ಅಂಕಣ

ಸಂತಸ, ನೆಮ್ಮದಿ ನಮ್ಮದಾಗಬೇಕಾದರೆ...: ಮನೋಲ್ಲಾಸ

Webdesk - Ravikanth
| ಡಾ. ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

ಬದುಕಿನ ಜಂಜಾಟದಲ್ಲಿ ಬೇಸತ್ತ ಸಾಧಕನೊಬ್ಬ, ಭಗವಂತನ ದರ್ಶನ ಪಡೆಯಲು ದೀರ್ಘಕಾಲ ತಪಸ್ಸನ್ನಾಚರಿಸಿದ. ತಪಸ್ಸಿಗೆ ಮೆಚ್ಚಿದ ಭಗವಂತನು ಪ್ರತ್ಯಕ್ಷನಾಗಿ- ‘ಏನು ವರ ಬೇಕು?’ ಎಂದು ಕೇಳಿದ. ಈತ, ತನಗೆ ಬದುಕಿನಲ್ಲಿ ಸಂತಸ, ನೆಮ್ಮದಿ ಹಾಗೂ ಶಾಂತಿಯನ್ನು ಕರುಣಿಸಬೇಕೆಂದು ಕೋರಿದ. ಆಗ ಭಗವಂತನು ಅವನಿಗೆ ರೇಷ್ಮೆ ವಸ್ತ್ರ ಹೊದಿಸಿದ ಮೂರು ತಟ್ಟೆಗಳನ್ನು ನೀಡಿದ. ಅಚ್ಚರಿಯಿಂದ ಭಕ್ತನು ರೇಷ್ಮೆ ವಸ್ತ್ರವನ್ನು ಸರಿಸಿ ಆ ತಟ್ಟೆಗಳನ್ನು ನೋಡಿದಾಗ, ಅವನಿಗೆ ಕಂಡದ್ದು ಕೆಲವು ಬೀಜಗಳು ಮಾತ್ರ. ‘ಈ ತಟ್ಟೆಗಳಲ್ಲಿರುವುದು ಸಂತಸ, ನೆಮ್ಮದಿ ಹಾಗೂ ಶಾಂತಿಯ ಬೀಜಗಳು. ಇವುಗಳನ್ನು ಪರಿಶ್ರಮ, ತಾಳ್ಮೆ, ಪ್ರಾರ್ಥನೆಯ ಬಲದಿಂದ ಬೆಳೆಸು. ಈ ಬೀಜಗಳು ಮೊಳೆತು, ಸಸಿಗಳಾಗಿ ನಂತರ ದೊಡ್ಡ ಮರಗಳಾಗುತ್ತವೆ. ಈ ಮರಗಳಲ್ಲಿ ನಿನಗೆ ‘ಸಂತಸ, ನೆಮ್ಮದಿ ಹಾಗೂ ಶಾಂತಿಯ’ ಫಲಗಳು ಲಭಿಸುತ್ತವೆ’ ಎಂದು ತನ್ನ ಭಕ್ತನನ್ನು ಆಶೀರ್ವದಿಸಿ ಭಗವಂತನು ಅಂತರ್ಧಾನನಾದ.

