ಅಂಕಣ

ಹಳಿದಾಟು ಥಳಥಳಿಸುವಂತೆ ನೋಡ್ಕೊಳ್ಳೊದು ನಿನ್ನ ಕರ್ತವ್ಯ

ಜೇನುಗೂಡಿನಲ್ಲಿ ಒಂದು ರಾಣಿ ನೊಣ, ಸಮಸ್ತ ಕೆಲಸಕಾರ್ಯಗಳ ಜವಾಬ್ದಾರಿ ನಿರ್ವಹಿಸುವ ಸಾವಿರಾರು ಹೆಣ್ಣು ನೊಣಗಳು, ಮತ್ತು ಬಹುತೇಕವಾಗಿ ಸೋಮಾರಿಯಾಗಿಯೇ ಕಾಲಕಳೆಯುವ ಕೆಲವು ಗಂಡು ನೊಣಗಳು- ಈ ರೀತಿಯ ಕುಟುಂಬ ವ್ಯವಸ್ಥೆ ಇರುವುದೆಂದು ನಿಮಗೆ ಗೊತ್ತಿರಬಹುದು. ಜೇನು ಕೃಷಿತಜ್ಞ ಪೈಲೂರು ಲಕ್ಷ್ಮಿನಾರಾಯಣ ರಾವ್ ಎಂಬುವವರು ದಶಕಗಳ ಹಿಂದೆ ಬರೆದ ‘ಜೇನುನೊಣ ಸಾಕುವಿಕೆ’ ಪುಸ್ತಕದಿಂದ, ಗಂಡು ಜೇನುನೊಣಗಳ ಬಗೆಗಿನ ಈ ವಿವರಗಳನ್ನೊಮ್ಮೆ ಗಮನಿಸಿ:

‘ಗಂಡು ನೊಣಗಳು ಆಲಸಿಗಳು; ಕೆಲಸ ಮಾಡುವುದಿಲ್ಲ. ವೈಭವದಿಂದ ಝೇಂಕರಿಸುತ್ತ ಸಂಜೆಯ ಹೊತ್ತು ಗೂಡಿನ ಸಮೀಪ ಅಡ್ಡಾಡುತ್ತಿರುತ್ತವೆ. ಇವುಗಳ ಒಂದೇಒಂದು ಕೆಲಸವೆಂದರೆ ರಾಣಿ ನೊಣಕ್ಕೆ ಜೋಡಿಯಾಗಿ ಸಂತಾನಾಭಿವೃದ್ಧಿಗೆ ನೆರವಾಗುವುದು. ಇವುಗಳ ಕಣ್ಣುಗಳು ಕೆಲಸಗಾರ ಮತ್ತು ರಾಣಿ ನೊಣಗಳ ಕಣ್ಣುಗಳಿಗಿಂತ ದೊಡ್ಡವು. ರಾಣಿ ನೊಣವು ಆಕಾಶದಲ್ಲಿ ಅತಿ ವೇಗವಾಗಿ ಹಾರಿ ಹೋಗುತ್ತಿರುವಾಗ ಅದನ್ನು ಸರಿಯಾಗಿ ಹಿಂಬಾಲಿಸಿ ಹೋಗಬೇಕಾದುದರಿಂದ ಇವುಗಳಿಗೆ ದೊಡ್ಡ ಕಣ್ಣುಗಳ ಉಪಯೋಗ ಮತ್ತು ಆವಶ್ಯಕತೆ. ಗಂಡು ನೊಣಗಳು ಜೇನನ್ನು ಸಂಗ್ರಹಿಸಲಾರವಾದರೂ ಧಾರಾಳವಾಗಿ ಕುಡಿಯಬಲ್ಲವು. ಆದ್ದರಿಂದಲೇ ಗೂಡಿನಲ್ಲಿ ಅಗತ್ಯವಿಲ್ಲದಾಗ ಕೆಲಸಗಾರ ನೊಣಗಳು ಇವುಗಳನ್ನು ನಾಶ ಮಾಡುವವು’.

