ಅಂಕಣ

ಸಾಫ್ಟ್​ವೇರ್ ಯುಗದ ಸೋಮಾರಿಗಳಿಗೆ ಐಪಿಎಲ್ ಪಾಠ! ಹೇಗೆ ಅಂತೀರಾ? ಈ ಸುದ್ದಿ ಓದಿ

(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ವಿಧಿ ಅವಕಾಶದ ಬಾಗಿಲು ತೆರೆಯಬಹುದು. ಆದರೆ, ಬಾಗಿಲಿನವರೆಗೂ ನಾವೇ ನಡೆದುಕೊಂಡು ಹೋಗಬೇಕು. ಕಾಲ ಯಾರಿಗೂ ಕಾಯುವುದಿಲ್ಲ. ನಿಧಾನಿಸು ನಿಧಾನಿಸು ಎಂದು ನಾವೆಷ್ಟೇ ಅಂಗಲಾಚಿದರೂ, ಕಾಲ ಯಾರ ಸಲುವಾಗಿಯೂ ನಿಲ್ಲುವುದಿಲ್ಲ. ಬದುಕೆನ್ನುವುದು ಹರಿಯುವ ನದಿಯಂತೆ, ಸಾಗರದ ಅಲೆಯಂತೆ. ಹರಿದ ನೀರು ಮರಳಿ ಬರುವುದಿಲ್ಲ, ಹೊಸ ನೀರಿನ ಹರಿವು ನಿಲ್ಲುವುದಿಲ್ಲ. ಉಕ್ಕಿ ಬರುವ ಅಲೆ ಮರಳುವಾಗ ಮೂಲಸ್ವರೂಪ ಉಳಿಸಿಕೊಳ್ಳುವುದಿಲ್ಲ. ಹೊಸ ಅಲೆ ಬರುವುದು ನಿಲ್ಲುವುದಿಲ್ಲ. ಬದುಕೆನ್ನುವುದು ವ್ಯವಧಾನವಿಲ್ಲದ ಪಯಣ. ಇಂದಿನ ಪ್ರಶ್ನೆಗೆ ಇಂದೇ ಉತ್ತರ ಕಂಡುಕೊಳ್ಳಬೇಕು. ಇಂದಿನ ತಪ್ಪುಗಳಿಗೆ ಇಂದೇ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ನಿನ್ನೆಗೆ ಮರಳಿದವರಿಲ್ಲ. ನಾಳೆಯನ್ನು ಕಂಡವರಿಲ್ಲ. ಆಗಿದ್ದು ಆಗಿಹೋಯಿತು, ನಾಳೆಯಿಂದ ಆ ತಪು್ಪ ಮಾಡುವುದಿಲ್ಲ ಎನ್ನುವವರ ಪಾಲಿಗೆ ಆ ನಾಳೆ ಎಂದಿಗೂ ಬರುವುದಿಲ್ಲ. ಕ್ಯಾಲೆಂಡರ್​ನಲ್ಲಿ ದಿನ, ವಾರ, ತಿಂಗಳು, ವರ್ಷಗಳು ಸರಿದುಹೋದಂತೆ ನಾವು ಬಾಲ್ಯದಿಂದ ತಾರುಣ್ಯಕ್ಕೆ, ಮಧ್ಯವಯಸ್ಸಿಗೆ, ಮುಪ್ಪಿಗೆ ಯಾವಾಗ ಕಾಲಿಡುತ್ತೇವೆನ್ನುವುದು ಗೊತ್ತೇ ಆಗುವುದಿಲ್ಲ.

