ಅಂಕಣ

ಬಲಿಷ್ಠಗೊಂಡಿದೆ ಭಾರತದ ವಿದೇಶಾಂಗ ನೀತಿ

ಜಗತ್ತಿನ ಎಲ್ಲ ರಾಷ್ಟ್ರಗಳ ಪ್ರಮುಖರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗಳಿಸಿರುವ ಬಾಂಧವ್ಯ ಅನೂಹ್ಯವಾದದ್ದು. ಯಾವ ರಾಷ್ಟ್ರದಲ್ಲಿ, ಯಾವ ಸಮಸ್ಯೆಯಾದರೂ ಅಲ್ಲಿ ಮೋದಿಯವರ ಅಗತ್ಯ ಎದ್ದು ಕಾಣುವಂತಿರುತ್ತದೆ. ಯಾವ ರಾಷ್ಟ್ರದಲ್ಲಿ ಭಾರತೀಯರು ತೊಂದರೆಗೆ ಸಿಕ್ಕುಹಾಕಿಕೊಂಡರೂ ಅವರನ್ನು ಬಿಡಿಸಲು ಭಾರತ ಉತ್ಸುಕವಾಗಿರುತ್ತದೆಯಲ್ಲದೆ ಸಹಾಯ ಮಾಡಲು ಜಗತ್ತೂ ಸಿದ್ಧವಾಗಿರುತ್ತದೆ.

ಭಾರತಕ್ಕೊಂದು ವಿದೇಶಾಂಗ ನೀತಿಯಿತ್ತೆ ಎಂಬುದೇ ಅನೇಕರಿಗೆ ಪ್ರಶ್ನೆ. ಜವಾಹರಲಾಲ್ ನೆಹರು ಪದೇಪದೆ ವಿದೇಶಗಳಿಗೆ ಸುತ್ತಾಡಲಿಕ್ಕೆ ಹೋಗುತ್ತಿದ್ದರು ಎನ್ನುವುದನ್ನು ಬಿಟ್ಟರೆ ಭಾರತೀಯರಿಗೆ ಈ ಕುರಿತು ತಿಳಿದಿರುತ್ತಿದ್ದುದು ಅಲ್ಪವೇ ಸರಿ. ಎರಡೂ ರಾಷ್ಟ್ರಗಳ ಮಂದಿ ಫೈಲುಗಳನ್ನು ಹಸ್ತಾಂತರಿಸಿಕೊಳ್ಳುವಾಗ ಒಳಗೇನು ಬರೆದಿರುತ್ತಾರೋ ದೇವರೇ ಬಲ್ಲ ಎಂದು ಆಡಿಕೊಳ್ಳುತ್ತಿದ್ದುದೂ ಉಂಟು. ಕಾಂಗ್ರೆಸ್ಸಿನ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ. ಕೃಷ್ಣ ಪರರಾಷ್ಟ್ರದ ವಿದೇಶಾಂಗ ಸಚಿವರ ಭಾಷಣವನ್ನು ಓದಿ ತಾವಲ್ಲದೇ ಇಡೀ ರಾಷ್ಟ್ರವನ್ನು ಮುಜುಗರಕ್ಕೀಡು ಮಾಡಿದ್ದು ಮರೆಯಬಹುದಾದ ಸಂಗತಿಯಲ್ಲ! ಇಡಿಯ ಭಾರತದ ವಿದೇಶಾಂಗ ನೀತಿ ಅಲಿಪ್ತ ನೀತಿ ಎಂಬ ಎರಡು ಪದಗಳೊಳಗೆ ಕ್ರೋಢೀಕರಿಸಲ್ಪಟ್ಟಿತ್ತು. ಅಲಿಪ್ತ ನೀತಿ ಎನ್ನುವುದು ನಾವು ಯಾರೊಂದಿಗೂ ವಿರೋಧ ಕಟ್ಟಿಕೊಳ್ಳುವುದಿಲ್ಲ ಎಂಬುದರ ಸ್ಥೂಲರೂಪ. ಇದು ಯುದ್ಧಕಾಲದ ನೀತಿಯಷ್ಟೇ ಅಲ್ಲ, ಶಾಂತಿಕಾಲದ್ದೂ ಕೂಡ. ಇತರರ ಒಳಿತಿಗಾಗಿ ನಮ್ಮನ್ನು ಬಲಿ ಕೊಟ್ಟುಬಿಡುವ ಮೂರ್ಖತನದ ಆಚರಣೆ. ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯ ಸ್ಥಾನ ನಮಗೆ ದಕ್ಕುವ ಸಾಧ್ಯತೆ ಇದ್ದಾಗಲೂ ಅದನ್ನು ದಯಮಾಡಿ ಚೀನಾಕ್ಕೆ ಕೊಡಿ ಎಂದು ಕೇಳುವಷ್ಟು ಮೂರ್ಖತನ ನಮ್ಮದಾಗಿತ್ತು. ಭಾರತ ಎಲ್ಲಕ್ಕಿಂತಲೂ ಮೊದಲು ಎಂಬ ಸೂತ್ರ ಎಲ್ಲಿಯೂ ಇರಲಿಲ್ಲ. ಹೀಗಾಗಿಯೇ ಜಗತ್ತು ನಮ್ಮ ಕುರಿತಂತೆ ಎಂದೂ ತಲೆಕೆಡಿಸಿಕೊಳ್ಳಲಿಲ್ಲ. ಅಲ್ಲಿನ ಅಧ್ಯಕ್ಷರು ಭಾರತಕ್ಕೆ ಬಂದಾಗಲೋ, ಇಲ್ಲಿನ ಪ್ರಧಾನಿಗಳು ಅಲ್ಲಿಗೆ ಹೋದಾಗಲೋ ಭಾರತೀಯ ಸಂಸ್ಕೃತಿ ಬಲುಶ್ರೇಷ್ಠ ಎಂದವರು ಹೇಳಿದ್ದನ್ನೇ ನಾವು ಸಂಭ್ರಮಿಸಿ ಮೆರೆಯುತ್ತಿದ್ದೆವು. ಹಾಗಂತ ಜಗತ್ತು ನಮ್ಮ ಅಲಿಪ್ತ ನೀತಿಯನ್ನು ಹೊಗಳಿ, ಅಟ್ಟಕ್ಕೇರಿಸಲಿಲ್ಲ.

ಅಮೆರಿಕ ಅಧ್ಯಕ್ಷ ನಿಕ್ಸನ್ ಕಾಲಕ್ಕೆ ಕಾರ್ಯದರ್ಶಿಯಾಗಿದ್ದ ಹೆನ್ರಿ ಕಿಸಿಂಜರ್ ಕೈಲಾಗದವರು ಆಡುವ ಭಾಷೆ ಇದು ಎಂದು ನೆಹರು ನೀತಿಯನ್ನು ಮೂದಲಿಸಿದ್ದರು. ಈ ಕುರಿತಂತೆ ಬಂಗಾಲಿ ಲೇಖಕ ಎಸ್.ಸಿ ಸೇನ್ ಬರೆಯುತ್ತ, ‘ನೆಹರುರವರ ಕುರಿತಂತೆ ಹೀಗೆ ಹೇಳಿದ ಮಾತನ್ನು ಸ್ವಾಮಿ ವಿವೇಕಾನಂದರ ಕುರಿತಂತೆ ಯಾರಿಗಾದರೂ ಹೇಳುವ ತಾಕತ್ತಿದೆಯೇನು?’ ಎಂದು ಪ್ರಶ್ನಿಸುತ್ತಾರೆ. ಭಾರತೀಯ ಮೌಲ್ಯಗಳನ್ನು ಆಳಕ್ಕೆ ಅರಿತುಕೊಂಡಿದ್ದ ಸ್ವಾಮಿ ವಿವೇಕಾನಂದರು ಇಂತಹ ಚಿಂತನೆಗಳನ್ನು ಕೊಡುವಾಗಲೂ ಅದಕ್ಕೆ ಸಮರ್ಥವಾದ ಆಲೋಚನೆಗಳ ಸೇತುವೆಯನ್ನೂ ಕಟ್ಟುತ್ತಿದ್ದರು. ಮತ್ತು ಈ ರೀತಿಯ ಚಿಂತನೆಗಳು ಬರಿಯ ಮಾತುಗಳಾಗದೇ ಜಗತ್ತಿನ ಒಳಿತಿಗೆ ಬಳಕೆಯಾಗುವಂತೆ ಸಮರ್ಥ ಹಂದರವನ್ನೂ ಸೃಷ್ಟಿಸುತ್ತಿದ್ದರು. ಭಾರತೀಯ ಸಂಸ್ಕೃತಿಯ ಕುರಿತಂತೆ ಅರಿವು ಮತ್ತು ಗೌರವವನ್ನು ಅತ್ಯಂತ ಕಡಿಮೆ ಹೊಂದಿದ್ದ ನೆಹರುರಿಂದ ಶ್ರೇಷ್ಠವಾದ ವಿದೇಶಾಂಗ ನೀತಿಯನ್ನು ನಿರೀಕ್ಷಿಸುವುದು ಸಾಧ್ಯವೇ ಇರಲಿಲ್ಲ. ಸ್ವಲ್ಪಮಟ್ಟಿಗೆ ಅಟಲ್ ಬಿಹಾರಿ ವಾಜಪೇಯಿ ಅದಕ್ಕೊಂದು ಸ್ವರೂಪ ಕೊಟ್ಟರಾದರೂ ನಿಜವಾದ ವಿದೇಶಾಂಗ ನೀತಿ ತನ್ನ ವೈಭವದ ತುದಿಯನ್ನು ಕಾಣುತ್ತಿರುವುದು ನರೇಂದ್ರ ಮೋದಿಯವರ ಕಾಲದಲ್ಲಿಯೇ.

