ಅಮರತ್ವವೇ ಸನಾತನ ಧರ್ಮದ ಮೂಲ ಸಿದ್ಧಾಂತವಾಗಿದೆ. ಸನಾತನ ಧರ್ಮ ಅಥವಾ ಹಿಂದೂ ಧರ್ಮದ ಎಲ್ಲ ಆಚಾರ-ವಿಚಾರಗಳ ಗಮ್ಯವೂ ಅಮರತ್ವದ ಸಾಧನೆಯೇ ಆಗಿದ್ದು, ಅದಕ್ಕಾಗಿ ಇರುವ ಮಾರ್ಗವೆಂದರೆ ತ್ಯಾಗ.
ಸಂನ್ಯಾಸ ಸೂಕ್ತವು ಘೊಷಿಸಿರುವಂತೆ, ತ್ಯಾಗದ ಮೂಲಕ ಮಾತ್ರ ಅಮರತ್ವವು ಸಿದ್ಧಿಸುತ್ತದೆ:
ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವಮಾನಶುಃ |ಪರೇಣ ನಾಕಂ ನಿಹಿತಂ ಗುಹಾಯಾಂ ವಿಭ್ರಾಜತೇ ತದ್ಯತಯೋ ವಿಶಂತಿ ||
(ಕೈವಲ್ಯ ಉಪನಿಷತ್ತು 1.3)
‘ತ್ಯಾಗದಿಂದ ಮಾತ್ರ ಅಮೃತತ್ವವನ್ನು ಪಡೆಯಬಹುದು; ಕರ್ಮದಿಂದಲ್ಲ, ಸಂತತಿಯಿಂದಲ್ಲ ಅಥವಾ ಸಂಪತ್ತಿನಿಂದಲ್ಲ. ಸ್ವರ್ಗಕ್ಕಿಂತಲೂ ಮಿಗಿಲಾದ ಅಮರತ್ವವನ್ನು, ಆತ್ಮಸಂಯಮವನ್ನು ಸಾಧಿಸಿದ ತ್ಯಾಗಿಗಳು ತಮ್ಮ ಹೃದಯದಲ್ಲಿಯೇ ಬೆಳಗುತ್ತಿರುವ ಆತ್ಮನಲ್ಲೇ ಕಂಡುಕೊಳ್ಳುತ್ತಾರೆ’. ಮಾನವ ಜೀವನದ ಅಂತಿಮ ಗುರಿ ಅಮರತ್ವದ ಸಾಧನೆ. ಅದನ್ನು ಪರಮ ಅವಿನಾಶಿ ಆತ್ಮದ ಸಾಕ್ಷಾತ್ಕಾರದಿಂದ ಮಾತ್ರ ಪಡೆಯಬಹುದು. ಅದನ್ನು ಸಾಧಿಸುವ ಏಕೈಕ ಮಾರ್ಗವೆಂದರೆ ತ್ಯಾಗ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ತ್ಯಾಗ ಎಂದರೇನು? ನಮ್ಮ ದೇಶದ ಹಲವು ಭಾಗಗಳಲ್ಲಿ ಪ್ರಚಲಿತವಾಗಿರುವಂತೆ, ತ್ಯಾಗವೆಂದರೆ ಪಶುಬಲಿಯೆಂದು ಕೆಲವರು ತಿಳಿಯುತ್ತಾರೆ. ಅಂತೆಯೇ ಮತ್ತೆ ಕೆಲವರು ತ್ಯಾಗವೆಂದರೆ ದೇವ-ದೇವತೆಗಳನ್ನು ಒಲಿಸಿಕೊಳ್ಳಲು ಹೋಮ ಹವನಾದಿಗಳಲ್ಲಿ ಬೆಲೆಬಾಳುವ ಹಲವು ವಸ್ತುಗಳನ್ನು ಸಮರ್ಪಿಸುವುದು ಎಂದು ತಿಳಿಯುತ್ತಾರೆ. ಆದರೆ ಇಂತಹ ತ್ಯಾಗವು ನಮ್ಮನ್ನು ಅಮರತ್ವದೆಡೆಗೆ ಕೊಂಡೊಯ್ಯುತ್ತದೆಯೇ? ಈ ಕುರಿತಾಗಿ ನಾವು ಪರಿಶೀಲಿಸೋಣ.
