ಅಂಕಣ

ಪದ ಕಟ್ಟುವವರಂತೆಯೇ ಪದ ಪ್ರಚಾರಕರೂ ಬೇಕು!

ಮೋಹನ್​ ಶೆಟ್ಟಿ

(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)

ಕನ್ನಡ ಪದ ಕಟ್ಟುವ ಈ ರಚನಾತ್ಮಕ ಕೆಲಸದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿರುವ ಎಲ್ಲರಿಗೂ ರಾಜ್ಯೋತ್ಸವ ಸಂದರ್ಭದಲ್ಲಿ ಶುಭಾಶಯಗಳು. ಪದ ಕಟ್ಟುವವರು ಎಂದಷ್ಟೇ ಹೇಳಿದರೆ ಸಾಲದು, ಬೇರೆಬೇರೆ ರೀತಿಯಲ್ಲಿ ಇದರೊಂದಿಗೆ ಕೈಜೋಡಿಸಿದವರು ಇದ್ದಾರೆ. ಇಂಥಿಂಥ ಆಂಗ್ಲ ಪದಗಳನ್ನು ಪಟ್ಟಿಗೆ ಸೇರಿಸಿಕೊಳ್ಳಿ ಎಂದು ಸೂಚಿಸುವವರು ಇದ್ದಾರೆ. ಕಟ್ಟಿರುವ ಹೊಸ ಪದಗಳನ್ನು ಆಗಲೇ ಬಳಸತೊಡಗಿದವರೂ ಇದ್ದಾರೆ, ಟ್ರಾಫಿಕ್ ಜ್ಯಾಮ್ ಬದಲಿಗೆ ‘ಸಂಚಾರ ಸಿಕ್ಕು’ ಎಂದೇ ಬರೆದು ವಿಜಯವಾಣಿ ಪತ್ರಿಕೆಯೂ ಮಾದರಿಯಾಗಿದೆ. ಮತ್ತೆ ಕೆಲವರು ಈ ಸರಣಿಯಲ್ಲಿ ಮೂಡಿಬಂದ ಪದಗಳನ್ನು ಇತರರಿಗೆ ಪರಿಚಯಿಸುವ, ಪ್ರಚುರಪಡಿಸುವ ಕೆಲಸವನ್ನೂ ಸದ್ದುಗದ್ದಲವಿಲ್ಲದೆ ಮಾಡುತ್ತಿದ್ದಾರೆ.

‘ನಮ್ಮ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕ ಕೇಶವಚಂದ್ರರ ನೇತೃತ್ವದಲ್ಲಿ ಒಂದು ಅಭಿಯಾನ ನಡೆಸುತ್ತಿದ್ದೇವೆ. ಕನ್ನಡದಲ್ಲಿ ಸರಳ ಸಂಭಾಷಣೆ ವಾಕ್ಯಗಳು, ಪದಬಳಕೆ ತಪ್ಪು-ಒಪ್ಪು, ಆಂಗ್ಲಪದಗಳಿಗೆ ಸಮಾನಾರ್ಥಕ ಕನ್ನಡ ಪದಪರಿಚಯ ಮುಂತಾಗಿ ಪ್ರತಿದಿನವೂ ಒಂದು ದೊಡ್ಡ ಫಲಕದ ಮೇಲೆ ಎಲ್ಲ ವಿದ್ಯಾರ್ಥಿಗಳ ಓದಿಗಾಗಿ ಬರೆಯುತ್ತೇವೆ. Safety pin ಮತ್ತು expiry date ಪದಗಳಿಗೆ ಈ ಹಿಂದೆ ಅಂಕಣದಲ್ಲಿ ಕಟ್ಟಲಾದ ‘ಮುಚ್ಚುಮುಳ್ಳು’ ಮತ್ತು ‘ತೀರುತೇದಿ’ ಪದಗಳನ್ನೇ ಬಳಸಿದ್ದೇವೆ’ ಎಂದು ಮೊನ್ನೆಯಷ್ಟೇ ಬೆಂಗಳೂರಿನಿಂದ ಚೇತನಕುಮಾರ್ ಬರೆದು ತಿಳಿಸಿದ್ದಾರೆ. ಪ್ರಶಂಸಾರ್ಹವಾದ ಇನ್ನೊಂದು ಕೆಲಸ ನಡೆದಿರುವ ಉದಾಹರಣೆ ವಿಜಯಪುರದ ಬಿಡಿಇ ಸಂಸ್ಥೆಯ ಬಾಲಕಿಯರ ಪದವಿಪೂರ್ವ ವಿದ್ಯಾಲಯದಿಂದಲೂ ಬಂದಿದೆ. ಅಲ್ಲಿ ಗಣಿತಶಾಸ್ತ್ರ ಉಪನ್ಯಾಸಕ ರಘೂತ್ತಮ ಅರ್ಜುಣಗಿ ನಿರ್ದೇಶನದಲ್ಲಿ ವಿದ್ಯಾರ್ಥಿನಿಯರು ಕೈಬರಹದಿಂದ ಭಿತ್ತಿಪತ್ರಗಳನ್ನು ರಚಿಸಿದ್ದಾರೆ.

