ಅಂಕಣ

ಕೈ ಕೆಸರಾದರೆ ಬಾಯಿ ಮೊಸರು, ಮತ್ತಿಷ್ಟು ಕೊಸರು

| ಶ್ರೀವತ್ಸ ಜೋಶಿ, ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು

ಕೃಷಿಯೇ ಪ್ರಧಾನ ವೃತ್ತಿಯಾಗಿದ್ದಾಗ ರೈತನು ಹೊಲದಲ್ಲಿ ಬಿಸಿಲು ಮಳೆಯೆನ್ನದೆ ಕಷ್ಟಪಟ್ಟು, ಮೈ-ಕೈಗೆಲ್ಲ ಕೆಸರು ಮೆತ್ತಿದರೂ ಕಡೆಗಣಿಸಿ, ಕೆಲಸ ಮಾಡಿದರೆ ಮಾತ್ರ ಕೊನೆಗೆ ಉತ್ತಮ ಫಸಲು ಸಿಗುವುದು. ಮನೆಯಲ್ಲಿ ಅನ್ನ, ಹಾಲು, ಮೊಸರು ಮುಂತಾದುವೆಲ್ಲ ಯಥೇಚ್ಛ ದೊರೆತು ಮನೆಮಂದಿಯ ಹೊಟ್ಟೆ ತಣಿದು ಸುಭಿಕ್ಷವೆನಿಸುವುದು. ಕುಳಿತಲ್ಲೇ ಇದ್ದರೆ ಹಸಿವು ನೀಗುವುದಿಲ್ಲ. ಇಂಥದೊಂದು ಅರ್ಥ-ಆಶಯವಿರುವ ಗಾದೆಯೇ ‘ಕೈ ಕೆಸರಾದರೆ ಬಾಯಿ ಮೊಸರು’. ಇಲ್ಲಿ ಕೆಸರು ಮತ್ತು ಮೊಸರು ಪದಗಳ ವಾಚ್ಯಾರ್ಥ ಅಲ್ಲ ಧ್ವನ್ಯಾರ್ಥ ಮುಖ್ಯ.

ಏಕೆಂದರೆ ಈ ಗಾದೆ ಕೃಷಿಕರ ಬದುಕಿಗೆ ಮಾತ್ರವಲ್ಲದೆ ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ಅನ್ವಯಿಸುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಕಷ್ಟಪಟ್ಟು ರಾತ್ರಿ-ಹಗಲು ಓದಿದರೆ, ಫಲಿತಾಂಶ ಬಂದಾಗ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಸಂತೋಷಪಡಲಿಕ್ಕಾಗುತ್ತದೆ. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಕಠಿಣ ಪರಿಶ್ರಮ ಹಾಗೂ ನಿಷ್ಠೆ ತೋರಿದರೆ ಖಂಡಿತವಾಗಿಯೂ ಉತ್ತಮ ಸ್ಥಾನಮಾನ ಮತ್ತು ಆರ್ಥಿಕ ಪ್ರಗತಿ ಸಾಧಿಸಲಿಕ್ಕಾಗುತ್ತದೆ. ಶ್ರಮಕ್ಕೆ ತಕ್ಕ ನಿರೀಕ್ಷಿತ ಪ್ರತಿಫಲವನ್ನು ಮೊಸರಿಗೆ ಹೋಲಿಸಿದರೆ, ನಿರೀಕ್ಷೆಗಿಂತಲೂ ಅಧಿಕವಾಗಿ ದೊರಕುವ ಫಲಕ್ಕೊಂದು ಮೊಸರು ಪದವನ್ನೇ ಹೋಲುವ, ಪ್ರಾಸಬದ್ಧ ಅಚ್ಚಕನ್ನಡ ಪದ ಇದೆ- ‘ಕೊಸರು’. ಇದು ಇಂಗ್ಲಿಷ್​ನ Bonus ಎಂಬ ಪದಕ್ಕೆ ಅತಿಸೂಕ್ತವೆನಿಸುವ ಸಂವಾದಿ ಪದ. ಕೊಸರು ದುಡ್ಡಿನ ರೂಪದಲ್ಲೇ ಇರಬೇಕೆಂದಿಲ್ಲ.

