ಅಂಕಣ

ಇರಾನ್​- ಇಸ್ರೇಲ್​ ಯುದ್ಧ: ಅಲ್ಲಿ ಸಂಘರ್ಷ ಇಲ್ಲಿ ಪರಿಣಾಮ

ಬಾಬುಪ್ರಸಾದ್​ ಮೋಡಿಸ್​

ಇಸ್ರೇಲ್ ಮತ್ತು ಇರಾನ್ ನಡುವೆ ಮುಂದುವರಿದಿರುವ ಸಂಘರ್ಷ ಜಾಗತಿಕ ಕಚ್ಚಾ ತೈಲ ದರ ಏರಿಕೆಗೆ ಕಾರಣವಾಗಿದೆ. ಭಾರತಕ್ಕೆ ಅಗತ್ಯವಿರುವ ತೈಲದ ಪೈಕಿ ಶೇ. 85ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಸ್ಥಿತಿಯಿಂದಾಗಿ ಸಾಗಾಣಿಕೆ ಸರಪಳಿಯಲ್ಲಿ ಸಮಸ್ಯೆ ತಲೆದೋರಿದ್ದು, ಇದು ಭಾರತದಲ್ಲಿನ ಮನೆಮನೆಯ ಆರ್ಥಿಕತೆಯ ಮೇಲೂ ಪರೋಕ್ಷವಾಗಿ ಒತ್ತಡವನ್ನು ಸೃಷ್ಟಿಸುತ್ತದೆ. ಎಲ್​ಪಿಜಿ, ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆಯಂಥ ಇಂಧನಗಳ ಬೆಲೆ ಮತ್ತು ನಿತ್ಯೋಪಯೋಗಿ ದಿನಸಿ ವಸ್ತುಗಳ ಬೆಲೆಗಳು ಮುಂಬರುವ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಇಂಧನ ಬೆಲೆಗೆ ಹೇಗೆ ಎಫೆಕ್ಟ್?: ಇರಾನ್​ನ ಮೇಲಿನ ಇಸ್ರೇಲ್ ದಾಳಿಗಳು ವಿಶೇಷವಾಗಿ ತೆಹ್ರಾನ್​ನ ತೈಲ ಸಂಸ್ಕರಣಾಗಾರಗಳು, ತೈಲ ಡಿಪೋಗಳು ಮತ್ತು ಅನಿಲ ಕ್ಷೇತ್ರಗಳನ್ನೇ ಕೇಂದ್ರೀಕರಿಸಿವೆ. ಇದರಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರಿಕೆಯಾಗುತ್ತಿವೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶುಕ್ರವಾರದಿಂದ ಇಲ್ಲಿಯವರೆಗೆ ಶೇ. 13ರಷ್ಟು ಏರಿಕೆಯಾಗಿ ಬ್ಯಾರೆಲ್​ಗೆ 78 ಡಾಲರ್​ಗೆ ತಲುಪಿದೆ, ಇದು ಕಳೆದ ಐದು ತಿಂಗಳಲ್ಲಿನ ಗರಿಷ್ಠ ಮಟ್ಟ.

ಅಡುಗೆ ಅನಿಲದ ಲಭ್ಯತೆ: ದೂರದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಭಾರತದ ಮನೆಮನೆಗಳಲ್ಲಿ ಬಳಸುವ ಅಡುಗೆ ಅನಿಲ (ಎಲ್​ಪಿಜಿ) ಬೆಲೆ ಮೇಲೂ ಪರಿಣಾಮ ಗ್ಯಾರಂಟಿ. ಇರಾನ್​ನ ಸೌತ್ ಪಾರ್ಸ್ ಗ್ಯಾಸ್ ಕ್ಷೇತ್ರದ ಮೇಲಿನ ಇಸ್ರೇಲ್ ದಾಳಿಯಿಂದಾಗಿ ಜಾಗತಿಕ ದ್ರವೀಕೃತ ನೈಸರ್ಗಿಕ ಅನಿಲ (ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್- ಎಲ್​ಎನ್​ಜಿ) ಪೂರೈಕೆಯ ಶೇ. 20ರಷ್ಟನ್ನು ಒಳಗೊಂಡಿರುವ ಈ ಪ್ರದೇಶದ ಗ್ಯಾಸ್ ಉತ್ಪಾದನೆ ಸಂಕಷ್ಟಕ್ಕೆ ಸಿಲುಕಿದೆ. ಒಂದು ವೇಳೆ ಹಾಮುಜ್ ್ಡಲಸಂಧಿಯಲ್ಲಿ ತೈಲ ಸಾಗಾಣಿಕೆ ಹಡಗುಗಳಿಗೆ ಅಡಚಣೆಯಾದರೆ, ಎಲ್​ಪಿಜಿ ಬೆಲೆಗಳು ಗಗನಕ್ಕೇರುವುದು ನಿಶ್ಚಿತ.

ಸೀಮೆ ಎಣ್ಣೆಗೂ ಸಮಸ್ಯೆ: ನಗರ ಪ್ರದೇಶದ ಕೆಲವು ಕೈಗಾರಿಕೆಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳ ಕೆಲವು ಮನೆಗಳಲ್ಲಿ ಈಗಲೂ ಬಳಕೆಯಾಗುತ್ತಿರುವ ಸೀಮೆಎಣ್ಣೆ ಕೂಡ ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ಬೆಲೆ ಏರಿಕೆಯ ಒತ್ತಡಕ್ಕೆ ಸಿಲುಕಬಹುದು. ಇದು ಸಣ್ಣ ಕೈಗಾರಿಕೆಗಳ ಮೇಲೆ, ಕೃಷಿಕರ ಮೇಲೆ ಮತ್ತು ಕಡಿಮೆ ಆದಾಯದ ಕುಟುಂಬಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆಯನ್ನು ಉಂಟುಮಾಡುತ್ತದೆ.

ಎಷ್ಟಾಗುತ್ತೆ ಪೆಟ್ರೋಲ್, ಡೀಸೆಲ್?

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಜಾಗತಿಕ ಕಚ್ಚಾ ತೈಲ ಬೆಲೆಗಳಿಗೆ ನೇರ ಸಂಬಂಧ ಹೊಂದಿವೆ. ತೈಲ ಮಾರ್ಕೆಟಿಂಗ್ ಕಂಪನಿಗಳಾದ ಐಒಸಿ, ಬಿಪಿಸಿಎಲ್ ಮತ್ತು ಎಚ್​ಪಿಸಿಎಲ್ ಈಗಾಗಲೇ ಒತ್ತಡ ಎದುರಿಸುತ್ತಿವೆ. ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆಯಲ್ಲಿ 10 ಡಾಲರ್ ಏರಿಕೆಯಾದರೆ, ಪಂಪ್​ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸುಮಾರು 3ರಿಂದ 5 ರೂ. ಏರಿಕೆಯಾಗಬಹುದು ಎನ್ನುತ್ತಾರೆ ತಜ್ಞರು. ಉದಾಹರಣೆಗೆ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರಸ್ತುತ ಲೀಟರ್​ಗೆ 94 ರೂ. ಇದ್ದು, ಇದು 123 ರೂ.ಗೆ ಏರಬಹುದು ಎಂಬುದು ಜೆಪಿ ಮಾರ್ಗನ್ ಸಂಸ್ಥೆಯ ವಿಶ್ಲೇಷಕರ ಎಚ್ಚರಿಕೆ.

ದಿನಸಿ ಮೇಲೆ ಹೇಗೆ ಪರಿಣಾಮ?

