ಜಗತ್ತಿನ ಇತಿಹಾಸದಲ್ಲಿ ಮತ-ಧರ್ಮಗಳ ಹೆಸರಿನಲ್ಲಿ ನಡೆದ ಯುದ್ಧಗಳು ಅಸಂಖ್ಯಾತ. ಬೇರೆ ಯಾವುದೇ ಕಾರಣಕ್ಕಿಂತ ಹೆಚ್ಚಾಗಿ ಮತ-ಧರ್ಮಗಳ ಕಾರಣಕ್ಕಾಗಿ ನಡೆದ ಯುದ್ಧಗಳೇ ಹೆಚ್ಚು. ಶಾಂತಿ-ಪ್ರೇಮಗಳನ್ನು ಸಾರುವ ಮತ-ಧರ್ಮಗಳ ಹೆಸರಿನಲ್ಲಿ ಹೆಚ್ಚಿನ ರಕ್ತಪಾತವಾಗಿರುವುದು ಇತಿಹಾಸದ ವಿಪರ್ಯಾಸವೇ ಸರಿ. ಇಂದು ಕೂಡ ಮತ-ಧರ್ಮಗಳು ಅನೇಕ ಘರ್ಷಣೆ, ಕಲಹ ಹಾಗೂ ಯುದ್ಧಗಳಿಗೆ ಕಾರಣವಾಗಿ ನಿಂತಿವೆ. ಕೆಲವು ಮತಗಳು ಪ್ರಾಚೀನ ಕಾಲದಿಂದಲೂ ಇಲ್ಲಿಯವರೆಗೆ ಮುಂದುವರಿದುಕೊಂಡು ಬಂದಿದ್ದರೆ, ಹಲವಾರು ಮತಗಳು ಒಂದೆರಡು ಸಹಸ್ರಮಾನಗಳ ಹಿಂದೆ ಉಗಮವಾದವುಗಳು. ಹಲವು ಶತಮಾನಗಳಿಂದ ವಿವಿಧ ಮತಗಳ ಜನರು ನಮ್ಮ ಭೂಗ್ರಹದ ಮೇಲೆ ಬಾಳ್ವೆ ನಡೆಸಿದರೂ, ಅವರ ಮಧ್ಯೆ ಸಾಮರಸ್ಯ ಇಂದಿಗೂ ಸಾಧ್ಯವಾಗಿಲ್ಲ. ವಿವಿಧ ಮತಗಳ ಜನರ ಮಧ್ಯೆ ವಿರಸದಿಂದಾಗಿ ಘರ್ಷಣೆಗಳು ನಡೆಯುತ್ತಿರುವುದು ಮಾತ್ರವಲ್ಲದೆ, ಒಂದೇ ಮತದ ವಿಭಿನ್ನ ಪಂಥಗಳ ಮಧ್ಯೆ ಕೂಡ ವಿರಸವು ರಕ್ತಪಾತಕ್ಕೆ ಕಾರಣವಾಗಿದೆ. ಇಂದಿನ ಜಗತ್ತಿನಲ್ಲಿ ಶೇಕಡ 85ರಷ್ಟು ಜನರು ಒಂದಲ್ಲ ಒಂದು ಮತದ ಅನುಯಾಯಿಗಳಾಗಿರುವುದು ಕಂಡುಬರುತ್ತದೆ; ಉಳಿದವರು ಯಾವ ಮತದ ಅನುಯಾಯಿಗಳೂ ಅಲ್ಲ, ಅದರಲ್ಲಿ ಹೆಚ್ಚಿನವರು ನಾಸ್ತಿಕರು. ವಿಶ್ವಶಾಂತಿಗಾಗಿ ಸರ್ವಮತಗಳ ಅನುಯಾಯಿಗಳ ಮಧ್ಯೆ ಸಾಮರಸ್ಯ ಸಾಧಿಸುವುದು ಮುಖ್ಯವಾಗಿದೆ. ಸನಾತನ ಧರ್ಮದ ಆದರ್ಶಗಳ ಆಧಾರದಲ್ಲಿ ಇಂತಹ ಸಮನ್ವಯ-ಸಮರಸಗಳನ್ನು ಸಾಧಿಸಲು ಸಾಧ್ಯವಿದೆಯೇ? ಈ ಲೇಖನದಲ್ಲಿ ಈ ಕುರಿತಾಗಿ ಅನ್ವೇಷಿಸೋಣ.
‘ಮತ’ ಎಂಬ ಪದಕ್ಕೆ ಶಬ್ದಕೋಶಗಳಲ್ಲಿ ಕಂಡುಬರುವ ಅರ್ಥನಿರೂಪಣೆ ಎಂದರೆ, ‘ವಿಶ್ವವನ್ನು ನಿಯಂತ್ರಿಸುವ ಅತಿಮಾನುಷ ಶಕ್ತಿಯಲ್ಲಿ ಅಥವಾ ಭಗವಂತನಲ್ಲಿ ವಿಶ್ವಾಸ ಹಾಗೂ ಭಕ್ತಿ’. ಇದರ ಪ್ರಕಾರ, ಭಗವಂತ ಅಥವಾ ದೇವ-ದೇವತೆಯರ ಸುತ್ತ ಹೆಣೆಯಲ್ಪಟ್ಟ ಒಂದು ನಂಬಿಕೆಗಳ ವ್ಯವಸ್ಥೆಯನ್ನು ಮತವೆಂದು ಕರೆಯಬಹುದು. ಯಾವುದೇ ಮತದ ಪ್ರಧಾನ ಪಾತ್ರವೆಂದರೆ, ಅದರ ಅನುಯಾಯಿಗಳನ್ನು ಹಲವು ರೀತಿಯ ವ್ರತಾಚರಣೆ, ಅನುಷ್ಠಾನ ಹಾಗೂ ನೈತಿಕ ಮೌಲ್ಯಗಳ ಪಾಲನೆಯ ಮೂಲಕ ತಾವು ನಂಬಿದ ಭಗವಂತನೆಡೆಗೆ ನಡೆಸುವುದು. ಹೀಗೆ ಮತಗಳು ನೀತಿಪಾಲನೆ ಆಧಾರದಲ್ಲಿ ಸುವ್ಯವಸ್ಥಿತ ಸಮಾಜದ ಸ್ಥಾಪನೆಗೆ ನೆರವಾಗಬಹುದಾದರೂ, ಅವು ವಿವಿಧ ಮತ ಹಾಗೂ ಪಂಗಡಗಳ ಜನರ ಮಧ್ಯೆ ವಿರಸದ ಬೀಜಗಳನ್ನು ಬಿತ್ತಿ ಅಶಾಂತಿಗೂ ಕಾರಣವಾಗುವುದನ್ನು ಕಾಣಬಹುದಾಗಿದೆ.
ಸನಾತನ ಧರ್ಮ ಒಂದು ಮತವಲ್ಲ, ಅದು ಸೃಷ್ಟಿಯ ಹಿಂದಿನ ಏಕಾತ್ಮ ದಿವ್ಯಸತ್ಯವನ್ನು ಪ್ರತಿಬೋಧಿಸುವ ಸವೋಚ್ಚ ನಿಯಮವಾಗಿದೆ. ಸನಾತನಧರ್ಮದಲ್ಲಿ ಮೂಲವಾಗಿ ಪರಮಾತ್ಮನಿಗೆ ಯಾವುದೇ ನಾಮ ಅಥವಾ ರೂಪವಿರುವುದಿಲ್ಲ; ಬದಲಾಗಿ ಪರಮಾತ್ಮನನ್ನು ‘ಸತ್ಯಂ, ಜ್ಞಾನಂ, ಅನಂತಂ ಬ್ರಹ್ಮ’ವೆಂದು (ತೈತ್ತಿರೀಯ ಉಪನಿಷತ್ತು) ಕರೆದಿದ್ದಾರೆ. ಪರಮಾತ್ಮನೆಂದರೆ ಅನಂತವಾದ ಶಾಶ್ವತ ಅಸ್ತಿತ್ವ ಹಾಗೂ ಪರಿಪೂರ್ಣ ಪ್ರಜ್ಞೆ; ಹಾಗೂ ದೇಶ, ಕಾಲ, ಸನ್ನಿವೇಶಗಳಿಗೆ ಅತೀತವಾದ ಸತ್ಯ. ಸನಾತನಧರ್ಮದ ಪ್ರಕಾರ ಮಾನವಜೀವನದ ಪರಮ ಉದ್ದೇಶವೆಂದರೆ, ತನ್ನ ಅಂತರಂಗದಲ್ಲಿಯೇ ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಳ್ಳುವುದು. ಆದರೆ ಸನಾತನ ಧರ್ಮದ ಆಧಾರದಲ್ಲಿ ಬೆಳೆದು ಬಂದ ಹಿಂದೂ ಆದಿಯಾಗಿ ವಿವಿಧ ಮತಗಳಲ್ಲಿ ಸ್ವರ್ಗ ಅಥವಾ ನರಕ ಪ್ರಾಪ್ತಿಯು ಜೀವನದ ಉದ್ದೇಶವೆಂಬ ಉಲ್ಲೇಖವಿದೆ. ಸನಾತನಧರ್ಮ ವಿಶ್ವದ ಸಮಸ್ತವೂ ದಿವ್ಯ ತತ್ತ್ವವೇ ಎಂದು ಬೋಧಿಸುವುದರಿಂದ (ಈಶಾವಾಸ್ಯಮಿದಂ ಸರ್ವ- ಈಶಾವಾಸ್ಯ ಉಪನಿಷತ್), ಅದು ಪ್ರತಿ ಮಾನವನೂ ಇತರರೆಲ್ಲರನ್ನೂ ತನ್ನವರೆಂದೇ ಅಂಗೀಕರಿಸಿ, ಯಾರನ್ನೂ ತಿರಸ್ಕರಿಸದಂತೆ ಬಾಳಲು ಹುರಿದುಂಬಿಸುತ್ತದೆ. ಇಂತಹ ಏಕಾತ್ಮ ಭಾವನೆಯನ್ನು ಅನುಭವಿಸಿದವನ ಸಹಜ ಸ್ವಭಾವವೂ ಪ್ರೇಮವೇ ಆಗಿದ್ದು, ಆತನು ಎಲ್ಲರನ್ನೂ ತನ್ನಂತೆಯೇ ಪ್ರೀತಿಸುತ್ತಾನೆ ಹಾಗೂ ಆ ಪ್ರೇಮವನ್ನು ಇತರರಿಗಾಗಿ ತ್ಯಾಗಮಾಡಿ ಸೇವೆಯ ಮೂಲಕ ವ್ಯಕ್ತಪಡಿಸುತ್ತಾನೆ. (ತ್ಯೇನ ತ್ಯಕ್ತೇನ ಭುಂಜೀತಾ- ಈಶಾವಾಸ್ಯ ಉಪನಿಷತ್). ನಮ್ಮಲ್ಲಿ ಅನೇಕ ಬಾಹ್ಯ ವ್ಯತ್ಯಾಸಗಳು ಕಂಡುಬಂದರೂ, ನಾವೆಲ್ಲರೂ ಅಂತರಂಗದಲ್ಲಿ ದಿವ್ಯ ಅಸ್ತಿತ್ವದ ಒಂದು ಭಾಗವೇ ಎಂದು ಸಾರಿ, ಸನಾತನ ಧರ್ಮವು ನಾವು ಎಲ್ಲರನ್ನೂ ಪ್ರೀತಿ-ಗೌರವಗಳಿಂದ ಕಾಣಬೇಕೆಂದು ಪ್ರೇರೇಪಿಸುತ್ತದೆ. ಸನಾತನ ಧರ್ಮದ ಗ್ರಂಥಗಳಲ್ಲಿ ಇದಕ್ಕೆ ಒಂದು ಉಪಮಾನವಿದೆ. ಮಣ್ಣಿನಿಂದ ಮಾಡಲ್ಪಟ್ಟ ವಿವಿಧ ಪಾತ್ರೆ-ಹರಿವಾಣಗಳು ಬಾಹ್ಯವಾಗಿ ಬೇರೆಬೇರೆಯಾಗಿ ಕಂಡರೂ, ಅವೆಲ್ಲವೂ ಮೂಲತಃ ಒಂದೇ ಮಣ್ಣಿನಿಂದ ಮಾಡಲ್ಪಟ್ಟಿವೆ. (ಮೃತ್ತಿಕೇತ್ಯೇವ ಸತ್ಯಂ- ಛಾಂದೋಗ್ಯೋಪನಿಷತ್). ಅನೇಕ ನಾಮ-ರೂಪಗಳೊಂದಿಗೆ ವ್ಯಕ್ತವಾಗುವ ಸಾಕಾರರೂಪೀ ಪರಮಾತ್ಮನು ಮೂಲದಲ್ಲಿ ಕೇವಲ ನಿರಾಕಾರ-ನಿರ್ಗಣ ದಿವ್ಯ ತತ್ತ್ವವೆಂದು ಸನಾತನ ಧರ್ಮ ಸಾರಿದರೂ, ಅದು ಇತರ ಮತ-ಧರ್ಮಗಳ ಬೋಧನೆಗಳನ್ನು ಎಲ್ಲಿಯೂ ವಿರೋಧಿಸುವುದಿಲ್ಲ. ಬದಲಿಗೆ, ‘ಸತ್ಯವು ಒಂದೇ ಆದರೂ, ಜ್ಞಾನಿಗಳು ಅದನ್ನು ಬಹು ರೀತಿಯಾಗಿ ವರ್ಣಿಸುತ್ತಾರೆ’ ಎಂದು ಉದ್ಘೋಷಿಸಿದೆ. (ಏಕಂ ಸತ್ ವಿಪ್ರಾಃ ಬಹುಧಾ ವದಂತಿ- ಋಗ್ವೇದ). ಆದ್ದರಿಂದ ಬಾಹ್ಯಾಚರಣೆಗಳು ಮುಖ್ಯವಲ್ಲ, ಅಂತರಂಗದಲ್ಲಿ ಸಮಸ್ತ ವಿಶ್ವದ ದಿವ್ಯ ಏಕತ್ವವನ್ನು ಕಂಡು ಅನುಭವಿಸಿ, ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ, ಗೌರವಿಸುವುದೇ ಮುಖ್ಯವಾಗಿರುತ್ತದೆ.
ಏಕಾತ್ಮಭಾವದಿಂದ ಎಲ್ಲರನ್ನೂ ಸಮಾನವಾಗಿ ಪ್ರೀತಿಸಬೇಕೆಂಬ ಸನಾತನ ಧರ್ಮದ ತತ್ತ್ವವು ಇತರ ಮತ-ಧರ್ಮಗಳಲ್ಲಿ ಹೇಗೆ ಉಲ್ಲೇಖವಾಗಿದೆಯೆಂಬುದನ್ನು ಈಗ ನೋಡೋಣ:
ಬೌದ್ಧಮತದ ಮೂಲ ಗ್ರಂಥವಾದ ಧರ್ಮಪಾದದ 10.1 ನೆಯ ಸೂತ್ರವು, ‘ಇತರರನ್ನು ನೀನು ನಿನ್ನಂತೆಯೇ ಕಾಣು’ ಎಂದು ಹೇಳಿದೆ. ಕ್ರೖೆಸ್ತಮತದ ಬೈಬಲ್ ಗ್ರಂಥವು, ‘ನಿನ್ನ ನೆರೆಹೊರೆಯವನನ್ನು ನೀನು ನಿನ್ನನ್ನು ಹೇಗೆ ಪ್ರೀತಿಸುವೆಯೋ ಹಾಗೆಯೇ ಪ್ರೀತಿಸು’ ಎಂದು ಸಾರಿದೆ. ಕನ್ಪ್ಯೂಷಿಯಾನಿಸಂ ಮತದಲ್ಲಿ ಹೀಗೆ ಹೇಳಿದೆ: ‘ನಿನಗೆ ಇತರರು ಏನನ್ನು ಮಾಡಲು ನೀನು ಇಷ್ಟಪಡುವುದಿಲ್ಲವೋ, ಅದನ್ನು ನೀನು ಇತರರಿಗೆ ಮಾಡಬೇಡ’- ಅಧ್ಯಾಯ 15, ಕನ್ಪ್ಯೂಷಿಯಸ್ನ ಬೋಧನೆಗಳು.
ಹಿಂದೂ ಧರ್ಮವು ‘ವಸುಧೈವ ಕುಟುಂಬಕಮ್ ಎಂಬ ಉದಾತ್ತ ತತ್ತ್ವವನ್ನು ಸಾರುತ್ತದೆ. ಇಸ್ಲಾಂ ಮತದಲ್ಲಿ ಪ್ರವಾದಿ ಮಹಮ್ಮದರು ಬೋಧಿಸಿರುವಂತೆ, ‘ನೀನು ಏನನ್ನು ಪ್ರೀತಿಸುವೆಯೋ, ಅದನ್ನು ಪ್ರೀತಿಯಿಂದ ನಿನ್ನ ಸಹೋದರರಿಗೆ ನೀಡದಿದ್ದಲ್ಲಿ, ನಿನ್ನಲ್ಲಿ ದೈವವಿಶ್ವಾಸವೇ ಇಲ್ಲ’- ನಾಸಾಯ್ 47.55. ಜೈನ ಮತದಲ್ಲಿ ಮಹಾವೀರನು ಉಪದೇಶಿಸಿರುವಂತೆ, ‘ನೀನು ಸಮಸ್ತ ಜೀವಿಗಳೆಡೆಗೆ ದಯಾಪರತೆಯನ್ನು ಆಚರಿಸು’- ತತ್ವಾರ್ಥಸೂತ್ರ 7.11. ಯಹೂದಿ ಮತದಲ್ಲಿ ಆದೇಶಿಸಿರುವಂತೆ, ‘ನೀನು ನಿಜವಾಗಿ ಪರಮಾತ್ಮನನ್ನು ಪ್ರೀತಿಸಬೇಕೆಂದಿದ್ದರೆ, ಸಹಮಾನವನನ್ನೂ ಪ್ರೀತಿಸಲೇ ಬೇಕು. ಯಾವ ವ್ಯಕ್ತಿಯಾದರೂ ‘ನಾನು ಪರಮಾತ್ಮನನ್ನು ಮಾತ್ರ ಪ್ರೀತಿಸುತ್ತೇನೆ, ಇತರ ಸಹಜೀವಿಗಳನ್ನು ಪ್ರೀತಿಸುವುದಿಲ್ಲ’ ಎಂದು ಹೇಳಿದರೆ ಅವನು ಸುಳ್ಳುಗಾರನೇ ಸರಿ’- ಮಾರ್ಟಿನ್ ಬುಬೆರ್ನ ‘ಹತ್ತು ಮೆಟ್ಟಿಲುಗಳು’. ಸಿಖ್ ಮತದ ಸ್ಥಾಪಕನಾದ ಗುರುನಾನಕ ದೇವನು ‘ಗ್ರಂಥಸಾಹಿಬ’ನಲ್ಲಿ ಹೇಳಿರುವಂತೆ, ‘ನಿನ್ನ ಅಂತರಂಗದಲ್ಲಿ ಸದಾಕಾಲ ಸಂತೃಪ್ತಿ ಮತ್ತು ಇತರರೆಡೆಗೆ ಕರುಣೆಗಳು ಬೆಳಗುತ್ತಿರಲಿ. ಹೀಗೆ ಮಾಡಿದರೆ ಮಾತ್ರ ನೀನು ನಿನ್ನ ಪವಿತ್ರ ದೀಕ್ಷೆಯ ಪಾಲನೆಯಲ್ಲಿ ಸಾಫಲ್ಯ ಕಾಣಬಹುದು’.
ಟಾವೋ ಮತವು, ‘ಇತರರನ್ನು ನಿನ್ನಂತೆಯೇ ಕಾಣು; ಎಲ್ಲ ಕುಟುಂಬಗಳನ್ನು ನಿನ್ನ ಕುಟುಂಬದಂತೆ, ಎಲ್ಲ ನಗರಗಳನ್ನು ನಿನ್ನ ನಗರದಂತೆ, ಎಲ್ಲ ದೇಶಗಳನ್ನು ನಿನ್ನ ದೇಶದಂತೆ, ಎಲ್ಲ ವಿಶ್ವಗಳನ್ನು ನಿನ್ನ ವಿಶ್ವದಂತೆಯೇ ಕಾಣು’ ಎಂದು ಹೇಳುತ್ತದೆ- ಅಧ್ಯಾಯ 54, ಟಾವೋ ಟೆ ಚಿಂಗ್. ಪಾರ್ಸಿ ಮತದಲ್ಲಿ ಝುರತುಷ್ಟ್ರನು ಸಾರಿರುವಂತೆ, ‘ಇತರರ ಸುಖಕ್ಕಾಗಿ ದುಡಿಯುವವನು ಮಾತ್ರ ತನ್ನ ಜೀವನದಲ್ಲಿ ಸುಖವನ್ನು ಕಾಣುತ್ತಾನೆ- ಆವೆಸ್ತಾ- ಉಷ್ಟವತ್ತಿ ಗಾಥಾ ಯಾಸನ 43.1.
