| ಸುನೀಲ್ ಬಾರ್ಕೂರ್, ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು
‘ನೀವು ದಪ್ಪಗಿದ್ದೀರಾ?’ ಡಾಕ್ಟ್ರು ಕಡಿಮೆ ತಿಂದು ಹೊಟ್ಟೆಬಾಕತನವನ್ನು ನಿಯಂತ್ರಿಸಿಕೊಳ್ಳಲು ಹೇಳಿದ್ದರೂ ಸಾಧ್ಯವಾಗುತ್ತಿಲ್ಲವೇ? ಹಾಗಿದ್ದಲ್ಲಿ ಆಹಾರದಲ್ಲಿ ಒಂದಿಷ್ಟು ಟೆಫ್ಲಾನ್ ಸೇರಿಸಿದರೆ ಹೇಗೆ? ‘ಏನು ಊಟದಲ್ಲಿ ಟೆಫ್ಲಾನಾ?’ ಅಂತ ನೀವು ಕೇಳ್ತೀರಿ ಅನ್ನೋದು ಗೊತ್ತು. ಆದ್ರೂ ನಾನು ಹೇಳಿದ್ರಲ್ಲಿ ಏನೂ ತಪ್ಪಿಲ್ಲ ಗೊತ್ತಾ. ದೋಸೆ ಹೆಂಚಿನ ಮೇಲ್ಮೈ, ಇಸ್ತ್ರಿಯ ತಳ ಹೀಗೆ ಹತ್ತುಹಲವು ದಿನಬಳಕೆಯ ವಸ್ತುಗಳಿಂದ ಹಿಡಿದು ದೊಡ್ಡ ಕಾರ್ಖಾನೆಗಳ ಯಂತ್ರಗಳಲ್ಲೂ ಬಳಕೆಯಾಗುವ ಟೆಫ್ಲಾನ್ ನಿಮಗೆ ಗೊತ್ತೇ ಇದೆ.
ಪಾಲಿ ಟೆಟ್ರಾ ಫ್ಲೋರೋ ಇಥೆಲಿನ್ (ಪಿಟಿಎಫ್ಇ) ಅಂದರೆ ಟೆಫ್ಲಾನ್ ಕೃತಕವಾಗಿ ತಯಾರಿಸಲಾಗುವ ಸಂಶ್ಲೇಷಿತ ರಾಸಾಯನಿಕ ವಸ್ತು. ಸೇವಿಸುವ ಆಹಾರದಲ್ಲಿ ಟೆಫ್ಲಾನಿನ ಹಿಟ್ಟನ್ನು ಪ್ರತಿ ನಾಲ್ಕು ಭಾಗಕ್ಕೆ ಒಂದು ಭಾಗವಾಗಿ ಸೇರಿಸಿದರೆ ಅದು ಹೊಟ್ಟೆ ಭರ್ತಿಯಾಗಿಸುತ್ತದೆ. ಆದರೆ ಟೆಫ್ಲಾನ್ ಶೂನ್ಯ ಕ್ಯಾಲೋರಿ ಆಹಾರವಾಗಿರುವ ಕಾರಣ ಅದು ದೇಹದೊಳಗೆ ಹೀಗೆ ಹೋಗಿ ಹಾಗೆ ಬರುತ್ತದೆ. ಒಟ್ಟಾರೆಯಾಗಿ ನೋಡಿದ್ದಲ್ಲಿ ಯಾವುದೇ ಪ್ರಯೋಜನ ಅಥವಾ ಹಾನಿ ಮಾಡದೆ ಬರೀ ನಿಮ್ಮ ಹೊಟ್ಟೆ ತುಂಬಿದ ಅನುಭವ ನೀಡಿ ಒಟ್ಟಾರೆ ಕ್ಯಾಲೋರಿ ಕಡಿಮೆ ಮಾಡುವ ಟೆಫ್ಲಾನನ್ನು ಆಹಾರದಲ್ಲಿ ಬಳಸುವ ಯೋಚನೆಯನ್ನು ಹರಿಬಿಟ್ಟಿದ್ದು ನ್ಯೂಜರ್ಸಿಯ ರಟ್ಜರ್ಸ್ ವಿಶ್ವವಿದ್ಯಾಲಯದ ಸಂಶೋಧಕರು. ಟೆಫ್ಲಾನ್ ಸೇವಿಸಬಹುದಾದ ವಸ್ತು ಎಂಬುದಿನ್ನೂ ವೈಜ್ಞಾನಿಕವಾಗಿ ಸಾಬೀತಾಗದಿರುವ ಕಾರಣ ಈ ಯೋಚನೆಯನ್ನು ವಿಜ್ಞಾನಿಗಳು ತಿರಸ್ಕರಿಸಿರುವುದು ಬೇರೆ ವಿಷಯ ಬಿಡಿ.
