ಅಂಕಣ

ಸಂಪಾದಕೀಯ: ಹೆಚ್ಚುತ್ತಿರುವ ಡಿಜಿಟಲ್ ವಂಚನೆ

ಬಾಬುಪ್ರಸಾದ್​ ಮೋಡಿಸ್​

ಇತ್ತೀಚಿನ ದಿನಗಳಲ್ಲಿ ಮತ್ತೆ ಡಿಜಿಟಲ್ ವಂಚನೆ ಪ್ರಕರಣಗಳು ಹೆಚ್ಚಿರುವುದು ಮಾತ್ರವಲ್ಲದೆ, ಖ್ಯಾತನಾಮರನ್ನೇ ಗುರಿಯಾಗಿಸಿಕೊಂಡು ಈ ಬಗೆಯ ವಂಚನೆಗಳು ನಡೆಯುತ್ತಿರುವುದು ಹೊಸ ತಲೆನೋವು ಸೃಷ್ಟಿಸಿದೆ. ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿಯವರಿಗೆ ಸೈಬರ್ ವಂಚಕರು ಕರೆ ಮಾಡಿ, ಮೊಬೈಲ್ ಸಂಪರ್ಕ ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಅಲ್ಲದೆ, ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರ ಪತ್ನಿಗೆ ಡಿಜಿಟಲ್ ಅರೆಸ್ಟ್ ಮಾಡಿದ ವಂಚಕರು 14 ಲಕ್ಷ ರೂ. ದೋಚಿದ್ದರು. ಈ ಪ್ರಕರಣದಲ್ಲಿ ಸೈಬರ್ ಪೊಲೀಸರು 25 ದಿನಗಳಲ್ಲಿ ಹಣವನ್ನು ವಾಪಾಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಎಲ್ಲ ಪ್ರಕರಣಗಳು ಹೀಗೆ ಸುಖಾಂತ್ಯ ಕಾಣುವುದಿಲ್ಲ ಎಂಬುದು ಕಳವಳದ ವಿಚಾರ. ಅಪರಿಚಿತರಿಂದ ಅನಪೇಕ್ಷಿತ ಕರೆಗಳು ಬರುವುದು, ಪೊಲೀಸರ ವೇಷದ ದುಷ್ಕರ್ವಿುಗಳ ಬ್ಲ್ಯಾಕ್​ವೆುೕಲ್​ಗೆ ಹೆದರಿ ಜನರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುವುದು ನಡೆದೇ ಇದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬೆಳವಣಿಗೆಯ ಬಗ್ಗೆ ಹಿಗ್ಗುತ್ತಿರುವಾಗಲೇ ಇದು ಸೃಷ್ಟಿಸಿರುವ ಅಡ್ಡ ಪರಿಣಾಮಗಳನ್ನು ಎದುರಿಸಲು ಸನ್ನದ್ಧತೆಯ ಕೊರತೆ ಸ್ಪಷ್ಟವಾಗಿ ಕಂಡುಬರುತ್ತಿದೆ. ವಂಚಕರು ಯಾವುದೋ ದೇಶದಲ್ಲಿ ಕುಳಿತು ಕೃತ್ಯ ನಡೆಸುವುದರಿಂದ ಇಂಥ ಪ್ರಕರಣಗಳ ತನಿಖೆಯಲ್ಲಿ ಪೊಲೀಸರೂ ಕೈಚೆಲ್ಲುತ್ತಿರುವುದು ವಿಪರ್ಯಾಸ. ಈ ಬಗ್ಗೆ ಪೊಲೀಸ್ ಇಲಾಖೆ ತುರ್ತು ಗಮನ ಹರಿಸಬೇಕಾಗಿದೆ.

ದುರುಳರ ಬಂಧನಕ್ಕೆ ಬಲೆ ಬೀಸುವುದು ಮಾತ್ರವಲ್ಲದೆ, ಮತ್ತಷ್ಟು ಅಮಾಯಕರು ಇದಕ್ಕೆ ಬಲಿಯಾಗದಂತೆ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಅವಶ್ಯಕ ಕ್ರಮ ಕೈಗೊಳ್ಳಬೇಕಾಗಿದೆ. ಅಪರಿಚಿತರಿಂದ, ವಂಚಕರಿಂದ ಇಂಥ ಬೆದರಿಕೆ ಕರೆಗಳು ಬಂದಾಗ ಜನರು ಕೂಡ ಆತಂಕಕ್ಕೆ ಒಳಗಾಗದೆ, ಮಾಹಿತಿಯನ್ನು ಪರಾಮಶಿಸಬೇಕು. ಬಲವಂತವಾಗಿ ಅಥವಾ ಒತ್ತಡದಲ್ಲಿ ಹಣವನ್ನು ವರ್ಗಾಯಿಸಬಾರದು. ಅಪರಾಧ ಪ್ರಕರಣದ ಬಗ್ಗೆ ತನಿಖೆ ಮಾಡುವಾಗ ಯಾವುದೇ ಕಾನೂನು ಜಾರಿ ಅಧಿಕಾರಿ ಹಣವನ್ನು ವರ್ಗಾಯಿಸಲು ಅಥವಾ ಠೇವಣಿ ಮಾಡಲು ಕೇಳುವುದಿಲ್ಲ ಎಂಬ ಸಾಮಾನ್ಯ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು.

ಬ್ಯಾಂಕ್​ಗಳು ಮೊಬೈಲ್ ಫೋನ್​ಗಳ ಮೂಲಕ ಕೆವೈಸಿ ಅಥವಾ ವೈಯಕ್ತಿಕ ಮಾಹಿತಿಯನ್ನು ಪಡೆಯುವುದಿಲ್ಲ. ಯಾವುದೇ ಡಿಜಿಟಲ್ ವಂಚನೆಯಾದಾಗ ಸೈಬರ್ ಕ್ರೖೆಮ್ ವಿಭಾಗದ ಸಹಾಯವಾಣಿ (1930) ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಬೇಕು. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರ ವಹಿಸಬೇಕು. ವೈಯಕ್ತಿಕ ವಿವರಗಳು, ಫೋಟೋಗಳು ಮತ್ತು ವಿಡಿಯೋಗಳಿಗೆ ಸಾರ್ವಜನಿಕ ಪ್ರವೇಶವನ್ನು ತಡೆಯಲು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಗೌಪ್ಯತೆಯ ಸೆಟ್ಟಿಂಗ್​ಗಳನ್ನು ಸಕ್ರಿಯಗೊಳಿಸುವುದು ಅಗತ್ಯ. ಅದೇನಿದ್ದರೂ, ಈ ಹೊಸ ಮತ್ತು ಘಾತಕ ಸವಾಲಿನ ವಿರುದ್ಧ ಹೋರಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದು.