ಮಕ್ಕಳಿಗೂ ಇದೇ ಪದ್ಧತಿಯನ್ನು ರೂಢಿ ಮಾಡಿಸುತ್ತಿದ್ದರು. ಶಾಲೆಯಲ್ಲಿ ನಿತ್ಯವೂ ಶಿಕ್ಷಕರು ಹಲ್ಲುಗಳನ್ನು ಪರೀಕ್ಷಿಸುತ್ತಿದ್ದರು. ಹಲ್ಲುಗಳು ಫಳಫಳ ಶಂಖುವಿನಂತೆ ಹೊಳೆಯುತ್ತಿರಬೇಕು ಎನ್ನುತ್ತಿದ್ದರು. ಹೊಳಪುಳ್ಳ ಹಲ್ಲುಗಳಿಗೆ ಬಹುಮಾನವೂ ಸಿಗುತ್ತಿತ್ತು. ಈಗ ಹತ್ತು ಗಂಟೆಯಾದರೂ ಕುಂಚದಿಂದ ಹಲ್ಲುಜ್ಜುತ್ತ ಮನೆಯೊಳಗೆಲ್ಲ ತಿರುಗಾಡುತ್ತಿರುತ್ತಾರೆ. ಇಂಥವರಿಗೆ ಯಾವ ಬಹುಮಾನ ಕೊಡುವುದು? Vacuum cleaner: "ಕಸಹೀರುಕ'. ಈ ಕಾಲದಲ್ಲಿ ಬಗ್ಗಿ ಗುಡಿಸುವವರಿಲ್ಲ, ಬಗ್ಗಿ ಸಾರಿಸುವವರೂ ಇಲ್ಲ. ಎಲ್ಲ ಕೆಲಸಗಳೂ ನಿಂತೇ ಮಾಡುವುದು. ಪ್ರಾಯ ನಲ್ವತ್ತಕ್ಕೆಲ್ಲ ಕೈಕಾಲು ಬೇನೆ ಆರಂಭ. ಶ್ರೀಮಂತರ ಮನೆಗಳಲ್ಲಿ ರೋಬೋ ಯಂತ್ರಮಾನವ ಬಂದುಬಿಟ್ಟಿದೆ. ಬಟ್ಟೆ ತೊಳೆಯಲು ಯಂತ್ರ, ಕಸ ಗುಡಿಸಲು ಯಂತ್ರ, ಮುಸುರೆ ತಿಕ್ಕಲಿಕ್ಕೂ ಯಂತ್ರ. ಹಿಂದಿನಂತೆ ಕಷ್ಟಕರ ಕೆಲಸ ಇಲ್ಲ. ಶ್ರಮದಾನ ಎಂಬುದು ಗೊತ್ತೇ ಇಲ್ಲ!

ಹಿರಿಯರ ಬಾಳಮುಸ್ಸಂಜೆಯ ಇಂತಹ ಹಿನ್ನೋಟಗಳು ಸತ್ತ್ವಯುತ ಮತ್ತು ಬೋಧಪ್ರದವೇ ಆಗಿರುತ್ತವೆ. ಭಾಷೆ&ಬದುಕು ಆ ಕಾಲದಲ್ಲಿ ಅದೆಷ್ಟು ಸರಳವೂ ಶುದ್ಧವೂ ಆಗಿದ್ದವೆಂದೂ ತಿಳಿಯುತ್ತದೆ. ಇರಲಿ, ಕಳೆದ ಸಲ ಅಂಕಣದಲ್ಲಿ ಕೇಳಿದ್ದ ಮೂರು ಆಂಗ್ಲ ಪದಗಳಿಗೆ ಬಂದಿರುವ ಪ್ರವೇಶಿಕೆಗಳನ್ನು ನೋಡುವುದಾದರೆ& Hanger ಪದಕ್ಕೆ ಬಹುಜನರ ಆಯ್ಕೆ "ತೂಗುಕೊಕ್ಕೆ'. ಆಕಾರ ಮತ್ತು ಕಾರ್ಯವಿಧಾನವನ್ನು ಸಮರ್ಥವಾಗಿ ಬಿಂಬಿಸುವ ಪದವಿದು. ಸೂಚಿಸಿದವರು: ಶಶಿಕಲಾ ಮೋಟೆಬೆನ್ನೂರು, ರೂಪಾ ದಾವಣಗೆರೆ, ಅನಂತರಾಜ ಮೇಲಾಂಟ, ಜಿ.ಎಚ್. ಸಂಕಪ್ಪ, ರವಿಶಂಕರ್ ಮೈಸೂರು, ಎಚ್.ಎಸ್. ಮಂಜುನಾಥ, ಶ್ಯಾಮರಾಜ ಉಡುಪ, ಸುಜಾತಾ ಸುಪ್ರಸನ್ನ, ಅಂಜಲಿ ರ್ಬವೆ, ಸುಜಾತ ಕುರ್ಪಾಡ್, ವಿ.ವಿಜಯೇಂದ್ರ ರಾವ್, ಡಾ.ದಯಾನಂದ ಭಟ್ಟ ಮುಂತಾದವರು. ಅದೇ ತರ್ಕದಿಂದ "ನೇಲುಕೊಕ್ಕೆ' ಅಥವಾ "ನೇತುಕೊಕ್ಕೆ' ಸಹ ಮಾನ್ಯವೇ. ಸೂಚಿಸಿದವರು: ಗಂಗಾ ಹೆಗಡೆ, ಗುರುಪ್ರಸನ್ನ ಚಿಂತಾಮಣಿ, ಸತ್ಯನಾರಾಯಣ ಸಿ.ಎಸ್, ಅನಿತಾ ಕಿಶೋರ್ ಮತ್ತಿತರರು. ಬಟ್ಟೆ ಒಣಗಿಸಲಿಕ್ಕೆ ಅಥವಾ ಬೀರುವಿನೊಳಗೆ ತೂಗಿಡಲಿಕ್ಕೇ ಈ ಕೊಕ್ಕೆಗಳ ಬಳಕೆ ಆದ್ದರಿಂದ "ಬಟ್ಟೆಕೊಕ್ಕೆ' ಅಥವಾ "ಅರಿವೆಕೊಕ್ಕೆ' (ವೀಣಾ ಹಂಪಿಹೊಳಿ, ವಿರೂಪಾಪ್ಪ ಶಾಂತಗೇರಿ, ಪ್ರಭುಪ್ರಸಾದ್ ನಡುತೋಟ) ಸಹ ಪರಿಗಣಿಸಬಹುದು. "ನೇತಾಡಿಕೆ' (ವರಲ್ಮ ಸುರತ್ಕಲ್, ರಾಜೇಂದ್ರ ಕಳಸಣ್ಣವರ, ಸಂಗಮೇಶ ನಾಡಗೌಡ್ರ), "ತೂಗುಹಿಡಿಕೆ' (ಎಂ.ಸಿ ಕೋಮಲ, ರಮ್ಯ ಎಸ್.), "ತೂಗಣಿ' (ದಿನೇಶ ಶೆಟ್ಟಿ ಕಡಬ, ಎಚ್.ಎಸ್. ಸುಬ್ರಹ್ಮಣ್ಯ, ಶೈಲಾ ಬಾಲಕೃಷ್ಣ), "ತೂಗುವಂಕಿ' (ಡಾ. ಅನಿಲಕುಮಾರ್) ಮತ್ತು "ಬಟ್ಟೆಕೊಂಡಿ' (ಸುಬ್ರಹ್ಮಣ್ಯ ಎಸ್) ಕೂಡ ತರ್ಕಬದ್ಧವಾಗಿವೆ.