ಇದೇನಿದು, ಕನ್ನಡ ಪದ ಕಟ್ಟುವ ಅಂಕಣದಲ್ಲಿ ಕೆಲಸಗಳ್ಳ ಗಂಡು ಜೇನುನೊಣಗಳ ಪ್ರಸ್ತಾವ ಅಂತೀರಾ? ಕಾರಣವಿದೆ. ಕಳೆದಬಾರಿ ಕೊಟ್ಟಿದ್ದ ಮೊದಲ ಪದ Drone ಇಂಗ್ಲಿಷ್​ನಲ್ಲಿ ತುಂಬ ಹಿಂದಿನ ಕಾಲದಿಂದಲೂ ಗಂಡು ಜೇನುನೊಣ ಎಂಬರ್ಥದಲ್ಲಿ ಬಳಕೆಯಾಗುತ್ತಿದ್ದದ್ದಂತೆ! ಇಂಗ್ಲಿಷ್ ಮಾತ್ರವಲ್ಲ, ಡಚ್, ಜರ್ಮನ್, ಲಿಥುವೇನಿಯನ್, ಗ್ರೀಕ್ ಮುಂತಾದ ಇತರ ಐರೋಪ್ಯ ಭಾಷೆಗಳಲ್ಲೂ ಅನುಕ್ರಮವಾಗಿ drane, drohne, tranni, thronax ಎಂಬ ಸಂವಾದಿ ಪದಗಳು. ಸೋಮಾರಿ, ಕೆಲಸಗಳ್ಳ ಎಂದು ಸೂಚಿಸಲು ಗಂಡು ಜೇನುನೊಣಕ್ಕೆ ಹೋಲಿಸುತ್ತ ಅವುಗಳ ಬಳಕೆ. ಈಗಿನ ಕಾಲದಲ್ಲಿ ನಾವೇನು Drone ಎಂದರೆ ಚಾಲಕರಹಿತ ದೂರನಿಯಂತ್ರಿತ ಲಘುವಿಮಾನ ಎಂಬ ಚಿತ್ರಣ ತಂದುಕೊಳ್ಳುತ್ತೇವೋ ಆ ಅರ್ಥ ಬಂದದ್ದು 1946ರಿಂದ ಈಚೆಗಷ್ಟೆ.Popular Science ಪತ್ರಿಕೆಯಲ್ಲಿ 1946ರಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ‘ಮುಂದೊಂದು ದಿನ ಡ್ರೋನ್​ಗಳು ಮಿಲಿಟರಿಗೂ ಪೌರಾಡಳಿತಕ್ಕೂ ಸಾಮಾನ್ಯ ಜನಜೀವನಕ್ಕೂ ಬಹೂಪಯೋಗಿ ಆಗಬಲ್ಲವು.

