ಇರಾನ್ ಮತ್ತು ಇಸ್ರೇಲ್ ನಡುವಿನ ಘರ್ಷಣೆ ಕೆಲವು ದಿನಗಳಿಂದ ತೀವ್ರಗೊಂಡಿದೆ. ಕಳೆದ ವರ್ಷದ ಅಕ್ಟೋಬರ್ 26ರಂದು ‘ಆಪರೇಷನ್ ಡೇಸ್ ಆಫ್ ರಿಪೆಂಟೆನ್ಸ್’ ಹೆಸರಿನಲ್ಲಿ ಇರಾನ್ ಮೇಲೆ ದಾಳಿ ನಡೆಸಿದ್ದ ಇಸ್ರೇಲ್, ಮತ್ತೆ ಈಗ ‘ಆಪರೇಷನ್ ರೈಸಿಂಗ್ ಲಯನ್’ ಹೆಸರಿನಲ್ಲಿ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮೇಲೆ ಕ್ಷಿಪಣಿಗಳ ಮಳೆ ಸುರಿಸಿದೆ. ಇದರಿಂದ ವಿಶ್ವದ ಆರ್ಥಿಕತೆ ಮೇಲೆ, ಅದರಲ್ಲೂ ವಿಶೇಷವಾಗಿ ಭಾರತದ ಆರ್ಥಿಕತೆ ಮೇಲಾಗುವ ಪರಿಣಾಮಗಳೇನು ಎನ್ನುವುದರ ಸ್ಥೂಲ ನೋಟ ಇಲ್ಲಿದೆ.
ಜಗತ್ತಿನ ಅರ್ಥವ್ಯವಸ್ಥೆಯನ್ನು ಕಂಗೆಡಿಸುವಂತಹ ಬೆಳವಣಿಗೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿವೆ. ರಷ್ಯಾ- ಯೂಕ್ರೇನ್ ಯುದ್ಧದ ತೀವ್ರತೆ ಇನ್ನೇನು ಕಡಿಮೆಯಾಯಿತು ಎನ್ನುವಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರಸ್ಪರ ತೆರಿಗೆಯ ‘ದಾಳಿ’ ಶುರುವಾಗಿತ್ತು. ಅದರ ಪರಿಣಾಮ ತಗ್ಗುತ್ತಿದೆ ಎನ್ನುವ ಹೊತ್ತಿಗೆ ಇಸ್ರೇಲ್-ಇರಾನ್ ಸಂಘರ್ಷ ಶುರುವಾಗಿದೆ. ಇದು ಇನ್ನೂ ಆರಂಭಿಕ ಹಂತದಲ್ಲಿದ್ದರೂ, ಉಭಯ ದೇಶಗಳ ಯುದ್ಧೋನ್ಮಾದವನ್ನು ನೋಡಿದರೆ, ಸದ್ಯದಲ್ಲೇ ಇದು ಪೂರ್ಣ ಪ್ರಮಾಣದ ಸಮರವಾಗಿ ಮಾರ್ಪಡುವ ಲಕ್ಷಣಗಳು ಕಾಣಿಸುತ್ತಿವೆ. ಈ ಸಂಘರ್ಷ ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರತೊಡಗಿದೆ.
ಕಚ್ಚಾ ತೈಲ ಬೆಲೆ ಏರಿಕೆ: ಜಾಗತಿಕ ತೈಲ ಪೂರೈಕೆಗೆ ಮಧ್ಯಪ್ರಾಚ್ಯವೇ ಪ್ರಮುಖ ಕೇಂದ್ರ. ಇರಾನ್- ಇಸ್ರೇಲ್ ಘರ್ಷಣೆಯಿಂದ ತೈಲ ಪೂರೈಕೆಯ ಸರಪಳಿಯಲ್ಲಿ ಅಡಚಣೆ ಉಂಟಾಗಿ, ಕಚ್ಚಾ ತೈಲ ಬೆಲೆಗಳು ಗಗನಕ್ಕೇರಿವೆ. ಇದರಿಂದ ಇಂಧನ ವೆಚ್ಚ ದಿನೇದಿನೆ ಹೆಚ್ಚಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ಪಾದನೆಯನ್ನು ಕುಂಠಿತಗೊಳಿಸಿದೆ. ಸಾಗಾಣಿಕೆ ವೆಚ್ಚ ಹೆಚ್ಚಾಗುವಂತೆ ಮಾಡಿದೆ.
ಷೇರು ಮಾರುಕಟ್ಟೆಯಲ್ಲಿ ಏರಿಳಿತ: ಘರ್ಷಣೆಯಿಂದಾಗಿ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ತೀವ್ರ ಏರಿಳಿತ ಕಂಡುಬಂದಿದೆ. ತೈಲ ಕಂಪನಿಗಳ ಷೇರುಗಳು ಏರಿಕೆ ಕಂಡರೆ, ಮಾಹಿತಿ ತಂತ್ರಜ್ಞಾನ, ಗ್ರಾಹಕ ಉತ್ಪನ್ನ ಮತ್ತಿತರ ಕ್ಷೇತ್ರಗಳ ಷೇರುಗಳು ಕುಸಿತ ಕಂಡಿವೆ.
