ಅಂಕಣ

ನದಿ ಜೋಡಣೆ ಉತ್ತರ ಕನ್ನಡ ವಿನಾಶದ ಆರಂಭವೇ?

| ಡಾ. ವಿ.ಎನ್​. ನಾಯಕ, ಲೇಖಕರು ನಿವೃತ್ತ ಪ್ರಾಧ್ಯಾಪಕರು, ಸಾಗರ ವಿಜ್ಞಾನ, ಕರ್ನಾಟಕ ವಿಶ್ವವಿದ್ಯಾಲಯ

ಒಂದು ಕಾಲದಲ್ಲಿ ಸ್ವಾತಂತ್ರ್ಯ ಹೋರಾಟದ ನೆಲೆಯಾಗಿದ್ದ ಉತ್ತರ ಕನ್ನಡ ಜಿಲ್ಲೆ ತನ್ನ ಅಂತ್ಯವನ್ನು ಕಾಣುವತ್ತ ಮುನ್ನುಗ್ಗುತ್ತಿರುವುದನ್ನು ಕೇಳಲು ವಿಪರ್ಯಾಸವೆನಿಸಿದರೂ ನಿಜವೆನ್ನುವುದು ಸರಕಾರ ಅಭಿವೃದ್ಧಿಯ ಹೆಸರಿನಲ್ಲಿ ಹಮ್ಮಿಕೊಳ್ಳುತ್ತಿರುವ ವಿವಿಧ ಯೋಜನೆಗಳಿಂದ ಕಂಡುಬರುತ್ತಿದೆ. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮ ದಿಕ್ಕಿಗೆ ಹರಿದು ಸಮುದ್ರ ಸೇರುವ ನೀರು ಅನೇಕರ ಕಣ್ಣಿಗೆ ವ್ಯರ್ಥವಾಗಿ ಸಮುದ್ರ ಸೇರುತ್ತಿರುವಂತೆ ತೋರುತ್ತಿದೆ. ಹಾಗಾಗಿಯೇ ಅವುಗಳ ದಿಕ್ಕು ಬದಲಿಸಿ ಸದುಪಯೋಗ ಪಡಿಸುವ ಯೋಜನೆಗಳನ್ನು ಸಾವಿರಾರು ಕೋಟಿ ರೂ. ವೆಚ್ಚ ಮಾಡಿ ಕಾರ್ಯಗತಗೊಳಿಸಲು ಹೊರಟಿದ್ದಾರೆ.

ಇನ್ನೊಂದೆಡೆ, ಇಡೀ ಉತ್ತರ ಕನ್ನಡ ಜಿಲ್ಲೆಯ ಸಮುದ್ರ ತೀರಗಳನ್ನು ಬಂದರು ನಿರ್ಮಾಣದ ಹೆಸರಿನಲ್ಲಿ ಪರಭಾರೆ ಮಾಡಲಾಗುತ್ತಿದೆ. ಇರುವ ಬಂದರುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗದೆ ಪರಭಾರೆ ಮಾಡುತ್ತಿರುವ ಈ ಸಮಯದಲ್ಲಿ ಇನ್ನೂ ಕೆಲ ಹೊಸ ಬಂದರುಗಳನ್ನು ಹೊರ ರಾಜ್ಯದ ಜನರಿಗೆ ಕಟ್ಟಿ ಬಳಸುವ ಆಧಾರದ ಮೇಲೆ ಜಿಲ್ಲೆಯ ಮೇಲೆ ಹೊರಿಸಲಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಈ ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಯಾವ ರೀತಿ ಸಹಕಾರಿಯಾಗಲಿವೆ ಎನ್ನುವುದನ್ನು ಎಲ್ಲಿಯೂ ತಿಳಿಸುತ್ತಿಲ್ಲ. ಸ್ಥಳೀಯರ ಅಭಿಪ್ರಾಯ ಕೇಳದೆ, ವಿರೋಧದ ನಡುವೆಯೂ ಅನೇಕ ಯೋಜನೆಗಳನ್ನು ಏಕೆ ತರಲಾಗುತ್ತಿದೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕಿದೆ.