ಯಾವುದೇ ರೀತಿಯದಾದರೂ ಹೆಚ್ಚುವರಿ ಅಥವಾ ಅತಿರಿಕ್ತವಾಗಿ ಇರುವುದನ್ನೇ ಕೊಸರು ಎನ್ನುವುದು. ಕೊಂಡಮೇಲೆ ವ್ಯಾಪಾರಿಯ ಬಳಿ ಪುಕ್ಕಟೆಯಾಗಿ ಕೇಳುವ ಸ್ವಲ್ಪ ಹೆಚ್ಚುವರಿ ವಸ್ತು ಅಥವಾ ತರಕಾರಿ, ಉದಾಹರಣೆಗೆ ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ ಇತ್ಯಾದಿಯೂ ಕೊಸರೇ. ಆದ್ದರಿಂದಲೇ Something good that you get in addition to what you expect ಎಂಬ ವ್ಯಾಖ್ಯೆ Bonus ಮತ್ತು ಕೊಸರು ಪದಗಳಿಗೆ ಸಮನಾಗಿ ಅನ್ವಯವಾಗುತ್ತದೆ. ‘ಕೊಂಡಲ್ಲಿ ಕೊಸರು ಉಂಟು, ಬೇಡಿದಲ್ಲಿ ಕೊಸರುಂಟೇ?’ ಎಂಬೊಂದು ಗಾದೆಮಾತು ಕೂಡ ಇದೆ. ಹಣ ಕೊಟ್ಟು ವಸ್ತುಗಳನ್ನು ಕೊಂಡಾಗ ವ್ಯಾಪಾರಿಯ ಬಳಿ ಪ್ರೀತಿಯಿಂದ ಅಥವಾ ಹಕ್ಕಿನಿಂದ ಸ್ವಲ್ಪ ಕೊಸರು ಕೇಳುವುದು ಸಹಜ, ನ್ಯಾಯಯುತ. ಆದರೆ ನಾವೇ ಯಾರ ಬಳಿಯಾದರೂ ಸಹಾಯ ಅಥವಾ ದಾನವನ್ನು ಬೇಡುವಾಗ, ಕೊಟ್ಟಷ್ಟನ್ನು ಕೃತಜ್ಞತೆಯಿಂದ ಸ್ವೀಕರಿಸಬೇಕೇ ಹೊರತು ಅಲ್ಲಿಯೂ ಕೊಸರು ಕೇಳುವುದು ಅತಿಯಾಸೆ, ಮರ್ಯಾದೆಗೇಡಿತನ ಎನಿಸಿಕೊಳ್ಳುತ್ತದೆ.