ವಸ್ತುಗಳ ಪೂರೈಕೆಗೆ ಅಡಚಣೆ: ಮಧ್ಯಪ್ರಾಚ್ಯದ ಮೂಲಕ ಹಾದುಹೋಗುವ ವಾಣಿಜ್ಯ ಮಾರ್ಗಗಳು, ವಿಶೇಷವಾಗಿ ಸೂಯೆಜ್ ಕಾಲುವೆ ಮತ್ತು ಹೊಮುಜ್ ಜಲಸಂಧಿಯಲ್ಲಿ ವಸ್ತುಗಳ ಸಾಗಾಣಿಕೆಗೆ ತೀವ್ರ ತೊಂದರೆ ಉಂಟಾಗಿದೆ. ಇದರಿಂದ ಜಾಗತಿಕ ವಾಣಿಜ್ಯ ಕ್ಷೇತ್ರದಲ್ಲಿ ವಿಳಂಬ ಸಾಮಾನ್ಯವಾಗಿದೆ. ಅದಲ್ಲದೆ ಸಾಗಾಣಿಕೆ ವೆಚ್ಚ ಹೆಚ್ಚಾಗಿ, ವಸ್ತುಗಳ ಬೆಲೆ ಏರುತ್ತಿದೆ.
ಹಣದುಬ್ಬರದ ಒತ್ತಡ: ತೈಲ ಬೆಲೆ ಏರಿಕೆಯಿಂದ ಜಾಗತಿಕ ಹಣದುಬ್ಬರವೂ ಏರಿಕೆಯಾಗುತ್ತಿದೆ. ಬಹುತೇಕ ಎಲ್ಲ ದೇಶಗಳ ಕೇಂದ್ರೀಯ ಬ್ಯಾಂಕ್ಗಳ ಬಡ್ಡಿ ದರ ಕಡಿತದ ನಿರ್ಧಾರ ಏರುಪೇರಾಗಿದೆ. ಪರಿಣಾಮವಾಗಿ, ಆರ್ಥಿಕ ಬೆಳವಣಿಗೆ ಮಂದಗತಿಗೆ ಜಾರುವ ಆತಂಕ ಸೃಷ್ಟಿಯಾಗಿದೆ.
ಇರಾನ್-ಇಸ್ರೇಲ್ ಸಂಘರ್ಷ ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಭಾರತಕ್ಕೆ ತೈಲ ಬೆಲೆ ಏರಿಕೆ, ಹಣದುಬ್ಬರ ಮತ್ತು ಷೇರು ಮಾರುಕಟ್ಟೆ ಏರಿಳಿತದಂತಹ ಸವಾಲುಗಳನ್ನು ತಂದೊಡ್ಡಲಿದೆ. ಕೇಂದ್ರ ಸರ್ಕಾರ ತಕ್ಷಣದ ಕ್ರಮಗಳ ಜತೆಗೆ, ದೀರ್ಘಕಾಲೀನ ರಾಜತಾಂತ್ರಿಕ ಮತ್ತು ಆರ್ಥಿಕ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
ಇರಾನ್ ಮತ್ತು ಇಸ್ರೇಲ್ ಎರಡೂ ದೇಶಗಳೊಂದಿಗೂ ಭಾರತ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿದೆ. ಈ ಘರ್ಷಣೆಯ ಹಿನ್ನೆಲೆಯಲ್ಲಿ ತಟಸ್ಥ ನಿಲುವು ಕಾಯ್ದುಕೊಳ್ಳುವುದು ಭಾರತಕ್ಕೆ ಕಷ್ಟಕರವಾಗಿ ಪರಿಣಮಿಸಿದೆ. ಶಾಂತಿ ಕಾಯ್ದುಕೊಳ್ಳುವಂತೆ ಉಭಯ ದೇಶಗಳಿಗೆ ಭಾರತ ಒತ್ತಾಯಿಸಿದ್ದರೂ, ಈ ಸಂಘರ್ಷದಿಂದಾಗಿ ದ್ವಿಪಕ್ಷೀಯ ವ್ಯಾಪಾರ ಮತ್ತು ರಕ್ಷಣಾ ಒಪ್ಪಂದಗಳ ಮೇಲೆ ಸಾಕಷ್ಟು ಪರಿಣಾಮವಾಗುವ ಸಾಧ್ಯತೆ ಇದೆ.
