ಜನವರಿ 26 ಭಾರತದ ಗಣರಾಜ್ಯ ದಿನವಷ್ಟೇ ಅಲ್ಲ, ನಿಜವಾದ ಅರ್ಥದಲ್ಲಿ ಅದೇ ದೇಶದ ಸ್ವಾತಂತ್ರ್ಯ ದಿನ ಸಹಾ. 1947ರ ಆಗಸ್ಟ್ 15ರಂದು ಭಾರತೀಯರಿಗೆ ಸಿಕ್ಕಿದ್ದು ತಮ್ಮದೇ ಸರ್ಕಾರವನ್ನು ರಚಿಸಿಕೊಳ್ಳುವ ಅವಕಾಶ ನೀಡುವ, ಬ್ರಿಟಿಷ್ ಚಕ್ರಾಧಿಪತ್ಯದೊಳಗೇ ಇರುವ ಡೊಮಿನಿಯನ್ ಸ್ಥಾನ. ಭಾರತದ ಈ ಸ್ಥಾನದ ಜತೆಗೇ ತಮ್ಮ ಸ್ಥಾನದ ಅರಿವೂ ಪ್ರಧಾನಮಂತ್ರಿ ಜವಾಹರ್ಲಾಲ್ ನೆಹರು ಅವರಿಗಿತ್ತು ಮತ್ತದನ್ನು ಅವರು ಲಿಖಿತವಾಗಿಯೇ ವ್ಯಕ್ತಪಡಿಸಿದ್ದರು ಸಹಾ. 1948ರ ಏಪ್ರಿಲ್ 28ರಂದು ಬ್ರಿಟಿಷ್ ಚಕ್ರವರ್ತಿ ಆರನೆಯ ಜಾರ್ಜ್ಗೆ ಬರೆದ ಪತ್ರದಲ್ಲಿ ಲಾರ್ಡ್ ಮೌಂಟ್ಬ್ಯಾಟನ್ ಬದಲಿಗೆ ಸಿ. ರಾಜಗೋಪಾಲಾಚಾರಿಯವರನ್ನು ಭಾರತದ ಗವರ್ನರ್ ಜನರಲ್ ಆಗಿ ನೇಮಿಸಿಕೊಳ್ಳಲು ಅನುಮತಿ ನೀಡಬೇಕೆಂದು ನೆಹರು ಪತ್ರ ಬರೆದಿದ್ದರು ಮತ್ತು ಅದರಲ್ಲಿ ತಮ್ಮನ್ನು ಬ್ರಿಟಿಷ್ ಚಕ್ರವರ್ತಿಯ ಸೇವಕ ಮತ್ತು ಡೊಮಿನಿಯನ್ ಆಫ್ ಇಂಡಿಯಾದ ಪ್ರಧಾನಮಂತ್ರಿ ಎಂದು ಕರೆದುಕೊಂಡಿದ್ದರು.
ಡೊಮಿನಿಯನ್ ಸ್ಥಾನದೊಂದಿಗೆ ಸಿಕ್ಕಿದ ನಮ್ಮದೇ ಸರ್ಕಾರ ರಚಿಸಿಕೊಳ್ಳುವ ಅವಕಾಶಕ್ಕನುಗುಣವಾಗಿ ರಚನೆಯಾದ ಡಾ. ಬಾಬು ರಾಜೇಂದ್ರ ಪ್ರಸಾದ್ ನೇತೃತ್ವದ ಸಂವಿಧಾನ ಸಭೆ ಆಯ್ಕೆಮಾಡಿದ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ರಚಿಸಿದ ಸಂವಿಧಾನ 1949 ನವೆಂಬರ್ 26ರಂದು ಸಂವಿಧಾನ ಸಭೆಯಲ್ಲಿ ಅನುಮೋದನೆಗೊಂಡು ಎರಡು ತಿಂಗಳ ನಂತರ 1950 ಜನವರಿ 26ರಂದು ಅನುಷ್ಠಾನಗೊಂಡಿತು. ಈ ಸಂವಿಧಾನ ಸೃಷ್ಟಿಸಿದ ಆಡಳಿತ ವ್ಯವಸ್ಥೆಯಲ್ಲಿ ಅಲ್ಲಿಯವರೆಗೆ ಬ್ರಿಟಿಷ್ ಚಕ್ರವರ್ತಿಯದಾಗಿದ್ದ ದೇಶದ ನಾಯಕ ಅಂದರೆ ‘ಹೆಡ್ ಆಫ್ ಸ್ಟೇಟ್’ ಸ್ಥಾನ ರಾಷ್ಟ್ರಪತಿ ಅಥವಾ ರಾಷ್ಟ್ರಾಧ್ಯಕ್ಷ ಎಂಬ ಹೆಸರಿನೊಂದಿಗೆ ಭಾರತೀಯರೊಬ್ಬರೇ ಬರುವಂತಾಯಿತು. ಈ ರಾಷ್ಟ್ರಪತಿ ಭಾರತೀಯರಿಂದ ಪರೋಕ್ಷವಾಗಿ ಆಯ್ಕೆಗೊಳ್ಳುವುದರಿಂದ ಭಾರತ ಅಂದು ಗಣರಾಜ್ಯವಾಯಿತು. ದೇಶದ ನಾಯಕ ಅಂದರೆ ಹೆಡ್ ಆಫ್ ಸ್ಟೇಟ್ ದೇಶದ್ದೇ ಪ್ರಜೆಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಅಂದರೆ ಪ್ರಜೆಗಳ ನೇರ ಪ್ರತಿನಿಧಿಗಳ ಮೂಲಕ ಆಯ್ಕೆಯಾಗುವ ವ್ಯವಸ್ಥೆ ಗಣರಾಜ್ಯ ಎನ್ನಿಸಿಕೊಳ್ಳುತ್ತದೆ. ಭಾರತದ ರಾಷ್ಟ್ರಪತಿ ಆಯ್ಕೆಯಾಗುವುದು ದೇಶದ ಸಂಸತ್ ಮತ್ತು ವಿಧಾನಸಭೆಗಳಿಗೆ ಭಾರತೀಯರು ಆಯ್ಕೆಮಾಡಿ ಕಳುಹಿಸಿದ ಪ್ರತಿನಿಧಿಗಳಿಂದ ಅಂದರೆ ಭಾರತೀಯರಿಂದ ಪರೋಕ್ಷವಾಗಿ. ಈ ಕಾರಣದಿಂದಾಗಿ ಭಾರತ ಒಂದು ಗಣರಾಜ್ಯವಾಗಿದೆ. ಎಪ್ಪತ್ತೆರಡು ವರ್ಷಗಳ ಹಿಂದಿನ ಆ ದಿನ ನಮ್ಮಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಯ್ಕೆಯಾಗದ ಬ್ರಿಟಿಷ್ ಚಕ್ರವರ್ತಿ ನಮ್ಮ ದೇಶದ ಹೆಡ್ ಆಫ್ ಸ್ಟೇಟ್ ಸ್ಥಾನವನ್ನು ಕಳೆದುಕೊಂಡದ್ದರಿಂದ ಅಂದು ಭಾರತ ಪೂರ್ಣವಾಗಿ ಸ್ವತಂತ್ರಗೊಂಡಿತು ಎಂದು ಹೇಳಬಹುದು.
ತತ್ತ್ವಜ್ಞಾನಿ ಅರಿಸ್ಟಾಟಲ್ನಿಂದ ‘ರಾಜಕೀಯ ಪ್ರಾಣಿ’ ಎಂದು ಕರೆಸಿಕೊಂಡ ಮಾನವ ತನ್ನ ಇದುವರೆಗಿನ ಇತಿಹಾಸದಲ್ಲಿ ಅದೆಷ್ಟು ಸಂವಿಧಾನಗಳನ್ನು ರಚಿಸಿದ್ದಾನೋ. ಅರಿಸ್ಟಾಟಲ್ನ ಕಾಲದವರೆಗೇ ಅಂದರೆ ಕ್ರಿ.ಪೂ. ನಾಲ್ಕನೆಯ ಶತಮಾನದವರೆಗೇ ಗ್ರೀಸ್ ಒಂದರಲ್ಲೇ ಮುನ್ನೂರು ಸಂವಿಧಾನಗಳು ಬಂದುಹೋಗಿದ್ದವಂತೆ! ಅಲ್ಲಿಂದೀಚೆಗೆ ಜಗತ್ತಿನಲ್ಲಿ ಸೃಷ್ಟಿಯಾದ ಸಹಸ್ರಾರು ಸಂವಿಧಾನಗಳಲ್ಲಿ ನಮ್ಮ ಸಂವಿಧಾನಕ್ಕೆ ವಿಶಿಷ್ಟ ಸ್ಥಾನವಿದೆ.
22 ಭಾಗಗಳಲ್ಲಿ ಹರಡಿದ 395 ವಿಧಿಗಳನ್ನೂ, 12 ಶೆಡ್ಯೂಲ್ಗಳನ್ನೂ, 105 ತಿದ್ದುಪಡಿಗಳನ್ನೂ ಹೊಂದಿದ ಭಾರತೀಯ ಸಂವಿಧಾನ ಇದುವರೆಗಿನ ಜಗತ್ತು ಕಂಡಿರುವ ಅತ್ಯಂತ ದೊಡ್ಡ ಲಿಖಿತ ಸಂವಿಧಾನ.
ನಮ್ಮ ಸಂವಿಧಾನ ಪಿತೃಗಳು ಎರಡು ವರ್ಷಗಳಿಗಿಂತಲೂ ಅಧಿಕ ಕಾಲ ವಿಶ್ವದ ಹಲವುಹತ್ತು ಸಂವಿಧಾನಗಳನ್ನು ಕೂಲಂಕಷವಾಗಿ ಪರಿಶೀಲಿಸಿ; ಜನಹಿತಕ್ಕೆ ಅತ್ಯಗತ್ಯವಾದ ಅತ್ಯುತ್ತಮ ವಿಚಾರ, ಆಶಯ, ನೀತಿನಿಯಮಗಳನ್ನು ಹುಡುಕಿ ತೆಗೆದು ನಮ್ಮ ಸಂವಿಧಾನದಲ್ಲಿ ಅಳವಡಿಸಿದರು. ಇಷ್ಟಾಗಿಯೂ ಅವರು ಸಂವಿಧಾನಕ್ಕೆ ಮೂಲವಾಗಿ ತೆಗೆದುಕೊಂಡದ್ದು ಬ್ರಿಟಿಷ್ ಪಾರ್ಲಿಮೆಂಟ್ 1935ರಲ್ಲಿ ಅನುಮೋದಿಸಿ ಅನುಷ್ಠಾನಗೊಳಿಸಿದ್ದ ಗವರ್ನ್ವೆುಂಟ್ ಆಫ್ ಇಂಡಿಯಾ ಆಕ್ಟ್. ಆ ಕಾಯಿದೆ ಭಾರತವನ್ನು ಸಂಯುಕ್ತ ವ್ಯವಸ್ಥೆಯಾಗಿ ಅಂದರೆ ಕೇಂದ್ರ ಸರ್ಕಾರದ ಜತೆ ಪ್ರಾಂತೀಯ ಸರ್ಕಾರಗಳೂ ಇರುವಂತೆ ರೂಪಿಸಿತ್ತು. ಆ ಪ್ರಕಾರ ರೂಪಿತವಾದ ಗವರ್ನರ್ ಆಡಳಿತದ ಹನ್ನೊಂದು ಪ್ರಾಂತ್ಯಗಳು ಮತ್ತು ಚೀಫ್ ಕಮಿಷನರ್ ಆಡಳಿತದ ನಾಲ್ಕು ಪ್ರಾಂತ್ಯಗಳ ಜತೆ ಸ್ವಾತಂತ್ರ್ಯ ಪ್ರಾಪ್ತಿಯ ನಂತರ 562 ಸಣ್ಣ-ದೊಡ್ಡ ದೇಶೀಯ ಸಂಸ್ಥಾನಗಳೂ ಸೇರಿ ಇಂದಿನ ಭಾರತ ಸೃಷ್ಟಿಯಾಯಿತು. ಬ್ರಿಟಿಷ್ ಆಡಳಿತದಲ್ಲಿ ‘ಪ್ರಾಂತ್ಯಗಳು’ ಎಂದು ಕರೆಸಿಕೊಳ್ಳುತ್ತಿದ್ದ ರಾಜಕೀಯ ಘಟಕಗಳು ಸ್ವತಂತ್ರ ಭಾರತದಲ್ಲಿ ಸಂವಿಧಾನದ ಪ್ರಕಾರ ‘ರಾಜ್ಯಗಳು’ ಎಂದು ಕರೆಸಿಕೊಂಡವು.