ಕಠೋಪನಿಷತ್ತಿನಲ್ಲಿ ಕಂಡುಬರುವಂತೆ ವಾಜಶ್ರವಸ್ ಋಷಿಯು ಸರ್ವಜಿತ್ ಎಂಬ ಯಾಗವನ್ನು ಮಾಡಿದನು. ಆ ಯಾಗದ ನಿಯಮದ ಪ್ರಕಾರ, ತನ್ನಲ್ಲಿರುವ ಸರ್ವಸಂಪತ್ತನ್ನು ಸತ್ಪಾತ್ರರಿಗೆ ದಾನ ಮಾಡಬೇಕಾಗಿತ್ತು. ಅದರ ಬದಲಿಗೆ, ಅವನು ತನ್ನಲ್ಲಿದ್ದ ಪಶುಗಳ ಸಮೂಹದಿಂದ ಕೇವಲ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಹಸುಗಳನ್ನು ದಾನ ಮಾಡುತ್ತಿದ್ದನು. ಇದನ್ನು ಕಂಡು ನೊಂದುಕೊಂಡ ಅವನ ಹದಿಹರೆಯದ ಮಗ, ನಚಿಕೇತನು ಈ ಕುರಿತಾಗಿ ತನ್ನ ತಂದೆಯನ್ನು ಪ್ರಶ್ನಿಸಿದ. ಇದರಿಂದ ಕ್ರೋಧಭರಿತನಾದ ತಂದೆಯು ತನ್ನ ಮಗನನ್ನು ಯಮನಿಗೆ ದಾನ ಮಾಡಿದ. ಈ ಘಟನೆಯಿಂದಾಗಿ ಯಮದೇವನು ತನ್ನ ಬಳಿಗೆ ಬಂದ ನಚಿಕೇತನಿಗೆ ಕಠೋಪನಿಷತ್ತಿನ ಬೋಧನೆ ಮಾಡುವಂತಾಯಿತು.
ಮಹಾಭಾರತದಲ್ಲಿ ಯುಧಿಷ್ಠಿರನು ತನ್ನ ಚಕ್ರಾಧಿಪತ್ಯವನ್ನು ಸಾರಲು ಅಶ್ವಮೇಧವೆಂಬ ಮಹಾನ್ ಯಾಗವನ್ನು ಕೈಗೊಂಡನು. ಈ ಯಾಗದಲ್ಲಿ ಬಹು ಉದಾರವಾಗಿ ಅವನು ಪ್ರಜೆಗಳಿಗೆ ದಾನ ಮಾಡಿ, ಅಂತ್ಯದಲ್ಲಿ ಅಶ್ವವನ್ನು ಬಲಿಕೊಟ್ಟು ದೇವತೆಗಳಿಗೆ ಸಮರ್ಪಿಸಿದನು. ಭಾಗವತದಲ್ಲಿ ಭರತನೆಂಬ ರಾಜನು ಒಂದು ಜಿಂಕೆ ಮರಿಯ ವ್ಯಾಮೋಹದಿಂದಾಗಿ ಮುಂದಿನ ಜನ್ಮದಲ್ಲಿ ಮಹಾಮೂಢನಂತೆ ತೋರುವ ಜಡಭರತನಾಗಿ ಜನಿಸಿದನು. ಈ ಜಡಭರತನನ್ನು ಅಪಹರಿಸಿದ ಚೋರರು ದೇವ-ದೇವತೆಗಳನ್ನು ಒಲಿಸಿಕೊಂಡು ಅವರಿಂದ ಹಲವು ವರಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಅವನನ್ನು ಬಲಿಕೊಡಲು ಯತ್ನಿಸುತ್ತಾರೆ.
