ನಾನು ಫೇಸ್ಬುಕ್, ಟ್ವಿಟರ್ ಮೊದಲಾದ ಜಾಲತಾಣಗಳನ್ನು ಬಳಸುವುದಿಲ್ಲ. ಅದರಿಂದಾಗಿ ಕೆಲವು ಉಪಯುಕ್ತ ಮಾಹಿತಿಗಳಿಂದ ವಂಚಿತನಾಗಿದ್ದೇನೆ ಎಂಬುದನ್ನು ಬಲ್ಲೆ. ಆದರೆ ಅಲ್ಲಿಯ ಅನಗತ್ಯ ಸಂಗತಿಗಳು ತಲೆ ಚಿಟ್ಟು ಹಿಡಿಸುತ್ತವೆ. ಮನಸ್ಸಿನ ಆರೋಗ್ಯವನ್ನು, ಧ್ಯಾನಶೀಲತೆಯನ್ನು ಕಾಪಾಡಿಕೊಳ್ಳಲು ಅದರಿಂದ ದೂರವಿರುವುದು ಒಳ್ಳೆಯದೇನೋ ಅನ್ನಿಸಿದೆ. ಇದನ್ನು ನನ್ನ ಕೆಲವು ಗೆಳೆಯರು ಒಪ್ಪುವುದಿಲ್ಲ. ಅದರಿಂದಾಗುವ ಪ್ರಯೋಜನಗಳನ್ನು ಅವರು ಪಟ್ಟಿ ಮಾಡಿ, ತಮ್ಮ ವಾದವನ್ನು ಸಮರ್ಥವಾಗಿಯೇ ಮಂಡಿಸುತ್ತಾರೆ. ಅವರ ವಾದದ ಜಾಣ್ಮೆಯನ್ನು ಮೆಚ್ಚಿಯೂ ಇವುಗಳಿಂದ ದೂರವೇ ಇದ್ದೇನೆ. ಆದರೆ ವಾಟ್ಸ್ಆಪ್ ಬಳಸುತ್ತೇನೆ. ಇದಕ್ಕೆ ಪ್ರಮುಖ ಕಾರಣ ಜಗತ್ತಿನ ಯಾವ ಭಾಗದಲ್ಲಿ ಇರುವವರನ್ನೂ ಸಂರ್ಪಸಲು ಇದು ಅತ್ಯುತ್ತಮ ಸಾಧನ. ಅಂತಾರಾಷ್ಟ್ರೀಯ ಕರೆ ದುಬಾರಿ. ಅಲ್ಲದೆ ಇದರಲ್ಲಿ ವಿಡಿಯೋ ಸೌಲಭ್ಯವೂ ಇದೆ. ದೂರದಲ್ಲಿರುವ ಕುಟುಂಬ ಸದಸ್ಯರ ಜೊತೆ ನಿಕಟ ಬಾಂಧವ್ಯ ಇಟ್ಟುಕೊಳ್ಳಲು, ಹತ್ತಿರವಿದ್ದರೂ ದೂರವಾಗುತ್ತಿರುವ ನಮ್ಮ ಸಾಮಾಜಿಕ ಸಂದರ್ಭದಲ್ಲಿ ದೂರದಲ್ಲಿದ್ದೂ ಹತ್ತಿರವಾಗಲು ಇದರಿಂದ ಸಾಧ್ಯವಾಗಿದೆ.
