| ಡಾ. ಕೆ.ಪಿ. ರಘುಪ್ರಸಾದ್
ಭಾರತದ ಕೃಷಿಗೆ ತನ್ನದೇ ಆದ ಇತಿಹಾಸ ಹಾಗೂ ವೈವಿಧ್ಯತೆ ಇದೆ. ಶೇ.17.60 ಜಾಗತಿಕ ಜನಸಂಖ್ಯೆಯನ್ನು ಹೊಂದಿರುವ ನಮ್ಮರಾಷ್ಟ್ರ ಶೇ.15 ಜಾನುವಾರುಗಳ ಸಂಖ್ಯೆಯನ್ನೂ ಹೊಂದಿದೆ. ಜಗತ್ತಿನ ಒಟ್ಟು ಭೌಗೋಳಿಕ ಕ್ಷೇತ್ರದಲ್ಲಿ ಶೇ. 2.4 ಕ್ಷೇತ್ರ ಹಾಗೂ 4.2 ಪ್ರತಿಶತ ಜಲ ಸಂಪನ್ಮೂಲ ಹೊಂದಿದೆ. ಇವುಗಳನ್ನು ಬಳಸಿಕೊಂಡು ಈಗಾಗಲೆ 142 ಮಿ. ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ಪ್ರತಿಶತ 44 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಇದರ ಫಲಶೃತಿ ಎಂಬಂತೆ ಪ್ರಸ್ತುತ ಒಟ್ಟು ದೇಶೀಯ ಉತ್ಪಾದನೆಯಲ್ಲಿ ಕೃಷಿ ಕ್ಷೇತ್ರದ ಪಾಲು ಶೇ.17.8 ಇದ್ದು, ಇದು ರಾಷ್ಟ್ರದ ಒಟ್ಟಾರೆ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಪ್ರಸ್ತುತ ರಾಷ್ಟ್ರದ ಕೃಷಿ ಉತ್ಪಾದನೆ ತೀವ್ರಗತಿಯಲ್ಲಿಯೇ ಮುಂದುವರಿದಿದ್ದು, 309 ಮಿಲಿಯನ್ ಟನ್ ಆಹಾರ ಬೆಳೆಗಳಿಂದ, 326 ಮಿ. ಟನ್ ತೋಟಗಾರಿಕಾ ಬೆಳೆಗಳಿಂದ, 187 ಮಿ. ಟನ್ ಹೈನುಗಾರಿಕೆಯಿಂದ, ಅದೇರೀತಿ 82 ಮಿ. ಟನ್ ಮಾಂಸ, ಮೀನು, ಮೊಟ್ಟೆಗಳಿಂದ ಉತ್ಪಾದನೆಯಾಗುತ್ತಿದ್ದು, ಒಟ್ಟಾರೆ 900 ಮಿ. ಟನ್ ನಮ್ಮರಾಷ್ಟ್ರದ ಕೃಷಿ ಕ್ಷೇತ್ರದ ಉತ್ಪಾದನೆಯಾಗಿದೆ. ಇದು ಏಷ್ಯಾದ ಶೇ.23 ಹಾಗೂ ಜಾಗತಿಕ ಮಟ್ಟದ ಶೇ. 11 ಉತ್ಪಾದನೆಯಾಗಿರುತ್ತದೆ. ಹಾಗಿದ್ದರೂ 2030ನೇ ಸಾಲಿಗೆ 350 ಮಿ. ಟನ್ ಹಾಗೂ 2050ಕ್ಕೆ 405 ಮಿ. ಟನ್ ಆಹಾರದ ಉತ್ಪಾದನೆಯ ಅಗತ್ಯ ಇದ್ದು, ಈ ನಿಟ್ಟಿನಲ್ಲಿ ಹೊಸ ಪ್ರಯತ್ನಗಳು ನಡೆಯಬೇಕಿದೆ. ಈ ಗುರಿ ಮುಟ್ಟುವಲ್ಲಿ ನಮ್ಮಆಹಾರ ಉತ್ಪಾದನಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಅವಶ್ಯಕತೆ ಇದ್ದು ಲಭ್ಯವಿರುವ ಹಿಡುವಳಿಯಲ್ಲಿಯೇ ಹೆಚ್ಚಿನ ಇಳುವರಿ ತೆಗೆಯುವ ಜತೆಗೆ, ಕಾಬೋಹೈಡ್ರೇಟ್ನಿಂದ ಪೋ›ಟೀನ್ಯುುಕ್ತ ಆಹಾರದತ್ತ ಒತ್ತು ನೀಡಬೇಕಾಗಿದೆ. ಇದರ ಜತೆಗೆ ರೈತರ ಸಾಮಾಜಿಕ, ಆರ್ಥಿಕ ಸ್ಥಿತಿಯಲ್ಲಿ ಇನ್ನೂ ಹೆಚ್ಚಿನ ಸುಧಾರಣೆಯಾಗಬೇಕಾಗಿದ್ದು, ಭಾರತ ಸರ್ಕಾರದ ಕೃಷಿಕರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ರಮ ಹೆಚ್ಚು ಪ್ರಸ್ತುತವಾಗಿದೆ. ಇದನ್ನು ಸಾಧಿಸುವಲ್ಲಿ ಸೆಕೆಂಡರಿ ಅಗ್ರಿಕಲ್ಚರ್ ಅಂದರೆ ಕೋಯ್ಲೋತ್ತರ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಅದರಲ್ಲೂ ವಿಶೇಷವಾಗಿ ಸಂಸ್ಕರಣೆ, ಮೌಲ್ಯವರ್ಧನೆ, ಬ್ರಾ್ಯಂಡಿಂಗ್,ರಫ್ತು ಅವಕಾಶಗಳ ಸದ್ಬಳಕೆ ಮುಂತಾದವುಗಳು ಭವಿಷ್ಯದ ಆಯ್ಕೆಗಳಾಗಿದೆ.
ಉದ್ಯಮಶೀಲತೆ ಭರವಸೆ: ಕೃಷಿ ಕ್ಷೇತ್ರ ಬದಲಾವಣೆಯ ಕಾಲಚಕ್ರದ ಭಾಗವಾಗಿದೆ. ಪ್ರಸ್ತುತ ಎಲ್ಲೋ ಒಂದೆಡೆ ಸಾಂಪ್ರದಾಯಿಕ ಕೃಷಿಯಿಂದ ಇತ್ತೀಚಿನ ಆವಿಷ್ಕಾರಗಳಾದ ನಿಖರ ಕೃಷಿ, ಡಿಜಿಟಲ್ ಕೃಷಿ, ಮಾಹಿತಿ ತಂತ್ರಜ್ಞಾನಗಳ ಬಳಕೆ, ರೊಬೋಟಿಕ್ಸ್, ಬ್ಲಾಕ್ಚೈನ್ ತಾಂತ್ರಿಕತೆ, ಬಿಗ್ಡಾಟಾ, ಹೈಡ್ರೋಫೋನಿಕ್ಸ್ ಗಳ ಬಳಕೆಗೂ ಒತ್ತು ನೀಡಲಾಗುತ್ತಿದೆ. ತನ್ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಪರ್ಧೆ ಸಾಧ್ಯ. ಇದಕ್ಕೆ ಪೂರಕವಾಗಿ ಕೃಷಿಯನ್ನು ಉದ್ಯಮವನ್ನಾಗಿ ಪರಿಗಣಿಸುವುದು ಆಧುನಿಕ ಅನಿವಾರ್ಯತೆಗಳಲ್ಲಿ ಮತ್ತೊಂದು. ಜೀವನಕ್ಕಾಗಿ ಕೃಷಿ ಎನ್ನುವ ಪರಿಕಲ್ಪನೆಯಿಂದ ಇಂದು ಮಾರುಕಟ್ಟೆ ಆಧಾರಿತ ಕೃಷಿ ಕಡೆ ಬದಲಾವಣೆಗಳು ಆರಂಭವಾಗಿದ್ದರೂ ಕೃಷಿಕರ ಆದಾಯದಲ್ಲಿ ನಿರೀಕ್ಷಿತ ಹೆಚ್ಚಳ ಸಾಧ್ಯವಾಗದಿದ್ದಾಗ ಉದ್ಯಮಶೀಲತೆ ಒಂದು ಭರವಸೆಯ ಬೆಳಕನ್ನು ಮೂಡಿಸಿದೆ. ಪ್ರಸ್ತುತ ಕೃಷಿಯಲ್ಲಿಯೂ ಯೋಜಿತ ಚಟುವಟಿಕೆಗಳು, ಸಂಪನ್ಮೂಲಗಳ ಸಮರ್ಪಕ ನಿರ್ವಹಣೆ, ಅಧಿಕ ಇಳುವರಿ ಸಾಗರದಾಚೆಗಿನ ಮಾರುಕಟ್ಟೆ ಅವಕಾಶಗಳನ್ನು ಹುಡುಕಿಕೊಂಡಾಗ ಮಾತ್ರ ಲಾಭಾಂಶದಲ್ಲಿ ಹೆಚ್ಚು ಮಾಡಲು ಸಾಧ್ಯ. ಹಾಗಾದಾಗ ಕೃಷಿಯತ್ತ ಬಂಡವಾಳವೂ ಹರಿದುಬರಲಿದೆ. ಒಟ್ಟಾರೆ ಕೃಷಿ ಕ್ಷೇತ್ರದ ಹೊಸ ಅವಕಾಶಗಳಿಗೆ ಎಲ್ಲರೂ ಮುಕ್ತರಾಗಬೇಕಾಗಿದ್ದು, ಕೃಷಿ ಪ್ರತಿಯೊಬ್ಬರಿಗೂ ಸಂಬಂಧಿಸಿದ ಚಟುವಟಿಕೆಯಾಗಬೇಕಾಗಿದೆ. ಆಗ ಮಾತ್ರ ಭವಿಷ್ಯದ ಕೃಷಿ ಉಜ್ವಲವಾಗಲು ಸಾಧ್ಯ.
ಸಣ್ಣ, ಅತಿ ಸಣ್ಣ ಹಿಡುವಳಿ ಪ್ರಮುಖ: ಭಾರತದ ಕೃಷಿ ಕ್ಷೇತ್ರದ ಪ್ರಮುಖ ಸವಾಲುಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಗಳು ಪ್ರಮುಖವಾಗಿವೆ. ರಾಷ್ಟ್ರವು ಪ್ರತಿಶತ 87 ಸಣ್ಣ ಮತ್ತು ಅತಿ ಸಣ್ಣ ಕೃಷಿಕರನ್ನೇ ಹೊಂದಿದ್ದು, ಆಹಾರ ಉತ್ಪಾದನೆಯಲ್ಲಿ ಇವರ ಕೊಡುಗೆ ಶೇ. 68 ರಷ್ಟು ಇದೆ. ಈ ವರ್ಗದ ಜನರನ್ನು ಇನ್ನೂ ಹೆಚ್ಚು ಸಶಕ್ತರನ್ನಾಗಿಸಲು ಕಾರ್ಯಕ್ರಮಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ವರ್ಗದ ಕೃಷಿಕರಿಗೆ ಸೂಕ್ತವಾದ ತಂತ್ರಜ್ಞಾನಗಳ ಅಭಿವೃದ್ಧಿ, ಕೈಗೆಟುಕುವ ಯಂತ್ರೋಪಕರಣಗಳ ಬಳಕೆ, ಸಂಘಟಿತ ಮಾರಾಟಕ್ಕೆ ಉತ್ತೇಜನ ನೀಡಬೇಕಾಗಿದೆ.
(ಲೇಖಕರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ತಂತ್ರಜ್ಞಾನ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು)