ಬುಷ್​ ಸೀನಿಯರ್, ಗೋರ್ಬಚೆವ್, ಸದ್ದಾಂ ಹುಸೇನ್​ 
ಅಂಕಣ

ಕಾಲದ ಆಯ್ಕೆಯೋ? ಕಾಲದ ಮೇಲಿನ ಹೇರಿಕೆಯೋ?: ನಾಗರಿಕತೆಗಳ ಸಂಘರ್ಷ ಭಾಗ - 2

Webdesk - Ravikanth
ಫ್ರಾನ್ಸಿಸ್ ಫುಕುಯಾಮಾ ಅವರು ತಮ್ಮ ‘ಇತಿಹಾಸದ ಅಂತ್ಯ’ ಸಿದ್ಧಾಂತವನ್ನು ಮೊದಲಿಗೆ 1989ರಲ್ಲಿ ಲೇಖನದಲ್ಲಿ ಮತ್ತು ನಂತರ 1992ರಲ್ಲಿ ಪುಸ್ತಕದಲ್ಲಿ ಮಂಡಿಸಿದ ನಡುವಿನ ಮೂರು ವರ್ಷಗಳ ಅವಧಿಯಲ್ಲಿ ಜಾಗತಿಕ ಇತಿಹಾಸ ಸಂಕ್ರಮಣ ಕಾಲಘಟ್ಟದಲ್ಲಿ ಸಾಗುತ್ತಿತ್ತು. ತನ್ನೆದುರು ಅನಾವರಣಗೊಳ್ಳುತ್ತಿದ್ದ ಅಸಾಮಾನ್ಯ ಬೆಳವಣಿಗೆಗಳನ್ನು ಮಾನವಕುಲ ಬೆರಗುಗಣ್ಣಿನಿಂದ ನೋಡುತ್ತಿತ್ತು. ಪೂರ್ವ ಯೂರೋಪ್ ಮೇಲೆ ಸೋವಿಯೆತ್ ನಿಯಂತ್ರಣ ವೇಗವಾಗಿ ಕಳಚಿಹೋಗುತ್ತಿದ್ದು ಅಲ್ಲಿನ ದೇಶಗಳು ರಾಜಕೀಯ ಮತ್ತು ಆರ್ಥಿಕವಾಗಿ ಹೊಸರೂಪ ಪಡೆದುಕೊಳ್ಳುತ್ತಿದ್ದವು. ಪೊಲ್ಯಾಂಡ್​ನಲ್ಲಿ ತಾದಿಯುಸ್ತ್ ಮ್ಯಾಜೋವಿಯೇಕಿ ಸೆಪ್ಟೆಂಬರ್ 1989ರಲ್ಲಿ ಸಾಲಿಡಾರಿಟಿ ಪಕ್ಷದ ಸರ್ಕಾರ ರಚಿಸಿದಾಗ ದ್ವಿತೀಯ ಮಹಾಯುದ್ದದ ತರುವಾಯ ಪೂರ್ವ ಯೂರೋಪ್ ಮೊಟ್ಟಮೊದಲ ಬಾರಿಗೆ ಕಮ್ಯುನಿಸ್ಟೇತರ ಸರ್ಕಾರವನ್ನು ಕಂಡಿತು. ಮುಂದಿನ ಮೂರು ತಿಂಗಳಲ್ಲಿ ರುಮೇನಿಯಾದಲ್ಲಿ ಜನ ಕ್ರಾಂತಿಕಹಳೆ ಊದಿ, ಅಧ್ಯಕ್ಷರ ಅರಮನೆಗೆ ನುಗ್ಗಿ, ‘ಕ್ರಿಸ್​ವುಸ್ ಟರ್ಕಿಯನ್ನು ಕತ್ತರಿಸುವಂತೆ ಅವನನ್ನು ಕತ್ತರಿಸಿಹಾಕಿ’ ಎಂದು ಕೂಗುತ್ತಾ ಅಧ್ಯಕ್ಷ ನಿಕೊಲೇ ಚೌಸೆಸ್ಕೂ್ಯರನ್ನು ಹೊರಗೆಳೆದು ತಂದರು. ನಂತರದ ದೊಡ್ಡ ಕಥೆಯನ್ನು ಚಿಕ್ಕದಾಗಿ ಹೇಳುವುದಾದರೆ ಅಸಂಖ್ಯ ಗುಂಡುಗಳಿಂದ ತೂತುತೂತಾಗಿದ್ದ ಚೌಸೆಸ್ಕೂ್ಯರ ದೇಹ ಮರುದಿನ ಅಧ್ಯಕ್ಷರ ಅರಮನೆಯ ಕಾಂಪೌಂಡ್ ಬಳಿ ಬಿದ್ದಿತ್ತು!

