ಅಂಕಣ

ಸಂಕಷ್ಟದಲ್ಲಿಯೂ ಇದೆ ಭಾರತಕ್ಕೆ ದೊಡ್ಡ ಅವಕಾಶ!..ಚೀನಾದ ನಡೆ ಬಗ್ಗೆ ಮತ್ತಷ್ಟು ಗುಮಾನಿ

ಪ್ರಾಣಘಾತಕ ಮಹಾಮಾರಿಯನ್ನು ಪ್ರಪಂಚದ ಎಲ್ಲ ದೇಶಗಳಿಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಗುಲಿಸಿ, ತನ್ನ ದೇಶದಲ್ಲಿ ಏನಾಗುತ್ತಿದೆ ಎನ್ನುವುದನ್ನು ಮಾತ್ರ ಗುಟ್ಟಾಗಿ ಇಟ್ಟಿರುವ ಚೀನಾದ ನಡೆ ಮತ್ತಷ್ಟು ಗುಮಾನಿಗೆ ಎಡೆಮಾಡಿಕೊಟ್ಟಿದೆ. ಕರೊನಾ ಸೋಂಕಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಈವರೆಗೆ ಪ್ರಾಮಾಣಿಕವಾಗಿ ಅದು ಯಾರೊಂದಿಗೂ ಹಂಚಿಕೊಂಡಿಲ್ಲ, ಯಾವ ರೀತಿಯ ವೈದ್ಯಕೀಯ ಚಿಕಿತ್ಸೆಯಿಂದ ತನ್ನ ದೇಶದ ರೋಗಿಗಳನ್ನು ಗುಣಪಡಿಸುತ್ತಿದೆ, ಈ ವೈರಾಣುವಿಗೆ ಮದ್ದು ಅಥವಾ ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನದಲ್ಲಿದೆಯೇ ಎನ್ನುವ ವಿಷಯವನ್ನು ಇಂದಿಗೂ ಬಚ್ಚಿಟ್ಟಿದೆ. ಹಾಗಾಗಿ, ಚೀನಾದ ಪ್ರತಿನಡೆಯನ್ನೂ ಅಂತಾರಾಷ್ಟ್ರೀಯ ರಂಗ ಅನುಮಾನದಿಂದ ನೋಡುವಂತಾಗಿದೆ. ಪ್ರಪಂಚದಾದ್ಯಂತ ಷೇರು ಮಾರುಕಟ್ಟೆ ಕುಸಿದಿರುವ ಸಂದರ್ಭದಲ್ಲಿ ಐರೋಪ್ಯ ರಾಷ್ಟ್ರಗಳ ಮೂಲಸೌಕರ್ಯ ಕಂಪನಿಯ ಷೇರುಗಳಲ್ಲಿ ಹೂಡಿಕೆಗೆ ಸಮಯಸಾಧಕನಂತೆ ಮುಂದಾಗಿರುವುದು ಮತ್ತೊಂದು ಆತಂಕಕಾರಿ ಬೆಳವಣಿಗೆ, ಭಾರತದ ಎಚ್​ಡಿಫ್​ಸಿ ಕಂಪನಿಯ ಷೇರುಗಳಲ್ಲಿ ತನ್ನ ಪಾಲನ್ನು ಹೂಡಿಕೆಯ ಮೂಲಕ ಹೆಚ್ಚಿಸಿಕೊಂಡಿದೆ. ಕರೊನಾ ಸಂಕಷ್ಟ ಮತ್ತು ಲಾಕ್​ಡೌನ್​ನಿಂದ ವಿಶ್ವದ ಆರ್ಥಿಕವ್ಯವಸ್ಥೆ ಕಂಗೆಟ್ಟಿದೆ, ಭಾರತವು ಸದ್ಯಕ್ಕೆ ಸಾವು-ನೋವು ತಪ್ಪಿಸಲು ಹೆಣಗಾಡುತ್ತಿದೆ. ಆದರೆ ಆರ್ಥಿಕ ಹಿನ್ನಡೆಯನ್ನು ತಪ್ಪಿಸುವ ಕಾರ್ಯಕ್ಕೂ ಸನ್ನದ್ಧವಾಗಬೇಕು. ಈ ಹಿನ್ನೆಲೆಯಲ್ಲಿ ಭಾರತವು, ಚೀನಾದಿಂದ ಹೊರನಡೆದಿರುವ ದೇಶಗಳನ್ನು ಹೂಡಿಕೆಗೆ ಸ್ವಾಗತಿಸಿ ಕರೊನಾ ನಂತರದ ಆರ್ಥಿಕ ಅಭಿವೃದ್ಧಿಗೆ ವಿಪುಲ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಜಾಣ ನಡೆಯಾಗಬಲ್ಲದು.

