ಅಂಕಣ

ಜನಮತ | ಕಾಡಂಚಿನ ನಾಗರಿಕರಲ್ಲಿ ಅರಿವು ತುಂಬುವುದು ಅವಶ್ಯ

ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಿಂಡು ಹಾಸನದ ಸಕಲೇಶಪುರ ತಾಲೂಕಿನ ಮಠಸಾಗರ-ಕೊಲ್ಲಹಳ್ಳಿ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಸಿದೆ. ಹಲವಾರು ತಿಂಗಳುಗಳಿಂದ ಆಲೂರು, ಕೊಡಗು, ಹಾಸನ ಗಡಿಗಳಲ್ಲಿ ಸಲಗಗಳು ಗ್ರಾಮವಾಸ್ತವ್ಯ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಕಾಡಾನೆಗಳಿಗೆ ಸಿಕ್ಕಿ ಕೆಲವು ಮಂದಿ ಮೃತಪಟ್ಟಿದ್ದು, ಮತ್ತೂ ಕೆಲವರು ಗಾಯಗೊಂಡಿದ್ದಾರೆ. ಆದರೆ, ಈ ಆನೆಗಳು ನಾಡಿನಲ್ಲಿ ದಾಂಧಲೆ ಸೃಷ್ಟಿಸಿವೆ ಎಂದು ಹೇಳಬಹುದೆ? ಹಾಗೆ ತೀರ್ವನಕ್ಕೆ ಬರುವ ಮುನ್ನ ಆನೆಗಳ ವರ್ತನೆಯ ಬಗ್ಗೆ ತಿಳಿದುಕೊಳ್ಳಬೇಕು.

ಮಲೆನಾಡಿನ ಬಹುತೇಕ ಕಡೆ ಗ್ರಾಮೀಣಾಭಿವೃದ್ಧಿಯಾಗಿದ್ದು, ಖಾಸಗಿ ಜಮೀನುಗಳು ಹಾಗೂ ಬೇಲಿಗಳು ವಿಸ್ತರಿಸಿವೆ. ಕಾಡಾನೆಗಳು ದಾರಿ ತಪ್ಪಿದಾಗ ಗೊಂದಲಕ್ಕೊಳಗಾಗುತ್ತವೆ; ನಾಡಿನ ಜನ ಅವುಗಳನ್ನು ನೋಡಿ ಕೂಗಾಟ, ಪಟಾಕಿ ಸಿಡಿಸುವುದು ಮಾಡಿದಾಗ ಆನೆಗಳು ರೊಚ್ಚಿಗೆದ್ದು ದಿಕ್ಕಾಪಾಲು ಓಡಾಡುತ್ತವೆ. ಆದರೆ ಅವುಗಳ ಸಹಜ ದಾರಿ ಕಣ್ಮರೆಯಾಗಿರುವುದರಿಂದ, ಯಾವ ದಿಕ್ಕಿಗೆ ಸಂಚರಿಸಬೇಕು ಎಂಬುದು ತಿಳಿಯದೆ ಜನವಸತಿಗಳತ್ತ, ಹೊಲಗಳತ್ತ ಓಡುತ್ತವೆ. ಈ ಪ್ರದೇಶಗಳಲ್ಲಿ ಓಡಾಡುತ್ತಿರುವವರು ಕೆಲವೊಮ್ಮೆ ಅವುಗಳಿಗೆ ಬಲಿಯಾಗಬೇಕಾಗುತ್ತದೆ. ಆನೆಗಳು ತಾವಾಗಿಯೇ ಆಕ್ರಮಣಕಾರಿ ಪ್ರಾಣಿಗಳಲ್ಲ. ನಾವೇ ಅವುಗಳನ್ನು ಆಕ್ರಮಣಶೀಲ ಮಾಡುತ್ತಿದ್ದೇವೆ. ಕಾಡಾನೆಗಳು ಹಗಲು ಕಂಡುಬಂದರೆ, ಅವುಗಳನ್ನು ಅವುಗಳ ಪಾಡಿಗೆ ಬಿಟ್ಟುಬಿಡಬೇಕು; ರಾತ್ರಿ ಅವುಗಳಷ್ಟಕ್ಕೆ ಹೊರಟುಹೋಗುತ್ತವೆ ಎನ್ನುತ್ತಾರೆ ತಜ್ಞರು. ಆದರೆ ನಮ್ಮ ಜನ ಸುಮ್ಮನಿರುವುದಿಲ್ಲ. ಆನೆಗಳನ್ನು ಓಡಿಸುವ ಭರದಲ್ಲಿ ಗಲಾಟೆ ಎಬ್ಬಿಸುತ್ತಾರೆ.