‘ಕಾಸಿಗೊಂದು ಕೊಸರಿಗೆರಡು’ ಎಂಬ ನುಡಿಗಟ್ಟನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಅಲ್ಪ ಬೆಲೆಗೆ ಅತಿಯಾದ ಲಾಭವನ್ನು ಅಥವಾ ಉಚಿತವಾಗಿ ಸಿಗುವ ಹೆಚ್ಚುವರಿ ಭಾಗವನ್ನು ನಿರೀಕ್ಷಿಸುವ ಜನರ ಸ್ವಭಾವವನ್ನು ಇದು ಹಾಸ್ಯಭರಿತವಾಗಿ ವಿವರಿಸುತ್ತದೆ. Bonus ಎಂಬ ಪದಕ್ಕೆ ಸಮಾನಾರ್ಥಕವಾಗಿ ‘ಕೊಸರು’ ಪದವನ್ನು ಸೂಚಿಸಿದವರು: ಅನಿತಾ ದಾವಣಗೆರೆ, ಲೋಕೇಶಪ್ಪ ಹಿತ್ಲಮನೆ, ಶ್ರೀಕಾಂತ ಗೋಡಖಿಂಡಿ, ವಿ. ಮುರಳೀಧರ, ರಾಜೇಂದ್ರ ಕೆ.ಎಸ್, ಕೃಷ್ಣ ಬರ್ವೆ, ಎಚ್.ಎಸ್ ಮಂಜುನಾಥ, ಸತ್ಯ ಹರಿಹಳ್ಳಿ, ನೀರಜ್ ನಯನ್, ಎಂ.ಕೆ ರಮೇಶ್, ಜಯಲಕ್ಷ್ಮಿ ಅಡಿಗ, ಪದ್ಮಾ ಬದರಿನಾಥ್, ಗಿರೀಶ ಕೆ.ಎಸ್, ನಾಗಮಣಿ ಶಾಂಪುರ್, ಸುಜಾತ ಕುರ್ಪಾಡ್ ಮತ್ತು ವೀಣಾ ದೇವ್. ಅರ್ಥಸಾಮೀಪ್ಯದಿಂದಾಗಿ ‘ಹೆಚ್ಚುವರಿ’ ಎಂದು ಸೂಚಿಸಿದ ಪ್ರವೇಶಿಕೆಗಳೂ (ವನಜಾಕ್ಷಿ ಮತ್ತೂರು, ಮಹಾಂತೇಶ ಇಂಚಲ, ಮಂಜುನಾಥ ಹೆಗಡೆ ಗೋಳಿಕೈ, ವಿಜಯಾ ಪರ್ವತಿಕರ, ಅಶೋಕಕುಮಾರ್ ಜೋಶಿ, ಎನ್.ಆರ್ ರಮೇಶ್, ಸಾವಿತ್ರಿ ಬೇಡಕಿಹಾಳ, ಬಸವರಾಜ ನರಸಣ್ಣವರ, ಅರ್ಚನಾ ಹೆಬ್ಬಾರ್, ಭಾಗ್ಯಶ್ರೀ ಕೆ.ಸಿ, ದೇವೇಂದ್ರ ಕಡೂರು, ರೂಪಕಲಾ ಸದಾನಂದ, ಸಂಗಮೇಶ ನಾಡಗೌಡ್ರ, ಸುಮಾ ಬೇಲೂರು, ಭಾರತಿ ಆರ್.ಭಟ್, ಗುರುರಾಜ ಗಲಗಲಿ, ನಂದಾ ಕುಲಕರ್ಣಿ, ಡಾ.ಎಸ್.ಎಸ್ ಚೋರಗಿ, ಡಾ.ಎಂ.ಎನ್ ತುಳಪುಳೆ, ಪದ್ಮಾವತಿ ಅಯ್ಯರ್, ವಿಶ್ವರಾಜ್ ಕೋಲಾರ ಮುಂತಾದವರು) ಮಾನ್ಯವೇ.