ಆದರೆ ಇಲ್ಲಿಯೂ ಅಪಾಯಗಳಿವೆ. ಕೆಲವರು ತಮಗೆ ಬಂದ ಅನೇಕ ಮೆಸೇಜ್ಗಳನ್ನು ಅಗತ್ಯವಿರಲಿ, ಇಲ್ಲದಿರಲಿ ನಮಗೂ ಫಾರ್ವರ್ಡ್ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಗುಂಪುಗಳನ್ನು ಮಾಡಿಕೊಂಡು ಆ ಗುಂಪಿಗೆ ನಮ್ಮನ್ನೂ ಸೇರಿಸಿಬಿಡುತ್ತಾರೆ. ಸ್ವಲ್ಪ ದಿನಗಳು ಅಲ್ಲಿದ್ದು, ಅದರ ಉದ್ದೇಶ ಸ್ಪಷ್ಟವಾಗುತ್ತಿದ್ದಂತೆ ಅಲ್ಲಿಂದ ದೂರವಾಗುವಷ್ಟರ ಹೊತ್ತಿಗೆ ಇನ್ನೊಂದು ಗುಂಪು ರೂಪುಗೊಂಡು ಅದರಲ್ಲಿ ನಮ್ಮನ್ನು ಸೇರಿಸಿರುತ್ತಾರೆ. ಮನುಷ್ಯ ಸಹಜ ಕುತೂಹಲದಿಂದಲೇ ಹೀಗೆ ಯಾವುದಾದರೂ ಗುಂಪಿನ ಜೊತೆ ನಾವು ಸಂಪರ್ಕವಿರಿಸಿಕೊಂಡು ಗೊಣಗಾಡುತ್ತಲೇ ಪ್ರತಿಕ್ರಿಯಿಸುತ್ತಿರುತ್ತೇವೆ. ಅಲ್ಲಿ ಕೆಲವು ಉಪಯುಕ್ತ ಮಾಹಿತಿಗಳಿದ್ದರೂ ಬೇಡದ್ದನ್ನು ಗಮನಿಸಿ ಡಿಲೀಟ್ ಮಾಡುವುದರಲ್ಲೇ ಬಹಳಷ್ಟು ಸಮಯ ವ್ಯರ್ಥವಾಗುತ್ತದೆ. ಕೆಲವೊಮ್ಮೆ ನಮ್ಮ ತುತ್ತೂರಿ ಊದಿಕೊಳ್ಳಲೂ ಇದು ನೆರವಾಗುತ್ತದೆ, ಹಾಗೆಯೇ ಬೇರೆಯವರ ತುತ್ತೂರಿಯ ದನಿಯನ್ನೂ ಕೇಳಿಸಿಕೊಳ್ಳುವುದು ಅನಿವಾರ್ಯ ಸೌಜನ್ಯ.
ಇತ್ತೀಚೆಗೆ ನನ್ನ ವಾಟ್ಸ್ಆಪ್ಗೆ ಹಿರಿಯ ಸಾಹಿತಿ ಗೆಳೆಯರೊಬ್ಬರು ಅಲ್ಲಮನದೆಂದು ಈ ವಚನ ಕಳಿಸಿದರು. ‘ಕಂಡು ಕಂಡುದನೆಲ್ಲವ ಕೊಂಡು/ ಅಟ್ಟಹಾಸದಿ ಮೆರೆವ ಜನಕೆ/ ಕಾಣದ ಜೀವಿಯು ಬಂದು/ ತಲ್ಲಣಿಸುವುದು ಜಗವು ನೋಡಾ ಗುಹೇಶ್ವರ’. ಹನ್ನೆರಡನೆಯ ಶತಮಾನದಲ್ಲಿ ಅಲ್ಲಮ ಹೇಳಿದ ಈ ವಚನ ಇಂದು ಎಷ್ಟು ಪ್ರಸ್ತುತ ಅನ್ನಿಸಿ, ನನ್ನ ಕಳೆದ ‘ಸಾಮಯಿಕ’ ಅಂಕಣ ‘ಧರೆ ಹತ್ತಿ ಉರಿದೊಡೆ ನಿಲಬಹುದೆ?’ (ಮಾರ್ಚ್ 29 ) ಲೇಖನವನ್ನು ಈ ವಚನ ಉಲ್ಲೇಖಿಸಿ ಬರೆದೆ. ನಾನು ಈ ವಚನ ಅಲ್ಲಮನದು ಹೌದೇ ಅಲ್ಲವೇ ಎಂದು ಪರಾಮಶಿಸಿ ಉಲ್ಲೇಖಿಸಬೇಕಿತ್ತು; ಅದರ ಮೂಲವನ್ನು ಸೂಚಿಸಬೇಕಿತ್ತು. ಆದರೆ ಇದನ್ನು ಕಳಿಸಿದ ಗೆಳೆಯರು ನಮ್ಮ ಪ್ರಮುಖ ಲೇಖಕರಾದ್ದರಿಂದ ನಾನು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ಸಾಹದಿಂದ ಉಲ್ಲೇಖ ಮಾಡಿದೆ. ಇದು ನಾನು ಮಾಡಿದ ತಪ್ಪು. ಯಾರು ಎಷ್ಟೇ ದೊಡ್ಡವರಾದರೂ ನಾವು ಪರಿಶೀಲಿಸದೆ ಅವರ ಮಾತುಗಳನ್ನು ಇದ್ದಕ್ಕಿದ್ದಂತೆ ಸ್ವೀಕರಿಸಬಾರದು. ಲೇಖನ ಪ್ರಕಟವಾದ ಕೆಲ ಕ್ಷಣಗಳಲ್ಲಿಯೇ ಅನೇಕ ಸಹೃದಯ ಓದುಗರು ಇದು ಅಲ್ಲಮನ ವಚನವಲ್ಲ ಎಂದು ನನಗೆ ತಿಳಿಸಿದರು, ಮಾತ್ರವಲ್ಲ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿರುವುದನ್ನೂ ಗಮನಕ್ಕೆ ತಂದರು. ನಾನು ಸಾಮಾಜಿಕ ಜಾಲತಾಣಗಳನ್ನು ಗಮನಿಸುವುದಿಲ್ಲವಾದ್ದರಿಂದ ಈ ಚರ್ಚೆ ಗಮನಕ್ಕೆ ಬಂದಿರಲಿಲ್ಲ.
ವಾಸ್ತವವಾಗಿ ಈ ವಚನ ಅಲ್ಲಮನದಲ್ಲ. ಯಾರೋ ಇತ್ತೀಚೆಗೆ ಅಲ್ಲಮನ ಹೆಸರಿನಲ್ಲಿ ರಚಿಸಿ ಪ್ರಚಾರ ಮಾಡಿರುವಂಥದು. ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಓ.ಎಲ್. ನಾಗಭೂಷಣಸ್ವಾಮಿ ಇದರ ಬಗ್ಗೆ ನನ್ನ ಜೊತೆ ಮಾತನಾಡುತ್ತ-‘ಜೀವಿ ಎಂಬ ಮಾತನ್ನು ಸೂಕ್ಷ್ಮಾಣುಜೀವಿ ಎಂಬ ಅರ್ಥದಲ್ಲಿ ಅಲ್ಲಮನ ಕಾಲದಲ್ಲಿ ಬಳಸುತ್ತಿರಲಿಲ್ಲ. ಅದು ಆಧುನಿಕ ವಿಜ್ಞಾನ ನಮಗೆ ಪರಿಚಯವಾದ ಮೇಲೆ ಬಂದ ಅರ್ಥ. ಪುಣ್ಯಜೀವಿ, ಕರ್ಮಜೀವಿ ಎಂಬ ಬಳಕೆ ವಚನಗಳಲ್ಲಿದೆ. ಸಿದ್ಧರಾಮನ ಒಂದು ವಚನ ಬಿಟ್ಟರೆ ಅಲ್ಲಮನೂ ಸೇರಿದಂತೆ ‘ಜೀವಿ’ ಎಂಬ ಪದವನ್ನು ಬೇರೆ ಯಾರೂ ಪ್ರತ್ಯೇಕವಾಗಿ ಬಳಸಿಲ್ಲ. ಹಾಗೆಯೇ ‘ಕೊಂಡು’ ಎಂಬ ಮಾತನ್ನು ಖರೀದಿಸು ಎಂಬ ಅರ್ಥದಲ್ಲಿ ವಚನಗಳಲ್ಲಿ ಬಳಕೆಯಾಗಿರುವುದು ನೆನಪಿಲ್ಲ. ಅಟ್ಟಹಾಸ ಎಂಬ ಪದವನ್ನೂ ಅಲ್ಲಮ ಬಳಸಿದಂತಿಲ್ಲ. ಇದುವರೆಗೆ ಯಾವ ಸಂಪಾದಕರೂ ಈ ವಚನವನ್ನು ಅಲ್ಲಮನ ಹೆಚ್ಚಿನ ವಚನವಾಗಿಯೂ ಉಲ್ಲೇಖಿಸಿಲ್ಲ’ ಎಂದು ಹೇಳಿ, ನನ್ನನ್ನು ತಿದ್ದಿದರು. ಇದು ನಿಜವಾದ ವಿದ್ವಾಂಸರ ರೀತಿ. ಮಂಜುನಾಥ ಕೊಳ್ಳೇಗಾಲ ಅವರು, ‘ಈ ವಚನ ಅಲ್ಲಮನದಲ್ಲ, ಆದರೆ ಇದಕ್ಕೆ ಸ್ಪೂರ್ತಿ ನೀಡಿರಬಹುದಾದ ಅಲ್ಲಮನ ವಚನ ಹೀಗಿದೆ’ ಎಂದು ‘ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದೆನೆಂದಡೆ/ ಸಿಕ್ಕದೆಂಬ ಬಳಲಿಕೆಯ ನೋಡಾ/ ಕಂಡುದನೆ ಕಂಡು ಗುರುಪಾದವಿಡಿದಲ್ಲಿ/ ಕಾಣಬಾರದುದ ಕಾಣಬಹುದು’ (ಅಲ್ಲಮದೇವರ ವಚನ ಸಂಪುಟ, ಸಂ. ಬಿ.ವ್ಹಿ. ಮಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 1993, ವಚನ ಸಂಖ್ಯೆ 51) ಎಂಬ ವಚನವನ್ನು ಸೂಚಿಸಿ, ಅತ್ತ ನನ್ನ ಗಮನ ಸೆಳೆದರು. ದಿಲೀಪ ಚಾಮರಾಜನಗರ ಅವರು ನನ್ನೊಡನೆ ರ್ಚಚಿಸುತ್ತ, ‘ನಿಮ್ಮ ಬರವಣಿಗೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ, ನೀವು