ಕಲಿಕಾ ಪ್ರಕ್ರಿಯೆ ನಿರಂತರವಾಗಿ ನಡೆಸುವ ಸಲುವಾಗಿ ರಾಜ್ಯ ಸರ್ಕಾರ ವಿದ್ಯಾಗಮ ಎಂಬ ವಿನೂತನ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದ್ದು, ರಾಜ್ಯದ ವಿವಿಧ ಬ್ಲಾಕ್ಗಳಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೀಡಿದ ನಿರ್ದೇಶನಕ್ಕೆ ಅನುಸಾರವಾಗಿ ಶಿಕ್ಷಕರು ದೇವಸ್ಥಾನ, ಮಸೀದಿ, ಮರದ ನೆರಳು, ಕಲ್ಯಾಣಮಂಟಪ, ಊರಹೊರಗಿನ ರಂಗಮಂಟಪ, ಹೀಗೆ ಅನೇಕ ಕಡೆ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಪಾಠ ಹೇಳುತ್ತಿರುವುದು ಸಾಮಾನ್ಯವಾಗುತ್ತಿದೆ. ಚಂದನವಾಹಿನಿಯಲ್ಲಿ ಸಂವೇದ ಕಾರ್ಯಕ್ರಮ ಪ್ರಸಾರವಾಗುತ್ತಿರುವ ಸಮಯದಲ್ಲೂ ಶಿಕ್ಷಕರು ವಠಾರ ಪಾಠವನ್ನು ಅಧಿಕಾರಿಗಳ ಒತ್ತಡಕ್ಕೆ ಕಟ್ಟುಬಿದ್ದು ನಿರ್ವಹಿಸುತ್ತಿದ್ದಾರೆ.
ಎಲ್ಲ ಹಳ್ಳಿಗಳಿಗೆ ಈವರೆಗೆ ಖಾಸಗಿ ಬಸ್ ಸಂಚರಿಸದಿರುವ ಪ್ರಯುಕ್ತ ಓಡಾಡುವ ಒಂದೆರಡು ಸರ್ಕಾರಿ ಬಸ್ಸುಗಳನ್ನು ನೆಚ್ಚಿಕೊಂಡು ಶಿಕ್ಷಕರು ಪ್ರಯಾಣ ಮಾಡಬೇಕಾಗಿದ್ದು ಇನ್ನು ಕೆಲವು ಕಡೆ ಪ್ಯಾಸೆಂಜರ್ ಆಟೋಗಳಲ್ಲಿ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಕಿಕ್ಕಿರಿದು ಸಂಚರಿಸುವ ಅನಿವಾರ್ಯ ಸ್ಥಿತಿಯಲ್ಲಿ ಶಿಕ್ಷಕರು ಸಂಚರಿಸಬೇಕಾಗಿದೆ. ಕೆಲವು ಕಡೆ ಕಿಡಿಗೇಡಿಗಳ ಉಪಟಳ ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಇನ್ನು ಶಿಕ್ಷೆಯ ಭಯವಿಲ್ಲದೆ ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಹಾಗೆ ಮಾಡುವುದು ಸವಾಲಿನ ವಿಷಯವೇ ಆಗಿದೆ. ಇದರ ನಡುವೆಯೂ ಶಿಕ್ಷಕರು ಒತ್ತಡದಿಂದಲೇ ಕಾರ್ಯನಿರ್ವಹಿಸುತ್ತಿದ್ದು ಕೆಲವರು ಪೀಡಿತರಾಗಿ ಆಸ್ಪತ್ರೆ ಸೇರಿರುವುದು ಸಹ ಇದೆ.
ಶಿಕ್ಷಕರಂತೂ, ‘ಇಲಾಖಾ ಅಧಿಕಾರಿಗಳ ನಿರ್ದೇಶನದ ಅನುಸಾರ ನಾವು ಕರ್ತವ್ಯ ನಿರ್ವಹಿಸುತ್ತೇವೆ. ಕುಳಿತುಕೊಂಡು ಬಿಟ್ಟೀ ಸಂಬಳ ತೆಗೆದುಕೊಳ್ಳುತ್ತೀರಿ ಎಂಬ ಹಣೆಪಟ್ಟಿ ಹಾಕಿಸಿ ಕೊಳ್ಳುವುದಕ್ಕಿಂತ ಸೋಂಕು ತಗುಲಿದರೂ ಪರ್ವಾಗಿಲ್ಲ, ಇದನ್ನು ವೃತ್ತಿಯಲ್ಲಿ ಎದುರಾಗಿರುವ ಸವಾಲು ಎಂದು ಭಾವಿಸಿಕೊಂಡು ಸ್ವಾಭಿಮಾನದಿಂದ ಧೈರ್ಯದಿಂದ ಎದುರಿಸುತ್ತೇವೆ’ ಎಂದು ನೋವಿನಿಂದ ಹೇಳುತ್ತಿದ್ದಾರೆ. ನಿಜಕ್ಕೂ ಶಿಕ್ಷಕರನ್ನು ಈ ಹಂತದಲ್ಲಿ ಅನಗತ್ಯ ಒತ್ತಡಕ್ಕೆ ದೂಡುವುದು ಸರಿಯಲ್ಲ. ಪಿಪಿಇ ಕಿಟ್ ಧರಿಸುವ ವೈದ್ಯರಿಗೆ ಕರೊನಾ ಸೋಂಕು ತಗುಲಿರುವಾಗ ಕೇವಲ ಮಾಸ್ಕ್ ಧರಿಸಿ ಓಡಾಡುವ ಶಿಕ್ಷಕರಿಗೆ ಸೋಂಕು ಆಗುವುದಿಲ್ಲವೇ? ಶಾಲಾಕೊಠಡಿಗಳಲ್ಲಿ ಇರುವ ಸುರಕ್ಷಿತ ಹಾಗೂ ಆಸಕ್ತಿದಾಯಕ ವಾತಾವರಣ ಗುಡಿಗುಂಡಾರಗಳಿಗೆ ಸಾಧ್ಯವಾಗುವುದೇ? ಅವು ಕರೊನಾಮುಕ್ತ ಪ್ರದೇಶಗಳೇ? ಇಲಾಖೆ ಅಧಿಕಾರಿಗಳು ಆರೋಗ್ಯ ಇಲಾಖೆಯ ನುರಿತ ವೈದ್ಯರ ತಂಡದ ಸಲಹೆಯನ್ನು ಪಡೆಯಬೇಕು. ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಜೀವದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ.
| ಪುಟ್ಟದಾಸು, ಮಂಡ್ಯ