ದಕ್ಷಿಣ ಕೊರಿಯಾ ಮೊದಲಿನಿಂದಲು ಚೀನಾವನ್ನು ತನ್ನ ಗೆಳೆಯನೆಂದೇ ಭಾವಿಸಿ ಬೃಹತ್ ಮೊತ್ತದ ಹೂಡಿಕೆ ಮಾಡಿರುವುದು ಇವತ್ತಿನ ಸಂಕಷ್ಟಕ್ಕೆ ಕಾರಣ. ಅಮೆರಿಕ ಚೀನಾ ನಡುವಿನ ಆಮದು ಮತ್ತು ರಫ್ತುಸುಂಕದ ತಿಕ್ಕಾಟದ ನಡುವೆ ದಕ್ಷಿಣ ಕೊರಿಯಾ ಸಿಲುಕಿದೆ. ಚೀನಾದಲ್ಲಿ ತಯಾರಾದ ತನ್ನ ಉತ್ಪನ್ನಗಳಿಗೇ ಅಮೆರಿಕ ಅತಿಯಾದ ಸುಂಕ ವಿಧಿಸುತ್ತಿರುವುದರಿಂದ ಬೆಲೆಸಮರದಲ್ಲಿ ದಕ್ಷಿಣ ಕೊರಿಯಾ ನೆಲಕಚ್ಚಿದೆ. ಹಾಗಾಗಿ, ತನ್ನ ಉತ್ಪಾದನಾ ನೆಲೆ ಆಗಿಸಲು ಭಾರತದ ಕಡೆ ಮುಖಮಾಡಿದೆ ದಕ್ಷಿಣ ಕೊರಿಯಾ. ಕರೊನಾದಿಂದ ಸೃಷ್ಟಿ ಆಗಿರುವ ವ್ಯತಿರಿಕ್ತ ಪರಿಸ್ಥಿತಿ ಕಳೆದ ಕೂಡಲೇ ಕೈಗಾರಿಕೆ ಉದ್ದಿಮೆಗಳಲ್ಲಿ ದೊಡ್ಡಮೊತ್ತದ ಹೂಡಿಕೆ ಮಾಡಬಹುದು. ಕೆಲ ಮೂಲಸೌಲಭ್ಯ ಮತ್ತು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ತನ್ನ ರಾಯಭಾರಿ ಕಚೇರಿಯಿಂದ ವಿವರಗಳನ್ನು ಈಗಾಗಲೇ ಪಡೆದುಕೊಂಡು, ಹಿಂದೆ ನನೆಗುದಿಗೆ ಬಿದ್ದಿದ್ದ ಪೊಕ್ಸೊ ಮತ್ತು ಹ್ಯುಂಡೈ ಸ್ಟೀಲ್ ಕಂಪನಿಗಳನ್ನು ಮತ್ತೊಮ್ಮೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಪುನರಾರಂಭಿಸಲುಬಹುದು.