ಜೀವನದಲ್ಲಿ ತಪ್ಪು ಹೆಜ್ಜೆಗಳನ್ನು ಇಡುತ್ತಲೇ ಇರುತ್ತೇವೆ. ಆದರೆ, ಸರಿಪಡಿಸಿಕೊಳ್ಳುವ ವಿಚಾರದಲ್ಲಿ ನಿಧಾನಿಸುತ್ತೇವೆ. ಕನಸುಗಳನ್ನು ಕಾಣುತ್ತೇವೆ. ಆದರೆ, ಅವಕಾಶಗಳನ್ನು ಗುರುತಿಸುವಲ್ಲಿ ಎಡವುತ್ತೇವೆ. ಭ್ರಮೆಯಲ್ಲಿ ಬದುಕುತ್ತೇವೆ. ವಾಸ್ತವ ಒಪ್ಪಿಕೊಳ್ಳಲು ವಿಫಲರಾಗುತ್ತೇವೆ. ನಮ್ಮ ಗುರಿ ಏರುದಿಕ್ಕಿನಲ್ಲಿದ್ದರೂ, ಇಳಿಜಾರಿನ ಹಾದಿಯಲ್ಲಿ ಜಾರುತ್ತಿರುತ್ತೇವೆ. ಆಸೆ ಎನ್ನುವುದು ಮಾಯೆ, ಮೋಹ ಎನ್ನುವುದು ಮಾಯೆ. ಸುಖ ಎನ್ನುವುದು ಮಾಯೆ. ನಮ್ಮ ಗಮ್ಯ ದೂರದಲ್ಲಿರುವಾಗಲೂ ಸಣ್ಣಪುಟ್ಟ ಆಮಿಷಗಳೇ ಶಾಶ್ವತ ಎಂಬ ಭ್ರಮೆಯಲ್ಲಿ ಮೈಮರೆಯುತ್ತೇವೆ. ಅನೇಕ ಬಾರಿ ನಮ್ಮ ಗ್ರಹಿಕೆಗಳೇ ತಪ್ಪಾಗಿರುತ್ತವೆ. ನಾವು ಸರಿ ಅಂದುಕೊಂಡಿರುವುದು ಜಗತ್ತಿನ ದೃಷ್ಟಿಯಲ್ಲಿ ತಪ್ಪಾಗಿರುತ್ತದೆ. ಆದರೆ, ನಾವು ನಮ್ಮ ಮೂಗಿನ ನೇರಕ್ಕೆ ಕಂಡಿದ್ದಷ್ಟೇ ಜಗತ್ತು ಎಂಬ ಚಿಪ್ಪಿನೊಳಗೆ ಸಿಲುಕಿಕೊಂಡಿರುತ್ತೇವೆ.

ಇಂಥ ಸಂದರ್ಭದಲ್ಲಿ ನಾವು ಬೀಳುವುದು, ನಾವು ಜಾರುವುದು, ನಮ್ಮ ವೈಫಲ್ಯ ಸುತ್ತಲಿನ ಜಗತ್ತಿಗೆ ಕಾಣುತ್ತಿದ್ದರೂ ನಾವು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಬುದ್ಧಿ ಗ್ರಹಿಸಿದ್ದನ್ನು ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಜೀವನದಲ್ಲಿ ಬೇಕು ಎಂಬ ವಸ್ತುವಿಗಾಗಿ ಬೇಕೇಬೇಕು ಎಂದು ಹಂಬಲಿಸುವ ನಾವು, ಬೇಡ ಎಂಬ ವಸ್ತು ಬೇಡವೇ ಬೇಡ ಎಂಬ ಹಟವನ್ನು, ದೃಢಚಿತ್ತವನ್ನು ಪ್ರದರ್ಶಿಸುವುದಿಲ್ಲ. ಅದೇ ಕಾರಣಕ್ಕೆ ಎಡವಿದಾಗ, ಬಿದ್ದಾಗ ತಿದ್ದಿಕೊಳ್ಳುವ ಬದಲು, ಪರಾಮಶಿಸುವ ಬದಲು ಸಮಜಾಯಿಷಿ, ಸಮರ್ಥನೆಗಳ ಬಾವಿಯೊಳಗೆ ಇಳಿದುಬಿಡುತ್ತೇವೆ, ಉಳಿದುಬಿಡುತ್ತೇವೆ. ಇದೇ ಮನಸ್ಥಿತಿ ಅಧಃಪತನಕ್ಕೆ ಕಾರಣವಾಗುತ್ತದೆ. ಚಕ್ರವ್ಯೂಹದೊಳಕ್ಕೆ ಸಿಲುಕಿದ ಅಭಿಮನ್ಯು ಆಚೆ ಬರುವುದಿಲ್ಲ. ತಪ್ಪು, ಭ್ರಮೆ, ಅಹಂಕಾರಗಳ ಚಕ್ರವ್ಯೂಹದೊಳಗೆ ಸಿಲುಕಿದವರೂ ಆಚೆ ಬಂದ ಉದಾಹರಣೆ ಇಲ್ಲ.

