ಅಂಕಣ

ಶ್ರೀಲಂಕಾಗೆ ಈಗ ಹಳೇ ಗಂಡನ ಪಾದವೇ ಗತಿ!

Webdesk - Ravikanth
‘‘ಮುಂದಿನ ಎರಡು ತಿಂಗಳು ನಮ್ಮ ಬದುಕಿನಲ್ಲಿ ಅತ್ಯಂತ ಕಷ್ಟಕರವಾಗಿರುತ್ತವೆ. ಕೆಲವು ತ್ಯಾಗಗಳನ್ನು ಮಾಡಲು ಮತ್ತು ಸವಾಲುಗಳನ್ನು ಎದುರಿಸಲು ನಾವು ನಮ್ಮನ್ನು ಸಿದ್ಧಗೊಳಿಸಿಕೊಳ್ಳಲೇಬೇಕು. ವಾಸ್ತವ ಅಸಂತೋಷಕರ ಹಾಗೂ ಭಯಾನಕವಾಗಿದೆ. ಆದಾಗ್ಯೂ ಸಾರ್ವಜನಿಕರಿಂದ ಸತ್ಯವನ್ನು ಮುಚ್ಚಿಟ್ಟು ಸುಳ್ಳು ಹೇಳಲು ನಾನು ಹೋಗಲಾರೆ’’. ಶ್ರೀಲಂಕಾದ ಹೊಸ ಪ್ರಧಾನಮಂತ್ರಿ ರನಿಲ್ ವಿಕ್ರಮಸಿಂಘ ಮೇ 16ರಂದು ತಮ್ಮ ದೇಶದ ಜನತೆಗೆ ಹೇಳಿದ ಮಾತುಗಳಿವು.

ಒಂದುಕಾಲದಲ್ಲಿ ಸಾಮಾನ್ಯ ಶ್ರೀಲಂಕೀಯ ಸಾಮಾನ್ಯ ಭಾರತೀಯನಿಗಿಂತಲೂ ಚೆನ್ನಾಗಿ ಊಟ ಮಾಡುತ್ತಿದ್ದ, ಬಟ್ಟೆ ತೊಡುತ್ತಿದ್ದ, ಉತ್ತಮ ವೈದ್ಯಕೀಯ ಸೇವೆ ಅನುಭವಿಸುತ್ತಿದ್ದ. ಆದರೀಗ ಕಾಲ ಬದಲಾಗಿದೆ. ಅವನಲ್ಲಿ ಹೊಸದಲ್ಲದಿದ್ದರೂ ಹಳೆಯ ಬಟ್ಟೆಗಳಿವೆ, ಆದರೆ ಹೊಟ್ಟೆಗೆ ಹಿಟ್ಟಿಲ್ಲ. ಅವನೀಗ ಅಂಗಡಿಗೆ ಹೋದರೆ ಆಹಾರಧಾನ್ಯಗಳು ಸಿಗುವುದಿಲ್ಲ. ಆಸ್ಪತ್ರೆಗೆ ಹೋದರೆ ಔಷಧಗಳಿಲ್ಲ, ಶುಶ್ರೂಷೆಗೆ ಸೌಲಭ್ಯವಿಲ್ಲ, ಶಸ್ತ್ರಚಿಕಿತ್ಸೆಗೆ ಸಲಕರಣೆಗಳಿಲ್ಲ ಎಂದು ಹೇಳಿ ಹಿಂದಕ್ಕೆ ಕಳುಹಿಸುತ್ತಾರೆ. ಇನ್ನೂ ದೊಡ್ಡ ತೊಂದರೆಯೆಂದರೆ ಆಸ್ಪತ್ರೆಯೇನಾದರೂ ನಡೆದು ಹೋಗಲಾಗದಷ್ಟು ದೂರದಲ್ಲಿದ್ದರೆ ಅಲ್ಲಿಗೆ ತಲುಪುವುದೂ ಸಾಧ್ಯವಿಲ್ಲ. ಹೆಚ್ಚಿನ ಪೆಟ್ರೋಲ್ ಬಂಕ್​ಗಳು ಖಾಲಿಯಾಗಿವೆ, ಇನ್ನುಳಿದವುಗಳ ಮುಂದೆ ಮೈಲಿಗಟ್ಟಲೆ ಗ್ರಾಹಕಸರಣಿಯಿದೆ! ಇನ್ನು ವಿದ್ಯುತ್ ಬಗ್ಗೆ ಹೇಳುವುದಾದರೆ, ಮಾಜಿ ರಾಷ್ಟ್ರಾಧ್ಯಕ್ಷೆಯಾದ ತಮಗೆ ಸರ್ಕಾರ ಒದಗಿಸುವ ನಿವಾಸದಲ್ಲಿ ದಿನಕ್ಕೆ ನಾಲ್ಕು ಗಂಟೆಗಳು ಮಾತ್ರ ವಿದ್ಯುತ್ ಲಭ್ಯವಿರುತ್ತದೆ ಎಂದು ಚಂದ್ರಿಕಾ ಕುಮಾರತುಂಗ ವಾರದ ಹಿಂದೆ ಹೇಳಿದ್ದಾರೆ. ಇನ್ನು ಸಾಮಾನ್ಯ ಜನರ ಪಾಡೇನು?

