ಫೆಬ್ರವರಿ 26ರಿಂದ ಹಾವೇರಿಯಲ್ಲಿ ಮೂರುದಿನಗಳ ಕಾಲ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ನಿರ್ಣಯ ಕೈಗೊಂಡಿರುವುದು ಕೇಳಿ ಆಶ್ಚರ್ಯವಾಯಿತು. ಪ್ರಪಂಚ ಕರೊನಾ ಎಂಬ ಕಪಿಮುಷ್ಟಿಯಲ್ಲಿ ಸಿಕ್ಕಿ ನಲುಗುತ್ತಿರುವ ಇಂಥ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಜಾತ್ರೆ ನಡೆಸಲು ಹೊರಟಿರುವುದು ಎಷ್ಟು ಸಮಂಜಸ? ಇಂಥ ಸಂಕಷ್ಟದಲ್ಲೂ ಕಸಾಪಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಯೋಚನೆ ಬಂದಿದ್ದೇ ವಿಪರ್ಯಾಸ!
ಕರೊನಾದಿಂದ ಕರ್ನಾಟಕವೂ ಇನ್ನೂ ಹೊರಬಂದಿಲ್ಲ. ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾದ ಕಾರಣ ಶಾಲಾ-ಕಾಲೇಜುಗಳನ್ನು ನಡೆಸದಿರಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿರುವಾಗ ಲಕ್ಷಾಂತರ ಜನ ಸೇರುವ ಅಕ್ಷರ ಜಾತ್ರೆ ನಡೆಸಲು ಕಸಾಪ ಮುಂದಾಗುತ್ತಿರು ವುದು ಎಷ್ಟು ಸರಿ? ಕರೊನಾ ಕಾಲದಲ್ಲೂ ಸಾಹಿತ್ಯ ಸಮ್ಮೇಳನ ನಡೆಸಬೇಕೆಂಬ ಹಠ ಏತಕ್ಕೆ? ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಸಮ್ಮೇಳನ ನಡೆಸಲಾಗುವುದು ಎಂದಿರುವ ಕಸಾಪ ಅಧ್ಯಕ್ಷರ ಹೇಳಿಕೆ ಹಾಸ್ಯಸ್ಪದವಾಗಿದೆ. ಲಕ್ಷಾಂತರ ಜನ ಮೂರು ದಿನದಲ್ಲಿ ಬಂದು ಹೋಗುತ್ತಾರೆ. ಇಂಥ ಸಮಯದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಸಾಧ್ಯವೇ?
ವರ್ಷದಿಂದ ವರ್ಷಕ್ಕೆ ಯಾಂತ್ರಿಕವಾಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಒಂದು ವರ್ಷ ಮುಂದೂಡಿದರೆ ಕನ್ನಡದ ಮೇಲಿನ ಪ್ರೀತಿಯೇನೂ ಕಡಿಮೆಯಾಗುವುದಿಲ್ಲ. ಈ ಒಂದು ವರ್ಷ ಸಮ್ಮೇಳನ ನಡೆಸದೆ ಅದಕ್ಕೆ ಖರ್ಚು ಮಾಡುತ್ತಿದ್ದ ಹಣವನ್ನು ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಉಪಯೋಗಿಸಿಕೊಳ್ಳಬಹುದಲ್ಲವೇ? ಈ ನಿಟ್ಟಿನಲ್ಲಿ ಸಾಹಿತಿಗಳು, ಸಾಹಿತ್ಯಪ್ರೇಮಿಗಳು ಯೋಚಿಸಬೇಕಿದೆ.
| ಪ್ರಕಾಶ್ ಕೆ. ನಾಡಿಗ್ ತುಮಕೂರು