ಸೌದಿ ಅರೇಬಿಯಾ ಪ್ರಧಾನಮಂತ್ರಿ ರಾಜಕುಮಾರ ಮಹಮದ್ ಬಿನ್ ಸಲ್ಮಾನ್  
ಜಗದಗಲ – ಪ್ರೇಮಶೇ ಖರ

ಎಂಬಿಎಸ್ ಅಂದ್ರೆ ಮನುಷ್ಯ ಬುದ್ಧಿಯೆಲ್ಲಾ ಸರಿಯೇನಿರಲ್ಲ ಅಂತ!

ನಲವತ್ತೊಂದು ವರ್ಷ ವಯಸ್ಸಿನ ಪ್ರಧಾನಮಂತ್ರಿ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಸೌದಿ ಅರೇಬಿಯಾ ಕಂಡ ಅತ್ಯಂತ ಉದಾರವಾದಿ ಹಾಗೂ ಆಧುನಿಕ ಮನೋಭಾವದ ರಾಷ್ಟ್ರನಾಯಕ. 2017ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅವರು ಆ ಕಟ್ಟಾ ವಹಾಬಿ ಇಸ್ಲಾಮಿಕ್ ದೇಶದ ಸಾಮಾಜಿಕ, ಧಾರ್ವಿುಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದಿದ್ದಾರೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ನಲವತ್ತೊಂದು ವರ್ಷ ವಯಸ್ಸಿನ ಪ್ರಧಾನಮಂತ್ರಿ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಸೌದಿ ಅರೇಬಿಯಾ ಕಂಡ ಅತ್ಯಂತ ಉದಾರವಾದಿ ಹಾಗೂ ಆಧುನಿಕ ಮನೋಭಾವದ ರಾಷ್ಟ್ರನಾಯಕ. 2017ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅವರು ಆ ಕಟ್ಟಾ ವಹಾಬಿ ಇಸ್ಲಾಮಿಕ್ ದೇಶದ ಸಾಮಾಜಿಕ, ಧಾರ್ವಿುಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದಿದ್ದಾರೆ. ಮಹಿಳೆಯರು ವಾಹನ ಚಲಾಯಿಸಬಹುದು, ಪುರುಷ ‘ರಕ್ಷಕ’ನ ಜತೆಯಿಲ್ಲದೇ ಮನೆಯಿಂದ ಹೊರಗೆ ಹೋಗಬಹುದು, ಅಷ್ಟೇ ಅಲ್ಲ, ಏಕಾಂಗಿಯಾಗಿ ಬದುಕಲೂಬಹುದು! ಜಾಗತಿಕವಾಗಿ ಎಂಬಿಎಸ್ ಎಂದು ಗುರುತಿಸಿಕೊಳ್ಳುವ ಅವರ ವಿಷನ್ 2030 ಯೋಜನೆಯ ಪ್ರಕಾರ ಸರ್ಕಾರಿ ಸೇವೆಯಲ್ಲಿ ಮಹಿಳೆಯರ ಪಾತ್ರ ವೃದ್ಧಿಸುತ್ತಿದೆ. ಜತೆಗೆ ಅವರು ಸೇನೆಯಲ್ಲೂ ಸ್ಥಾನ ಗಳಿಸತೊಡಗಿದ್ದಾರೆ. ಎಂಬಿಎಸ್ ಆಡಳಿತಾವಧಿಯಲ್ಲಿ ವಿದೇಶಿ ಸಂಗೀತಗಾರ್ತಿಯರನ್ನೊಳಗೊಂಡ ಸಂಗೀತ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿವೆ, 3-4 ದಶಕಗಳಿಂದ ಬಂದ್ ಆಗಿದ್ದ ಸಿನೆಮಾ ಹಾಲ್​ಗಳು ಮತ್ತೆ ತೆರೆದಿವೆ, ಧಾರ್ವಿುಕ ಪೊಲೀಸರ ಅಧಿಕಾರಗಳೂ ಮೊಟಕಾಗಿವೆ! ಕಟ್ಟಾ ಧಾರ್ವಿುಕ ನೇತಾರರು ತಮಗೆ ಬೇಕಾದಂತೆ ಧಾರ್ವಿುಕ ಗ್ರಂಥಗಳನ್ನು ವ್ಯಾಖ್ಯಾನಿಸುವುದಕ್ಕೆ ಎಂಬಿಎಸ್ ತಡೆಯೊಡ್ಡಿದ್ದಾರೆ, ಪ್ರವಾದಿ ಹೇಳಿದ್ದಾರೆ ಎಂದು ಸ್ಪಷ್ಟವಾಗಿ ಗೊತ್ತಾಗದ ಉಕ್ತಿಗಳನ್ನು ಹದೀತ್​ನಿಂದ ತೆಗೆಯಬೇಕೆಂದೂ ಈ ಯುವ ನಾಯಕ ಹೇಳಿದ್ದಾರೆ.