ಮೊನ್ನೆ ಮಧ್ಯಪ್ರಾಚ್ಯದ ಜೆದ್ದಾ ನಗರದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ರಿಷಬ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ ಅಯ್ಯರ್, ಅರ್ಷದೀಪ್ ಸಿಂಗ್, ಯಜುವೇಂದ್ರ ಚಾಹಲ್... ಹೀಗೆ ಹತ್ತು ಹಲವು ಭಾರತೀಯ ಆಟಗಾರರು ಹರಾಜಿನಲ್ಲಿ ಕೋಟಿಯೆನ್ನುವುದು ಮಕ್ಕಳಾಟ ಎನ್ನುವಷ್ಟು ಮೌಲ್ಯ ಪಡೆದುಕೊಂಡರು. ಆದರೆ, ಈ ಹರಾಜೆನ್ನುವುದು ಕೆಲವರ ಯಶಸ್ಸಿನ ಕಥೆಯಷ್ಟೇ, ಹಲವರ ನೋವಿನ ಚರಿತ್ರೆಗೂ ಸಾಕ್ಷಿಯಾಯಿತು. ಗೆದ್ದವರ ಸುತ್ತ ಎಲ್ಲರೂ ಗುಂಪುಗೂಡುತ್ತಾರೆ, ಸೋತವರನ್ನು ಮರೆತುಬಿಡುತ್ತಾರೆ. ಜನ ಮರೆಯುವುದು ಸಹಜ. ಆದರೆ, ಮೈಮರೆವಿನಿಂದ ತಮ್ಮನ್ನು ತಾವು ಮರೆತವರು ತಮ್ಮ ಸ್ಥಿತಿಗೆ ತಾವೇ ಕಾರಣರಾಗಿರುತ್ತಾರೆ.

ಮುಂದಿನ ವರ್ಷ ಐಪಿಎಲ್ ಆವೃತ್ತಿ ಆರಂಭವಾದಾಗ ಡೇವಿಡ್ ವಾರ್ನರ್ ಯಾವ ತಂಡದಲ್ಲೂ ಇರುವುದಿಲ್ಲ. ಕೇನ್ ವಿಲಿಯಮ್ಸನ್, ಸ್ಟೀವನ್ ಸ್ಮಿತ್, ಜಾನಿ ಬೇರ್​ಸ್ಟೋ, ಪೃಥ್ವಿ ಶಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್ ಇವರ್ಯಾರೂ ಕಾಣಿಸಿಕೊಳ್ಳುವುದಿಲ್ಲ. ನಮ್ಮ ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್ ಅಗರ್​ವಾಲ್ ಕೂಡ ಆಡುವುದಿಲ್ಲ. ಇವರಷ್ಟೇ ಅಲ್ಲ, ಈ ರೀತಿ ಯಾವ ಫ್ರಾಂಚೈಸಿಗಳನ್ನೂ ಆಕರ್ಷಿಸದೆ, ಬಿಡ್ಡಿಂಗ್​ನಲ್ಲಿ ಸಣ್ಣ ಕುತೂಹಲವನ್ನೂ ಕೆರಳಿಸದೆ, ತಿರಸ್ಕೃತರ ಹಣೆಪಟ್ಟಿ ಹೊತ್ತ ಆಟಗಾರರದ್ದೇ ಹತ್ತು ತಂಡ ಕಟ್ಟಿ ಪರ್ಯಾಯ ಐಪಿಎಲ್ ಆಡಿಸುವಷ್ಟು, ಅನ್​ಸೋಲ್ಡ್ ಆಟಗಾರರ ಸಂಖ್ಯೆ ದೊಡ್ಡದಿದೆ. ಹೀಗೇಕಾಯಿತು? ಇವರೆಲ್ಲ ತಪ್ಪಿದ್ದೆಲ್ಲಿ? ಎಡವಿದ್ದೆಲ್ಲಿ?

