ಅಂಕಣ

ಸಂಪಾದಕೀಯ: ಮಹತ್ವದ ನಿರ್ಣಯಗಳು

ಬಾಬುಪ್ರಸಾದ್​ ಮೋಡಿಸ್​

ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಈಗ ನಡೆಯುತ್ತಿದ್ದು, ಅನೇಕ ಮಹತ್ವದ ಮಸೂದೆಗಳು ಸದನಗಳ ಅನುಮೋದನೆ ಪಡೆದುಕೊಂಡಿವೆ; ಇನ್ನು ಕೆಲವು ವಿಧೇಯಕಗಳು ಮಂಡನೆಯಾಗಿ ಚರ್ಚೆಯ ಹಂತದಲ್ಲಿವೆ. ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಅತ್ಯವಶ್ಯಕ ಸೇವೆಗಳ ನಿರ್ವಹಣಾ ವಿಧೇಯಕ, ಕರ್ನಾಟಕ ನಗರಪಾಲಿಕೆಗಳ ತಿದ್ದುಪಡಿ ವಿಧೇಯಕ, ಬಾಲ್ಯವಿವಾಹ ನಿಷೇಧ ಮಸೂದೆ ಮುಂತಾದವು ಇದರಲ್ಲಿ ಸೇರಿವೆ.

ಬೇರುಮಟ್ಟದಲ್ಲಿ ಸಹಕಾರಿ ರಂಗವು ವಿಸ್ತಾರವಾಗಿ ಬೆಳೆದಿದ್ದು, ರಾಜ್ಯದಲ್ಲಿ ಸುಮಾರು 45 ಸಾವಿರ ಸಹಕಾರಿ ಸಂಘಗಳಿವೆ. ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕವು ಹಲವು ಪ್ರಮುಖ ಅಂಶಗಳನ್ನು ಒಳಗೊಂಡು, ಈ ಕ್ಷೇತ್ರದ ಮೇಲೆ ವ್ಯಾಪಕ ಮತ್ತು ಆಳವಾದ ಪರಿಣಾಮಗಳನ್ನು ಉಂಟುಮಾಡಬಲ್ಲದ್ದಾಗಿದೆ. ಸಹಕಾರ ಸಂಘಗಳ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ, ಮೂವರು ಸದಸ್ಯರ ನಾಮನಿರ್ದೇಶನ, ಸಂಘದ ನಿರ್ದೇಶಕರ ಆಸ್ತಿ ವಿವರ ಸಲ್ಲಿಕೆ ಇತ್ಯಾದಿ ಅಂಶಗಳು ಈ ಮಸೂದೆಯಲ್ಲಿವೆ. 2024ರಲ್ಲಿ ರಾಜ್ಯಪಾಲರು ಸಹಕಾರ ಸಂಘಗಳ ಮಸೂದೆಯನ್ನು ವಾಪಸ್ ಕಳಿಸಿದ್ದರು.

ಈಗ ತಿದ್ದುಪಡಿ ರೂಪದಲ್ಲಿ ಶಾಸನಸಭೆಯಲ್ಲಿ ಅನುಮೋದನೆಗೊಂಡಿದೆ. ವಿಧಾನಸಭೆಯಲ್ಲಿ ಈ ಮಸೂದೆ ಮಂಡನೆಯಾದಾಗ ನಡೆದ ಚರ್ಚೆಯ ಸಂದರ್ಭದಲ್ಲಿ, ತಿದ್ದುಪಡಿ ವಿಧೇಯಕದಿಂದ ಸಹಕಾರ ಸಂಘಗಳು ದುರ್ಬಲವಾಗುತ್ತವೆ ಎಂಬ ಅಭಿಪ್ರಾಯವನ್ನು ಕೆಲ ಶಾಸಕರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದರ ಅನುಷ್ಠಾನದಲ್ಲಿ ಬದ್ಧತೆ ಹಾಗೂ ಎಚ್ಚರಿಕೆ ಬೇಕಾಗುತ್ತದೆ.