ಹೀಗೆ ಪಶುಗಳಿಂದ ಹಿಡಿದು, ಹಲವು ಅಮೂಲ್ಯ ವಸ್ತುಗಳು ಮತ್ತು ಸಂಪತ್ತು, ಅಲ್ಲದೆ ನರರನ್ನೂ ಬಲಿಕೊಟ್ಟು ಅಥವಾ ಸಮರ್ಪಿಸಿ ದೇವತೆಗಳನ್ನು ಒಲಿಸಿಕೊಂಡು ಅವರಿಂದ ವರಪ್ರಸಾದವನ್ನು ಪಡೆದುಕೊಳ್ಳುವ ಹಲವು ಪ್ರಯತ್ನಗಳ ಉಲ್ಲೇಖವು ಇತಿಹಾಸ-ಪುರಾಣಗಳಲ್ಲಿದೆ. ಆದರೆ ಇಂತಹ ತ್ಯಾಗದಿಂದ ಅಮರತ್ವವನ್ನು ಪಡೆಯಲು ಸಾಧ್ಯವಿದೆಯೇ? ಅದು ಸಾಧ್ಯವೇ ಇಲ್ಲವೆಂದು ನಮ್ಮ ಶಾಸ್ತ್ರಗಳು ಸಾರುತ್ತವೆ. ವಸ್ತುಗಳು ಅಥವಾ ಇತರ ಜೀವಿಗಳನ್ನು ತಮ್ಮ ಸ್ವಾರ್ಥ ಸಾಧನೆಗಾಗಿ ಸಮರ್ಪಿಸುವುದು ತ್ಯಾಗವೆನಿಸಿಕೊಳ್ಳುವುದಿಲ್ಲ. ಹಾಗಾದರೆ, ನಿಜವಾದ ತ್ಯಾಗವೆಂದರೇನು? ಮಾನವನು ತನ್ನ ನಿಜಸ್ವರೂಪದ ಅಜ್ಞಾನದಿಂದಾಗಿ, ತಾನು ಕೇವಲ ದೇಹ ಮತ್ತು ಮನಸ್ಸುಗಳ ಒಂದು ಸಂಕೀರ್ಣವೆಂದು ಭಾವಿಸಿಕೊಂಡು, ಇಹಲೋಕದ ಭೋಗಗಳನ್ನು ಅನುಭವಿಸುವುದೇ ತನ್ನ ಜೀವನದ ಪರಮೋದ್ದೇಶವೆಂದು ತಿಳಿಯುತ್ತಾನೆ.
ಸತ್ಯವಾಗಿ ತಾನು ಸೃಷ್ಟಿಗೆ ಮೂಲವಾದ ದಿವ್ಯಾತ್ಮನೇ ಆಗಿರುವಾಗ, ತನ್ನನ್ನು ಕೇವಲ ದೇಹ-ಮನಸ್ಸುಗಳಿಂದ ಕೂಡಿದ ಒಬ್ಬ ವ್ಯಕ್ತಿಯೆಂದು ಭಾವಿಸುವುದು ಅಜ್ಞಾನವೇ ಆಗಿದೆ. ಇಂತಹ ಅಜ್ಞಾನವನ್ನು ತ್ಯಜಿಸುವುದೇ ನಿಜವಾದ ತ್ಯಾಗ. ಅದರಿಂದಲೇ ಅವನು ತಾನು ಅವಿನಾಶಿಯಾದ ಅಮರ ಆತ್ಮವೇ ಎಂಬುದನ್ನು ತಿಳಿದುಕೊಂಡು ಅಮರತ್ವವೇ ಆಗುತ್ತಾನೆ. ಇಂತಹ ಆತ್ಮಸಾಕ್ಷಾತ್ಕಾರವನ್ನು ಮಾಡಿಕೊಳ್ಳುವುದು ಹೇಗೆ? ವೇದೋಕ್ತವಾದ ಅದ್ವೈತ ತತ್ವದ ಪ್ರಕಾರ ಮಾನವನು ತಾನು ಕೇವಲ ದೇಹವೆಂದು ಭಾವಿಸಿಕೊಳ್ಳುವುದು ಒಂದು ಭ್ರಮೆ. ದೇಹವು ಮಾನವನ ಹೊರಗಿನ ಕವಚವಷ್ಟೇ. ಅವನ ಅಂತರಂಗದಲ್ಲಿರುವ ಸತ್ಯವಸ್ತು ದಿವ್ಯ ಆತ್ಮವೇ ಆಗಿದೆ. ಭಗವದ್ಗೀತೆಯಲ್ಲಿ ಸಾರಿರುವಂತೆ:
ವಾಸಾಂಸಿ ಜೀರ್ಣಾನಿ ಯಥಾ ವಿಹಾಯನವಾನಿ ಗೃಹ್ಣಾತಿ ನರೋಪರಾಣಿ |ತಥಾ ಶರೀರಾಣಿ ವಿಹಾಯ ಜೀರ್ಣಾನಿಅನ್ಯಾನಿ ಸಂಯಾತಿ ನವಾನಿ ದೇಹೀ ||(ಭಗವದ್ಗೀತೆ 2.22)
‘ಒಬ್ಬ ವ್ಯಕ್ತಿಯು ಹಳೆಯದಾದ ತನ್ನ ವಸ್ತ್ರಗಳನ್ನು ತ್ಯಜಿಸಿ ಹೊಸ ವಸ್ತ್ರಗಳನ್ನು ತೊಡುವಂತೆ, ವ್ಯಕ್ತಿಯ ಮರಣಕಾಲದಲ್ಲಿ ಆತ್ಮವು ಜೀರ್ಣವಾದ ಶರೀರವನ್ನು ತ್ಯಜಿಸಿ ಹೊಸ ಶರೀರವನ್ನು ಪ್ರವೇಶಿಸುತ್ತದೆ’. ಭಗವದ್ಗೀತೆಯು ಉಪದೇಶಿಸಿರುವಂತೆ ಶರೀರವು ಆತ್ಮನು ಧರಿಸುವ ವಸ್ತ್ರವಿದ್ದಂತೆ. ಈ ವಸ್ತ್ರವನ್ನು ಆತ್ಮನು ಒಂದು ಜನ್ಮದಿಂದ ಇನ್ನೊಂದು ಜನ್ಮಕ್ಕೆ ಪ್ರವೇಶಿಸುವಾಗ ಬದಲಾಯಿಸುತ್ತಾನೆ. ಹೀಗೆ, ಆತ್ಮವು ಶಾಶ್ವತ. ಶರೀರಗಳು ಅಶಾಶ್ವತ. ಮಾನವನು ತನ್ನನ್ನು ತಾನು ಒಂದು ದೇಹವೆಂದು ಭಾವಿಸಿಕೊಳ್ಳುವುದು, ನಾವು ನಮ್ಮನ್ನು ಕೇವಲ ಒಂದು ವಸ್ತ್ರವೆಂದು ತಿಳಿದುಕೊಂಡ ಹಾಗೆ. ಇದು ಅಜ್ಞಾನವಲ್ಲವೇ? ಆದರೆ ಜನ್ಮ-ಜನ್ಮಾಂತರದ ಸಂಸ್ಕಾರದಿಂದಾಗಿ ಮಾನವನು ತನ್ನನ್ನು ತಾನು ಒಂದು ದೇಹವೆಂದು ಭಾವಿಸುತ್ತಾನೆಯೇ ಹೊರತು, ಅವನಿಗೆ ಬೇರೆ ಯೋಚನೆಯೇ ಬರುವುದಿಲ್ಲ.