Toothbrush ಎನ್ನಲಿಕ್ಕೆ ಬಹುಸಂಖ್ಯೆಯ ಪ್ರವೇಶಿಕೆಗಳಲ್ಲಿ ಸೂಚಿತವಾಗಿರುವುದು ಶುದ್ಧ ಕನ್ನಡದ "ಹಲ್ಲುಜ್ಜುಗ' (ರಾಜೇಶ್ವರಿ ಶಿವಮೊಗ್ಗ, ಸೀತಾ ವ್ಯಾಸಮುದ್ರಿ, ಹೊನ್ನಿ ಭಟ್ಟ, ಅನಿಲಕುಮಾರ ಕಮಲಾಕರ ಹೆಗಡೆ, ಸಾವಿತ್ರಿ ಬೇಡಕಿಹಾಳ, ಗೋಪಿನಾಥ್ ಭರಮಸಾಗರ, ಎಸ್.ಕೆ. ಶಿವಪ್ಪ, ನಾಗೇಶ ಫಾಟಕ್, ಜಿ.ನಾರಾಯಣ ರಾವ್, ರಾಮಚಂದ್ರ ಬಡಗಾಬೆಟ್ಟು, ಕೆ.ಅಮರ್, ಬೊ.ನಾ. ಕೃಷ್ಣಮೂರ್ತಿ, ಗೋಪಾಲ ಜೋಶಿ, ಯು.ಎನ್. ಸಂಗನಾಳಮಠ, ಜಯಲ್ಮ ಅಡಿಗ, ಶಶಿಕಲಾ ನರೇಂದ್ರನಾಥ್, ಜಿ.ಕೆ ಲ್ಮನರಸಿಂಹಯ್ಯ, ಸುನೀತಾ ನಿರಂಜನ, ರೂಪಕಲ ಸದಾನಂದ, ವಿಶ್ವರಾಜ್ ಕೋಲಾರ, ಬಿ.ಆರ್. ಪದ್ಮನಾಭನ್ ಮತ್ತು ಮಿಸ್ಕಿನ್ ಕುಟುಂಬ ಸದಸ್ಯರು) ಮತ್ತು ಸುಸಂಸ್ಕೃತ "ದಂತಕುಂಚ' (ಎನ್.ವಿ. ಶಂಕರ್, ಕುಸುಮ ಡಿ.ಎನ್., ಸುಧಾ ಪ್ರಸಾದ್, ಮೋ.ಬ. ವೀರೇಶ, ಶಿವಕುಮಾರ ಸಿಂಗಟಗೆರೆ, ವೈ.ಎಂ. ರಾಜಶೇಖರ, ಟಿ.ವಿ. ಮಣಿ, ಅಂಜನಾ ತುಮಕೂರು, ದರ್ಶನ ಕೆ.ಎಸ್., ಭಾಗ್ಯಶ್ರೀ ಕೆ.ಸಿ, ಉಮಾ ಪ್ರಭು, ನಿತ್ಯಾನಂದ ಬ್ರಹ್ಮಾವರ, ವಿಜಯಕಲ ವಿಟ್ಲ, ಮನೋನ್ಮಣಿ ಕೆ.ವಿ, ನರೇಂದ್ರನಾಥ ಎಚ್.ಎಂ, ಶೋಭಾ ತಿಪಟೂರು, ಎನ್.ಟಿ ಹೆಗಡೆ, ಚಂದ್ರಕಾಂತ ಜೋಶಿ ಮುಂತಾದವರು). "ದಂತಕೂರ್ಚ' ಎಂಬ ಸಂಸ್ಕೃತ ಪದ ಮತ್ತೆ ಕೆಲವರ (ವಿಜಯಕುಮಾರ ಪಿ.ಕುಲಕರ್ಣಿ, ಉಷಾಕಿರಣ ಅತ್ತಾವರ, ವಿದ್ಯಾ ಫಡ್ಕೆ, ಶೇಷಗಿರಿ ಎಚ್.ಎಸ್, ರಾಜೇಂದ್ರ ಬೆಂಗಳೂರು, ಎನ್.ಆರ್. ರಮೇಶ್, ವಸಂತಕುಮಾರ್ ಕಲ್ಯಾಣಿ, ಸುಮಾ ಬೇಲೂರು, ಡಾ.ಓಂ ಪ್ರಕಾಶ್, ನಿಹಾರಿಕಾ ನಯನಾ, ನಂದಾ ಕುಲಕರ್ಣಿ, ಎಂ. ಶ್ರೀನಿವಾಸ ಭಟ್ ಪದ್ಮಾ ಬದರಿನಾಥ್ ಮತ್ತಿತರರ) ಆಯ್ಕೆ. ಕನ್ನಡದ ಸೊಗಡಿಗೆ ಹೊಂದುವ "ಹಲ್ಜುಂಗು' ಆಗಬಹುದೆನ್ನುತ್ತಾರೆ ಚೇತನ್ ಎಸ್. ಬೆಂಗಳೂರು. ಹಳೆಯ ಕಾಲವನ್ನು ನೆನಪಿಸುವ "ಹಲ್ಲುಕಡ್ಡಿ' ಎಂದೇ ಹೇಳಬಹುದು ಎನ್ನುತ್ತಾರೆ ಗೋಪಾಲಕೃಷ್ಣ ಹೆಮ್ಮಿಗೆ ಮತ್ತು ಕೇಶವ ಚಂದ್ರ. "ಉಜ್ಜುಕಡ್ಡಿ' ಸಾಕೆನ್ನುತ್ತಾರೆ ವಿದ್ಯಾಶಂಕರ ಶರ್ಮ.