ಜಿಲ್ಲೆಯ ಸುಮಾರು 23 ಕಿ.ಮೀ. ಉದ್ದದ ಕಡಲ ತೀರವನ್ನು ದೇಶದ ರಕ್ಷಣೆಗಾಗಿ ನೀಡಲಾಗುತ್ತಿದೆ ಎನ್ನುವ ಅಭಿಮಾನದಿಂದ ಬಿಟ್ಟುಕೊಟ್ಟ ಇಲ್ಲಿಯ ಜನರಿಗೆ ಕದಂಬ ನೌಕಾನೆಲೆ ಉದ್ಯೋಗ ಕೊಡಲಿಲ್ಲ. ಬದಲಿಗೆ ಇಲ್ಲಿಯವರ ಕೃಷಿ, ಮೀನುಗಾರಿಕೆಯನ್ನು ಕಸಿದುಕೊಂಡಿತು. ಮೀನು ಹಿಡಿಯಲು ಹೋದವರನ್ನು ನೌಕಾದಳದವರು ಬೆದರಿಸಿ, ಹೊಡೆದು ಓಡಿಸಿದರು. ದೇಶಕ್ಕೆ ವಿದ್ಯುತ್ ಪೂರೈಸಲು ನಿರ್ವಿುಸಿದ ಕೈಗಾ ಅಣುವಿದ್ಯುತ್ ಸ್ಥಾವರ ಈ ಜಿಲ್ಲೆಗೆ ನೀಡಿದ್ದು ಕ್ಯಾನ್ಸರ್ ಮತ್ತು ನಿರಂತರ ಅಣುವಿಕಿರಣದ ಭಯ. ಅಲ್ಲೂ ಸ್ಥಳೀಯರಿಗೆ ಸಮರ್ಪಕ ಉದ್ಯೋಗ ಕಲ್ಪಿಸಿಲ್ಲ. ಇವನ್ನು ಅಭಿವೃದ್ಧಿಯೆಂದು ಕರೆಯಬಹುದೆ?

ರಾಜ್ಯದಲ್ಲೇ ಅತಿ ದೊಡ್ಡ ಬಂದರು ನಿರ್ಮಾಣದ ಯೋಜನೆಯನ್ನು ಅಂಕೋಲೆಯ ಕೇಣಿ ಕಡಲ ತೀರದಲ್ಲಿ ನಿರ್ವಿುಸಲು ಜಿಂದಾಲ್ ಕಂಪನಿ (ಜೆಎಸ್​ಡಬ್ಲ್ಯು) ಯೋಜನೆ ಸಿದ್ಧಪಡಿಸಿದ್ದು ಜನರ ವಿರೋಧದ ನಡುವೆಯೂ ಸರಕಾರ ಮೌನವಾಗಿರುವುದು ಅಚ್ಚರಿಯ ಸಂಗತಿ. ಇದೇ ರೀತಿ ಟೊಂಕಾ, ಮಂಕಿ, ಪಾವಿನಕುರ್ವೆ ಪಟ್ಟಿಯಲ್ಲಿದ್ದು ಉಳಿದಿರುವ ತೀರಗಳನ್ನೂ ಕಬಳಿಸುವ ಯತ್ನ ನಡೆಯುತ್ತಿದೆ ಎನ್ನಲಾಗಿದೆ. ಜನಪ್ರತಿನಿಧಿಗಳ ಜಾಣ ಮೌನ, ಜನರೊಡನೆ ವಿರೋಧಿ ಚಳವಳಿಗಳಲ್ಲಿ ಭಾಗವಹಿಸದಿರುವುದು ಇದಕ್ಕೆ ಸಾಕ್ಷ್ಯವೆನ್ನಬಹುದು.