ಪ್ರತಿಯೊಂದರಲ್ಲಿ ಒಂದೊಂದು ಆಂಗ್ಲಪದ ಮತ್ತು ಸಮಾನಾರ್ಥಕವಾದ ಕನ್ನಡಪದ. ‘ತಂಗೆನೆ’ (ice cream), ‘ಚಿತ್ರಾಕರ್ಷಕ’ (photogenic), ‘ಗಾಜುರೆಪ್ಪೆ’ (wipers), ‘ಅಂಟಿಕೆ’ (sticker), ‘ಯುಕ್ತಾಹಾರ’ (diet) ಮುಂತಾಗಿ ಎಲ್ಲವೂ ಈ ಅಂಕಣದಲ್ಲಿ ಬಂದಿರುವ ಪದಗಳೇ. ಜೊತೆಗೆ ಕನ್ನಡದ ಹಿರಿಮೆ-ಗರಿಮೆಗಳ ಬಗೆಗೊಂದು ಸೂಕ್ತಿ. ವಿದ್ಯಾಲಯದ ಎಲ್ಲ 21 ವರ್ಗಕೋಣೆಗಳ ಗೋಡೆ ಮೇಲೆ ಈ ಭಿತ್ತಿಪತ್ರಗಳು ರಾರಾಜಿಸಲಿವೆಯಂತೆ. ಸ್ವಾರಸ್ಯವೆಂದರೆ ಇದೇ ಅಂಕಣದಲ್ಲಿ ಹಲವು ಕನ್ನಡ ಪದಗಳನ್ನು ಸೂಚಿಸುತ್ತ ಸಕ್ರಿಯವಾಗಿ ಭಾಗವಹಿಸುತ್ತಿರುವ, ವೃತ್ತಿಯಲ್ಲಿ ಕಟ್ಟಡ ನಿರ್ಮಾಣ ಅಭಿಯಂತರಾಗಿರುವ, ವಿಜಯಪುರದವರೇ ಆದ ಸುಧೀರ ಟಂಕಸಾಲಿಯವರನ್ನು ಇಂದಿನ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರಂತೆ! ನಿಜಕ್ಕೂ ಹೀಗೆ ಜನಸಾಮಾನ್ಯರೇ ಪ್ರೀತಿಯಿಂದ ಕನ್ನಡವನ್ನು ಉಳಿಸಿ-ಬೆಳೆಸುವವರು. ರಾಜಕಾರಣಿಗಳಿಂದ, ಮಂತ್ರಿಮಾಗಧರಿಂದ, ಆಂಗ್ಲಭಾಷಾ ವ್ಯಾಮೋಹದ ಪೊಳ್ಳು ಪ್ರತಿಷ್ಠೆಯವರಿಂದ, ಕೊನೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಂಥವುಗಳಿಂದ ಕೂಡ ನಾವು ಹೆಚ್ಚಿನದೇನನ್ನೂ ನಿರೀಕ್ಷಿಸಬೇಕಿಲ್ಲ.