ಕ್ಷಿಪಣಿಗಳನ್ನು ಹೊತ್ತುಕೊಂಡು ದೊಡ್ಡದೊಡ್ಡ ಹಡಗುಗಳಿಂದ ಉಡ್ಡಯನಗೊಂಡು ಖಂಡಾಂತರ ಪ್ರದೇಶಗಳನ್ನು ಕರಾರುವಾಕ್ಕಾಗಿ ತಲುಪಬಲ್ಲವು’ ಎಂದು ಬರೆಯಲಾಗಿತ್ತು. ಈಗ ಅದು ನಿಜವೇ ಆಗಿದೆ. ಆದರೆ ಯುದ್ಧಕಾಲದಲ್ಲಿ ಶಸ್ತ್ರಾಸ್ತ್ರವಾಗಿಯಷ್ಟೇ ಅಲ್ಲ ಇತರ ಜನೋಪಯೋಗಿ ಕೆಲಸಗಳಿಗೆ- ಕ್ರಿಕೆಟ್ ಪಂದ್ಯದ ನೇರಪ್ರಸಾರ, ಸಮಾರಂಭಗಳ ದೃಶ್ಯಚಿತ್ರೀಕರಣ, ಕಣ್ಣಿಗೆ ಹಬ್ಬವೆನಿಸಲು ಆಗಸದಲ್ಲಿ ದ್ಯುತಿವಿನ್ಯಾಸ ಮುಂತಾಗಿ ವಿವಿಧೋದ್ದೇಶಗಳಿಗೆ ಡ್ರೋನ್​ಗಳ ಬಳಕೆಯಾಗುತ್ತಿದೆ. ಭಾರತೀಯ ರೈಲ್ವೆಯು ರೈಲುಡಬ್ಬಿಗಳನ್ನು ಸ್ವಚ್ಛಗೊಳಿಸುವುದಕ್ಕೆ, ಅಂಚೆ ಇಲಾಖೆಯು ಅಂಚೆಚೀಲಗಳನ್ನು ಊರಿಂದೂರಿಗೆ ಸಾಗಿಸಲಿಕ್ಕೆ ಡ್ರೋನ್ ಬಳಕೆ ಮಾಡಿದ್ದನ್ನು ಕಂಡಿದ್ದೇವೆ. ಡ್ರೋನ್ ಈಗ ಕೆಲಸಗಳ್ಳ ಸೋಮಾರಿ ಅಲ್ಲವೇಅಲ್ಲ! ಆದರೂ ‘ಝೇಂಕರಿಸುತ್ತ ಆಕಾಶದಲ್ಲಿ ಹಾರುತ್ತದೆ’, ‘ಗುರಿಯನ್ನು ಹಿಂಬಾಲಿಸಲಿಕ್ಕೆಂದೇ ದೊಡ್ಡ ಕಣ್ಣುಗಳಿವೆ’ ಮುಂತಾದ ಕೆಲವು ಸಾಮ್ಯಗಳು ಗಂಡು ಜೇನುನೊಣಗಳದ್ದೇ ಇವೆ. ಮೊನ್ನೆ ಪಾಕಿಸ್ತಾನದ ಮೇಲೆ ಭಾರತವು ಪ್ರಯೋಗಿಸಿದ ಆತ್ಮಹತ್ಯಾ ಡ್ರೋನ್​ಗಳನ್ನಂತೂ- ರಾಣಿಯೊಡನೆ ಸಮಾಗಮದ ಬಳಿಕ ಸಾಯುವ ಗಂಡು ಜೇನುನೊಣಗಳಿಗೇ ಹೋಲಿಸಬಹುದು!

ಡ್ರೋನ್​ಅನ್ನು ಕನ್ನಡದಲ್ಲಿ/ ಭಾರತೀಯ ಭಾಷೆಗಳಲ್ಲಿ ‘ದ್ರೋಣ’ ಎಂದೇ ಹೇಳಬಹುದಲ್ಲವೇ ಎಂದಿದ್ದಾರೆ ಕಲಬುರ್ಗಿಯಿಂದ ಸಂಜೀವ ಜೋಶಿ. ದ್ರೋಣ ಎಂಬ ಪದಕ್ಕೆ ಸಂಸ್ಕೃತದಲ್ಲಿರುವ ನಾನಾರ್ಥಗಳ ಪೈಕಿ ಕಾಗೆ ಅಥವಾ ಒಂದು ಪಕ್ಷಿ ಅಂತಲೂ ಇರುವುದರಿಂದ ಸರಿಯಾಗುತ್ತದೆಂದು ಒಂದು ಪುಟದಷ್ಟು ಕೈಬರಹದ ಪತ್ರದಲ್ಲಿ ಅವರು ಮಂಡಿಸಿರುವ ವ್ಯಾಖ್ಯಾನದ ಸಾರಾಂಶ. ಸಮರಕಲೆಗಳ ಗುರು ಆಚಾರ್ಯ ದ್ರೋಣರ ಗೌರವಾರ್ಥವೂ ಆಗುತ್ತದೆಂದು ದನಿಗೂಡಿಸಿದ್ದಾರೆ ಮೈಸೂರಿನಿಂದ ಗಿರೀಶ ಕೆ.ಎಸ್, ಹಾಸನದಿಂದ ಸತ್ಯನಾರಾಯಣ ಮಗ್ಗೆ, ತುಮಕೂರಿನಿಂದ ನರಸಿಂಹಮೂರ್ತಿ, ಯಶೋದಾ ಜಾಲಹಳ್ಳಿ ಮತ್ತು ಎಚ್.ಜಿ.ಜಗದೀಶ್.