ಸ್ವಾಮಿ ವಿವೇಕಾನಂದರು ನೀಡಿರುವ ನಿದರ್ಶನದಲ್ಲಿ ಒಂದು ಸಿಂಹದ ಮರಿಯು ಕುರಿಗಳ ಹಿಂಡಿನಲ್ಲಿ ವಾಸಿಸುತ್ತ ತಾನೂ ಒಂದು ಕುರಿಯೆಂದೇ ಭಾವಿಸಿರುತ್ತದೆ. ಆದರೆ, ಒಂದು ದಿನ ಅಕಸ್ಮಾತಾಗಿ ಒಂದು ದೊಡ್ಡ ಸಿಂಹವನ್ನು ನೋಡುತ್ತದೆ. ಆ ದೊಡ್ಡ ಸಿಂಹವು ಈ ಸಿಂಹದ ಮರಿಯನ್ನು ಒಂದು ಸರೋವರದ ಬಳಿ ಕರೆದುಕೊಂಡು ಹೋಗಿ ಅದರ ಪ್ರತಿಬಿಂಬವನ್ನು ನೀರಿನಲ್ಲಿ ನೋಡಲು ಪ್ರಚೋದಿಸುತ್ತದೆ. ಪ್ರತಿಬಿಂಬದಲ್ಲಿ ತಾನೂ ಸಿಂಹದಂತೆಯೇ ಇರುವುದನ್ನು ಕಂಡು ಆ ಮರಿಗೆ ಜ್ಞಾನೋದಯವಾಗುತ್ತದೆ. ಅದೂ ಸಿಂಹದಂತೆ ಗರ್ಜಿಸುತ್ತದೆ. ತಾನು ದೇಹವೇ ಎಂದು ಭಾವಿಸುವ ತಪ್ಪು ತಿಳಿವಳಿಕೆಯಿಂದ ಮಾನವನು ತನ್ನ ಇಡೀ ಜೀವನವನ್ನು ದೇಹ ಮತ್ತು ಮನಸ್ಸುಗಳ ಆಸೆಗಳನ್ನು ಈಡೇರಿಸಿಕೊಳ್ಳಲು ವ್ಯಯಿಸುತ್ತಾನೆ. ಅವನಿಗೆ ಆತ್ಮನ ಅಮರತ್ವದ ಕಲ್ಪನೆಯೇ ಇರುವುದಿಲ್ಲ. ಇದುವೇ ಅವನ ಎಲ್ಲ ಸಂಕಟಗಳಿಗೆ ಕಾರಣ.
ಇದೊಂದು ಮನೋವ್ಯಾಧಿ. ಇಂದಿನ ಸಮಕಾಲೀನ ಪ್ರಪಂಚದಲ್ಲಿ ಈ ಮೂಲ ಮನೋವ್ಯಾಧಿಯೊಂದಿಗೆ ಹಲವು ರೀತಿಯ ಮನೋವ್ಯಾಧಿಗಳು ಮಾನವತೆಯನ್ನು ಬಾಧಿಸುತ್ತಿವೆ. ಇಂದಿನ ಏಳು ಜನರ ಪೈಕಿ ಒಬ್ಬರು ಯಾವುದೋ ಒಂದು ಮನೋವ್ಯಾಧಿಯಿಂದ ನರಳುತ್ತಿರುವರೆಂದು ಅಂಕಿ-ಅಂಶಗಳು ತೋರಿಸಿಕೊಡುತ್ತವೆ. ನಮ್ಮ ಅಮೂಲ್ಯ ಆಧ್ಯಾತ್ಮಿಕ ಗ್ರಂಥವಾದ ಅಷ್ಟಾವಕ್ರ ಗೀತೆಯಲ್ಲಿ ಅಷ್ಟಾವಕ್ರ ಮಹಾಋಷಿಯು ಜನಕ ಮಹಾರಾಜನಿಗೆ ಬೋಧಿಸುವಂತೆ;
ದೇಹಾಭಿಮಾನಪಾಶೇನ ಚಿರಂ ಬುದ್ಧೋಸಿ ಪುತ್ರಕ |ಬೋಧೋಹಂ ಜ್ಞಾನ ಖಡ್ಗೇನ ತನ್ನಿಷ್ಕೃತ್ಯ ಸುಖೀ ಭವ ||(ಅಷ್ಟಾವಕ್ರಗೀತೆ 1.14)
