ಮತ್ತೊಬ್ಬರ ಮುಖದಲ್ಲಿ ಸಣ್ಣನಗುವನ್ನೂ ಅರಳಿಸದ ಜೀವನಕ್ಕೆ ಏನು ಅರ್ಥವಿದೆ...? ಭಾವನೆಗಳಿಗೆ ಸ್ಪಂದಿಸುವ ಅನನ್ಯ ಶಕ್ತಿ ಮನುಜ ಮನಸ್ಸುಗಳಿಗಿದೆ. ಬಾಂಧವ್ಯ, ಭಾವನೆಗಳ ವಿನಿಮಯ, ಸಹಾನುಭೂತಿ, ದಯೆ, ಕರುಣೆ, ಸಾಂತ್ವನ... ಇವು ಮನುಷ್ಯನ ಅಂತ@ಕರಣವನ್ನು ಶ್ರೀಮಂತಗೊಳಿಸಬೇಕು. ಆದರೀಗ ಮೀತಿಮೀರಿದ ಸ್ವಾರ್ಥವು ಸಂಬಂಧ, ಬಾಂಧವ್ಯಗಳನ್ನು ಆಪೋಶನ
ಮತ್ತೆ ಮತ್ತೆ ಈ ಬಗೆಯ ಅಪಸವ್ಯಗಳನ್ನು ಕಾಣುತ್ತಲೇ ಇದ್ದೇವೆ. ಹಾಗೆ ವಾಸ್ತವದಲ್ಲಿ ಕರೊನಾ ಮಾನವೀಯ ಸಂಬಂಧಗಳನ್ನು ಮತ್ತಷ್ಟು ಆಪ್ತ, ಬಿಗಿಗೊಳಿಸಬೇಕಿತ್ತು. "ಇರುವಷ್ಟು ದಿನದಲ್ಲೇ ಬದುಕು ಸಾರ್ಥಕಪಡಿಸಿಕೊಳ್ಳಬೇಕು' ಎಂದು ಕರೊನಾ ಪಾಠ ಕಲಿಸಿದರೂ, ಎಷ್ಟೋ ಜನ 100 ವರ್ಷ ವ್ಯಾಲಿಡಿಟಿ ಹೊಂದಿದವರಂತೆ, ಬದುಕಿನ ಸತ್ಯಗಳನ್ನು ಕಂಡೂ, ಜಾಣಮೌನ ವಹಿಸಿದ್ದಾರೆ. ಹೌದು, ಕಳೆದ ಒಂದೂವರೆ ವರ್ಷಗಳಲ್ಲಿ ಸಂಬಂಧಗಳು "ದ್ವೀಪ'ಗಳಾಗಿವೆ. ಆತ್ಮಾವಲೋಕನಕ್ಕೆ ಸಿಕ್ಕ ಅವಕಾಶವನ್ನೂ ಹಾಳುಮಾಡಿಕೊಂಡು, ವ್ಯವಸ್ಥೆಯನ್ನು, ಮತ್ತೊಬ್ಬರನ್ನು ಬೈದುಕೊಂಡೇ ಓಡಾಡುತ್ತಿದ್ದೀವಲ್ಲ, ಅಂತರಂಗಕ್ಕೆ ಏನು ಉತ್ತರ ಕೊಡೋದು? ಭಾವಬಂಧಗಳ ಕೋಟೆಯಲ್ಲಿ ಇಂಥ ಬಿರುಕು ಕಾಣಿಸಿಕೊಂಡಿರುವುದಾದರೂ ಏತಕ್ಕೆ? ಮತ್ತೊಬ್ಬರ ದು@ಖಕ್ಕೆ ಮರುಗದಿದ್ದರೆ, ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಈ ಮಾನವ ಜನ್ಮಕ್ಕೇನು ಪ್ರಯೋಜನ?