ಈಗ ನಮ್ಮ ಮುಂದಿರುವುದು ಸುಮಾರು 15 ವರ್ಷಗಳಿಗೂ ಹಿಂದಿನಿಂದ ಸುದ್ದಿಯಲ್ಲಿದ್ದು ಜನರ ವಿರೋಧಕ್ಕೆ ಮಣಿದು ಸರಕಾರ ಮುಚ್ಚಿದ್ದ ಕಡತವನ್ನು ಮತ್ತೆ ಹೊರತೆಗೆದಿರುವುದು. ಅದೇ ಬೇಡ್ತಿ-ವರದಾ ನದಿ ಜೋಡಣೆ. ಇದಕ್ಕೆ ಈಗ ಶಾಲ್ಮಲಾ ನದಿಯನ್ನೂ ಸೇರಿಸಿ ಇನ್ನೂ ದೊಡ್ಡ ಯೋಜನೆ ಸಿದ್ಧಪಡಿಸಲಾಗಿದೆ. ಈ ಹಿಂದೆ ನಾವು ಬೆಂಗಳೂರಿಗೆ ತೆರಳಿ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಲು ಬೆಂಗಳೂರಿನ ಶಾಸಕರ ಭವನದಲ್ಲಿ ಒಂದು ದಿನದ ಕಾರ್ಯಾಗಾರ ನಡೆಸಿದಾಗ ಈ ನದಿ ಜೋಡಣೆಯಿಂದ ಕರಾವಳಿ ತೀರದ ಮೇಲಾಗಬಹುದಾದ ಪರಿಣಾಮಗಳನ್ನು ವಿವರಿಸಿದ್ದೆ. ಅದನ್ನೇ ಈಗ ನಿಮ್ಮ ಮುಂದೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.

ನಮ್ಮ ಕರಾವಳಿ ತೀರವನ್ನು ಪರಶುರಾಮ ಸೃಷ್ಟಿ ಎಂದು ಕರೆಯಲಾಗುತ್ತಿದೆ. ಅಂದರೆ ಪಶ್ಚಿಮ ಘಟ್ಟ ಮತ್ತು ಕರಾವಳಿ ತೀರಗಳ ನಡುವಿನ ಅಂತರ ಒಬ್ಬ ಮನುಷ್ಯನು ಗುಡ್ಡದ ಮೇಲಿಂದ ಎಸೆದ ಪರಶುವಿನಷ್ಟು ಅಂತರ ಎಂದಾಗುತ್ತದೆ. ಅತಿ ಕಿರಿದಾದ ಕರಾವಳಿ ತೀರವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಮೇಲೆ ಪಶ್ಚಿಮ ಘಟ್ಟದ ಆಗುಹೋಗುಗಳು ವಿಪರೀತ ಪರಿಣಾಮ ಬೀರುತ್ತವೆ. ಪಶ್ಚಿಮ ಘಟ್ಟವು ಹಿಮಾಲಯಕ್ಕಿಂತ ಹಳೆಯದು. ಗೊಂಡಾವನ ಭೂಪ್ರದೇಶದಿಂದ ಬೇರ್ಪಟ್ಟು ಯುರೇಶಿಯಾ ಭೂಪ್ರದೇಶಕ್ಕೆ ಡಿಕ್ಕಿ ಹೊಡೆದು ಹಿಮಾಲಯವಾದರೆ ಅದಕ್ಕೂ ಮುಂಚೆ ನಮ್ಮ ಪಶ್ಚಿಮಕ್ಕೆ ಹರಿಯುವ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳು ಅಸ್ತಿತ್ವದಲ್ಲಿ ಇದ್ದವು.

ಅಂದರೆ ನಮ್ಮ ಪಶ್ಚಿಮ ಘಟ್ಟ ಮತ್ತು ನದಿ ತೀರದ ಜೀವವೈವಿಧ್ಯ ಅತಿ ಪುರಾತನವೆನ್ನಬಹುದಾಗಿದೆ. ಅದೇ ರೀತಿ ಸಮುದ್ರವನ್ನು ಹಿಂದೆ ಸರಿಸುವ ಪರಶುರಾಮನ ಉದ್ದೇಶ ಜನರಿಗೆ ಆವಾಸ ಕಲ್ಪಿಸಿಕೊಡುವುದು ಎಂದು ಪುರಾಣದಲ್ಲಿ ಹೇಳಲಾಗುತ್ತದೆ. ಅಂದರೆ ಅಂದೇ ನಮ್ಮ ಕರಾವಳಿಯ ಜನರು ನದಿಗಳ ಮತ್ತು ಕಡಲ ತೀರದ ಪ್ರದೇಶವನ್ನು ಜೀವನೋಪಾಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದರು ಎಂದರ್ಥ. ಅವರ ಜೀವನೋಪಾಯವನ್ನು ಕಸಿದುಕೊಳ್ಳುವ ಪ್ರಯತ್ನ ಈ ನದಿ ಜೋಡಣೆ.