ಹೀಗೆ ಅಲ್ಲಮನದಲ್ಲದ ವಚನವನ್ನು ಅಲ್ಲಮನದೆಂದು ಉಲ್ಲೇಖಿಸಿದರೆ ಬಹಳಷ್ಟು ಜನ ಮುಂದೆ ಅದು ಅಲ್ಲಮನದೆಂದೇ ಭಾವಿಸುವ ಸಾಧ್ಯತೆಯಿದೆ’ ಎಂದು ಆತಂಕ ವ್ಯಕ್ತಪಡಿಸಿದರು. ದಿಲೀಪರ ಆತಂಕ ನನ್ನನ್ನು ಗಂಭೀರವಾದ ಚಿಂತನೆಗೆ ಹಚ್ಚಿತು. ಇದು ನಮ್ಮ ಮಾತು ಹಾಗೂ ಬರವಣಿಗೆಯ ವಿಶ್ವಾಸಾರ್ಹತೆಯ ಪ್ರಶ್ನೆ. ನಮ್ಮ ಮಾತಿನ ಬಗ್ಗೆ ನಮಗೆ ಎಚ್ಚರ ಇರಬೇಕು. ಅದರಲ್ಲೂ ಯಾರನ್ನಾದರೂ ಉಲ್ಲೇಖಿಸುವಾಗ ಅದರ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಬೇಕು. ನಮ್ಮ ಹಿರಿಯ ವಿದ್ವಾಂಸರ ಬರವಣಿಗೆಯಲ್ಲಿ ಕೆಲವೊಮ್ಮೆ ಲೇಖನಕ್ಕಿಂತ ಅಡಿಟಿಪ್ಪಣಿಗಳೇ ಜಾಸ್ತಿ ಇರುವುದನ್ನು ನಾವು ಗಮನಿಸಬೇಕು. ಅದರರ್ಥ ಮೂಲವನ್ನು ಅವರು ಸೂಚಿಸಿಯೇ ಉಲ್ಲೇಖಿಸುತ್ತಿದ್ದರು. ಅವರು ಏನೇ ಹೇಳಿದರೂ ಆಧಾರಸಹಿತವಾಗಿ ಹೇಳುತ್ತಿದ್ದರು. ಒಂದು ಪದವನ್ನು ಬಳಸುವಾಗಲೂ ಎಚ್ಚರವಿರುತ್ತಿತ್ತು. ಮಾತಿಗೆ ಘನತೆ ಬರುವುದು ಹೀಗೆ. ಆದ್ದರಿಂದಲೇ ಬಸವಣ್ಣ ಹೇಳುತ್ತಾನೆ-‘ನುಡಿದರೆ ಮುತ್ತಿನ ಹಾರದಂತಿರಬೇಕು/ ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು/ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು/ ನುಡಿದರೆ ಲಿಂಗ ಮೆಚ್ಚಿ ‘ಅಹುದಹುದೆ’ನಬೇಕು/ ನುಡಿಯೊಳಗಾಗಿ ನಡೆಯದಿದ್ದರೆ/ಕೂಡಲಸಂಗಮದೇವನೆಂತೊಲಿವನಯ್ಯಾ’ (ವಚನ ಕಮ್ಮಟ, ಸಂ. ಕೆ.ಮರುಳಸಿದ್ದಪ್ಪ, ಕಿ.ರಂ. ನಾಗರಾಜ, ವಚನ ಸಂಖ್ಯೆ 11). ಇದಕ್ಕೆ ವಿವರಣೆ ಬೇಕಿಲ್ಲ. ‘ವಚನ’ ಎಂಬ ಪರಿಭಾಷೆಯೇ ಮಾತಿಗಿರುವ ಪ್ರಮಾಣವನ್ನು ಸೂಚಿಸುತ್ತದೆ. ಭಾಷೆ, ವಚನ, ಮಾತು-ಇವುಗಳೆಲ್ಲ ನಮ್ಮ ಜನಪದರಲ್ಲಿ ಕೇವಲ ಸಂವಹನ ಸಾಧ್ಯತೆಯನ್ನು ಸೂಚಿಸುವ ಪದಗಳಲ್ಲ. ‘ಮಾತು ಕೊಡು’, ‘ಭಾಷೆ ಕೊಡು’ ಎಂದು ಹೇಳುವಾಗ ಅದು ಪ್ರಮಾಣ ಎಂಬ ಅರ್ಥದಲ್ಲಿಯೇ ಬಳಕೆಯಾಗುತ್ತಿರುವುದನ್ನು ಗಮನಿಸಬಹುದು.
