ಅಂತರ್ಜಲವನ್ನು ವೇಗವಾಗಿ ಬರಿದು ಮಾಡುತ್ತಿದ್ದೇವೆ. ವ್ಯಕ್ತಿಗತವಾಗಿಯೂ ನೀರಿನ ಬಳಕೆ ಪ್ರಮಾಣ ಹೆಚ್ಚಾಗಿದೆ. ಪರಿಣಾಮ, ಎಷ್ಟೋ ಕಡೆ ಸಾವಿರ ಅಡಿ ಆಳಕ್ಕೆ ಹೋದರೂ ನೀರು ಸಿಗದಂಥ ಪರಿಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಹೊಸಪೀಳಿಗೆಗೆ ಜಲನಿಧಿಯೇ ಸಿಗದಂಥ ಸ್ಥಿತಿ ಸೃಷ್ಟಿಯಾಗುವ ಆತಂಕವಿದೆ.
ನಾವುಗಳು ಮಾಡುತ್ತಿರುವುದು ಇದನ್ನೇ ಅಲ್ವೇ? ನೈಸರ್ಗಿಕ ಸಂಪನ್ಮೂಲಗಳನ್ನು ಬೇಕಾಬಿಟ್ಟಿಯಾಗಿ, ವಿವೇಚನೆಯೇ ಇಲ್ಲದೆ ಬಳಸುತ್ತ, ಎಲ್ಲವನ್ನೂ ಖಾಲಿ ಮಾಡುತ್ತ ಮುಂದಿನ ಪೀಳಿಗೆಗೆ ಇಲ್ಲದಂಥ ಸ್ಥಿತಿ ಸೃಷ್ಟಿಸುತ್ತಿದ್ದೇವೆ. ತೈಲದ ಬಳಕೆಯಾಗಲಿ, ನೀರಿನ ಬಳಕೆಯಾಗಲಿ ಅನಿಯಂತ್ರಿತವಾಗಿ ನಡೆಯುತ್ತಿದೆ. ಉಸಿರಾಡುವ ಗಾಳಿಯನ್ನು ಕಲುಷಿತಗೊಳಿಸಿದ್ದೇವೆ, ಶುದ್ಧ ಕುಡಿಯುವ ನೀರು ಮರೀಚಿಕೆ ಆಗುತ್ತಿದೆ, ಭೂಮಿ ಮೇಲೆ ಮಾಲಿನ್ಯದ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಬೆಂಗಳೂರಿನ ಸ್ಥಿತಿಯಂತೂ ಇನ್ನೂ ಚಿಂತಾಜನಕವಾಗಿದೆ. ಬೆಂಗಳೂರಿನ ನಿರ್ವತೃ ಕೆಂಪೇಗೌಡರು ಎಷ್ಟೊಂದು ವೈಜ್ಞಾನಿಕವಾಗಿ ಈ ನಗರವನ್ನು ರೂಪಿಸಿದ್ದರು. ‘ನೂರಾರು ಕೆರೆ, ಕಲ್ಯಾಣಿಗಳನ್ನು ನಿರ್ವಿುಸುವ ಮೂಲಕ ಅವರು ಅದ್ಭುತ ಜಲವಿಜ್ಞಾನಿ ಆಗಿದ್ದರು. ಕೆಂಪೇಗೌಡರು ನಿರ್ವಿುಸಿದಂಥ ಕೆರೆಗಳನ್ನು ನಾವು ಉಳಿಸಿಕೊಳ್ಳಬೇಕಿದೆ’ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಲೋಕಸಭೆಯಲ್ಲಿ ಆರು ಬಾರಿ ಪ್ರತಿನಿಧಿಸಿದ್ದ, ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಸದಾ ಹೇಳುತ್ತಿದ್ದರು. ಆ ನಿಟ್ಟಿನಲ್ಲಿ ಕಳಕಳಿ ತೋರುತ್ತಿದ್ದರು.