ಅಷ್ಟಕ್ಕೂ ಮಾನವ ಸಹಜ ಸ್ವಭಾವಕ್ಕೆ ವಿರುದ್ಧವಾಗಿ ಬದುಕುವ ಹಠವೇಕೆ? ಮುಂಚೆಯೆಲ್ಲ "ಭಾವನಾತ್ಮಕ ಬೆಂಬಲ' ಎನ್ನುವುದು ತುಂಬ ಸಹಜವಾಗಿ ನಮ್ಮವರಿಂದಲೇ, ಆಪ್ತರಿಂದಲೇ ದೊರೆಯುತ್ತಿತ್ತು. ಸುಮ್ಮನೇ ಗಮನಿಸಿ. ಇನ್ನೂ ಸ್ಪಷ್ಟವಾಗಿ ಮಾತನಾಡಲು ಬರದ ಮೂರು ವರ್ಷದ ಮಗು ಕೂಡ ತನಗಿಂತ ಪುಟ್ಟ ಮಗುವನ್ನು ಕಂಡಾಗ ಮುದ್ದು ಮಾಡುತ್ತದೆ, ಆರೈಕೆ ಮಾಡಲು ಪ್ರಯತ್ನಿಸುತ್ತದೆ. ಜಗತ್ತಿನ ಯಾವುದರ ಬಗ್ಗೆಯೂ ಅರಿವಿಲ್ಲದ ಆ ಮಗುವಿನ ಅಂತ@ಕರಣ ಎಷ್ಟು ವಿಶಾಲ! ನಮ್ಮದ್ದೆಲ್ಲ ಹೊರಗಿನ ಜಗತ್ತು ವಿಶಾಲವಾಗುತ್ತಿದ್ದರೂ, ಆಂತರ್ಯದ ಪ್ರಪಂಚ ಮಾತ್ರ ತುಂಬ ಕಿರಿದಾಗುತ್ತಿದೆ. ಅಲ್ಲಿ ಸ್ನೇಹಕ್ಕೆ, ಸಣ್ಣ ಕರುಣೆಗೆ ಜಾಗವಿಲ್ಲ. ಹಾಗಾಗಿಯೇ ಸ್ವಾರ್ಥ ಎದೆಯಂಗಳವನ್ನು ಆವರಿಸಿಕೊಂಡು, ಹುಚ್ಚಾಪಟ್ಟೆ ಕುಣಿಯುತ್ತಿದೆ. "ಯಾವುದೇ ರೀತಿಯಲ್ಲಾದರೂ ಬೇರೆ ಒಬ್ಬನೇ ಒಬ್ಬ ವ್ಯಕ್ತಿಗಾದರೂ ಸಂತೋಷವನ್ನು ತರುವಂತಹ ಕೆಲಸವನ್ನು ಮಾಡಲು ಮುಂದಾಗುವುದು ಪ್ರಾಜ್ಞನ ಲಕ್ಷಣ. ಸುತ್ತಲಿನವರಲ್ಲಿ ಸಂತೋಷವನ್ನು ಹರಡುವುದೇ ನಿಜವಾದ ಈಶ್ವರಪೂಜೆ' ಎನ್ನುತ್ತದೆ ಸೂಕ್ತಿಯೊಂದು. "ಜೀವಸೇವೆ' ಎಂಬುದು ಭಗವದಾರಾಧನೆಗೆ ಇರುವ ಸುಲಭ ಮಾರ್ಗವೂ ಹೌದು. ಜೀವನವನ್ನು ಇತರರೊಡನೆ ಹಂಚಿಕೊಳ್ಳುವುದರಿಂದ ಮಾತ್ರ ಆನಂದ&ಇದುವೇ ಸಾತ್ತ್ವಿಕ ಜೀವನದೃಷ್ಟಿಯ ಹೃದಯ!