1935ರ ಗವರ್ನ್ವೆುಂಟ್ ಆಫ್ ಇಂಡಿಯಾ ಆಕ್ಟ್ ಅನ್ನು ಮೂಲವಾಗಿಟ್ಟುಕೊಂಡರೂ ಸ್ವತಂತ್ರ ಭಾರತದಲ್ಲಿ ಭಾರತೀಯರ ಅಭ್ಯುದಯಕ್ಕಾಗಿ ಅಗತ್ಯವಾದ ರಾಜಕೀಯ, ಸಾಮಾಜಿಕ ನೀತಿನಿಯಮಗಳು ಜಗತ್ತಿನ ಇತರ ಸಂವಿಧಾನಗಳಿಂದ ಆಯ್ದು ನಮ್ಮ ಸಂವಿಧಾನಕ್ಕೆ ಸೇರಿಸಲ್ಪಟ್ಟವಷ್ಟೆ. ಈ ಅಂಶಗಳು ಸಂವಿಧಾನದ ಪ್ರಮುಖ ಲಕ್ಷಣಗಳಾಗಿ ಬಣ್ಣಿಸಲ್ಪಡುತ್ತವೆ. ನಮ್ಮ ಸಂವಿಧಾನ ಅಳವಡಿಸಿಕೊಂಡ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬ್ರಿಟನ್ನಿಂದ ತೆಗೆದುಕೊಂಡದ್ದು. ಅಲ್ಲಿನಂತೆ ನಮ್ಮಲ್ಲಿ ಸಂಸತ್ತು, ಅದರ ಭಾಗವಾದ ಪ್ರಧಾನಮಂತ್ರಿ ನೇತೃತ್ವದ ಮಂತ್ರಿಮಂಡಲ ಇವೆ. ಆದರೆ, ನಾವು ಮಾಡಿಕೊಂಡಿರುವ ಬದಲಾವಣೆಯೆಂದರೆ ಬ್ರಿಟನ್ನಲ್ಲಿ ರಾಷ್ಟ್ರದ ನಾಯಕ ಅಂದರೆ ಸಾಂವಿಧಾನಿಕ ಪರಿಭಾಷೆಯಲ್ಲಿ ಹೆಡ್ ಆಫ್ ಸ್ಟೇಟ್ ಆಗಿರುವುದು ರಾಜ (ಅಥವಾ ರಾಣಿ). ನಮ್ಮಲ್ಲಿ ರಾಷ್ಟ್ರದ ನಾಯಕ ರಾಷ್ಟ್ರಾಧ್ಯಕ್ಷರಾಗಿರುತ್ತಾರೆ.
ನಮ್ಮ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳ ಮೂಲ ಅಮೆರಿಕದ ಸಂವಿಧಾನ; ರಾಜ್ಯ ನಿರ್ದೇಶಕ ತತ್ತ್ವಗಳು ಐರ್ಲೆಂಡ್ ಸಂವಿಧಾನದ ಕೊಡುಗೆ. ಭಾರತೀಯ ಸಂವಿಧಾನದಲ್ಲಿ ತಿದ್ದುಪಡಿ ತರುವ ವಿಧಾನಗಳು ಬ್ರಿಟನ್ನಲ್ಲಿರುವಂತೆ ಸರಳವೂ ಆಗಿವೆ, ಅಮೆರಿಕದಲ್ಲಿರುವಂತೆ ಕ್ಲಿಷ್ಟವೂ ಆಗಿವೆ. ಕೆಲವು ತಿದ್ದುಪಡಿಗಳನ್ನು ಸಂಸತ್ತಿನಲ್ಲಿ ಸರಳ ಬಹುಮತದಂತಹ ಸುಲಭ ವಿಧಾನದ ಮೂಲಕ ತರಬಹುದಾದರೆ ಮತ್ತೆ ಕೆಲವು ತಿದ್ದುಪಡಿಗಳಿಗೆ ಸಂಸತ್ತಿನಲ್ಲಿ ಸರಳ ಬಹುಮತದ ಜತೆಗೆ ರಾಜ್ಯಗಳಲ್ಲಿ ಅರ್ಧದಷ್ಟರ ವಿಧಾನಮಂಡಲದಲ್ಲಿಯೂ ಸರಳ ಬಹುಮತದ ಅನುಮೋದನೆಯಂತಹ ಕಠಿಣ ವಿಧಾನ ಅಗತ್ಯವಾಗುತ್ತದೆ.
