ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 1.33 ಲಕ್ಷ ಕೋಟಿ ರೂ. ಹೂಡಿಕೆ ಮಾಡಿ ಬೃಹತ್ ಡೇಟಾ ಸೆಂಟರ್ ಸ್ಥಾಪಿಸುವುದಾಗಿ ಬಹುರಾಷ್ಟ್ರೀಯ ಗೂಗಲ್ ಕಂಪನಿ ಇತ್ತೀಚೆಗೆ ಘೊಷಣೆ ಮಾಡಿದ್ದು ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಐದಾರು ಸಾವಿರ ಜನರಿಗೆ ನೇರ ಉದ್ಯೋಗ, 30 ಸಾವಿರ ಮಂದಿಗೆ ಪರೋಕ್ಷ ಕೆಲಸ ಸಿಗಲಿದೆ ಎಂದು ಹೇಳಲಾಗಿತ್ತು. ಗಣ್ಯಾತಿಗಣ್ಯರೆಲ್ಲ ಆಂಧ್ರ ಸರ್ಕಾರವನ್ನು ಅಭಿನಂದಿಸಿದ್ದರು. ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳಲ್ಲಿ ಈ ಯೋಜನೆಯನ್ನು ಆಕರ್ಷಿಸಲು ಸಾಧ್ಯವಾಗದೇ ಇದ್ದುದಕ್ಕೆ ಸ್ಥಳೀಯರ ಅಸಮಾಧಾನವೂ ವ್ಯಕ್ತವಾಗಿತ್ತು. ಆದರೆ ಇದೀಗ ಈ ಡೇಟಾ ಸೆಂಟರ್ ಸ್ಥಾಪನೆಯಿಂದ ಆಗಬಹುದಾದ ಲಾಭ-ನಷ್ಟಗಳ ಲೆಕ್ಕಾಚಾರ ಆರಂಭವಾಗಿದೆ. ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಅಭಿಪ್ರಾಯ ಕೇಳಿಬರತೊಡಗಿದೆ.
ಎಐ ಡೇಟಾ ಸೆಂಟರ್ಗಳಿಗೆ ಭಾರಿ ಪ್ರಮಾಣದ ವಿದ್ಯುತ್ ಅಗತ್ಯವಿದೆ. ಅವು ತೀವ್ರವಾದ ಶಾಖವನ್ನು ಉತ್ಪಾದಿಸುತ್ತವೆ. ಅತ್ಯಂತ ವಿಶೇಷವಾದ ನೆಟ್ವರ್ಕಿಂಗ್ ಮತ್ತು ವಿದ್ಯುತ್ ವಿತರಣೆಯ ಅಗತ್ಯ ಅವುಗಳಿಗಿರುತ್ತದೆ. ಸರ್ವರ್ಗಳು ಅತಿಯಾಗಿ ಬಿಸಿಯಾಗದ ಹಾಗೆ ತಡೆಯಲು ಟನ್ಗಟ್ಟಲೆ ನೀರಿನ ಅವಶ್ಯಕತೆ ಇರುತ್ತದೆ. ಬಿಬಿಸಿ ವರದಿ ಪ್ರಕಾರ, ಸ್ಕಾಟ್ಲೆಂಡ್ನಲ್ಲಿ ಎಐ ಡೇಟಾ ಸೆಂಟರ್ಗಳು ವಾರ್ಷಿಕವಾಗಿ ಅರ್ಧಲೀಟರ್ನ 2 ಕೋಟಿ 70 ಲಕ್ಷ ಬಾಟಲಿಗಳಿಗೆ ಸಮನಾದ ನಲ್ಲಿ ನೀರನ್ನು ಬಳಸುತ್ತಿವೆ. ಜಗತ್ತಿನಾದ್ಯಂತ ದೈತ್ಯ ಡೇಟಾ ಸೆಂಟರ್ಗಳು ತಮ್ಮ ಸರ್ವರ್ಗಳನ್ನು ತಂಪಾಗಿಸಲು ಮತ್ತು ನಿರ್ವಹಿಸಲು ವಾರ್ಷಿಕವಾಗಿ ನೂರಾರು ಕೋಟಿ ಲೀಟರ್ ನೀರನ್ನು ಬಳಸುತ್ತಿವೆ. ವಿಶಾಖಪಟ್ಟಣದಲ್ಲಿ ಈಗಾಗಲೇ ಅಂತರ್ಜಲ ಸಾಕಷ್ಟು ಕೆಳಕ್ಕೆ ಹೋಗಿದೆ. ಅನಿಯಮಿತ ಮಳೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಈಗಾಗಲೇ ಜಲಮೂಲಗಳ ಮೇಲೆ ತೀವ್ರ ಒತ್ತಡ ಇದೆ. ಇಂತಹ ಯೋಜನೆಯಿಂದ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುತ್ತದೆ. ಸ್ಥಳೀಯ ನಿವಾಸಿಗಳಿಗೆ ಸಿಗಬೇಕಾದ ನೀರನ್ನು ಈ ಯೋಜನೆಗೆ ವರ್ಗಾಯಿಸುವ ಅನಿವಾರ್ಯತೆಗೆ ಸ್ಥಳೀಯ ಆಡಳಿತ ಸಿಲುಕಿಕೊಳ್ಳುತ್ತದೆ.
