| ಬಸವರಾಜ ಗಿರಗಾಂವಿ
ಪಾರ್ಥೇನಿಯಂ ಹಿಸ್ಟಿರೋಪೋರಸ್ ಸಸ್ಯ/ಕಳೆ/ಕಸವನ್ನು ಸ್ಥಳೀಯವಾಗಿ ಪುಢಾರಿ, ಕಾಂಗ್ರೆಸ್, ಚಟಕ್ ಚಾಂದನಿ, ನಕ್ಷತ್ರ ಕಳೆ ಎನ್ನುತ್ತಾರೆ. ಕೃಷಿ ಹಾಗೂ ಕೃಷಿಯೇತರ ಭೂಮಿ, ರಸ್ತೆ ಬದಿ, ಆಟದ ಮೈದಾನ, ಶಾಲಾ-ಕಾಲೇಜು ಆವರಣ ಹಾಗೂ ಇತರ ಖಾಲಿ ಪ್ರದೇಶಗಳಲ್ಲಿ ಈ ಕಳೆ ಬೆಳೆಯುತ್ತದೆ. ಭಾರತದಲ್ಲಿ ಈ ಕಳೆ ಸುಮಾರು ಮೂರೂವರೆ ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಆವರಿಸಿಕೊಂಡಿದೆ. ಮೇಲ್ನೋಟಕ್ಕೆ ಇದು ಹಾನಿಕಾರಕ ಕಹಿಯಾದ ಕಳೆಯಾಗಿದ್ದರೂ ಸಹ ‘ಅಧರಕ್ಕೆ ಕಹಿ ಉದರಕ್ಕೆ ಸಿಹಿ’ ಎಂಬಂತೆ ಭೂಮಿಯ ಫಲವತ್ತತೆಯನ್ನು ಕಾಪಾಡಲು ಬಹಳ ಸಹಕಾರಿಯಾಗಿದೆ.
ರೈತರಿಗಿರುವ ಆತಂಕ: ಪಾರ್ಥೇನಿಯಂನಿಂದ ಗೊಬ್ಬರ/ಕಾಂಪೋಸ್ಟ್ ತಯಾರಿಸಿ ಜಮೀನಿನಲ್ಲಿ ಉಪಯೋಗಿಸುವುದರಿಂದ ಬೀಜಗಳು ಮತ್ತೆ ಹುಟ್ಟುತ್ತವೆಂಬ ಭಯ ರೈತರಲ್ಲಿದೆ. ವಾಸ್ತವದಲ್ಲಿ ಹೂ ಇರುವ ಪಾರ್ಥೇನಿಯಂನಿಂದ ಅವೈಜ್ಞಾನಿಕವಾಗಿ ಕಾಂಪೋಸ್ಟ್ ತಯಾರಿಸುವುದರಿಂದ ಜಮೀನಿನಲ್ಲಿ ಸಮಸ್ಯೆಯಾಗುತ್ತದೆ. ಜಬಲ್ಪುರದಲ್ಲಿರುವ ಕೃಷಿ ಸಂಶೋಧನಾ ನಿರ್ದೇಶನಾಲಯದ ಅಧ್ಯಯನದ ಅನ್ವಯ ತೆರೆದ ಗುಂಡಿ/ರಾಶಿ/ಗುಡ್ಡೆ ಹಾಕುವ ಪದ್ಧತಿಯಿಂದ ಹೂ ಇರುವ ಪಾರ್ಥೇನಿಯಂನಿಂದ ಕಾಂಪೋಸ್ಟ್ ತಯಾರಿಸಿದರೆ ಹೆಚ್ಚು ಬೀಜಗಳು ಜೀವಂತವಿರುವುದು ಕಂಡು ಬಂದಿದೆ. ಈ ಅಧ್ಯಯನದ ಪ್ರಕಾರ ನಾಡೆಫ್ ಅಥವಾ ತೆರೆದ ಗುಂಡಿಯಿಂದ ತಯಾರಾದ 300 ಕಾಂಪೋಸ್ಟ್ ಗೊಬ್ಬರಗಳ ಘಟಕಗಳಿಂದ ಸುಮಾರು 350500 ಪಾರ್ಥೇನಿಯಂ ಬೀಜಗಳು ಮೊಳಕೆಯೊಡೆಯುತ್ತವೆ. ವೈಜ್ಞಾನಿಕವಾಗಿ ತಯಾರಿಸಿದ ಕಾಂಪೋಸ್ಟ್ನಲ್ಲಿ ಬೀಜಗಳು ಮೊಳಕೆ ಒಡೆಯುವುದಿಲ್ಲ. ಆದ್ದರಿಂದ ರೈತರು ಇದನ್ನು ಸುರಕ್ಷಿತವಾಗಿ ಬಳಸಬಹುದು. ಮಣ್ಣಿನ ಆರೋಗ್ಯಕ್ಕೆ, ಉತ್ಪಾದಕತೆಗೆ ಇದು ಹೆಚ್ಚು ಸಹಕಾರಿ.
