1. ವೈಯಕ್ತಿಕ ಶಿಸ್ತು: ನಮ್ಮ ಸ್ವಂತ ಇಚ್ಛಾಶಕ್ತಿಯಿಂದ ನಮಗೆ ನಾವೇ ಹೇರಿಕೊಂಡು, ಪಾಲಿಸುವ ಶಿಸ್ತನ್ನು ವೈಯಕ್ತಿಕ ಶಿಸ್ತು ಎನ್ನಬಹುದು. ಹಲವರ ಬದುಕಿನ ವೈಫಲ್ಯಕ್ಕೆ ವೈಯಕ್ತಿಕ ಶಿಸ್ತು ಇಲ್ಲದಿರುವುದೇ ಕಾರಣ. ಮನಬಂದಂತೆ ಬದುಕುವುದರಿಂದ ಜೀವನದಲ್ಲಿ ಮಹತ್ತರವಾದದನ್ನು ಸಾಧಿಸಲಾಗದು. ಈ ವೈಯಕ್ತಿಕ ಶಿಸ್ತು 3 ವಿಧವಾಗಿದೆ. ದೈಹಿಕ-ಮಾನಸಿಕ ಮತ್ತು ಆಧ್ಯಾತ್ಮಿಕ. ನಿರ್ಧಿಷ್ಟವಾದ ದಿನಚರಿಯ ಪಾಲನೆ, ಸಮಯಾನುಸಾರ ಆಹಾರ ಸೇವನೆ, ನಿದ್ರೆ, ವ್ಯಾಯಾಮ, ಸಮಯ ಪಾಲನೆ, ಶ್ರದ್ಧೆಯಿಂದ ತಮ್ಮ ಕೆಲಸ ಕಾರ್ಯಗಳ ನಿರ್ವಹಣೆ, ನಮ್ಮ ನಡೆನುಡಿಯಲ್ಲಿ ಶಿಸ್ತು ಎಲ್ಲವೂ ವೈಯಕ್ತಿಕ ಶಿಸ್ತಿನ ಅಂಶಗಳು. ಈ ಶಿಸ್ತನ್ನು ಪರಿಪಾಲಿಸುವ ವ್ಯಕ್ತಿ ಆಂತರಿಕ ಶಕ್ತಿಯನ್ನು ಪಡೆಯುತ್ತಾನೆ ಹಾಗೂ ಜವಾಬ್ದಾರಿಯುತವಾಗಿ, ತನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿಭಾಯಿಸಲು ಸಮರ್ಥನಾಗುತ್ತಾನೆ. ಇಲ್ಲದವರು ತಮಗೆ ತಾವೇ ಮಾರಕವಾಗುವುದರ ಜೊತೆ, ಸಂಸಾರಕ್ಕೂ, ಸಮಾಜಕ್ಕೂ ಕಂಟಕಪ್ರಾಯರಾಗುತ್ತಾರೆ.
2. ಆತ್ಮನಿರ್ಭರತೆ ಇಲ್ಲವೇ ಆತ್ಮವಿಶ್ವಾಸವೆಂದರೆ ತನ್ನ ಶಕ್ತಿ ಸಾಮರ್ಥ್ಯಗಳ ಬಗ್ಗೆ ತಾನೇ ತಿಳಿದುಕೊಂಡು ಸಕಾರಾತ್ಮಕ ಭಾವನೆಗಳನ್ನು ಹೊಂದಿರುವುದು. ನಮ್ಮ ಅಂತರ್ಶಕ್ತಿಯ ಬಗ್ಗೆ ನಿಖರವಾದ ಅರಿವು ನಮಗೇ ಇದ್ದಲ್ಲಿ ಅದು ನಮ್ಮ ಆತ್ಮವಿಶ್ವಾಸವನ್ನು ಭದ್ರಗೊಳಿಸುತ್ತದೆ. ನಾವು ಏನು ಆಗಿಲ್ಲವೋ, ಅದರ ಬಗ್ಗೆ ಅರಿತುಕೊಂಡು ಏನಾಗಬೇಕೆಂದಿರುವೆಯೋ ಅದರ ಬಗ್ಗೆ ಕಾರ್ಯಪ್ರವೃತ್ತರಾರುವುದು ವ್ಯಕ್ತಿತ್ವ ನಿರ್ವಣದ ಸೂತ್ರ. ಆತ್ಮಾಭಿಮಾನವನ್ನು ಬೆಳೆಸಿಕೊಂಡು, ಜೀವನವನ್ನು ಪ್ರೀತಿಸೋದೇ ಆತ್ಮಗೌರವ. ಇದನ್ನು ಹೆಚ್ಚಿಸಿಕೊಂಡಷ್ಟು ವ್ಯಕ್ತಿತ್ವ ವಿಕಸನ ಸುಲಭ ಸಾಧ್ಯವೆನಿಸುತ್ತದೆ.