ಮುಂದಿನ ಐದು ವರ್ಷಗಳಲ್ಲಿ ವಿಶಾಖಪಟ್ಟಣದಲ್ಲಿ ಎಐ ಹಬ್, ಡೇಟಾ ಸೆಂಟರ್ ಸ್ಥಾಪಿಸಲು ಗೂಗಲ್ 15 ಬಿಲಿಯನ್ ಡಾಲರ್ (ಸುಮಾರು 1,33,200 ಕೋಟಿ ರೂ.) ಹೂಡಿಕೆ ಮಾಡಲಿದೆ. ಇದರಲ್ಲಿ ಅದಾನಿ ಗ್ರೂಪ್ ಸಹಭಾಗಿತ್ವದ ದೇಶದ ಅತಿ ದೊಡ್ಡ ಡೇಟಾ ಸೆಂಟರ್ ಕೂಡ ಸೇರಿದೆ. ಅಮೆರಿಕದ ಹೊರಗೆ ಗೂಗಲ್ ಸ್ಥಾಪಿಸುತ್ತಿರುವ ಅತಿ ದೊಡ್ಡ ಹಬ್ ಎಂಬುದು ಇದರ ಹೆಗ್ಗಳಿಕೆ. ಯೋಜನೆಯ ಭಾಗವಾಗಿ ಭಾರತಿ ಏರ್ಟೆಲ್ ವಿಶಾಖಪಟ್ಟಣದಲ್ಲಿ ಗೂಗಲ್ನ ಹೊಸ ಅಂತಾರಾಷ್ಟ್ರೀಯ ಸಬ್ಸೀ ಕೇಬಲ್ಗಳನ್ನು ಅಳವಡಿಸುವುದಕ್ಕಾಗಿ ಅತ್ಯಾಧುನಿಕ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಸ್ಥಾಪಿಸಲಿದೆ. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ನಿರ್ಮಲಾ ಸೀತಾರಾಮನ್, ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಮ್ಮುಖದಲ್ಲಿ ಈ ಬೃಹತ್ ಯೋಜನೆ ಘೊಷಿಸಲಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಅಮೆರಿಕ ಫಸ್ಟ್’ ನೀತಿಗೆ ಇದರಿಂದ ಹಿನ್ನಡೆ ಆದಂತಾಗಿದೆ ಎಂಬ ಅಭಿಪ್ರಾಯವೂ ಕೇಳಿಬಂದಿತ್ತು.
ಯೋಜನೆಯ ಆರ್ಥಿಕ ಲಾಭದ ದೊಡ್ಡ ಭಾಗವು ಜಾಗತಿಕ ಹೂಡಿಕೆದಾರರು, ಮೂಲಸೌಕರ್ಯ ಸಂಸ್ಥೆಗಳು ಮತ್ತು ದೂರದ ಕಾರ್ಪೆರೇಟ್ ಕಂಪನಿಗಳಿಗೆ ಹೋಗುತ್ತದೆ. ಆಂಧ್ರಪ್ರದೇಶ ಸರ್ಕಾರ ಗೂಗಲ್ಗೆ ತೆರಿಗೆ ವಿನಾಯಿತಿ, ಭೂಮಿ ಹಂಚಿಕೆ, 20 ವರ್ಷಗಳಲ್ಲಿ 22,002 ಕೋಟಿ ರೂ. ಮೌಲ್ಯದಷ್ಟು ನೀರು, ವಿದ್ಯುತ್ ಮತ್ತು ಮೂಲಸೌಕರ್ಯ ರಿಯಾಯಿತಿ, ಪೋ›ತ್ಸಾಹಕಗಳ ಪ್ಯಾಕೇಜ್ ನೀಡಿದೆ. ಇಷ್ಟೆಲ್ಲ ಸೌಲಭ್ಯಕ್ಕೆ ಪ್ರತಿಯಾಗಿ ಆಂಧ್ರಪ್ರದೇಶ ಸರ್ಕಾರಕ್ಕೆ, ಸ್ಥಳೀಯ ಜನತೆಗೆ ಸಿಗುವುದೇನು ಎಂಬುದು ಪ್ರಶ್ನಾರ್ಹವಾಗಿದೆ.