ನದಿ ತಿರುವು ಯೋಜನೆಗಳನ್ನು ವಿಶ್ವದಾದ್ಯಂತ ವಿಜ್ಞಾನಿಗಳು ವಿರೋಧಿಸುತ್ತಲೇ ಬಂದಿದ್ದಾರೆ. ಇದಕ್ಕೆ ಕಾರಣ ಸಾವಿರಾರು ವರ್ಷಗಳಿಂದ ನೆಲೆಸಿದ ಜೀವವೈವಿಧ್ಯ ಮತ್ತು ಜೀವಿಪರಿಸರದ ಮೇಲೆ ನೀರಿನ ಹರಿವಿನ ವ್ಯತ್ಯಾಸದಿಂದ ಇಲ್ಲವೇ ನೀರಿನ ಅಭಾವದಿಂದ ಆಗಬಹುದಾದ ವ್ಯತಿರಿಕ್ತ ಪರಿಣಾಮ ಮತ್ತು ಈ ನೀರನ್ನೇ ಅವಲಂಬಿಸಿದ ಜೀವಿಸಂಕುಲ ಮತ್ತು ಅವನ್ನವಲಂಬಿಸಿದ ಜನರ ಮೇಲೆ ಆಗಬಹುದಾದ ಪರಿಣಾಮ. ಅಲ್ಲದೇ ನೀರಿನ ಹರಿವು ಬದಲಾಯಿಸಲು ಕೈಗೊಂಡ ಕಾಮಗಾರಿಯಿಂದ ಆಗಬಹುದಾದ ಪರಿಣಾಮಗಳನ್ನು ವಿವರಿಸಿ ನದಿ ಜೋಡಣೆ ಅವೈಜ್ಞಾನಿಕ ಪ್ರಕ್ರಿಯೆ ಎಂದು ಪ್ರತಿಪಾದಿಸುತ್ತಲೇ ಬಂದಿದ್ದಾರೆ.

ಪಶ್ಚಿಮ ಘಟ್ಟವನ್ನು ವಿಶ್ವ ಪಾರಂಪರಿಕ ತಾಣವೆಂದು ಇತ್ತೀಚೆಗೆ ಗುರುತಿಸಲಾಗಿದೆ. ಅದಕ್ಕೂ ಹಿಂದೆಯೇ ಈ ಪ್ರದೇಶವನ್ನು ಅತಿ ಹೆಚ್ಚಿನ ಜೀವವೈವಿಧ್ಯ ಹೊಂದಿರುವ ಪ್ರದೇಶ (ಮೆಗಾ ಬಯೋಡೈವರ್ಸಿಟಿ ರೀಜನ್) ಮತ್ತು ಜೀವವೈವಿಧ್ಯದ ಸೂಕ್ಷ್ಮ ಪ್ರದೇಶ (ಬಯೋಡೈವರ್ಸಿಟಿ ಹಾಟ್​ಸ್ಪಾಟ್) ಎಂದು ವಿಶ್ವ ಸಂಸ್ಥೆ ಗುರುತಿಸಿದೆ. ಇಂಥ ಪ್ರದೇಶದಲ್ಲಿ ಮೂರು ಬೃಹತ್ ಯೋಜನೆಗಳನ್ನು (ಬೇಡ್ತಿ ನದಿ ತಿರುವು, ಅಘನಾಶಿನಿ ನದಿ ತಿರುವು ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್) ಏಕಕಾಲಕ್ಕೆ ಸಿದ್ಧಪಡಿಸಿರುವುದು ಪರಿಸರದ ಬಗ್ಗೆ ಸರಕಾರಕ್ಕೆ ಇರುವ ನಿರ್ಲಕ್ಷ್ಯಕ್ಕೆ ಸಾಕ್ಷಿ. ಕೇಂದ್ರ ಸರಕಾರವು ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಿಬಿಡಿಗೆ (ಕನ್ವೆನ್ಷನ್ ಆಫ್ ಬಯೋಲಾಜಿಕಲ್ ಡೈವರ್ಸಿಟಿ) ಸಹಿ ಮಾಡಿದ ರಾಷ್ಟ್ರವಾಗಿದ್ದು ಜೀವವೈವಿಧ್ಯ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುತ್ತದೆ.