ಇದಿಷ್ಟು ರಾಜ್ಯೋತ್ಸವ ಪ್ರಯುಕ್ತ ಟಿಪ್ಪಣಿಗಳು. ಈಗಿನ್ನು ಕಳೆದ ಸಲ ಕೊಟ್ಟಿದ್ದ ಇಂಗ್ಲಿಷ್ ಪದಗಳ ವಿಲೇವಾರಿ. ಮೊದಲನೆಯದು Drug peddler. ಇದರಲ್ಲಿ peddler ಪದದ ಅರ್ಥ ಚಿಕ್ಕಪುಟ್ಟ ವಸ್ತುಗಳನ್ನು ಮಾರುತ್ತ ಸಂಚರಿಸುವವನು ಎಂದು. ಪಾದಚಾರಿ ಎಂಬರ್ಥದ ಲ್ಯಾಟಿನ್ ಭಾಷೆಯ pedarius ಇದರ ಪದಮೂಲ. ಈಗ ಅಂಥವರೇನೂ ಕಾಲ್ನಡಿಗೆಯಿಂದಲ್ಲ, ವಿಮಾನಗಳಲ್ಲಿ ಹಾರಾಡುತ್ತ ದಂಧೆ ನಡೆಸುತ್ತಾರೆನ್ನಿ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಅಮೆರಿಕನ್ ಇಂಗ್ಲಿಷ್​ನಲ್ಲಿ Peddler ಎಂದು ಸ್ಪೆಲ್ಲಿಂಗ್. ಬ್ರಿಟಿಷ್ ಇಂಗ್ಲಿಷ್​ನಲ್ಲಾದರೆ Pedlar. ಹಾಗೆಯೇ ಈ್ಠ ಎಂಬುದರ ವಾಚ್ಯಾರ್ಥವು ಯಾವುದೇ ರೀತಿಯ ಔಷಧ ಅಂತ ಇರುವುದು ಹೌದಾದರೂ ಧ್ವನ್ಯಾರ್ಥವಿರುವುದು ಮಾದಕ ದ್ರವ್ಯ ಎಂದೇ. ಮಾದಕ ವಸ್ತುಗಳನ್ನು, ಬಹುಮಟ್ಟಿಗೆ ಕಳ್ಳಸಾಗಾಣಿಕೆ ಮೂಲಕ, ವ್ಯಾಪಾರ ಮಾಡುವವನನ್ನೇ ಡ್ರಗ್ ಪೆಡ್ಲರ್ ಎನ್ನುವುದು. ಇದನ್ನು ‘ಔಷಧ ವ್ಯಾಪಾರಿ’ ಎಂದು ಪದಶಃ ಅನುವಾದಿಸಿದರೆ ಅಷ್ಟೇನೂ ಸರಿಯಾಗದು. ಅದಕ್ಕಿಂತ, ಡ್ರಗ್​ಗೆ ಸಮಾನಾರ್ಥಕವಾಗಿ ‘ಮದ್ದು’ ಅಥವಾ ‘ಮರ್ದು’ ಎಂಬ ಅಚ್ಚಕನ್ನಡ ಪದ ಬಳಸಬಹುದು.