ಅಂತೆಯೇ ‘ಅತಿರಿಕ್ತ’ (ಗೋಪಾಲಕೃಷ್ಣ ಕೆ) ಕೂಡ. ಸೂರಿ ಲಿಂಗದಹಳ್ಳಿ ಸೂಚಿಸಿದ ‘ಹಿಗ್ಗಿಕೆ’ ಎಂಬ ಹೊಚ್ಚಹೊಸ ಪದ ಆಕರ್ಷಕವಾಗಿದೆ. ಹಿಗ್ಗು ಎಂದರೆ ಅಧಿಕವಾಗು ಮತ್ತು ಸಂತಸಪಡು ಎಂಬ ಎರಡೂ ಅರ್ಥಗಳಿರುವುದರಿಂದ ಇದು ಹೊಂದುತ್ತದೆಂಬ ಅವರ ತರ್ಕ ಚೆನ್ನಾಗಿದೆ. ಕಳೆದ ಸಲ ಕೇಳಿದ್ದ ಎರಡನೆಯ ಪದ Censor. ಇದರ ಇಂಗ್ಲಿಷ್ ಮೂಲದ ಚರಿತ್ರೆ ಅತ್ಯಂತ ಕುತೂಹಲಕಾರಿಯಾಗಿದೆ. ಕ್ರಿಸ್ತಪೂರ್ವ 5ನೇ ಶತಮಾನದ ಕಾಲಘಟ್ಟದಲ್ಲಿ ರೋಮನ್ ಮ್ಯಾಜಿಸ್ಟ್ರೇಟ್ (ನ್ಯಾಯಾಧೀಶರು) ಜನಗಣತಿಯನ್ನು ನಡೆಸುತ್ತಿದ್ದರು ಮತ್ತು ಸಾರ್ವಜನಿಕ ನಡವಳಿಕೆ ಹಾಗೂ ನೈತಿಕತೆಯ ಮೇಲ್ವಿಚಾರಣೆ ಮಾಡುತ್ತಿದ್ದರು. ಸಾರ್ವಜನಿಕ ಹಣಕಾಸು ಮತ್ತು ಕಾಮಗಾರಿಗಳ ಜವಾಬ್ದಾರಿಯನ್ನೂ ಹೊಂದಿದ್ದರು. ಅವರನ್ನು Censor ಎಂದು ಕರೆಯಲಾಗುತ್ತಿತ್ತು. ಫ್ರೆಂಚ್ ಭಾಷೆಯಲ್ಲೂ ಲ್ಯಾಟಿನ್​ನಲ್ಲೂ ಇದೇ ಪದಬಳಕೆ ಇತ್ತು. ಇದು ಮೂಲತಃ ‘ಮೌಲ್ಯಮಾಪನ ಮಾಡು, ಬೆಲೆ ಕಟ್ಟು, ತೀರ್ಪು ನೀಡು’ ಎಂಬರ್ಥದ Censor ಪದದಿಂದ ಬಂದದ್ದು.

ಕ್ರಮೇಣ ಲ್ಯಾಟಿನ್ ಭಾಷೆಯಲ್ಲಿ Censor ಪದಕ್ಕೆ ‘ಕಟ್ಟುನಿಟ್ಟಾದ ತೀರ್ಪಗಾರ, ಕಠಿಣ ನೈತಿಕತಾವಾದಿ, ನಿಂದಕ ಅಥವಾ ದೋಷಾರೋಪಣೆ ಮಾಡುವವನು’ ಎಂಬ ರೂಪಾಂತರಗೊಂಡ ಅರ್ಥ ಬಂತು. ಇಂಗ್ಲಿಷ್​ನಲ್ಲಿ ‘ನೈತಿಕತೆ ಮತ್ತು ನಡವಳಿಕೆಯ ಅನಗತ್ಯ ಹಸ್ತಕ್ಷೇಪ ಮಾಡುವ ತೀರ್ಪಗಾರ’ ಎಂಬ ಅರ್ಥವೂ ಬಳಕೆಗೆ ಬಂದಿತು. ಕ್ರಿ.ಶ 17ನೇ ಶತಮಾನದಿಂದೀಚೆಗೆ ‘ಪುಸ್ತಕಗಳು, ನಾಟಕಗಳು (ಆಮೇಲೆ ಚಲನಚಿತ್ರಗಳೂ) ಅನೈತಿಕ ಅಥವಾ ಧರ್ಮವಿರೋಧಿ ವಿಷಯಗಳಿಂದ ಮುಕ್ತವಾಗಿವೆಯೇ ಎಂದು ಪರೀಕ್ಷಿಸಲು ಅಧಿಕಾರ ಪಡೆದ ಅಧಿಕಾರಿ’ ಎಂಬ ಅರ್ಥವೇ ಹೆಚ್ಚು ಪ್ರಚಲಿತವಾಯಿತು. ಆಮೇಲೆ 19ನೇ ಶತಮಾನದ ಹೊತ್ತಿಗೆ ‘ರಾಜಕೀಯವಾಗಿ ವಿಧ್ವಂಸಕ ಎಂದು ಪರಿಗಣಿಸಲಾದ ಭಾಷಣ ಅಥವಾ ಪ್ರಕಟಿತ ವಿಷಯಗಳನ್ನು ಹತ್ತಿಕ್ಕುವ ಜವಾಬ್ದಾರಿ ಹೊಂದಿರುವ ಸರ್ಕಾರಿ ಪ್ರತಿನಿಧಿ’ ಎಂಬ ಅರ್ಥವ್ಯಾಪ್ತಿಯೂ ಸೇರಿಕೊಂಡಿತು.