ಈ ನಡುವೆ ಝೆಕೋಸ್ಲೊವಾಕಿಯನ್ನರು ಶಾಂತಿಯುತ ಆಂದೋಲನದಿಂದಲೇ ಕಮ್ಯೂನಿಸ್ಟ್ ಸತ್ತೆಯನ್ನು ಕಿತ್ತೊಗೆದರೆ ಹಂಗೆರಿಯಲ್ಲಿ ಕಮ್ಯೂನಿಸ್ಟರೇ ಒಂದು ಬೆಳಿಗ್ಗೆ ತಮ್ಮ ಕಚೇರಿಯ ಬೋರ್ಡ್ ಬದಲಾಯಿಸಿಬಿಟ್ಟರು! ಇನ್ನು ಅವೆಲ್ಲವುಗಳ ‘ದೊಡ್ಡಣ್ಣ’ ಸೋವಿಯೆತ್ ಯೂನಿಯನ್​ನದೊಂದು ದೊಡ್ಡ ಕಥೆ.

ಸಮತಾವಾದಿ ಮೌಲ್ಯಗಳು ಜನತೆಯ ಬದುಕನ್ನು ಉತ್ತಮಗೊಳಿಸುವಲ್ಲಿ ವಿಫಲವಾಗಿದೆಯೆಂದು ಸಕಾರಣವಾಗಿಯೇ ತೀರ್ವನಿಸಿ, ಸೋವಿಯೆತ್ ಯೂನಿಯನ್​ನಲ್ಲಿ ಮಾರುಕಟ್ಟೆ ಅರ್ಥವ್ಯವಸ್ಥೆಯನ್ನು ಐನೂರು ದಿನಗಳಲ್ಲಿ ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಾಕಿಕೊಂಡು, ಅದಕ್ಕಾಗಿ ಅಮೆರಿಕಾದ ಹಣಕಾಸಿನ ಸಹಾಯದ ಮೇಲೆ ಅವಲಂಬಿತವಾಗಿದ್ದ ಸೋವಿಯೆತ್ ನಾಯಕ ಮಿಖಾಯಿಲ್ ಗೋರ್ಬಚೆವ್​ರ ಕೈಗಳು ವೇಗವಾಗಿ ಸಡಿಲಾಗುತ್ತಾ ಹೋಗಿ ಅಂತಿಮವಾಗಿ 1991ರ ಕ್ರಿಸ್​ವುಸ್ ಹೊತ್ತಿಗೆ ಒಂದುಕಾಲದ ಬಲಾಢ್ಯ ಸೇನಾಶಕ್ತಿ ಸೋವಿಯೆತ್ ಯೂನಿಯನ್ ಕುಸಿದುಹೋಗಿ ಇತಿಹಾಸವಾಯಿತು.

ಹೀಗೆ ಶೀತಲ ಸಮರ ಅಂತ್ಯಗೊಂಡಿತು ಮತ್ತು ಸಮತಾವಾದಿ- ನಿರಂಕುಶಾಧಿಕಾರಿ ಮೌಲ್ಯದ ವಿರುದ್ಧ ಪ್ರಜಾಪ್ರಭುತ್ವೀಯ-ಬಂಡವಾಳಶಾಹಿ ಮೌಲ್ಯದ ವಿಜಯವನ್ನು ಜಗತ್ತು ಕಂಡಿತು. ಆದರೆ ಅಲ್ಲಿಗೆ ಜಾಗತಿಕ ರಂಗದಲ್ಲಿ ಸಂಘರ್ಷ ಅಂತ್ಯಗೊಂಡಿತೇ? ಹಾಗೇನಿಲ್ಲ ಎನ್ನುವುದಕ್ಕೆ ದಟ್ಟ ಸೂಚನೆಗಳು 1990-91ರಲ್ಲೇ ಕಾಣಿಸಿಕೊಂಡವು. ಇದಕ್ಕೆ ಸಂಬಂಧಿಸಿದಂತೆ ಅಗಸ್ಟ್ 1990ರಲ್ಲಿ ಇರಾಕ್ ನೆರೆಯ ಕುವೈತ್ ಅನ್ನು ಆಕ್ರಮಿಸಿಕೊಂಡದ್ದೊಂದು ಆಸಕ್ತಿಕರ ಬೆಳವಣಿಗೆ.