ಇದೊಂದು ರೀತಿಯಲ್ಲಿ Market ಮತ್ತು ಮಾರುಕಟ್ಟೆ ಪದಗಳಿಗೆ ರೂಪಸಾಮ್ಯ ಇರುವಂತೆ Drone ದ್ರೋಣ ಆಗಬಹುದೆನ್ನುವ ತರ್ಕ. ಒಪ್ಪಬಹುದಾದದ್ದೇ. ಆದರೆ ದ್ರೋಣಾಚಾರ್ಯರಿಗೆ ಆ ಹೆಸರು ಬಂದದ್ದು ದ್ರೋಣವೆಂದರೆ ಎಲೆಗಳನ್ನು ಮಡಚಿ ತಯಾರಿಸಿದ ಪಾತ್ರೆಯಾಕಾರದ ದೊನ್ನೆ ಎಂಬರ್ಥದಿಂದ. ಭರದ್ವಾಜ ಮಹರ್ಷಿ ತಪಸ್ಸು ಮಾಡುತ್ತಿದ್ದಾಗ ಘೃತಾಚಿ ಎಂಬ ಅಪ್ಸರೆಯನ್ನು ಕಂಡು ಎದೆಗುಂದಿದಾಗ, ಋಷಿಯು ತನ್ನ ರೇತಸ್ಸನ್ನು ಒಂದು ದ್ರೋಣದಲ್ಲಿ (ದೊನ್ನೆಯಲ್ಲಿ) ಶೇಖರಿಸಲಾಗಿ ಅದರಿಂದ ಹುಟ್ಟಿದ ಗಂಡುಮಗುವೇ ಮುಂದೆ ದ್ರೋಣಾಚಾರ್ಯನಾದುದು. ಕುಂಭದ್ರೋಣ ಮಳೆ ಎನ್ನುವುದೂ ದೊನ್ನೆಗಳಿಂದ ನಿರಂತರ ನೀರು ಸುರಿಸಿದ ಹಾಗಿದೆ ಎಂಬ ಕಲ್ಪನೆಯಿಂದಲೇ. ಹಾಗಾಗಿ ಪದಗಳ ರೂಪಸಾಮ್ಯದ ಹೊರತಾಗಿ ದ್ರೋಣಕ್ಕೂ ಡ್ರೋನ್​ಗೂ ಏನೇನೂ ಸಂಬಂಧವಿಲ್ಲ. ಅದಕ್ಕಿಂತ, ‘ಭೃಂಗಯಂತ್ರ’ (ಗಿರೀಶ ಎ.ವಿ, ನಿತ್ಯಾನಂದ ಬ್ರಹ್ಮಾವರ), ‘ಪಕ್ಷಿಯಂತ್ರ’ (ಸುಬ್ಬಣ್ಣ ಎನ್.ಕೆ), ‘ಖಗಯಂತ್ರ’ (ರಂಗನಾಥ ಟಿ.