ಕಾಂಪೋಸ್ಟ್ ತಯಾರಿ: ನೀರು ನಿಲ್ಲದ ಸ್ಥಳದಲ್ಲಿ 3/6/10 ಅಡಿ (ಆಳ/ಅಗಲ/ಉದ್ದ) ಗುಂಡಿ ಮಾಡಬೇಕು. ಪಕ್ಕದಲ್ಲಿ 100 ಕೆ.ಜಿ. ಸಗಣಿ, 10 ಕೆ.ಜಿ. ಯೂರಿಯಾ/ರಾಕ್ ಫಾಸ್ಪೇಟ್, 50 ಕೆ.ಜಿ. ಮಣ್ಣು ಮತ್ತು 200 ಲೀಟರ್ ನೀರಿನ ಡ್ರಮ್ ಇಡಬೇಕು. ಹೂ ಬಿಡುವ ಮುಂಚೆ ಸಂಗ್ರಹಿಸಿದ 50 ಕಿಲೋ ಪಾರ್ಥೇನಿಯಂ ಗುಂಡಿಯಲ್ಲಿ ಹರಡಬೇಕು. ಅದರ ಮೇಲೆ 500 ಗ್ರಾಮ್ ಯೂರಿಯಾ/10 ಕೆ.ಜಿ ರಾಕ್ ಫಾಸ್ಪೇಟ್ನ್ನು ಸಿಂಪಡಿಸಬೇಕು. ಸಾಧ್ಯವಾದರೆ ಪ್ರತಿ ಪದರದ ಮೇಲೆ 50 ಗ್ರಾಮ್ಷ್ಟು ಟ್ರೈಕೋಡರ್ವ ಹುಡಿಯನ್ನು ಸೇರಿಸಬಹುದು. ಹೀಗೆ ಎಲ್ಲಾ ಘಟಕಗಳು ಸೇರಿ ಒಂದು ಪದರವಾಗುತ್ತದೆ. ಇದೇ ರೀತಿ ಭೂಮಿಯಿಂದ ಒಂದು ಅಡಿ ಎತ್ತರವಾಗುವಷ್ಟು ಪದರಗಳನ್ನು ತುಂಬಬೇಕು. ಗೋಲಾಕಾರದಲ್ಲಿ ಗುಂಡಿ ತುಂಬಬೇಕು. ಪಾರ್ಥೇನಿಯಂ ಕಳೆಯ ಬೇರಿನಲ್ಲಿ ಮಣ್ಣು ಇಲ್ಲದಿದ್ದರೆ ಪ್ರತಿ ಪದರದ ನಂತರ ತೆಳುವಾಗಿ (10 ರಿಂದ 12 ಕೆ.ಜಿ) ಮಣ್ಣನ್ನು ಹರಡಬೇಕು. ಗುಂಡಿಯು ತುಂಬಿದ ನಂತರ ಅದರ ಮೇಲ್ಮೈಯನ್ನು ಸಗಣಿ, ಮಣ್ಣು ಮತ್ತು ಹೊಟ್ಟಿನಿಂದ ಮುಚ್ಚಬೇಕು. ಸುಮಾರು 4ರಿಂದ 5 ತಿಂಗಳ ನಂತರ 100 ಕೆ.ಜಿ. ಪಾರ್ಥೇನಿಯಂ ಗಿಡದಿಂದ ಚೆನ್ನಾಗಿ ಕಳೆತ 40ರಿಂದ 45 ಕೆ.ಜಿ ಕಾಂಪೋಸ್ಟ್್ಟ ಗೊಬ್ಬರ ತಯಾರಾಗುತ್ತದೆ.