ಐಪಿಎಲ್ ಎನ್ನುವುದು ಬರೀ ಆಟವಲ್ಲ, ಬಿಲಿಯನ್ ಡಾಲರ್ ಉದ್ಯಮ. ಇಲ್ಲಿನ ಹತ್ತು ತಂಡಗಳಿಗೆ ಹಣ ಹೂಡಿರುವವರು ಬಂಡವಾಳ ದುಪ್ಪಟ್ಟಾಗಿಸಿಕೊಳ್ಳಲು ಉತ್ಸುಕರಾಗಿರುವ ಉದ್ಯಮಪತಿಗಳು. ಇಲ್ಲಿ ಬರೀ ಮನರಂಜನೆಗಾಗಿ, ಸೇವೆಗಾಗಿ, ದತ್ತಿ ಕಾರ್ಯಕ್ಕಾಗಿ ಯಾರೂ ಬಂದಿಲ್ಲ. ಇಂಥ ತಂಡಗಳಲ್ಲಿ ಓಡುವ ಕುದುರೆಗಳಿಗೆ ಬೆಲೆಯೇ ಹೊರತು, ಮಲಗಿರುವ, ತೂಕಡಿಸುವ, ಗಾಯಗೊಂಡ, ಕುಂಟುವ ಕುದುರೆಗಳಿಗಲ್ಲ. ಕ್ರಿಕೆಟ್​ನಲ್ಲಿ ವರ್ತಮಾನಕ್ಕಷ್ಟೇ ಬೆಲೆ. ನಿನ್ನೆ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದರೂ, ಇಂದು ವಿಫಲನಾದರೆ ನಾಳೆ ತಂಡದಲ್ಲಿರುವುದಿಲ್ಲ. ಡೇವಿಡ್ ವಾರ್ನರ್ ನಾಯಕರಾಗಿ ಒಮ್ಮೆ ಐಪಿಎಲ್ ಗೆದ್ದವರು. ಕೇನ್ ವಿಲಿಯಮ್ಸನ್ ಸನ್​ರೈಸರ್ಸ್ ಹೈದರಾಬಾದ್ ತಂಡದ ಬೆನ್ನೆಲುಬಿನಂತೆ ಇದ್ದವರು. ಅದೆಷ್ಟು ಪಂದ್ಯಗಳನ್ನು ಅವರು ಆ ತಂಡಕ್ಕೆ ಗೆದ್ದುಕೊಟ್ಟಿಲ್ಲ? ಆದರೆ, ವಾರ್ನರ್ ವಯಸ್ಸು ಮತ್ತು ಫಾಮ್ರ್, ವಿಲಿಯಮ್ಸನ್​ರ ವಯಸ್ಸು ಮತ್ತು ಗಾಯದ ಸಮಸ್ಯೆ ಅವರಿಬ್ಬರನ್ನು ಯಾರಿಗೂ ಬೇಡದ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಒಂದು ಕಾಲದಲ್ಲಿ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಇಲ್ಲದ ಆಸ್ಟ್ರೇಲಿಯಾ ತಂಡ ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಆದರೆ, ಅವರಿಬ್ಬರು ಈಗ ಐಪಿಎಲ್​ಗೂ ಬೇಡ. ಅಂದರೆ, ಕಾಲ ಯಾರಿಗೂ ಕಾಯುವುದಿಲ್ಲ. ನಾವು ನಿಧಾನಿಸಿದರೆ, ಜಗತ್ತು ತಿರುಗಿ ನೋಡದೆ ಮುಂದೆ ಓಡುತ್ತಿರುತ್ತದೆ.