3. ಸ್ವಾಭಿಮಾನೀ, ಸ್ವಾವಲಂಬೀ ಜೀವನ, ವ್ಯಕ್ತಿತ್ವ ವಿಕಸನದ ಪ್ರತಿಫಲ. ನಮ್ಮ ಭವಿಷ್ಯ ನಮ್ಮ ಹಣೆ ಬರಹದ ಮೇಲೆ ಅವಲಂಬಿತವಾಗಿಲ್ಲ; ಹಣೆಯ ಬೆೆವರಿನ ಮೇಲೆ ಅವಲಂಬಿತವಾಗಿದೆ. ಭಗವಂತ ನಮಗೆ ಹಣೆಯನ್ನಷ್ಟೇ ಕೊಟ್ಟ; ನಮ್ಮ ಹಣೆ ಬರಹವನ್ನು ನಾವು ನಾವೇ ಬರೆದುಕೊಳ್ಳಬೇಕು. ದೇವರು ನಮಗೆ ಜೀವವನ್ನಷ್ಟೇ ಕೊಟ್ಟ; ಜೀವಿಸುವ ಬಗೆಯನ್ನ ನಮಗೇ ಬಿಟ್ಟು ಬಿಟ್ಟ. ಜೀವನವೆಂದರೆ ಒಂದು ಪುಸ್ತಕವಿದ್ದಂತೆ- ಮೊದಲ ಪುಟ ಜನನವಾದರೆ, ಕೊನೆಯ ಪುಟ ಮರಣ. ಮಧ್ಯದ ಹಾಳೆಗಳನ್ನು ನಾವೇ ತುಂಬಬೇಕು.
4. ವ್ಯಕ್ತಿತ್ವ ನಿರ್ವಣದ ಇನ್ನೊಂದು ಕಾರ್ಯಸೂಚಿಯೆಂದರೆ ಜೀವನದಲ್ಲಿ ನಾವು ಏನಾಗಬೇಕು, ಏನನ್ನು ಮಾಡಬೇಕು ಎಂಬುದರ ಬಗ್ಗೆ ಕನಸು ಕಾಣುವುದು. ತದನಂತರ ಕಂಡ ಕನಸನ್ನು ಸಾಕಾರಗೊಳಿಸುವುದು. ಇದಕ್ಕೆ ಆತ್ಮವಿಶ್ವಾಸ-ಬದ್ಧತೆ, ದೃಢತೆ, ಶಿಸ್ತು, ತಾಳ್ಮೆ ಕಾರ್ಯಸೂಚಿ ಹಾಗೂ ಕಾರ್ಯತಂತ್ರ ಬೇಕು. ಅಡ್ಡಿ ಆತಂಕಗಳು ಏಳು ಬೀಳುಗಳು ಏನೇ ಇರಲಿ, ಗುರಿ ತಲುಪುವ ಛಲ ಮಾತ್ರ ಸದಾ ಜಾಗೃತವಾಗಿರಲಿ.
5. ಪರಿಶ್ರಮ, ಪ್ರಾಮಾಣಿಕತೆ, ಪಾರದರ್ಶಕತೆ, ಮೌಲ್ಯಗಳು, ಸೃಜನಶೀಲತೆ, ಮುಕ್ತ ಮನಸ್ಸು, ನಾಯಕತ್ವ, ಸಂವಹನ, ಸಾಮರ್ಥ್ಯ ಇತ್ಯಾದಿ ಗುಣಗಳು ವ್ಯಕ್ತಿತ್ವ ನಿರ್ವಣಕ್ಕೆ ಅವಶ್ಯವಾದ ಅವಿಭಾಜ್ಯ ಅಂಶಗಳು. ವ್ಯಕ್ತಿಯ ಚರಿತ್ರೆಗಿಂತಲೂ ಆತನ ಚಾರಿತ್ರ್ಯ ಮುಖ್ಯ; ನೋಟಕ್ಕಿಂತಲೂ ನಡತೆ ಮುಖ್ಯ. ನಮ್ಮ ಆಚಾರ ಆಚರಣೆಗಿಂತಲೂ ನಮ್ಮ ವಿಚಾರಧಾರೆಗಳು ಮುಖ್ಯ. ಅವು ಉನ್ನತವಾಗಿರಬೇಕು; ವಿಶಾಲವಾಗಿರಬೇಕು. ಉತ್ತಮ ಯೋಚನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ; ಉತ್ತಮ ವ್ಯಕ್ತಿತ್ವ ಇನ್ನಷ್ಟು ಉತ್ತಮ ಯೋಚನೆಗಳನ್ನು ಹುಟ್ಟು ಹಾಕುತ್ತದೆ.