ಕಾಂಪೋಸ್ಟನ್ನು ಸೋಸುವುದು: ಕಾಂಪೋಸ್ಟ್ ಗೊಬ್ಬರವನ್ನು ಗುಂಡಿಯಿಂದ ತೆಗೆದ ಮೇಲೆ ಪಾರ್ಥೇನಿಯಂ ಗಿಡದ ಕಡ್ಡಿಗಳು ಸರಿಯಾಗಿ ಕಳೆತಿಲ್ಲವೆಂದು ಅನಿಸುತ್ತದೆ. ಆದರೆ ವಾಸ್ತವದಲ್ಲಿ ಅದು ಚೆನ್ನಾಗಿಯೇ ಕಳೆತಿರುತ್ತದೆ. ದಪ್ಪಗಿರುವ ಪಾರ್ಥೇನಿಯಂ ಕಡ್ಡಿಗಳಿದ್ದರೆ ಅದನ್ನು ಒಂದು ಕೋಲಿನಿಂದ ಹೊಡೆದರೆ ಅವು ಚೂರುಚೂರಾಗುತ್ತವೆ. ಈ ಕಾಂಪೋಸ್ಟ್ಟ್ನು 2/2 ಅಡಿ ಅಳತೆಯ ಜಾಲರಿ/ಸಾಣಿಗೆಯಿಂದ ಸೋಸಬೇಕು. ಹೀಗೆ ಮಾಡಿದ ಕಾಂಪೋಸ್ಟ್ ಗೊಬ್ಬರವನ್ನು ಕೈತೋಟ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಉಪಯೋಗಿಸಬಹುದು.
ಕಾಂಪೋಸ್ಟ್ನ ಲಾಭಗಳು: ಪಾರ್ಥೇನಿಯಂನಿಂದ ತಯಾರಿಸಿದ ಕಾಂಪೋಸ್ಟ್್ಟ ಗೊಬ್ಬರವು ಬೆಳೆಗಳ ಮೇಲೆ ಮಾನವನ ಆರೋಗ್ಯದ ಮೇಲೆ ಮತ್ತು ಪರಿಸರದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ. ಪಾರ್ಥೇನಿಯಂ ಗಿಡದಲ್ಲಿನ ವಿಷಕಾರಿ ಅಂಶವಾದ ಪಾರ್ಥೇನಿನ್ ಕಾಂಪೋಸ್ಟ್ ತಯಾರಾಗುವ ಸಮಯದಲ್ಲಿ ಸಂಪೂರ್ಣವಾಗಿ ನಾಶವಾಗುತ್ತದೆ. ಕಾಂಪೋಸ್ಟ್ ನಿಂದ ಪೋಷಕಾಂಶಗಳು ಪೋಲಾಗುವುದನ್ನು ತಡೆಗಟ್ಟಬಹುದು. ಕೊಟ್ಟಿಗೆ ಗೊಬ್ಬರಕ್ಕೆ ಹೋಲಿಸಿದಲ್ಲಿ ಪಾರ್ಥೇನಿಯಂ ನಿಂದ ತಯಾರಾದ ಗೊಬ್ಬರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ ಅಂಶಗಳು ಸಮತೋಲನದಲ್ಲಿ ಇರುತ್ತವೆ. ಇದರ ಜೊತೆಗೆ ಅಗತ್ಯವಾದ ಲಘು ಪೋಷಕಾಂಶಗಳು ಸಹ ಇರುತ್ತವೆ. ಅತಿ ಕಡಿಮೆ ಖರ್ಚಿನಲ್ಲಿ ಪಾರ್ಥೇನಿಯಂನಿಂದ ಕಾಂಪೋಸ್ಟ್ ತಯಾರಾಗುವುದಲ್ಲದೆ ಇದು ಪರಿಸರ ಸ್ನೇಹಿಯೂ ಕೂಡ. ಜೊತೆಗೆ ಮಣ್ಣಿನ ಫಲವತ್ತತೆಯನ್ನು ಅಭಿವೃದ್ಧಿಗೊಳಿಸುತ್ತದೆ. ಇದರಲ್ಲಿ ಅಳಿದುಳಿದ ಕಹಿಯಿಂದ ಜಮೀನಿನಲ್ಲಿರುವ ಹಾನಿಕಾರಕ ಕೀಟಗಳು ನಾಶವಾಗುತ್ತವೆ.
ಪೋಷಕಾಂಶಗಳ ಸಂಯೋಜನೆ: ಸಾಮಾನ್ಯ ಕಾಂಪೋಸ್ಟ್ ಗೊಬ್ಬರಕ್ಕಿಂತ ಪಾರ್ಥೇನಿಯಂನಿಂದ ತಯಾರಾದ ಕಾಂಪೋಸ್ಟ್ ಗೊಬ್ಬರದಲ್ಲಿ ಪೋಷಕಾಂಶಗಳು ದುಪ್ಪಟ್ಟಾಗಿದ್ದು, ಎರೆಹುಳು ಗೊಬ್ಬರದಲ್ಲಿರುವ ಪೋಷಕಾಂಶಗಳಿಗೆ ಸಮನಾಗಿರುತ್ತವೆ. ಸಾರಜನಕ 1.05%, ರಂಜಕ 0.84%, ಪೊಟ್ಯಾಷ್ 1.11%, ಕ್ಯಾಲ್ಸಿಯಮ್ 0.90%, ಮೆಗ್ನೇಷಿಯಮ್ 0.55%, ಪಾರ್ಥೇನಿಯಂ ಕಾಂಪೋಸ್ಟ್ 0.45%, ಕೊಟ್ಟಿಗೆ ಗೊಬ್ಬರ 0.30% ಸೇರಿದಂತೆ ಅನೇಕ ಲಘು/ಪ್ರಧಾನ ಪೋಷಕಾಂಶಗಳನ್ನು ಹೊಂದಿರುತ್ತದೆ.
ಬಿತ್ತುವಾಗ ಒಂದು ಹೆಕ್ಟೇರಿಗೆ 2.5ರಿಂದ 3.00 ಟನ್ ಕಾಂಪೋಸ್ಟನ್ನು ಉಪಯೋಗಿಸಬಹುದು. ತರಕಾರಿ ಬೆಳೆಗಳಿಗೆ ಒಂದು ಹೆಕ್ಟೇರಿಗೆ 4ರಿಂದ 5 ಟನ್ ಉಪಯೋಗಿಸಬಹುದು. ಇತ್ತೀಚಿನ ದಿನಗಳಲ್ಲಿ ಅಧಿಕವಾಗಿ ರಸಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆಯು ದಿನದಿಂದ ದಿನಕ್ಕೆ ಕುಂಠಿತಗೊಳ್ಳುತ್ತಿದೆ. ಇಂತಹ ಸಂದರ್ಭಗಳಲ್ಲಿ ಕಾಂಪೋಸ್ಟ್ ಹಾಗೂ ಜೈವಿಕ ಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆಯನ್ನು ಕಾಪಾಡಬಹುದಾಗಿದೆ. ಇದರ ಭಾಗವಾಗಿ ಕಸದಿಂದ ರಸ ಎಂಬಂತೆ ನಮ್ಮ ಸುತ್ತಮುತ್ತ ಹೇರಳವಾಗಿ ಸಿಗುವ ಪಾರ್ಥೇನಿಯಂ ಕಳೆಯಿಂದ ಉತ್ಕೃಷ್ಟವಾದ ಕಾಂಪೋಸ್ಟ್ ತಯಾರಿಸಬಹುದು. ಈ ಕಳೆಯನ್ನು ಸಮಯಾನುಸಾರ ಜಮೀನಿನಿಂದ ಕಿತ್ತು ಹಾಕಿದರೆ ಬೆಳೆಯ ಉತ್ಪಾದನೆಯನ್ನು ಹೆಚ್ಚಿಸಬಹುದಲ್ಲದೆ ಉತ್ತಮ ಗೊಬ್ಬರವನ್ನು ತಯಾರಿಸಿ ಆರ್ಥಿಕ ಮಿತವ್ಯಯವನ್ನು ಸಾಧಿಸಬಹುದು.