ಬಾ’ಆತ್ ಸಮಾಜವಾದಿ ಪಕ್ಷದ ಆಡಳಿತದಲ್ಲಿದ್ದ ಇರಾಕ್ ಅಂದು ಇಡೀ ಅರಬ್ ಜಗತ್ತಿನಲ್ಲೇ ಧಾರ್ವಿುಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಉದಾರಿಯಾದ ರಾಷ್ಟ್ರವಾಗಿತ್ತು. ಅಧ್ಯಕ್ಷ ಸದ್ದಾಂ ಹುಸೇನ್ ದೇಶವನ್ನು ಸೋವಿಯೆತ್ ಯೂನಿಯನ್ ಜತೆ ಗಾಢಮೈತ್ರಿಯಲ್ಲಿ ಬಂಧಿಸಿದ್ದರು. ಷತ್-ಅಲ್-ಅರಬ್ ಜಲಗಡಿಯನ್ನು ದೇಶಕ್ಕೆ ಅನುಕೂಲವಾಗುವಂತೆ ಬದಲಾಯಿಸಿಕೊಳ್ಳಲು ಅವರು ಸೆಪ್ಟೆಂಬರ್ 1980ರಲ್ಲಿ ನೆರೆಯ ಇರಾನ್ ವಿರುದ್ಧ ಯುದ್ಧ ಆರಂಭಿಸಿ ‘ಮೊದಲ ಗಲ್ಪ್ ಯುದ್ಧ’ಕ್ಕೆ ನಾಂದಿ ಹಾಡಿದಾಗ ಸನ್ನಿವೇಶಗಳ ಒಂದು ವಿಚಿತ್ರ ಸಂಯೋಜನೆಯಂತೆ ಸೋವಿಯೆತ್ ಯೂನಿಯನ್ ಮತ್ತು ಅಮೆರಿಕಾಗಳೆರಡೂ ಅವರನ್ನು ಬೆಂಬಲಿಸಿದವು. ಮಾಸ್ಕೋಗಿದ್ದ ಸಹಜ ಕಾರಣ ಘನಿಷ್ಟ ಮಿತ್ರತ್ವವಾದರೆ ಅಮೆರಿಕಾಗಿದ್ದದ್ದು ಅವಕಾಶವಾದ. ವರ್ಷದ ಹಿಂದೆ ತನ್ನ ಘನಿಷ್ಟ ಮಿತ್ರ ಅರಸ ರೆಜಾ ಶಾ ಪಹ್ಲವಿಯನ್ನು ಕೆಳಗುರುಳಿಸಿ ಮೂಲಭೂತವಾದಿ ಆಡಳಿತವ್ಯವಸ್ಥೆಯನ್ನು ಸ್ಥಾಪಿಸಿದ್ದ ಧರ್ಮಗುರು ಆಯಾತೊಲ್ಲಾ ಖೊಮೇನಿಯನ್ನು ಅಮೆರಿಕಾ ಒಂದು ಅನಿರೀಕ್ಷಿತ ಅಷ್ಟೇ ಅನಗತ್ಯ ಕಂಟಕವೆಂದು ಬಗೆದಿತ್ತು. ಅದರಲ್ಲೂ ಪಾಶ್ಚಿಮಾತ್ಯ ನಾಗರಿಕತೆಯನ್ನು ಮತ್ತದರ ಮುಖವಾದ ಅಮೆರಿಕಾವನ್ನು ಖೊಮೇನಿ ಕೆಟ್ಟ ಭಾಷೆಯಲ್ಲಿ ನಿಂದಿಸಿ, ಆ ಜಾಗತಿಕ ಶಕ್ತಿಯ ವಿರುದ್ಧ ಇಸ್ಲಾಮಿಕ್ ಜಗತ್ತನ್ನು ಕೆರಳಿಸಲು ಹೊರಟಾಗ ತಾನು ಹೇಗಾದರೂ ಮಟ್ಟಹಾಕಬೇಕಾದ ವೈರಿ ಆ ಧರ್ಮಗುರು ಎಂದು ಅಮೆರಿಕಾ ಭಾವಿಸಿತು. ಅದೇ ಸನ್ನಿವೇಶದಲ್ಲಿ ಇರಾನ್ ಮೇಲೆರಗಿದ ಸದ್ದಾಂ ಹುಸೇನ್ ಅಮೆರಿಕಾಗೆ ಒಂದು ಅನಿರೀಕ್ಷಿತ ಆಶಾಕಿರಣದಂತೆ ಕಂಡರು. ಉದಾರವಾದಿ ಸದ್ದಾಂರನ್ನು ಬಲಪಡಿಸುವ ಮೂಲಕ ಮೂಲಭೂತವಾದಿ ಖೊಮೇನಿಯನ್ನು ಬಲಹೀನಗೊಳಿಸಬಹುದೆಂದು ಅಮೆರಿಕಾ ಬಗೆಯಿತು. ಸದ್ದಾಂರ ಸಮಾಜವಾದ ಮತ್ತು ಸೋವಿಯೆತ್ ಸಖ್ಯ ಈಗ ಶ್ವೇತಭವನಕ್ಕೆ ಗೌಣವಾಗಿಬಿಟ್ಟವು.