ತೆಲುಗಿನಲ್ಲಿ "ಪಳ್ಳಬುರುಸು' ಎಂದು ಹೇಳುತ್ತಾರಾದರೆ ಕನ್ನಡದಲ್ಲೂ "ಹಲ್ಲುಬುರುಸು' ಎನ್ನಬಹುದಲ್ವಾ ಅಂತ ಕೇಳಿದ್ದಾರೆ ಅನಂತಕೃಷ್ಣ ಶಿವಮೊಗ್ಗ, ವಿಜಯಲ್ಮ ಜಾಬಿ, ಶೋಭಾ ಪಿ.ಭಟ್ಟ, ಮತ್ತು ಶಿವಶಂಕರ ಪ್ರಭು. ಇಂಗ್ಲಿಷ್‌ನ Artist ಪದ ಅಪಭ್ರಂಶವಾಗಿ ಬರ್ಸ್ ಎಂದು ತುಳು ಭಾಷೆಯಲ್ಲೂ ಬಳಕೆಯಾಗುತ್ತದೆ. ಕೇದಗೆಯನ್ನು ಹೋಲುವ ಸಸ್ಯವೊಂದಿದೆ, ತುಳುವಿನಲ್ಲಿ "ಮುಂಡೇವು' ಅಂತಾರೆ. ನದಿಯ ಎರಡೂ ದಂಡೆಯಲ್ಲಿ ಯಥೇಚ್ಛವಾಗಿ ಸಿಗುತ್ತದೆ. ಅದರ ಕಾಂಡವನ್ನು ಒಂದೊಂದು ಅಡಿಯಷ್ಟು ತೆಗೆದುಕೊಂಡು ಮುಂದಿನ ನಾಲ್ಕು ಇಂಚಿನಷ್ಟು ಭಾಗವನ್ನು ಕಲ್ಲಿನಿಂದ ಜಜ್ಜಿದರೆ ಸೊಗಸಾದ ಬರ್ಸ್ (Brush) ತಯಾರು. ಗೋಡೆಗೆ ಸುಣ್ಣ ಬಳಿಯಲಿಕ್ಕೂ ಇದೇ ಬರ್ಸ್ ಉಪಯೋಗಿಸುತ್ತೇವೆ. ಆದ್ದರಿಂದ ಹಲ್ಲುಜ್ಜುವ ಸಾಧನವನ್ನು "ಹಲ್ಬರ್ಸ್' ಅಂತ ಧಾರಾಳವಾಗಿ ಕರೆಯಬಹುದು ಎಂದು ಯಶೋದಾ ಎಂ.ಗೋಪಿ ಅವರ ವಿವರಣೆ.