‘ನೀನು ಅನೇಕ ಜನ್ಮಗಳಿಂದ ದೇಹಾಭಿಮಾನವೆಂಬ ಅಜ್ಞಾನದ ಪಂಜರದಲ್ಲಿ ಬಂಧಿಸಲ್ಪಟ್ಟಿರುವೆ. ನಾನು ಪ್ರಜ್ಞಾಸ್ವರೂಪನೇ, ಎಂಬ ಜ್ಞಾನಖಡ್ಗದಿಂದ ಈ ಪಂಜರವನ್ನು ಭೇದಿಸಿ ಸ್ವತಂತ್ರನಾಗಿ ಆನಂದವನ್ನು ಅನುಭವಿಸು, ಓ ಮಗುವೇ!’
ನಮ್ಮನ್ನು ನಾವು ಆತ್ಮವೆಂದು ಅರಿಯುವ ಸಾಧನೆಯ ಪಥವನ್ನು ನಾವು ಶಾಸ್ತ್ರಾಧ್ಯಯನದಿಂದ ಪ್ರಾರಂಭಿಸಬೇಕು. ಶಾಸ್ತ್ರಗಳು ಆತ್ಮಜ್ಞಾನವನ್ನು ನಮಗೆ ಬೋಧಿಸುತ್ತವೆ. ಶಾಸ್ತ್ರವಾಕ್ಯದಲ್ಲಿ ಹಾಗೂ ಜ್ಞಾನಿಗಳ ಅಥವಾ ಗುರುಗಳ ವಾಕ್ಯಗಳಲ್ಲಿ ನಾವು ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಜ್ಞಾನಿಗಳು ತಮ್ಮ ಸ್ವಂತ ಅನುಭವಗಳಿಂದ ಸತ್ಯವನ್ನು ಬೋಧಿಸುತ್ತಾರೆ. ಸಾಧಕರಲ್ಲಿ ಇರಬೇಕಾದ ಈ ಪ್ರಮುಖ ಗುಣವನ್ನು ಶ್ರದ್ಧೆಯೆಂದು ಕರೆಯುತ್ತಾರೆ.
ಶಾಸ್ತ್ರಸ್ಯ ಗುರುವಾಕ್ಯಸ್ಯ ಸತ್ಯ ಬುದ್ಧ್ಯವಧಾರಣಾ |ಸಾ ಶ್ರದ್ಧಾ ಕಥಿತಾ ಸದ್ಭಿಃ ಯಯಾ ವಸ್ತೂಪಲಭ್ಯತೇ ||(ವಿವೇಕ ಚೂಡಾಮಣಿ 25)
‘ಶಾಸ್ತ್ರ ಹಾಗೂ ಗುರುವಾಕ್ಯಗಳು ಸಂಪೂರ್ಣ ಸತ್ಯವೆಂದು ನಂಬಿ ನಡೆದುಕೊಳ್ಳುವುದನ್ನು ಶ್ರದ್ಧೆಯೆಂದು ಕರೆಯುತ್ತಾರೆ. ಇಂತಹ ಶ್ರದ್ಧೆಯಿಂದ ಮಾತ್ರ ಆತ್ಮಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು’. ಶಾಸ್ತ್ರವಾಕ್ಯಗಳನ್ನು ಯಾವುದೇ ಸಂದೇಹವಿಲ್ಲದೆ ಸತ್ಯವೆಂದು ನಂಬಿದ ಸಾಧಕನು ಆ ಕುರಿತಾಗಿ ಪುನಃ ಪುನಃ ಮನನ ಮಾಡಿ ಆ ಸತ್ಯದ ಅನುಭವವನ್ನು ಪಡೆಯಬೇಕೆಂದು ಹಾತೊರೆಯುತ್ತಾನೆ. ಇಂತಹ ಮನನದ ಸಾಧನೆಯು ಅವನನ್ನು ದೇಹಾಭಿಮಾನದಿಂದ ದೂರಮಾಡಿ ಆತ್ಮಸಾಕ್ಷಾತ್ಕಾರದೆಡೆಗೆ ಕೊಂಡೊಯ್ಯುತ್ತದೆ. ಆದರೆ ಇದನ್ನು ಕಾರ್ಯತಃ ಮಾಡುವುದು ಹೇಳಿದಷ್ಟು ಸುಲಭವಲ್ಲ.