ಆದರೆ ಅದೇ ಸದ್ದಾಂ ಹುಸೇನ್ ಆಗಸ್ಟ್ 1990ರಲ್ಲಿ ನೆರೆಯ ಪುಟ್ಟ ಕುವೈತ್ ಅನ್ನು ಆಕ್ರಮಿಸಿಕೊಂಡಾಗ ವಾಷಿಂಗ್​ಟನ್​ಗೆ ಅವರು ಕಂಡದ್ದೇ ಬೇರೆ ಬಗೆಯಾಗಿ. ಆ ಇರಾಕಿ ಅಧ್ಯಕ್ಷ ಪಶ್ಚಿಮ ಏಷ್ಯಾದ ಹಿಟ್ಲರ್ ಆಗಿ ಬೆಳೆಯುತ್ತಿದ್ದಾರೆಂದು ‘ಜ್ಞಾನೋದಯ’ವಾಗುತ್ತಿದ್ದಂತೇ ಅಮೆರಿಕಾ ಅವರ ರೆಕ್ಕೆಗಳನ್ನು ಕತ್ತರಿಸಲು ಮುಂದಾಯಿತು. ಅದೇ ಜನವರಿ-ಏಪ್ರಿಲ್ 1991ರ ‘ಎರಡನೆಯ ಗಲ್ಪ್ ಯುದ್ಧ’ಕ್ಕೆ ಕಾರಣವಾಯಿತು. ಅಲ್ಲಿಯವರೆಗೆ ಸೆಕ್ಯುಲರ್, ಸೋಷಿಯಲಿಸ್ಟ್ ಆಗಿದ್ದ ಸದ್ದಾಂ ಹುಸೇನ್ ಏಕಾಏಕಿ ಕಟ್ಟಾ ಮುಸ್ಲಿಂ ಆಗಿಬಿಟ್ಟರು! ಇಸ್ಲಾಮನ್ನು ಉಳಿಸಲು ಧರ್ಮಲಂಡ ಸೈತಾನ ಅಮೆರಿಕಾ ವಿರುದ್ಧ ಱMಟಠಿಜಛ್ಟಿ ಟ್ಛ ಅ್ಝ ಗಚ್ಟಠಱ ಅನ್ನು ಆರಂಭಿಸಿರುವುದಾಗಿಯೂ, ಎಲ್ಲ ಮುಸ್ಲಿಮರೂ, ಮುಸ್ಲಿಂ ದೇಶಗಳೂ ತನ್ನ ಪರವಾಗಿ ನಿಲ್ಲಬೇಕೆಂದೂ ಅವರು ಕರೆನೀಡಿದರು. ಈ ನಡೆ ಪಾಶ್ಚಿಮಾತ್ಯ ನಾಗರಿಕತೆಯ ವಿರುದ್ಧ ಇಸ್ಲಾಮಿಕ್ ನಾಗರಿಕತೆಯನ್ನು ಕಾಳಗಕ್ಕಿಳಿಸುವ ತಂತ್ರವಾಗಿತ್ತು. ಆ ದಿನಗಳಲ್ಲಿ ಫ್ರಾನ್ಸಿಸ್ ಫುಕುಯಾಮಾ ಹರಿತಗೊಳಿಸುತ್ತಿದ್ದ ‘ಇತಿಹಾಸದ ಅಂತ್ಯ’ ಮತ್ತು ಸ್ಯಾಮ್ಯುಯೆಲ್ ಹಂಟಿಂಗ್​ಟನ್​ರ ತಲೆಯಲ್ಲಿ ಹರಳುಗಟ್ಟುತ್ತಿದ್ದ ‘ನಾಗರಿಕತೆಗಳ ಸಂಘರ್ಷ’ ಸಿದ್ಧಾಂತಗಳ ‘ಭವಿಷ್ಯ’ವನ್ನು ವಿಶ್ಲೇಷಿಸಲು ಈ ಎರಡನೆಯ ಗಲ್ಪ್ ಯುದ್ಧ ನಮಗೊಂದು ಅರ್ಥಪೂರ್ಣ ನೆಪವಾಗುತ್ತದೆ. ಪೂರ್ವ ಯೂರೋಪ್​ನಿಂದ ಆಚೆಗೆ ಕಮ್ಯೂನಿಸ್ಟ್ ಸೋವಿಯೆತ್ ಯೂನಿಯನ್​ನ ವಿಸ್ತಾರ