ಇದೆಲ್ಲವನ್ನೂ ಗಮನಿಸಿದರೆ ಬಹುಶಃ ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ‘ಕತ್ತರಿ ಪ್ರಯೋಗ’ ಎಂಬ ನುಡಿಗಟ್ಟು Censor ಅರ್ಥವನ್ನು ಸರಳವಾಗಿ ಸಮರ್ಥವಾಗಿ ಪ್ರತಿಬಿಂಬಿಸುತ್ತದೆ. ಸೂಚಿಸಿದವರು: ಧಾತ್ರಿ ಶಿವಮೊಗ್ಗ, ಉಷಾಕಿರಣ್ ಅತ್ತಾವರ್, ವಿಶ್ವಜ್ಯೋತಿ ಶಿವಮೊಗ್ಗ, ನಳಿನಿ ಜಿ.ಭಟ್, ರಾಜು ಕೋಳಿವಾಡ, ಅನಿಲ್ ಕುಸುಗಲ್, ನಂದಿನಿ ಹಾಸನ, ಸಿದ್ದನಗೌಡ ಮುದಿಗೌಡ್ರ, ಭವಾನಿ ಜೋಶಿ, ವಸಂತಕುಮಾರ್ ಕಲ್ಯಾಣಿ, ಶೋಭಾ ತಿಪಟೂರು ಮುಂತಾದವರು. ‘ನಿರ್ಬಂಧ’ ಎಂದು ಸೂಚಿಸುತ್ತ ಕೆಲವು ಪ್ರವೇಶಿಕೆಗಳು ಬಂದಿವೆ. ಶಿವಕುಮಾರ್ ಸಿಂಗಟಗೆರೆ, ವಿ.ನಾಗೇಂದ್ರ, ಶ್ಯಾಮಸುಂದರ ಅತ್ರಿನಂದನ, ಮಹಾಂತೇಶ ಗೋಲಪ್ಪನವರ, ಜಿ.ಎಚ್.ಸಂಕಪ್ಪ, ಕೆ.ಎ ಭಟ್, ಭಾಗ್ಯಶ್ರೀ ಕೆಕ್ಕಾರ ಮುಂತಾದವರು. ಸಂದರ್ಭಾನುಸಾರ ಈ ಪದವನ್ನು ಕೂಡ Censor ಎಂಬರ್ಥದಲ್ಲಿ ಬಳಸುವುದು ಸಾಧ್ಯವಿದೆ. ಉದಾಹರಣೆಗೆ- ಎರಡೂವರೆ ಗಂಟೆ ಅವಧಿಯ ಚಲನಚಿತ್ರದ ಕೆಲವು ದೃಶ್ಯಗಳ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಎರಡು ಗಂಟೆಗಳ ಅವಧಿಗಿಳಿಯಿತು.