ಇನ್ನು ಆರ್ಥಿಕ ಕ್ಷೇತ್ರಕ್ಕೆ ಬಂದರೆ ಸೌದಿ ಅರೇಬಿಯಾದ ಅರ್ಥವ್ಯವಸ್ಥೆ ತೈಲ ಮತ್ತು ಅನಿಲದ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿರದಂತೆ ಮಾಡಲು ತಮ್ಮ ತಂದೆ ಸಲ್ಮಾನ್ ಬಿನ್ ಅಬ್ದುಲ್​ಅಜೀಜ್ ಮತ್ತು ಚಿಕ್ಕಪ್ಪ ಅಬ್ದುಲ್ಲಾ ಬಿನ್ ಅಬ್ದುಲ್​ಅಜೀಜ್ ಆರಂಭಿಸಿದ್ದ ಕ್ರಮಗಳನ್ನು ಎಂಬಿಎಸ್ ಮುಂದುವರೆಸಿದ್ದಾರೆ. ಕಿಂಗ್​ಡಂ ಆಫ್ ಸೌದಿ ಅರೇಬಿಯಾ (ಕೆಎಸ್​ಎ) ದೊಡ್ಡ ಪ್ರವಾಸಿ ಆಕರ್ಷಣೆಯಾಗಿ ಬೆಳೆಯುವಂತೆ ಮಾಡಲು ಮತ್ತು ಪ್ರವಾಸೋದ್ಯಮದಿಂದ ರಾಷ್ಟ್ರಕ್ಕೆ ದೊಡ್ಡ ಆದಾಯ ಬರುವಂತೆ ಮಾಡಲು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ. ಕೆಲವು ಯಶಸ್ವಿಯಾಗಿವೆ, ಇನ್ನು ಕೆಲವು ವಿವಿಧ ಕಾರಣಗಳಿಂದ ನಿಧಾನಗೊಂಡಿವೆ. ಒಟ್ಟಾರೆ, ಎಂಬಿಎಸ್ ಆ ಉಗ್ರ ಮೂಲಭೂತವಾದಿ ನಾಡಿನಲ್ಲಿ ಮಹತ್ತರ ಬದಲಾವಣೆಗಳ ಹರಿಕಾರ.

ರಕ್ಷಣಾ ಕ್ಷೇತ್ರದಲ್ಲೂ ಎಂಬಿಎಸ್ ಚಿಂತನೆ, ಯೋಜನೆಗಳು ಗಮನಾರ್ಹ. ಡೊನಾಲ್ಡ್ ಟ್ರಂಪ್ ‘ಹಣ ಕಂಡರೆ ಬಾಯಿ ಬಿಡುವ ಮನುಷ್ಯ’ ಎಂದು ಚೆನ್ನಾಗಿಯೇ ಗುರುತಿಸಿದ ಎಂಬಿಎಸ್ 110 ಬಿಲಿಯನ್ ಡಾಲರ್ ಮೊತ್ತದ ಯುದ್ಧೋಪಕರಣ ಖರೀದಿಸುವ ಪ್ರಸ್ತಾಪ ಮುಂದಿಟ್ಟು 