ವಾದವನ್ನು ತಡೆಗಟ್ಟಲು ಉತ್ತರ ಅಟ್ಲಾಂಟಿಕ್ ಸಾಗರದ ಆಚೀಚಿನ ತೀರದ ದೇಶಗಳಾದ ಅಮೆರಿಕಾ, ಕೆನಡಾ ಮತ್ತವು ಗಳ ಪಶ್ಚಿಮ ಯೂರೋಪಿ ಯನ್ ಸಹ ಯೋಗಿಗಳು ಏಪ್ರಿಲ್ 4, 1949ರಲ್ಲಿ ಉತ್ತರ ಅಟ್ಲಾಂಟಿಕ್ ಕೌಲು ಕೂಟ (ನ್ಯಾಟೊ) ಸೇನಾಕೂಟವನ್ನು ಸ್ಥಾಪಿಸಿದವಷ್ಟೆ. ಅದಕ್ಕೆ ಪ್ರತಿಯಾಗಿ ಸೋವಿಯೆತ್ ಯೂನಿಯನ್ ತನ್ನ ಪೂರ್ವ ಯೂರೋಪಿಯನ್ ಕಮ್ಯೂನಿಸ್ಟ್ ಸಹವರ್ತಿಗಳನ್ನು ಸೇರಿಸಿಕೊಂಡು 1955ರಲ್ಲಿ ‘ವಾರ್ಸಾ ಒಪ್ಪಂದ’ ಎಂಬ ಸೇನಾಕೂಟವನ್ನು ಕಟ್ಟಿದ್ದೂ ಆಯಿತು. 1992ರ ನಂತರದ ಯಾವುದೇ ವರ್ಷದಲ್ಲಿ ನಿಂತು ಈ ಸೇನಾಕೂಟಗಳ ಸ್ಥಾಪನೆಯತ್ತ ಹಿನ್ನೋಟ ಹರಿಸಿದರೆ, ಮುಂದೆ ಮೂವತ್ತೇಳು ವರ್ಷಗಳ ನಂತರ ಹಂಟಿಂಗ್​ಟನ್ ‘ಗುರುತಿಸಿದ’ ಪಾಶ್ಚಿಮಾತ್ಯ ನಾಗರಿಕತೆ ಮತ್ತು ಸಂಪ್ರದಾಯಸ್ಥ ನಾಗರಿಕತೆಗಳು ಹೀಗೆ ‘ಅಧಿಕೃತವಾಗಿ’ ಮುಖಾಮುಖಿಯಾದವು ಎಂಬರ್ಥದಲ್ಲೂ ನೋಡಬಹುದೇನೋ.

1990ರ ಉದ್ದಕ್ಕೂ ಮತ್ತು 1991ರ ಆದಿಯಲ್ಲಿ ಸದ್ದಾಂ ಹುಸೇನ್​ಗೆ ಪಾಠ ಕಲಿಸಲು ಅಮೆರಿಕಾ ಹೊರಡುವಾಗಲೂ ಸೋವಿಯೆತ್ ಯೂನಿಯನ್ ಪತನದ ಹಾದಿಯಲ್ಲಿತ್ತು ಮತ್ತು ಅಮೆರಿಕಾದ ಗಂಜಿಗೆ ಬಾಯಿ ಬಿಟ್ಟುಕೊಂಡು ಕೂತಿತ್ತು. ಅದರ ಪೂರ್ವ ಯೂರೋಪಿಯನ್ ‘ಉಪಗ್ರಹ’ಗಳು ಒಂದೊಂದಾಗಿ ಅದರ ಕೈಜಾರಿ ಹೋಗುತ್ತಿದ್ದವು ಮತ್ತು ಹೀಗಾಗಿ ಅದರ ನಾಯಕತ್ವದ ವಾರ್ಸಾ ಒಪ್ಪಂದ ಸೇನಾಕೂಟ ಬರೀ ಹೆಸರಿನಲ್ಲಷ್ಟೇ ಉಳಿದಿತ್ತು (ಜುಲೈ 1, 1991ರಲ್ಲಿ ಅದು ಅಧಿಕೃತವಾಗಿಯೂ ವಿಸರ್ಜನೆಗೊಂಡಿತು.) ಅಂದರೆ ಸೋವಿಯತ್ ಯೂನಿಯನ್​ನಿಂದ ತಮಗೆ ಇನ್ನಾವ ಅಪಾಯವೂ ಇಲ್ಲವೆಂದು ಅಮೆರಿಕಾ ಮತ್ತು ಪಶ್ಚಿಮ ಯೂರೋಪಿಯನ್ ದೇಶಗಳಿಗೆ ಸ್ಪಷ್ಟವಾಗಿಯೇ ಕಾಣುತ್ತಿತ್ತು. ಹಾಗಿದ್ದರೆ ಅವು ನ್ಯಾಟೋವನ್ನು ವಿಸರ್ಜಿಸುವ ಆಲೋಚನೆ ಮೂಲಕ ಶಸ್ತ್ರಾಸ್ತ್ರ ಪೈಪೋಟಿಯಿಂದ, ಅಣುಯುದ್ಧದ ದುಃಸ್ವಪ್ನದಿಂದ ಜಗತ್ತನ್ನು ಮುಕ್ತಗೊಳಿಸಬಹುದಿತ್ತಲ್ಲ? ಮತ್ತು, ಪುಕುಯಾಮಾರ ‘ಇತಿಹಾಸದ ಅಂತ್ಯ’ವನ್ನು ನಿಜಗೊಳಿಸುವ ಸೂಚನೆ ನೀಡಬಹುದಿತ್ತಲ್ಲ? ಹಾಗೇನೂ ಆಗಲಿಲ್ಲ. ಬದಲಿಗೆ ಇತಿಹಾಸ ಹೊಸ ರಕ್ತಹಾದಿಯನ್ನು ಹುಡುಕಹೊರಟಿತ್ತು.