ಸಂಸ್ಕೃತಭೂಯಿಷ್ಠ ಪದಗಳು ಅರ್ಥಪೂರ್ಣವಿರುತ್ತವೆ, ಭಾರತೀಯ ಭಾಷೆಗಳಲ್ಲೆಲ್ಲ ಬಳಕೆಯ ಸಾಧ್ಯತೆ ಹೊಂದಿರುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಜನಸಾಮಾನ್ಯರ ಬಳಕೆಗೆ ಅವು ತುಸು ಭಾರವೆನಿಸಬಹುದು. ತೀರ ಗ್ರಾಂಥಿಕವೆಂದು ತೋರಬಹುದು. ಉದಾಹರಣೆಗೆ ಕಳೆದಸಲ ಕೇಳಿದ್ದ Vacuum cleaner ಎನ್ನುವುದಕ್ಕೆ "ನಿರ್ವಾತ ಮಾರ್ಜಕ', "ನಿರ್ವಾತ ಚೋಷಕ', "ನಿರ್ವಾಯು ಸ್ವಚ್ಛಕ', "ವಾಯುರಹಿತ ಶುಚಿಕಾರಕ' ಮುಂತಾಗಿ ಸಂಸ್ಕೃತ ಬಳಸಿ ಪದಶಃ ತರ್ಜುಮೆ ಮಾಡಿ ಪಡೆದ ಪದಗಳನ್ನು ಕೆಲವು ಓದುಗರು ಸೂಚಿಸಿದ್ದಾರೆ. ತಪ್ಪೇನಿಲ್ಲ. ಶಿಷ್ಟ ಬರೆವಣಿಗೆಯಲ್ಲಿ, ಪ್ರೌಢಪ್ರಬಂಧಗಳಲ್ಲಿ ಬಳಕೆಗೆ ಇವು ಯೋಗ್ಯವಾಗಿಯೇ ಇವೆ. ಆದರೆ ದೈನಂದಿನ ಆಡುಮಾತಿನಲ್ಲಿ, ಅಂಗಡಿಯಲ್ಲಿ ವ್ಯಾಪಾರಿಗಳೊಡನೆ ಸಂಭಾಷಣೆಯಲ್ಲಿ ಬಳಕೆಗೆ ಸಾಧ್ಯವೇ? ಅದಕ್ಕಿಂತ ಅಚ್ಚಕನ್ನಡದ "ಹೀರುಪೊರಕೆ' ತುಂಬ ಒಳ್ಳೆಯ ಆಯ್ಕೆ. ಏಕೆಂದರೆ ಅದು ಪೊರಕೆಗೊಂದು ಯಾಂತ್ರಿಕ ಬದಲಿಯೂ ಹೌದು, ಕಸವನ್ನು ಹೀರಿಕೊಳ್ಳುವುದು ಅದರ ಕಾರ್ಯವಿಧಾನವೂ ಹೌದು. ಸೂಚಿಸಿದವರು: ಕೆ.ಎಂ ಮಧ್ವರಾಯ, ವಿನಾಯಕ ಕಾಮತ್, ಮನೋಹರ ರಾಯಚೂರು, ಮಹಾಲಿಂಗಂ ಎಚ್.ಆರ್. ಮತ್ತು ಯಮನಪ್ಪ ಕೊಟ್ನಿಕಲ್. "ಸೆಳೆ ಪೊರಕೆ' (ರವೀಂದ್ರ ಕುಡ್ಪಿ), "ಹೀರುಬರಲು' (ಮಂಜುನಾಥ ಡಿ.ಎಸ್) ಮತ್ತು "ಹೀರುಸೂಡಿ' (ಗಿರೀಶ ಕೆ.ಎಸ್) ಕೂಡ ಅದೇ ಕಾರಣಕ್ಕೆ ಒಳ್ಳೆಯದೆನಿಸುತ್ತವೆ. "ಕಸಹೀರುಕ' ಅಥವಾ "ಕಸಹೀರುಗ' ಸಹ ಬಹಳಷ್ಟು ಪ್ರವೇಶಿಕೆಗಳಲ್ಲಿ (ಅನಿತಾ ಕೊಡದಗುಡ್ಡಮಠ, ಡಾ.ರಂಗನಾಥ ಕಟ್ಟಿ, ರಂಗನಾಥ ಟಿ.ಕೆ, ಬಸವರಾಜ ನರಸಣ್ಣವರ, ನರಸಿಂಹಯ್ಯ ಬಾಳಿಲ, ಸುದರ್ಶನ ಭಟ್ಟ, ಕಾಡೇಶ ವಿ.ಬಿ, ಅನಸೂಯಾ ಪಾಟೀಲ್, ರಾಮಚಂದ್ರ ಐ.ಎಂ, ನಾಗಮಣಿ ಶಾಂಪುರ್, ಸಿದ್ದನಗೌಡ ಮುದಿಗೌಡ್ರ, ಎಸ್.ಕೆ ಮಂಜುಳಾ, ಶಾಂತ ಎನ್.ಎಸ್, ಗುರುರಾಜ ಗಲಗಲಿ, ಡಾ.ಸಂಗಮೇಶ ಸುರಭಿ, ಕಂಪಲಾಪುರ ಎಸ್. ಮೂರ್ತಿ, ಮಮತಾ ಕುಂದಾಪುರ) ದಾಖಲಾಗಿದೆ.

ಈ ವಾರದ ಮೂರು ಪದಗಳು

  • Berth: ರೈಲು ಪ್ರಯಾಣದ ವೇಳೆ ಸಾಮಾನ್ಯವಾಗಿ ಬಳಕೆಯಾಗುತ್ತದೆ, ಪಯಣಿಸುತ್ತಿರುವಾಗಲೇ ಮಲಗಲಿಕ್ಕೆ ವ್ಯವಸ್ಥೆ.

  • Rush: ಬಿಡುವಿಲ್ಲದ ಕೆಲಸಗಳು ಸೇರಿದಾಗಿನ ಪರಿಸ್ಥಿತಿ. ಕೆಲವರಿಗೆ ಹಾಗಿಲ್ಲದಿದ್ದರೂ ತೋರ್ಪಡಿಕೆಗೆ ಹೇಳಲಿಕ್ಕೊಂದು ನೆಪ.

  • Waving: ಮನ್ನಾ ಎನ್ನಬಹುದೇನೋ, ಆದರೆ ಅದೂ ಕನ್ನಡದ್ದಲ್ಲ. ಇನ್ನಾವ ಪದ ಹೊಳೆಯುತ್ತದೆ ಯೋಚಿಸುವಿರಾ?

ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. WhatsApp ಸಂಖ್ಯೆ: +12404010945