ಇಂಧನ ಬೆಲೆಗಳ ಏರಿಕೆ ಸಹಜವಾಗಿಯೇ ಸರಕು ಸಾಗಣೆಯ ವೆಚ್ಚವನ್ನು ಹೆಚ್ಚಿಸುತ್ತದೆ. ಇದು ಆಹಾರ, ತರಕಾರಿಗಳು ಮತ್ತು ಇತರ ಅಗತ್ಯ ವಸ್ತುಗಳ ಬೆಲೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಸಾರಿಗೆ ಮತ್ತು ಸರಕುಸಾಗಣೆ

ಡೀಸೆಲ್ ಬೆಲೆ ಏರಿಕೆಯಿಂದ ಬಸ್ ದರ, ಟ್ಯಾಕ್ಸಿ ದರ ಮತ್ತು ಸರಕು ಸಾಗಣೆ ವೆಚ್ಚ ಹೆಚ್ಚಾಗಬಹುದು. ಇದರಿಂದ ದಿನಸಿ ವಸ್ತುಗಳ ಸಾಗಣೆ ವೆಚ್ಚವೂ ಏರುತ್ತದೆ. ಪರಿಣಾಮವಾಗಿ, ಎಲ್ಲ ರೀತಿಯ ಗ್ರಾಹಕ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತದೆ.

ಜಾಗತಿಕ ಪೂರೈಕೆ ಸರಪಳಿ

ಸಂಘರ್ಷ ಮುಂದಿನ ದಿನಗಳಲ್ಲಿ ಎಷ್ಟು ತೀವ್ರವಾಗಿರುತ್ತದೆ ಎಂಬುದರ ಮೇಲೆ ಇಂಧನ ಬೆಲೆಗಳ ಮೇಲಿನ ಪರಿಣಾಮ ನಿರ್ಧಾರ ವಾಗುತ್ತದೆ. ಹಾಮುಜ್ ಜಲಸಂಧಿ ಜಾಗತಿಕ ತೈಲ ಪೂರೈಕೆಯ ಶೇ. 20ರಷ್ಟು ಮತ್ತು ಎಲ್​ಎನ್​ಜಿಯ ಶೇ. 20ರಷ್ಟನ್ನು ಸಾಗಿಸುವ ಪ್ರಮುಖ ಮಾರ್ಗ. ಇರಾನ್-ಇಸ್ರೇಲ್ ಸಂಘರ್ಷದಿಂದ ಈ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡಚಣೆ ಆಗಬಹುದು ಎನ್ನುತ್ತಾರೆ ತಜ್ಞರು. ಒಂದು ವೇಳೆ, ಇರಾನ್ ಈ ಮಾರ್ಗವನ್ನು ಮುಚ್ಚಿ ಬಿಟ್ಟರೆ, ತೈಲ ಬೆಲೆ ಬ್ಯಾರೆಲ್​ಗೆ 100 ಡಾಲರ್​ಗಿಂತ ಹೆಚ್ಚಾಗಬಹುದು. ಆಗ ಅದು ಭಾರತಕ್ಕೆ ಆರ್ಥಿಕ ಆಘಾತ ಉಂಟುಮಾಡುತ್ತದೆ.

ರಾಸಾಯನಿಕ ಗೊಬ್ಬರಗಳ ಉತ್ಪಾದನೆ ಕೂಡ ತೈಲ ಉತ್ಪನ್ನಗಳ ಮೇಲೆ ಅವಲಂಬಿತ. ಈ ವೆಚ್ಚಗಳ ಏರಿಕೆ ಕೃಷಿಯ ಒಟ್ಟಾರೆ ವೆಚ್ಚ ಹೆಚ್ಚಿಸುತ್ತದೆ. ಇದರಿಂದ ಆಹಾರ ಬೆಲೆಗಳ ಮೇಲೆ ಒತ್ತಡ ಜಾಸ್ತಿಯಾಗುತ್ತದೆ.