ಇದೆಲ್ಲ ಹೇಗಾಯಿತು? ಈ ಪ್ರಶ್ನೆಗೆ ಉತ್ತರ ಸಂಕೀರ್ಣವಾಗಿದೆ. ‘ಹಿಂದೂ ಮಹಾಸಾಗರದ ಪಚ್ಚೆ’ ಎಂದು ಜಗದ್ವಿಖ್ಯಾತವಾಗಿದ್ದ, ಸುಂದರ ಶ್ರೀಮಂತ ಶ್ರೀಲಂಕಾ ಇಂದು ಈ ದುರ್ಗತಿಗೆ ಇಳಿದದ್ದಕ್ಕೆ ಹಲವು ಕಾರಣಗಳಿವೆ, ಹಲವು ವ್ಯಕ್ತಿಗಳು ಜವಾಬ್ದಾರರಾಗಿದ್ದಾರೆ. ಮೊದಲಿಗೆ 1983-2009ರಲ್ಲಿ ನಡೆದ ಅಂತರ್ಯುದ್ಧದಿಂದಾಗಿ ವಾರ್ಷಿಕ ಬಜೆಟ್​ನಲ್ಲಿ ರಕ್ಷಣಾಪಡೆಗಳ ಅಗತ್ಯಗಳಿಗಾಗಿ ಹೆಚ್ಚು ಹಣ ಮೀಸಲಾಗತೊಡಗಿತು. ಪರಿಣಾಮವಾಗಿ ಅಭಿವೃದ್ಧಿ ಯೋಜನೆಗಳು ಕುಂಠಿತಗೊಳ್ಳುತ್ತ ಬಂದವು. ಬಾಹ್ಯ ಅಥವಾ ಆಂತರಿಕ ಅಪಾಯಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದ್ದು ಪ್ರತಿಯೊಂದು ದೇಶದ ಆದ್ಯಕರ್ತವ್ಯ. ಆದರೆ ಇಲ್ಲೊಂದು ತೊಡಕಿದೆ. ರಕ್ಷಣೆಗೆ ವಿನಿಯೋಗವಾದ ಹಣ ಹಿಂದಕ್ಕೆ ಬರುವುದಿಲ್ಲ. ಹಣ ಹಿಂದಕ್ಕೆ ಬರಬೇಕಾದರೆ, ಹೆಚ್ಚಾಗಿಯೇ ಬರಬೇಕಾದರೆ ಅದನ್ನು ಅಭಿವೃದ್ಧಿ ಯೋಜನೆಗಳಲ್ಲಿ ಹೂಡಬೇಕು. ಹೀಗಾಗಿ ಸರ್ಕಾರಗಳು ರಕ್ಷಣೆಯ ಅಗತ್ಯಗಳತ್ತ ಒಂದು ಕಣ್ಣಿಟ್ಟೇ ಅಭಿವೃದ್ಧಿ ಯೋಜನೆಗಳತ್ತ ಗಮನ ಹರಿಸಬೇಕು. ಎರಡರಲ್ಲೂ ಸಮತೋಲನ ಕಾಪಾಡಿಕೊಳ್ಳುವ ವಿವೇಕವನ್ನು ಸರ್ಕಾರಗಳು ತೋರಬೇಕು. ಅಭಿವೃದ್ಧಿಯೋಜನೆಗಳನ್ನು ನಿರ್ಲಕ್ಷಿಸಿ ಸೇನಾ ಅಗತ್ಯಗಳಿಗೆ ಪ್ರಾಮುಖ್ಯ ನೀಡಿದ್ದರಿಂದಾಗಿ ಆರ್ಥಿಕ ದುರವಸ್ಥೆಗೀಡಾಗಿ ಕುಸಿದುಹೋದ ಸೋವಿಯತ್ ಯೂನಿಯನ್ ಎಲ್ಲರಿಗೂ ಒಂದು ಉದಾಹರಣೆಯಾಗಬೇಕು. ಆದರೆ ಶ್ರೀಲಂಕಾದ ಸರ್ಕಾರಗಳಿಗೆ ಆ ಉದಾಹರಣೆ ಕಾಣಿಸಲೇ ಇಲ್ಲ. ಅದು ದುರಂತದ ಮೂಲ.