ಕೆ) ಇವು ಡ್ರೋನ್​ಗೆ ಭಾರತೀಯ ಭಾಷೆಗಳಲ್ಲೆಲ್ಲ ಬಳಸಬಹುದಾದ ಸಮರ್ಪಕ ಪದಗಳಾಗಬಲ್ಲವು. ಭೃಂಗಯಂತ್ರದ ಬೆನ್ನೇರಿ ಬಂದದ್ದು ಕಲ್ಪನಾವಿಲಾಸವೂ ಆದೀತು, ಅಣ್ವಸ್ತ್ರವೂ ಆದೀತು! ಅಥವಾ, ಡ್ರೋನ್ ಎನ್ನಲಿಕ್ಕೆ ಅಚ್ಚಕನ್ನಡದ್ದೇ ಪದ ಬೇಕಿದ್ದರೆ ‘ಬಾನ್ಗುಂಗಿ’ (ಅನಸೂಯಾ ಪಾಟೀಲ್, ಸುರೇಂದ್ರ ಪೈ) ಚೆನ್ನಾಗಿದೆ. ‘ಗುಂಯ್ಗುಡುಕ’ (ರಾಘವೇಂದ್ರ ಸಂಗಮ) ಸಹ ಆಕರ್ಷಕವಾಗಿವೆ. ‘ಆಳಿರದ ಗಾಳಿಬಂಡಿ’ (ಜಿ.ಎಚ್.ಸಂಕಪ್ಪ, ಜಿ.ನಾರಾಯಣ ರಾವ್, ಅಪ್ಪು ಮುತ್ಯ, ಷಡಕ್ಷರಮುನಿ ಸ್ವಾಮೀಜಿ, ಶಾಂತಿನಿ ಮಂಜುನಾಥ್, ಪಾರ್ವತಿ ರಾಮನ್) ಮತ್ತು ಅದರ ಸಂಸ್ಕೃತರೂಪ ‘ಮಾನವರಹಿತ ವಿಮಾನ’ (ರೇವತಿ ಜೋಶಿ, ರಾಜೇಂದ್ರ ತಲಕಾಲ, ಕಿರಣಕುಮಾರ್ ಎಚ್.ಎ, ಕಾಡೇಶ ವಿ.ಬಿ, ಮೀನಾಕ್ಷಿ ಟೆಕ್ಕಳಕಿ, ವಸಂತಲಕ್ಷ್ಮಿ ರಾಮಚಂದ್ರ) ವಾಚ್ಯಾರ್ಥದಿಂದ ಚೆನ್ನಾಗಿವೆಯಾದರೂ ಚಿಕ್ಕ-ಚೊಕ್ಕ ಪದವಾಗಿಲ್ಲ, ಕೇಳಿದೊಡನೆ/ಓದಿದೊಡನೆ ಡ್ರೋನ್​ನ ಕಲ್ಪನೆ ಬರುವುದೂ ಕಷ್ಟವಿದೆ.