ಕೊನೆಯದಾಗಿ Theme ಇದಕ್ಕೆ ಪರ್ಯಾಯ ಪದವನ್ನು ಹುಡುಕುತ್ತ ಯಶೋದಾ ಎಂ. ಗೋಪಿ ಅವರು ಬರೆದಿರುವುದು ಮಾರ್ವಿುಕವಾಗಿದೆ: ‘‘ಹಿಂದೊಮ್ಮೆ ನಿಯತಕಾಲಿಕವೊಂದರಲ್ಲಿ ನನ್ನದೊಂದು ಕವನ ಪ್ರಕಟವಾದಾಗ ಹಿರಿಯ ಸಾಹಿತಿ ದಿ. ಜನಾರ್ದನ ಗುರ್ಕಾರ್​ರವರು ದೂರವಾಣಿ ಕರೆ ಮಾಡಿದ್ದರು. ‘ಕವನದ ಥೀಮ್ ಚೆನ್ನಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರು ಹೇಳಿದ್ದೇನೆಂದು ಅರ್ಥ ಆಗದೆ ತಡವರಿಸಿದ್ದೆ. ಇದೀಗ ಕನಾಕಪ ಅಂಕಣದಲ್ಲಿಯೂ ಅದೇ ಪದವನ್ನು ಕೇಳಿದಾಗ ತಡವರಿಕೆ ಉಂಟಾಗಿದೆ!’ ನಿಜ. ಥೀಮ್ ಎಂದೇ ಕನ್ನಡ ಬರೆವಣಿಗೆಯಲ್ಲಿ, ಸಂಭಾಷಣೆಯಲ್ಲಿ ಬಳಕೆಯಾಗುತ್ತಿದೆ. ಇಂಗ್ಲಿಷ್​ನಲ್ಲಿ Theme ಪದ ಸುಮಾರು ಕ್ರಿ.ಶ 14ನೇ ಶತಮಾನದಲ್ಲಿ ಠಿಛಿಞಛಿ ಎಂಬ ರೂಪದಲ್ಲಿ, ‘ವ್ಯಕ್ತಿಯೊಬ್ಬರು ಬರೆಯುವ ಅಥವಾ ಮಾತನಾಡುವ ವಿಷಯ ಅಥವಾ ಪ್ರಮೇಯ’ ಎಂಬರ್ಥದಲ್ಲಿ ಬಳಕೆಯಲ್ಲಿದ್ದದ್ದು. ಹಳೇ ಫ್ರೆಂಚ್​ನ teme, ಮತ್ತು ಲ್ಯಾಟಿನ್​ನ thema ಮೂಲಗಳಿಂದ, ‘ದಾಖಲಿಸಿಟ್ಟ ಅಥವಾ ನಿಗದಿಪಡಿಸಿದ ವಿಷಯ’ ಎಂಬರ್ಥದಿಂದ ಹುಟ್ಟಿಕೊಂಡಿದ್ದು. ಗ್ರೀಕ್​ನಲ್ಲಾದರೆ ‘ವಾದದ ವಿಷಯ’ ಎಂಬರ್ಥವೂ ಇತ್ತು. ಆದರೆ 20ನೆಯ ಶತಮಾನದಿಂದೀಚೆಗೆ theme song, theme park ಮುಂತಾದ ಸಂದರ್ಭಗಳಲ್ಲೂ ಥೀಮ್ ಬಳಕೆಯಾಗುತ್ತಿದೆ.