ಮೂಲ ಸಂವಿಧಾನದಲ್ಲಿ ದೇಶದ ಅಧಿಕೃತ ಹೆಸರು ‘ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂದಿತ್ತು. ಅದನ್ನು 1976ರಲ್ಲಿ ಸಂವಿಧಾನಕ್ಕೆ ಮಾಡಲಾದ 42ನೇ ತಿದ್ದುಪಡಿಯ ಮೂಲಕ ‘ಸಾರ್ವಭೌಮ ಸಮಾಜವಾದಿ ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂದು ವಿಸ್ತರಿಸಲಾಯಿತು. ದೇಶದ ಹೆಸರಿಗೆ ಸಮಾಜವಾದಿ ಮತ್ತು ಧರ್ಮನಿರಪೇಕ್ಷ ಎಂಬ ಪದಗಳನ್ನು ಸೇರಿಸಬೇಕೆಂಬ ಸಲಹೆ ಸಂವಿಧಾನದ ರಚನೆಯ ಸಮಯದಲ್ಲೇ ಅಂಬೇಡ್ಕರ್ ಅವರ ಮುಂದಿಡಲ್ಪಟ್ಟಿತ್ತು. ಆದರೆ ಅವೆರಡೂ ರಾಜಕೀಯ ಪಕ್ಷವೊಂದರ ಪ್ರಣಾಳಿಕೆಯಲ್ಲಿನ ನೀತಿಯಾಗಬಹುದೇ ವಿನಾ ಒಟ್ಟಾರೆ ದೇಶದ ನೀತಿಗಳಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಬಾಬಾಸಾಹೇಬರು ಆ ಸಲಹೆಯನ್ನು ಬದಿಗಿರಿಸಿದ್ದರು. ಆದರೆ 1976ರಲ್ಲಿ ಕಾಂಗ್ರೆಸ್ ಸರ್ಕಾರ ತನಗಿದ್ದ ಬಹುಮತ ಮತ್ತು ಆಗ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿ ನೀಡಿದ ವಿಶೇಷ ಅಧಿಕಾರಗಳನ್ನು ಉಪಯೋಗಿಸಿಕೊಂಡು ದೇಶದ ಅಧಿಕೃತ ಹೆಸರನ್ನು ತನ್ನ ನೀತಿಗನುಗುಣವಾಗುವಂತೆ ಬದಲಾಯಿಸುವುದರಲ್ಲಿ ಯಶಸ್ವಿಯಾಯಿತು.
ಭಾರತದ ಸಂವಿಧಾನ ಅಧಿಕಾರ ವಿಕೇಂದ್ರೀಕರಣವನ್ನು ಪ್ರತಿಪಾದಿಸುತ್ತದೆ. ಅದರ ಪ್ರಕಾರ ಶಾಸನ ರಚನೆ ಜನಪ್ರತಿನಿಧಿಗಳಿಂದ ರಚಿತವಾದ ಸಂಸತ್ ಹಾಗೂ ರಾಜ್ಯ ವಿಧಾನಮಂಡಲದ ಅಂದರೆ ಶಾಸಕಾಂಗದ ಅಧಿಕಾರವಾದರೆ ಶಾಸನಗಳನ್ನು ಕಾರ್ಯರೂಪಕ್ಕಿಳಿಸುವುದು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ನೇತತ್ವದ ಮಂತ್ರಿಮಂಡಲ ಅಂದರೆ ಕಾರ್ಯಾಂಗದ ಜವಾಬ್ದಾರಿಯಾಗಿರುತ್ತದೆ. ತಂತಮ್ಮ ಜವಾಬ್ದಾರಿಗಳನ್ನು ಶಾಸಕಾಂಗ ಮತ್ತು ಕಾರ್ಯಾಂಗ ಸಮರ್ಪಕವಾಗಿ, ಸಂವಿಧಾನಕ್ಕೆ ಅಪಚಾರವಾಗದಂತೆ ನಿರ್ವಹಿಸುತ್ತಿವೆಯೇ ಎಂದು ವಿಮಶಿಸಿ ತೀರ್ವನಿಸುವುದು ನ್ಯಾಯಾಂಗದ ಜವಾಬ್ದಾರಿಯಾಗಿರುತ್ತದೆ.
