ಅಂಕಣ

ದೇಶದ್ರೋಹ ಕಾನೂನಿನ ಅಗತ್ಯ ಇದೆ: ಜನಮತ

ಬ್ರಿಟಿಷರ ಕಾಲದಲ್ಲಿ ಸರ್ಕಾರಗಳು ವಿರೋಧಿಗಳನ್ನು ಮಟ್ಟ ಹಾಕಲು ಮತ್ತು ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬಳಸುತ್ತಿದ್ದ ದೇಶದ್ರೋಹ ಕಾನೂನಿನ ಔಚಿತ್ಯದ ಕುರಿತು ಸುಪ್ರೀಂ ಕೋರ್ಟ್ ಇತ್ತೀಚೆಗೆ ಪ್ರಶ್ನಿಸಿದೆ. ಸೂಕ್ತ ಬದಲಾವಣೆ ಮಾಡದಿದ್ದಲ್ಲಿ ಈ ಕಾನೂನನ್ನೇ ರದ್ದುಗೊಳಿಸುವುದಾಗಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದೆ.

  • ವಿಶ್ವವಿದ್ಯಾಲಯಗಳು, ಶಿಕ್ಷಣ ಕ್ಷೇತ್ರದ ಪ್ರತಿಷ್ಠಿತರು, ಸೋಗಲಾಡಿ ಬುದ್ಧಿಜೀವಿಗಳು ವಾಕ್ ಸ್ವಾತಂತ್ರ್ಯದ ನೆಪದಲ್ಲಿ ನಕ್ಸಲ್ ಸಿದ್ಧಾಂತ, ಧಾರ್ವಿುಕ ಸಾಮರಸ್ಯ ಕೆಡಿಸುವ, ರಾಷ್ಟ್ರದ ಏಕತೆಗೆ ಧಕ್ಕೆ ತರುವಂಥ ಶಕ್ತಿಗಳ, ಸಂಸ್ಥೆಗಳ ಪೋಷಕರಾಗಿ ಸಂರಕ್ಷಣೆ ನೀಡುವ ಅನೇಕ ಘಟನೆಗಳು ದೇಶದಾದ್ಯಂತ ನಡೆಯುತ್ತಿವೆ. ಸೇನೆ ವಿರುದ್ಧ ಘೊಷಣೆ ಕೂಗುವುದು, ರಾಷ್ಟ್ರಧ್ವಜದ ಅವಮಾನ ಮತ್ತು ರಾಷ್ಟ್ರವನ್ನು ತುಂಡರಿಸುವ ಮಾತನಾಡುವವರನ್ನು ರಾಷ್ಟ್ರದ್ರೋಹಿಗಳೆಂದು ಪರಿಗಣಿಸುವ ಸ್ಪಷ್ಟ ನಿಯಮ ರೂಪಿಸುವ ಅಗತ್ಯವಿದೆ.
  • ಅನೇಕ ಎನ್​ಜಿಒಗಳು ಪಾಕಿಸ್ತಾನ ಸಹಿತ ಹಲವು ದೇಶಗಳಿಂದ ಧನಸಹಾಯ ಪಡೆಯುತ್ತ ಭಾರತದ ವಿರುದ್ಧ ಚಟುವಟಿಕೆ ನಡೆಸುತ್ತಿವೆ. ಇಂಥವರ ವಿರುದ್ಧ ಕ್ರಮಕೈಗೊಳ್ಳಲು ದೇಶದ್ರೋಹ ಕಾನೂನು ಬೇಕು.
  • ಪಾಕಿಸ್ತಾನದಂತಹ ಆತಂಕವಾದಿಗಳನ್ನು ನಿರ್ವಿುಸುವ, ಪೋಷಿಸುವ ಶತ್ರುರಾಷ್ತ್ರದ ವಕಾಲತ್ತು ವಹಿಸುವ, ಕ್ರಿಕೆಟ್ ಪಂದ್ಯಾಟದಲ್ಲಿ ಆ ದೇಶ ಗೆದ್ದಾಗ ಸಂಭ್ರಮಿಸುವ, ದೇಶದ ಸುರಕ್ಷತೆಗೆ ಸವಾಲಾಗಿರುವ, ಸುರಕ್ಷಾ ಪಡೆಗಳ ಯೋಧರನ್ನು ಅಮಾನುಷವಾಗಿ ಹತ್ಯೆಗಯ್ಯುವ ನಕ್ಸಲ್​ವಾದಿಗಳ, ಉಗ್ರವಾದಿಗಳ ಕುರಿತು ಸಹಾನುಭೂತಿ ಹೊಂದಿದವರನ್ನು ದೇಶದ್ರೋಹಿಗಳಲ್ಲದೇ ದೇಶಹಿತಚಿಂತಕರಂತೆ ಕಾಣಲು ಸಾಧ್ಯವೇ?
  • ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳು ಉರುಳಿವೆ. ಆಂಗ್ಲರ ದಬ್ಬಾಳಿಕೆ ವಿರುದ್ಧ ಎರಡು ಶತಮಾನಗಳ ಸುದೀರ್ಘ ಸಂಘರ್ಷದ ಬಳಿಕ ಗಳಿಸಿದ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಪಟ್ಟ ಯಾತನೆಯ ಪ್ರತ್ಯಕ್ಷ ಅನುಭವವಿಲ್ಲದ ಯುವ ಭಾರತ ಸ್ವೇಚ್ಛಾಚಾರದಲ್ಲಿ ವಿಹರಿಸುತ್ತಿದೆ. ಸಂಕಟದ ಸಮಯದಲ್ಲಿ ಕಾಣುವ ಏಕತೆ, ಸ್ಥಿತಿ ಸಾಮಾನ್ಯವಾದಾಗ ಎಲ್ಲೋ ಕಳೆದುಹೋದಂತೆ ಭಾಸವಾಗುತ್ತದೆ. ಈ ಏಳು ದಶಕಗಳ ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಾಗರಿಕರಿಗೆ ದೊರೆತ ಮುಕ್ತ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕೆ ಎಡೆ ಮಾಡಿಕೊಡುತ್ತಿರುವುದು ವಿಷಾದಕರ. ಸಂವಿಧಾನ ನೀಡಿದ ಹಕ್ಕುಗಳ ಸುರಕ್ಷಾಕವಚದಲ್ಲಿ ದೇಶದ ಅಹಿತ ಬಯಸುವುದು ದೇಶದ್ರೋಹವಲ್ಲವೇ?

| ಚಂದ್ರಶೇಖರ ನಾವಡ ಮಾಜಿ ಸೈನಿಕರು, ಬೈಂದೂರು