ಮದ್ದಿಗೆ ಔಷಧ ಎಂಬ ವಾಚ್ಯಾರ್ಥ ಮಾತ್ರವಲ್ಲದೇ ಆಹಾರದೊಡನೆ ಬೆರೆಸಿಕೊಡುವ ಒಂದು ಬಗೆಯ ನಂಜು, ವಶೀಕರಣಗೊಳಿಸುವ ಸಾಧನ ಮುಂತಾದ ಧ್ವನ್ಯಾರ್ಥಗಳೂ ಇರುವುದರಿಂದ ಚೆನ್ನಾಗಿ ಹೊಂದುತ್ತದೆ. ವ್ಯಾಪಾರಿಯ ಬದಲಿಗೆ ಅದೇ ಅರ್ಥದ ‘ಮಾರಾಳಿ’ ಎಂಬ ಅಚ್ಚಕನ್ನಡ ಪದ ಬಳಸಬಹುದು. ಇದು ಮಾರು ಎಂಬ ಕ್ರಿಯಾಧಾತುವಿಗೆ ಆಳಿ ಪ್ರತ್ಯಯ ಸೇರಿ ಆಗಿರುವುದು. ಜೂಜಾಳಿ, ವಾಚಾಳಿ, ಪಾಠಾಳಿ ಇತ್ಯಾದಿಯಂತೆ. ಹೀಗೆ ಡ್ರಗ್ ಪೆಡ್ಲರ್​ನನ್ನು ಕನ್ನಡದಲ್ಲಿ ‘ಮದ್ದುಮಾರಾಳಿ’ ಎನ್ನಬಹುದು. ‘ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಮದ್ದುಮಾರಾಳಿಗಳ ಬಂಧನ’ ಎಂದು ಪತ್ರಿಕೆಗಳ ತಲೆಬರಹದಲ್ಲೂ ಬಳಸಬಹುದು. ಅನುಪ್ರಾಸವಿರುವ ಇಂತಹ ಪದಪುಂಜಗಳನ್ನು ನೆನಪಿಟ್ಟುಕೊಳ್ಳುವುದಕ್ಕೂ ಸುಲಭ. ಓದುಗರು ಸೂಚಿಸಿರುವ ಇತರ ಪದಗಳ ಪೈಕಿ ‘ನಶೆವಸ್ತು ದಂಧೆಕೋರ’ (ಎಂ.ಕೆ.ರಮೇಶ್ ಮತ್ತು ನಾಗಮಣಿ ಶಾಂಪುರ್) ಯೋಗ್ಯವಾಗಿದೆ. ‘ಕಳ್ಳ ಗಂದಿಗ’ (ಯಶೋದಾ ಗೋಪಿ), ‘ಕಳ್ಮದ್ದುಗಾರ’ (ಕೃಷ್ಣ ಬರ್ವೆ) ಅರ್ಥಪೂರ್ಣವಾಗಿವೆ. ‘ನಶೆ ವ್ಯಾಪಾರಿ’ (ಅದ್ರಿಜಾ ಪ್ರಕಾಶ್), ‘ನಶೆ ವಣಿಕ’ (ಕಂಪಲಾಪುರ ಶ್ರೀನಿವಾಸ್) ಸಹ ಚೆನ್ನಾಗಿವೆ. ‘ನಶಾಚರ’ (ಪ್ರಭುಪ್ರಸಾದ್ ನಡುತೋಟ) ಮತ್ತು ‘ನಶಾಪಾದಿ’ (ಶಶಿಧರ ಕಟ್ಟಿಮನಿ) ವ್ಯಾಪಾರವನ್ನು ಸೂಚಿಸುತ್ತಿಲ್ಲವಾದರೂ ಪೆಡ್ಲರ್​ನ ಮೂಲಾರ್ಥಕ್ಕೆ ಹತ್ತಿರವಾಗಿವೆ. ‘ಅಮಲ್ದಾರ’ (ಜಯರಾಮ ಪಣಿಯಾಡಿ) ಆಗಬಹುದಿತ್ತು, ಆದರೆ ಅದು ಜಮೀನಿಗೆ ಸಂಬಂಧಿಸಿದ ಬೇರೆ ಅರ್ಥದಲ್ಲಿ ಬಳಕೆಯಲ್ಲಿರುವುದರಿಂದ ಸರಿಯೆನಿಸದು.