ಭಾರತಕ್ಕೆ ಡೊಮಿನಿಯನ್ ಸ್ಥಾನ ನೀಡುವಾಗ ಬ್ರಿಟಿಷರು ರೂಪಿಸಿದ ನಿಯಮದ ಪ್ರಕಾರ ಇಲ್ಲಿನ ಸರ್ಕಾರದ ನಾಯಕ ಅಂದರೆ ಹೆಡ್ ಆಫ್ ಸ್ಟೇಟ್ ಆಗುವ ಹಕ್ಕು ದೊರೆತದ್ದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ (ಪಾಕಿಸ್ತಾನದಲ್ಲಿ ಅದು ಮುಸ್ಲಿಂ ಲೀಗ್ನ ಅಧ್ಯಕ್ಷರಿಗೆ). ಆಗ ಹದಿನೈದರಲ್ಲಿ ಹನ್ನೆರಡು ಕಾಂಗ್ರೆಸ್ ಪ್ರಾಂತೀಯ ಸಮಿತಿಗಳಿಂದ ನಾಮಾಂಕಿತರಾಗಿ ಕಾಂಗ್ರೆಸ್ ಅಧ್ಯಕ್ಷಸ್ಥಾನಕ್ಕೆ ತನ್ಮೂಲಕ ಪ್ರಥಮ ಪ್ರಧಾನಮಂತ್ರಿಯ ಸ್ಥಾನಕ್ಕೆ ಹಕ್ಕುದಾರರಾಗಿದ್ದದ್ದು ಸರ್ದಾರ್ ವಲ್ಲಭಭಾಯಿ ಪಟೇಲ್. ಆದರೆ ಕಾಂಗ್ರೆಸ್ನ ಒಂದಾದರೂ ಪ್ರಾಂತೀಯ ಸಮಿತಿಯಿಂದ ನಾಮಾಂಕನಗೊಳ್ಳುವುದರಲ್ಲಿ ವಿಫಲರಾದ ಜವಾಹರ್ಲಾಲ್ ನೆಹರು ಕೊನೆಗೆ ಗಾಂಧೀಜಿಯವರ ಮೇಲೆ ಒತ್ತಡ ಹೇರಿ, ಬಹುಮತ ಪಡೆದಿದ್ದ ಪಟೇಲರು ಕಣದಿಂದ ಹೊರನಡೆಯುವಂತೆ ಪಿತೂರಿ ಹೂಡಿದರು. ಹೀಗೆ ತನ್ನದಲ್ಲದ ಕಾಂಗ್ರೆಸ್ ಅಧ್ಯಕ್ಷಸ್ಥಾನವನ್ನೂ, ಅದರ ಮೂಲಕ ಪ್ರಧಾನಮಂತ್ರಿ ಸ್ಥಾನವನ್ನು ಅಪ್ರಜಾಪ್ರಭುತ್ವೀಯ ವಿಧಾನದಿಂದ ಕೈಗೆಟುಕಿಸಿಕೊಂಡ ನೆಹರು ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳದ ಹಲವು ಪ್ರಕರಣಗಳು ಇತಿಹಾಸದಲ್ಲಿ ದಾಖಲಾಗಿವೆ. ಅವರ ಹದಿನೇಳು ವರ್ಷದ ಆಡಳಿತಾವಧಿಯಲ್ಲಿ ಅವರಿಗೆ ಅಪಥ್ಯವೆನಿಸಿದ ಹದಿನೇಳು ಕೃತಿಗಳು ಬಹಿಷ್ಕಾರಕ್ಕೊಳಗಾದವು. ಜತೆಗೇ, ಚುನಾವಣೆಗಳ ಮೂಲಕ ಆಯ್ಕೆಯಾದ ಪ್ರಪಂಚದ ಮೊತ್ತಮೊದಲ ಕಮ್ಯೂನಿಸ್ಟ್ ಸರ್ಕಾರ ಸೇರಿದಂತೆ ಎರಡು ರಾಜ್ಯ ಸರ್ಕಾರಗಳು ವಜಾಗೊಂಡವು. ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರದ ಯಾವುದೇ ನೀತಿ ಮೊದಲಿಗೆ ಸಂಸತ್ನಲ್ಲಿ ಮಂಡಿತವಾಗಿ ಚರ್ಚೆಗೊಳ್ಳಬೇಕು. ಆದರೆ ದೆಹಲಿಯ ಬೋಟ್ ಕ್ಲಬ್ ಅಥವಾ ರಾಮಲೀಲಾ ಮೈದಾನದಲ್ಲೋ, ಮದ್ರಾಸ್ನ ಮರೀನಾ ಬೀಚಿನಲ್ಲೋ ಅಥವಾ ಇನ್ನಾವುದೇ ಸಾರ್ವಜನಿಕ ಸ್ಥಳಗಳಲ್ಲಿ ನೆಹರು ನೀಡುತ್ತಿದ್ದ ಹೇಳಿಕೆಗಳು ಸರ್ಕಾರದ ನೀತಿಗಳಾಗತೊಡಗಿದ್ದನ್ನು ಕಾಣುತ್ತೇವೆ. ಹೀಗಾಗಿಯೇ ಖ್ಯಾತ ಹಿಂದಿ ಕವಿ ಮಜ್ರೂಹ್ ಸುಲ್ತಾನ್ಪುರಿ ನೆಹರುರನ್ನು ‘ಹಿಟ್ಲರ್ನ ಶಿಷ್ಯ’ ಎಂದು ಕರೆದರು. ಕುಪಿತಗೊಂಡ ನೆಹರು ಕವಿಯನ್ನು ಒಂದುವರ್ಷ ಜೈಲಿನಲ್ಲಿಟ್ಟರು! ಇದೇ ನೀತಿಯನ್ನು ಪ್ರಸಕ್ತ ಪ್ರಧಾನಿ ನರೇಂದ್ರ ಮೋದಿ ಅನುಸರಿಸಿದರೆ ಎಷ್ಟು ಜನ ಜೈಲಿಗೆ ಹೋಗಬಹುದು!