ಐಪಿಎಲ್ ಎನ್ನುವುದು ಅದೆಷ್ಟೋ ಭಾರತೀಯ ಆಟಗಾರರ ಪಾಲಿಗೆ ಚಿಮ್ಮುಹಲಗೆ. ಕೇವಲ ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಅನೇಕರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರತಿಭಾವಂತರಿಗೆ ಯೋಗ ಅವಕಾಶಗಳನ್ನು ಕಲ್ಪಿಸುತ್ತದೆ. ಆದರೆ, ಅದನ್ನು ಉಳಿಸಿಕೊಳ್ಳುವುದು ಅವರ ಯೋಗ್ಯತೆಯನ್ನು ಅವಲಂಬಿಸಿರುತ್ತದೆ. ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್​ಗಿಂತ ಪ್ರತಿಭಾವಂತ ಎಂದು ಹೊಗಳಿಸಿಕೊಂಡಿದ್ದ ಪೃಥ್ವಿ ಶಾ ಎಂಬ ವಾಮನಪ್ರತಿಭೆ ತ್ರಿವಿಕ್ರಮನಾಗುವ ಬದಲು ಪಾತಾಳಕ್ಕೆ ಕುಸಿಯುವುದನ್ನು ಬೇರೆ ಯಾವ ರೀತಿ ವಿಶ್ಲೇಷಿಸಲು ಸಾಧ್ಯ? ಕೇವಲ ಐಪಿಎಲ್ ಪ್ರದರ್ಶನ ಬಲದಿಂದಲೇ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಕಾರ್ತಿಕ್ ತ್ಯಾಗಿ, ನವದೀಪ್ ಸೈನಿ, ಚೇತನ್ ಸಕಾರಿಯರಂಥ ಬೌಲರ್​ಗಳನ್ನು ಇಂದು ಯಾವ ತಂಡಗಳು ತಿರುಗಿಯೂ ನೋಡುತ್ತಿಲ್ಲ ಎಂದರೆ, ಇವರೆಲ್ಲ ಎಡವಿದ್ದೆಲ್ಲಿ? ಆಲ್ರೌಂಡರ್​ಗಳಿಗೆ ಟಿ20 ಕ್ರಿಕೆಟ್​ನಲ್ಲಿ ಎಲ್ಲಿಲ್ಲದ ಡಿಮಾಂಡ್.

ಭಾರತ ತಂಡದಲ್ಲಿ ಲಾರ್ಡ್ ಎಂದೇ ಅಡ್ಡಹೆಸರು ಸಂಪಾದಿಸಿದ್ದ ಶಾರ್ದೂಲ್ ಠಾಕೂರ್ ಎಂಬ ಆಲ್ರೌಂಡರ್ ಹೆಸರನ್ನು ಕೇಳಿಯೂ ಕೇಳದಂತೆ ಫ್ರಾಂಚೈಸಿಗಳು ಕಿವಿಮುಚ್ಚಿಕೊಳ್ಳುತ್ತಾರೆಂದರೆ, ಎಲ್ಲಿ ಎಡವಟ್ಟಾಯಿತು? ವಿರಾಟ್ ಕೊಹ್ಲಿ ಜತೆಜತೆಗೇ ಪ್ರವರ್ಧಮಾನಕ್ಕೆ ಬಂದ ಮನೀಷ್ ಪಾಂಡೆ ಸತತ 2ನೇ ವರ್ಷ 75 ಲಕ್ಷ ರೂ.ಗಳ ಸಣ್ಣ ಮೊತ್ತಕ್ಕೆ ಕೋಲ್ಕತ್ತ ನೈಟ್​ರೈಡರ್ಸ್ ಸೇರುತ್ತಾರೆಂದರೆ, ಮಯಾಂಕ್ ಅಗರ್​ವಾಲ್ ಎಲ್ಲೂ ಸ್ಥಾನ ಪಡೆಯಲು ವಿಫಲರಾಗುತ್ತಾರೆಂದರೆ ಅಭಿಮಾನಿಗಳಿಗಿಂತ ಹೆಚ್ಚಾಗಿ ಆಯಾ ಆಟಗಾರರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಟವೆನ್ನುವುದು ಬದುಕಿಗಿಂತ ಅನಿಶ್ಚಿತ. ವಿಧಿಗಿಂತ ಹೆಚ್ಚು ನಿರ್ದಯ, ಕ್ರೂರ. ಇಲ್ಲಿ ಯಾರಿಗೆ ಯಾರ ದಾಕ್ಷಿಣ್ಯವೂ ಇಲ್ಲ. ಅದರಲ್ಲೂ ಐಪಿಎಲ್​ನಲ್ಲಿ ಪ್ರತಿಯೊಬ್ಬರೂ ತಮ್ಮ ಮೌಲ್ಯವನ್ನು ತಾವೇ ಕಾಪಾಡಿಕೊಳ್ಳಬೇಕು, ಎತ್ತರಿಸಿಕೊಳ್ಳಬೇಕು. ವಿರಾಟ್ ಕೊಹ್ಲಿ ಪ್ರತೀ ವರ್ಷ ಐಪಿಎಲ್​ನಲ್ಲಿ ಯಂತ್ರದಂತೆ ರನ್ ಗಳಿಸದೇ ಹೋಗಿದ್ದಲ್ಲಿ ಆರ್​ಸಿಬಿಯ ಖಾಯಂ ಆಟಗಾರರಾಗಿ ಮುಂದುವರಿಯುತ್ತಿರಲಿಲ್ಲ.