ಅಷ್ಟಕ್ಕೂ, ನಮ್ಮ ಪ್ರಾಚೀನ ನಗರಗಳು ಕೂಡ ಬಹಳ ಸಮರ್ಪಕವಾದ ಜಲವ್ಯವಸ್ಥೆಯನ್ನು ಹೊಂದಿದ್ದವು. ಮಳೆನೀರನ್ನು ಇಂಗಿಸುವ ವ್ಯವಸ್ಥೆ ಇತ್ತು. ಶುದ್ಧನೀರು, ಕೊಳಚೆನೀರಿಗೆ ಪ್ರತ್ಯೇಕ ಮಾರ್ಗವಿತ್ತು. ಅಲ್ಲದೆ, ಹಲವು ಖ್ಯಾತ ನಗರಗಳು ಕೂಡ ನದಿತೀರದಲ್ಲೇ ಅರಳಿ, ಉತ್ಕರ್ಷದ ಹಾದಿಯಲ್ಲಿ ಸಾಗಿದವು. ಅಯೋಧ್ಯೆ, ಕಾಶಿ, ಪ್ರಯಾಗ್ ಹೀಗೆ ಹಲವು ನಗರಗಳನ್ನು ಹೆಸರಿಸಬಹುದು. ಅಂತರ್ಜಲವನ್ನು ಯಾವಾಗ, ಯಾರು ಪತ್ತೆ ಹಚ್ಚಿದರು ಎಂಬುದು ನಿಖರವಾಗಿ ಹೇಳುವುದು ಕಷ್ಟವಾದರೂ, ಐತಿಹ್ಯಗಳ ಪ್ರಕಾರ ಭೀಷ್ಮ ಪಿತಾಮಹರು ಅಂತರ್ಜಲ ಪತ್ತೆ ಮಾಡಿದರು ಎನ್ನಲಾಗಿದೆ. ಯುದ್ಧಭೂಮಿಯಲ್ಲಿ ಭೀಷ್ಮರು ಮರಣಶಯ್ಯೆಯಲ್ಲಿದ್ದಾಗಿನ ಸಂದರ್ಭ. ಮೃತ್ಯುವಿಗಾಗಿ ಉತ್ತರಾಯಣವನ್ನು ಕಾಯುತ್ತಿದ್ದರು. ಆಗ ನೀರು ಕೇಳಿದಾಗ, ‘ಇಲ್ಲಿ ಎಲ್ಲಿಂದ ನೀರು ತರುವುದು?’ ಎಂಬ ಪ್ರಶ್ನೆಗೆ, ‘ನೆಲಕ್ಕೆ ಬಾಣಬಿಡು ಅಲ್ಲಿಂದ ನೀರು ಚಿಮ್ಮುತ್ತದೆ’ ಎಂದು ಹೇಳಿದ್ದರು. ಅದರಂತೆ ನೀರು ಭೂಮಿಯಿಂದ ಬಂತು.
ಮೊದಲೆಲ್ಲ ನದಿತೀರಗಳಲ್ಲಿ ವಾಸವಾಗಿದ್ದ ಜನರು ಅಂತರ್ಜಲದ ಬಗ್ಗೆ ಗೊತ್ತಾಗುತ್ತಿದ್ದಂತೆ ಬೆಟ್ಟ, ಗುಡ್ಡದಂಥ ಕಡಿದಾದ ಪ್ರದೇಶಗಳಲ್ಲೂ ಇರತೊಡಗಿದರು. ಎಲ್ಲ ಕಡೆ ಜನಸಂಖ್ಯೆ ಹಂಚಿಕೆಯಾಯಿತು. ಬಹುಶಃ, ಅಂತರ್ಜಲದ ಅರಿವು ಇಲ್ಲದಿದ್ದರೆ ನಾಗರಿಕತೆ ವೇಗವಾಗಿ ವಿಕಾಸ ಹೊಂದುವುದು ಕಷ್ಟಸಾಧ್ಯವಾಗಿತ್ತೇನೋ.