ಮೂರು ವರ್ಷಗಳ ಹಿಂದೆ ‘ಭಾರತ್ ಕಿ ಬಾತ್’ ಎಂಬ ಸಂವಾದವೊಂದರಲ್ಲಿ ನರೇಂದ್ರ ಮೋದಿ ಮಾತನಾಡುತ್ತಿದ್ದರು. ತುಂಬ ನೇರವಾಗಿ ಮತ್ತು ಗೊಂದಲಕ್ಕೆಡೆಯಿಲ್ಲದಂತೆ ತಮ್ಮ ವಿಚಾರಧಾರೆಗಳನ್ನು ಪ್ರಸ್ತುತ ಪಡಿಸುತ್ತಿದ್ದರು. ಸಂದರ್ಶಕ ವಿದೇಶಾಂಗ ನೀತಿಯ ಬಗ್ಗೆ ಕೇಳಿದಾಗ, ‘ಚುನಾವಣೆಯ ಹೊತ್ತಲ್ಲೂ ಈ ಕುರಿತಂತೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಚಿಕ್ಕ ರಾಜ್ಯವೊಂದರ ಮುಖ್ಯಮಂತ್ರಿ ಈ ರಾಷ್ಟ್ರದ ಪ್ರಧಾನಿಯಾಗಿ ವಿದೇಶಾಂಗ ನೀತಿಯನ್ನು ಹೇಗೆ ಆಲೋಚಿಸಬಲ್ಲ ಎಂದು ಕೆಣಕಲಾಗುತ್ತಿತ್ತು. ಆಗಂತೂ ವಿದೇಶಾಂಗ ನೀತಿಯ ರೂಪುರೇಷೆಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಎಲ್ಲರಿಗೂ ಒಂದೇ ಮಾತನ್ನು ಹೇಳುತ್ತಿದ್ದೇನೆ, ಭಾರತ ಯಾವುದೇ ರಾಷ್ಟ್ರದೊಂದಿಗೆ ಮಾತನಾಡುವಾಗ ಕಣ್ಣು ತಗ್ಗಿಸಿಯೂ ಮಾತನಾಡದು, ಕಣ್ಣು ಎತ್ತರಿಸಿಯೂ ಮಾತನಾಡದು. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವಂತೆ ವಿದೇಶಾಂಗ ನೀತಿಯನ್ನು ರೂಪಿಸಲಾಗುವುದು’ ಎಂದಿದ್ದರು. ಭಾರತ ಅದನ್ನೀಗ ಸ್ಪಷ್ಟವಾಗಿ ಆಚರಿಸುತ್ತಿದೆ. ಭಾರತದೊಳಗೆ ನಾವೆಲ್ಲರೂ ರಾಷ್ಟ್ರ ಮೊದಲು ಎಂದೇ ಬದುಕಬೇಕು. ನನ್ನ ಮತ-ಪಂಥ, ನನ್ನ ಆಚಾರ-ವಿಚಾರ, ನನ್ನ ಬದುಕು-ಅಧ್ಯಯನ ಇವೆಲ್ಲಕ್ಕಿಂತಲೂ ದೊಡ್ಡದ್ದು ನನ್ನ ರಾಷ್ಟ್ರ. ಆದರೆ ದೇಶದಿಂದ ಹೊರಗೆ ಕಾಲಿಟ್ಟೊಡನೆ ಜಗತ್ತಿನೆದುರು ಭಾರತ ಮೊದಲು ಸಿದ್ಧಾಂತದೊಂದಿಗೇ ಮಾತನಾಡಬೇಕು. ಭಾರತೀಯರಾದ ನಾವುಗಳು ಜಗತ್ತಿನ ಮುಂದೆ ತಲೆತಗ್ಗಿಸಿ ನಿಂತರೆ ಅದು ಇಡೀ ರಾಷ್ಟ್ರವೇ ತಲೆತಗ್ಗಿಸಿದಂತೆ. ಹೇಗೆ ನಾವೊಂದು ತಪ್ಪು ಮಾಡಿದರೆ ಜಾಗತಿಕ ಮಟ್ಟದಲ್ಲಿ ಭಾರತವನ್ನೇ ಹೀಯಾಳಿಸಿದಂತಾಗುತ್ತದೆಯೋ ಹಾಗೆಯೇ ಇದು.