2017ರಲ್ಲೇ ಅಮೆರಿಕದ ಅಧ್ಯಕ್ಷನನ್ನು ತಮ್ಮ ಕಡೆಗೆ ಸೆಳೆದುಕೊಂಡರು. ಬೈಡನ್ ಕಾಲದಲ್ಲಿ ಎಂಬಿಎಸ್​ಗೆ ಹಿನ್ನಡೆಯಾದರೂ ಟ್ರಂಪ್ ಮತ್ತೆ ಅಧ್ಯಕ್ಷರಾದಾಗ ಎಂಬಿಎಸ್ ಅದೃಷ್ಟ ಪುನಃ ಖುಲಾಯಿಸಿತು. ಈ ಸಲ ಅವರು ಭಾರಿ ಗಾಳ ಬೀಸಿದರು. ಅತ್ಯಾಧುನಿಕ ಎಫ್-35 ಸ್ಟೆಲ್ತ್ ಬಾಂಬರ್​ಗಳು ಮತ್ತು ಯುದ್ಧ ಟ್ಯಾಂಕ್​ಗಳೂ ಸೇರಿದಂತೆ ಅಮೆರಿಕದ ಹಲಬಗೆಯ ರಕ್ಷಣಾ ಸಾಮಗ್ರಿಗಳನ್ನು ಕೊಳ್ಳಲು ಹಾಗೂ ಅಮೆರಿಕದಲ್ಲೇ ಬಂಡವಾಳ ಹೂಡಲು ಒಂದು ಟ್ರಿಲಿಯನ್ ಡಾಲರ್ ವಿನಿಯೋಗಿಸುವ ರಸಭರಿತ ಪ್ರಸ್ತಾಪವನ್ನು ಟ್ರಂಪ್ ಮುಂದೆ ಎಂಬಿಎಸ್ ಇಟ್ಟರು. ಆ ಕುರಿತಾಗಿ ನ. 18ರಂದು ಒಪ್ಪಂದಕ್ಕೆ ಸಹಿಹಾಕಿದರು. ಎರಡೂ ರಾಷ್ಟ್ರಗಳ ರಕ್ಷಣಾ ಸಹಕಾರ ಹೆಚ್ಚಾಯಿತು.

ಎಂಬಿಎಸ್ ತಮ್ಮ ಮೊಟ್ಟೆಗಳನ್ನೆಲ್ಲವನ್ನೂ ಒಂದೇ ಬುಟ್ಟಿಯಲ್ಲಿಡುವವರಲ್ಲ. ಅಮೆರಿಕ ನಮ್ಮ ಜತೆಗಿದೆ ನಿಜ, ಹಾಗಂತ ಅಪಾಯದ ಬಾಗಿಲುಗಳನ್ನು ತೆರೆದಿಟ್ಟುಕೊಳ್ಳಬಾರದು ಎಂದು ಲೆಕ್ಕಹಾಕಿದ ಅವರು ಚೀನಾ ಮಧ್ಯಸ್ಥಿಕೆಯಲ್ಲಿ ಇರಾನ್ ಜತೆ ಕತ್ತರಿಸಿಹೋಗಿದ್ದ ರಾಜತಾಂತ್ರಿಕ ಸಂಬಂಧವನ್ನು 2023ರಲ್ಲಿ ಮರುಸ್ಥಾಪಿಸಿಕೊಂಡರು. ಅದು ನಿಜಕ್ಕೂ ಪಶ್ಚಿಮ ಏಷ್ಯಾದಲ್ಲಿ ರಾಜತಾಂತ್ರಿಕ ಕ್ರಾಂತಿ.