ಇಂತಹ ಸಂವಿಧಾನವಿರೋಧಿ ಹಾಗೂ ಸರ್ವಾಧಿಕಾರಿ ಪ್ರವೃತ್ತಿಗಳನ್ನು ಮುಂದೆ ರಾಷ್ಟ್ರನಾಯಕರಲ್ಲಿ ದೇಶ ಕಂಡದ್ದು ಎರಡು ಸಲ. ‘ಇಂದಿರಾ ಈಸ್ ಇಂಡಿಯಾ’ ಎಂದು ಘೊಷಿಸಿದ ಅಂದಿನ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಬರುವಾರಂಥ ಭಟ್ಟಂಗಿಗಳ ಪ್ರೋತ್ಸಾಹದಿಂದ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯ ಮೂಲಕ ಅಧಿಕಾರಸೂತ್ರಗಳನ್ನು ತಮ್ಮಲ್ಲಿ ಕೇಂದ್ರೀಕರಿಸಿಕೊಳ್ಳಹೊರಟದ್ದು ದೊಡ್ಡ ದುರಂತ. ಬಳಿಕ, ಸಾಂವಿಧಾನಿಕ ತೊಡಕುಗಳಿಂದಾಗಿ ಪ್ರಧಾನಮಂತ್ರಿಯ ಸ್ಥಾನವನ್ನು ಕೊನೇಗಳಿಗೆಯಲ್ಲಿ ಕಳೆದುಕೊಂಡ ಯುಪಿಎ ನಾಯಕಿ ಸೋನಿಯಾ ಗಾಂಧಿ ನಂತರ ತಮ್ಮ ಪರವಾಗಿನ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ವಿಚಾರವಾದಿಗಳನ್ನು ಒಟ್ಟುಗೂಡಿಸಿ ‘ನ್ಯಾಷನಲ್ ಅಡ್ವೆ ೖಸರಿ ಕೌನ್ಸಿಲ್’ ಎಂಬ ಸೂಪರ್ ಕ್ಯಾಬಿನೆಟ್ ಒಂದನ್ನು ಕಟ್ಟಿಕೊಂಡು ಸರ್ಕಾರದ ನೀತಿಗಳನ್ನು ರೂಪಿಸತೊಡಗಿದರು. ದೇಶದ ಯಾವುದೇ ಸಾಂವಿಧಾನಿಕ ಸ್ಥಾನ ಹೊಂದದೇ, ಯಾವುದೇ ಸಾಂವಿಧಾನಿಕ ವ್ಯವಸ್ಥೆಗೆ ಉತ್ತರದಾಯಿಯಾಗದೇ, ಅಧಿಕಾರವನ್ನು ಮಾತ್ರ ಕೈಯಲ್ಲಿಟ್ಟುಕೊಳ್ಳುವ ಈ ಪ್ರಯತ್ನ ಸಂವಿಧಾನಕ್ಕೆ ಮಾಡಿದ ಅಪಹಾಸ್ಯವೇ ಸರಿ. ಗಣರಾಜ್ಯವಾಗಿ ಅರ್ಧ ಶತಮಾನ ಪೂರೈಸಿದ ಮೇಲೂ, ಪ್ರಬುದ್ಧಗೊಂಡಿದೆಯೆಂಬ ಭಾವನೆಯನ್ನು ಜಾಗತಿಕವಾಗಿ ಮೂಡಿಸಿದ ಮೇಲೂ ದೇಶ ಇಂತಹ ಬೆಳವಣಿಗೆಗಳನ್ನು ಕಂಡದ್ದೊಂದು ಅಚ್ಚರಿಯ ಅಷ್ಟೇ ಆಘಾತದ ವಿಷಯ. ಇಂತಹದೇ ಪ್ರಯತ್ನವೊಂದನ್ನು ಸಂವಿಧಾನೇತರ ಶಕ್ತಿಗಳಿಂದ ಇತ್ತೀಚೆಗಷ್ಟೇ ಕಂಡೆವು. 