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿದೇಶಕ್ಕೆ ಸಾಲ ಕೇಳಲು ಹೋದರೆ ಪಾಕಿಸ್ತಾನಿಯರೆಲ್ಲ ಭಿಕ್ಷೆ ಬೇಡುವ ಸ್ಥಿತಿಯಲ್ಲಿದ್ದಾರೆಂದು ನಾವು ಹೇಳುವುದಿಲ್ಲವೇನು? ಹಾಗೆಯೇ ಈ ದೇಶದ ಪ್ರಧಾನಿ ರಷ್ಯಾದ ಪ್ರಧಾನಿಯೊಂದಿಗೆ ಸ್ವಾಭಿಮಾನದಿಂದ ಕೈ ಕುಲುಕುವಾಗ ಭಾರತ ಪ್ರಬಲ ರಾಷ್ಟ್ರವಾಗಿ ಬೆಳೆದು ನಿಂತಿದೆ ಎಂದು ಜಗತ್ತು ಭಾವಿಸುತ್ತದೆ. ಅದೇ ಸಂದರ್ಶನದಲ್ಲಿ ಮೋದಿ ಹೇಳಿದ್ದರು, ‘ನಾಳೆ ಅಗತ್ಯಬಿದ್ದರೆ ಇಸ್ರೇಲಿಗೆ ಹೋಗುತ್ತೇನೆ. ಭಾರತಕ್ಕೆ ಅಗತ್ಯವೆನ್ನುವುದಾದರೆ ಪ್ಯಾಲೆಸ್ತೇನಿಗೆ ಹೋಗಲೂ ಸಿದ್ಧ. ಸೌದಿ ಅರೇಬಿಯಾಕ್ಕೆ ಪ್ರೀತಿಯಿಂದ ಹೋಗಿ ಅಲ್ಲಿನ ಸನ್ಮಾನವನ್ನೂ ಸ್ವೀಕರಿಸುತ್ತೇನೆ. ದೇಶಕ್ಕೆ ಇಂಧನದ ಅವಶ್ಯಕತೆ ಇದೆ ಎನ್ನುವುದಾದರೆ ಇರಾನಿಗೂ ಹೋಗಿ ಬರುತ್ತೇನೆ. ಎಲ್ಲಕ್ಕಿಂತಲೂ ನನಗೆ ಭಾರತವೇ ಮೊದಲು’ ಎಂದಿದ್ದರು. ಈಗಂತೂ ಅವರ ಈ ಮಾತುಗಳು ಆಚರಣೆಗೆ ಬರುತ್ತಿರುವುದು ನಿಚ್ಚಳವಾಗಿ ಗೋಚರವಾಗುತ್ತಿದೆ. ಜಗತ್ತಿನ ಎಲ್ಲ ರಾಷ್ಟ್ರಗಳ ಪ್ರಮುಖರೊಂದಿಗೆ ಅವರು ಗಳಿಸಿರುವ ಬಾಂಧವ್ಯ ಅನೂಹ್ಯವಾದದ್ದು. ಯಾವ ರಾಷ್ಟ್ರದಲ್ಲಿ, ಯಾವ ಸಮಸ್ಯೆಯಾದರೂ ಅಲ್ಲಿ ಮೋದಿಯವರ ಅಗತ್ಯ ಎದ್ದು ಕಾಣುವಂತಿರುತ್ತದೆ. ಯಾವ ರಾಷ್ಟ್ರದಲ್ಲಿ ಭಾರತೀಯರು ತೊಂದರೆಗೆ ಸಿಕ್ಕುಹಾಕಿಕೊಂಡರೂ ಅವರನ್ನು ಬಿಡಿಸಲು ಭಾರತ ಉತ್ಸುಕವಾಗಿ ಇರುತ್ತದೆಯಲ್ಲದೆ ಸಹಾಯ ಮಾಡಲು ಜಗತ್ತೂ ಸಿದ್ಧವಾಗಿರುತ್ತದೆ. ರಷ್ಯಾ-ಯೂಕ್ರೇನ್ ಗಲಾಟೆ ಸಂದರ್ಭದಲ್ಲಿ ಮೋದಿಯ ಜಾಗದಲ್ಲಿ ರಾಹುಲ್ ಇದ್ದಿದ್ದರೆ ಭಾರತದ ವಿದ್ಯಾರ್ಥಿಗಳ ಹಿತ ಕಾಪಾಡಲು ಸಾಧ್ಯವಿತ್ತೆ? ನೇತೃತ್ವ ಸಮರ್ಥವಾಗಿ ಇರಬೇಕೆಂದು ಹೇಳುವುದು ಅದಕ್ಕಾಗಿಯೇ. ಅವಕಾಶ ಸಿಕ್ಕಾಗ ತಮ್ಮಿಂದಾದ ಸಹಕಾರವನ್ನು ಇತರ ರಾಷ್ಟ್ರಗಳಿಗೆ ಮಾಡಿಬಿಡುವ ಮೋದಿ ಅಗತ್ಯಬಿದ್ದಾಗ ಅವರಿಂದ ಮುಲಾಜಿಲ್ಲದೆ ಸಹಾಯ ಕೇಳುತ್ತಾರೆ. ಹೀಗಾಗಿಯೇ ಇಡೀ ಜಗತ್ತು ಭಾರತದ ಒಳಿತಿಗೆ ಸದಾ ಸಿದ್ಧವಾಗಿರುತ್ತದೆ.