ಸರಕಾರದ ಅರಣ್ಯ ಇಲಾಖೆ ಈ ದಿಸೆಯಲ್ಲಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಯಾವುದೇ ಬೃಹತ್ ಯೋಜನೆ ಹಮ್ಮಿಕೊಳ್ಳುವ ಮುನ್ನ ತಮ್ಮ ಅಭಿಪ್ರಾಯ ನೀಡುವುದು ಅವಶ್ಯಕ. ಆದರೆ ಇಲ್ಲಿ ಈ ರೀತಿಯ ಯಾವುದೇ ಅಭಿಪ್ರಾಯ ಸಂಗ್ರಹಿಸಿರುವುದು ಕಂಡುಬರುತ್ತಿಲ್ಲ. ಉತ್ತರ ಕನ್ನಡದಲ್ಲಿರುವ ಸಿಂಗಳೀಕ, ಹಾರ್ನ್​ಬಿಲ್, ಹುಲಿ, ಅಶೋಕಾ ವೃಕ್ಷ ಇತ್ಯಾದಿ ರಕ್ಷಿತ ಜೀವಿಗಳಾಗಿದ್ದು ಅವೆಲ್ಲವನ್ನು ರಕ್ಷಿಸುತ್ತಿರುವುದು ನಮ್ಮ ಜಿಲ್ಲೆಯ ವ್ಯಾಪ್ತಿಯ ಪಶ್ಚಿಮ ಘಟ್ಟದ ಪ್ರದೇಶದಲ್ಲೇ. ಇದಲ್ಲದೆ ಇನ್ನೂ ಅನೇಕ ಸ್ಥಾನಿಕ ಜೀವಿಗಳ ಬಗ್ಗೆ ಅಧ್ಯಯನ ನಡೆಸದೇ ವಿಷಯ ಪರಿಣಿತರ ಅಭಿಪ್ರಾಯ ಪಡೆಯದೇ ಪಶ್ಚಿಮ ಘಟ್ಟದ ಮಧ್ಯದಲ್ಲೇ ಬೃಹತ್ ಯೋಜನೆಗಳನ್ನು ಸಿದ್ಧಪಡಿಸುವುದು ತಪ್ಪಲ್ಲವೇ?

ಕಾರವಾರ ಮತ್ತು ಅಂಕೋಲಾ ಪ್ರದೇಶಕ್ಕೆ ನೀರು ಪೂರೈಸುವ ಏಕೈಕ ಮೂಲ ಗಂಗಾವಳಿ ನದಿ (ಬೇಡ್ತಿ ಮತ್ತು ಶಾಲ್ಮಲಾ ಸೇರಿ ಗಂಗಾವಳಿ ನದಿ ಆಗಿದೆ). ಇತ್ತೀಚೆಗೆ ಬೆಳೆಯುತ್ತಿರುವ ನೌಕಾನೆಲೆ ಅತಿ ಹೆಚ್ಚಿನ ಪ್ರಮಾಣದ ನೀರನ್ನು ಸೆಳೆಯುತ್ತಿದೆ. ಪ್ರತಿ ವರ್ಷ ಬೇಸಿಗೆಯ ದಿನಗಳಲ್ಲಿ ಕರಾವಳಿಯ ಜನರು ನೀರಿನ ಅಭಾವ ಎದುರಿಸುತ್ತಿರುವುದು ಸರ್ವೆ ಸಾಮಾನ್ಯ. ಕಳೆದ ಎರಡು ವರ್ಷಗಳಿಂದ ನೀರಿನ ಭೀಕರ ಅಭಾವವನ್ನು ಕಂಡಿದ್ದೇವೆ. ಸರ್ಕಾರಕ್ಕೆ ಇದರ ಅರಿವಿದೆ. ಬಂದರು ನಿರ್ಮಾಣ ಮತ್ತು ಮುಂದುವರಿದು ನಿರ್ವಹಣೆ ಇನ್ನೂ ಹೆಚ್ಚಿನ ಬೇಡಿಕೆಯನ್ನು ಮುಂದಿಟ್ಟರೆ ಸ್ಥಳೀಯ ಜನರು ನೀರಿಲ್ಲದೆ ಬವಣೆ ಪಡಬೇಕಾಗಬಹುದು. ಮಳೆಗಾಲದ ಹರಿವು ಅಂತರ್ಜಲ ಮಟ್ಟ ಏರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು ಆ ಜಲಪ್ರವಾಹವನ್ನು ಬದಲಿಸಿದರೆ ಕರಾವಳಿ ತೀರದ ಎಲ್ಲ ಹಳ್ಳಿಗಳಲ್ಲೂ ಅಂತರ್ಜಲ ಕೊರತೆಯಿಂದ ಬರಗಾಲ ಸ್ಥಿತಿ ಎದುರಾದರೆ ಅಚ್ಚರಿಯೇನಿಲ್ಲ.