ಕಾಡಾನೆಗಳು ಊರ ರಸ್ತೆಯಲ್ಲಿ ಸಾಗುವಾಗ ಅದರಿಂದ ಅಂತರ ಕಾಯ್ದುಕೊಳ್ಳಲು ಮುಂದಾಗುವ ಬದಲು, ಕೆಲ ಯುವಕರು ಆನೆಯನ್ನೇ ಹಿಂಬಾಲಿಸುತ್ತ ಮೊಬೈಲ್​ನಲ್ಲಿ ಸೆಲ್ಪಿ ತೆಗೆದುಕೊಳ್ಳುವುದು ಮತ್ತು ವಿಡಿಯೋ ಮಾಡುವುದರಲ್ಲಿ ಮಗ್ನರಾಗುತ್ತಾರೆ. ಸೆಲ್ಪಿ ವ್ಯಾಮೋಹ ಮತ್ತು ಎಲ್ಲವನ್ನೂ ನೇರವಾಗಿ ಜಗತ್ತಿಗೆ ರವಾನಿಸುವ ಉಮೇದು, ಸುತ್ತಲಿನ ಜಗತ್ತಿನ ಆಗುಹೋಗುಗಳನ್ನು ಸಂಯಮದಿಂದ ಗಮನಿಸುವ ವಿವೇಕವನ್ನೇ ನಮ್ಮಿಂದ ಕಸಿದುಕೊಳ್ಳಲಾರಂಭಿಸಿದೆಯೇ? ಹೀಗೊಂದು ಪ್ರಶ್ನೆ ಮೂಡಲು ಕಾರಣವಾದದ್ದು, ಕೆಲ ಯುವಕರು ವರ್ತಿಸಿದ ರೀತಿ ಬೇಸರ ಮೂಡಿಸುವಂತಿತ್ತು.

ಯಾವುದೋ ಸರ್ಕಸ್ ನೋಡುತ್ತಿರುವವರಂತೆ ಗುಂಪು ಸೇರಿ, ಅರಣ್ಯ ಇಲಾಖೆಯವರು ಕೂಡ ಯಾವುದೇ ಕಾರ್ಯಾಚರಣೆ ನಡೆಸಲು ಅಸಾಧ್ಯವಾಗುವಂತೆ ಮಾಡಿಬಿಡುತ್ತಾರೆ. ಯುವಕರ ಈ ವರ್ತನೆ ಕಾಡುಪ್ರಾಣಿ ಮತ್ತು ಮಾನವರ ನಡುವಿನ ಸಂಘರ್ಷ ತೀವ್ರಗೊಂಡಿರುವ ಪ್ರದೇಶಗಳಲ್ಲಿ ಸಾವು-ನೋವಿನ ಪ್ರಮಾಣ ಕಡಿಮೆ ಮಾಡಲು ಜನಸಮೂಹದಲ್ಲಿ ಸೂಕ್ತ ತಿಳಿವಳಿಕೆ ಮೂಡಿಸುವ ಅಗತ್ಯ ಇರುವುದಕ್ಕೆ ಹಿಡಿದ ಕನ್ನಡಿಯಂತೆಯೂ ತೋರುತ್ತಿತ್ತು. ಆನೆಗಳಂತೆಯೇ ಹುಲಿ, ಚಿರತೆಗಳು ಕೂಡ ಜನವಸತಿ ಪ್ರದೇಶಗಳಿಗೆ ಇತ್ತೀಚೆಗೆ ನುಗ್ಗುವುದು ಸಾಮಾನ್ಯವಾಗಿದೆ. ಇದು ರಾಜ್ಯದೆಲ್ಲೆಡೆ ಕಾಣಬರುತ್ತಿರುವ ಸಮಸ್ಯೆ. ಇಂಥ ಸಂದರ್ಭದಲ್ಲಿ ಜನ ಆತಂಕಿತರಾಗುವುದು ಸಹಜ. ಆದರೆ, ಇಂಥ ಮುಖಾಮುಖಿಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಜನತೆಯಲ್ಲಿ ಪ್ರಾಥಮಿಕ ತಿಳಿವಳಿಕೆ ಕೂಡ ಇಲ್ಲ. ಇದು ಪ್ರಕೃತಿಯಿಂದ ನಾವು ಯಾವ ಪ್ರಮಾಣದಲ್ಲಿ ಪ್ರತ್ಯೇಕಿತರಾಗಿದ್ದೇವೆ ಎಂಬುದಕ್ಕೆ ಸಾಕ್ಷಿ. ಅರಣ್ಯ ಇಲಾಖೆ ಕೂಡ ಇಂಥ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಸೂಕ್ಷ್ಮವನ್ನು ತೋರಿಸಬೇಕು. ಕಾಡಿನಂಚಿನ ನಾಗರಿಕರಿಗೆ ಇಂಥ ಮುಖಾಮುಖಿಯನ್ನು ನಾಜೂಕಾಗಿ ನಿರ್ವಹಿಸುವ ತಿಳಿವಳಿಕೆ, ಪಾಠಗಳನ್ನು ಕಲಿಸಬೇಕಿದೆ. ಇವೆಲ್ಲವೂ ಕ್ಷಣಿಕ ಪರಿಹಾರವಾದರೂ, ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

ಕೊನೆಯದಾಗಿ, ಮಾನವ-ವನ್ಯಮೃಗ ಸಹಬಾಳ್ವೆಯ ಆದರ್ಶವನ್ನು ಎಲ್ಲರೂ ಪಾಲಿಸುವುದೇ ಮೇಲಿನ ಪ್ರಕರಣಗಳನ್ನು ತಡೆಗಟ್ಟಲು, ವನ್ಯಜೀವಿಗಳಿಗೂ ಇರುವ ನೆಮ್ಮದಿಯ ಬಾಳ್ವೆಯನ್ನು ನಡೆಸುವ ಹಕ್ಕನ್ನು ಸಂರಕ್ಷಿಸಲು ಅಗತ್ಯವಾಗಿ ಮಾನವನು ಅನುಸರಿಸಬೇಕಾದ ಮಾರ್ಗಗಳಲ್ಲೊಂದು.

| ಸಂದೀಪ್ ಶರ್ಮಾ ಬೆಂಗಳೂರು