ಇತ್ತೀಚೆಗಂತೂ ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳು ನಿರಂತರ ಹರಿದಾಡುತ್ತಿವೆ. ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದೇ ಕಷ್ಟಸಾಧ್ಯವಾಗಿದೆ. ನಂಬುವಂತಿಲ್ಲ, ನಂಬದೇ ಇರುವಂತಿಲ್ಲ ಎಂಬ ಗೊಂದಲದ ಸ್ಥಿತಿ. ಕರೊನಾ ವೈರಸ್ಗಿಂತಲೂ ವೇಗವಾಗಿ ಈ ‘ಸುದ್ದಿ’ಗಳು ಹರಡುತ್ತಿವೆ. ನನಗೆ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ‘ಸುಳಿ’ ಸಂಕಲನದಲ್ಲಿರುವ ‘ಸುದ್ದವ್ವ’ ಕವಿತೆ ನೆನಪಾಗುತ್ತಿದೆ. ಸುದ್ದಿ ಹುಟ್ಟುವ ಬಗೆ, ಅದು ಬೆಳೆಯುವ ಪರಿ, ಕಡೆಗೆ ನಾವು ಎಷ್ಟೇ ಪ್ರಜ್ಞಾಪೂರ್ವಕವಾಗಿ ನಿರಾಕರಿಸಿ ಧಿಕ್ಕರಿಸಿದರೂ ನಮ್ಮ ಒಳಗೂ ಹೊಕ್ಕುಬಿಡುವ ಪವಾಡ ಈ ಎಲ್ಲವನ್ನೂ ಅವರು ಅಲ್ಲಿ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. ಹಾಗೆ ನೋಡಿದರೆ ಎಲ್ಲರೂ ‘ಸುದ್ದಿ’ಗಳ ಬಗ್ಗೆ ಎಚ್ಚರಿಸುತ್ತಲೇ ಇರುತ್ತಾರೆ. ನಾವು ಸಹ ನಂಬಬಾರದು ಎಂಬ ಎಚ್ಚರದಲ್ಲಿಯೇ ಗೊತ್ತಿಲ್ಲದಂತೆಯೇ ಅದಕ್ಕೆ ವಶರಾಗಿರುತ್ತೇವೆ. ಯಾರು ಏನೇ ಹೇಳಿದರೂ ‘ಗಾಸಿಪ್’ಗೆ ಒಂದು ವಿಶೇಷ ಬಗೆಯ ರುಚಿಯಿದೆ. ಬೇಡ ಬೇಡವೆಂದರೂ ಮನಸ್ಸಿನ ರಸನೆ ಆ ರುಚಿಗೆ ಹಂಬಲಿಸುತ್ತದೆ. ಇದು ‘ಸುದ್ದಿ’ ಸೃಷ್ಟಿಸುವವರಿಗೂ ಚೆನ್ನಾಗಿ ಗೊತ್ತು. ಸಾರ್ವಜನಿಕ ಅಭಿಪ್ರಾಯ ರೂಪುಗೊಳ್ಳುವುದು ಸುದ್ದಿಗಳಿಂದಲೇ! ಹೀಗಾಗಿಯೇ ಎಲ್ಲರೂ ಕೈವಶ ಮಾಡಿಕೊಳ್ಳಬಯಸುವುದು ‘ಸುದ್ದಿಕೇಂದ್ರ’ಗಳನ್ನೇ! ಆದರೆ ಈ ಸುದ್ದಿಗಳ ವಿಶ್ವಾಸಾರ್ಹತೆ ಎಷ್ಟು ಎಂಬುದೇ ಪ್ರಶ್ನೆ. ಸಾಮಾಜಿಕ ಜವಾಬ್ದಾರಿಯಿರುವ ನಮ್ಮ ಸಮೂಹ ಮಾಧ್ಯಮಗಳಿಗಂತೂ ಇದು ಬಹು ದೊಡ್ಡ ಸವಾಲು.