ಎರಡನೆಯ ಪದವಿದ್ದದ್ದು Pattern ಹಳೆಯ ಇಂಗ್ಲಿಷ್​ನಲ್ಲಿ ಇದು patron ಎಂದೇ ಇದ್ದದ್ದಂತೆ. ಪೊರೆಯುವವನು, ಪ್ರಮಾಣವಾಗಿ ಉಳ್ಳವನು, ಆದರ್ಶ ಪುರುಷ ಎಂಬರ್ಥದಲ್ಲಿ. ಸುಮಾರು 15ನೆಯ ಶತಮಾನದಿಂದೀಚೆಗಷ್ಟೇ pattern ಪದವನ್ನು repeated decorative design ಎಂಬರ್ಥದಲ್ಲಿ ಬಳಸುತ್ತಿರುವುದು. ಈ ದೃಷ್ಟಿಯಿಂದ ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ವಿನ್ಯಾಸ, ಮಾದರಿ, ನಮೂನೆ, ಶೈಲಿ ಮುಂತಾದುವು ಸೂಕ್ತವಾಗಿಯೇ ಇವೆ. ಬಹಳಷ್ಟು ಓದುಗರು ಈ ಪದಗಳನ್ನೇ ಸೂಚಿಸಿದ್ದಾರೆ. ಉಳಿದಂತೆ ‘ರೂಪಿಕೆ’ (ಜಿ.ಸುಬ್ರಹ್ಮಣ್ಯ, ಗೋಪಿನಾಥ ರಾವ್, ಗಗನ ಮತ್ತು ಜ್ಯೋತಿಕಾ ಶಿವಮೊಗ್ಗ) ಸಹ ಚೆನ್ನಾಗಿದೆ. ‘ಆವರ್ತಿತ ವಿನ್ಯಾಸ’ (ಡಾ.ದಯಾನಂದ ಭಟ್ಟ) ತುಸು ಗ್ರಾಂಥಿಕವೆನಿಸಿದರೂ ಇಂಗ್ಲಿಷ್ ಅರ್ಥವನ್ನು ಚೆನ್ನಾಗಿ ಧ್ವನಿಸುತ್ತದೆ. ಇವೆಲ್ಲಕ್ಕಿಂತ, ‘ಚಿತ್ರ’ ಅಥವಾ ‘ಪ್ರತಿಕೃತಿ’ ಎಂಬರ್ಥದ ಮತ್ತು ಉಚ್ಚಾರಣೆಗೂ ಸುಲಭವಾಗಿರುವ ಕನ್ನಡ ಪದ ‘ಚಿತ್ತಾರ’ (ಪ್ರಕಾಶ್ ಬಿ. ಮೈಸೂರು, ಮೈಥಿಲಿ ಬಿ.ಜಿ., ನಟರಾಜು ಬಿ.ಎಸ್., ಪ್ರಕಾಶ್ ಬಿ.ಎಸ್.) ಸುಂದರವಾಗಿ ಸರಿಹೊಂದುವಂತಿದೆ. ‘ಆಕಾಶದಾಗೆ ಯಾರೋ ಮಾಯಗಾರನು... ಚಿತ್ತಾರ ಮಾಡಿ ಹೋಗೋನೇ...’ ರಾಮಾಚಾರಿ ಚಿತ್ರದ ಜನಪ್ರಿಯ ಹಾಡನ್ನೂ ನೆನಪಿಸುವಂತಿದೆ.

ಮೂರನೆಯದು Screwdriver.. ಈಗೇನಾದರೂ ಬುದ್ಧನು ಕಿಸಾಗೌತಮಿಗೆ ಹೇಳುವುದಿದ್ದರೆ ‘ಸ್ಕ್ರೂಡ್ರೖೆವರ್ ಇಲ್ಲದ ಮನೆಯಿಂದ ಸಾಸಿವೆಕಾಳುತಾ!’ ಎನ್ನುತ್ತಿದ್ದನೇನೋ. ಅಷ್ಟೂ ಸರ್ವವ್ಯಾಪಿ, ಸರ್ವಜನೋಪಯೋಗಿ ಉಪಕರಣವಿದು. ಇದಕ್ಕೆ ಅತಿಸೂಕ್ತವಾದ ಕನ್ನಡ ಪದ ‘ತಿರುಪುಳಿ’. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲೂ ಕೊಟ್ಟಿದ್ದಾರೆ. ತಿರುಪು ಎಂದರೆ ಸ್ಕ್ರೂ. ಉಳಿ ಎಂದರೆ ಸ್ಕ್ರೂ ತಲೆಮೇಲಿನ ಸರಳರೇಖೆಯಂಥ ಅಚ್ಚಿಗೆ ಹೊಂದಿಕೊಳ್ಳುವ ಅಲಗು ಇರುವ, ಹಿಡಿದುಕೊಳ್ಳಲಿಕ್ಕೊಂದು ಹಿಡಿಕೆಯಿರುವ ಪರಿಕರ. ತಿರುಪನ್ನು ಬಿಗಿ/ಸಡಿಲಗೊಳಿಸಲಿಕ್ಕೆ ಬಳಕೆಯಾಗುವ ಉಳಿಯೇ ತಿರುಪುಳಿ. ಸೂಚಿಸಿದವರು: ಎಸ್.ಎನ್. ಮಂಜುಳಾ, ಮೀನಾಕ್ಷಿ ಟಕ್ಕಳಕಿ, ಯಶೋದ ಪಾಂಡವಪುರ, ಚಂಪಾವತಿ ಜೋಶಿ, ನಿತ್ಯಾನಂದ ಬ್ರಹ್ಮಾವರ, ರವೀಂದ್ರ ಮುನ್ನೋಳಿಮಠ, ರಂಗನಾಥ ಟಿ.ಕೆ., ವಿದ್ಯಾಶಂಕರ ಶರ್ಮ, ಭಾಗ್ಯಶ್ರೀ ಕೆ.ಸಿ., ಗೋಪಾಲ ಜೋಶಿ, ಷಡಕ್ಷರಮುನಿ ಸ್ವಾಮೀಜಿ, ಎ.ಪಿ. ಉಡುಪ, ಪ್ರಕಾಶ ಉಮರಾಣಿ, ಜಿ. ನಾರಾಯಣ ರಾವ್, ಮಂಜುನಾಥ ಡಿ.ಎಸ್. ಮುಂತಾದವರು. ಹಾಗೆಯೇ ‘ತಿರುಪಣಿ’ ಸಹ ನಿಘಂಟುವಿನಲ್ಲಿದೆ. ಸೂಚಿಸಿದವರು: ಚಂದ್ರಶೇಖರ ಕೆ., ಭವಾನಿ ಜೋಶಿ, ಸುಪ್ರಸನ್ನ ಸಿ.ಜಿ., ಅಮೂಲ್ಯ ಮೈಸೂರು, ಸಂಜೀವ ಜೋಶಿ, ಯು. ಪರಮೇಶ್ವರ ಭಟ್, ಗಿರಿಜಾ ಲಕ್ಷ್ಮೀಕಾಂತ್, ಡಾ. ಸಂಗಮೇಶ ಸುರಭಿ, ಜಿ.ಕೆ. ಲಕ್ಷ್ಮೀನರಸಿಂಹಯ್ಯ ಮುಂತಾದವರು.

‘ತಿರುಪು ಚಾಲಕ’ ಎಂದು ಪದಶಃ ಅನುವಾದ ಆಗಬಹುದೆನ್ನುವವರು: ಗಿರೀಶ ಫಡ್ಕೆ, ಗೋಪಾಲಕೃಷ್ಣ ಹೆಮ್ಮಿಗೆ, ಚಂದ್ರಿಕಾ ಹೆಗಡೆ, ದೇವೇಂದ್ರ ಕಡೂರು, ದಾಮೋದರ ಭಟ್ ಮುಂತಾದವರು. ‘ಭದ್ರಬಂಧಕ’ (ಸತ್ಯ ಹರಿಹಳ್ಳಿ) ಮತ್ತು ‘ಹಮ್ಮುಗೆ’ (ಸುರೇಂದ್ರ ಪೈ) ಸಹ ಗಮನಾರ್ಹವಾಗಿವೆ. ಮರಾಠಿಯಲ್ಲಿ ‘ಮಾರತುಲ’ ಎಂಬ ಪದ ಬಳಕೆಯಾಗುತ್ತದೆಂದು ಕೂಡ ಒಬ್ಬಿಬ್ಬರು ತಿಳಿಸಿದ್ದಾರೆ. ತಿರುಪು-ತಿರುಪುಳಿಗಳ ಸಂವಾದ ರೀತಿಯ ಚಿಕ್ಕದೊಂದು ಕವಿತೆ ಹೊಸೆದು ಕಳುಹಿಸಿದ್ದಾರೆ ಬೆಂಗಳೂರಿನಿಂದ ಸಿ.ಆರ್. ಮೋಹನಕುಮಾರ್. ‘ನಾ ತಿರುಪುಳಿ ನೀ ತಿರುಪು... ನಾವಿಬ್ಬರೂ ಈಗ ಬದಲಾಗಿದ್ದೇವೆ. ನನಗೀಗ ಎರಡು ರೀತಿಯ ತಲೆ: ಒಂದು ಉಳಿಯ ರೀತಿ, ಮತ್ತೊಂದು ನಕ್ಷತ್ರ ರೀತಿ. ನೀನೂ ಸಹ ದ್ವಿರೂಪಿ: ಬೈತಲೆ ಹಾಗೂ ನಕ್ಷತ್ರತಲೆ... ಹೇ ತಿರುಪೇ ಬಾ ನಿನ್ನ ತಲೆಮೇಲೆ ನಾ ಸವಾರಿ ಮಾಡುತ್ತೇನೆ... ಬಡಗಿ ಒಂದೇ ಕಕ್ಷೆಯಲ್ಲಿ ನಮ್ಮಿಬ್ಬರನ್ನೂ ತಿರುಗಿಸುತ್ತಾನೆ, ನಿನ್ನನ್ನು ಜೋಡಣೆ ಭದ್ರತೆಗೆ ಒಳನೂಕುತ್ತಾನೆ, ನನ್ನನ್ನು ಸಲಕರಣೆ ಪೆಟ್ಟಿಗೆಯಲ್ಲಿ ಎಸೆಯುತ್ತಾನೆ...