ಹೀಗೆ ನಾವು ಪ್ರಪಂಚದ ವಿವಿಧ ಮತಗಳ ಬೋಧನೆಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ, ಭಗವಂತನ ಕಲ್ಪನೆ ಹಾಗೂ ಆತನನ್ನು ಆರಾಧಿಸುವ ವಿಧಿ-ವಿಧಾನಗಳು ವಿವಿಧವಾಗಿ ಕಂಡುಬರಬಹುದೇ ಹೊರತು, ಎಲ್ಲ ಮತಗಳ ಅಂತರ್ಗತ ಸಾರವು ಪ್ರತಿಜೀವಿಯನ್ನು ಪ್ರೀತಿಸುವುದೇ ಆಗಿದೆಯೆಂಬುದು ನಮಗೆ ತಿಳಿದುಬರುತ್ತದೆ. ಅದನ್ನೇ ಸನಾತನ ಧರ್ಮ ಸಾರಿ ಹೇಳುತ್ತದೆ. ಆದರೆ ಕೆಲವು ಅನುಯಾಯಿಗಳ ಸ್ವಾರ್ಥಪರ ಸಂಕುಚಿತ ಮನೋಭಾವ ಹಾಗೂ ಸ್ವಯಂ ವೈಭವೀಕರಣ ಪ್ರವೃತ್ತಿ ಮತ-ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲ ಕಲಹಗಳಿಗೆ ಕಾರಣವಾಗಿದೆ. ಇದಕ್ಕೆ ಉಪಮಾನವೆಂದರೆ, ನಾಲ್ಕು ಜನ ಅಂಧರು ಒಂದು ಆನೆಯನ್ನು ಮುಟ್ಟಿ ತಮಗೆ ಕಂಡಂತೆ ಆನೆಯನ್ನು ವರ್ಣಿಸುವಂತಾಗಿದೆ. ಆನೆಯ ಕಾಲನ್ನು ಮುಟ್ಟಿದ ಮೊದಲನೆಯವನು, ಆನೆ ಕಂಬದಂತಿದೆ ಎಂದು; ಎರಡನೆಯವನು ಬಾಲವನ್ನು ಮುಟ್ಟಿ ಆನೆ ಹಗ್ಗದಂತಿದೆ ಎಂದು; ಮೂರನೆಯ ವ್ಯಕ್ತಿ ಆನೆಯ ಹೊಟ್ಟೆಯನ್ನು ಮುಟ್ಟಿ ಗೋಡೆಯಂತಿದೆ ಎಂದು; ನಾಲ್ಕನೆಯವನು ಸೊಂಡಿಲನ್ನು ಮುಟ್ಟಿ ಆನೆ ಒಂದು ಕೊಳವೆಯಂತಿದೆಯೆಂದು ಉದ್ಗರಿಸುತ್ತಾನೆ! ಆದರೆ ಯಾರಿಗೂ ಆನೆಯ ಸತ್ಯವು ಅರ್ಥವಾಗಿಲ್ಲವಷ್ಟೆ. ಮತಗಳ ಬೋಧನೆಗಳ ಆಳಕ್ಕೆ ಹೋಗದೆ ಕೇವಲ ಮೇಲೆ ಮೇಲೆ ಅಧ್ಯಯನ ಮಾಡಿ ಬೋಧಿಸುವವರ ಕಥೆಯೂ ಹೀಗೇ ಇರುತ್ತದೆ. ಹೇಗೆ ಕಣ್ಣಿರುವ ವ್ಯಕ್ತಿ ಮಾತ್ರವೇ ಆನೆಯನ್ನು ನೋಡಿ ಅದು ಹೇಗಿದೆಯೆಂಬುದನ್ನು ವರ್ಣಿಸಬಲ್ಲನೋ, ಹಾಗೆಯೇ ಭಗವಂತ ಹಾಗೂ ಸೃಷ್ಟಿಗಳ ಏಕತೆಯನ್ನು ಅಂತರಂಗದಲ್ಲಿ ಅನುಭವಿಸಿದ ಜ್ಞಾನಿ ಮಾತ್ರವೇ ಭಗವಂತನ ಸತ್ಯವನ್ನು ವರ್ಣಿಸಬಲ್ಲನು.