ಅಲ್ಲದೆ ನದಿ ಹರಿವಿನ ಪ್ರಮಾಣ ಕಡಿಮೆಯಾದರೆ ಅಳಿವೆಯ ಪ್ರದೇಶ ಮತ್ತು ಸಮುದ್ರ ತೀರದ ಪ್ರದೇಶದಲ್ಲಿ ಬಾವಿಯ ನೀರು ಉಪ್ಪಾಗುವುದು ಸಾಧ್ಯ. ಅಳಿವೆಯ ನೀರಿನಲ್ಲಿ ಉಪ್ಪಿನಂಶ ಹೆಚ್ಚಾದರೆ ಪರಿಸರ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಕಾಂಡ್ಲಾ ನಾಶವಾಗುವ ಸಾಧ್ಯತೆ ಇದೆ. ಇಂಥ ಪರಿಸ್ಥಿತಿಯನ್ನು ಜಲಕೃಷಿ ಸಮಯದಲ್ಲಿ ನದಿ ತೀರದ ಜನರು ಅನುಭವಿಸಿದ್ದಾರೆ. ಇದನ್ನು ತಡೆಯುವ ಒಂದೇ ಉಪಾಯವೆಂದರೆ ನದಿ ನೀರು ಸರಾಗವಾಗಿ ಹರಿದು ಸಮುದ್ರ ಸೇರಬೇಕು. ಕರಾವಳಿ ತೀರದ ಮೀನುಗಾರಿಕೆಯಲ್ಲಿ ಮಳೆಗಾಲದ ಹರಿವು ಮಹತ್ವದ ಪಾತ್ರ ವಹಿಸುತ್ತದೆ. ಬೆಟ್ಟದ ಪ್ರದೇಶದಿಂದ ಹರಿದು ಬರುವ ರಾಡಿ ಮತ್ತು ಸಸ್ಯಜನ್ಯ, ಪ್ರಾಣಿಜನ್ಯ ಪದಾರ್ಥಗಳು ಅಳಿವೆಯಲ್ಲಿ ಸಂಗ್ರಹವಾಗಿ ಪ್ರತಿನಿತ್ಯ ಸಮುದ್ರಕ್ಕೆ ಇಳಿತದ ಸಮಯದಲ್ಲಿ ಸೇರುತ್ತವೆ.