ಹಸುವಿಗೆ ಸೊಳ್ಳೆಯ ಕಾಟವೇ? ಅವುಗಳನ್ನು ಓಡಿಸಲು ಅದರ ಮೈಮೇಲೆ ಕೀಟನಾಶಕವನ್ನು ಸಿಂಪಡಿಸುವುದು ಇಷ್ಟವಿಲ್ಲವೆ? ಹಾಗಿದ್ದಲ್ಲಿ ಅದರ ಮೈಗೆ ಝೀಬ್ರಾದಂತೆ ಹಂಡಬಂಡ ಬಣ್ಣವನ್ನು ಹಚ್ಚಿ. ಇದರಿಂದ ಸೊಳ್ಳೆಗಳ ಕಾಟ ಕಡಿಮೆಯಾಗಿ ಹಸುವು ನೆಮ್ಮದಿಯಿಂದ ನಿದ್ರಿಸಬಲ್ಲದು. ಏನಿದು, ಬರೀ ತರ್ಲೆ ಐಡಿಯಾಗಳನ್ನೇ ಕೊಡ್ತಿದ್ದೀನಲ್ಲ ಎಂದು ನಿಮಗೆನಿಸಿದರೆ ಮೊದಲೇ ಹೇಳ್ತೀನಿ. ಇದು ನನ್ನ ಐಡಿಯಾನೇ ಅಲ್ಲ. ರಕ್ತಹೀರಲು ಬರುವ ಸೊಳ್ಳೆಗಳು ಪ್ರಾಣಿಗಳ ಮೈಮೇಲೆ ಕೂರುವ ಮೊದಲು ಅವುಗಳ ಮೈಮೇಲೆ ಬಿದ್ದು ಪ್ರತಿಫಲಿಸುವ ಬಣ್ಣವನ್ನು ಗಮನಿಸಿ ಅದರ ಆಧಾರದ ಮೇಲೆ ಪ್ರಾಣಿಯ ವೇಗ ಮತ್ತು ದೂರವನ್ನು ನಿರ್ಧರಿಸಿ ಯಾವಾಗ ಬಂದಿಳಿಯಬೇಕು ಎನ್ನುವುದನ್ನು ನಿರ್ಧರಿಸುತ್ತವೆ. ಆದರೆ ಝೀಬ್ರಾದ ದೇಹದ ಮೇಲಿನ ಹಂಡಬಂಡ ಪಟ್ಟಿಗಳು ಸೊಳ್ಳೆಗಳಿಗೆ ಗೊಂದಲವನ್ನುಂಟು ಮಾಡುವ ಕಾರಣ ಅವುಗಳಿಂದ ದೂರವಿರುತ್ತವೆ. ಅಂದಹಾಗೆ ಈ ಆವಿಷ್ಕಾರದ ಹಿಂದಿರುವುದು ಜಪಾನ್ ಮೂಲದ ವಿಜ್ಞಾನಿಗಳು.
ನಿಮಗೆ ಗೊತ್ತಾ? ತಾಯಿಯು ಬೆಳ್ಳುಳ್ಳಿ ತಿಂದರೆ ಅಮ್ಮನ ಎದೆಹಾಲು ಕುಡಿಯುವ ಮಗು ಸ್ವಲ್ಪ ಜಾಸ್ತಿನೇ ಹಾಲು ಕುಡಿಯುತ್ತದೆ ಅಂತ. ಇದ್ಯಾವುದಪ್ಪ ಹೊಸ ವಿಷಯ ಅಂತೀರಾ... ಇದು ಅಮೆರಿಕದ ಮೊನೆಲ್ ರಾಸಾಯನಿಕ ಅಧ್ಯಯನ ಕೇಂದ್ರದವರು ಬಹಿರಂಗಪಡಿಸಿದ ಸುದ್ದಿ. ಅವರು ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡಂತೆ ತಾಯಿಯು ಬೆಳ್ಳುಳ್ಳಿ ಸೇವಿಸಿದಾಗ ಅದರಿಂದ ಆಕೆಯ ಎದೆಹಾಲಿನ ರುಚಿ ಮತ್ತು ವಾಸನೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬರುತ್ತದೆ. ಇವೆರಡೂ ಶಿಶುವಿಗೆ ಹೆಚ್ಚು ಇಷ್ಟವಾಗುವ ಕಾರಣ ಅದು ಮಾಮೂಲಿಗಿಂತ ಹೆಚ್ಚು ಹಾಲನ್ನು ಕುಡಿಯುತ್ತದೆ. ಸಂಶೋಧನಾ ತಂಡವು ಗಮನಿಸಿದಂತೆ ತಾಯಿಯ ಎದೆಹಾಲಿನ ರುಚಿ ಮತ್ತು ವಾಸನೆಯು ಆಕೆ ಸೇವಿಸುವ ಆಹಾರದ ಮೇಲೆ ಸಂಪೂರ್ಣವಾಗಿ ನಿರ್ಭರವಾಗಿದ್ದು, ಶಿಶುವು ಆ ಬದಲಾವಣೆಗಳನ್ನು ಗ್ರಹಿಸುತ್ತದೆ.
ನೊಬೆಲ್ ಪ್ರಶಸ್ತಿ ಬಗ್ಗೆ ಯಾರಿಗೆ ಗೊತ್ತಿಲ್ಲ? ಖ್ಯಾತ ವಿಜ್ಜಾನಿ ಆಲ್ಪೆ›ಡ್ ನೊಬೆಲ್ ಅವರ ಉಯಿಲಿನಂತೆ ನೊಬೆಲ್ ಪ್ರತಿಷ್ಠಾನವನ್ನು ಸ್ಥಾಪಿಸಿ 1901ರಿಂದ ಭೌತ, ರಸಾಯನ, ಔಷಧೀಯ, ಸಾಹಿತ್ಯ, ಶಾಂತಿ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದವರಿಗೆ ಕೊಡಮಾಡುವ ಅತ್ಯಂತ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಯಿದು. ಅಮೆರಿಕ ಮೂಲದ ‘ಅನಲ್ಸ್ ಆಫ್ ಇಮ್ಪ್ರೊಬೆಬಲ್ ರಿಸರ್ಸ್’ ಎಂಬ ವಿಜ್ಞಾನ ಹಾಸ್ಯ ಪತ್ರಿಕೆಯ ಸಂಪಾದಕರಾದ ಮಾರ್ಕ್ ಅಬ್ರಹಮ್ಸ್ ಎಂಬುವವರು ನೊಬೆಲ್ ಪ್ರಶಸ್ತಿಯಿಂದ ಸ್ಪೂರ್ತಿ ಪಡೆದು 1991ರಲ್ಲಿ ‘ಐಜಿ ನೊಬೆಲ್’ ಎಂಬ ವಾರ್ಷಿಕ ಪ್ರಶಸ್ತಿಯನ್ನು ಆರಂಭಿಸಿದರು. ಮಾರ್ಕ್ ಅಬ್ರಹಮ್ಸ್ ‘ಐಜಿ ನೊಬೆಲ್’ ಆರಂಭಿಸಿದ್ದುದರ ಹಿಂದಿನ ಉದ್ದೇಶ ವೈಜ್ಞಾನಿಕ ಆವಿಷ್ಕಾರಗಳಿಗೆ ಹಾಸ್ಯದ ಲೇಪ ಹಚ್ಚಿ ವಿಜ್ಞಾನವನ್ನು ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿಸುವುದು.