ಕಾಲಕಳೆದಂತೆ ಮತಗಳ ಅನುಯಾಯಿಗಳು ಸಂದೇಶವನ್ನು (Message) ತ್ಯಜಿಸಿ, ಕೇವಲ ಸಂದೇಶವಾಹಕನನ್ನು (Messenger) ಅನುಸರಿಸಲು ಪ್ರಾರಂಭಿಸಿದರು; ಇದರಿಂದಾಗಿ ಅವರು ತಮ್ಮ ತಮ್ಮ ಮತಗಳ ಆಧ್ಯಾತ್ಮಿಕ ತತ್ತ್ವಗಳನ್ನು ಮರೆತು ಕೇವಲ ಪೂಜೆ-ಪುನಸ್ಕಾರಗಳ ಬಾಹ್ಯಾಚರಣೆಗಳ ಕೂಪದಲ್ಲಿ ಸಿಲುಕಿದರು. ವಿವಿಧ ಮತಗಳು ವಿವಿಧ ಶಾಲೆಗಳಿದ್ದಂತೆ; ಅದರಲ್ಲಿನ ಮಾಧ್ಯಮ, ವೇಳಾಪಟ್ಟಿ, ಸಮವಸ್ತ್ರ ಹಾಗೂ ಕಟ್ಟಡಗಳು ಬೇರೆ ಬೇರೆಯಾಗಿರಬಹುದೇ ಹೊರತು, ಎಲ್ಲ ಶಾಲೆಗಳಲ್ಲಿ ಬೋಧಿಸುವ ಪಠ್ಯಕ್ರಮ ಒಂದೇ ಆಗಿರುವಂತೆ, ಎಲ್ಲ ಮತಗಳ ಸಾರವು ‘ಸಮಸ್ತ ಸೃಷ್ಟಿಯ ಏಕಾತ್ಮ ಭಾವ’ವೇ ಆಗಿದೆ.
ಹೀಗೆ ಸನಾತನ ಧರ್ಮ ಎತ್ತಿ ತೋರುವ ಸರ್ವಧರ್ಮ ಸಮನ್ವಯ-ಸಾಮರಸ್ಯವನ್ನು ಸಾಧಿಸಬೇಕಾದರೆ, ಮತಗಳ ಮೇಲ್ನೋಟಕ್ಕೆ ಕಾಣುವ ವಿಭಿನ್ನತೆಗಳನ್ನು ಬಿಟ್ಟು ಅವುಗಳ ತತ್ತ್ವಗಳನ್ನು ಆಳವಾಗಿ ಅಧ್ಯಯನದಿಂದ ಅರ್ಥೈಸಿಕೊಳ್ಳಬೇಕಾಗಿದೆ. ಆಗ ಮಾತ್ರ ಉದಾತ್ತ ವಿಶಾಲ ಭಾವನೆಯನ್ನು ಬೆಳೆಸಿಕೊಂಡು, ಏಕಮೇವ ಸತ್ಯವನ್ನು ವಿವಿಧ ಮತಗಳು ಅನೇಕ ರೀತಿಗಳಲ್ಲಿ ವರ್ಣಿಸಿವೆಯೆಂಬುದನ್ನು ಮನಗಾಣಬಹುದು. ಹಾಗಾದರೆ ಮಾತ್ರ ಜಗತ್ತಿನಲ್ಲಿ ಶಾಂತಿ, ಪ್ರೇಮ ಮತ್ತು ಸಮರಸಗಳನ್ನು ಶಾಶ್ವತವಾಗಿ ಸ್ಥಾಪಿಸಬಹುದು ಹಾಗೂ ಮುಂದಿನ ಪೀಳಿಗೆಗಳಿಗೆ ಉದಾತ್ತ ಆದರ್ಶವನ್ನು ಹಾಕಿಕೊಡಬಹುದು.
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)