ಉತ್ತಮ ಮಳೆ ಮತ್ತು ಪ್ರವಾಹಗಳು ಮೀನಿನ ಉತ್ಪತ್ತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಪ್ರವಾಹಗಳನ್ನು ತಡೆದರೆ ಮೀನುಗಾರಿಕೆಯ ಮೇಲೆ ಭಾರೀ ಪರಿಣಾಮವಾಗಿ ಮೀನುಗಾರಿಕೆಯಲ್ಲಿ ತೊಡಗಿದವರು ಮತ್ತು ಅವಲಂಬಿಸಿದವರು ಅತಂತ್ರರಾಗುತ್ತಾರೆ. ಅದೇ ರೀತಿ ಕೃಷಿಯಲ್ಲಿ ಎರಡನೇ ಬೆಳೆಗೆ ಅಂತರ್ಜಲ ಮತ್ತು ನದಿ ಹರಿವಿನ ಸಿಹಿ ನೀರಿನ ಬಳಕೆಯಾಗುತ್ತದೆ. ಕಲ್ಲಂಗಡಿ, ಕಾಯಿಪಲ್ಲೆ, ಶೇಂಗಾ ಇತ್ಯಾದಿ ಬೆಳೆಯುವ ಬಡ ಕೃಷಿಕರು ಅತಂತ್ರರಾಗಬಹುದು. ಅಂದರೆ ಹೊರ ನಾಡಿಗೆ ನೀರುಣಿಸುವ ಸಲುವಾಗಿ ನಮ್ಮ ಜಿಲ್ಲೆಯ ಜನರು ನೀರು ಮತ್ತು ಆಹಾರದ ಕೊರತೆಯನ್ನು ಅನುಭವಿಸಬೇಕೆ?

ವಿಶ್ವ ಸಂಸ್ಥೆಯು 2021ರಿಂದ 2030ರವರೆಗಿನ ಅವಧಿಯನ್ನು ಸುಸ್ಥಿರ ಅಭಿವೃದ್ಧಿ ದಶಕ ಎಂದು ಗುರುತಿಸಿದೆ. ಆದರೆ ನಮ್ಮ ಯೋಜಕರು ಸುಸ್ಥಿರ ಎನ್ನುವ ಶಬ್ದವನ್ನು ಮುಚ್ಚಿಟ್ಟು ಅಭಿವೃದ್ಧಿ ಎನ್ನುವ ಹೆಸರಿನಲ್ಲಿ ಅಸಾಧ್ಯ ಕನಸನ್ನು ಹೆಣೆದು ಜನರಿಗೆ ಮೋಸ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಈಗ ನಮ್ಮ ಜಿಲ್ಲೆಯಲ್ಲಿ ಪ್ರಸ್ತಾಪಿಸಲ್ಪಟ್ಟ ನದಿ ತಿರುವು ಮತ್ತು ಬಂದರು ಯೋಜನೆಗಳು ಜನರ ಬೇಡಿಕೆಗಳಲ್ಲ. ಇವುಗಳಿಂದ ನಮಗೆ ಸಿಗುವುದು ಬೆಲೆ ಏರಿಕೆ, ಮಾಲಿನ್ಯ, ನೀರಿನ ಕೊರತೆ, ಅಹಾರದ ಕೊರತೆ ಇತ್ಯಾದಿ. ನಮ್ಮ ಕರಾವಳಿ ತೀರ ಮತ್ತು ಪಶ್ಚಿಮ ಘಟ್ಟಗಳು ಅಪಾರ ಜೀವವೈವಿಧ್ಯವನ್ನು ಹೊಂದಿವೆ.

ಜೀವವೈವಿಧ್ಯದ ನಾಶ, ಅರಣ್ಯ ನಾಶ, ಪರಿಸರಕ್ಕೆ ಆಗಬಹುದಾದ ಹಾನಿ ಇತ್ಯಾದಿಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಜಿಲ್ಲೆಯ ಜನರ ಮುಂದೆ ಇಟ್ಟು ಅವರ ಅಭಿಪ್ರಾಯ ಸಂಗ್ರಹಿಸಿ ನಂತರ ಯಾವುದೇ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು. ಅದನ್ನು ಬಿಟ್ಟು, ಜಿಲ್ಲೆಯ ಜನರ ಮೇಲೆ ಹೀಗೆ ವಿವಿಧ ಜನವಿರೋಧಿ ಯೋಜನೆಗಳನ್ನು ಹೇರುವುದು ಪ್ರಜಾಪ್ರಭುತ್ವದ ರಾಷ್ಟ್ರಕ್ಕೆ ಸಮ್ಮತವಲ್ಲ.