ಕೃಷಿಗೂ ಕಂಟಕ

ಡೀಸೆಲ್​ಚಾಲಿತ ಟ್ರ್ಯಾಕ್ಟರ್​ಗಳು, ಇಂಧನ ಚಾಲಿತ ನೀರಾವರಿ ಪಂಪ್​ಗಳು ಮತ್ತು ಸಾರಿಗೆ ವಾಹನಗಳ ಮೇಲೆ ಅವಲಂಬಿತವಾಗಿರುವ ಕೃಷಿ ಕ್ಷೇತ್ರ ಈ ಇಂಧನ ಬೆಲೆ ಏರಿಕೆಯಿಂದ ಹೆಚ್ಚಿನ ಉತ್ಪಾದನಾ ವೆಚ್ಚದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದರಿಂದ ಆಹಾರ ಧಾನ್ಯ, ತರಕಾರಿ, ಹಣ್ಣುಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಜನರ ದೈನಂದಿನ ಖರ್ಚೂ ಹೆಚ್ಚುತ್ತದೆ.

ಉತ್ಪಾದನಾ ಕ್ಷೇತ್ರ

ತೈಲ ಆಧಾರಿತ ಉತ್ಪನ್ನಗಳಾದ ಟೈರ್, ಬಣ್ಣ, ರಾಸಾಯನಿಕ ಮತ್ತು ಪ್ಲಾಸ್ಟಿಕ್ ಉತ್ಪಾದಿಸುವ ಕೈಗಾರಿಕೆಗಳು ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಒತ್ತಡ ಎದುರಿಸಬೇಕಾಗುತ್ತದೆ. ಈ ವೆಚ್ಚ ಅಂತಿಮವಾಗಿ ಗ್ರಾಹಕರಿಗೇ ತಲುಪುತ್ತದೆ. ಸಾಬೂನು, ಡಿಟರ್ಜೆಂಟ್, ಪ್ಯಾಕೇಜಿಂಗ್ ವಸ್ತುಗಳ ಬೆಲೆಯೂ ಏರಬಹುದು.

ಪರ್ಯಾಯವೇನು?

ಒಪೆಕ್ (ಆರ್ಗನೈಸೇಷನ್ ಆಫ್ ಪೆಟ್ರೋಲಿಯಂ ಎಕ್ಸ್ ಪೋರ್ಟಿಂಗ್ ಕಂಟ್ರೀಸ್) ದೇಶಗಳು ಉತ್ಪಾದನೆ ಹೆಚ್ಚಿಸುವ ಮೂಲಕ ಇರಾನ್​ನ ತೈಲ ರಫ್ತಿನ ಕೊರತೆ ಸರಿದೂಗಿಸಬಹುದು ಎನ್ನುತ್ತದೆ ಎಮ್​​ಕೆ ಗ್ಲೋಬಲ್ ಸಂಸ್ಥೆ ವರದಿ. ಒಪೆಕ್​ನಲ್ಲಿ ಇರಾಕ್, ಕುವೈತ್, ಸೌದಿ, ಯುಎಇ ಸೇರಿ 12 ರಾಷ್ಟ್ರಗಳಿವೆ.

ಸರ್ಕಾರ ಏನು ಮಾಡಬಹುದು?

ಗ್ರಾಹಕರಿಗೆ ರಿಯಾಯಿತಿ ನೀಡಲು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಬಹುದು. ಆದರೆ ಇದು ಸರ್ಕಾರದ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಈ ಮಧ್ಯೆ, ಭಾರತವು ರಷ್ಯಾದಿಂದ ತೈಲ ಆಮದು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. ಇದು ಮಧ್ಯಪ್ರಾಚ್ಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಅಮೆರಿಕ ಮತ್ತು ಇತರ ದೇಶಗಳಂತೆ ಭಾರತವೂ ತನ್ನದೇ ಆದ ತೈಲ ಮೀಸಲನ್ನು ಹೊಂದಿದೆ. ಅದನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಬೆಲೆ ಏರಿಕೆಯನ್ನು ನಿಯಂತ್ರಿಸಬಹುದು.