ಗಿಗ್ ಕಾರ್ವಿುಕರಿಗೆ ಸಾಮಾಜಿಕ ಭದ್ರತೆ, ನೆಮ್ಮದಿ ಖಾತ್ರಿಪಡಿಸುವ ಉದ್ದೇಶದ ‘ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ವಿುಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕ, 2025’ಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಇದಕ್ಕಾಗಿ ಗಿಗ್ ಕಾರ್ವಿುಕರ ಕಲ್ಯಾಣ ಮಂಡಳಿ ಸ್ಥಾಪಿಸಲಾಗುತ್ತದೆ. ಇದಕ್ಕೆ ಬೇಕಾದ ನಿಧಿಯನ್ನು ಶೇ.1ರಿಂದ 5 ಸೆಸ್ ವಿಧಿಸಿ ಸಂಗ್ರಹಿಸಲಾಗುತ್ತದೆ. ಈ ಕುರಿತು ನಿಯಮಗಳನ್ನು ರೂಪಿಸುವಾಗ ಮಂಡಳಿ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗಲಿದೆ ಎಂದು ಕಾರ್ವಿುಕ ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ. ರಾಜ್ಯದಲ್ಲಿ ಸದ್ಯಕ್ಕೆ ನಾಲ್ಕು ಲಕ್ಷ ಗಿಗ್ ಕಾರ್ವಿುಕರಿದ್ದಾರೆ.

ಈ ಉದ್ಯೋಗ ಈಚಿನ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಇಲ್ಲಿ ಕೆಲಸ ಮಾಡುವವರಿಗೆ ಭದ್ರತೆ ಒದಗಿಸುವ ಆಲೋಚನೆ ಸೂಕ್ತವಾದುದು. ಅದೇ ರೀತಿ, ಬಾಲ್ಯವಿವಾಹ ನಿಷೇಧ ಮಸೂದೆಗೂ ಅಂಗೀಕಾರ ದೊರೆತಿದೆ. ಈಗಾಗಲೇ ಬಾಲ್ಯವಿವಾಹ ನಿಷೇಧ ಕಾನೂನು ರಾಜ್ಯದಲ್ಲಿ ಇದ್ದರೂ, ಈ ಪಿಡುಗು ಮುಂದುವರಿದಿರುವುದರಿಂದಾಗಿ, ಕಡಿವಾಣ ಹಾಕಲೇಬೇಕೆಂಬ ನಿಟ್ಟಿನಲ್ಲಿ ಇನ್ನಷ್ಟು ಕಠಿಣ ನಿಬಂಧನೆಗಳನ್ನು ಸೇರಿಸಿ ತಿದ್ದುಪಡಿ ರೂಪದಲ್ಲಿ ತರಲಾಗಿದೆ. ಇದರನ್ವಯ, ಬಾಲ್ಯವಿವಾಹದ ನಿಶ್ಚಿತಾರ್ಥ ಮಾಡಿದರೂ ಶಿಕ್ಷೆ ಮತ್ತು ದಂಡದ ಕ್ರಮ ಕೈಗೊಳ್ಳಲಾಗುತ್ತದೆ.

ಕರ್ನಾಟಕ ದೇವದಾಸಿ (ಪ್ರತಿಬಂಧಕ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆಗೂ ಅನುಮೋದನೆ ಲಭಿಸಿದೆ. ಈ ಆಧುನಿಕ ಕಾಲದಲ್ಲೂ ಅಲ್ಲಲ್ಲಿ ಇರುವ ಸಾಮಾಜಿಕ ಅಪಸವ್ಯವೊಂದರ ನಿಮೂಲನೆ ನಿಟ್ಟಿನಲ್ಲಿ ಈ ಮಸೂದೆ ನೆರವಾಗಬಹುದೆಂದು ಆಶಿಸಬಹುದಾಗಿದೆ. ಇವೆಲ್ಲ ವಿಧೇಯಕಗಳು ರಾಜ್ಯಪಾಲರ ಅನುಮೋದನೆ ಪಡೆದ ತರುವಾಯ ಕಾಯ್ದೆಯಾಗಿ ಜಾರಿಗೆ ಬರಲಿವೆ. ಇವುಗಳ ಅನುಷ್ಠಾನ ಹೇಗಾಗುತ್ತದೆ ಎಂಬುದರ ಆಧಾರದ ಮೇಲೆ ಕ್ರಮೇಣ ಪರಿಣಾಮ ಗೋಚರಿಸುತ್ತದೆ.