ಈ ಟನೆಯನ್ನು ಖ್ಯಾತ ಲೇಖಕ ಡಾಮಿನಿಕ್ ಲ್ಯಾಪಿಯೆರ್ ದಾಖಲು ಮಾಡಿದ್ದಾರೆ. ಬಂಗಾಳದಲ್ಲಿ ಬೇಸಿಗೆಯ ಒಂದು ಮಧ್ಯಾಹ್ನ ಗದ್ದೆಯೊಂದರ ಬದುವಿನ ಮೇಲೆ ಪುಟ್ಟ ಬಾಲಕಿಯೊಬ್ಬಳು ಭಾರದ ಪುಸ್ತಕಗಳನ್ನು ಹೊತ್ತು ಸಾಗುತ್ತಿದ್ದಳು. ಶಾಲೆಯಿಂದ ಹಿಂದಿರುಗುತ್ತಿದ್ದ ಆಕೆ, ಹಸಿವಿನಿಂದ ಬಳಲಿದ್ದು, ಮುಖಭಾವದಲ್ಲೇ ಎದ್ದುಕಾಣುತ್ತಿತ್ತು. ಆ ಸ್ಥಿತಿಯಲ್ಲೂ ಆ ಬಾಲಕಿ ಲ್ಯಾಪಿಯೆರ್ಗೆ ನಮಸ್ಕರಿಸಿ ಮುಂದೆ ಸಾಗಿದಳು. ಲ್ಯಾಪಿಯೆರ್ ಕಿಸೆ ತಡಕಾಡಿದಾಗ ಅಲ್ಲಿ ಒಂದು ಬಿಸ್ಕತ್ ಮಾತ್ರ ಇದ್ದಿತು. ಅದನ್ನು ಅವಳಿಗೆ ಕೊಟ್ಟರು. ಆಕೆ ಕೆಲ ಹೆಜ್ಜೆ ಮುಂದಿಟ್ಟಾಗ, ಬಡಕಲು ನಾಯಿಯೊಂದು ಎದುರಾಯಿತು. ಆ ಸ್ಥಿತಿಯಲ್ಲಿ ಬೇರೆಯವರು ಇದ್ದರೆ ನಾಯಿಯನ್ನು ರ್ನಿಲಸಿ ಹೋಗಿಬಿಡುತ್ತಿದ್ದರೇನೋ. ಆ ಬಾಲಕಿ ತನ್ನಲ್ಲಿದ್ದ ಒಂದು ಬಿಸ್ಕತ್ತನ್ನು ಮುರಿದು, ಅರ್ಧವನ್ನು ನಾಯಿಗೆ ತಿನ್ನಿಸಿ, ಬೆನ್ನು ಸವರಿ ಮುಂದೆ ನಡೆದಳು. ಲ್ಯಾಪಿಯೆರ್ ಆ ದೃಶ್ಯ ನೋಡಿ ಮಂತ್ರಮುಗ್ಧರಾದರಲ್ಲದೆ, "ಜೀವನವನ್ನು ಹಂಚಿಕೊಳ್ಳುವುದರ ಅತ್ಯಂತ ಸುಂದರ ಪಾಠವನ್ನು ಭಾರತ ಅಂದು ನನಗೆ ಕಲಿಸಿತು' ಎಂದಿದ್ದಾರೆ (ಸೂಕ್ತಿ&ಸಂಚಯ, ಸುಭಾಷಿತ ಸಂಗ್ರಹ: ಲೇಖಕರು: ಎಸ್.ಆರ್.ರಾಮಸ್ವಾಮಿ).