ಸದ್ದಾಂ ಹುಸೇನ್​ಗೆ ಪಾಠ ಕಲಿಸಲು ಅಮೆರಿಕಾ ಮತ್ತು ಅದರ ನ್ಯಾಟೊ ಸಹಯೋಗಿಗಳು ಹೊರಡುತ್ತಿದ್ದಂತೇ ಅವರ ಕಾರ್ಯಯೋಜನೆಗಳ ಮತ್ತು ನ್ಯಾಟೋದ ಮುಂದುವರಿಕೆಯ ಅಗತ್ಯವನ್ನು ಜಗತ್ತಿಗೆ ಮನಗಾಣಿಸುವ ಪ್ರಯತ್ನಗಳು ಆರಂಭವಾದವು. ಬದಲಾಗುತ್ತಿರುವ ಜಾಗತಿಕ ವಾಸ್ತವಗಳು ನ್ಯಾಟೋದ ಮುಂದುವರಿಕೆಯನ್ನು ಬಯಸುತ್ತವೆ, ಇನ್ನು ಮುಂದೆ ನ್ಯಾಟೋದ ಕಾರ್ಯಕ್ಷೇತ್ರ ಯೂರೋಪ್​ನಿಂದಾಚೆಗೆ ವಿಸ್ತರಿಸುತ್ತದೆ, ಹೊಸ ಸವಾಲುಗಳನ್ನು ಎದುರಿಸಲು ನ್ಯಾಟೋ ತಯಾರಾಗುತ್ತಿದೆ ಎಂಬ ಹೇಳಿಕೆಗಳು ಅಮೆರಿಕಾದ ಅಧ್ಯಕ್ಷ ಹಿರಿಯ ಜಾರ್ಜ್ ಬುಷ್ ಮತ್ತು ನ್ಯಾಟೋದ ಸೆಕ್ರೆಟರಿ ಜನರಲ್ ಮ್ಯಾನ್​ಫ್ರೆಡ್ ವೂಮರ್ ಇಬ್ಬರಿಂದಲೂ ಬಂದವು. ಮೂವತ್ತೊಂದು ವರ್ಷಗಳ ನಂತರ ಆ ಮಾತುಗಳು ನಿಖರ ಭವಿಷ್ಯವಾಣಿಗಳಂತೆ ಧ್ವನಿಸುತ್ತಿವೆ. ನ್ಯಾಟೋವು ಇಸ್ಲಾಮಿಕ್ ಮೂಲಭೂತವಾದದಲ್ಲಿ ತನ್ನ ಹೊಸ ಸವಾಲನ್ನು ಅಂದರೆ ಶತ್ರುವನ್ನು ಹುಡುಕಿಕೊಂಡಿದೆ, 1991ರಲ್ಲಿ ಹದಿನೈದು ಇದ್ದ ನ್ಯಾಟೋ ಸದಸ್ಯ ದೇಶಗಳ ಸಂಖ್ಯೆ ಇಂದು ಮೂವತ್ತಾಗಿದೆ. ಶೀತಲ ಸಮರ ಕಾಲದಲ್ಲಿ ಒಂದಾದರೂ ಸೇನಾ ಕಾರ್ಯಾಚರಣೆಯನ್ನು ಕೈಗೊಳ್ಳದ ನ್ಯಾಟೋ ಶೀತಲ ಸಮರೋತ್ತರ ಕಾಲದಲ್ಲಿ ಇರಾಕ್ ಅಲ್ಲದೇ ಸರ್ಬಿಯಾ, ಲಿಬಿಯಾ ಮತ್ತು ಅಫ್ಘಾನಿಸ್ತಾನಗಳಲ್ಲಿ ಭೀಕರ ಸೇನಾ ಕಾರ್ಯಾಚರಣೆಗಳನ್ನು ನಡೆಸಿದೆ. ಹೌದು, ನ್ಯಾಟೋದ ಕಾರ್ಯಕ್ಷೇತ್ರ ಅಗಾಧವಾಗಿ ವಿಸ್ತರಿಸಿದೆ. ಅದರ ರಕ್ತದಾಹ ಸಹ.