ಅಭಿವೃದ್ಧಿ ಯೋಜನೆಗಳು ಕುಂಠಿತವಾಗುತ್ತಿದ್ದಂತೇ ಜನರಿಗೆ ಉದ್ಯೋಗಾವಕಾಶ ಗಳು ಕಡಿಮೆಯಾಗುತ್ತ ಹೋದವು, ಪರಿಣಾಮವಾಗಿ ಶ್ರೀಲಂಕನ್ನರ ಆದಾಯ ಇಳಿಯುತ್ತ ಹೋಯಿತು, ಅವರು ಬಡವಾಗುತ್ತ ಹೋದರು. ಅಂತರ್ಯುದ್ಧ ಮುಕ್ತಾಯವಾದ ನಂತರವಾದರೂ ರಕ್ಷಣಾ ವೆಚ್ಚ ಕಡಿಮೆಗೊಳಿಸಿ ಅಭಿವೃದ್ಧಿ ಯೋಜನೆಗಳತ್ತ ಸರ್ಕಾರ ಗಮನ ಹರಿಸಬೇಕಾಗಿತ್ತು. ಆದರೆ ಅದಾಗಲಿಲ್ಲ. ಹತ್ತು ವರ್ಷಗಳ ನಂತರವೂ ವಾರ್ಷಿಕ ಬಜೆಟ್​ನಲ್ಲಿ ಶೇಕಡ ಹತ್ತಕ್ಕಿಂತಲೂ ಹೆಚ್ಚು ಭಾಗ ರಕ್ಷಣೆಗೆ ಮೀಸಲಾಗಿರುತ್ತಿತ್ತು. ಪ್ರಸಕ್ತ ದುರವಸ್ಥೆ ಆರಂಭವಾಗುವ ಹೊತ್ತಿನಲ್ಲೂ ಅದು ಶೇ.19.35 ಇತ್ತು! ಅಂತರ್ಯುದ್ಧ ಇಲ್ಲ, ಸುತ್ತಲೂ ಕಾಕದೃಷ್ಟಿಯ ಶತ್ರುಗಳೂ ಇಲ್ಲ. ಆದಾಗ್ಯೂ ಇಷ್ಟು ದೊಡ್ಡ ಪ್ರಮಾಣದ ರಕ್ಷಣಾವೆಚ್ಚ ಏತಕ್ಕಾಗಿ, ಯಾರಿಗಾಗಿ?

ಅಂತರ್ಯುದ್ಧ ಮುಗಿಯುವ ಹೊತ್ತಿಗೇ ಅಧ್ಯಕ್ಷ ಮಹಿಂದ ರಾಜಪಕ್ಷ ಭಾರಿಭಾರಿ ಯೋಜನೆಗಳಿಗಾಗಿ ಚೀನಾದಿಂದ ಅಗಾಧ ಮೊತ್ತದ ಸಾಲಕ್ಕೆ ಕೈಚಾಚತೊಡಗಿದ್ದರು. ಒಂದು ದೇಶ ಇನ್ನೊಂದು ದೇಶದಿಂದ ಸಾಲ ಪಡೆಯುವುದು ಹೊಸದೂ ಅಲ್ಲ, ಅಸಹಜವೂ ಅಲ್ಲ. ಆದರೆ ಈ ಚೀನಾ-ಶ್ರೀಲಂಕಾ ವ್ಯವಹಾರದಲ್ಲಿ ಮೂರು ಮುಖ್ಯ ತೊಡಕುಗಳಿದ್ದವು. ಒಂದು- ಈ ಯೋಜನೆಗಳು ತಕ್ಷಣಕ್ಕೆ ಫಲ ನೀಡುವಂತಹವಲ್ಲ, ಎರಡು- ಚೀನೀ ಸಾಲದ ಬಡ್ಡಿದರ ಅಂತಾರಾಷ್ಟೀಯ ಹಣಕಾಸು ಸಂಸ್ಥೆಗಳು ಅಥವಾ ಇತರ ದೇಶಗಳು ವಿಧಿಸುವ ಬಡ್ಡಿದರದ ನಾಲ್ಕು ಪಟ್ಟು ಇದ್ದವು, ಮೂರು- ಚೀನೀ ಉದ್ದೇಶವೇ ಸಾಲ ತೆಗೆದುಕೊಂಡ ದೇಶಗಳು ಅದನ್ನು ತೀರಿಸಲಾಗದೇ, ಬಡ್ಡಿಯನ್ನೂ ಕಟ್ಟಲಾಗದೇ ಡಿಫಾಲ್ಟರ್ ಆಗುವಂತೆ ಮಾಡುವುದಾಗಿತ್ತು! ಹೀಗೆ ವ್ಯರ್ಥ ಯೋಜನೆಗಳಿಗಾಗಿ ಅಧಿಕ ಬಡ್ಡಿದರದಲ್ಲಿ ಚೀನೀ ಸಾಲವನ್ನು ಶ್ರೀಲಂಕಾ ಪಡೆದುಕೊಂಡದ್ದರ ಹಿಂದಿರುವುದು ಅಧ್ಯಕ್ಷ ಮಹಿಂದ ರಾಜಪಕ್ಷ ತಮ್ಮನ್ನೇ ತಾವು ಚೀನೀ ಕಮ್ಯೂನಿಸ್ಟ್ ಸರ್ಕಾರಕ್ಕೆ ಮಾರಿಕೊಂಡದ್ದೇ ಆಗಿತ್ತು. ಆದರೆ ‘ಅಂತರ್ಯುದ್ಧವನ್ನು ಗೆದ್ದ ವೀರ’ ಎಂದು ಹೊಗಳಿಕೆಗಳಿಗೆ ಪಾತ್ರವಾಗುತ್ತಿದ್ದ ಮಹಿಂದರ ಈ ಕರಾಳಮುಖವನ್ನು ಶ್ರೀಲಂಕಾ ಅಂದು ಕಾಣಲೇ ಇಲ್ಲ. ಪರಿಣಾಮವಾಗಿ ಶ್ರೀಲಂಕಾ ಚೀನೀ ಸಾಲಸಂಕೋಲೆಯೊಳಕ್ಕೆ ವೇಗವಾಗಿ ಜಾರತೊಡಗಿತು.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ, ಶ್ರೀಮಂತ ದೇಶಗಳಿಂದ, ಸಾವರಿನ್ ಬಾಂಡ್​ಗಳನ್ನು ಹೊರಡಿಸುವುದರಿಂದ ಶ್ರೀಲಂಕಾ ಪಡೆದಿರುವ 51 ಬಿಲಿಯನ್ ಡಾಲರ್​ಗಳಲ್ಲಿ ಆರು ಬಿಲಿಯನ್ ಡಾಲರ್​ಗಳು ಚೀನಾ ಒಂದರಿಂದಲೇ ಬಂದಿವೆ. ಈ ಸಾಲಗಳನ್ನು ತೀರಿಸುವುದಿರಲಿ, ಸಮಯಕ್ಕೆ ಸರಿಯಾಗಿ ಬಡ್ಡಿ ಕಟ್ಟಲೂ ಶ್ರೀಲಂಕಾಗೆ ಆಗುತ್ತಿಲ್ಲ. ಅದಕ್ಕಾಗಿ ಅಗತ್ಯವಿರುವ ವಿದೇಶೀ ವಿನಿಮಯ ದೇಶದಲ್ಲಿಲ್ಲ. ಇದಕ್ಕೂ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ವ್ಯರ್ಥ ಯೋಜನೆಗಳಿಗಾಗಿ ಅಪಾರ ಸಾಲದ ಹಣವನ್ನು ಸುರಿದು ಗ್ರಾಹಕ ವಸ್ತುಗಳ ಉತ್ಪಾದನೆಯನ್ನು ನಿರ್ಲಕ್ಷಿಸಿದ್ದರಿಂದಾಗಿ ಅಗತ್ಯವಸ್ತುಗಳು, ಔಷಧಗಳು ಮತ್ತು ಪೆಟ್ರೋ/ಡೀಸೆಲ್ ಆಮದಿಗಾಗಿ ಶ್ರೀಲಂಕಾ ಪ್ರತಿ ತಿಂಗಳು 1.6 ಬಿಲಿಯನ್ ಡಾಲರ್ ವ್ಯಯಿಸಬೇಕು. ಇದರೊಂದಿಗೆ ಸಾಲಗಳ ಮರುಪಾವತಿ ಹಾಗೂ ಬಡ್ಡಿಪಾವತಿ, ಮೆಚ್ಯೂರ್ ಆದ ಸಾವರಿನ್ ಬಾಂಡ್​ಗಳಿಗೆ ಅಸಲು-ಬಡ್ಡಿ ಪಾವತಿಗಾಗಿ ಶ್ರೀಲಂಕಾಗೆ ವರ್ಷವೊಂದಕ್ಕೆ ಐದರಿಂದ ಏಳು ಬಿಲಿಯನ್ ಡಾಲರ್​ಗಳ ಅಗತ್ಯವಿದೆ. ಕೋವಿಡ್ ಮಾರಿ ಆರಂಭವಾಗುವವರೆಗೆ ಹೇಗೋ ನಡೆಯುತ್ತಿತ್ತು. ಆದರೆ ಮಹಾಮಾರಿ ಹರಡಿಕೊಳ್ಳುತ್ತಿದ್ದಂತೆ ದೇಶಕ್ಕೆ ವಿದೇಶೀ ಪ್ರವಾಸಿಗರ ಆಗಮನ ನಿಂತುಹೋಯಿತು. ಅಲ್ಲಿಗೆ ಅವರಿಂದ ದೊರೆಯುತ್ತಿದ್ದ ವಿದೇಶೀ ವಿನಿಮಯವೂ ನಿಂತುಹೋಯಿತು. ಅದೆಷ್ಟು ಗೊತ್ತೇ? ದೇಶದ ವಾರ್ಷಿಕ ಆದಾಯದ ಶೇಕಡ ಹತ್ತರಷ್ಟು!

ಇದು ಸಾಲದು ಎಂಬಂತೆ ನವೆಂಬರ್ 2019ರ ಚುನಾವಣಾ ಪ್ರಚಾರದಲ್ಲಿ ವಾಗ್ದಾನ ಮಾಡಿದಂತೆ ಹೊಸ ಅಧ್ಯಕ್ಷ ಗೋಟಾಬಯ ರಾಜಪಕ್ಷ ಎಲ್ಲ ಬಗೆಯ ತೆರಿಗೆಗಳಲ್ಲಿ ಅಗಾಧ ಕಡಿತ ತಂದರು. ಇದರಿಂದಾಗಿ ಸರ್ಕಾರದ ವಾರ್ಷಿಕ ಆದಾಯಕ ಶೇಕಡ ಇಪ್ಪತೆôದರಷ್ಟು ಏಕಾಏಕಿ ಮಾಯವಾಯಿತು. ಇದೂ ಸಾಲದು ಎಂಬಂತೆ ಕಳೆದ ಜುಲೈನಲ್ಲಿ ಕೃಷಿಯನ್ನು ಸಾರಾಸಗಟಾಗಿ ಸಾವಯವಗೊಳಿಸುವ ನಿರ್ಣಯವನ್ನು ಗೋಟಾಬಯ ರಾಜಪಕ್ಷ ಕೈಗೊಂಡು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿರ್ಬಂಧಿಸಿದರು. ಆದರೆ ಅಗತ್ಯವಿರುವಷ್ಟು ಸಾವಯವ ಗೊಬ್ಬರ ದೇಶದಲ್ಲಿ ಲಭ್ಯವಿರಲಿಲ್ಲ. ಚೀನಾದಿಂದ ಬಂದ ಅಂತಹ ಗೊಬ್ಬರದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳಿವೆ ಎಂದು ಶ್ರೀಲಂಕಾವೇ ತಿರಸ್ಕರಿಸಿತು. ಇದೆಲ್ಲದರಿಂದಾಗಿ ಕೃಷಿ ಏಕಾಏಕಿ ಹಾಳುಬಿದ್ದು ಪ್ರಮುಖ ಉತ್ಪಾದನೆಯಾದ ಭತ್ತದ ಇಳುವರಿ ಗಣನೀಯವಾಗಿ ಕುಗ್ಗಿಹೋಯಿತು. ಮೊನ್ನೆಮೊನ್ನೆಯವರೆಗೂ ಅಕ್ಕಿಯನ್ನು ರಫ್ತು ಮಾಡುತ್ತಿದ್ದ ಶ್ರೀಲಂಕಾ ಏಕಾಏಕಿ ಆಮದು ಮಾಡಿಕೊಳ್ಳುವ ದುಃಸ್ಥಿತಿಗಿಳಿದು ನಿಂತಿತು. ಅಕ್ಕಿ ಆಮದಿನಿಂದಾಗಿ ವಿದೇಶಿ ವಿನಿಮಯ ಭಂಡಾರದ ಮೇಲೆ ಇನ್ನಷ್ಟು ಒತ್ತಡ ಬಿತ್ತು. ರಫ್ತುಗಳು ಕಡಿಮೆಯಾಗಿ, ಆಮದುಗಳು ಅಗಾಧವಾಗಿ ಹೆಚ್ಚತೊಡಗಿದ್ದರಿಂದ ವಿದೇಶೀವಿನಿಮಯ ಭಂಡಾರ ವೇಗವಾಗಿ ಕುಗ್ಗತೊಡಗಿತು. ನವೆಂಬರ್ 2019ರಲ್ಲಿ ಗೋಟಾಬಯ ರಾಜಪಕ್ಷ ಅಧಿಕಾರಕ್ಕೆ ಬಂದಾಗ ಏಳು ಬಿಲಿಯನ್ ಡಾಲರ್ ಇದ್ದ ವಿದೇಶೀವಿನಿಮಯ ಸಂಗ್ರಹ ಜುಲೈ 2021ರಲ್ಲಿ ಅವರು ರಾಸಾಯನಿಕ ಗೊಬ್ಬರ ಬಳಕೆಯನ್ನು ನಿರ್ಬಂಧಿಸುವ ಹೊತ್ತಿಗೆ ಎರಡು