ಎರಡು ವರ್ಷಗಳ ಹಿಂದೆ ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ಪುರಾತನ ನಗರಿ ದೋಲಾವೆರಾಗೆ ಭೇಟಿ ಕೊಟ್ಟಿದ್ದೆ. ಉತ್ಖನನ ನಡೆಯುತ್ತಿತ್ತು. ಅನಂತಕುಮಾರ್ ಸಂಸ್ಕೃತಿ ಸಚಿವರಾಗಿದ್ದಾಗ ಅಲ್ಲಿ ಅನುದಾನ ಒದಗಿಸಿದ್ದರು. ಹಲವು ಆಸಕ್ತಿಕರ ಸಂಗತಿಗಳು ಅಲ್ಲಿ ಕಂಡುಬಂದವು. ದೋಲಾವೆರಾದಲ್ಲಿ ಮೂರು ಕಿಲೋಮೀಟರ್ ದೂರದಲ್ಲಿದ್ದ ನದಿಯಿಂದ ನೀರು ತರುತ್ತಿದ್ದರು. ಅದಕ್ಕೆ ಸಂಬಂಧಿಸಿ ಕಾಲುವೆಯ ಅವಶೇಷಗಳು ಸಿಕ್ಕಿವೆ. ನಾಲ್ಕೈದು ದೊಡ್ಡ ದೊಡ್ಡ ಕೆರೆಗಳು ಅಲ್ಲಿ ಮೊದಲು ಇದ್ದವು. ಕಾಲುವೆ ಮುಖಾಂತರ ನೀರು ಮೊದಲು ದೊಡ್ಡ ಕೆರೆಗೆ, ಬಳಿಕ ಇನ್ನೊಂದು ಕೆರೆಗೆ ಹರಿದು ಬರುತ್ತಿತ್ತು. ಹೀಗೆ ಹರಿಯುವಾಗ ಅದರ ಶುದ್ಧೀಕರಣಕ್ಕೆ ಅನುವು ಮಾಡಿ ಕೊಡಲಾಗುತ್ತಿತ್ತು. ಪ್ರಾಣಿಗಳನ್ನು ತೊಳೆಯಲು ಪ್ರತ್ಯೇಕ ಕೆರೆ. ಮನುಷ್ಯರ ಅಗತ್ಯಗಳಿಗೆ ಮತ್ತೊಂದು ಕೆರೆ. ಮೂರನೆಯ ಕೆರೆ ಪಕ್ಕದಲ್ಲೇ ಬಾವಿಯೊಂದಿತ್ತು. ಅದು ಕುಡಿಯುವ ನೀರಿನ ಮೂಲ. ಹೀಗೆ ಕೃಷಿಗೆ, ದಿನನಿತ್ಯದ ಅಗತ್ಯಕ್ಕೆ, ಕುಡಿಯಲು ಪ್ರತ್ಯೇಕ ಮೂಲಗಳನ್ನೇ ಸೃಷ್ಟಿಸಲಾಗುತ್ತಿತ್ತು. ಅಷ್ಟು ಸುಸಜ್ಜಿತ ಜಲನಿರ್ವಹಣೆ ನಮ್ಮದಾಗಿತ್ತು. ಅಲ್ಲದೆ, ನಮ್ಮ ಹಿರಿಯರು ದೇವಸ್ಥಾನದ ಹೊರಗಡೆ ಕಡ್ಡಾಯವಾಗಿ ಕಲ್ಯಾಣಿ, ಪುಷ್ಕರಣಿ ನಿರ್ವಿುಸುತ್ತಿದ್ದರು. ಅದನ್ನೇ ತೀರ್ಥವೆಂದು ಸೇವಿಸುತ್ತಿದ್ದರು. ಈ ಮೂಲಕ ಮಳೆನೀರು ಸಂಗ್ರಹವಾಗುತ್ತಿತ್ತು, ಜಲದ ಮಹಿಮೆಯೂ ಅರಿ ವಾಗುತ್ತಿತ್ತು. ಹೀಗೆ ಯಾವುದೇ ಹಳೆಯ ನಗರಗಳನ್ನು ನೋಡಿದಾಗಲೂ ಅಲ್ಲಿ ಜಲ ಸಂಪನ್ಮೂಲವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದ್ದದ್ದು ಸ್ಪಷ್ಟವಾಗಿ ಕಂಡುಬರುತ್ತದೆ. ಆ ಮೌಲ್ಯಗಳನ್ನೆಲ್ಲ ಮರೆತು ಮುಂದೆ ಸಾಗುತ್ತಿರುವುದರಿಂದಲೇ ಇಂದು ಹಲವು ಸಮಸ್ಯೆಗಳನ್ನು ಸೃಷ್ಟಿ ಮಾಡಿಕೊಂಡು, ಪರಿಹಾರ ಕಾಣದೆ ಒದ್ದಾಡುತ್ತಿದ್ದೇವೆ.
ಈಗಿನ ಸ್ಥಿತಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಬಹುತೇಕ ಎಲ್ಲ ನದಿಗಳ ಒಡಲಂತೂ ಕಲುಷಿತವಾಗಿಬಿಟ್ಟಿದೆ. ಹಲವು ನದಿಗಳೇ ಒಣಗಿ ಹೋಗಿವೆ. ಕೈಗಾರಿಕೆಯ ಅಪಾಯಕಾರಿ ತ್ಯಾಜ್ಯ, ಮನುಷ್ಯರು ಬಿಸಾಡಿದ ಕಸ... ಹೀಗೆ ಎಲ್ಲವೂ ನದಿಒಡಲು ಸೇರಿ ನೀರು ವಿಷಯುಕ್ತವಾಗುತ್ತಿದೆ.
ನಮ್ಮ ‘ಅದಮ್ಯ ಚೇತನ’ ಸಂಸ್ಥೆಯಲ್ಲಿ ನೀರು ಭೂಮಿಮಟ್ಟಿಗೆ ಇದೆ. ಬೆಂಗಳೂರಿನ ಬಹುತೇಕ ಕಡೆ ಸಾವಿರ ಅಡಿ ಆಳಕ್ಕೆ ಹೋದರೂ ನೀರು ಸಿಗದಂಥ ಪರಿಸ್ಥಿತಿ ಇರುವಾಗ ಇಲ್ಲಿ ಭೂಮಿ ಮಟ್ಟದಲ್ಲಿ ನೀರು ಇರಲು ಮುಂಚೆ ಈ ಭಾಗದಲ್ಲಿ ಹರಿಯುತ್ತಿದ್ದ ವೃಷಭಾವತಿ ನೀರು ಮತ್ತು ಪಕ್ಕದಲ್ಲೇ ಇರುವ ಗವಿ ಗಂಗಾಧರೇಶ್ವರನ ಆಶೀರ್ವಾದ ಕಾರಣ ಇರಬಹುದು. ಆದರೆ, ಬೆಂಗಳೂರಿನ ಎಲ್ಲ ಭಾಗಕ್ಕೂ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ನಿರ್ವಿುಸಲಾಗಿರುವ ಅಪಾರ್ಟ್ವೆುಂಟ್ಗಳಿಗೆ ಟ್ಯಾಂಕರ್ ನೀರು ಪೂರೈಕೆ ಆಗುತ್ತಿದ್ದು, ಆ ನೀರು ಕೊಳವೆಬಾವಿಗಳಿಂದ ಬರುತ್ತಿದೆ. ಅಷ್ಟೊಂದು ಸಂಖ್ಯೆಯಲ್ಲಿ ಕೊಳವೆಬಾವಿಗಳನ್ನು ಕೊರೆದು ಅಂತರ್ಜಲವನ್ನು ವೇಗವಾಗಿ ಬರಿದು ಮಾಡುತ್ತಿದ್ದೇವೆ. ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ 200 ದಶಲಕ್ಷ ಕೊಳವೆಬಾವಿಗಳನ್ನು ಕೊರೆಯಲಾಗಿದೆಯಂತೆ. ನಮ್ಮಲ್ಲಿ ಕೃಷಿಗಾಗಿಯೂ ಕೊಳವೆಬಾವಿ ನೀರನ್ನೇ ಅವಲಂಬಿಸುವ ಪ್ರವೃತ್ತಿ ಹೆಚ್ಚುತ್ತಿದೆ.
