ಅಂಕಣ

ಮನೆಸಾಲ ದರದಲ್ಲಿ ಹೆಚ್ಚಳ, ರಿಯಲ್ ಎಸ್ಟೇಟ್ ತಳಮಳ

| ಪ್ರದೀಪ ರಾಯ್ಕರ್

ಅಧಿಕ ಹಣದುಬ್ಬರ ಹತೋಟಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡಿರುವ ರೆಪೊ ದರದಲ್ಲಿ ಹೆಚ್ಚಳದ ನಿರ್ಧಾರ ಗೃಹ ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ರೆಪೊ ರೇಟ್ ಹೆಚ್ಚಳದಿಂದ ಮುಂದಿನ ದಿನಗಳಲ್ಲಿ ಸಾಲಗಳು ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ತಳ್ಳಿಹಾಕಲು ಆಗುವುದಿಲ್ಲ.

ಕಳೆದ ಸೆಪ್ಟೆಂಬರ್ 30ರಂದು ರೆಪೊ ದರದಲ್ಲಿ 50 ಮೂಲ ಅಂಶಗಳ ಹೆಚ್ಚಳವನ್ನು ಘೊಷಿಸಲಾಯಿತು. ರೆಪೊ ರೇಟ್ ಹೆಚ್ಚಳದಿಂದ ಗೃಹ ಸಾಲದ ದರಗಳು ಸದ್ಯಕ್ಕೆ ಹೆಚ್ಚಾಗದಿದ್ದರೂ ಜನಸಮಾನ್ಯರ ಮನೆ ಖರೀದಿಸುವ ಶಕ್ತಿಯ ಮೇಲೆ ಪರಿಣಾಮ ಉಂಟಾಗಲಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಹಣದುಬ್ಬರದಿಂದಾಗಿ ಗೃಹ ಖರೀದಿಯ ಸಾಲದ ಖರ್ಚು-ವೆಚ್ಚ ಸಾಕಷ್ಟು ಹೆಚ್ಚಾಗಿವೆ. ಮುಂದಿನ ದಿನಗಳಲ್ಲಿ ಮನೆ ಖರೀದಿದಾರರಿಗೆ ಮಾಸಿಕ ಕಂತುಗಳಲ್ಲಿ ಹೆಚ್ಚಳವಾಗಲಿದ್ದು, ಆ ಮೂಲಕ ಗೃಹ ಮಾರಾಟದ ಮೇಲೂ ತನ್ನ ಪರಿಣಾಮ ತೋರಿಸಲಿದೆ.

ಗೃಹ ಖರೀದಿಯ ಸಾಲದ ಖರ್ಚು-ವೆಚ್ಚಗಳಲ್ಲಿ ಆಗಿರುವ ಹೆಚ್ಚಳದಿಂದ ಮನೆಗಳ ಬೇಡಿಕೆಯಲ್ಲಿ ಈಗಾಗಲೆ ಕುಸಿತ ಉಂಟಾಗಿದೆ. ಹಿಂದಿನ ದಿನಗಳ ಹೋಲಿಕೆಯಲ್ಲಿ ಮನೆಸಾಲ ಪಡೆಯಲು ಜನಸಾಮಾನ್ಯರು ಈಗ ಹೆಚ್ಚಿನ ಹೊರೆ ಹೊರುವ ಅನಿವಾರ್ಯತೆ ಉಂಟಾಗಿದೆ. ಇದರಿಂದಾಗಿ ಕೆಲ ತಿಂಗಳಿನಿಂದ ಮನೆಗಳ ದರಗಳಲ್ಲಿ ಅಲ್ಪ ಇಳಿಕೆ ಗಮನಿಸಬಹುದಾಗಿದೆ ಎಂದು ಕ್ರೆಡೈ ವರದಿಯಲ್ಲಿ ಹೇಳಲಾಗಿದೆ. ಆದರೂ, ಕಳೆದ ವರ್ಷಕ್ಕೆ ಹೋಲಿಸಿದಾಗ ಗೃಹ ಖರೀದಿ ದರಗಳು ತುಸು ಹೆಚ್ಚೇ ಇದೆ. ದರಗಳಲ್ಲಿ ಆಗುತ್ತಿರುವ ಬದಲಾವಣೆಗಳು ಮನೆಗಳ ಖರೀದಿ ದರದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಬೇಕು ಹಾಗೂ ಮನೆ ಬಾಡಿಗೆ ಹಾಗೂ ಇನ್ನಿತರ ಮೂಲ ಸಂಗತಿಗಳನ್ನು ಸರಿದಾರಿಗೆ ತಂದರೆ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಧನಾತ್ಮಕ ಪರಿಣಾಮ ಉಂಟಾಗಬಹುದು ಎಂಬುದು ನನ್ನ ಅನಿಸಿಕೆ. ದೀರ್ಘಾವಧಿಯಲ್ಲಿ ಬೇಡಿಕೆ ಹಾಗೂ ಪೂರೈಕೆ ಮಧ್ಯೆ ಸಮರ್ಪಕ ಹೊಂದಾಣಿಕೆ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಇದರಿಂದ ಜನಸಾಮಾನ್ಯರಿಗೆ ಹೊರೆ ಎನಿಸದ ರೀತಿಯಲ್ಲಿ ಮನೆಗಳ ಹೆಚ್ಚಾಗಿ ರಿಯಲ್ ಎಸ್ಟೇಟ್ ಉದ್ಯಮದ ಅಭಿವೃದ್ಧಿಯೂ ಆಗಲು ಸಾಧ್ಯ.

ಆದರೆ, ಕಳೆದ ಕೆಲವು ವರ್ಷಗಳಲ್ಲಿ ಬೇಡಿಕೆ ಹಾಗೂ ವಸತಿ ದಾಸ್ತಾನುಗಳ ಮಧ್ಯೆ ಸೂಕ್ತ ಸಮತೋಲನ ಕಾಯ್ದುಕೊಳ್ಳುವುದು ಪ್ರಮುಖ ಗುರಿಯಾಗಿತ್ತು. ಆದರೆ, ಕಟ್ಟಡ ನಿರ್ವಣದ ಅವಧಿ, ‘ರೇಟ್ ಲಾಕ್’ ಮುಂತಾದ ಕಾರಣಗಳಿಂದ ಇದು ಸಾಧ್ಯವಾಗಿರಲಿಲ್ಲ. ವ್ಯಾಪಾರದ ದೃಷ್ಟಿಕೋನದಿಂದ ನೋಡಿದಾಗ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಮತೋಲನ ಮೂಡಿಸಿ, ಮರಳಿ ಅಭಿವೃದ್ಧಿಯ ಹಳಿಗೆ ತರಲು ಈ ಎಲ್ಲ ಬೆಳವಣಿಗೆಗಳು ಸಹಕಾರಿಯಾಗಿವೆ. ವರ್ಷಾರಂಭದಲ್ಲಿ ಗೃಹ ಸಾಲದ ದರಗಳು ಅತ್ಯಂತ ಕಡಿಮೆಯಾಗಿದ್ದರೂ, ಮನೆ ಖರೀದಿ ಮಾಡುವುದು ಅಷ್ಟೊಂದು ಸುಲಭ ಸಾಧ್ಯವಾಗಿರಲಿಲ್ಲ. ಈಗ ಗೃಹ ಸಾಲದ ಬಡ್ಡಿ ದರ ಮೊದಲ ಬಾರಿಗೆ ಶೇ. 8.65 ಅನ್ನು ಮೀರುವ ಸಾಧ್ಯತೆಯಿದೆ. ಇದು ಮನೆ ಖರೀದಿ ಮಾಡುವವರಿಗೆ ಆರಂಭದಲ್ಲಿಯೇ ಮತ್ತೊಮ್ಮೆ ಯೋಚನೆ ಮಾಡುವಂತೆ ಮಾಡಿದೆ. ಗೃಹ ಉದ್ಯಮ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡುವುದು ಬೇಡಿಕೆ. ಗೃಹ ಸಾಲ ನಮ್ಮ ಕೈಗೆಟುವುದೋ ಇಲ್ಲವೋ ಎಂಬ ದುಗುಡದಲ್ಲಿದ್ದಾರೆ. ಇನೊಂದೆಡೆ ಮನೆಗಳ ಬೆಲೆಯಲ್ಲಿ ಆಗುತ್ತಿರುವ ಏರಿಕೆ ಜನರನ್ನು ಕಂಗೆಡುವಂತೆ ಮಾಡಿದೆ. ಈ ಎಲ್ಲ ಹಿನ್ನೆಲೆಗಳಲ್ಲಿ ಗೃಹ ಸಾಲ ಸಮಂಜಸವಾಗಿರಬೇಕಿದೆ.

ಬಡ್ಡಿದರದಲ್ಲಿ ಏರಿಕೆ ಗೃಹ ಉದ್ಯಮದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಲಿದೆ. ಮಂದಗತಿಯ ಹಣದುಬ್ಬರದಿಂದ ಮನೆಗಳ ದರಗಳು ಕೈಗಟುಕದಂತಾಗಿ ಖರೀದಿದಾರರು ಹಿಂದೆಮುಂದೆ ನೋಡಬೇಕಾಗಬಹುದು. ಇದೇ ಮುಂದೆ ಆರ್ಥಿಕ ಹಿಂಜರಿತಕ್ಕೂ ಕಾರಣವಾದರೂ ಆಶ್ಚರ್ಯಪಡಬೇಕಿಲ್ಲ.

(ಲೇಖಕರು- ಕ್ರೆಡೈ ಕರ್ನಾಟಕ ನಿಯೋಜಿತ ಅಧ್ಯಕ್ಷ)