ನಾನಿದ್ದರೆ ಮಾತ್ರ ನೀ ಎರಡು ಹಲಗೆಗಳ ಜೋಡಣೆಗೆ ಒಳನುಗ್ಗಲು ಸಾಧ್ಯ, ಬಡಗಿಯ ಜೋಡಣೆ ತಪ್ಪಾದರೆ ನೀ ಹೊರ ಬರಲಿಕ್ಕೂ ನಾನಿರಬೇಕು. ಹೇ ತಿರುಪೇ ನೀ ಹೊರ ಬರಬೇಕಾದರೆ ತಿರುಪುಳಿ ತಿರುಪುಳಿ ಎಂದು ಕರೆ, ನಾ ಪೆಟ್ಟಿಗೆಯಿಂದ ಹೊರಬರುವೆ!’ ಎಂದು ಸಾಗುತ್ತದೆ ಕವಿತೆ. ಇದರಲ್ಲಿ ನಕ್ಷತ್ರತಲೆ ಅಂದರೆ ಗೊತ್ತಾಯ್ತಲ್ಲ? ಫಿಲಿಪ್ಸ್ ಎಂಬ ಹೆಸರೂ ಇರುವ ಸ್ಟಾರ್ ಸ್ಕ್ರೂಡ್ರೖೆವರ್. ಬೇಕಿದ್ದರೆ ಅದನ್ನು ‘ತಾರೆತಿರುಪುಳಿ’ ಎಂದು ಕರೆಯೋಣ!

ಈ ತಿಂಗಳಿಡೀ ಇದು ಅನುದಿನದ ಅಂಕಣ!

ಈಗ ಇಲ್ಲೊಂದು ಸಿಹಿಸುದ್ದಿ. ನವೆಂಬರ್ ತಿಂಗಳಿಡೀ ‘ಕಟ್ಟುವೆವು ನಾವು ಕನ್ನಡದ ಪದವೊಂದನು’ ಅಂಕಣ ಪ್ರತಿದಿನವೂ ಪ್ರಕಟವಾಗುತ್ತದೆ. ದಿನಕ್ಕೊಂದರಂತೆ ಇಂಗ್ಲಿಷ್ ಪದ ಕೊಟ್ಟು ಆವತ್ತೇ ಸಂಜೆ 4 ಗಂಟೆವರೆಗೆ ಓದುಗರಿಂದ ಕನ್ನಡ ಪದಗಳನ್ನು ಸ್ವೀಕರಿಸಿ, ಆಯ್ದ ಕೆಲವನ್ನು ಸೂಚಿಸಿದವರ ಹೆಸರಿನೊಂದಿಗೆ ಮಾರನೆ ದಿನದ ಸಂಚಿಕೆಯಲ್ಲಿ ಪ್ರಕಟಿಸಲಾಗುತ್ತದೆ.  ಇಂದಿನ ಇಂಗ್ಲಿಷ್ ಪದ Build Up. ‘ಸ್ವಾಮೀ, ಸುಮ್ಮನೇ ಇಷ್ಟೆಲ್ಲ ಬಿಲ್ಡಪ್ ಯಾಕೆ ಕೊಡ್ತೀರಾ, ನಿಜವಾದ ಕೆಲಸ ತೋರಿಸಿ!’ ಎನ್ನುವಲ್ಲಿನ ಬಿಲ್ಡಪ್ ಏನು? ಓದುಗರು ತಮ್ಮ ಹೆಸರು, ಊರು ತಿಳಿಸುತ್ತ ಇಂದು ಸಂಜೆ 4 ಗಂಟೆಯೊಳಗೆ ಕನ್ನಡ ಪದ ಕಳುಹಿಸಬೇಕಾದ ವಾಟ್ಸ್​ಆಪ್ ಸಂಖ್ಯೆ: +12404010945.