ಜಲಸಂಪನ್ಮೂಲವನ್ನು ಹೇಗೆ ವಿವೇಚನೆ ಇಲ್ಲದೆ ಬಳಸುತ್ತಿದ್ದೇವೆ ಎಂಬುದಕ್ಕೆ ಇವೆಲ್ಲ ನಿದರ್ಶನಗಳು. ಒಂದೆಡೆ ನದಿಗಳು ಕಲುಷಿತವಾಗಿವೆ, ಮತ್ತೊಂದೆಡೆ ಅಂತರ್ಜಲ ಬರಿದಾಗುತ್ತಿದೆ. ಕೆರೆ, ಕಲ್ಯಾಣಿಗಳ ಸ್ಥಿತಿ ಬಗ್ಗೆ ಅಂತೂ ಮಾತನಾಡುವಂತಿಲ್ಲ. ಎಷ್ಟೋ ಕೆರೆಗಳು ಅಸ್ತಿತ್ವವನ್ನೇ ಕಳೆದುಕೊಂಡು, ಅದರ ಒಡಲಲ್ಲೇ ದೊಡ್ಡ ದೊಡ್ಡ ಕಟ್ಟಡಗಳು ತಲೆಯೆತ್ತಿವೆ. ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೆ ಜಲಮೂಲಗಳಿಗೆ ಬಿಡಲಾಗುತ್ತಿದೆ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಕೆಲವೆಡೆಯಂತೂ, ಕೊರೆದು ನೀರು ಬಾರದ ಕೊಳವೆಬಾವಿಗಳಿಗೆ ಪೈಪ್ ಮೂಲಕ ವಿಷಕಾರಕ ನೀರನ್ನು ಬಿಡಲಾಗುತ್ತಿದೆ! ಎಂಥ ಪೈಶಾಚಿಕ ಕೃತ್ಯವಲ್ಲವೆ ಇದು? ನೀರು ಬಾರದ್ ಪೈಪ್ಗಳ ಮೂಲಕ ರಾಸಾಯನಿಕ ನೀರನ್ನು ಬಿಟ್ಟು ಆ ಮೂಲಕ ಅಂತರ್ಜಲವನ್ನು ವಿಷಯುಕ್ತ ಮಾಡಿಸುವ ಕೃತ್ಯಗಳನ್ನು ಯಾವ ಶಬ್ದಗಳಲ್ಲಿ ಖಂಡಿಸಬೇಕು? ಮನುಷ್ಯನ ಸ್ವಾರ್ಥ, ಅಜ್ಞಾನ ಈ ಪರಿಯಾಗಿ ಬೆಳೆಯಬಾರದು. ಹನಿನೀರಿಗೂ ತನ್ನದೇ ಆದ ಮೌಲ್ಯವಿದೆ. ನೀರನ್ನು ಉತ್ಪಾದಿಸುವ ಶಕ್ತಿ ಮನುಷ್ಯನಿಗಿಲ್ಲ; ಇದು ಗೊತ್ತಿದ್ದರೂ ಅದನ್ನು ಪೋಲು ಮಾಡುತ್ತಿರುವ, ಮುಂದಿನವರ ಬಗ್ಗೆ ಯೋಚನೆ ಮಾಡದೆ ಹಾಳು ಮಾಡುತ್ತಿರುವ ಮನಸ್ಥಿತಿ ಸರಿಯಲ್ಲ.
