ಅಂಕಣ

ಮನೋಲ್ಲಾಸ: ನಾವು ಬದಲಾದರೆ ಸಾಕು...

| ಚಿದಂಬರ ಮುನವಳ್ಳಿ, ಬೆಳಗಾವಿ

ಒಂದು ವಿಶಾಲವಾದ ರಾಜ್ಯದ ರಾಜ ವಿಚಿತ್ರ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದ. ರಾಜ್ಯದಲ್ಲಿಯ ಎಲ್ಲ ವೈದ್ಯರು, ಹಕೀಮರು ನಾನಾ ವಿಧಗಳ ಉಪಚಾರ ಮಾಡಿದರೂ ಕಡಿಮೆಯಾಗಲಿಲ್ಲ. ಕೊನೆಗೆ ಒಬ್ಬ ನಾಟಿ ವೈದ್ಯ ಬಂದು ರಾಜನನ್ನು ತಪಾಸಿಸಿ, ‘ನನ್ನ ಹತ್ತಿರ ಇದಕ್ಕೆ ಮದ್ದಿದೆ. ಆದರೆ ಇದನ್ನು ಸೇವಿಸಲು ಒಂದು ನಿಯಮವಿದೆ. ಔಷಧೋಪಚಾರ ನಡೆಯುವಷ್ಟು ದಿವಸ ರಾಜನು ಕೆಂಪು ಬಣ್ಣವನ್ನು ಮಾತ್ರ ನೋಡಬೇಕು’ ಎಂದ. ರಾಜ ಒಪ್ಪಿದ. ಈ ಸಂಬಂಧ ರಾಜಾಜ್ಞೆ ಹೊರಡಿತು. ಅರಮನೆಯಲ್ಲಿಯ ಗೋಡೆ, ಕಿಟಕಿ, ಬಾಗಿಲುಗಳು, ಪರದೆಗಳು, ನೆಲಹಾಸುಗಳು, ಉಡುಗೆ-ತೊಡುಗೆ, ರಥಗಳು ಎಲ್ಲವನ್ನೂ ಕೆಂಪು ವರ್ಣಕ್ಕೆ ಬದಲಾಯಿಸಲಾಯಿತು. ಒಟ್ಟಿನಲ್ಲಿ ಎಲ್ಲವೂ ರಕ್ತವರ್ಣದ್ದಾಯಿತು.

ಹೀಗೆಯೇ ಸ್ವಲ್ಪ ದಿನ ಕಳೆದ ಬಳಿಕ ರಾಜನಿಗೆ ಒಂದೇ ಕಡೆ ಇದ್ದು ಬೇಜಾರೆನಿಸಿ ಹೊರಗಡೆ ಹೋಗಬೇಕೆಂದು ಮನಸ್ಸಾದ್ದರಿಂದ ತನ್ನ ಇಚ್ಛೆಯನ್ನು ಮಂತ್ರಿಗೆ ತಿಳಿಸಿದ. ಆದರೆ ಇದರ ವ್ಯವಸ್ಥೆ ಮಾಡುವುದು ಹೇಗೆ? ಎಲ್ಲ ಪ್ರಜೆಗಳಿಗೆ ಕೆಂಪು ಬಣ್ಣದ ಬಟ್ಟೆ ಧರಿಸಲು ಒತ್ತಾಯ ಮಾಡಲಾದೀತೇ? ರಾಜ ಹೊರಗೆ ಬಂದಾಗ ವಿವಿಧ ಬಣ್ಣದ ಪಶು, ಪಕ್ಷಿಗಳನ್ನು ತಡೆಯುವುದು ಹೇಗೆ? ಊರಿನ ರಸ್ತೆಗಳು, ಪೇಟೆಯಲ್ಲಿಯ ತರಕಾರಿಗಳು, ಧಾನ್ಯಗಳು, ಅಷ್ಟೇ ಏಕೆ ಹಚ್ಚ ಹಸುರಾದ ಗಿಡ ಮರಗಳು, ನೀಲಿಬಣ್ಣದ ಸುಂದರ ಆಕಾಶ ಇವೆಲ್ಲವುಗಳ ಬಣ್ಣವನ್ನು ಹೇಗೆ ಬದಲಾಯಿಸುವುದು? ಇದೊಂದು ದೊಡ್ಡ ಸಮಸ್ಯೆಯಾಯಿತು. ‘ಇದಕ್ಕೆ ಪರಿಹಾರ ಸೂಚಿಸುವ ಯಾರಾದರೂ ಇದ್ದರೆ ಕೂಡಲೇ ಬರಬೇಕು. ಅವರಿಗೆ ಯೋಗ್ಯ ಬಹುಮಾನ ನೀಡಲಾಗುವುದು’ ಎಂದು ಮಂತ್ರಿ ಡಂಗುರ ಹೊಡಿಸಿದ. ಆಗ ಒಬ್ಬ ಯುವಕನು ಮುಂದೆ ಬಂದು ಈ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ತನ್ನ ಹತ್ತಿರವಿದ್ದ ಕೆಂಪು ಗಾಜಿನ ಕನ್ನಡಕ ತೆಗೆದು ರಾಜನಿಗೆ ಧರಿಸಲು ಹೇಳಿದ. ಇದರಿಂದ ಅವನಿಗೆ ಎಲ್ಲವೂ ಕೆಂಪಾಗಿ ತೋರ ಹತ್ತಿತು. ಯಾವುದನ್ನೂ ಬದಲಾಯಿಸುವ ಅವಶ್ಯಕತೆ ಬೀಳಲಿಲ್ಲ. ಮಂತ್ರಿ ನಿಟ್ಟುಸಿರು ಬಿಟ್ಟ.