ಈಗಂತೂ ಯುದ್ಧ ನಡೆಯುತ್ತಿರುವುದು ರಷ್ಯಾ ಮತ್ತು ಯೂಕ್ರೇನಿನ ನಡುವೆ. ಆದರೆ ಜಗತ್ತಿನ ಗಮನವೆಲ್ಲ ಭಾರತದೆಡೆಗೆ. ನಾವು ರಷ್ಯನ್ನರೊಂದಿಗೆ ಇಂಧನ ಖರೀದಿಯ ಒಪ್ಪಂದ ಮಾಡಿಕೊಂಡಿದ್ದು ಅವರಿಗೆ ಕಿರಿಕಿರಿ, ರಷ್ಯನ್ನರೊಂದಿಗೆ ಡಾಲರ್ ಬಿಟ್ಟು ರೂಪಾಯಿ, ರುಬೆಲ್​ಗಳ ವ್ಯವಹಾರ ಆರಂಭಿಸಿದ್ದೂ ಕಿರಿಕಿರಿ, ವಿಶ್ವಸಂಸ್ಥೆಯಲ್ಲಿ ನಾವು ರಷ್ಯಾ ವಿರುದ್ಧವಾಗಿ ಹೋಗದೆ ತಟಸ್ಥ ನೀತಿಯನ್ನು ಅನುಸರಿಸಿದ್ದು ಅಮೆರಿಕದಂಥ ರಾಷ್ಟ್ರಗಳಿಗೆ ಕಣ್ಣುರಿ. ಆದರೆ ದನಿ ಎತ್ತರಿಸಿ ಮಾತನಾಡುವಂತೆಯೇ ಇಲ್ಲವಾಗಿಬಿಟ್ಟಿದೆ! ಅಮೆರಿಕ ಭಾರತದ ವಿರುದ್ಧ ಹೇಳಿಕೆ ಕೊಡಲು ನೂರು ಬಾರಿ ಯೋಚನೆ ಮಾಡುವಂಥ ಸ್ಥಿತಿ ನಿರ್ವಣವಾಗಿದೆ. ರಷ್ಯಾದಿಂದ ನಾವು ಇಂಧನ ಖರೀದಿ ಮಾಡುವ ಸುದ್ದಿಗೆ ಪ್ರತಿಕ್ರಿಯಿಸಿದ ಅಮೆರಿಕ, ‘ಭಾರತ-ರಷ್ಯಾದ ಸಂಬಂಧವನ್ನು ನಾವು ಬಲ್ಲೆವು’ ಎಂದು ಹೇಳಿರುವುದು ಭಾರತದ ಬಲಗೊಳ್ಳುತ್ತಿರುವ ಸ್ಥಾನದ ಸಾಕ್ಷಿ. ಹಾಗಂತ ವಿದೇಶಾಂಗ ಸಚಿವ ಜೈಶಂಕರ್ ಸುಮ್ಮನಿದ್ದಾರೆ ಎಂದಲ್ಲ. ಯಾವ ವೇದಿಕೆಯಲ್ಲಿ, ಯಾರಿಗೆ ಯಾವ ಭಾಷೆಯಲ್ಲಿ ಉತ್ತರ ಕೊಡಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಪತ್ರಕರ್ತನೊಬ್ಬ ಭಾರತ ರಷ್ಯಾದಿಂದ ಇಂಧನ ಖರೀದಿಸುತ್ತಿರುವುದರ ಕುರಿತಂತೆ ಕಟಕಿಯಾಡಿದಾಗ, ‘ನಾವು ಒಂದಿಡೀ ತಿಂಗಳಿಗೆ ತರಿಸಿಕೊಳ್ಳುವ ಇಂಧನ ಯುರೋಪಿನ ಒಪ್ಪತ್ತಿನ ಆಮದಿಗೆ ಸಮ’ ಎಂದಿದ್ದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಯಿತಲ್ಲದೆ ಯುರೋಪಿಯನ್ ರಾಷ್ಟ್ರಗಳ ಬಂಡವಾಳ ಬಯಲುಗೊಳಿಸಿತು. ತಾವು ಇಂಧನ ಆಮದಿನ ನೆಪದಲ್ಲಿ ರಷ್ಯಾಕ್ಕೆ ದೊಡ್ಡ ಪ್ರಮಾಣದ ಹಣ ಸಂದಾಯ ಮಾಡುತ್ತಿರುವ ಈ ರಾಷ್ಟ್ರಗಳು ಜಗತ್ತೆಲ್ಲವೂ ರಷ್ಯಾವನ್ನು ಬಹಿಷ್ಕರಿಸಬೇಕು ಎಂದು ನಿರ್ಧರಿಸಿರುವುದು ಏಕಪಕ್ಷೀಯವಲ್ಲದೇ ಮತ್ತೇನು? ಭಾರತ ಈಗ ಬಲಗೊಂಡಿದೆ. ಇದರ ಸಮರ್ಥ ಪುರಾವೆ ಮೊನ್ನೆ ಅಮೆರಿಕದಲ್ಲಿ ಸಿಕ್ಕಿತು.

ಅಚಾನಕ್ಕು ಅಮೆರಿಕದಲ್ಲಿ ರಕ್ಷಣಾ ಸಚಿವ ಮತ್ತು ವಿದೇಶಾಂಗ ಸಚಿವರ 2+2 ಬೈಠಕ್ಕು ಆಯೋಜನೆಯಾಗಿತ್ತು. ಮೋದಿ-ಬೈಡೆನ್​ರ ಆನ್​ಲೈನ್ ಚರ್ಚೆ ಕೂಡ. ಈ ಹೊತ್ತಿನಲ್ಲಿ ಮಾತುಕತೆಯಲ್ಲಿದ್ದ ಅಮೆರಿಕದ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಬರೆದುಕೊಟ್ಟ ಭಾಷಣವನ್ನು ಓದುತ್ತ ಎಡವಟ್ಟು ಮಾಡಿಕೊಂಡರು. ಹಿಂದೆಲ್ಲ ಅವರಿಗೆ ಭಾರತವನ್ನು ಮೂದಲಿಸಿ ತಮ್ಮ ಸಾಮರ್ಥ್ಯ ಹಿಗ್ಗಿಸಿಕೊಳ್ಳುವ ರೂಢಿಯಾಗಿಬಿಟ್ಟಿತ್ತು. ಈಗ ಕರೊನಾ ನಂತರ ಎಲ್ಲ ರಾಷ್ಟ್ರಗಳಿಗಿಂತಲೂ ಆರ್ಥಿಕವಾಗಿ, ರಾಜತಾಂತ್ರಿಕವಾಗಿ, ಜಾಗತಿಕ ಸಹಕಾರದ ದೃಷ್ಟಿಯಿಂದಲೂ ಬಹಳ ಗಟ್ಟಿಯಾಗಿರುವ ಭಾರತವನ್ನು ಕೆಣಕಿ ನೋಡುವ ಪ್ರಯತ್ನವನ್ನು ಅವರು ಮಾಡಿದರು. ಮಾತಿನ ಭರದಲ್ಲಿ, ‘ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದನ್ನೂ ನಾವು ಗಮನಿಸುತ್ತಿದ್ದೇವೆ’ ಎಂದು ಹೇಳಿದರು. ಇತ್ತೀಚೆಗೆ ರಾಮನವಮಿ ಹೊತ್ತಿನಲ್ಲಿ ಮುಸಲ್ಮಾನರು ನಡೆಸಿದ ಗಲಾಟೆ, ಅದಕ್ಕೂ ಮುಂಚೆ ಕರ್ನಾಟಕದಲ್ಲಿ ಕಂಡು ಬಂದ ಹಿಜಾಬ್ ವಿವಾದ, ಯುಗಾದಿ ಹೊತ್ತಲ್ಲಿ ರಾಜಸ್ಥಾನದಲ್ಲಿ ಮುಸಲ್ಮಾನರು ನಡೆಸಿದ ಭೀಕರ ಹಿಂಸಾಚಾರ, ಶಿವಮೊಗ್ಗದಲ್ಲಿ ಹರ್ಷನ ಕೊಲೆ ಇವೆಲ್ಲವನ್ನೂ ಗಮನಿಸಿದರೆ ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದೇ ಮುಸಲ್ಮಾನರು. ಇವೆಲ್ಲವನ್ನೂ ಮರೆಮಾಚಿ ತನಗೆ ಸಿಕ್ಕ ಅವಕಾಶದಲ್ಲಿ ಮುಸಲ್ಮಾನರ ಪುಂಡಾಟಿಕೆಯನ್ನು ಹೆಚ್ಚಿಸಲು ಬೇಕಾದ ಪ್ರಯತ್ನವನ್ನು