ಆಟಗಾರರ ಪ್ರಭಾವ, ಪ್ರತಿಷ್ಠೆಗಿಂತ ಅವರ ಫಾಮ್ರ್ ಮತ್ತು ಫಿಟ್​ನೆಸ್​ಗಷ್ಟೇ ಅಲ್ಲಿ ಬೆಲೆ. ಅದ್ಭುತ ಟಿ20 ಆಟಗಾರರೆಂಬ ಹಣೆಪಟ್ಟಿ ಕಳಚಿಕೊಂಡು ಅನೇಕರು ಇಂದು ಕನಿಷ್ಠ ಬೇಡಿಕೆಯನ್ನೂ ಉಳಿಸಿಕೊಳ್ಳಲು ವಿಫಲರಾಗಿದ್ದರೆ, ಅದಕ್ಕೆ ಅವರೇ ಕಾರಣ. ಟೆಸ್ಟ್ ಕ್ರಿಕೆಟ್ ಕೂಡ ಟಿ20ಯಂತೆ ವೇಗ ಪಡೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಟಿ20 ವೇಗಕ್ಕೆ ಹೊಂದಿಕೊಳ್ಳದ ಆಟಗಾರರು ಮುಲಾಜಿಲ್ಲದೆ ಪಕ್ಕಕ್ಕೆ ಸರಿಯುತ್ತಾರೆ. ಏಕೆಂದರೆ, ಇವರು ತೆರವು ಮಾಡಿದ ಜಾಗಕ್ಕೆ ಹೊಸಬರು ಬಂದು ಕುಳಿತಿರುತ್ತಾರೆ. 13-14 ವರ್ಷದ ಬಿಹಾರದ ಬಾಲಕ ವೈಭವ್ ಹರಾಜಿನಲ್ಲಿ ಕೋಟಿ ಮೌಲ್ಯ ಪಡೆಯುತ್ತಾನೆಂದರೆ, ಕ್ಲಬ್ ಕ್ರಿಕೆಟ್​ನಲ್ಲಿ 6 ಬಾಲ್​ಗೆ 6 ಸಿಕ್ಸರ್ ಬಾರಿಸುವ ದೆಹಲಿಯ ಪ್ರಿಯಾಂಶ್ ಆರ್ಯ ಎಂಬ ಯುವಕ ಮೂರು ಮುಕ್ಕಾಲು ಕೋಟಿ ಮೌಲ್ಯ ಪಡೆಯುವ, ಹೆಸರೇ ಕೇಳದ ಅಫ್ಘಾನಿಸ್ತಾನದ ಅಲ್ಲಾ ಘಜನ್​ಫರ್ ಎಂಬ 18ರ ಹುಡುಗ 4.8 ಕೋಟಿ ರೂ. ಬೆಲೆಗೆ ಐಪಿಎಲ್​ಗೆ ದಾಪುಗಾಲಿಡುವ ಧಾವಂತದಲ್ಲಿ ಜನರೂ ಎಡವಿದವರನ್ನು ಮರೆತೇ ಬಿಡುತ್ತಾರೆ. ಒಂದೆರಡು ವರ್ಷ ಕೆಳಗೆ ಭಾರತದ ಅತ್ಯಂತ ವೇಗದ ಬೌಲರ್ ಎನಿಸಿಕೊಳ್ಳುವ ಹಾದಿಯಲ್ಲಿದ್ದ ಕಾಶ್ಮೀರದ ಉಮ್ರಾನ್ ಮಲಿಕ್ ಬಗ್ಗೆ ಈ ಬಾರಿ ಹರಾಜಿನಲ್ಲಿ ಯಾರಿಗೂ ಆಸಕ್ತಿ ಇರಲಿಲ್ಲ. ಅದೃಷ್ಟವಶಾತ್ ಕೊನೆಯ ಹಂತದಲ್ಲಿ ಮೂಲ ಬೆಲೆಗೆ ಕೋಲ್ಕತ ತಂಡಕ್ಕೆ ಸೇರಿಕೊಂಡರು. ಅಂದರೆ, ಬ್ಯಾಟರ್ ಇರಲಿ, ಬೌಲರ್ ಇರಲಿ ಖ್ಯಾತಿ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆಯುವವರೆಗೆ ಮಾತ್ರ. ಆಯ್ಕೆ ಆಗಬೇಕಾದರೆ, ವರ್ತಮಾನದ ಫಾರ್ಮರ್​​ಗಷ್ಟೇ ಬೆಲೆ.

ಇದು ಸಾಫ್ಟ್​ವೇರ್ ಯುಗ. ಇಲ್ಲಿ ಪ್ರತೀ ದಿನವೂ ಅಪ್​ಡೇಟ್ ಆಗುತ್ತಲೇ ಇರಬೇಕು. ಅಪ್​ಗ್ರೇಡ್ ಆಗುತ್ತಲೇ ಇರಬೇಕು. ಹೋದ ವರ್ಷ ಕಲಿತಿದ್ದನ್ನೇ ಈ ವರ್ಷ, ಮುಂದಿನ ವರ್ಷವೂ ಪುನರಾವರ್ತಿಸಿಕೊಂಡು ಇರುತ್ತೇನೆಂದರೆ, ನಮ್ಮ ಗುಂಡಿ ನಾವೇ ತೋಡಿಕೊಂಡಂತೆ. ಜನರ ಅಗತ್ಯಕ್ಕೆ ತಕ್ಕಂತೆ ಅಪ್​ಡೇಟ್ ಆಗದೇ ಹೋದರೆ, ವಾಟ್ಸ್​ಆಪ್​ನಂಥ ಆಪ್​ಗಳೂ ಪ್ರಸ್ತುತತೆ ಕಳೆದುಕೊಳ್ಳುತ್ತವೆ. ಸಾಫ್ಟ್ ವೇರ್ ಅಪ್​ಡೇಟ್, ಅಪ್​ಗ್ರೇಡ್ ಮಾಡದೇ ಹೋದರೆ, ನಮ್ಮ ಮೊಬೈಲ್, ಲ್ಯಾಪ್​ಟಾಪ್​ಗಳೂ ಉಪಯೋಗಕ್ಕಿಲ್ಲದಂತಾಗುತ್ತವೆ. ಹೀಗಿರುವಾಗ ಕ್ರಿಕೆಟಿಗರು ಹೊಸ ಕೌಶಲ ಕಲಿಯದೇ ಇದ್ದರೆ, ಬತ್ತಳಿಕೆಗೆ ಹೊಸ ಅಸ್ತ್ರ ಸೇರಿಸಿಕೊಳ್ಳದೇ ಇದ್ದರೆ, ಪ್ರಯೋಗಶೀಲರಾಗದೇ ಇದ್ದರೆ, ಕ್ರಿಯೆಟಿವಿಟಿ ಇಲ್ಲದೇ ಹೋದರೆ ಅಪ್ರಸ್ತುತರಾಗಿ ಬಿಡುತ್ತಾರೆ. ಓರ್ವ ಬ್ಯಾಟರ್ ಇರಲಿ, ಬೌಲರ್ ಇರಲಿ, ತನ್ನ ದೌರ್ಬಲ್ಯವನ್ನು ಎದುರಾಳಿಗಳಿಗಿಂತ ಮೊದಲೇ ತಾನೇ ಗುರುತಿಸಿಕೊಳ್ಳಬೇಕು. ಸುಧಾರಿಸಿಕೊಳ್ಳಬೇಕು. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ ಎನ್ನುವುದು ಜೀವನದ ಪಾಠ.