ಕಚ್ಚಾ ತೈಲ ಆಮದು ವೆಚ್ಚ ಏರಿಕೆ: ಭಾರತ ತನಗೆ ಅಗತ್ಯವಿರುವ ಒಟ್ಟು ಕಚ್ಚಾ ತೈಲದ ಪೈಕಿ ಶೇಕಡ 80ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಹೆಚ್ಚಿನ ಭಾಗ ಮಧ್ಯಪ್ರಾಚ್ಯದಿಂದಲೇ ಬರುತ್ತದೆ. ಕಚ್ಚಾ ತೈಲ ಬೆಲೆ ಏರಿಕೆಯಿಂದ ಭಾರತಕ್ಕೆ ಆಮದು ವೆಚ್ಚ ಹೆಚ್ಚಾಗುತ್ತದೆ. ದೇಶದ ವಿದೇಶೀ ವಿನಿಮಯ ಮೀಸಲಿನ ಮೇಲೆಯೂ ಒತ್ತಡ ಸೃಷ್ಟಿಯಾಗುತ್ತದೆ.
ರೂಪಾಯಿ ಮೌಲ್ಯ ಕುಸಿತ: ಇಂಧನ ಬೆಲೆ ಏರಿಕೆಯಿಂದ ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ಜನರ ದೈನಂದಿನ ಜೀವನ ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ, ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿಯ ಮೌಲ್ಯ ಕುಸಿಯುತ್ತಿದೆ. ಆಮದು ಸರಕುಗಳ ಬೆಲೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ಷೇರು ಮಾರುಕಟ್ಟೆ ಏರಿಳಿತ: ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಈಗಾಗಲೇ ಕುಸಿತ ಕಂಡಿವೆ. ಷೇರುಪೇಟೆಯ ಮೇಲೆ ಹೂಡಿಕೆದಾರರ ವಿಶ್ವಾಸ ಕಡಿಮೆಯಾಗಿದೆ. ಆದರೆ, ರಕ್ಷಣಾ ಉತ್ಪನ್ನ ತಯಾರಿಕಾ ಕಂಪನಿಗಳ ಷೇರುಗಳು ಏರಿಕೆ ಕಂಡಿವೆ.
ವಿಮಾನಸಂಚಾರ, ಪ್ರವಾಸೋದ್ಯಮ: ಮಧ್ಯಪ್ರಾಚ್ಯದ ಮೇಲಿನ ವಾಯುಮಾರ್ಗಗಳನ್ನು ಈ ಸಂಘರ್ಷದ ಸಮಯದಲ್ಲಿ ಬಳಸಲು ಸಾಧ್ಯವಾಗುವುದಿಲ್ಲ. ಅದನ್ನು ತಪ್ಪಿಸಲು ವಿಮಾನಗಳು ಬೇರೆ ಸುತ್ತು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಟಿಕೆಟ್ ಬೆಲೆ ಏರಿಕೆಯಾಗುತ್ತದೆ. ಪ್ರವಾಸೋದ್ಯಮ ಮತ್ತು ವ್ಯಾಪಾರ ಕ್ಷೇತ್ರದ ಮೇಲೆ ಇದು ನೇರ ಪರಿಣಾಮ ಬೀರುತ್ತದೆ.
ವಿದೇಶಗಳಲ್ಲಿ ಭಾರತೀಯರ ಸುರಕ್ಷತೆ: ಮಧ್ಯಪ್ರಾಚ್ಯ ದೇಶಗಳಲ್ಲಿ ಲಕ್ಷಾಂತರ ಭಾರತೀಯರು ಕೆಲಸ ಮಾಡುತ್ತಾರೆ. ಸಂಘರ್ಷ ದೀರ್ಘಾವಧಿ ಇದ್ದಷ್ಟೂ ಅವರ ಸುರಕ್ಷತೆಯ ಆತಂಕ ಮನೆ ಮಾಡಿರುತ್ತದೆ. ಘರ್ಷಣೆ ತೀವ್ರಗೊಂಡರೆ, ಭಾರತೀಯರನ್ನು ಅಲ್ಲಿಂದ ಸ್ವದೇಶಕ್ಕೆ ಸ್ಥಳಾಂತರ ಮಾಡುವ ಅನಿವಾರ್ಯತೆ ಎದುರಾಗಲಿದೆ.
ಕಚ್ಚಾ ತೈಲ ಬೆಲೆ ಏರಿಕೆಯಿಂದ ನಮ್ಮ ದೇಶದ ಮೇಲೆ ಆಗುವ ಪರಿಣಾಮವನ್ನು ಕಡಿಮೆ ಮಾಡಲು ಸರ್ಕಾರ ಇಂಧನದ ಮೇಲಿನ ಸುಂಕವನ್ನು ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. ಅದಲ್ಲದೆ ತನ್ನ ಬಳಿ ಇರುವ ತೈಲ ಮೀಸಲನ್ನು ಬಳಸಿಕೊಂಡು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಯೋಜನೆ ರೂಪಿಸುತ್ತಿದೆ.