ಬ್ಲಿಂಕನ್ ಮಾಡಿದರು. ಇಲ್ಲಿನ ಬುದ್ಧಿಜೀವಿ ಪತ್ರಕರ್ತರ ಆನಂದ ಹೇಳತೀರದಾಗಿತ್ತು. ಅಭಿಸಾರ್ ಶರ್ಮ ತತ್​ಕ್ಷಣಕ್ಕೆ ಮುಗಿಬಿದ್ದು ಬ್ಲಿಂಕನ್ ಹೇಳಿಕೆಗೆ ಬಾಯ್ಮುಚ್ಚಿ ಕುಳಿತಿರುವ ಭಾರತದ ಮಂತ್ರಿಗಳನ್ನು ಮೂದಲಿಸಿ ಅವರು ಸುಮ್ಮನಿದ್ದಾರೆಂದರೆ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಜಾಗತಿಕ ವೇದಿಕೆಯಲ್ಲಿ ಒಪ್ಪಿಕೊಂಡಂತಾಗಿದೆ ಎಂದೆಲ್ಲ ಬಡಬಡಿಸಿಬಿಟ್ಟಿದ್ದರು! ಆದರೆ ಮರುದಿನ ಅಮೆರಿಕದಲ್ಲಿ ಪತ್ರಕರ್ತರು ಜೈಶಂಕರ್​ರವರಿಗೆ ಬ್ಲಿಂಕನ್ ಹೇಳಿಕೆ ಕುರಿತಂತೆ ಪ್ರಶ್ನಿಸಿದಾಗ ಜೈಶಂಕರ್ ತಡವರಿಸಲಿಲ್ಲ. ‘ಪ್ರತಿಯೊಬ್ಬರಿಗೂ ಇತರ ರಾಷ್ಟ್ರಗಳ ಕುರಿತಂತೆ ತಮ್ಮದ್ದೇ ಆದ ದೃಷ್ಟಿಕೋನ ಹೊಂದುವ ಅಧಿಕಾರವಿದೆ. ಹಾಗೆಯೇ ನಾವು ಕೂಡ ಅಮೆರಿಕ ಸೇರಿ ಎಲ್ಲ ರಾಷ್ಟ್ರಗಳ ಕುರಿತಂತೆ ನಮ್ಮ ಅಭಿಪ್ರಾಯ ಹೊಂದಿದ್ದೇವೆ. ವಿಶೇಷವಾಗಿ ಅಮೆರಿಕದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದುಬಿಟ್ಟರು! ಇದಕ್ಕೆ ಮುನ್ನಾ ದಿನವೇ ಸಿಖ್ಖರ ಮೇಲೆ ಅಲ್ಲಿ ಹಲ್ಲೆಯಾಗಿದ್ದನ್ನು ಅವರು ಉಲ್ಲೇಖಿಸಿದರೂ ಕೂಡ. ಜೈಶಂಕರ್ ಹೇಳಿಕೆ ಮಾಧ್ಯಮಗಳಲ್ಲಿ ಯಾವ ಪರಿ ಚರ್ಚೆಯಾಯಿತೆಂದರೆ ಭಾರತ ಮೊದಲಿನಂತಿಲ್ಲ ಎಂಬುದು ಅವರಿಗೆ ಅರಿವಾಗಿತ್ತು. ಆದ ತಪ್ಪನ್ನು ತಿದ್ದಿಕೊಳ್ಳಬೇಕಿತ್ತಲ್ಲ, ಮರುದಿನವೇ ಬ್ಲಿಂಕನ್ ಹೇಳಿಕೆ ಕೊಟ್ಟರು. ಅಮೆರಿಕದ ಪತ್ರಕರ್ತ ಟ್ರುಮನ್ ಭಾರತಕ್ಕೆ ಹೋಗಿದ್ದಾಗ ಮಹಾತ್ಮ ಗಾಂಧೀಜಿಯವರನ್ನು ಭೇಟಿಮಾಡಿ ರ್ಚಚಿಸಿದ್ದರು. ಆತ ಅವುಗಳನ್ನು ದಾಖಲಿಸಿದ ಕೃತಿ ಎಷ್ಟರಮಟ್ಟಿಗೆ ಪ್ರಭಾವಿಯಾಯ್ತೆಂದರೆ ಮುಂದೆ ಜೂನಿಯರ್ ಮಾರ್ಟಿನ್ ಲೂಥರ್ ಕಿಂಗ್ ಅದನ್ನು ಅಧ್ಯಯನ ಮಾಡಿ ವಿಶೇಷವಾಗಿ ಅಳವಡಿಸಿಕೊಂಡಿದ್ದರು ಎಂದರು. ಭಾರತ ಮತ್ತು ಅಮೆರಿಕದ ಸಂಬಂಧಗಳು ಹಿಂದಿನಿಂದಲೂ ಚೆನ್ನಾಗಿಯೇ ಸಾಗಿಬಂದಿದೆ ಎಂದೆಲ್ಲ ತೇಪೆ ಹಚ್ಚುವ ಕೆಲಸ ಮಾಡಿದರು. ಅವರ ಎಲ್ಲ ಹೇಳಿಕೆಗಳ ಮತಿತಾರ್ಥವೇನೆಂದರೆ ಭಾರತದಲ್ಲಿ ನಡೆವ ಘಟನೆಗಳ ಕುರಿತಂತೆ ತಾನು ಹೇಳಿಕೆ ಕೊಟ್ಟಿದ್ದು ತಪ್ಪಾಯ್ತು ಎಂದೇ ಆಗಿತ್ತು. ಅದನ್ನು ಬಹುತೇಕರು ಗುರುತಿಸಿದರು. ಎಂದೂ ಖಡಕ್ಕಾಗಿ ಮಾತನಾಡದ ರಾಜನಾಥ್ ಸಿಂಗರು, ‘ನಮ್ಮ ದೇಶದ ತಂಟೆಗೆ ಯಾರಾದರೂ ಬಂದರೆ ನಾವು ಯಾರನ್ನೂ ಬಿಡುವುದಲ್ಲ’ ಎಂದು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿಬಿಟ್ಟರು. ಈ ಸಂದೇಶ ಅಮೆರಿಕಕ್ಕೇ ಇತ್ತೋ, ಅಥವಾ ಆ ರೂಪದಲ್ಲಿ ಚೀನಾದ ಮೇಲೆ ಏರಿಹೋಗಲಾಗಿತ್ತೋ ದೇವರೇ ಬಲ್ಲ. ಆದರೆ ಕೊಡುವ ಸಂದೇಶವನ್ನಂತೂ ಸ್ಪಷ್ಟವಾಗಿ ಕೊಡಲಾಗಿತ್ತು!

ಭಾರತೀಯ ಮಾಧ್ಯಮಗಳು, ರಷ್ಯಾದೊಂದಿಗಿನ ನಮ್ಮ ಸಂಬಂಧಕ್ಕೆ ಕುಪಿತವಾದ ಜರ್ಮನಿ ಜಿ-7 ಶೃಂಗಸಭೆಗೆ ಈ ವರ್ಷ ಭಾರತವನ್ನು ಆಹ್ವಾನಿಸಲಾರದು ಎಂದೆಲ್ಲ ಬರೆದುಬಿಟ್ಟಿದ್ದವು. ಅದರ ಹಿಂದು-ಹಿಂದೆಯೇ ಭಾರತಕ್ಕೆ ಆಹ್ವಾನ ಬಂದಾಗ ನಮ್ಮದೇ ಕೆಲ ಮಾಧ್ಯಮಗಳು ತೆಪ್ಪಗಾಗುವುದನ್ನು ಕಂಡು ದುಃಖಿಸಬೇಕೋ ಆನಂದ ಪಡಬೇಕೋ ಗೊತ್ತಾಗಲಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಭಾರತದ ವಿದೇಶಾಂಗ ನೀತಿ ಈಗ ಪಾಲ್ಪಿಂಡಿಯಂತಿಲ್ಲ. ಅದು ಗಟ್ಟಿಯಾಗಿದೆ. ಮುಟ್ಟಿದರೆ ತಟ್ಟಿಬಿಡುವಷ್ಟು ಬಲವಾಗಿದೆ. ನಾವು ಯಾರ ತಂಟೆಗೂ ಹೋಗದೇ ನಮ್ಮ ತಂಟೆಗೆ ಬಂದವರನ್ನು ಬಿಡುವುದಿಲ್ಲ ಎಂಬ ಸಂದೇಶವನ್ನಂತೂ ಸ್ಪಷ್ಟವಾಗಿ ರವಾನಿಸಿದ್ದೇವೆ. ಮೋದಿಗೆ ಎಷ್ಟು ನಮೋ ಎಂದರೂ ಕಡಿಮೆಯೇ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)