ಆದರೆ, ಪದೇಪದೆ ಒಂದೇ ರೀತಿ ಔಟಾಗುತ್ತಿದ್ದರೆ, ತನ್ನಿಂದ ತಪ್ಪಾಗುತ್ತಿದೆ ಎಂದು ತಿಳಿದ ಮೇಲೂ ತಿದ್ದಿಕೊಳ್ಳುವ ಗಂಭೀರ ಪ್ರಯತ್ನ ಮಾಡದೇ ಹೋದರೆ ಪೃಥ್ವಿ ಷಾರಂತೆ ಎಲ್ಲೂ ಸಲ್ಲದವರಾಗುತ್ತಾರೆ. ಶುಭಮಾನ್ ಗಿಲ್, ಯಶಸ್ವಿ ಜೈಸ್ವಾಲ್​ಗಿಂತ ಮೊದಲೇ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಪೃಥ್ವಿ, ಸದ್ಯ ಮುಂಬೈ ರಣಜಿ ತಂಡದಲ್ಲೂ ಇಲ್ಲ. ಐಪಿಎಲ್​ನಲ್ಲೂ ತಿರಸ್ಕೃತರಾದರು. ಭುವನೇಶ್ವರ ಕುಮಾರ್​ರಂಥ ನಿವೃತ್ತಿ ಸಮೀಪದಲ್ಲಿರುವ ಸ್ವಿಂಗ್ ಬೌಲರ್ ಆರ್​ಸಿಬಿ ತಂಡದಿಂದ 10 ಕೋಟಿ ರೂ. ಮೌಲ್ಯ ಪಡೆದುಕೊಳ್ಳುತ್ತಾರೆಂದರೆ, ಕಾರ್ತಿಕ್ ತ್ಯಾಗಿ, ನವದೀಪ್ ಸೈನಿ, ಚೇತನ್ ಸಕಾರಿಯ, ಶಿವಂ ಮಾವಿ ಮೊದಲಾದ ತರುಣ ಬೌಲರ್​ಗಳು ಅಪ್​ಡೇಟ್ ಆಗದಿರುವುದೇ ವೈಫಲ್ಯಕ್ಕೆ ಕಾರಣ. ಸಾಧಕನ ಪಾಲಿಗೆ ಜಗತ್ತು ವಿಶಾಲವಾಗಿರುವುದೇ ಹೊರತು ಸೋಮಾರಿಗಳಿಗಲ್ಲ. ಅಭ್ಯಾಸಕ್ಕೆ ಆಸಕ್ತಿ ತೋರದೆ, ಪರಿಶ್ರಮ ಪಡದೆ, ವಿಲಾಸದ ಆಸಕ್ತಿಗಳನ್ನು ತ್ಯಜಿಸದೆ ಅದೃಷ್ಟವನ್ನು ದೂರುವುದರಿಂದ ಯಾವ ಪ್ರಯೋಜನ?

ಜೀವನದಲ್ಲಿ ಗೆದ್ದವರು ಸ್ಪೂರ್ತಿಯಾದರೆ, ಸೋತವರ ಜೀವನ ಪಾಠವಾಗಿರುತ್ತದೆ. ಐಪಿಎಲ್ ಹರಾಜಿನಲ್ಲಿ ಪ್ರೇರಣೆ ನೀಡುವಂಥ ಅನೇಕ ಯಶೋಗಾಥೆಗಳಿದ್ದರೆ, ಅದನ್ನು ಮೀರಿದ ನೋವಿನ ಪಾಠಗಳೂ ಇವೆ.

ನೂರು ನೂರು ತಿರುವುಗಳು ಬದುಕಿನ ದಾರಿಗೆ |ಯಾರೋ ದಾರಿದೀಪಗಳು ಅವರವರ ಪಾಲಿಗೆ || (ಕೆ. ಕಲ್ಯಾಣ್)