ಆಯೋಜಕರೇ ಹೇಳುವಂತೆ, ‘ಇಲ್ಲಿ ನೀಡಲಾಗುವ ಪ್ರಶಸ್ತಿಗಳ ಆವಿಷ್ಕಾರಗಳನ್ನು ಕೇಳಿದ ತಕ್ಷಣ ಜನ ಮೊದಲು ಇದ್ಯಾವುದೋ ತರ್ಲೆ ಎಂದು ನಗುತ್ತಾರೆ. ಕೆಲ ಸಮಯದ ನಂತರ ಮತ್ತೊಮ್ಮೆ ಶಾಂತವಾಗಿ ಯೋಚಿಸಿದಾಗ ಅದರ ಹಿಂದಿನ ಆಲೋಚನೆ ವೈಜ್ಞಾನಿಕವಾಗಿ ತರ್ಕಬದ್ಧವಾಗಿ ಇರುವುದು ಅವರಿಗೆ ಅರಿವಾಗುತ್ತದೆ’. ಅಲ್ಲಿಗೆ ಅವರ ಪ್ರಯತ್ನ ಸಫಲ. ಅಸಲಿಗೆ ಇಲ್ಲಿ ನೊಬೆಲ್ ಹಿಂದಿರುವ ಐಜಿಯನ್ನು ಸೇರಿಸಿ ಪೂರ್ತಿಯಾಗಿ ಓದಿದಾಗ ಆಂಗ್ಲ ಪದ ಇಗ್ನೋಬೆಲ್ (ಜಿಜ್ಞಟಚಿಛ್ಝಿ) ಎಂದಾಗುತ್ತದೆ. ಅದರರ್ಥ ‘ಕವಡೆ ಕಿಮ್ಮತ್ತಿಲ್ಲದ್ದು’. ಪ್ರಶಸ್ತಿಯ ಹೆಸರೇ ಹೀಗಿರುವಾಗ ಉಳಿದದ್ದನ್ನು ನೀವೇ ಯೋಚಿಸಿ.
ಐಜಿ ನೊಬೆಲ್ ಪ್ರಶಸ್ತಿ ವಿತರಣಾ ಸಮಾರಂಭವೂ ಅಷ್ಟೇ. ಆಲ್ಲಿ ವಿಜ್ಞಾನದ ಗಂಭೀರತೆಯನ್ನು ಪೂರ್ತಿ ಹಾಸ್ಯದ ಪಾಕದಲ್ಲಿ ಅದ್ದಿ ಪ್ರಸ್ತುತಪಡಿಸಲಾಗುತ್ತದೆ. ಪ್ರಶಸ್ತಿ ನೀಡಲು ಬರುವವರು ಮೂಲ ನೊಬೆಲ್ ಪ್ರಶಸ್ತಿವಿಜೇತರು ಹಾಗೂ ವಿಜ್ಞಾನ ಕ್ಷೇತ್ರದ ಘಟಾನುಘಟಿಗಳೇ ಅಗಿದ್ದರೂ ನಿರೂಪಣೆ, ಬಹುಮಾನ ವಿತರಣೆ ಎಲ್ಲ ನವಿರಾದ ಹಾಸ್ಯದ ಧಾಟಿಯಲ್ಲೇ ಇರುತ್ತದೆ. ಪ್ರಶಸ್ತಿ ಘೊಷಣೆಯಾಗಿ ವಿಜೇತರು ವೇದಿಕೆಗೆ ಬರುತ್ತಿದ್ದಂತೆಯೇ ಥೇಟು ಪಡ್ಡೆ ಹುಡುಗರು ಕ್ಲಾಸುಗಳಲ್ಲಿ ಮೇಷ್ಟ್ರ ಬೆನ್ನಿಗೆ ಹಾರಿಸುವ ರೀತಿಯಲ್ಲೇ ಕಾಗದದ ವಿಮಾನಗಳು ಪ್ರೇಕ್ಷಕರ ಕಡೆಯಿಂದ ತೂರಿ ಬರುತ್ತವೆ. ಐಜಿ ನೊಬೆಲ್ ಪ್ರಶಸ್ತಿಯನ್ನು ಮೂಲ ನೊಬೆಲ್ ಪ್ರಶಸ್ತಿಯ ರೀತಿಯಲ್ಲಿಯೇ ಪ್ರತಿವರ್ಷ ವಿಜ್ಞಾನದ ಹಲವು ಕ್ಷೇತ್ರದಲ್ಲಿ ನೀಡಲಾಗುತ್ತದೆಯಾದರೂ, ಆ ಕ್ಷೇತ್ರಗಳು ಕಾಯಂ ಏನಲ್ಲ-ಬದಲಾಗಲೂಬಹುದು. ಇನ್ನು ಬಹುಮಾನದ ಮೊತ್ತವೂ ಅಷ್ಟೆ. ಯಾವುದೋ ದೇಶದ ಚಲಾವಣೆಯಿಲ್ಲದ ನೋಟುಗಳ ಪ್ರತಿಕೃತಿಯನ್ನು ದೊಡ್ಡದಾಗಿ ಅಚ್ಚುಹಾಕಿ ವಿಜೇತರಿಗೆ ನೀಡಲಾಗುತ್ತದೆ.