ಎಂಬಿಎಸ್ ಚೀನಾದಿಂದಲೂ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿ ಅದನ್ನೂ ಖುಷಿಯಾಗಿಟ್ಟರು. ಈ ವರ್ಷ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಆ. 7ರಂದು ತುರ್ಕಿಯೇ ಮತ್ತು ಪಾಕಿಸ್ತಾನಗಳ ಜತೆಗೆ ಮಕ್ಕಾದಲ್ಲಿ ಜಾಯಿಂಟ್ ಡಿಫೆನ್ಸ್ ಅಗ್ರಿಮೆಂಟ್ ಮಾಡಿಕೊಂಡರು. ಅದನ್ನೇ ಆ. 31ರಂದು ಮಕ್ಕಾ ಡಿಫೆನ್ಸ್ ಅಲಯನ್ಸ್ (ಎಂಡಿಎ) ಎಂದು ಹೆಸರಿಸಿ ಜಗತ್ತಿನ ಮುಂದಿಡಲಾಯಿತು. ಒಬ್ಬರ ಮೇಲೆ ದಾಳಿಯಾದರೆ ಅದು ಮೂವರ ಮೇಲೂ ಆದ ದಾಳಿ ಎಂದು ನ್ಯಾಟೋ ಮಾದರಿಯ ನಿಲುವನ್ನು ತಳೆದದ್ದರಿಂದಾಗಿ ಅದನ್ನು ಇಸ್ಲಾಮಿಕ್ ನ್ಯಾಟೋ ಎಂದೂ ಕರೆಯಲಾಯಿತು. ವರ್ಷದ ಹಿಂದೆ, 2025ರ ಸೆ. 17ರಂದು ಸೌದಿ ಮತ್ತು ಪಾಕಿಸ್ತಾನ ಮಾಡಿಕೊಂಡ ರಕ್ಷಣಾ ಒಪ್ಪಂದವೂ ಜಾಗತಿಕವಾಗಿ ಸುದ್ದಿ ಮಾಡಿತ್ತು. ಅವೆರಡರಲ್ಲೊಂದರ ಮೇಲೆ ದಾಳಿಯಾದರೆ ಸೌದಿಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಪಾಕಿಸ್ತಾನದ ಅನುಭವಸ್ಥ ರಕ್ಷಣಾಪಡೆಗಳು ಒಟ್ಟುಗೂಡಿ ವೈರಿಯನ್ನು ಹೊಡೆದಟ್ಟುತ್ತವೆ ಎಂದು ಎರಡೂ ದೇಶಗಳಲ್ಲಿ ಪ್ರಚಾರವಾಯಿತು. ಅಂದರೆ ಸೌದಿಗೆ ಎಲ್ಲಿಂದಲೂ ಅಪಾಯವೊದಗದಂತೆ, ಒದಗಿಯೇಬಿಟ್ಟರೆ ಅಮೆರಿಕ, ತುರ್ಕಿಯೇ ಮತ್ತು ಪಾಕಿಸ್ತಾನಗಳು ರಕ್ಷಣೆಗೆ ನಿಂತು ಕಾಪಾಡುವಂತೆ ಎಂಬಿಎಸ್ ವ್ಯವಸ್ಥೆ ಮಾಡಿದರು! ಅಂದರೆ ಸೌದಿ ಸುತ್ತಲೂ ಒಂದು ಅಭೇದ್ಯ ಕೋಟೆಯನ್ನು ನಿರ್ವಿುಸಿಬಿಟ್ಟರು.

ಇದೇ ಶನಿವಾರ, ಸೆ. 19ರಂದು ಯೆಮೆನ್​ನ ಹೌತಿ ಬಂಡುಕೋರರು ಸೌದಿ ರಾಜಧಾನಿ ರಿಯಾಧ್ ಮತ್ತು ಆ ದೇಶದ ಕೆಂಪು ಸಮುದ್ರ ತೀರದ ಮುಖ್ಯ ಬಂದರು ಯಾನ್​ಬು ಮೇಲೆ ಬ್ಯಾಲಿಸ್ಟಿಕ್ ಮಿಸೈಲ್ ಮತ್ತು ಡ್ರೋನ್ ದಾಳಿ ಎಸಗಿದರು. ಆ ದಾಳಿಗಳನ್ನು ತಮ್ಮ ವಾಯು ಸುರಕ್ಷಾ ವ್ಯವಸ್ಥೆಗಳು ಯಶಸ್ವಿಯಾಗಿ ತಡೆಗಟ್ಟಿದವು ಎಂದು ಎಂಬಿಎಸ್ ಸರ್ಕಾರ ಜಗತ್ತಿಗೆ ಹೇಳಿತು. ಅದಕ್ಕೆ ವಿರುದ್ಧವಾಗಿ, ನಮ್ಮ ದಾಳಿಗಳು ಯಶಸ್ವಿಯಾಗಿ ಶತ್ರುವಿಗೆ ಹಾನಿಯೆಸಗಿದವು ಎಂದು ಹೌತಿಗಳ ವಕ್ತಾರ ಯಾಹ್ಯಾ ಸಾರೀ ಘೊಷಿಸಿದರು. ರಿಯಾಧ್​ನಿಂದ ಬಂದ ಚಿತ್ರಗಳು, ವಿಡಿಯೋಗಳು ಅರಾಮ್ಕೋ ತೈಲ ಸಂಗ್ರಹಾಗಾರ ಹೊತ್ತಿ ಉರಿಯುತ್ತಿರುವುದನ್ನು ಜಗಜ್ಜಾಹೀರು ಮಾಡಿದವು. ಅದರಿಂದಾಗಿ ಸಮೀಪದ ವಿಮಾನನಿಲ್ದಾಣ ಸ್ವಲ್ಪ ಕಾಲ ಬಂದ್ ಆಗಿತ್ತು.

