ಅಂಕಣ

ಫಲಿತಾಂಶ ಭರ್ಜರಿ, ಆಗಬೇಕು ಸರ್ಜರಿ!: ಜನಮತ

Webdesk - Ravikanth

ವಿದ್ಯಾರ್ಥಿಗಳ ಜೀವನದಲ್ಲಿ ತಿರುವು ನೀಡುವ ಹಾಗೂ ಶೈಕ್ಷಣಿಕ ರಂಗದಲ್ಲಿಯೇ ಮಹತ್ವದ ಮೆಟ್ಟಿಲಾದ ದ್ವಿತೀಯ ಪಿಯುಸಿಯಲ್ಲಿ ಎಲ್ಲರೂ ಪಾಸಾಗಿದ್ದು, ಶೈಕ್ಷಣಿಕ ವ್ಯವಸ್ಥೆ ಮಾತ್ರ ಫೇಲ್ ಆಗಿದೆ. ಕರೊನಾ ಕಾರಣದಿಂದ ಪರೀಕ್ಷೆ ಇಲ್ಲದೆ ಎಲ್ಲರೂ ಪಾಸಾಗಿದ್ದಾರೆ! ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಮೂರ್ನಾಲ್ಕು ವಿದ್ಯಾರ್ಥಿಗಳು ಮಾತ್ರ 600ಕ್ಕೆ 600 ಅಂಕ ಪಡೆಯುವುದನ್ನು ಕಾಣುತ್ತಿದ್ದೆವು. ಆದರೆ, ಈ ವರ್ಷ 2239 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದಿರುವುದನ್ನು ನೋಡಿದರೆ ಅಚ್ಚರಿಯಾಗುವ ಜತೆಗೆ ಅನುಮಾನವೂ ಮೂಡಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಿದೆ ಎನ್ನುವುದಾದರೆ ಮಂಡಳಿ ಮೊದಲಿನಂತೆ ನಡೆಸುವ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ 1000 ವಿದ್ಯಾರ್ಥಿಗಳಾದರೂ 100ಕ್ಕೆ 100 ಅಂಕ ಮುಂದಿನ ವರ್ಷಗಳಲ್ಲಿ ಪಡೆಯಲೇ ಬೇಕು! ಇದು ಚೆನ್ನಾಗಿ ಓದಿದ, ನಿಜವಾಗಲೂ 100ಕ್ಕೆ 100 ಅಂಕ ಪಡೆಯಬಹುದಾದ ವಿದ್ಯಾರ್ಥಿಗಳಿಗೆ ನೋವುಂಟು ಮಾಡಿದೆ. ಪಿಯುಸಿ ದ್ವಿತೀಯ ವರ್ಷದ ಅಂಕದ ಆಧಾರದ ಮೇಲೆ ಬೇರೆ ಯಾವುದೇ ಪರೀಕ್ಷೆ ಇಲ್ಲದೆ ಹಲವು ಸರ್ಕಾರಿ ನೌಕರಿ ಸಿಗುತ್ತಿತ್ತು. ಆದರೆ, ಈ ವರ್ಷದ ಅಂಕ ಈ ನೌಕರಿ ಪಡೆಯಲು ಬರುವುದಿಲ್ಲವಂತೆ. ಅಂದರೆ, ಸರ್ಕಾರವೇ ಇದೊಂದು ನಕಲಿ ಅಂಕ ಎಂದು ಒಪ್ಪಿಕೊಂಡಂತಾಗಿದೆ!

ಪರೀಕ್ಷೆ ನಡೆಸದೆ ಫಲಿತಾಂಶ ಘೊಷಣೆ ಮಾಡಿದ್ದು ಪ್ರತಿಭಾವಂತ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಿದೆ. ಸರ್ಕಾರ ಪರೀಕ್ಷೆ ನಡೆಸದೇ ಇರುವುದನ್ನು ಪ್ರಕಟಿಸುತ್ತಿದ್ದಂತೆ ಶಿರಸಿಯ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಶಿಕ್ಷಣ ಇಲಾಖೆ ಗಮನಿಸಬೇಕಾಗಿದೆ. 900ರಷ್ಟು ವಿದ್ಯಾರ್ಥಿಗಳು ಫಲಿತಾಂಶವನ್ನು ತಿರಸ್ಕರಿಸಿದ್ದಾರೆ. ಎಸ್ಸೆಸ್ಸೆಲ್ಸಿ ಮಾದರಿಯಂತೆ ಪಿಯುಸಿ ಪರೀಕ್ಷೆಯನ್ನೂ ನಡೆಸಬಹು ದಿತ್ತು. ಸಣ್ಣ ವರ್ಗಕ್ಕೆ ಪರೀಕ್ಷೆ ನಡೆಸಿ ದೊಡ್ಡ ವರ್ಗಕ್ಕೆ ಪರೀಕ್ಷೆ ನಡೆಸದೇ ಇರುವುದು ಸಮಂಜಸವಾಗದು. ಸರ್ಕಾರ ಇಂತಹ ನ್ಯೂನತೆಗಳನ್ನು ತಿದ್ದಿಕೊಂಡರೆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ.

| ಬೀರಣ್ಣ ನಾಯಕ ಮೊಗಟಾ ಯಲ್ಲಾಪುರ