ಕರೊನಾಪೀಡಿತ ಎಂದು ಗೊತ್ತಾದ ತಕ್ಷಣ ಎಷ್ಟೋ ಜನರು ಆ ವ್ಯಕ್ತಿ ಬಿಡಿ, ಅವರ ಮನೆ ಸುತ್ತಮುತ್ತ ಸುಳಿದಾಡಲೂ ಹೆದರುತ್ತಾರೆ. ಆದರೆ, ತುಮಕೂರು ಜಿಲ್ಲೆಯ ತಿಪಟೂರಿನ ಕುಮಾರ ಆಸ್ಪತ್ರೆಯ ಸಂಸ್ಥಾಪಕ ಡಾ.ಶ್ರೀಧರ್ ಕರೊನಾ ರೋಗಿಗಳ ಸಮೀಪವೇ ಹೋಗಿ ಚಿಕಿತ್ಸೆ ನೀಡಿದ್ದಾರೆ. ಭಯದಲ್ಲಿದ್ದ ಕೋವಿಡ್ ರೋಗಿಗಳಿಗೆ ಬೆನ್ನು ಸವರಿ ಧೈರ್ಯ ತುಂಬಿದ್ದಾರೆ. ನೂರು ಹಾಸಿಗೆ ಸಾಮರ್ಥ್ಯದ ಅವರ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ್ದಷ್ಟೇ ಅಲ್ಲದೆ, ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ. ಐಸಿಯು ಚಿಕಿತ್ಸೆಗೂ ಹಣ ಪಡೆದಿಲ್ಲ. ಎರಡನೇ ಅಲೆ ಅಬ್ಬರದ ವೇಳೆ ನೂರು ಹಾಸಿಗೆಗಳು ಭರ್ತಿಯಾದಾಗ ತಿಪಟೂರಿನ ಮೊದಲ ಕೋವಿಡ್ ಆರೈಕೆ ಕೇಂದ್ರ ಆರಂಭಿಸಿದರು. ಮೊದಲಿಗೆ 40 ಬಳಿಕ 80 ಹಾಸಿಗೆ ಸಾಮರ್ಥ್ಯಕ್ಕೆ ಅದನ್ನು ಹೆಚ್ಚಿಸಿದರು. "ಕರೊನಾಗಿಂತ ಅದರ ಭಯಕ್ಕೇ ಹೆಚ್ಚು ಜನರು ಹೈರಾಣಾಗಿದ್ದಾರೆ. ಕೆಲವರು ಮೊದಲಿಗೆ ರ್ನಿಲಸಿ, ಕೊನೆಕ್ಷಣಕ್ಕೆ ಚಿಕಿತ್ಸೆ ಪಡೆಯಲು ಮುಂದಾದರು. ಅವರಿಗೆಲ್ಲ ಸಮಾಧಾನ, ಧೈರ್ಯ, ಸರಿಯಾದ ತಿಳಿವಳಿಕೆಯ ಅಗತ್ಯವಿತ್ತು. ಆ ಕೊರತೆಯನ್ನು ನೀಗಿಸುವ ಕೆಲಸ ಮಾಡಿದೆ ಅಷ್ಟೇ. ಇನ್ನು, ಉಚಿತ ಚಿಕಿತ್ಸೆ. ಇದು ದೊಡ್ಡ ಮಾನವೀಯ ಸಂಕಟವಾಗಿರುವುದರಿಂದ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸ್ಪಂದಿಸಬೇಕು. ದುಡ್ಡು ಮಾಡಲು ಬೇಕಾದಷ್ಟು ಸಮಯವಿದೆ' ಎನ್ನುತ್ತ ಪ್ರೀತಿಯ ಮಾತುಗಳಿಂದಲೇ ಅರ್ಧ ಕಾಯಿಲೆ ಗುಣಮಾಡುತ್ತಾರೆ ಡಾ.ಶ್ರೀಧರ್.