ಇರಲಿ, ನಾವೀಗ ಮತ್ತೆ 1991ಕ್ಕೇ ಹೋಗೋಣ. ಅಲ್ಲಿಂದ ನಿಧಾನವಾಗಿ ಜಗತ್ತಿಡೀ ಕಾಲಾಡಿಸೋಣ; ಇರಾಕ್, ಚೆಚೆನ್ಯಾ, ಪ್ಯಾಲೆಸೆôನ್, ಕಾಶ್ಮೀರ, ಬೋಸ್ನಿಯಾ, ಸರ್ಬಿಯಾ, ಅಫ್ಘಾನಿಸ್ತಾನ, ಯೂಕ್ರೇನ್, ತೈವಾನ್, ಸೋಲೋಮನ್ ದ್ವೀಪಗಳು... ಜಗತ್ತು ಎಷ್ಟು ವಿಶಾಲ! ಈ ವಿಶಾಲ ಜಗತ್ತಿನಲ್ಲಿ ಅದೆಷ್ಟು ಕಡೆ ನಾಗರಿಕತೆಗಳ ಸಂಘರ್ಷಗಳು! ಹೀಗೇಕಾಯಿತೆಂದರೆ ಇತಿಹಾಸ ಭೀಕರವಾಗಿ ಮುಂದುವರಿದಿದೆ. ಅದು ವಿದ್ವಾಂಸ ಫೂಕುಯಾಮಾ ಹೇಳಿದ ಬಗೆಯಲ್ಲೂ ಅಂತ್ಯವಾಗಲಿಲ್ಲ, ಅಥವಾ ಮಾಯನ್ ಕ್ಯಾಲೆಂಡರ್​ನಲ್ಲಿ ‘ದಾಖಲಾಗಿರುವಂತೆ’ ಡಿಸೆಂಬರ್ 21, 2012ರಲ್ಲೂ ಅಂತ್ಯವಾಗಲಿಲ್ಲ. ಬದಲಾಗಿ ಅದು ಪ್ರಾಧ್ಯಾಪಕ ಸ್ಯಾಮ್ಯುಯೆಲ್ ಫಿಲಿಫ್ಸ್ ಹಂಟಿಂಗ್​ಟನ್ ಹೇಳಿದಂತೆ ನಾಗರಿಕತೆಗಳ ಸಂಘರ್ಷದಲ್ಲಿ ಅಥವಾ ಅದರ ನೆಪದಲ್ಲಿ ಮುಂದುವರಿಯುತ್ತಿದೆ. ಇಲ್ಲಿ ‘ನೆಪದಲ್ಲಿ’ ಪದಕ್ಕೆ ವಿವರಣೆ ಅಗತ್ಯ.

ಕಮ್ಯೂನಿಸ್ಟ್ ಸವಾಲು ಅಂತ್ಯವಾಗುತ್ತಿದ್ದಂತೇ ಇಸ್ಲಾಮಿಕ್ ಮೂಲಭೂತವಾದ ಎಂಬ ಹೊಸ ಸವಾಲನ್ನು ಅಮೆರಿಕಾ ಹುಡುಕಿ, ಅದನ್ನು ಒಟ್ಟಾಗಿ ‘ಎದುರಿಸುವ’ ಅಗತ್ಯವನ್ನು ನ್ಯಾಟೋಗೂ ಮನಗಾಣಿಸಿ ಹೊಸದೊಂದು ಸಂಘರ್ಷದ ಯುಗಕ್ಕೆ ನಾಂದಿಹಾಡಿದ್ದನ್ನು ಉದ್ದೇಶಪೂರ್ವಕ ಯೋಜನೆ ಎಂದೂ ಬಣ್ಣಿಸಲಾಗುತ್ತದೆ. ಮೂವತ್ತು ವರ್ಷಗಳ ಹಿಂದೆಯೇ ಅದನ್ನು ದೊಡ್ಡದಾಗಿ ಹೇಳಿದ್ದು ಪೊ›. ಜಾನ್ ಗ್ಯಾಡಿಸ್. ‘ಶತ್ರುವೊಬ್ಬನನ್ನು ಆವಿಷ್ಕರಿಸಿಕೊಳ್ಳುವುದು ಮತ್ತು ಆ ಶತ್ರುವಿನ ವಿರುದ್ಧ ಕಾಳಗ ನಡೆಸುತ್ತಲೇ ಇರುವುದು ಅಮೆರಿಕಾದ ಸ್ವಭಾವ’ಎಂದವರ ವಾದದ ತಿರುಳು. ಇದನ್ನು ನಾವು ಅಮೆರಿಕಾದ ನಡವಳಿಕೆಯೊಂದಿಗೆ ಸಮೀಕರಿಸಿ ನೋಡೋಣ.

