ಅಂಕಣ

ಸಿದ್ದರಾಮಯ್ಯ ಅವರು ಕಾಂತರಾಜು, ಹೆಗ್ಡೆ ವರದಿಯನ್ನು ಗಂಧದ ಕಡ್ಡಿಯಿಂದ ಬೆಳಗ್ತಾ ಇದ್ದಾರಾ? ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು ನಾನು ಅಧಿಕಾರದಲ್ಲಿದ್ದ ವೇಳೆ ಕಾಂತರಾಜು ವರದಿ, ಕಾಂತರಾಜು ವರದಿ ಎಂದು ಭಜನೆ ಮಾಡುತ್ತಿದ್ದ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಒಂದೂವರೆ ವರ್ಷದ ಮೇಲಾಯಿತು. ಕಾಂತರಾಜು ವರದಿ ಮತ್ತು ಜಯಪ್ರಕಾಶ್ ಹೆಗ್ಡೆ ವರದಿಯನ್ನಿಟ್ಟುಕೊಂಡು ಗಂಧದ ಕಡ್ಡಿಯಿಂದ ಬೆಳಗ್ತಾ ಇದ್ದಾರಾ? ವರದಿಯನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಉದ್ಯೋಗ ಮೇಳ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ವರದಿ ಮತ್ತು ಜಯಪ್ರಕಾಶ್ ಹೆಗ್ಡೆ ವರದಿಯನ್ನು ಮೇಧಾವಿಗಳು ನೀಡಿದ್ದಾರೆ. ಅದರಲ್ಲಿ ಏನು ಗುಮ್ಮಾ ಇದೆ ನೋಡಬೇಕಲ್ಲ. ನನ್ನ ಮೇಲೆ ಆಪಾದನೆ ಮಾಡಿದವರು ಈಗ ಸ್ವೀಕರಿಸಬೇಕಿತ್ತು ಅಲ್ವಾ? ಎಂದು ಟೀಕಿಸಿದರು.

ಇಂದು, ನಾಳೆ ಕ್ಯಾಬಿನೆಟ್‌ನಲ್ಲಿ ಇಡುತ್ತೇನೆ, ಉಪ ಸಮಿತಿ ಮಾಡುತ್ತೇನೆ ಎಂಬ ಸಬೂಬು ಹೇಳಿಕೊಂಡು ಎಷ್ಟು ದಿನ ಹೋಗುತ್ತೀರಿ? ಲೋಕಸಭೆ ಚುನಾವಣೆಗಿಂತ ಮೊದಲು ವರದಿ ಸ್ವೀಕರಿಸಿ ಇಲ್ಲಿಯತನಕ ಏಕೆ ಇಟ್ಟುಕೊಂಡಿದ್ದೀರಿ ಎಂದ ಅವರು, ಈ ಸರ್ಕಾರದಿಂದ ಯಾವುದೇ ರೀತಿಯಲ್ಲಿ ಜನರ ಸಮಸ್ಯೆಗಳು, ಸಂಘ ಸಂಸ್ಥೆಗಳ ಸಮಸ್ಯೆಗಳು, ಅವರ ಒತ್ತಾಯಗಳು ಮತ್ತು ಬೇಡಿಕೆಗಳು ಈಡೇರಲ್ಲ. ಅದರಲ್ಲಿಯೂ ವಿಶೇಷವಾಗಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಜಾರಿಗೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.