ಕಳೆದಸಲ ಕೇಳಿದ್ದ Level crossing ಪದಕ್ಕೆ ಸಂಬಂಧಿಸಿದಂತೆ ಒಂದು ವಿಶೇಷ ಸಂಸ್ಮರಣೆ ಮಾಡುವುದಿದೆ- ಕನ್ನಡಿಗರಷ್ಟೇ ಅಲ್ಲ ಮನುಕುಲವೇ ಹೆಮ್ಮೆಪಡುವಂಥ ತಂತ್ರಜ್ಞಾನಿ ಸರ್ ಎಂ.ವಿಶ್ವೇಶ್ವರಯ್ಯನವರದು. ವೃತ್ತಿಗೌರವ, ಕರ್ತವ್ಯನಿಷ್ಠೆ, ಶ್ರದ್ಧೆ-ಪ್ರಾಮಾಣಿಕತೆಗಳ ವಿಚಾರದಲ್ಲಿ ಅವರದೊಂದು ಸೂಕ್ತಿ ತುಂಬ ಪ್ರಖ್ಯಾತವಾದದ್ದಿದೆ. ಇಂಗ್ಲಿಷ್​ನಲ್ಲಿ ಅದು ಹೀಗಿದೆ: Remember, your work may be only to sweep a railway crossing, but it is your duty to keep it so clean that no other crossing in the world is as clean as yours'. ಇದನ್ನವರು ಒಂದುವೇಳೆ ಕನ್ನಡದಲ್ಲಿ ಹೇಳಿರುತ್ತಿದ್ದರೆ ಹೀಗಿರುತ್ತಿತ್ತೇನೋ: ‘ನೆನಪಿರಲಿ. ನಿನ್ನ ಕೆಲಸ ಬರೀ ಒಂದು ಹಳಿದಾಟುವನ್ನು ಸ್ವಚ್ಛಗೊಳಿಸುವುದಷ್ಟೇ ಇರಬಹುದು; ಆದರೆ ಜಗತ್ತಿನ ಬೇರಾವುದೇ ಹಳಿದಾಟುವಿಗಿಂತ ಅದು ಹೆಚ್ಚು ಥಳಥಳಿಸುವಂತೆ ನೋಡಿಕೊಳ್ಳುವುದು ನಿನ್ನ ಕರ್ತವ್ಯ’. ಇದು ನಮಗೆಲ್ಲರಿಗೂ ಒಂದು ನೀತಿಬೋಧೆ. ನಾವು ಮಾಡುವ ಕೆಲಸ ಎಷ್ಟೇ ಚಿಕ್ಕದಿರಲಿ ದೊಡ್ಡದಿರಲಿ ಅದರಲ್ಲಿ ನಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಬೇಕು, ಶ್ರದ್ಧೆಯಿಂದ ಮಾಡಬೇಕು. ಡಗ್ಲಸ್ ಮಾಲ್ಲೊಕ್ ಎಂಬ ಆಂಗ್ಲಕವಿಯ Be the best of whatever you are ಎಂಬ ಕವಿತೆ ಹೇಳುವುದೂ ಅದನ್ನೇ. ಇರಲಿ, ವಿಶ್ವೇಶ್ವರಯ್ಯನವರ ಸೂಕ್ತಿಯ ಕನ್ನಡ ಅವತರಣಿಕೆಯಲ್ಲಿ ಬಳಸಿದ ‘ಹಳಿದಾಟು’ ಪದವನ್ನು ಗಮನಿಸಿ. ಇದು ಲೆವೆಲ್ ಕ್ರಾಸಿಂಗ್ ಎನ್ನುವುದಕ್ಕೆ ಸರಳ-ಸುಂದರ ಅತಿಸೂಕ್ತ ಕನ್ನಡ ಪದ! ಇದನ್ನೇ ಸೂಚಿಸಿದವರು: ಆರ್.ವಿ.ಮೂರ್ತಿ, ಸುಬ್ಬಣ್ಣ ಎನ್.ಕೆ, ವೆಂಕಟೇಶ ಪ್ರಸಾದ್, ಪ್ರಫುಲ್ಲಾ ಕೆ, ಹನುಮಂತ ಮನಗೋಳಿ, ಎಂ.ಕೆ.ಬದರಿನಾಥ್, ಭ.ನಿಂ.ಗೋಪಿನಾಥ್, ಗಿರೀಶ ಕೆ.ಎಸ್, ನರೇಂದ್ರನಾಥ್ ಎಚ್.ಎಂ, ಶಶಿಕಲಾ ಮೈಸೂರು, ಮನೋನ್ಮಣಿ ಕೆ.ವಿ, ವಸಂತಕುಮಾರ್ ಕಲ್ಯಾಣಿ, ಅಲಗೌಡಾ ಬಿ ಸೊಲ್ಲಾಪುರೆ, ದೇವೇಂದ್ರ ಕಡೂರು. ಹಾಗೆಯೇ ‘ಹಳಿಕಡವು’ (ಸೀಮಾ ಎಚ್.ಎಸ್), ‘ಹಳಿಯಡ್ಡಕ’ (ಧೀರೇಂದ್ರ ಬೀಳಗಿ) ಸಹ ಅರ್ಥಪೂರ್ಣವಾಗಿವೆ.