ದ್ವಿತೀಯ ಮಹಾಯುದ್ಧದಿಂದೀಚೆಗೆ ಅಂದರೆ ಅಮೆರಿಕಾದಲ್ಲಿ ಶಸ್ತ್ರಾಸ್ತ್ರ ತಯಾರಿಕಾ ಉದ್ಯಮ ಅಗಾಧವಾಗಿ ಬೆಳೆಯತೊಡಗಿದಿಂದೀಚೆಗೆ, ತಾನು ಉತ್ಪಾದಿಸುವ ಶಸ್ತ್ರಾಸ್ತ್ರಗಳಿಗೆ ಮಾರುಕಟ್ಟೆ ಎಂದಿಗೂ ಕುಗ್ಗದೇ ಸದಾ ವಿಸ್ತರಿಸುತ್ತಲೇ ಇರುವಂತೆ ನೋಡಿಕೊಳ್ಳುವುದು ಆ ದೇಶದ ಸ್ಥಾಪಿತ ನೀತಿಯಾಗಿದೆ. ಈ ನೀತಿಯನ್ನು ಜಾನ್ ಎಫ್. ಕೆನಡಿ ಮತ್ತು ಡೊನಾಲ್ಡ್ ಟ್ರಂಪ್ ಹೊರತಾಗಿ ಪ್ರತಿಯೊಬ್ಬ ಅಮೆರಿಕನ್ ಅಧ್ಯಕ್ಷನೂ ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದಾರೆ! ಅಂದರೆ ಶ್ವೇತಭವನಕ್ಕೆ ಅವರಿಗೆ ಪ್ರವೇಶ ನಿಗದಿಪಡಿಸುವ ಶಕ್ತಿಗಳೇ ಬೇರೆ ಇವೆ ಮತ್ತು ತೆರೆಯ ಹಿಂದಿರುವ ಅವುಗಳ ಕಾರ್ಯತಂತ್ರಗಳಿಗೆ ಅಮೆರಿಕಾದ ಚುನಾವಣಾ ವ್ಯವಸ್ಥೆಯಲ್ಲಿನ ನ್ಯೂನತೆಗಳು ಸಹಕಾರಿಯಾಗಿವೆ. ಅವುಗಳ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕಾದ್ದು ‘ಚುನಾಯಿತ’ ಅಧ್ಯಕ್ಷನ ‘ಕರ್ತವ್ಯ’ವೇ ಆಗಿರುವಂತಿದೆ. ಕೆನಡಿ ಜೀವವನ್ನೂ, ಟ್ರಂಪ್ ಎರಡನೆಯ ಅವಧಿಯನ್ನೂ ಕಳೆದುಕೊಂಡದ್ದರ ಹಿಂದಿನ ಮರ್ಮ ‘ಕರ್ತವ್ಯ’ ನಿರ್ವಹಿಸದೇ ಹೋದದ್ದೇ ಇರಬಹುದೇನೋ. ಇವರಿಬ್ಬರು ತೆರವು ಮಾಡಿದ ಸ್ಥಾನವನ್ನು ತುಂಬಿದವರು ‘ಕರ್ತವ್ಯ ನಿರ್ವಹಣೆ’ಯಲ್ಲಿ ಅತ್ಯುತ್ಸಾಹ ತೋರಿದ್ದನ್ನು ಹಿಂದೆ ನೋಡಿ ಮರುಗಿದ್ದೇವೆ, ಈಗ ನೋಡಿ ತಲ್ಲಣಗೊಳ್ಳುತ್ತಿದ್ದೇವೆ.

ಕೊನೆಗೆ ಉಳಿಯುವ ಪ್ರಶ್ನೆ- ಪುಕುಯಾಮಾರ ಆಶಾವಾದ ಹಳ್ಳ ಹಿಡಿದದ್ದು, ಹಂಟಿಂಗ್​ಟನ್​ರ ನಿರಾಶಾವಾದ ಹಾರಾಡತೊಡಗಿದ್ದು ಕಾಲದ ಆಯ್ಕೆಯೇ ಅಥವಾ ಕಾಲದ ಮೇಲಿನ ಹೇರಿಕೆಯೇ? ಅಂದರೆ ನಾಗರಿಕತೆಗಳ ಸಂಘರ್ಷ ಕಾಲದ ಸಹಜ ಹರಿವೇ ಅಥವಾ ಕಾಲದ ಗತಿಯನ್ನು ಬೇಕಾದಂತೆ ತಿರುಗಿಸುವ ಬೌದ್ಧಿಕ ಮುಖವಾಡದ ವ್ಯವಸ್ಥಿತ ಪಿತೂರಿಯೇ?

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)