ಆ ಸಾಧಕನು, ಭಗವಂತನ ಅನುಜ್ಞೆಯಂತೆ, ಮಣ್ಣನ್ನು ಹದ ಮಾಡಿ, ಆ ಬೀಜಗಳನ್ನು ನೆಟ್ಟು, ನೀರು, ಗೊಬ್ಬರ ಹಾಕಿ ಪೋಷಿಸಿದ. ಸಸಿಗಳ ಸುತ್ತ ಬೆಳೆದ ಕಳೆಯನ್ನು ಕಿತ್ತು, ನಿತ್ಯ ದೇವರನ್ನು ಪ್ರಾರ್ಥಿಸಿದ. ಕೆಲವೇ ವರ್ಷಗಳಲ್ಲಿ, ಮರಗಳು ಬೆಳೆದು, ಅವುಗಳ ರೆಂಬೆ, ಕೊಂಬೆಗಳ ತುಂಬೆಲ್ಲ ಫಲ, ಪುಷ್ಪಗಳು ತೂಗಾಡಿದವು. ಆ ಸಾಧಕನಿಗೆ ಭಗವಂತನ ಮಾತಿನ ಅರ್ಥ ಹೊಳೆಯಿತು, ತನ್ನ ಪರಿಶ್ರಮದ ಫಲದಿಂದ ಬೆಳೆದ ಆ ಮರ, ತಾಳ್ಮೆಯಿಂದ ಪೋಷಿಸಿದಾಗ ಫಲ, ಪುಷ್ಪಗಳನ್ನು ನೀಡಿತು ಎಂಬುದು ಪ್ರಾರ್ಥನೆ ಮಾಡುತ್ತ ಹಲವು ವರ್ಷಗಳನ್ನು ಕಳೆದ ಸಾಧಕನಿಗೆ ಜ್ಞಾನೋದಯವಾಯಿತು. ಹುಲುಸಾಗಿ ಬೆಳೆದ ಮರವನ್ನು ನೋಡಿದಾಗ, ಅವನ ಮನಸ್ಸು ಸಂತಸದಿಂದ ನಲಿದಾಡಿತು, ಮರದಲ್ಲಿ ಬಿಟ್ಟ ಹೂ, ಹಣ್ಣುಗಳನ್ನು ಕಂಡಾಗ ಅವನಲ್ಲಿ ತೃಪ್ತಿ ಮೂಡಿತು. ದೇವರ ಪ್ರಾರ್ಥನೆಯಿಂದ ಮನದಲ್ಲಿ ಶಾಂತಿ ನೆಲೆಸಿತು.

ನಾವು ಬದುಕಿನಲ್ಲಿ ಸಫಲತೆ ಪಡೆಯಲು, ಹಲವಾರು ವರ್ಷಗಳ ನಿರಂತರ ಪ್ರಯತ್ನ, ತಾಳ್ಮೆ ಬೇಕೇ ಬೇಕು. ಪ್ರಾಮಾಣಿಕತೆ, ನಿಷ್ಠೆ, ಶ್ರದ್ಧೆಯಿಂದ ಕೆಲಸವನ್ನು ನಿರ್ವಹಿಸಬೇಕು. ತತ್ ಕ್ಷಣವೇ ಫಲಾಫಲಗಳನ್ನು ನಿರೀಕ್ಷಿಸಬಾರದು. ರಾತ್ರಿ ಕಳೆದು ಬೆಳಗಾಗುವುದರೊಳಗೆ ಯಶಸ್ಸನ್ನು ಸಂಪಾದಿಸಲು ಸಾಧ್ಯವಿಲ್ಲ. ಆ ಬಗೆಯ ಯಶಸ್ಸು ಶಾಶ್ವತವೂ ಅಲ್ಲ. ಸಹನೆ, ತಾಳ್ಮೆಯಿಂದ ಕಾಯಬೇಕು. ನಿಷ್ಕಾಮ ಕರ್ಮವು ಮೋಕ್ಷದಾಯಕವಾದರೆ, ಸಕಾಮ ಕರ್ಮ ಬಂಧನಕ್ಕೆ ಕಾರಣವಾಗುತ್ತದೆ. ಭಗವಂತನ ಪ್ರಾರ್ಥನೆಯಿಂದ, ಹೃದಯದಲ್ಲಿರುವ ಭಕ್ತಿಯ ಸಸಿ ಹೆಮ್ಮರವಾಗಿ ಬೆಳೆದು ಮುಕ್ತಿಯ ಫಲವನ್ನು ನೀಡುತ್ತದೆ. ಮನಸ್ಸಿನಲ್ಲಿರುವ ತಮೋ ಗುಣ, ರಜೋ ಗುಣ ದೂರವಾಗಿ ಸತ್ವ ಗುಣ ಸ್ಥಿರವಾಗುತ್ತದೆ. ನಮ್ಮ ಬದುಕು ಸುಗಂಧ ಸೂಸುವ ಹೂವಿನಂತೆ ಅರಳಿ, ಆ ಪರಮಾತ್ಮನಲ್ಲಿ ಲೀನವಾಗುತ್ತದೆ.

(ಲೇಖಕರು ನಿವೃತ್ತ ಪ್ರಾಂಶುಪಾಲರು, ಹವ್ಯಾಸಿ ಬರಹಗಾರರು)