ಐಜಿ ನೊಬೆಲ್ ಪ್ರಶಸ್ತಿ ಪಡೆಯುವ ವೈಜ್ಞಾನಿಕ ಆವಿಷ್ಕಾರಗಳು ಹೊರನೋಟಕ್ಕೆ ತಮಾಷೆಯಾಗಿ ಕಂಡರೂ ಇಂತಹುದೊಂದು ಪ್ರಶಸ್ತಿಯಿಲ್ಲದಿದ್ದಲ್ಲಿ ಬಹುಶಃ ಜನಸಾಮಾನ್ಯರಿಗೆ ತಲುಪದಿರುವ ಅಪಾಯವಿತ್ತು. ಅದು ಈ ಮೂಲಕವಾದರೂ ಸಾಕಾರವಾಗುತ್ತಿದೆ ಎಂಬುದನ್ನು ಹಿರಿಯ ವಿಜ್ಞಾನಿಗಳೇ ಒಪ್ಪುತ್ತಾರೆ. 1991ರಲ್ಲಿ ಪ್ರಾರಂಭವಾದಾಗಲಿಂದ ಪ್ರತಿವರ್ಷ ಅಮೆರಿಕದಲ್ಲೇ ನಡೆಯುತ್ತಿದ್ದ ‘ಐಜಿ ನೊಬೆಲ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಸಮಾರಂಭ ಈ ವರ್ಷ ಮೊದಲಬಾರಿಗೆ ಅಮೆರಿಕದ ಹೊರಗೆ ಸ್ವಿಟ್ಜರ್ಲ್ಯಾಂಡ್ನಲ್ಲಿ ನಡೆಯಿತು. ಕಳೆದ ತಿಂಗಳು ನಡೆದ ಆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಇಬ್ಬರು ವಿಜ್ಞಾನಿಗಳು ಸೇರಿ ಹತ್ತು ವಿವಿಧ ಆವಿಷ್ಕಾರದ ಹಿಂದಿನ ರೂವಾರಿಗಳು ಐಜಿ ನೊಬೆಲ್ ಪ್ರಶಸ್ತಿಗೆ ಭಾಜನರಾದರು. ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷದ ಪಟ್ಟಿಯಲ್ಲೂ ತರ್ಲೆಗಳಿಗೇನೂ ಕೊರತೆಯಿರಲಿಲ್ಲ ಎನ್ನುವುದು ಆ ಪಟ್ಟಿಯನ್ನೊಮ್ಮೆ ನೋಡಿದರೆ ಗಮನಕ್ಕೆ ಬರುತ್ತದೆ.
ಪ್ರಸಕ್ತ ವರ್ಷದ ರಸಾಯನ ವಿಜ್ಞಾನದ ಪ್ರಶಸ್ತಿಗೆ ಭಾಜನರಾದ ಬೆಂಗಳೂರಿನ ಸಂಚಾರಿ ಬ್ಯಾನರ್ಜಿ ಮತ್ತು ಸುಬ್ರಮಣ್ಯನ್ ರಾಮಸ್ವಾಮಿ ಪ್ರಶಸ್ತಿ ವಿಜೇತ ಆವಿಷ್ಕಾರ ಜಿರಳೆಯ ಹಾಲಿನ ಕುರಿತಾಗಿದ್ದು. ಜಿರಳೆಯ ಹಾಲು ಹಸುವಿನ ಹಾಲಿಗಿಂತ ಹೆಚ್ಚು ಪೋ›ಟಿನ್ಗಳನ್ನು ಹೊಂದಿರುತ್ತದೆ ಎಂಬುದನ್ನು ಅವರಿಬ್ಬರ ಜಂಟಿ ಸಂಶೋಧನೆಯ ಮೂಲಕ ಸಾಬೀತಾಗಿದೆ. ಸಾಮಾನ್ಯವಾಗಿ ಜಿರಳೆಯ ಎಲ್ಲ ಪ್ರಜಾತಿಗಳೂ ಮೊಟ್ಟೆಯಿಟ್ಟು ಮರಿಮಾಡಿದರೂ ಅದಕ್ಕೊಂದೇ ಒಂದು ಅಪವಾದವಿದೆ. ಭಾರತವೂ ಸೇರಿ ಜಗತ್ತಿನ ಹೆಚ್ಚಿನ ಭಾಗದಲ್ಲಿ ಕಂಡುಬರುವ ಪೆಸಿಫಿಕ್ ಬೀಟಲ್ ಎನ್ನುವ ಜಾತಿಯ ಜಿರಳೆಯು ತನ್ನ ಗರ್ಭಕೋಶದಲ್ಲಿ ಭ್ರೂಣವನ್ನು ಬೆಳೆಸಿ ಅವುಗಳು ಪೂರ್ಣಪ್ರಮಾಣದಲ್ಲಿ ಬೆಳೆದ ನಂತರವೇ ತಾಯಿಯ ಹೊಟ್ಟೆಯಿಂದ ಹೊರಬರುತ್ತವೆ. ತನ್ನ ಗರ್ಭಕೋಶದಲ್ಲಿ ಬೆಳೆಯುತ್ತಿರುವ ಭ್ರೂಣಗಳಿಗೆ ಆಹಾರವಾಗಿ ಜಿರಳೆಯು ಹಾಲಿನಂತಹ ದ್ರವ್ಯವನ್ನು ಸ್ರವಿಸುತ್ತದೆ. ಈ ಹಾಲು ನಂತರ ಅಲ್ಲೇ ಗಟ್ಟಿಯಾಗಿ ಹರಳುಗಳ ಆಕಾರವನ್ನು ಪಡೆಯುತ್ತದೆ. ಬೆಂಗಳೂರಿನ ಸಂಶೋಧಕರು ಈ ಹರಳುಗಳನ್ನು ಗರ್ಭಕೋಶದಿಂದ ಹೊರತೆಗೆದು ಪ್ರಯೋಗಶಾಲೆಯಲ್ಲಿ ಪರೀಕ್ಷಿಸಿದಾಗ ಅದು ಹಸುವಿನ ಹಾಲಿಗಿಂತ ಮೂರು ಪಟ್ಟು ಹೆಚ್ಚು ಪೋ›ಟಿನ್ ಹೊಂದಿರುವುದು ಕಂಡುಬಂತು.
ಈ ವರ್ಷದ ಭೌತವಿಜ್ಞಾನದ ‘ಐಜಿ ನೊಬೆಲ್ ಪ್ರಶಸ್ತಿ’ ಕೆನಡಾದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡಕ್ಕೆ ದೊರಕಿದೆ. ಅವರ ಆವಿಷ್ಕಾರವೇನು ಗೊತ್ತಾ? ಮೂತ್ರಿಗಳಲ್ಲಿ ಮೂತ್ರವನ್ನು ವಿಸರ್ಜಿಸಿದಾಗ ಅದು ಮೂತ್ರಿಯ ಗೋಡೆಗೆ ಮೂವತ್ತು ಡಿಗ್ರಿಗಳಿಗಿಂತ ಕಡಿಮೆ ಕೋನದಲ್ಲಿ ಅಪ್ಪಳಿಸಿದರೆ ಮೂತ್ರವು ಹೊರಗೆ ಚೆಲ್ಲುವುದಿಲ್ಲವಂತೆ. ಇಂತಹುದೊಂದು ಘನಂದಾರಿ ಸಂಶೋಧನೆಯ ಹಿಂದೆ ವರ್ಷಗಳನ್ನೇ ವ್ಯಯಿಸಿರುವ ಆ ವಿದ್ಯಾರ್ಥಿಗಳು ತಮ್ಮ ಪ್ರಯೋಗಗಳ ಆಧಾರದ ಮೇಲೆ ವೈವಿಧ್ಯಮಯ ಮೂತ್ರಿಗಳನ್ನು ವಿನ್ಯಾಸಗೊಳಿಸಿದ್ದು, ಅವುಗಳಲ್ಲಿ ಮೂತ್ರವಿಸರ್ಜಿಸಿದಾಗ ಅದು ಮೂವತ್ತು ಡಿಗ್ರಿಗಳಿಗಿಂತ ಕಡಿಮೆ ಕೋನದಲ್ಲೇ ಗೋಡೆಯ ಸಂಪರ್ಕಕ್ಕೆ ಬರುವ ರೀತಿಯಲ್ಲಿ ತಯಾರಿಸಲಾಗಿದ್ದು ಈಗಾಗಲೇ ಅವುಗಳು ಮಾರುಕಟ್ಟೆಗೂ ಬಂದಿವೆ.