2018ರ ವರ್ಷಾರಂಭದ ಭೀಮಾ-ಕೋರೆಗಾಂವ್ ಹಿಂಸಾಚಾರ ಮತ್ತು ಅದು ಬಹಿರಂಗಪಡಿಸಿದ ನಕ್ಸಲ್ ಕ್ರಾಂತಿಯ ಷಡ್ಯಂತ್ರ ಸಂವಿಧಾನವನ್ನೇ ಪೂರ್ಣವಾಗಿ ನಾಶಮಾಡುವ ಪ್ರಯತ್ನವಾಗಿತ್ತು. ನಮ್ಮೀ ಗಣರಾಜ್ಯದಲ್ಲಿ ರಾಜಕೀಯ ಅಧಿಕಾರದ ಹಸ್ತಾಂತರ ಅತ್ಯಂತ ಸಹಜ ಹಾಗೂ ಅಗತ್ಯ. ಈ ಪ್ರಕ್ರಿಯೆ ಶಾಂತಿಯುತವಾಗಿರಬೇಕೆಂಬುದು ಸಂವಿಧಾನಪಿತೃಗಳ ಆಶಯವಾಗಿತ್ತು. ಆದರೆ ನಕ್ಸಲರು 2025ರ ಹೊತ್ತಿಗೆ ರಕ್ತಕ್ರಾಂತಿಯ ಮೂಲಕ ಅಧಿಕಾರವನ್ನು ಕೈಗೆ ತೆಗೆದುಕೊಳ್ಳಬೇಕೆಂದು ಹೂಡಿದ್ದ ಸಂಚು ಬಯಲಾಗಿ, ಆ ಸಂವಿಧಾನವಿರೋಧಿ ಕೃತ್ಯವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಅವಕಾಶವಾಯಿತು.
ನಮ್ಮ ಸುತ್ತಲಿನ ಮುಸ್ಲಿಂ ಮತ್ತು ಬೌದ್ಧ ದೇಶಗಳು ಮತ್ತೆಮತ್ತೆ ಸೇನಾಸರ್ವಾಧಿಕಾರಕ್ಕೆ, ಏಕಪಕ್ಷದ ಸರ್ವಾಧಿಕಾರಕ್ಕೆ ಒಳಗಾಗುತ್ತಿರುವಾಗ ಭಾರತ ಮಾತ್ರ ಎಲ್ಲ ಅಡೆತಡೆಗಳನ್ನೂ ನಿವಾರಿಸಿಕೊಂಡು ಸಾಂವಿಧಾನಿಕ ಪ್ರಜಾಪ್ರಭುತ್ವದ ಹಾದಿಯಲ್ಲಿ ಮುನ್ನಡೆಯುತ್ತಿರುವುದು ಇಲ್ಲಿನ ಜನರು ಪರಂಪರಾಗತವಾಗಿ ರೂಢಿಸಿಕೊಂಡು ಬಂದಿರುವ ಶಾಂತಿಯುತ ಮನೋಭಾವದಿಂದಲೇ ಇರಬೇಕು. ಇದೇ ಮನೋಭಾವ ಹಾಗೂ ಮೌಲ್ಯಗಳು ನಮ್ಮ ಸಂವಿಧಾನವನ್ನು ನಿರಂತರವಾಗಿ ರಕ್ಷಿಸುತ್ತದೆ ಮತ್ತು ಭಾರತವೊಂದು ಗಣರಾಜ್ಯವಾಗಿಯೇ ಅನೂಚಾನವಾಗಿ ಮುಂದುವರಿಯುತ್ತದೆ ಎಂದು ನಾವು ಆಶಿಸಬಹುದಾಗಿದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)