ಯಾನ್​ಬು ಬಂದರಿನ ಮೇಲಿನ ದಾಳಿ ಸಹ ಸೌದಿಗೆ ದೊಡ್ಡ ಆಘಾತವೇ. ಪೂರ್ವದ ಹೊಮುಜ್ ಜಲಸಂಧಿಯಲ್ಲಿ ಜಹಾಜುಗಳ ಸಂಚಾರವನ್ನು ಇರಾನ್ ಅಸ್ತವ್ಯಸ್ತಗೊಳಿಸಿರುವ ಕಾರಣ ತನ್ನ ಪೂರ್ವ ತೀರದ ಬಂದರುಗಳಾದ ದಮ್ಮಾಮ್ ಜುಬೇಲಾ, ರಾಸ್ ತನೂರಾ ಬಂದರುಗಳಿಂದ ಪ್ರಮುಖ ಆದಾಯ ಮೂಲವಾದ ತೈಲ ಮತ್ತು ಅನಿಲವನ್ನು ಸೌದಿ ಹೊರಜಗತ್ತಿಗೆ ರಫ್ತು ಮಾಡಲಾಗುತ್ತಿಲ್ಲ. ಹೀಗಾಗಿ ಪಶ್ಚಿಮದ ಬಂದರಾದ ಯಾನ್​ಬುವನ್ನೇ ಅದು ರಫ್ತಿಗಾಗಿ ನೆಚ್ಚಿಕೊಂಡಿರಬೇಕಾದ ಸ್ಥಿತಿಗೊಳಗಾಗಿತ್ತು. ಅದಕ್ಕೆ ಅನುಕೂಲ ಒದಗಿಸಿದ್ದುದು ದೇಶದ ಪೂರ್ವದಿಂದ ಪಶ್ಚಿಮಕ್ಕೆ ನಿರ್ವಿುಸಲಾಗಿದ್ದ 1,200 ಕಿ.ಮೀ. ಉದ್ದದ ಕೊಳವೆಮಾರ್ಗ.

ಅದು ಯಾರ ಕಣ್ಣಿಗೆ ಕಿಸುರಾಯಿತೋ, ಸೆ. 11ರಂದು ಇರಾಕ್​ನಲ್ಲಿರುವ ಇರಾನಿ ಬೆಂಬಲಿತ ಶಿಯಾ ಉಗ್ರಗಾಮಿಗಳು ಡ್ರೋನ್ ದಾಳಿಯೆಸಗಿ ಕೊಳವೆಮಾರ್ಗಕ್ಕೆ ಧಕ್ಕೆ ತಂದಿದ್ದರು. ಹಾಗಾಗಿ ಆ ಮಾರ್ಗ ಬಂದ್ ಆಗಿ ಯಾನ್​ಬು ಬಂದರಿಗೆ ಪೂರ್ವದಿಂದ ತೈಲ ಸಾಗಾಣಿಕೆ ನಿಂತುಹೋಗಿತ್ತು. ಈಗಾಗಲೇ ಯಾನ್​ಬುವಿನಲ್ಲಿ ಸಂಗ್ರಹಗೊಂಡಿರುವ ಹಾಗೂ ಅಲ್ಲೇ ಹತ್ತಿರದ ತೈಲಕ್ಷೇತ್ರಗಳಲ್ಲಿ ಹೊರತೆಗೆದ ತೈಲವನ್ನು ರಫ್ತು ಮಾಡಹೋಗೋಣವೆಂದರೆ ಈ ಹೌತಿಗಳು ಬಂದರಿಗೇ ಬಾಂಬ್ ಹಾಕಿ ಆ ಆಸೆಗೂ ಕಲ್ಲುಹಾಕಿದ್ದಾರೆ! ಅಂದರೆ ಯಾವ ಕಡೆಯಿಂದಲೂ ಸೌದಿ ತನ್ನ ತೈಲವನ್ನು ರಫ್ತು ಮಾಡಲು ಸಾಧ್ಯವಿಲ್ಲದಾಗಿದೆ. ಹಾಗಾಗಿ ಇದುವರೆಗಿನ ಪೆಟ್ರೋ-ಡಾಲರ್ ಸಂಪತ್ತಿಗೆ ಖೋತಾ.