ಕೊನೆಯದಾಗಿ Toss ಪದದ ಇಂಗ್ಲಿಷ್ ಮೂಲವನ್ನು ಕೆದಕಿದರೆ ಅಲ್ಲಿಯೂ ಕೆಲವು ಸ್ವಾರಸ್ಯಕರ ಸಂಗತಿಗಳು ತಿಳಿಯುತ್ತವೆ."To lift or throw upward with a sudden movement' ಎಂಬ ಅರ್ಥದಲ್ಲಿ ಸುಮಾರು 15ನೆಯ ಶತಮಾನದಿಂದಲೇ ಬಳಕೆಯಲ್ಲಿದೆಯಾದರೂ ಇದರ ವ್ಯುತ್ಪತ್ತಿಯ ಬಗ್ಗೆ ಭಾಷಾತಜ್ಞರಲ್ಲಿ ಒಮ್ಮತವಿಲ್ಲ. ಸ್ಕಾ್ಯಂಡಿನೇವಿಯನ್ ಭಾಷೆಯಿಂದ, ಅಥವಾ ನಾರ್ವೆಜಿಯನ್ ಭಾಷೆಯ ಠಿಟಠಠಚ ಎಂಬ ಪದದಿಂದ ಬಂದದ್ದಿರಬಹುದೆಂದು ಕೆಲವರ ಅಭಿಪ್ರಾಯ. ಚಡಪಡಿಕೆ ಎಂಬ ಅರ್ಥದಲ್ಲೂ ಠಿಟಠಠ ಪದಬಳಕೆ 16ನೆಯ ಶತಮಾನದಲ್ಲಿತ್ತಂತೆ. ಅಡುಗೆಯಲ್ಲಿ ಆಹಾರಪದಾರ್ಥಗಳನ್ನು ಬಾಣಲೆಗೆ ಎಸೆಯುವುದು, ಕಲಸುವುದಕ್ಕಾಗಿ ಬಾಣಲೆಯಿಂದ ಮೇಲಕ್ಕೆ ಕೇರುವುದು ಮುಂತಾದ ಅರ್ಥಗಳು 18ನೆಯ ಶತಮಾನದಲ್ಲಿ ಸೇರಿಕೊಂಡವು. ಈಗ ಹೆಚ್ಚು ಪ್ರಚಲಿತವಿರುವ coin toss ಎಂಬ ಬಳಕೆ 1798ರಲ್ಲಿ ಮೊದಲಬಾರಿ ಕಂಡುಬಂದಿತು. ‘ಬಿಟ್ಹಾಕು’ ಎಂಬ ಇನ್ನೊಂದು ಅರ್ಥ 1876ರಲ್ಲಿ ಸೇರಿಕೊಂಡಿತು. ಆದರೂ, toss ಹೆಚ್ಚು ಬಳಕೆಯಾಗುವುದು ಒಮ್ಮಿಂದೊಮ್ಮೆಲೇ ಮೇಲಕ್ಕೆಸೆ ಎಂಬ ಅರ್ಥದಲ್ಲೇ. ವಿಶ್ವವಿದ್ಯಾಲಯಗಳ ಘಟಿಕೋತ್ಸವದಂದು ಪದವಿ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳು ತಮ್ಮತಮ್ಮ ಟೋಪಿಗಳನ್ನು ತಲೆಯಿಂದ ತೆಗೆದು ಮೇಲಕ್ಕೆಸೆಯುವುದು, ಪಾಶ್ಚಾತ್ಯ ವಿವಾಹಸಮಾರಂಭಗಳಲ್ಲಿ ವಧು ತಾನು ಹಿಡಿದುಕೊಂಡ ಹೂಗುಚ್ಛವನ್ನು ಮೇಲಕ್ಕೆತ್ತಿ ಎಸೆಯುವುದು (ಅದೃಷ್ಟ ತರುವ ವಸ್ತುವೆಂದು ಅಲ್ಲಿರುವ ಬೇರೆ ಕನ್ಯೆಯರು ಅದನ್ನು ಹಿಡಿಯಲಿಕ್ಕೆ ಪ್ರಯತ್ನಿಸುವುದು), ಟೆಕ್ಸಸ್​ನಲ್ಲಿ ಕಾಲ್ಚೆಂಡಾಟದ ಕೊನೆಗೆ ಪ್ರೇಕ್ಷಕರು ಮೈದಾನದತ್ತ ಟೊರ್ಟಿಯಾ (ಮೆಕ್ಕೆಜೋಳದ ರೊಟ್ಟಿ)ಗಳನ್ನು ಎಸೆಯುವುದು... ಇವೆಲ್ಲವೂ tossing ಎಂದೇ ಕರೆಸಿಕೊಳ್ಳುತ್ತವೆ. ಹಾಗೆ ನೋಡಿದರೆ ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ಘಟ ವಾದಕರು ರಸೋತ್ಕಟತೆಯ ಕ್ಷಣದಲ್ಲಿ ಘಟವನ್ನು ಮೇಲಕ್ಕೆಸೆದು ಹಿಡಿಯುತ್ತಾರಲ್ಲ, ಅದೂ tossing.