ಜಪಾನ್ ತನ್ನ ಕೈಗಾರಿಕಾ ಅಗತ್ಯಗಳಿಗೆ ಚೀನಾದ ಮೇಲೆ ಸಾಕಷ್ಟು ಅವಲಂಬಿತವಾಗಿದೆ, 2020ರ ಜುಲೈನಲ್ಲಿ ನಡೆಯಬೇಕಿದ್ದ ಟೊಕಿಯೋ ಒಲಂಪಿಕ್ಸ್​ಗೆ ಅಪಾರ ಪ್ರಮಾಣದಲ್ಲಿ ಚೀನಾದ ಆಮದಿನ ಮೇಲೆ ಸಿದ್ಧತೆ ನಡೆಸಿತ್ತು. ಜನವರಿಯಲ್ಲಿ ಶುರುವಾದ ಕರೊನಾ ಹಾವಳಿ ಒಲಪಿಂಕ್ಸ್ ಅನ್ನು 2021ರ ಜುಲೈಗೆ ಮುಂದೂಡಿದೆ, ಇದು ಜಪಾನಿಗೆ ಬೇಸರದ ಸಂಗತಿ. ಈ ಹಿಂದೆಯೂ ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ (1940) ಟೊಕಿಯೊ ಒಲಂಪಿಕ್ಸ್ ನಡೆಯಲಿಲ್ಲ ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಆದ್ದರಿಂದ, ಚೀನಾದ ಅಧೀನದಿಂದ ಶಾಶ್ವತವಾಗಿ ಹೊರಬರುವುದೊಂದೇ ಜಪಾನ್​ಗೆ ಇರುವ ಪರ್ಯಾಯ ಮಾರ್ಗ. ಮೊದಲಿಗೆ ಚೀನಾದಲ್ಲಿ ನೆಲೆಸಿರುವ ತನ್ನ ಎಲ್ಲ ಕೈಗಾರಿಕಾ ಕಂಪನಿಗಳಿಗೆ ವಾಪಸ್ ಬರುವಂತೆ ಜಪಾನ್ ಸೂಚಿಸಿದ್ದು, ಈ ಉದ್ದೇಶಕ್ಕೆ 2 ಬಿಲಿಯನ್ ಡಾಲರ್ (-ಠಿ; 15,285 ಕೋಟಿ) ಮೊತ್ತವನ್ನು ಮೀಸಲಿಟ್ಟಿದೆ. ಭಾರತದಲ್ಲಿ ಜಪಾನಿನ ಒಟ್ಟು 1,441 ಕಂಪನಿಗಳಿವೆ, ಐದು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಜಪಾನಿನ 200 ಕಂಪನಿಗಳಿದ್ದವು, ಪ್ರಸಕ್ತ 540ಕ್ಕೆ ಏರಿಕೆ ಆಗಿವೆ. ಭಾರತ ಮತ್ತು ಜಪಾನಿನ ದ್ವಿಪಕ್ಷೀಯ ಸಂಬಂಧಗಳು ಅತ್ಯುತ್ತಮ ಮಟ್ಟದಲ್ಲಿರುವ ಈ ಸಮಯದಲ್ಲಿ ಚೀನಾದಿಂದ ವಲಸೆ ಹೋಗುತ್ತಿರುವ ಕಂಪನಿಗಳಿಗೆ ಹೂಡಿಕೆಗೆ ಭಾರತವು ಯೋಗ್ಯವಾದ ಸ್ಥಳವೆಂದು ಜಪಾನ್ ತನ್ನ ಉದ್ಯಮಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ.

ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳ ಮೂರನೆ ಎರಡು ಭಾಗದ ಅಗತ್ಯಗಳನ್ನು ಚೀನಾ ರಫ್ತು ಮಾಡುತ್ತದೆ. ಆದರೆ ಕರೊನಾ ಸೋಂಕು ಹಬ್ಬುವಿಕೆಗೆ ಚೀನಾ ನೇರ ಕಾರಣ ಎಂದು ಅವು ಆಕ್ರೋಶಗೊಂಡಿವೆ. ಅಮೆರಿಕ 2019 ಸೆಪ್ಟೆಂಬರ್​ನಿಂದ ಆಮದು-ರಫ್ತು ಸುಂಕದ ವಿವಾದದಲ್ಲಿ ತನ್ನ ದೇಶದ ಕಂಪನಿಗಳಿಗೆ ಚೀನಾದಿಂದ ಹೊರಬರಲು ಕರೆಕೊಟ್ಟಿತ್ತು. ಐರೋಪ್ಯ ಒಕ್ಕೂಟ ಗಮನ ಹರಿಸುವುದು ಉತ್ಪನ್ನಗಳ ಗುಣಮಟ್ಟದ ಮೇಲೆ; ಚೀನಾದ ಉತ್ಪನ್ನಗಳು ಕಳೆದ ಎರಡು ವರ್ಷಗಳಿಂದ ಗುಣಮಟ್ಟದೊಂದಿಗೆ ಆಮದಾಗುತ್ತಿದ್ದವು. ಆದರೆ ಕರೊನಾ ಸಮಯದಲ್ಲಿ ಕಳಪೆ ಗುಣಮಟ್ಟದ ಪಿಪಿಇ, ಟೆಸ್ಟ್ ಕಿಟ್​ಗಳು ಮತ್ತು ವೆಂಟಿಲೇಟರ್ ಸರಬರಾಜು ಮಾಡಿರುವುದರಿಂದ ತಮ್ಮ ದೇಶಗಳಲ್ಲಿ ಗಣನೀಯವಾಗಿ ಸೋಂಕು ಮತ್ತು ಸಾವನ್ನು ತಡೆಯಲಾಗಲಿಲ್ಲ ಎಂದು ಅವು ವ್ಯಗ್ರಗೊಂಡಿವೆ. ಚೀನಾದಲ್ಲಿ ಇರುವ ತಮ್ಮ ಹೂಡಿಕೆ ಕಂಪನಿಗಳನ್ನು ಹೊರತರುವ ಯೋಚನೆಯಲ್ಲಂತೂ ಖಂಡಿತ ಇವೆ. ಅಮೆರಿಕ ಮತ್ತು ಯುರೋಪ್ ಒಕ್ಕೂಟ ನಿರ್ಣಯಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳುವುದಿಲ್ಲ, ವಿಳಂಬವಾದರೂ ಸರಿಯಾದ ತೀರ್ವನಕ್ಕೆ ಬರಬಹುದು ಎಂಬ ನಂಬಿಕೆಯಿಟ್ಟು ಐರೋಪ್ಯ ದೇಶಗಳ ಹೂಡಿಕೆಯ ಮಾತುಕತೆಗೆ ಇದು ಸೂಕ್ತ ಸಮಯ, ರಾಯಭಾರಿ ಕಚೇರಿಗಳ ಮೂಲಕ ಈ ಪ್ರಯತ್ನ ತುರ್ತಾಗಿ ಆಗಬೇಕು.

ಭಾರತ, ಹೂಡಿಕೆಯನ್ನು ಆಕರ್ಷಿಸುವುದಕ್ಕೆ ಅರ್ಹತೆ ಮತ್ತು ಯೋಗ್ಯತೆಯ ವಿಷಯಕ್ಕೆ ಇಲ್ಲಿದೆ ವಿವರಗಳು.
  1. ನಮ್ಮ ಯುವ ಜನಸಂಖ್ಯೆಯ ಸಾಮರ್ಥ್ಯ ಅತ್ಯದ್ಭುತ.
  2. ಜಗತ್ತಿನ IT, ITES, Back office, BPO ಮತ್ತು KPO ಸೇವೆಗಳಿಗೆ ಭಾರತ ಹೆಸರಾಗಿದೆ.
  3. ಕೆಲಸಕ್ಕೆ ಸರಿಯಾದ ಕೌಶಲ, ಬೇಕಾದ ಗಾತ್ರ ಮತ್ತು ವೇಗ ನಮಗೆ ವರವಾಗಿದೆ, ಕಾರ್ವಿುಕರ/ಸಿಬ್ಬಂದಿಯ ಸಂಬಳ ತುಟ್ಟಿಯಿಲ್ಲ.
  4. ಶೇಕಡ 55ರಷ್ಟು ಜಾಗತಿಕ ಸೇವಾ ಸೌಲಭ್ಯ ಕಾರ್ಯವನ್ನು ನಾವು ನಿರ್ವಹಿಸುತ್ತಿದ್ದೇವೆ.
  5. ಪ್ರಪಂಚದಲ್ಲೇ ಮೂರನೆ ದೊಡ್ಡ ಹೊಸ ಉದ್ಯಮಗಳ ವ್ಯವಸ್ಥೆ ನಮ್ಮಲ್ಲಿದೆ.
  6. ಸಿಮೆಂಟ್, ಕಬ್ಬಿಣದ ಅದಿರು, ಕಲ್ಲಿದ್ದಲು, ಉಕ್ಕು ಮತ್ತು ಇನ್ನಿತರ ಕಚ್ಚಾವಸ್ತುಗಳ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದ್ದೇವೆ.
  7. ಪ್ರಪಂಚದ ಶೇಕಡ 75 ವಜ್ರವನ್ನು ಪರಿಷ್ಕರಿಸಿ ರಫ್ತು ಮಾಡುತ್ತೇವೆ.
  8. ವಾಹನಗಳ ಉತ್ಪಾದನೆಯಲ್ಲಿ ನಾಲ್ಕನೆಯ ದೊಡ್ಡ ರಾಷ್ಟ್ರ ನಮ್ಮದು.