ಜಗತ್ತಿನ ಅತಿ ದೊಡ್ಡ ತೈಲ ನಿರ್ಯಾತಕ ದೇಶವಾದ ಸೌದಿಯ ಈ ದುಃಸ್ಥಿತಿಗೆ ಇತರರ ಪ್ರತಿಕ್ರಿಯೆ ಏನು? 3 ವರ್ಷಗಳ ಹಿಂದೆ ಎಂಬಿಎಸ್ ಮುತುವರ್ಜಿ ವಹಿಸಿ ಸಂಬಂಧ ಸರಿಪಡಿಸಿಕೊಂಡ ಇರಾನ್ ಇದೇ ಮಾರ್ಚ್​ನಲ್ಲಿ ಸೌದಿ ಮೇಲೆ ಮಿಸೈಲ್ ಮತ್ತು ಡ್ರೋನ್ ದಾಳಿಗಳನ್ನು ಮತ್ತೆಮತ್ತೆ ನಡೆಸಿತು. ನಮ್ಮ ದಾಳಿಗಳ ಗುರಿ ನಿಮ್ಮಲ್ಲಿರುವ ಅಮೆರಿಕದ ನೆಲೆಗಳಷ್ಟೇ, ನಿಮ್ಮ ಸ್ವಂತದ್ದೇನನ್ನೂ ನಾವು ಹಾಳುಮಾಡುತ್ತಿಲ್ಲ ಎಂದೇನೋ ಇರಾನಿಗಳು ಹೇಳಿದರು. ಅದನ್ನು ಒಪ್ಪಿಕೊಳ್ಳಲೂಬಹುದೇನೋ. ಆದರೆ ಇರಾನಿಗಳು ಸಾಕಿ ಬೆಳೆಸುತ್ತಿರುವ ಹೌತಿಗಳು ಸೌದಿಗಳ ಮರ್ಮಕ್ಕೇ ಬಾರಿಸುತ್ತಿದ್ದಾರಲ್ಲ? ಜತೆಗೆ ನಮ್ಮದೂ ಇರಲಿ ಎಂದು ಇರಾಕ್​ನಲ್ಲಿರುವ ಇರಾನ್ ಪರವಾದ ಉಗ್ರಗಾಮಿಗಳು ತೈಲ ಕೊಳವೆಮಾರ್ಗವನ್ನೇ ಉಡಾಯಿಸಿಬಿಟ್ಟಿದ್ದಾರಲ್ಲ? ಇದರಲ್ಲಿ ಇರಾನ್​ನ ಹೊಣೆ ಇಲ್ಲವೇ? ಮೂರೇ ವರ್ಷಗಳ ಹಿಂದೆ ಸೌದಿ-ಇರಾನಿ ಸಂಬಂಧ ಸರಿಪಡಿಸಿದ ಚೀನಾ ಏನು ಮಾಡುತ್ತಿದೆ? ಇರಲಿ, ಇರಾನಿಯರನ್ನೂ, ಚೀನೀಯರನ್ನೂ ನಂಬಲಾಗದು. ನಿಮಗೆ ತೊಂದರೆ ಮಾಡುವುದಿಲ್ಲ, ಬದಲಿಗೆ ನಿಮಗೆ ತೊಂದರೆಯಾದಾಗ ಸಹಾಯ ಮಾಡುತ್ತೇವೆ ಎಂದು ಅವರೇನೂ ಲಿಖಿತ ಒಪ್ಪಂದ ಮಾಡಿಕೊಂಡಿಲ್ಲವಲ್ಲ? ಅಂತಹ ಒಪ್ಪಂದ ಮಾಡಿಕೊಂಡವರು ಎಲ್ಲಿದ್ದಾರೆ?

ಎರಡು ವಾರಗಳ ಹಿಂದೆಯೇ ಹೌತಿಗಳು ತಮಗೆ ಹತ್ತಿರದ ಜಿಝಾನ್, ತಯೀಫ್ ಮುಂತಾದುವುಗಳ ಮೇಲೇ ದಾಳಿ ಮಾಡಿದಾಗ; ಕೆಂಪು ಸಮುದ್ರವನ್ನು ಏಡನ್ ಕೊಲ್ಲಿ ಮತ್ತು ಅದರಾಚೆಯ ಅರಬ್ಬಿ ಸಮುದ್ರಕ್ಕೆ ಸಂರ್ಪಸುವ ಬಾಬ್ ಅಲ್-ಮಂದೇಬ್ ಜಲಸಂಧಿಯಲ್ಲಿರುವ, ಯೆಮೆನ್​ನ ಅಧಿಕೃತ ಪಿಎಲ್​ಸಿ ಸರ್ಕಾರದ ನಿಯಂತ್ರಣದಲ್ಲಿದ್ದ ದೊಡ್ಡ ಹನೀಷ್, ಚಿಕ್ಕ ಹನೀಷ್, ಝುಕಾರ್ ದ್ವೀಪಗಳು ಹಾಗೂ ಮೋಕಾ ಬಂದರನ್ನು ಆಕ್ರಮಿಸಿಕೊಂಡು ಆ ಮಾರ್ಗವನ್ನು ಸೌದಿ ಜಹಾಜುಗಳಿಗೆ ಮುಚ್ಚಿಬಿಟ್ಟಾಗಲೇ ತಮ್ಮ ಸಹಾಯಕ್ಕೆ ಬರುವಂತೆ, ಬಂದು ಹೌತಿಗಳ ಮೇಲೆ ಬಾಂಬ್ ದಾಳಿಯೆಸಗುವಂತೆ ಟ್ರಂಪ್​ಗೆ ಎಂಬಿಎಸ್ ಮನವಿ ಸಲ್ಲಿಸಿದರು. ಅದಕ್ಕೆ ಬಲಾಢ್ಯ ಅಮೆರಿಕದ ಅಧ್ಯಕ್ಷರ ಪ್ರತಿಕ್ರಿಯೆ? ಇಲ್ಲ, ಆಗೋದಿಲ್ಲ ಅಂತ! ಹತ್ತೇ ತಿಂಗಳ ಹಿಂದೆ ಇಬ್ಬರೂ ಸಹಿ ಹಾಕಿದ ಒಪ್ಪಂದವೆಲ್ಲಿ ಹೋಯಿತು? ಯಾ ಅಲ್ಲಾಹ್!

ವಿಚಿತ್ರವೆಂದರೆ ಆ ಒಪ್ಪಂದಕ್ಕೆ ಬದ್ಧವಾಗಿ ನಡೆದುಕೊಳ್ಳುವಂತೆ ಟ್ರಂಪ್​ಗೆಹೇಳುವ ನೈತಿಕ ಹಕ್ಕನ್ನು ಎಂಬಿಎಸ್ ಉಳಿಸಿಕೊಂಡೇ ಇಲ್ಲ! ಒಪ್ಪಂದವಾದ ನೂರು ದಿನಗಳಲ್ಲೇ ಇರಾನ್ ಮೇಲೆ ದಾಳಿಯೆಸಗಹೊರಟ ಟ್ರಂಪ್ ಅದರಲ್ಲಿ ಸೌದಿಗಳ ಸಹಕಾರ ಅಪೇಕ್ಷಿಸಿದರು. ನೀವು ಬಂದು ಯುದ್ಧಮಾಡಿ ಎಂದೇನೂ ಅವರು ಕೇಳಲಿಲ್ಲ. ನಮ್ಮ ಯುದ್ಧವಿಮಾನಗಳು, ಮಿಸೈಲ್​ಗಳು, ಡ್ರೋನ್​ಗಳು ಸೌದಿ ವಾಯುಪ್ರದೇಶದಲ್ಲಿ ಹಾದುಹೋಗಲು ಅವಕಾಶ ಕೊಡಿ ಎಂದಷ್ಟೇ ಟ್ರಂಪ್ ಕೇಳಿದ್ದು. ಅದಕ್ಕೆ ಎಂಬಿಎಸ್ ಉತ್ತರ ಇಲ್ಲ ಆಗೋದಿಲ್ಲ ಎಂದಾಗಿತ್ತು! ಹಾಗಾಗಿ ಟ್ರಂಪ್ ತಮ್ಮ ಇರಾನ್ ದಾಳಿ ಯೋಜನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಯಿತು. ಅದರಿಂದಾಗಿ ಅವರ ದಾಳಿಗಳೂ ಮೊನಚು ಕಳೆದುಕೊಂಡವು. ಅದನ್ನು ಟ್ರಂಪ್ ಮರೆಯುತ್ತಾರೆಯೇ? ಎಂಬಿಎಸ್​ಗೇ ಹೊಡೆತ ನೀಡುವಂತೆ ಅವರು ಒಮಾನ್​ನ ಮಧ್ಯಸ್ಥಿಕೆಯಲ್ಲಿ ಹೌತಿಗಳೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರಂತೆ. ಸೌದಿಗಳ ಹೊರತಾಗಿ ಉಳಿದೆಲ್ಲರ ಜಹಾಜುಗಳೂ ಬಾಬ್ ಅಲ್-ಮಂದೇಬ್ ಜಲಸಂಧಿಯಲ್ಲಿ ನಿರಾತಂಕವಾಗಿ ಪಯಣಿಸಲು ಅವಕಾಶ ಕೊಡುತ್ತೇವೆ, ಚಿಂತೆ ಬೇಡ ಎಂದು ಹೌತಿಗಳು ಟ್ರಂಪ್​ಗೆ ಮಾತುಕೊಟ್ಟಿದ್ದಾರಂತೆ. ಹಾಗೇ ನಡೆಯುತ್ತಿದೆ ಸಹ.

ಇನ್ನು ಇಸ್ಲಾಮಿಕ್ ನ್ಯಾಟೋ ಕಥೆ? ಸೌದಿಗಳಿಗೆ ತಾಂತ್ರಿಕ ಸಹಾಯ ನೀಡುವ ಬಗ್ಗೆ ಮಾತಾಡುತ್ತಿದ್ದೇವೆ ಎಂದು ತುರ್ಕೀಯರು ಹೇಳಿದರೆ, ಸೌದಿಗಳಿಗೆ ಎಲ್ಲ ಸಹಾಯ ಮಾಡುತ್ತೇವೆ ಎಂದು ಪಾಕಿ ಸೇನೆಯ ವಕ್ತಾರ ದೊಡ್ಡದಾಗಿ ಹೇಳಿದ್ದಾರೆ. ಆದರೆ ಎರಡೂ ಕಡೆಗಳಿಂದ ಎಂಬಿಎಸ್​ಗೆ ಇದುವರೆಗೂ ಏನೂ ಸಿಕ್ಕಿಲ್ಲ. ಸಿಗುವುದೂ ಇಲ್ಲ. ಯಾಕೆಂದರೆ, ನೀವೇನಾದರೂ ಮಧ್ಯಪ್ರವೇಶ ಮಾಡಿದರೆ ನಿಮಗೂ ಹೀಗೇ ಇಕ್ಕಡಿಸುತ್ತೇವೆ ಎಂದು ಹೌತಿಗಳು ಎಚ್ಚರಿಕೆ ಕೊಟ್ಟಾಗಿದೆ! ದೇಶದೊಳಗೆ ಪ್ರಶಂಸನೀಯ ಸುಧಾರಣೆಗಳನ್ನು ತಂದು ಇತಿಹಾಸಪುರುಷನಾದ ಎಂಬಿಎಸ್ ವಿದೇಶ ಮತ್ತು ರಕ್ಷಣಾ ನೀತಿಗಳಲ್ಲಿ ಅದೆಂತಹ ಅವಿವೇಕ ತೋರಿದ್ದಾರೆ! ಅಮೆರಿಕಾಗೆ ನಂಬಿಕೆದ್ರೋಹ ಮಾಡಿದ್ದಾರೆ; ನಂಬಲು ಯೋಗ್ಯರಲ್ಲದ ತುರ್ಕರನ್ನೂ ಪಾಕಿಗಳನ್ನೂ ನಂಬಿ ಈಗ ಕೆಟ್ಟು ಕೂತಿದ್ದಾರೆ. ಮನುಷ್ಯನ ಮನಸ್ಸಿನ ವಿಭಾಗಗಳೆಲ್ಲವೂ ಏಕಕಾಲದಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತವೆ ಎಂದು ಹೇಳಲಾಗದು ಬಿಡಿ.