ನಾವಿಲ್ಲಿ ಕನ್ನಡ ಪದ ಹುಡುಕಿದ್ದು ಕ್ರಿಕೆಟ್ ಪಂದ್ಯದ ಆರಂಭದಲ್ಲಿ ನಡೆಯುವ toss ಪ್ರಕ್ರಿಯೆಗೆ. ನಾಣ್ಯವನ್ನು ಮೇಲಕ್ಕೆಸೆದು ತಲೆ ಅಥವಾ ಬಾಲ ಯಾವುದು ಮೇಲಾಗಿ ಬೀಳುತ್ತದೆಯೆಂದು ನೋಡುವುದಕ್ಕೆ. ಬಹುಜನರ ಆಯ್ಕೆ ನಾಣ್ಯದ ‘ಚಿಮ್ಮುಗೆ’ (ಚಿಮ್ಮು, ಚಿಮ್ಮಿಸು, ಚಿಮ್ಮುವಿಕೆ). ಸೂಚಿಸಿರುವವರು: ಶೋಭಾ ತಿಪಟೂರು, ವಿಶ್ವನಾಥ ವಿ.ಎನ್, ಕೃಷ್ಣದೇವರಾಯ ಮುದ್ಲಾಪುರ, ರಮೇಶ ಕಾರಂತ, ಪಿ.ಜೆ.ರಾಘವೇಂದ್ರ, ಬಿ.ಕೆ.ಶಿವಕುಮಾರ್, ಎಂ.ಬಾಲಕೃಷ್ಣ ಭಟ್, ಎಂ.ಕೆ.ರಮೇಶ್, ಯಮನಪ್ಪ ಕೊಟ್ನಿಕಲ್, ದತ್ತಾತ್ರಿ ಸಾಮಗ, ಸಣ್ಣಪ್ಪ ನಾಯಕ, ಡಾ.ತಿಮ್ಮಯ್ಯ ಎಚ್.ಆರ್, ಪರಮೇಶ್ವರ ಭಟ್ಟ ಉಪ್ಪುಂದ, ಎನ್.ಎಸ್ ಚಿದಂಬರ, ನಟರಾಜು ಬಿ.ಎಸ್, ವಸುಮತಿ ಮೈಸೂರು, ಎ.ಪಿ ಉಡುಪ, ದಾಮೋದರ ಭಟ್, ಮಿಸ್ಕಿನ್ ಕುಟುಂಬ ಸದಸ್ಯರು ಹುಬ್ಬಳ್ಳಿ, ಮಂಜುನಾಥ ಡಿ.ಎಸ್, ರಾಮಾನುಜ ರಾಮನಾಥಪುರ, ಎಸ್.ಆರ್.ಕೃಷ್ಣಮೂರ್ತಿ, ಪ್ರಭುಪ್ರಸಾದ್ ನಡುತೋಟ, ಡಾ.ಸಂಗಮೇಶ ಸುರಭಿ, ವಿಲಾಸಿನಿ ಭಟ್, ಉಷಾಕಿರಣ್ ಅತ್ತಾವರ, ಚ.ರು.ಶಂಕರ ರಾವ್, ಕಿರಣಕುಮಾರ್ ಚಿತ್ರದುರ್ಗ, ಪ್ರಮೋದ ಕಟ್ಟಿ, ಜ್ಯೋತಿ ಜಿ ಕೃಷ್ಣ, ವಿ.ವಿಜಯೇಂದ್ರ ರಾವ್ ಮುಂತಾದವರು. ಇನ್ನೊಂದು ಕುತೂಹಲಕರ ಪದಬಳಕೆ ‘ಚಿತ್-ಪಟ್’ ಬಹುಶಃ ಪ್ರಾದೇಶಿಕವಾಗಿ ರೂಢಿಯಲ್ಲಿರುವುದು. ತಿಳಿಸಿದವರು: ಸ.ಮ.ಜಿರ್ಲಿಮಠ, ಭಾವುರಾವ್ ಕುಲಕರ್ಣಿ, ಸೀತಾ ವ್ಯಾಸಮುದ್ರಿ, ಡಾ.ಗುರುರಾಜ ಕಳ್ಳೀಹಾಳ. ಎಲ್ಲರಿಗೂ ಅಭಿನಂದನೆಗಳು.

ಈ ವಾರದ ಮೂರು ಪದಗಳು

1. Prescription: ವೈದ್ಯರು ಚೀಟಿಯಲ್ಲಿ Rx ಎಂಬುದರ ಕೆಳಗೆ ಬರೆದುಕೊಡುವ, ರೋಗಿ ಬಯಸಿದ ಹಾಲು-ಅನ್ನ?

2.Routine: ದಿನಚರಿ ಎನ್ನಲಿಕ್ಕೆ ಇದು ಪ್ರತಿದಿನದ್ದೇ ಆಗಬೇಕಂತಿಲ್ಲ. ಮತ್ತೆ ಏನೆನ್ನಬಹುದು?

3. Waiter: ತಿಂಡಿಯ ಆಯ್ಕೆ ತಿಳಿಸಿದ ಮೇಲೆ ನಿಜವಾಗಿಯೂ ಕಾಯುವಂತೆ ಮಾಡುವವನು ಯಾರು?

ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945

(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್

ಮತ್ತು ಅಂಕಣ ಬರಹಗಾರರು)