ದ್ವಿಚಕ್ರವಾಹನ ಮತ್ತು ಟ್ರಾಕ್ಟ್​ರ್ ಉತ್ಪಾದನೆಯಲ್ಲಿ ನಂಬರ್ ಒನ್. ಸೇವಾಸೌಲಭ್ಯ ದೊಂದಿಗೆ ಉತ್ಪಾದನೆ ಸಾಮರ್ಥ್ಯದಲ್ಲಿ ಯಾವ ದೇಶಕ್ಕೇನೂ ಕಡಿಮೆಯಿಲ್ಲ.

ಹೂಡಿಕೆ ನಿಯಮಾವಳಿಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಾಟು ಮಾಡುವ ಕೆಲಸ ಆಗಬೇಕು, ಅಂತಾರಾಷ್ಟ್ರೀಯ ಹೂಡಿಕೆಯನ್ನು ಆಕರ್ಷಿಸುವುದು ಈಗಿನ ತುರ್ತ. ಈ ನಿಟ್ಟಿನಲ್ಲಿ ಈಗಷ್ಟೆ ಕ್ಷಿಪ್ರವಾಗಿ ತೆಗೆದುಕೊಂಡಿರುವ ವಿದೇಶಿ ನೇರ ಹೂಡಿಕೆ (Foreign Direct Investment) ತಿದ್ದುಪಡಿ ಸ್ವಾಗತಾರ್ಹ. ಸಂಕಟದ ಪರಿಸ್ಥಿತಿಯಲ್ಲಿ ಎದ್ದು ನಿಂತು ತನ್ನಲ್ಲಿರುವ ಶಕ್ತಿಯನ್ನು ಕ್ರೋಡೀಕರಿಸಿ ಮೊದಲ ಹೆಜ್ಜೆ ನಾವು ಇರಿಸಿ ಚೀನಾದಿಂದ ಹೊರಬರುತ್ತಿರುವ ರಾಷ್ಟ್ರಗಳನ್ನು ಬರಮಾಡಿಕೊಳ್ಳಬೇಕು.

ಪ್ರಧಾನಿ ನರೇಂದ್ರ ಮೋದಿ ಈವರೆಗೆ ಇತರ ದೇಶಗಳೊಂದಿಗೆ, ಜಾಗತಿಕ ನಾಯಕರೊಂದಿಗೆ ಬೆಸೆದಿರುವ ಬಾಂಧವ್ಯ ಉಪಯೋಗಿಸಿಕೊಳ್ಳಬೇಕಾಗಿರುವ ಸಂದರ್ಭ ಇದು. ಜಪಾನ್, ಅಮೆರಿಕ, ಐರೋಪ್ಯ ಒಕ್ಕೂಟ, ದಕ್ಷಿಣ ಕೊರಿಯಾ ಮುಂತಾದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತವನ್ನಲ್ಲದೆ ತಮ್ಮ ಹೂಡಿಕೆಗೆ ಮಲೇಷ್ಯಾ, ವಿಯಟ್ನಾಂ, ಥಾಯ್ಲ್ಯಾಂಡ್ ಮತ್ತು ಬಾಂಗ್ಲಾದೇಶವನ್ನು ಬದಲಿಯಾಗಿ ನೋಡುತ್ತಿವೆ. ಹೂಡಿಕೆಯ ಮಾತುಕತೆಗೆ ಮೊದಲ ಹೆಜ್ಜೆಯನ್ನು ಭಾರತವೇ ಇರಿಸಬೇಕು. ಚೀನಾದ ನಷ್ಟ ನಮಗೆ ಲಾಭವಾಗಲಿ ಎಂಬ ಆಶಯದೊಂದಿಗೆ ಮುನ್ನುಗ್ಗೋಣ. Intelligent Nations find opportunity in adversity!  ಪ್ರಯತ್ನವನ್ನೇ ಮಾಡದೆ ಅವಕಾಶವನ್ನು ಕಳೆದುಕೊಳ್ಳುವುದು ಮೂರ್ಖತನ.

(ಲೇಖಕರು ಲೆಕ್ಕಪರಿಶೋಧಕರು, ಹವ್ಯಾಸಿ ಬರಹಗಾರರು)