ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ವ್ಯವಸ್ಥೆಯ ಕುಂದುಕೊರತೆಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಇದೆ. ಆದರೆ ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಾಶ, ಗಲಭೆ, ದಳ್ಳುರಿಗಳನ್ನು ನಡೆಸುವುದು ಅಕ್ಷಮ್ಯ ಅಪರಾಧ. ಅದೆಷ್ಟೋ ಬಾರಿ ಇದು ಪುನರಾವರ್ತಿಸುತ್ತಿರುವುದು ಶೋಚನೀಯ. ಕೃಷಿ ಕಾನೂನಿನ ವಿರುದ್ಧ ಸಮರ ಸಾರಿದ್ದ ರೈತರು ಶಾಂತಿಯುತವಾಗಿಯೇ ಇದ್ದರು. ಸರ್ಕಾರ ಮತ್ತು ರೈತ ಮುಖಂಡರ ನಡುವೆ ಸಭೆಗಳೂ ನಡೆದವು. ಆದರೆ ಗಣರಾಜ್ಯೋತ್ಸವ ದಿನ ನಡೆಯಬಾರದ ಘಟನೆ ನಡೆದು ಹೋಯಿತು. ಅದಾದ ಬಳಿಕ ಈಗ ಅಂತಾರಾಷ್ಟ್ರೀಯ ಷಡ್ಯಂತ್ರವೂ ಬಯಲಾಗಿದ್ದು, ಭಾರತವಿರೋಧಿ ಆಂದೋಲನದ ಕರಾಳ ಮುಖಗಳು ಅನಾವರಣಗೊಂಡಿವೆ.
ಕೆಲ ತಿಂಗಳಿಂದ ಶಾಂತಿಯುತ ಪ್ರತಿಭಟನೆ ನಡೆಸಿದ ರೈತರು ಹೀಗೆ ಮುಗಿಬಿದ್ದರೇ? ಇವರೆಲ್ಲ ನಿಜರೈತರೋ ಅಥವಾ ಮುಖವಾಡ ಧರಿಸಿ ಬಂದ ರೈತರೋ? ಚಿಂತನೆ ಮಾಡಬೇಕಿದೆ. ಈ ಘಟನೆಯನ್ನು ವ್ಯವಸ್ಥೆಯ ವೈಫಲ್ಯವೆಂದು ಹೇಳಲಾಗದು. ಸರ್ಕಾರಗಳ ತಪ್ಪೇ? ಅದೂ ಅಲ್ಲ. ಸರ್ಕಾರ ಅದೆಷ್ಟೋ ಬಾರಿ ವಿವಾದ ಇತ್ಯರ್ಥ ಪಡಿಸಲು ಯತ್ನಿಸಿರುವ ವಿಚಾರ ತಿಳಿದೇ ಇದೆ. ಹಾಗಿದ್ದರೆ ಜ.26ರ ಕರಾಳ ಘಟನೆಗೆ ಕಾರಣ ಯಾರು? ರೈತರ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಕೆಲ ನಾಯಕರು. ಇವರಿಂದ ಇಡೀ ರೈತ ಜನಾಂಗಕ್ಕೆ ಕೆಟ್ಟ ಹೆಸರು. ರಾಷ್ಟ್ರಧ್ವಜವನ್ನು ಅವಮಾನ ಮಾಡಿದ ಹೇಯ ಘಟನೆ ನಡೆದಿದ್ದರೂ, ಕೆಲವರು ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಎಲ್ಲ ಪಕ್ಷ, ಜಾತಿ, ಮತಗಳಿಗಿಂತ ಮೇಲು ನಮ್ಮ ದೇಶ, ರಾಷ್ಟ್ರಧ್ವಜ, ರಾಷ್ಟ್ರ ಲಾಂಛನ. ಇದನ್ನರಿಯದೆ ಪಕ್ಷ, ಜಾತಿ, ಮತಗಳ ಅಂಧತ್ವದಲ್ಲಿ ಮುಳುಗಿ ದೇಶವಿರೋಧಿ, ಕಾನೂನುವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವವರನ್ನು ಎಚ್ಚರಿಸಬೇಕಾಗಿದೆ. ಇದು ದೇಶಪ್ರೇಮ ಪಸರಿ ಸಲು ಸಕಾಲ. ಪಕ್ಷ, ಜಾತಿ, ಮತಗಳ ಮರೆತು ಭಾರತೀಯರಾಗಿ ಬಾಳೋಣ. ಮಕ್ಕಳಲ್ಲಿ ದೇಶಪ್ರೇಮ ತುಂಬೋಣ. ಭವ್ಯಭಾರತದ ಘನತೆಯನ್ನು ಎತ್ತಿ ಹಿಡಿಯೋಣ.
| ಹರ್ಷಿತ್ ಕುಮಾರ್ ಯು ಈಶ್ವರಮಂಗಲ