ಜನಸಂಖ್ಯೆ ಹೆಚ್ಚಿದಂತೆಲ್ಲ ನೀರಿನ ಬಳಕೆ ಹೆಚ್ಚುತ್ತಿದೆ. ಅಷ್ಟು ಮಾತ್ರವಲ್ಲ, ಪ್ರತಿ ವ್ಯಕ್ತಿಯೂ ವೈಯಕ್ತಿಕವಾಗಿ ಬಳಸುತ್ತಿರುವ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಬಗ್ಗೆ ನಾವು ಯೋಚನೆ ಮಾಡಬೇಕಿದೆ.
ಒಟ್ಟಿನಲ್ಲಿ, ಸರ್ಕಾರದ ಮೇಲೆ ಒತ್ತಡ ತರುವ ಜತೆಗೆ ನೀರಿನ ಬಳಕೆ ಪ್ರಮಾಣ ತಗ್ಗಿಸಲು ವೈಯಕ್ತಿಕ ಹಂತದಲ್ಲಿ ಪ್ರಯತ್ನಗಳು ತೀವ್ರಗೊಳ್ಳಬೇಕು. ನೇರವಾಗಿ ನಲ್ಲಿಯನ್ನು ಬಿಟ್ಟು ಬಳಸುವ ಬದಲು ಬಕೆಟ್, ಮಗ್ನಲ್ಲಿ ಹಿಡಿದಿಟ್ಟು ಬಳಸುವುದರಿಂದ ನೀರಿನ ಬಳಕೆ ತಗ್ಗಿಸಬಹುದು. ಮನೆಯಲ್ಲಿ ಅಕ್ಕಿ ತೊಳೆದ ನೀರು, ತರಕಾರಿ ತೊಳೆದ ನೀರನ್ನು ಮರುಬಳಕೆ ಮಾಡಬಹುದು. ರಾಸಾಯನಿಕರಹಿತ ಸೋಪುಗಳನ್ನು ಬಳಸಲು ಆದ್ಯತೆ ನೀಡಬೇಕು. ಆಗ ಪಾತ್ರೆ, ಬಟ್ಟೆ ತೊಳೆದ ನೀರನ್ನು ವ್ಯರ್ಥವಾಗಿಸದೆ ಗಿಡಗಳಿಗೆ ಉಣಿಸಬಹುದು. ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಶುದ್ಧ ನೀರಿನ ಬಳಕೆಯನ್ನು ತಗ್ಗಿಸೋಣ. ಮಳೆನೀರನ್ನು ಸಂಗ್ರಹಿಸಿ, ಅದನ್ನು ಮತ್ತೆ ಭೂಮಿಗೆ ಸೇರುವಂತೆ ವ್ಯವಸ್ಥೆ ಮಾಡೋಣ. ನೀರಿನ ಮರುಬಳಕೆಗೆ ಉತ್ತೇಜನ ನೀಡೋಣ. ಪ್ರತಿಯೊಬ್ಬರೂ ಈ ಆಂದೋಲನದಲ್ಲಿ ಭಾಗಿಯಾಗಬೇಕಿದೆ. ಅಂತರ್ಜಲ ಎಂಬ ಜಲನಿಧಿಯನ್ನು ಕಲುಷಿತಗೊಳಿಸುವುದು ಬೇಡ, ಖಾಲಿಗೊಳಿಸುವುದು ಬೇಡ. ಮುಂದಿನ ಪೀಳಿಗೆಗಾಗಿ ಅಂತರ್ಜಲವನ್ನು ರಕ್ಷಿಸಿಡೋಣ.