ದಿ ವಾಲ್ ಸ್ಟ್ರೀಟ್ ಜರ್ನಲ್ನಲ್ಲಿ ಫೆ. 25ರಂದು ‘ಎಐ ಡೇಟಾ ಸೆಂಟರ್ ಬೂಮ್ ಈಸ್ ಎ ಜಾಬ್ ಕ್ರಿಯೇಶನ್ ಬಸ್ಟ್’ ಎಂಬ ಶೀರ್ಷಿಕೆಯಡಿ ಒಂದು ಲೇಖನ ಪ್ರಕಟವಾಗಿತ್ತು. ‘ಡೇಟಾ ಸೆಂಟರ್ಗಳು ಉದ್ಯೋಗ ಸೃಷ್ಟಿಯ ದೊಡ್ಡ ಅವಕಾಶ ಎಂಬುದಾಗಿ ಕಂಪನಿಗಳು ಮತ್ತು ರಾಜಕಾರಣಿಗಳು ಹೇಳುತ್ತಾರೆ. ಆದರೆ ಡೇಟಾ ಸೆಂಟರ್ಗಳಿಗೆ ತುಂಬ ಕಡಿಮೆ ಕೆಲಸಗಾರರ ಅವಶ್ಯಕತೆ ಇರುತ್ತದೆ’ ಎಂದು ಆ ಲೇಖನದಲ್ಲಿ ಪ್ರತಿಪಾದಿಸಲಾಗಿದೆ. ಆಂಧ್ರಪ್ರದೇಶದ ಡೇಟಾ ಸೆಂಟರ್ಗೆ ದೊಡ್ಡ ಸಂಖ್ಯೆಯಲ್ಲಿ ಕಟ್ಟಡ ನಿರ್ಮಾಣ ಕಾರ್ವಿುಕರ ಅವಶ್ಯಕತೆ ಇರುತ್ತದೆ. ಕಟ್ಟಡಗಳ ನಿರ್ಮಾಣ ಮುಗಿದ ನಂತರ, ಈ ಸೆಂಟರ್ಗೆ ಅತಿ ಕಡಿಮೆ ಉದ್ಯೋಗಿಗಳು ಸಾಕು. ದೊಡ್ಡ ಉದ್ಯೋಗಾವಕಾಶ ಕೇವಲ ಭೌತಿಕ ಮೂಲಸೌಕರ್ಯದ ನಿರ್ವಣಕ್ಕೆ ಮಾತ್ರವೇ ಹೊರತು ಡೇಟಾ ಸೆಂಟರ್ಗೆ ಅಲ್ಲ. ಅಲ್ಲಿ ಹೆಚ್ಚಿನ ಕೆಲಸಗಳು ಯಂತ್ರಚಾಲಿತವಾಗಿ ನಡೆಯುತ್ತವೆ. ಕೆಲವೇ ಕೆಲವು ದೀರ್ಘಕಾಲೀನ ಹುದ್ದೆಗಳಿಗೆ ಪರಿಣಿತ ಜನ ಬೇಕಾಗುತ್ತಾರೆ. ಅವರೂ ಸಹ ಹೊರಗಿನಿಂದ ಬರುವ ವಿಶೇಷ ತಾಂತ್ರಿಕ ಪರಿಣಿತರಾಗಿರುತ್ತಾರೆ. ಸ್ಥಳೀಯರಿಗೆ ಸಿಗುವ ಉದ್ಯೋಗ ತಾತ್ಕಾಲಿಕ ಮತ್ತು ಕಡಿಮೆ ಕೌಶಲ್ಯದ್ದು. ನಿರ್ಮಾಣ ಮತ್ತು ದೈನಂದಿನ ನಿರ್ವಹಣೆ ಕೆಲಸಕ್ಕೆ ಸೀಮಿತ. ಹಾಗಾಗಿ ಇಲ್ಲಿ ಐದಾರು ಸಾವಿರ ಖಾಯಂ ಕೆಲಸಗಳು ಸ್ಥಳೀಯರಿಗೆ ಸಿಗುತ್ತವೆ ಎಂಬುದರಲ್ಲಿ ಸತ್ಯವಿಲ್ಲ ಎನ್ನುತ್ತದೆ ಹ್ಯೂಮನ್ ರೈಟ್ಸ್ ಫೋರಮ್
ಡೇಟಾ ಸೆಂಟರ್ನಂತಹ ಯೋಜನೆಗಳು ಸಾಮಾನ್ಯವಾಗಿ ವಿಷಕಾರಿ ತ್ಯಾಜ್ಯವನ್ನು ಉತ್ಪಾದಿಸುತ್ತವೆ. ಹಸಿರುಮನೆ ಅನಿಲಗಳನ್ನು ಹೊರಸೂಸುತ್ತವೆ. ಸ್ಥಳೀಯರಿಗೆ ಇವುಗಳಿಂದಾಗುವ ಪ್ರಯೋಜನ ಅತಿ ಕಡಿಮೆ. ಇದು ಉರುಗ್ವೆ ಡೇಟಾ ಸೆಂಟರ್ ವಿಷಯದಲ್ಲಿ ನಿಜವಾಗಿದೆ. ವಿಶಾಖಪಟ್ಟಣದ ಬಿಸಿ ವಾತಾವರಣವನ್ನು ಗಮನಿಸಿದರೆ, ಈ ಯೋಜನೆಯ ಸರ್ವರ್ಗಳನ್ನು ತೀವ್ರವಾಗಿ ತಂಪಾಗಿಸುವ ವ್ಯವಸ್ಥೆ ಅಗತ್ಯವಿರುತ್ತದೆ. ಇದಕ್ಕೆ ಹೆಚ್ಚಿನ ನೀರು ಬೇಕೇಬೇಕು. ಅಂತರ್ಜಲ ಮಟ್ಟ ಇನ್ನಷ್ಟು ಕಡಿಮೆ ಆಗುತ್ತದೆ. ರಾಸಾಯನಿಕ ಮತ್ತು ತ್ಯಾಜ್ಯ ವಿಸರ್ಜನೆಯಿಂದ ಸ್ಥಳೀಯ ನೀರಿನ ಮೂಲಗಳ ಮಾಲಿನ್ಯದ ಅಪಾಯ ಹೆಚ್ಚಾಗುತ್ತದೆ. ಭಾರಿ ಪ್ರಮಾಣದ ವಿದ್ಯುತ್ ಬಳಕೆ ಮತ್ತೊಂದು ಸಮಸ್ಯೆ. ಒಂದು ಗಿಗಾವಾಟ್ ಯೋಜನೆ ಎಂದರೆ ಲಕ್ಷಾಂತರ ಮನೆಗಳಿರುವ ಮಧ್ಯಮ ಗಾತ್ರದ ಒಂದು ನಗರಕ್ಕೆ ಒದಗಿಸುವಷ್ಟು ದೊಡ್ಡ ಪ್ರಮಾಣದ ವಿದ್ಯುತ್ನ ಅಗತ್ಯವಿರುತ್ತದೆ. ಈಗಾಗಲೇ ಒತ್ತಡಕ್ಕೆ ಒಳಗಾಗಿರುವ ಗ್ರಿಡ್ಗೆ ಇದು ಇನ್ನಷ್ಟು ಭಾರವನ್ನು ಉಂಟುಮಾಡುತ್ತದೆ. ಈ ಹೈಪರ್ಸ್ಕೇಲ್ ಯೋಜನೆಗೆ ಸಂಪೂರ್ಣ ನವೀಕರಿಸಬಹುದಾದ ಇಂಧನ ಬಳಸಲಾಗುವುದೆಂದು ಗೂಗಲ್ ಹೇಳಿದೆ. ಆದರೆ ಅದು ತಾಂತ್ರಿಕವಾಗಿ ಕಷ್ಟ. ರಾಜ್ಯದ ಗ್ರಿಡ್ನಿಂದ ಅಷ್ಟು ದೊಡ್ಡ ಪ್ರಮಾಣದಲ್ಲಿ ನವೀಕರಿಸಬಹುದಾದ ವಿದ್ಯುತ್ ಪೂರೈಸಲು ಸಾಧ್ಯವಾಗುವುದಿಲ್ಲ.ಕೊನೆಗೆ ಮಾಮೂಲಿ ವಿದ್ಯುತ್ಗೇ ಮೊರೆ ಹೋಗಬೇಕಾಗುತ್ತದೆ. ಗ್ರೀನ್ ಪ್ರೊಜೆಕ್ಟ್ ಎಂಬುದೆಲ್ಲ ಕೊನೆಗೆ ಕೇವಲ ಮುಖವಾಡ ಎನ್ನಿಸಿಕೊಳ್ಳಬಹುದು. ವಾಸ್ತವವಾಗಿ, ಈ ಗಾತ್ರದ ಡೇಟಾ ಸೆಂಟರ್ಗಳು ಮಾಮೂಲಿ ವಿದ್ಯುತ್ ಮೇಲೆಯೇ ಹೆಚ್ಚು ಅವಲಂಬಿತವಾಗಿರುತ್ತವೆ. ಇದರಿಂದ ದೊಡ್ಡ ಪ್ರಮಾಣದ ಇಂಗಾಲದ ಹೊರಸೂಸುವಿಕೆ ಖಚಿತ.