ಇದೆಲ್ಲವನ್ನೂ ಪರಿಗಣಿಸಿದರೆ ಹಳಗನ್ನಡದ ‘ಪುರುಳ್’ ಎಂಬ ಪದ, ಹೊಸಗನ್ನಡದಲ್ಲಿ ‘ಹುರುಳು’ ಎಂಬ ರೂಪದಲ್ಲಿರುವುದು ಥೀಮ್​ ಸಮಾನಾರ್ಥಕ ಎನಿಸುತ್ತದೆ. ಥೀಮ್ ಸಾಂಗ್ ‘ಹುರುಳು ಹಾಡು’ ಆಗುತ್ತದೆ. ಥೀಮ್ ಪಾರ್ಕ್ ‘ಹುರುಳು ತೋಟ’ ಆಗುತ್ತದೆ. ವೀರವನಿತೆಯರ ಶಕ್ತಿಪ್ರದರ್ಶನವನ್ನು ಬಿಂಬಿಸುವ ನವರಾತ್ರಿ ಬೊಂಬೆಗಳನ್ನು ಜೋಡಿಸಿದರೆ ಈ ಬಾರಿಯ ಹುರುಳು ಸ್ತ್ರೀಶಕ್ತಿ ಎನ್ನಲಿಕ್ಕಾಗುತ್ತದೆ. ವಸ್ತು, ಪದಾರ್ಥ, ಸತ್ತ್ವ, ಸಾರ, ವಿಷಯ, ಆಶಯ, ಮರ್ಮ ಮುಂತಾದ ಅರ್ಥಗಳನ್ನು ಹುರುಳು ಪದಕ್ಕೆ ನಿಘಂಟುವಿನಲ್ಲಿ ಕೊಟ್ಟಿರುವುದೂ ಇದನ್ನೇ ಸಮರ್ಥಿಸುತ್ತದೆ. ‘ಹುರುಳು’ ಪದವನ್ನು ಸೂಚಿಸಿದವರು ಎನ್.ವಿ ಶಂಕರ್. ಇದೇ ತರ್ಕದಿಂದ ‘ತಿರುಳು’ ಸಹ ಥೀಮ್ ಸಂವಾದಿಯಾಗಬಲ್ಲದು. ಸೂಚಿಸಿದವರು: ಪ್ರಭುಪ್ರಸಾದ್ ನಡುತೋಟ, ಕೆ.ಎಂ ಮಧ್ವರಾಯ, ಬಿ.ಎನ್ ಲಕ್ಷ್ಮಣ, ಯಮನಪ್ಪ ಕೋಟ್ನಿಕಲ್, ಯು. ಪರಮೇಶ್ವರ ಭಟ್, ರಾಮಚಂದ್ರ ಬಡಗಾಬೆಟ್ಟು, ರೂಪಾ ದಾವಣಗೆರೆ, ಸೀತಾರಾಮ ರಾವ್, ನರೇಂದ್ರನಾಥ್ ಎಚ್.ಎಂ, ಸುನೀತಾ ನಿರಂಜನ ಮುಂತಾದವರು. ಇದಲ್ಲದೆ ಹಂದರ (ಮಮತಾ ಕುಂದಾಪುರ, ನಾಗೇಶ್ ಫಾಟಕ್, ತ್ರಿವೇಣಿ ಬೆಂಗಳೂರು) ಸಹ ಪರಿಗಣನೆಗೆ ಯೋಗ್ಯವಿದೆ.

ಈ ವಾರದ ಮೂರು ಪದಗಳು

1. Coupon: ಯಾವುದೇ ಉತ್ಪನ್ನ ಅಥವಾ ಸೇವೆಯನ್ನು ಕೊಳ್ಳುವಾಗ ರಿಯಾಯಿತಿ, ಮರುಪಾವತಿ, ಅಥವಾ ಉಚಿತ ವಸ್ತುವನ್ನು ಪಡೆಯಲು ಬಳಸಬಹುದಾದ ಚೀಟಿ.

2. Rigging: ಚುನಾವಣೆ ಪ್ರಕ್ರಿಯೆಯಲ್ಲಿ ಬಲಪ್ರಯೋಗದಿಂದ ನಡೆಸಲಾಗುವ ಮತಪತ್ರ ವಶೀಕರಣವೇ ಮುಂತಾದ ಮೋಸ, ವಂಚನೆ, ಕಾನೂನು ವಿರೋಧಿಕಾರ್ಯ.

3. Smoothie: ವಿವಿಧ ಹಣ್ಣುಗಳು, ತರಕಾರಿಗಳು ಮತ್ತು ಹಾಲು, ನೀರು ಅಥವಾ ಮೊಸರಿನಂತಹ ದ್ರವ ಪದಾರ್ಥ ಬಳಸಿ ತಯಾರಿಸಲಾಗುವ ಆರೋಗ್ಯಪೇಯ.

ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945