2026ರ ಸಾಲಿನ ಮನೋವಿಜ್ಞಾನದ ಐಜಿ ನೊಬೆಲ್ ಪ್ರಶಸ್ತಿ ಮಾತ್ರ ಇನ್ನೂ ಗಮ್ಮತ್ತಾಗಿದೆ. ಜಿಂಬಾಬ್ವೆ ಮೂಲದ ತಂಡವೊಂದು ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ಉಮೇದುವಾರರ ತಂಡಗಳನ್ನು ರಚಿಸಿ ಅವರುಗಳಿಗೆ ವಿವಿಧ ಟಾಸ್ಕ್ಗಳನ್ನು ನೀಡಿತು. ಅವರುಗಳ ಪ್ರತಿಕ್ರಿಯೆಯ ಆಧಾರದ ಮೇಲೆ ಸಂಶೋಧನಾ ತಂಡವು ಪ್ರಕಟಿಸಿದ ವರದಿಯಂತೆ ಆರ್ಥಿಕವಾಗಿ ಹೆಚ್ಚು ಸಬಲವಾಗಿರುವ ಜನರು ರಸ್ತೆಗಳಲ್ಲಿ ಸಹ ಪ್ರಯಾಣಿಕರ ಬಗ್ಗೆ ಕಾಳಜಿಯನ್ನು ವಹಿಸದೆ ಎರಾ›ಬಿರ್ರಿ ವಾಹನವನ್ನು ಚಲಾಯಿಸುವುದರಲ್ಲಿ ಸಿದ್ಧಹಸ್ತರು. ತಾವು ಕೆಲಸ ಮಾಡುವಲ್ಲಿಯೂ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿರುವ ಇವರುಗಳು ಮಕ್ಕಳ ಸಿಹಿತಿಂಡಿಗಳನ್ನು ಎಗರಿಸಿ ತಿನ್ನುವುದರಲ್ಲೂ ಪರಿಣತರು. ಜಿಂಬಾಬ್ವೆ ಮನೋವಿಜ್ಞಾನದ ಸಂಶೋಧನಾ ತಂಡವು ಗಮನಿಸಿದಂತೆ ದುಡ್ಡು ಹೆಚ್ಚಿದಂತೆಲ್ಲ ಮಾನವನಲ್ಲಿ ಬೇರೆಯವರ ಭಾವನೆಗಳನ್ನು ಗೌರವಿಸುವ ಕ್ಷಮತೆಯು ಕುಂಠಿತವಾಗಿ ಸಾಮಾಜಿಕ ಸಂಬಂಧಗಳನ್ನು ಕಡಿದುಕೊಳ್ಳುವ ಪ್ರಮಾಣ ಹೆಚ್ಚಾಗುತ್ತದೆ. ಬಹುಷಃ ಈ ಆವಿಷ್ಕಾರಕ್ಕೆ ಸಂಶೋಧನೆಯೇನೂ ಬೇಕಿರಲಿಲ್ಲ. ನಮ್ಮ ಅನುಭವಗಳೇ ಸಾಕಿತ್ತು ಅಲ್ಲವೇ?
ತನ್ನ ಮೂವತ್ತಾರನೇ ವರ್ಷಾಚರಣೆಯಲ್ಲಿರುವ ‘ಐಜಿ ನೊಬೆಲ್ ಪ್ರಶಸ್ತಿ’ ಪಟ್ಟಿಯನ್ನು ಮಾಧ್ಯಮಗಳು ವ್ಯಂಗದ ಧಾಟಿಯಲ್ಲೇ ಸುದ್ದಿಯನ್ನಾಗಿಸಿದರೆ ಮೀಮ್ ಕಾರ್ಖಾನೆಗಳು ಅವುಗಳನ್ನೊಂದು ಸರಕಾಗಿ ಬಳಸಿ ಸರಣಿ ಮೀಮ್ಳನ್ನು ತಯಾರಿಸುತ್ತವೆ. ಹಾಗೋ ಹೀಗೋ ಹಾಸ್ಯದ ಖೊಟ್ಟೆಯೊಳಗೆ ಕೂತು ವಿಜ್ಞಾನ ಜನರಿಗೆ ತಲುಪುತ್ತಿರುವುದೇ ಒಂದು ಖುಷಿ.