ಪ್ರತಿಭಾವಂತ ನಟ ಸಂಚಾರಿ ವಿಜಯ್ ಅವರ ಅಕಾಲಿಕ ಸಾವು ಎಲ್ಲರನ್ನೂ ದಂಗುಬಡಿಸಿದೆ. ಈ ನೋವಿನಲ್ಲೂ ಅವರ ಕುಟುಂಬ ವರ್ಗವು ವಿಜಯ್ ಅಂಗಾಂಗ ದಾನ ಮಾಡಿ, ಸಾರ್ಥಕತೆ ಸಾಧಿಸಿದ್ದು, ಸಾಧಾರಣ ಸಂಗತಿಯೇನಲ್ಲ. ಇತರರಿಗೆ ನೆರವಾಗಬೇಕೆಂಬ ಒಳ್ಳೆಯ ಮನಸ್ಸು ಸದಾ ತುಡಿಯುತ್ತಿದ್ದರೆ ಇಂಥದ್ದೆಲ್ಲ ಸಾಧ್ಯ. "ಅವನು/ಅವಳು ಎಮೋಷನಲ್ ಬಿಡಿ' ಎಂದು ಕೆಲವರು ಅದೇನೋ "ದೌರ್ಬಲ್ಯ' ಎಂಬಂತೆ ಮೂದಲಿಸುತ್ತಾರೆ. ಆದರೆ, ಮನುಷ್ಯ ಮಾತ್ರವಲ್ಲ ಪ್ರಾಣಿಗಳೂ ಭಾವನಾಜೀವಿಗಳೇ. ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ (ಜೂನ್ 14) ಒಂದು ವರ್ಷ ಪೂರೈಸಿದ ನಿಮಿತ್ತ ಅವರ ಸಹೋದರಿಯರು ಮನೆಯಲ್ಲಿ ಪೂಜೆ, ಹೋಮ ಆಯೋಜನೆ ಮಾಡಿದ್ದರು. ಸುಶಾಂತ್ ೋಟೋಗೆ ಹೂವಿನ ಅಲಂಕಾರ ಮಾಡಿ, ಮೇಜಿನ ಮೇಲೆ ಇರಿಸಿದ್ದರು. ಆ ಮನೆಯ ಶ್ವಾನ ಬಂದು ಸುಶಾಂತ್ ೋಟೋ ಎದುರಿಗೆ ಪೂಜೆ ಮುಗಿಯುವರೆಗೆ ಮೌನವಾಗಿಯೇ ಕುಳಿತುಕೊಂಡು, ಶ್ರದ್ಧಾಂಜಲಿ ಸಲ್ಲಿಸಿತು. ಆದರೆ, ಕರೊನಾ ಕಾಲದಲ್ಲಿ ಮನುಷ್ಯರೇ ಸಾವಿನ ನತೆಯನ್ನು ಮರೆಯುತ್ತಿದ್ದಾರೆ. ಗಂಗಾನದಿಯಲ್ಲಿ ಪತ್ತೆಯಾದ ಸಾಲು&ಸಾಲು ಶವಗಳನ್ನು ಕಂಡಾಗ, ರಸ್ತೆಮಧ್ಯದಲ್ಲೇ ಆಂಬುಲೆನ್ಸ್ ಚಾಲಕರು ಶವವನ್ನು ಇಳಿಸಿ ಹೋದಾಗ, ಸ್ಮಶಾನದಲ್ಲಿ ಅರೆಬೆಂದ ಶವಗಳನ್ನು ಕಂಡಾಗ ಮಾನವೀಯತೆಗೆ ಎಂಥ ಗ್ರಹಣ ಹಿಡಿದಿದೆಯಲ್ಲ ಅಂತ ಬೇಜಾರಾಗುತ್ತದೆ. ಇದೇ ಹೊತ್ತಲ್ಲಿ ಅನಾಥಶವಗಳಿಗೆ ಅಂತಿಮ ಸಂಸ್ಕಾರ ಕರುಣಿಸಿದ ಪುಣ್ಯಾತ್ಮರು ದೇವದೂತರಂತೆ ಕಾಣುತ್ತಾರೆ. ಕರ್ನಾಟಕದಲ್ಲಿ ಕರೊನಾಕ್ಕೆ ಮೃತರಾದವರ ಅಸ್ಥಿ ವಿಸರ್ಜನೆಯನ್ನು ರಾಜ್ಯ ಸರ್ಕಾರವೇ ಸಾಮೂಹಿಕವಾಗಿ ನೇರವೇರಿಸುವ ಮೂಲಕ, ಮಾನವೀಯ ಸ್ಪಂದನೆಗೆ ಮಾದರಿಯಾಯಿತು.
ಇನ್ನು, ಅಧ್ಯಾತ್ಮ ಮೌಲ್ಯಗಳನ್ನು ಸರಳವಾಗಿ ಜನರ ಮನಸ್ಸುಗಳಿಗೆ ನಾಟಿಸುತ್ತ, ಸ್ವಯಂಪರಿವರ್ತನೆಗೆ ಪ್ರೇರಣೆ ನೀಡುತ್ತಿರುವ ಧಾರವಾಡ ಚಿಕ್ಕಮಲ್ಲಿಗವಾಡನ ಶ್ರೀ ಆಶ್ರಮದ ಎ.ಪಿ.ಪಾಟೀಲ್ ಗುರೂಜಿ ಪ್ರೀತಿ, ಪರೋಪಕಾರದ ಮಹಿಮೆಯನ್ನು ವಿಶಿಷ್ಟವಾಗಿ ವಿಶ್ಲೇಷಿಸಿದ್ದಾರೆ. "ಒಳಿತಿರಲಿ, ಕೆಡುಕಿರಲಿ, ನೋವಿರಲಿ, ನಲಿವಿರಲಿ, ಸರಿಯಿರಲಿ, ತಪ್ಪಿರಲಿ ಎಲ್ಲವನ್ನೂ ಮರೆತು ಪ್ರೀತಿ ಹಂಚುವುದೇ ನಿಜವಾದ ದೈವತ್ವ, ಗುರುತ್ವ'. "ಬದಲಾವಣೆ ಟಿಸಬೇಕೆಂದರೆ ಅಂತರಾಳದಲ್ಲಿ ಕ್ರಾಂತಿಬೀಜ ಬಿತ್ತಬೇಕು. ಹಲವಾರು ವರ್ಷಗಳಿಂದ ಮನಸ್ಸಿನ ದಾಸ್ಯಕ್ಕೆ ಒಳಪಟ್ಟ ವ್ಯಕ್ತಿ ಅದರಿಂದ ಹೊರಬಂದು, ಪ್ರಜ್ವಲಿಸಲು ಕ್ರಾಂತಿ ಸ್ಫೋಟಿಸಬೇಕು' ಎನ್ನುತ್ತ "ಪ್ರೀತಿ ಕೊಡುವ ಮಹಾರಾಣಿ/ಮಹಾರಾಜರುಗಳಾಗಿ' ಎಂದಿದ್ದಾರೆ.
ಹೀಗೆ ಸ್ಪಂದಿಸುವ ಗುಣ ಮನುಷ್ಯನಲ್ಲಿ ಸದಾ ಜಾಗೃತವಾಗಿರಬೇಕು. ಹಿಂದೆಲ್ಲ ನಮ್ಮ ಗ್ರಾಮಗಳಲ್ಲಿ ಹಿರಿಯರು, ಎದುರಿಗೆ ಸಿಕ್ಕವರನ್ನು ಒಂದು ಕ್ಷಣ ಮಾತನಾಡಿಸಿ, "ಕಣ್ಣಾಗ ಎಷ್ಟ ಚಿಂತಿ ತುಂಬ್ಕೊಂಡಿಯಲ್ಲೋ, ಚಿಂತಿ ಬಿಟ್ಟ ಛಂದಾಕ್ಕಿರು. ಆ ಮ್ಯಾಲಿನವ ಎಲ್ಲ ದುರಸ್ತ್ ಮಾಡ್ತಾನ. ಕಷ್ಟ ಏನು ಮನಷಾರಿಗಲ್ಲದ ಮರಕ್ಕ ರ್ಬತದೇನ್...' ಅಂತ ಹೇಳಿ, ಧೈರ್ಯ ತುಂಬಿದರೆ ಎದುರಿನವರು ಗೆಲುವಾಗಿ ಬಿಡುತ್ತಿದ್ದರು. ಇಂದಿನ ದಿನಗಳಲ್ಲಿ ಆಪ್ತರೊಂದಿಗೇ ಮಾತನಾಡಲು ಹಿಂಜರಿಕೆ. ಕೌನ್ಸೆಲಿಂಗ್ ಸೆಂಟರ್ನಲ್ಲಿ ಕೂತು ಬೇಕಿದ್ದರೆ ಎಲ್ಲ ಒಂದೇ ಉಸಿರಿನಲ್ಲಿ ಹೇಳಿಬಿಡುತ್ತಾರೆ. ಆದರೆ, ಹದಿಹರೆಯದ ಮಕ್ಕಳಿಗೆ ತಂದೆ&ತಾಯಿ ಜತೆ ಮಾತನಾಡಲು ಹಿಂಜರಿಕೆ. ವೃದ್ಧರಿಗೆ ಮಕ್ಕಳೊಡನೆ ಮಾತನಾಡಲು ಅಂಜಿಕೆ. ಸಂಬಂಧ/ಸಂಬಂಧಿಗಳ ನಡುವೆ ಆಪ್ತಸಂವಾದವೇ ನಡೆಯುತ್ತಿಲ್ಲ. ಏಕೆಂದರೆ, ಅಲ್ಲಿ ಅಹಂಗಳ ಗೋಡೆ ಕಟ್ಟಿಕೊಂಡಾಗಿದೆ. ಇನ್ನು ಸ್ನೇಹಿತರು. "ಕೆಲಸವಿದ್ದಾಗ ಮಾತ್ರ ಸ್ನೇಹ' ಎಂಬ ಡಿಪ್ಲೋಮಸಿ ಆ ಸಂಬಂಧವನ್ನೂ ಹಾಳುಗೆಡವಿದೆ. ಹೀಗಿರುವಾಗ ಮತ್ತೊಬ್ಬರ ನೋವು, ಸಂಕಟ ಹೇಗೆ ಅರ್ಥವಾಗಬಲ್ಲದು? ದೇವಕಣವನ್ನು ಹುಡುಕಿ ಬೀಗಿರುವ ನಾವುಗಳು ಭಾವಕಣವನ್ನೇ ಮರೆತುಬಿಟ್ಟರೆ ಹೇಗೆ? ಭಾವಬಂಧ ಎಂಬುದು ಕೃತಕ ಸಂಬಂಧವಲ್ಲ ಬದಲಿಗೆ ಶುದ್ಧ ಮಾನವೀಯ ಪ್ರೇಮದ ಸ್ವರೂಪ. ಅದನ್ನು ಬಿಟ್ಟು ಬದುಕಲು ಹೊರಟರೆ ಖಿನ್ನತೆ, ಒಂಟಿತನವೇ ನಮ್ಮ ಶತ್ರುಗಳಾಗಬಲ್ಲವು. ಆಯ್ಕೆ ನಮ್ಮ ಕೈಯಲ್ಲೇ ಇದೆ. ಬಾಂಧ್ಯವದ ಸೇತುವೆ ಮನುಷ್ಯ&ಮನುಷ್ಯನನ್ನು ಜೋಡಿಸಬಲ್ಲವು. ಅಂಥ ಅಂತರಂಗದ ಪ್ರೀತಿ, ಕಾಳಜಿ ನಮ್ಮ ಅಂತ@ಕರಣವನ್ನು ಆವರಿಸಿಕೊಳ್ಳಲಿ. ಇದೇ ಬದುಕಿನ ಮಂತ್ರವಾಗಲಿ.
(ಲೇಖಕರು "ವಿಜಯವಾಣಿ' ಸಹಾಯಕ ಸುದ್ದಿ ಸಂಪಾದಕರು)