‘ಮಗನೇ ಬುದ್ಧಿ ಕೈಯಲ್ಲಿರಲಿ/ಸುದ್ದಿಯ ಮುರಕಕ್ಕೆ ಮಾರು ಹೋದೀಯಾ!/ಒಲಿದು ನಕ್ಕಾಳು ಅದಕ್ಕೆ ಅರಳೀಯ/ ಉಕ್ಕುವ ಜವ್ವನಿಗರನ್ನ ಆ ವಿಷಹಲ್ಲಿನ ನಾಗಿಣಿ/ಅಪ್ಪಿ ಮುಕ್ಕುತ್ತಾಳೆ ಸಕ್ಕರೆಯೆನ್ನುವಂತೆ/ಮುತ್ತಿಡುವಾಗ ಮುಖದಲ್ಲಿ ಮೆಲ್ಲನೆ ಹಲ್ಲೂರುತ್ತಾಳೆ/ರಕ್ತದ ರುಚಿ ಹಿಡಿದು ಮೈಯ ಗುರುತು ಹಾಕುತ್ತಾಳೆ/ಹಲ್ಲೂರಿದ ಮೈಯಲ್ಲಿ ಗುಲ್ಲೊಂದು ಸೇರುತ್ತದೆ/ಮೈ ಬಿಡುವವರೆಗೆ ದೆವ್ವವಾಗಿ ಕಾಡುತ್ತದೆ’ (ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಸಮಗ್ರ ಕಾವ್ಯ ಸಂಪುಟ 1, ಪುಟ 44)
ಯಶವಂತ ಚಿತ್ತಾಲರ ‘ಕೇಂದ್ರ ವೃತ್ತಾಂತ’ ಕಾದಂಬರಿಯೂ ನಮಗೆ ‘ಸುದ್ದಿ’ಯ ವಿಶ್ವರೂಪ ದರ್ಶನ ಮಾಡಿಸುತ್ತದೆ. ‘ಸುದ್ದಿ’ ಈಗ ಒಂದು ‘ಉದ್ಯಮ’ವಾಗಿ ನಮ್ಮನ್ನು ತನ್ನ ಮೋಹಪಾಶದಲ್ಲಿ ಬಂಧಿಸಿರುವುದು ಮಾತ್ರವಲ್ಲ, ತನ್ನ ಸಂಮೋಹಕತೆಯಿಂದ ನಮ್ಮ ವಿವೇಕವನ್ನೇ ಕಸಿದುಕೊಳ್ಳುತ್ತಿದೆ. ನಮ್ಮ ಬದುಕಿನ ಎಲ್ಲ ವಲಯಗಳನ್ನು ಆಕ್ರಮಿಸಿ, ನಮ್ಮ ಗ್ರಹಿಕೆಯ ಕ್ರಮವನ್ನೇ ನಿಯಂತ್ರಿಸುತ್ತಿದೆ. ಸುದ್ದಿಯನ್ನು ಯಾಕೆ ಹಬ್ಬಿಸುತ್ತಾರೆ? ಸರಳವಾದ ಉತ್ತರ ಅದೊಂದು ಕುಚೋದ್ಯ. ಬೇರೆಯವರನ್ನು ಪೇಚಿಗೆ ಸಿಲುಕಿಸಿ, ಅವರ ತೊಳಲಾಟದಲ್ಲಿ ಸಂತೋಷಪಡುವ ಮನುಷ್ಯ ಸಹಜ ಸ್ವಭಾವ ಇದಕ್ಕೆ ಕಾರಣ. ಇದೊಂದು ರೀತಿ ಸ್ಯಾಡಿಸ್ಟ್ ಮನೋಭಾವವೂ ಹೌದು. ಆದರೆ ಈಗ ಅದಷ್ಟೇ ಅಲ್ಲ. ‘ಸುದ್ದಿ’ಯ ಸೃಷ್ಟಿಯಲ್ಲಿ ಒಂದು ಹಿಡನ್ ಅಜೆಂಡಾ ಇದೆ. ಇದೂ ಕಣ್ಣಿಗೆ ಕಾಣದ ವಿಷದ ವೈರಾಣು ಇದ್ದ ಹಾಗೆ. ನೆಮ್ಮದಿ, ಸೌಹಾರ್ದದಿಂದ ಬದುಕುತ್ತಿರುವ ಜನಮಾನಸದಲ್ಲಿ ವಿಷದ ಹನಿ ಹಿಂಡಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ಕೇಡಿಗರ ಹುನ್ನಾರವೂ ಇದರ ಹಿಂದಿರುವಂತೆ ಭಾಸವಾಗುತ್ತಿದೆ. ಹಿಂದೆ ಸಂವಹನ ಸುಲಭವಾಗಿರಲಿಲ್ಲ. ಮೇಲಿನ ಕೇರಿಯಿಂದ ಕೆಳಗಿನ ಕೇರಿಗೆ ಬರುವಷ್ಟರಲ್ಲಿ ಅದು ಮರೆಯಾಗಿಬಿಡುತ್ತಿತ್ತು. ಆದರೆ ಈಗ ಸಂವಹನ ಕ್ರಾಂತಿ ಆದನಂತರ ಸುದ್ದಿಯೊಂದು ಸೃಷ್ಟಿಯಾದ ಕ್ಷಣಾರ್ಧದಲ್ಲಿ ಜಗತ್ತನ್ನೇ ಆವರಿಸುವ ಶಕ್ತಿ ಪಡೆದಿದೆ. ‘ಸುದ್ದವ್ವ’ ಈಗ ವಿಶ್ವದಾದ್ಯಂತ ತನ್ನ ಪೈಶಾಚಿಕ ನರ್ತನ ನಡೆಸುತ್ತಿದ್ದಾಳೆ. ಇದರಿಂದ ಎಷ್ಟು ಮುಗ್ಧರ ಬದುಕು ನರಕಸದೃಶವಾಗುತ್ತದೆಯೋ!
ವ್ಯಕ್ತಿಗಳ ಚಾರಿತ್ರ್ಯಹನನದ ಸುದ್ದಿ, ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಸುದ್ದಿ, ಜನಾಂಗಗಳ ನಡುವೆ ಜಗಳ ತಂದಿಡುವ ಸುದ್ದಿ, ಮೌಢ್ಯತೆಯನ್ನು ಪ್ರತಿಪಾದಿಸುವ ಸುದ್ದಿ, ನೆಮ್ಮದಿಯ ಬದುಕಿಗೆ ಶಾಕ್ ನೀಡುವ ಸುದ್ದಿ ಹೀಗೇ... ಒಂದೇ, ಎರಡೇ! ಇಂತಹ ನೂರಾರು ಸುದ್ದಿಗಳು ನಮ್ಮ ಅಂಗೈಗೆ ರವಾನೆಯಾಗುತ್ತಲೇ ಇರುತ್ತವೆ. ಇವುಗಳ ಸತ್ಯಾಸತ್ಯತೆ ಎಷ್ಟು ಎಂಬುದೇ ಸಮಸ್ಯೆ. ಇಂತಹ ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕುವುದು ಕಷ್ಟ. ಎಲ್ಲ ಕಾಲದಲ್ಲಿಯೂ ಇಲ್ಲಸಲ್ಲದ ಕುಚೋದ್ಯ ಮಾಡಿ ವಿಕೃತ ಸಂತೋಷಪಡುವ ಇಂತಹ ಕಿಡಿಗೇಡಿಗಳು ಇದ್ದೇ ಇರುತ್ತಾರೆ. ನಮ್ಮ ಎಚ್ಚರದಲ್ಲಿ ನಾವಿರಬೇಕು ಅಷ್ಟೆ!
ಹೀಗಾಗಿ ಇಂದು ನಮಗೆ ಅತ್ಯಗತ್ಯ ಬೇಕಾಗಿರುವ ಮೌಲ್ಯ ‘ವಿಶ್ವಾಸಾರ್ಹತೆ’.