ಬಿಲಿಯನ್ ಡಾಲರ್​ಗಳಿಗಿಳಿಯಿತು. ಈ ವರ್ಷದ ಆರಂಭದ ಹೊತ್ತಿಗೆ ಅದರಲ್ಲಿ ಮುಕ್ಕಾಲು ಪಾಲು ಖಾಲಿಯಾಗಿ ಕೇವಲ ಐವತ್ತು ಮಿಲಿಯನ್ ಡಾಲರ್​ಗಳಿಗೆ ಇಳಿದುಹೋಯಿತು. ಅಂದರೆ ತಿಂಗಳ ಅಗತ್ಯವಸ್ತುಗಳನ್ನೂ ಆಮದು ಮಾಡಿಕೊಳ್ಳಲು ಆಗದಂಥ ಸ್ಥಿತಿ! ಪರಿಣಾಮವಾಗಿ ಅಕ್ಕಿ ಸೇರಿ ಎಲ್ಲ ಅಗತ್ಯವಸ್ತುಗಳು ತುಟ್ಟಿಯಾದವು ಅಥವಾ ಪೇಟೆಯಿದಲೇ ಮಾಯವಾದವು.

ಸಾಮಾನ್ಯ ಶ್ರೀಲಂಕೀಯ ಬೀದಿಗೆ ಬಂದು ಪ್ರತಿಭಟಿಸತೊಡಗಿದ. ಆತನ ರೋಷ ದೇಶವನ್ನು ದುರ್ಗತಿಗೆ ದೂಡಿದ ರಾಜಪಕ್ಷ ಕುಟುಬದ ಮೇಲೆ ತಿರುಗಿತು. ಎಂದೋ ಆಗಬೇಕಾದ್ದು ಇಂದಾಗಿ ಅಧ್ಯಕ್ಷ, ಪ್ರಧಾನಮಂತ್ರಿ ಸೇರಿದಂತೆ ಮಂತ್ರಿಗಳಾಗಿದ್ದ, ಸರ್ಕಾರದ ಉನ್ನತ ಅಧಿಕಾರಗಳಲ್ಲಿದ್ದ ಸುಮಾರು ನಲವತ್ತು ರಾಜಪಕ್ಷರುಗಳು ಜನವಿರೋಧಕ್ಕೆ ಗುರಿಯಾದರು. ಒಂದುಕಾಲದ ಜನರ ಕಣ್ಮಣಿ, ಯುದ್ಧವೀರ ಮಹಿಂದ ರಾಜಪಕ್ಷ ದೇಶವಾಸಿಗಳ ತಿರಸ್ಕಾರಕ್ಕೆ ಗುರಿಯಾಗಿ ಮೇ 9ರಂದು ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಲ್ಲಿಗೆ ಸಮಸ್ಯೆಯೇನೂ ಬಗೆಹರಿಯಲಿಲ್ಲ. ಶಾಂತ ಪ್ರತಿಭಟನಾಕಾರರ ಮೇಲೆ ಮೊದಲು ಹಿಂಸಾಚಾರವೆಸಗಿದ್ದೇ ಮಹಿಂದರ ಬೆಂಬಲಿಗರು, ಮಹಿಂದರದೇ ಕುಮ್ಮಕ್ಕಿನಿಂದ. ಅದು ಜನರ ತಾಳ್ಮೆಯ ಪರೀಕ್ಷೆ. ಆಗ ಕೊಲಂಬೋದಲ್ಲಿ ಘಟಿಸಿದ್ದು ಅಕ್ಷರಶಃ ಲಂಕಾದಹನ. ಮಹಿಂದರ ಮೂರು ಮತ್ತು ಇತರ ರಾಜಪಕ್ಷರುಗಳ ಹತ್ತು ನಿವಾಸಗಳು ರೋಷತಪ್ತ ಜನರಿಂದ ಬೆಂಕಿಗಾಹುತಿಯಾಗಿ ಉರಿದುಹೋದವು. ಮಹಿಂದರನ್ನೇ ಗುರಿಯಾಗಿಸಿಕೊಂಡ ಜನರು ಅವರ ನಿವಾಸಕ್ಕೇ ದಾಳಿಯಿಟ್ಟರು. ಆಗ ಮಹಿಂದರೆನಾದರೂ ಅವರ ಕೈಗೆ ಸಿಕ್ಕಿದ್ದರೆ ಅವರು ಅಂದು ಜೀವಂತ ಉಳಿಯುತ್ತಿರಲಿಲ್ಲ. ಸೈನಿಕರು ಅವರನ್ನು ತರಾತುರಿಯಲ್ಲಿ ಹೆಲಿಕಾಪ್ಟರ್​ಗೇರಿಸಿ ಪೂರ್ವ ತೀರದ ಟ್ರಿಂಕಾಮಲೀ ಬಂದರಿನಲ್ಲಿರುವ ನೌಕಾನೆಲೆಗೆ ಕೊಂಡೊಯ್ದು ಅಡಗಿಸಿಟ್ಟರು. ಅಷ್ಟಾಗಿಯೂ ಜನಾಕ್ರೋಶ ಕಡಿಮೆಯಾಗಿಲ್ಲ. ವ್ಯಗ್ರ ಜನತೆ ಅಧ್ಯಕ್ಷ ಗೋಟಾಬಯ ರಾಜಪಕ್ಷರ ರಾಜೀನಾಮೆ ಕೇಳುತ್ತಿದ್ದಾರೆ, ‘ಗೋ ಗೋಟಾ ಗೋ’ ಎಂದು ಕೂಗುತ್ತಿದ್ದಾರೆ, ಅವರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಕುಳಿತಿದ್ದಾರೆ. ಅಧ್ಯಕ್ಷ ಮಹಾಶಯರು ಬಿಗಿ ಭದ್ರತೆಯ ತಮ್ಮ ನಿವಾಸದಿಂದಲೇ ಕಾರ್ಯಭಾರ ನಿಭಾಯಿಸುತ್ತಿದ್ದಾರೆ.

ಈಗ ಮುಂದೇನು ಅನ್ನುವುದೇ ದೊಡ್ಡ ಪ್ರಶ್ನೆ. ಶ್ರೀಲಂಕಾದ ವ್ಯವಸ್ಥೆಯಲ್ಲಿ ಅಧ್ಯಕ್ಷರು ಜನರಿಂದ ಚುನಾಯಿತರಾದರೆ ಪ್ರಧಾನಮಂತ್ರಿಯನ್ನು ಅಧ್ಯಕ್ಷರು ನೇಮಿಸುತ್ತಾರೆ. ಮಹಿಂದ ತೆರವುಮಾಡಿದ ಸ್ಥಾನವನ್ನು ತುಂಬಲು ಅಧ್ಯಕ್ಷ ಗೋಟಾಬಯ ಆರಿಸಿದ ವ್ಯಕ್ತಿ ರನಿಲ್ ವಿಕ್ರಮಸಿಂಘ. ಶ್ರೀಲಂಕಾದಲ್ಲಿ ನಡೆಯುತ್ತಿರುವ ನಾಟಕತಳಿಗೆ ಇದೊಂದು ಹೊಸ ಸೇರ್ಪಡೆ. 2018ರಲ್ಲಿ ಆಗಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರಿಗೆ ಚೀನೀ ‘ಮಂಕುಬೂದಿ’ ಎರಚಿ ಅವರು ಪ್ರಧಾನಿಯಾಗಿದ್ದ ರನಿಲ್​ರನ್ನು ಎತ್ತಂಗಡಿ ಮಾಡುವಂತೆ ಮಾಡಿ ಆ ಸ್ಥಾನವನ್ನು ಕಬಳಿಸಿದ್ದುದು ಮಹಿಂದ. ಈಗ ಅಣ್ಣ-ತಮ್ಮ ರಾಜಪಕ್ಷರುಗಳಿಗೆ ಅದೇ ರನಿಲ್ ಬೇಕಾಗಿದ್ದಾರೆ. ಇದರ ಹಿಂದಿನ ಅವರ ಲೆಕ್ಕಾಚಾರ ನಮಗೆ ಅರ್ಥವಾಗುವಂತೇ ಇದೆ. ಈಗ ಶ್ರೀಲಂಕಾಗೆ ಯಾರೂ ದಿಕ್ಕಿಲ್ಲ. ದಿವಾಳಿಯೆದ್ದಿರುವ ಅದಕ್ಕೆ ಸಾಲ ನೀಡಲು ಯಾವ ದೇಶವೂ, ಸಂಸ್ಥೆಯೂ ಮುಂದೆ ಬರುತ್ತಿಲ್ಲ. ‘ಪರಮಮಿತ್ರ ಚೀನಾ’ ಕೈಯೆತ್ತಿಬಿಟ್ಟಿದೆ. ಇಂತಹ ಸನ್ನಿವೇಶದಲ್ಲಿ ಶ್ರೀಲಂಕಾ ಹಳೇ ಗಂಡನ ಪಾದವೇ ಗತಿ ಎಂದು ಭಾರತದತ್ತ ಆಸೆಗಣ್ಣಿನಿಂದ ನೋಡುತ್ತಿದೆ. ಕಳೆದ ಆರು ತಿಂಗಳಲ್ಲಿ ಒಂದೂವರೆ ಬಿಲಿಯನ್ ಡಾಲರ್ ಸಹಾಯಧನ ಒದಗಿಸಿರುವ, ವೈದ್ಯಕೀಯ ಸಾಮಗ್ರಿಗಳು ಮತ್ತು ಪೆಟ್ರೋಲ್ ಅನ್ನು ತರಾತುರಿಯಲ್ಲಿ ಪೂರೈಸಿರುವ ಭಾರತ ಇನ್ನಷ್ಟು ಮುಂದೆ ಬಂದು ತಮ್ಮ ದೇಶವನ್ನು ಪಾತಾಳದಿಂದ ಮೇಲೆತ್ತಬೇಕೆಂದು ಗೋಟಾಬಯ ಬಯಸುತ್ತಿದ್ದಾರೆ. ಸದ್ಯಕ್ಕೆ ಅದನ್ನು ಸಾಧಿಸಬಹುದಾದ ಏಕೈಕ ವ್ಯಕ್ತಿ ‘ಭಾರತದ ಮಿತ್ರ’ ಎಂದು ಗುರುತಿಸಿಕೊಂಡಿರುವ ರನಿಲ್ ವಿಕ್ರಮಸಿಂಘ ಮಾತ್ರ ಎಂದೂ ಚಾಣಾಕ್ಷ ಗೋಟಾಬಯ ಮತ್ತು ಮಹಿಂದ ಲೆಕ್ಕಹಾಕಿದ್ದಾರೆ. ರನಿಲ್ ಸಹ ಅದೇ ನಿರೀಕ್ಷೆಯಲ್ಲಿ ಧೈರ್ಯದಿಂದ ಪ್ರಧಾನಿ ಪಟ್ಟವನ್ನು ಒಪ್ಪಿಕೊಂಡಂತಿದೆ. ಈ ಕಷ್ಟಕಾಲದಲ್ಲಿ ತಮಗೆ ಸಹಾಯ ಮಾಡಬಹುದಾದ ದೇಶಗಳ ಪಟ್ಟಿ ನೀಡುತ್ತ ರನಿಲ್ ಮೊದಲು ಉಲ್ಲೇಖಿಸಿದ್ದು ಭಾರತ. ಪಟ್ಟಿಯಲಿ ಚೀನಾದ್ದು ನಾಲ್ಕನೆಯದು ಜಪಾನ್ ಮತ್ತು ಅಮೆರಿಕದ ನಂತರ. ಶ್ರೀಲಂಕಾವನ್ನು ಆರ್ಥಿಕ ದುರವಸ್ಥೆಯಿಂದ ಕಾಪಾಡುವುದು ಭಾರತಕ್ಕೆ ಕಷ್ಟವೇನಲ್ಲ. ನೆರೆನಾಡಾಗಿ ಭಾರತ ಅದನ್ನು ಮಾಡಲೇಬೇಕು. ಆದರೆ ಆ ಸಹಾಯದ ಹಾದಿಯಲಿ ನಾವು ಮರೆಯಬಾರದ ಸತ್ಯವೆಂದರೆ ಶ್ರೀಲಂಕಾದ ರಾಜಕಾರಣಿಗಳು ಹಾಗೂ ಜನರು ತಾವು ನಂಬಿಗಸ್ತರಲ್ಲ ಎನ್ನುವುದನ್ನು ಈಗಾಗಲೇ ಒಂದಕ್ಕಿಂತ ಹೆಚ್ಚು ಬಾರಿ ತೋರಿಸಿದ್ದಾರೆ; ಕೆಟ್ಟಕಾಲದಲ್ಲಿ ನಮ್ಮನ್ನೂ, ಒಳ್ಳೆಯ ಕಾಲದಲ್ಲಿ ನಮ್ಮ ಶತ್ರುಗಳನ್ನೂ ಅವರು ಓಲೈಸುತ್ತಾರೆ ಎನ್ನುವುದು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)