ಆದ್ದರಿಂದ ಬಹಳ ಅಲ್ಪಸಂಖ್ಯೆಯಲ್ಲಿ ಮಾತ್ರ ಜನರು ಈ ಪಥವನ್ನು ಪ್ರವೇಶಿಸುತ್ತಾರೆ. ಏಕೆಂದರೆ ಕಣ್ಣಿಗೆ ಕಾಣುವಂತೆ ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಿರುವ ಐಹಿಕ ಭೋಗ ಭಾಗ್ಯಗಳಿರುವಾಗ, ಅವುಗಳನ್ನು ಬಿಟ್ಟು ಆತ್ಮಸಾಕ್ಷಾತ್ಕಾರದ ಕಠಿಣ ಪಥವನ್ನು ಅನುಸರಿಸಲು ಯಾರು ಬಯಸುತ್ತಾರೆ? ಧೈರ್ಯವಂತರಾದ ಕೆಲವರು ಮಾತ್ರ ಸದಾ ಬಹಿಮುಖವಾಗಿ ಹರಿಯುವ ಇಂದ್ರಿಯಗಳು ಮತ್ತು ಮನಸ್ಸನ್ನು ಅಂತಮುಖವಾಗಿ ತಿರುಗಿಸಿ ಆತ್ಮಸಾಕ್ಷಾತ್ಕಾರವನ್ನು ಸಾಧಿಸುತ್ತಾರೆ.
ಕಠೋಪನಿಷತ್ತಿನಲ್ಲಿ ಸಾರಿರುವಂತೆ:ಪರಾಂಚಿ ಖಾನಿ ವ್ಯತೃಣತ್ ಸ್ವಯಂಭೂಃತಸ್ಮಾತ್ ಪರಾನ್ ಪಶ್ಯತಿ ನ ಅಂತರಾತ್ಮನ್ | ಕಶ್ಚಿತ್ ಧೀರಃ ಪ್ರತ್ಯಗಾತ್ಮಾನಮೈಕ್ಷತ್ಆವೃತ್ತ ಚಕ್ಷುಃ ಅಮೃತತ್ವಮಿಚ್ಛನ್ ||(ಕಠೋಪನಿಷತ್ತು 2.1.1)
‘ಸ್ವಯಂಭೂ ಆದ ಪರಮಾತ್ಮನು ಇಂದ್ರಿಯಗಳನ್ನು ಬಹಿಮುಖವಾಗಿಯೇ ಹೋಗುವಂತೆ ಸೃಷ್ಟಿಸಿದ್ದಾನೆ. ಆದ್ದರಿಂದ, ಎಲ್ಲರೂ ಹೊರಗಿನ ಪ್ರಪಂಚವನ್ನು ಮಾತ್ರವೇ ನೋಡುತ್ತಾರೆಯೇ ಹೊರತು ಅಂತರಂಗದಲ್ಲಿರುವ ಆತ್ಮನನ್ನು ಯಾರೂ ನೋಡುವುದಿಲ್ಲ. ಆದರೆ, ದೇಹದ ನಶ್ವರತೆಯನ್ನು ಕಂಡುಕೊಂಡ ಎಲ್ಲೋ ಒಬ್ಬ ಧೀರನು ಮಾತ್ರ ಅಮೃತತ್ವವನ್ನು ಆಶಿಸಿ ತನ್ನ ಮನಸ್ಸನ್ನು ಅಂತಮುಖ ಮಾಡಿ ಆತ್ಮನನ್ನು ದರ್ಶಿಸುತ್ತಾನೆ’. ಈ ಸಾಧನೆಯ ಪಥದಲ್ಲಿ ಉಪನಿಷತ್ತುಗಳ ಮಹಾವಾಕ್ಯಗಳು ನಮಗೆ ಮಾರ್ಗಸೂಚಿಗಳಾಗಿವೆ. ‘ಅಹಂ ಬ್ರಹ್ಮಾಸ್ಮಿ’-‘ನಾನು ಬ್ರಹ್ಮ’. ‘ತತ್ ತ್ವಂ ಅಸಿ- ‘ನೀನು ಅದೇ ಆಗಿದ್ದೀಯೆ’. ‘ಅಯಂ ಆತ್ಮಾ ಬ್ರಹ್ಮ’- ‘ಈ ಜೀವಾತ್ಮನೇ ಬ್ರಹ್ಮನಾಗಿದ್ದಾನೆ’. ‘ಪ್ರಜ್ಞಾನಂ ಬ್ರಹ್ಮ’- ‘ನಮ್ಮ ಪರಮೋಚ್ಚ ಪ್ರಜ್ಞೆಯೇ ಬ್ರಹ್ಮ’. ಈ ನಾಲ್ಕನ್ನು ಮಹಾವಾಕ್ಯಗಳೆಂದು ಕರೆಯುತ್ತಾರೆ.
ಸನಾತನ ಧರ್ಮದ ಅನುಯಾಯಿಗಳಾದ ನಾವು ನಮ್ಮ ಅಮೂಲ್ಯ ಶಾಸ್ತ್ರಗ್ರಂಥಗಳನ್ನು ಅಧ್ಯಯನ ಮಾಡಿ, ಇತರರಿಗೂ ಬೋಧಿಸಬೇಕು. ಎಲ್ಲರೂ ಅಮರತ್ವದ ಪಥದಲ್ಲಿ ನಡೆಯುವಂತಾಗಬೇಕು. ಇದು ನಮ್ಮ ಹೊಣೆಗಾರಿಕೆಯಾಗಿದೆ. ‘ನಾವೆಲ್ಲರೂ ಅಮರತ್ವದ ಶಿಶುಗಳೇ’ ಎಂದು ವೇದವು ಘೊಷಿಸುತ್ತವೆ: ‘ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ’. ಪ್ರಿಯ ಓದುಗರೇ, ಇಲ್ಲಿಯವರೆಗೆ ನಾನು ಸನಾತನ ಧರ್ಮದ ಬಗ್ಗೆ ನನಗೆ ಮುಖ್ಯವೆನಿಸಿದ ವಿಷಯಗಳ ಮೇಲೆ ಲೇಖನಗಳನ್ನು ಬರೆದು, ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಈ ಕುರಿತು ಇತರ ಯಾವುದೇ ವಿಷಯಗಳನ್ನು ನೀವು ನನ್ನಿಂದ ತಿಳಿಯಬಯಸಿದಲ್ಲಿ, ದಯಮಾಡಿ ವಿಜಯವಾಣಿ ಸಂಪಾದಕರ ಕಚೇರಿಗೆ ನಿಮ್ಮ ಸಲಹೆಯನ್ನು ನೀಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.