ಜಗತ್ತಿನಲ್ಲಿ ಭಿನ್ನ ಭಿನ್ನ ರುಚಿ, ವೇಷಭೂಷಣ, ಆಚಾರವಿಚಾರ, ನಡವಳಿಕೆ ಹೊಂದಿರುವ ಜನರು ಇರುತ್ತಾರೆ. ದೇವರ ಸೃಷ್ಟಿಯೂ ಸತ್ವ, ರಜ, ತಮೋ ಈ ತ್ರಿಗುಣಗಳ ಸಂಯೋಗವಾದ ಮಾಯೆಯಿಂದ ಕೂಡಿದ್ದು ವರ್ಣಮಯವಾಗಿದೆ. ಅವುಗಳಲ್ಲಿ ಕೆಲವೊಂದು ನಮಗೆ ಸರಿ ಹೊಂದದಿರಬಹುದು. ಕಿರಿಕಿರಿ ಅನಿಸುವ ಹಾಗೆ ನಡೆದುಕೊಳ್ಳುವ ಜನ ಅಥವಾ ವಸ್ತುಗಳು ನಮ್ಮ ಸಂಪರ್ಕಕ್ಕೆ ಬರಬಹುದು. ಅವುಗಳನ್ನು ನಮ್ಮ ಇಚ್ಛೆಯಂತೆ ತಿದ್ದಲು ಹೊರಟರೆ ನಮ್ಮ ತಲೆ ಕೆಟ್ಟು ಹೋಗುತ್ತದೆ. ಅದಕ್ಕೆಂದೇ ಶರಣರು ‘ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನು, ಮನವ ಸಂತೈಸಿಕೊಳ್ಳಿ’ ಎಂದಿದ್ದಾರೆ. ನಮ್ಮ ಶಾಸ್ತ್ರಗ್ರಂಥಗಳೂ ‘ಮೊದಲು ನಿನ್ನನ್ನು ನೀನು ತಿಳಿ’ ಎಂದು ಸಾರುತ್ತವೆ. ನಮ್ಮನ್ನು ನಾವು ಸುಧಾರಿಸಿಕೊಂಡರೆ, ಸಕಾರಾತ್ಮಕ ಬದಲಾವಣೆಯಾದರೆ ಸಾಕಲ್ಲವೇ?

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

(ಪ್ರತಿಕ್ರಿಯಿಸಿ: manollasavv@gmail.com)