ಅಂಕಣ

ಶ್ರೀದೇವಿ ಮಗಳು ಜಾಹ್ನವಿ ಪರಿಚಯಿಸಲು ಪೈಪೋಟಿ

ಶ್ರೀದೇವಿ ಮಗಳು ಜಾಹ್ನವಿ ಕಪೂರ್​ ಅವರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಟಾಲಿವುಡ್​ನ ದೊಡ್ಡ ನಿರ್ಮಾಪಕರ ನಡುವೆ ಪೈಪೋಟಿಯೇ ನಡೆಯುತ್ತಿದೆ. ತೆಲುಗಿನ ಮೂರು ಜನಪ್ರಿಯ ನಿರ್ಮಾಣ ಸಂಸ್ಥೆಗಳು ಜಾಹ್ನವಿಯನ್ನು ಪರಿಚಯಿಸಲು ಪ್ರಯತ್ನಿಸುತ್ತಿದ್ದು, ಈ ಪೈಕಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ತೆಲುಗು ಚಿತ್ರರಂಗಕ್ಕೆ ಜಾಹ್ನವಿಯನ್ನು ಪರಿಚಯಿಸುವ ಪ್ರಯತ್ನ ಕಳೆದ ವರ್ಷವೇ ನಡೆದಿತ್ತು. ನಿರ್ಮಾಪಕ ಅಶ್ವಿನಿ ದತ್​, ತಮ್ಮ "ಜಗದೇಕವೀರುಡು ಅತಿಲೋಕ ಸುಂದರಿ' ಚಿತ್ರದ ರೀಮೇಕ್​ಗೆ ರಾಮ್​ಚರಣ್​ ತೇಜಗೆ ನಾಯಕಿತಾಗಿ ಜಾಹ್ನವಿಯನ್ನು ಕರೆತರಬೇಕು ಎಂದು ಪ್ರಯತ್ನ ನಡೆಸಿದ್ದರು. ಆದರೆ, ಆ ಚಿತ್ರವೇ ಸೆಟ್ಟೇರಲಿಲ್ಲ. ಸದ್ಯಕ್ಕೆ ಹಾರಿಕಾ ಹಾಸಿನಿ ಕ್ರಿಯೇಷನ್ಸ್​, ಮೈತ್ರಿ ಮೂವಿ ಮೇಕರ್ಸ್​ ಮತ್ತು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್​ ಸಂಸ್ಥೆಗಳು ಜಾಹ್ನವಿಯನ್ನು ತೆಲುಗಿಗೆ ಕರೆತರಲು ಪೈಪೋಟಿ ನಡೆಸಿವೆ.

ಈ ಪೈಕಿ, ಹಾರಿಕಾ ಹಾಸಿನಿ ಕ್ರಿಯೇಷನ್ಸ್​ ಸಂಸ್ಥೆಯು ಮಹೇಶ್​ ಬಾಬು ಅಭಿನಯದ ಚಿತ್ರವನ್ನು ನಿರ್ಮಿಸುತ್ತಿದೆ. ಇನ್ನು, ದಿಲ್​ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್​ ಸಂಸ್ಥೆಯು ರಾಮ್​ಚರಣ್​ ತೇಜ ಅಭಿನಯದಲ್ಲಿ ಹೊಸ ಚಿತ್ರ ನಿರ್ಮಾಣ ಮಾಡುತ್ತಿದೆ. ಇದಲ್ಲದೆ, ಮೈತ್ರಿ ಮೂವಿ ಮೇಕರ್ಸ್​ ಸಂಸ್ಥೆಯು ಜ್ಯೂನಿಯರ್​ ಎನ್​ಟಿಆರ್​ ಜತೆಗೆ ಚಿತ್ರ ನಿರ್ಮಿಸುತ್ತಿದ್ದು, ಈ ಮೂರೂ ಚಿತ್ರಗಳಿಗೆ ನಾಯಕಿಯಾಗಿ ಜಾಹ್ನವಿ ಮೊದಲ ಆಯ್ಕೆ ಆಗಿದ್ದಾರೆ.
ಆದರೆ, ಜಾಹ್ನವಿ ಆಯ್ಕೆ ಯಾವುದು? ಸದ್ಯದಲ್ಲೇ ಉತ್ತರ ಸಿಗಲಿದೆ.